ರೈತ ಹೋರಾಟ ಹಲವು ಮಜಲುಗಳಲ್ಲಿ ದೇಶದ ಗಮನ ಸೆಳೆಯುತ್ತಿದೆ. ಹೋರಾಟಕ್ಕೆ 60 ದಿನಗಳು ತುಂಬುತ್ತಾ ಬಂದಿದೆ. ದೆಹಲಿಯಲ್ಲಿ ತೀವ್ರ ಚಳಿ, ಮಂಜು ವಿಪರೀತ ಎನ್ನುವ ಮಟ್ಟಕ್ಕೆ ಬಂದು ನಿಂತಿದೆ. ಈ ಸಂದರ್ಭದಲ್ಲಿ ರೈತರು ಹೋರಾಟದಲ್ಲಿ ಹುಮ್ಮಸ್ಸಿನಿಂದ ಭಾಗಿಯಾಗಲು ಮನಸ್ಸಿನ ಜೊತೆಗೆ ದೇಹವನ್ನೂ ಸದೃಢವಾಗಿಟ್ಟುಕೊಳ್ಳುವುದು ಮುಖ್ಯವಾಗಿದೆ.
ಉತ್ತಮ ಆಹಾರದ ಜೊತೆಗೆ ಸದೃಢ ದೇಹಕ್ಕೆ ಒಳ್ಳೆಯ ವ್ಯಾಯಾಮದ ಅವಶ್ಯಕತೆಯನ್ನು ಮನಗಂಡು ಪ್ರತಿಭಟನಾ ನಿರತ ರೈತರು ದೆಹಲಿಯ ಸಿಂಘ ಗಡಿಯ ಪ್ರತಿಭಟನಾ ಸ್ಥಳದಲ್ಲಿ ವ್ಯಾಯಾಮ ಶಾಲೆ (ಜಿಮ್) ಆರಂಭಿಸಿದ್ದಾರೆ.
ದೆಹಲಿ ಚಲೋ ಅಂಗವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹರ್ಜಿಂದರ್ ಸಿಂಗ್, ಮೊದಲು ಪ್ರತಿಭಟನಾಕಾರರಿಗೆ ದಿನ ಬಳಕೆ ವಸ್ತುಗಳಾದ ಸೋಪು, ಪೇಸ್ಟ್, ಬ್ರಶ್, ಸ್ಯಾನಿಟರಿ ನ್ಯಾಪ್ಕಿನ್ಸ್, ಬಿಸಿ ನೀರಿನ ವ್ಯವಸ್ಥೆ ಮಾಡುತ್ತಿದ್ದರು. ಪ್ರತಿಭಟನೆಯ ದಿನಗಳು ಹೆಚ್ಚಾದಂತೆ ಔಷಧಿಗಳನ್ನು ನೀಡಲು ಮತ್ತು ರೈತರಿಗೆ ಚಿಕಿತ್ಸೆ ನೀಡಲು ವೈದ್ಯರನ್ನು ನೇಮಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟದಲ್ಲಿ ಜ್ಞಾನ ಪ್ರಸರಣ: ಗಮನ ಸೆಳೆದ ಕಿಸಾನ್ ಗ್ರಂಥಾಲಯಗಳು!

ಹರ್ಜಿಂದರ್ ಸಿಂಗ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದನ್ನು ಗಮನಿಸಿದ ಇವರ ಸ್ನೇಹಿತರೊಬ್ಬರು, ತಾವು ಏನಾದರೂ ಸೇವೆ ಮಾಡಬೇಕು ಎಂದು ಕೋರಿಕೆ ಮುಂದಿಟ್ಟಿದ್ದಾರೆ. ಚಂಡಿಗಢದಲ್ಲಿ ಜಿಮ್ ನಡೆಸುತ್ತಿರುವುದರಿಂದ ಪ್ರತಿಭಟನಾ ಸ್ಥಳದಲ್ಲಿಯೂ ಒಂದು ಸಣ್ಣ ಜಿಮ್ ಆರಂಭಿಸಿ ಸೇವೆ ನೀಡುವ ಯೋಚನೆ ಮಾಡಿದ್ದಾರೆ.
