ದೆಹಲಿಯ ತೀವ್ರ ಚಳಿಯಲ್ಲಿ ಆರಂಭವಾದ ರೈತ ಹೋರಾಟ ಈಗ ತೀವ್ರ ಬಿಸಿಲಿನತ್ತ ಸಾಗುತ್ತಿದೆ. ಚಳಿಗೆ ಅಂಜದೆ ಕುಳಿತ ರೈತರು ಈಗ ಬಿಸಿಲಿನ ತಾಪವನ್ನು ಎದುರಿಸಲು ಮುಂದಾಗಿದ್ದಾರೆ. ತೀವ್ರ ಸೆಕೆಯಿಂದ ಬದುಕುಳಿಯಲು ಪ್ರತಿಭಟನಾ ಸ್ಥಳವಾದ ಟಿಕ್ರಿ ಗಡಿಯಲ್ಲಿ ಈಗಾಗಲೇ ಹಲವು ಟೆಂಟ್, ಟ್ಯ್ರಾಲಿಗಳಲ್ಲಿ ಎಸಿ, ಕೂಲರ್, ಪ್ಯಾನ್‌ಗಳನ್ನು ಅಳವಡಿಸಲಾಗುತ್ತಿದೆ.
ನವೆಂಬರ್ 26, 27ಕ್ಕೆ ದೆಹಲಿಯ ಗಡಿಗಳಿಗೆ ಬಂದ ರೈತರನ್ನು ಆಹ್ವಾನಿಸಿದ್ದು ಕೊರೆಯುವ ಚಳಿ. ಚಳಿಯಿಂದಾಗಿ ಅನೇಕ ರೈತರು ಹುತಾತ್ಮರಾಗಿದ್ದಾರೆ. ಆನಂತರ ಏಕಾಏಕಿ ಮಳೆ ಸುರಿಯಿತು. ಈಗ ದೆಹಲಿಯ ಬೇಸಿಗೆ ಅದಕ್ಕಿಂತಲೂ ಕಠಿಣವಾಗಿರುತ್ತದೆ. ಈ ಹಿನ್ನಲೆಯಲ್ಲಿ ಈಗಾಗಲೇ ಸಿಂಘು, ಟಿಕ್ರಿ, ಗಾಝಿಪುರ್ ಮತ್ತು ಶಹಜಾನ್‌ಪುರ ಗಡಿಗಳಲ್ಲಿ ಫ್ಯಾನ್, ಎಸಿ, ಕೂಲರ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ.
ಟಿಕ್ರಿ ಗಡಿಯಲ್ಲಿ ಟ್ಯ್ರಾಲಿಯೊಂದಿಗೆ ಪ್ರತಿಭಟನೆಯಲ್ಲಿ ನವೆಂಬರ್ ತಿಂಗಳಿನಿಂದ ಭಾಗಿಯಾಗಿರುವ ಪಂಜಾಬ್‌ನ ಬಲಜಿತ್ ಸಿಂಗ್ ತಮ್ಮ ಟ್ಯ್ರಾಲಿಗೆ ಎಸಿ ಅಳವಡಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: 24 ವರ್ಷದ ಯುವಕ ಬಲ್ಜಿತ್ ಸಿಂಗ್ ಅವಿರೋಧವಾಗಿ ಸರ್‌ಪಂಚ್ ಆದ ಕಥೆ

ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಯುವಕ ಬಲಜಿತ್ ಸಿಂಗ್, ”ಈಗ ಅಷ್ಟೇನು ಬಿಸಿಲು ಇಲ್ಲ. ಆದರೆ, ನಾವು ಇಲ್ಲಿ ಎಸಿ ಹಾಕಿರುವ ಕಾರಣವೆಂದರೆ, ನಾವು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕರಾಳ ಕಾನೂನುಗಳನ್ನು ವಾಪಸ್ ತೆಗೆದುಕೊಳ್ಳುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲು ಎಸಿ ಅಳವಡಿಸಿದ್ದೇವೆ” ಎಂದಿದ್ದಾರೆ.
