ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸುವ ರೈತರು ದೇಶಾದ್ಯಂತ ಪ್ರತಿಭಟನೆ ವಿಸ್ತರಿಸುವ ಯೋಜನೆಯ ಭಾಗವಾಗಿ ದಲಿತರೊಂದಿಗೆ ಕೈಜೋಡಿಸುತ್ತಿದ್ದಾರೆ. ರೈತ ಪ್ರತಿಭಟನೆ, ಮಹಾಪಂಚಾಯತ್ ಜಾತಿ ಕಟ್ಟುಪಾಡು ಮುರಿಯುತ್ತಿವೆ. ಜೊತೆಗೆ ಪ್ರತಿಭಟನೆಗೆ ವಿಶಾಲವಾದ ನೆಲೆಯನ್ನು ನೀಡುವುದು ಇವುಗಳ ಉದ್ದೇಶವಾಗಿದೆ.
ಹರಿಯಾಣದ ಹಿಸಾರ್ ಜಿಲ್ಲೆಯ ಬಾರ್ವಾಲಾ ಪಟ್ಟಣದಲ್ಲಿ ಶನಿವಾರ(ಫೆ.20) ದಲಿತರೊಂದಿಗೆ ಮಹಾಪಂಚಾಯತ್ ನಡೆಯಿತು. ಇದರಲ್ಲಿ ಕೃಷಿ ಒಕ್ಕೂಟದ ಮುಖಂಡ ಗುರ್ನಮ್ ಚಧುನಿ ಭಾಗವಹಿಸಿದ್ದರು. ಹರಿಯಾಣದ ಜನಸಂಖ್ಯೆಯಲ್ಲಿ ಶೇಕಡಾ 20 ರಷ್ಟು ಜನ ಪರಿಶಿಷ್ಟ ಜಾತಿಗೆ ಸೇರಿದವರಿದ್ದಾರೆ.
ಮಹಾಪಂಚಾಯತ್‌ನಲ್ಲಿ ರೈತರು ತಮ್ಮ ಮನೆಗಳಲ್ಲಿ ಅಂಬೇಡ್ಕರ್ ಫೋಟೊ, ದಲಿತರು ತಮ್ಮ ಮನೆಗಳಲ್ಲಿ ಸರ್ ಛೋಟು ರಾಮ್ ಫೋಟೊ ಹಾಕುವಂತೆ ಮನವಿ ಮಾಡಲಾಯಿತು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ರೈತರ ಹೋರಾಟಕ್ಕೆ ಸರ್ ಛೋಟು ರಾಮ್ ಸ್ಪೂರ್ತಿ – ರೈತ ಮುಖಂಡರು
ಮಹಾಪಂಚಾಯತ್‌ನಲ್ಲಿ ಮಾತನಾಡಿದ ರೈತ ಮುಖಂಡ ಗುರ್ನಾಮ್ ಚಧುನಿ, ರೈತರು ಮತ್ತು ದಲಿತರ ನಡುವೆ ಹೆಚ್ಚಿನ ಒಗ್ಗಟ್ಟು ಮೂಡಿಸಬೇಕೆಂದು ಕರೆ ನೀಡಿದರು. ರೈತರು ತಮ್ಮ ಮನೆಗಳಲ್ಲಿ ದಲಿತ ಐಕಾನ್ ಬಿ.ಆರ್.ಅಂಬೇಡ್ಕರ್ ಅವರ ಚಿತ್ರಗಳನ್ನು ಹೊಂದುವಂತೆ ನಿರ್ಣಯವನ್ನು ಅಂಗೀಕರಿಸಲಾಯಿತು. ಬ್ರಿಟೀಷ್ ಭಾರತದ ಪ್ರಮುಖ ರೈತ ಮುಖಂಡ ಸರ್ ಛೋಟು ರಾಮ್ ಅವರ ಚಿತ್ರಗಳನ್ನು ದಲಿತರು ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳುವಂತೆ ಕೇಳಲಾಯಿತು.
“ನಮ್ಮ ಹೋರಾಟವು ಸರ್ಕಾರದ ವಿರುದ್ಧ ಮಾತ್ರವಲ್ಲದೆ ಬಂಡವಾಳಶಾಹಿಗಳ ವಿರುದ್ಧವೂ ಆಗಿದೆ” ಎಂದು ಚಧುನಿ ಹೇಳಿದರು. “ಸರ್ಕಾರವು ಇಲ್ಲಿಯವರೆಗೆ ನಮ್ಮನ್ನು ವಿಭಜಿಸುತ್ತ ಬಂದಿದೆ. ಕೆಲವೊಮ್ಮೆ ಜಾತಿಯ ಹೆಸರಿನಲ್ಲಿ ಅಥವಾ ಕೆಲವೊಮ್ಮೆ ಧರ್ಮದ ಹೆಸರಿನಲ್ಲಿ ಈ ವಿಭಜನೆ ನಡೆಯುತ್ತಿದೆ. ಸರ್ಕಾರದ ಈ ಪಿತೂರಿಯನ್ನು ಅರ್ಥಮಾಡಿಕೊಳ್ಳಿ” ಎಂದು ರೈತರಿಗೆ ಕಿವಿಮಾತು ಹೇಳಿದರು.