“ನಾನು ಮೊದಲು ಇಲ್ಲಿಗೆ ಒಬ್ಬ ಪ್ರತಿಭಟನಾಕಾರನಾಗಿ, ರೈತನಾಗಿ ಪಂಜಾಬ್‌ನಿಂದ ಬಂದಿದ್ದೆ. ದೆಹಲಿ ಪೊಲೀಸರು ನಮ್ಮನ್ನು ಸಿಂಘು ಗಡಿಯಲ್ಲಿಯೇ ತಡೆ ಹಿಡಿದ ಕಾರಣ ನಾವಿಲ್ಲಿಯೇ ಇರಬೇಕಾಯಿತು. ನಂತರ ಊರಿಗೆ ಹೋಗಿ ದಿನ ಬಳಕೆ ವಸ್ತುಗಳು ಮತ್ತು ಔಷಧಿಗಳನ್ನು ತಂದು ರೈತರ ಬಳಕೆಗಾಗಿ ಇಟ್ಟಿದ್ದೇನೆ’ ಎಂದು ಹರ್ಜಿಂದರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ರೈತ ಹೋರಾಟಕ್ಕೆ ಬೆಂಬಲ: ರೈತರಿಲ್ಲದೆ ಅನ್ನವಿಲ್ಲ ಎಂದ ಸರ್ಕಾರಿ ಅಧಿಕಾರಿಗಳು

’ನಾನಿಲ್ಲಿ ಇರುವುದನ್ನು ಗಮನಿಸಿದ ನನ್ನ ಚಂಡಿಗಢದ ಸ್ನೇಹಿತ, ತನ್ನಿಂದ ಏನು ಸೇವೆಯಾಗಬಹುದು ಎಂದು ಕೇಳಿದರು. ಜಿಮ್ ಮಾಲೀಕನಾಗಿರುವ ಆತನಿಗೆ ಜಿಮ್ ಸೇವೆಯನ್ನೇ ನೀಡಲು ತಿಳಿಸಿದೆ. ಹಾಗಾಗಿ ಆತ ಇಲ್ಲಿ ಜಿಮ್ ಆರಂಭಿಸಿದ್ದಾನೆ. ಚಂಡಿಗಢದಿಂದ ಜಿಮ್ ಸಲಕರಣೆಗಳನ್ನು ಕಳುಹಿಸಿದ್ದಾನೆ. ನಾನು ಇವುಗಳ ಉಸ್ತುವಾರಿ ನೋಡಿಕೊಳ್ಳುತ್ತೇನೆ. ಇನ್ನು ಎಷ್ಟು ದಿನ ನಾವಿಲ್ಲಿಯೇ ಇರಬೇಕಾಗುತ್ತದೊ ಗೊತ್ತಿಲ್ಲ. ಅಲ್ಲಿಯವರೆಗೂ ಇವುಗಳು ಜನರ ಬಳಕೆಗೆ ಲಭ್ಯವಿರುತ್ತವೆ. ಈ ಚಳಿಯಲ್ಲಿ ದೇಹವನ್ನು ಗಟ್ಟಿಯಾಗಿಟ್ಟುಕೊಳ್ಳುವುದು ಮುಖ್ಯ’ ಎನ್ನುತ್ತಾರೆ.
“ನಿತ್ಯ ನೂರಾರು ಪ್ರತಿಭಟನಾಕಾರರು ಈ ಪುಟ್ಟ ಜಿಮ್‌ನಲ್ಲಿ ಕಸರತ್ತು ನಡೆಸುತ್ತಾರೆ. ದೆಹಲಿಯ ತೀವ್ರ ಚಳಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ. ಒಳ್ಳೆಯ ಆಹಾರದ ಜೊತೆಗೆ ಉತ್ತಮ ವ್ಯಾಯಾಮ ಎಂತಹ ಸನ್ನಿವೇಶದಲ್ಲೂ ಆರೋಗ್ಯ ಹಾಳಾಗದಂತೆ ನೋಡಿಕೊಳ್ಳುತ್ತದೆ. ಈ ಕಾರಣಕ್ಕೆ ನಮ್ಮಿಂದ ಈ ಸೇವೆ ಒದಗಿಸುತ್ತಿದ್ದೆವೆ” ಎಂದು ಜಿಮ್ ಸೇವೆ ನೀಡುತ್ತಿರುವ ಹರ್ಜಿಂದರ್ ಸಿಂಗ್ ಹೇಳುತ್ತಾರೆ.
ಇದನ್ನೂ ಓದಿ: ರೈತ ಹೊಸ ಬೆಳೆಯನ್ನು ಬೆಳೆಯಬಲ್ಲ…. ಹೊಸ ನಗರವನ್ನು ಸೃಷ್ಟಿಸಬಲ್ಲ…!