ಇದರ ಜೊತೆಗೆ ಹಲವು ಮಂದಿ ತಮ್ಮ ಟೆಂಟ್ ಮತ್ತು ಟ್ಯ್ರಾಲಿಗಳಲ್ಲಿ ಸಣ್ಣ ಫ್ಯಾನ್‌ಗಳು, ಕೂಲರ್‌ಗಳನ್ನು ಅಳವಡಿಸಿದ್ದಾರೆ.

ಇದನ್ನೂ ಓದಿ: ರೈತ ಹೋರಾಟ: ಜಾತಿ ಕಟ್ಟುಪಾಡುಗಳನ್ನು ಮುರಿಯುತ್ತಿರುವ ಮಹಾಪಂಚಾಯತ್!
ಕೂಲರ್ ಮತ್ತು ಫ್ಯಾನ್‌ಗಳನ್ನು ಕೊಳ್ಳಲು ತಮ್ಮ ತಮ್ಮ ಗ್ರಾಮಗಳಲ್ಲಿ ಹಣ ಸಂಗ್ರಹಣೆ ಮಾಡಲಾಗುತ್ತಿದೆ. ಒಂದು ಎಕರೆಗೆ ನೂರು ರೂಪಾಯಿಯಂತೆ ಹಣವನ್ನು ಸಂಗ್ರಹಿಸಲಾಗುತ್ತಿದೆ. ಈ ಹಣದಿಂದ ಕೂಲರ್, ಎಸಿಗಳನ್ನು ತೆಗೆದುಕೊಳ್ಳಲಾಗುತ್ತದೆ.
ಇದರ ಜೊತೆಗೆ ಪ್ರತಿಭಟನಾ ಸ್ಥಳಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಲವಾರು ಸಂಘ ಸಂಸ್ಥೆಗಳು ಕೂಡ ಪ್ರತಿಭಟನಾ ನಿರತ ರೈತರಿಗೆ ಬೇಸಿಗೆಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವತ್ತ ಗಮನ ಹರಿಸಿವೆ. ದೆಹಲಿಯಲ್ಲಿರುವ ರೈತರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡುವ ಬಗ್ಗೆ ಮಹಾಪಂಚಾಯತ್‌ಗಳಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಇಷ್ಟು ದಿನ ಹೊದಿಕೆ, ಕಂಬಳಿ, ಸ್ಪೇಟರ್‌ಗಳನ್ನು ಹೊಂದಿಸಿದ್ದ ರೈತರು ಮತ್ತು ಪ್ರತಿಭಟನಾ ಬೆಂಬಲಿಗರು ಈಗ ಬೇಸಿಗೆಗೆ ಬೇಕಾದ ಚಾಪೆ, ಮಂಚಗಳು, ಫ್ಯಾನ್, ಎಸಿ, ಕೂಲರ್‌ಗಳನ್ನು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಇದರ ಮೂಲಕ ಸರ್ಕಾರಕ್ಕೆ ತಮ್ಮ ಗಟ್ಟಿ ಹೋರಾಟದ ಉತ್ತರವನ್ನು ನೀಡುತ್ತಿದ್ದಾರೆ.
ಚಳಿ, ಮಳೆ, ಮಂಜಿನಲ್ಲಿ ಕಳೆದ 95 ದಿನಗಳಿಂದ ಹೋರಾಟ ನಡೆಸುತ್ತಿರುವ ರೈತರು ಇನ್ನೆಷ್ಟು ದಿನಗಳಾದರೂ ಇಲ್ಲಿಯೇ ಹೋರಾಟ ಮುಂದುವರೆಸುತ್ತೇವೆ ಎಂಬುದಕ್ಕೆ ಸಾಕ್ಷಿಯಾಗಿ ಈ ಎರ್ ಕಂಡಿಷನರ್, ಕೂಲರ್‌ಗಳನ್ನು ಅಳವಡಿಸುತ್ತಿದ್ದಾರೆ.
ಇದನ್ನೂ ಓದಿ: ಇದು ಇಡೀ ದೇಶದ ರೈತ ಹೋರಾಟ: ಟಿಕ್ರಿ ಗಡಿಯಲ್ಲಿ ದಕ್ಷಿಣ ಭಾರತದ ಕಾರ್ಯಕರ್ತರ ಘೋಷಣೆ