’ಇನ್ನು ಮುಂದೆ ಹರಿಯಾಣ ಮತ್ತು ಪಂಜಾಬ್‌ನಲ್ಲಿ ಇಂತಹ ಮಹಾಪಂಚಾಯತ್‌ಗಳ ಅಗತ್ಯವಿಲ್ಲ. ಪಂಜಾಬ್ ಮತ್ತು ಹರಿಯಾಣಗಳಿಗೆ ಕೃಷಿ ಕಾನೂನುಗಳ ಬಗ್ಗೆ ತಿಳಿದಿದೆ. ಈಗ ಇತರ ರಾಜ್ಯಗಳತ್ತ ಗಮನ ಹರಿಸಬೇಕಾಗಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ರೈತ ಹೋರಾಟ: 24 ವರ್ಷದ ಯುವಕ ಬಲ್ಜಿತ್ ಸಿಂಗ್ ಅವಿರೋಧವಾಗಿ ಸರ್‌ಪಂಚ್ ಆದ ಕಥೆ
ಮೂರು ಕೃಷಿ ಕಾನೂನುಗಳ ವಿರುದ್ಧದ ಯುದ್ಧವು ರೈತರಿಗೆ ಮಾತ್ರವಲ್ಲ ಎಂದು ಕಾರ್ಮಿಕರು ಅರ್ಥಮಾಡಿಕೊಳ್ಳಬೇಕು. ಕಾರ್ಮಿಕ ವರ್ಗವು ಹೆಚ್ಚು ತೊಂದರೆ ಅನುಭವಿಸುತ್ತಿದೆ. ಆದ್ದರಿಂದ, ಈ ಆಂದೋಲನಕ್ಕೆ ಹೆಚ್ಚು ಹೆಚ್ಚು ಕೊಡುಗೆ ನೀಡುವಂತೆ ನಾನು ಕಾರ್ಮಿಕ ವರ್ಗವನ್ನು ವಿನಂತಿಸುತ್ತೇನೆ ” ಎಂದು ಮನವಿ ಮಾಡಿದ್ದಾರೆ.
ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಹೊರತುಪಡಿಸಿ ಯಾರಿಗಾದರೂ ಮತ ಚಲಾಯಿಸುವಂತೆ ಚಧುನಿ ಕೇಳಿಕೊಂಡರು.
ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು ಮತ್ತು ಎಂಎಸ್‌ಪಿ ಖಾತ್ರಿಗೊಳಿಸುವ ಕಾನೂನು ಜಾರಿಗೊಳಿಸಬೇಕೆಂದು ಆಗ್ರಹಿಸಿ ದೇಶಾದ್ಯಂತ ರೈತರು ನಡೆಸುತ್ತಿರುವ ಹೋರಾಟ ದಿನೇ ದಿನೇ ತೀವ್ರಗೊಳ್ಳುತ್ತಿದೆ. ದೆಹಲಿ ಗಡಿಗಳ ಜೊತೆಗೆ ಉತ್ತರಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ಪಂಜಾಬ್‌ಗಳಲ್ಲಿ ರೈತರ ಬೃಹತ್ ಮಹಾಪಂಚಾಯತ್ ನಡೆಯುತ್ತಿವೆ.
ರಾಜ್ಯದಲ್ಲಿಯೂ ಸಮಾಜವಾದಿ ಹೋರಾಟದ ಜಿಲ್ಲೆ, ಮುಖ್ಯಮಂತ್ರಿಗಳ ತವರೂರು ಶಿವಮೊಗ್ಗದಲ್ಲಿ ಮೊದಲ ಬೃಹತ್ ‘ರೈತ ಮಹಾಪಂಚಾಯತ್’ ನಡೆಸಲು ವೇದಿಕೆ ಸಜ್ಜಾಗಿದೆ. ರೈತ ಸಂಘಟನೆಗಳ ಮತ್ತು ಪ್ರಗತಿಪರ ಸಂಘಟನೆಗಳ ಮಹಾಸಭೆ ನಡೆದಿದ್ದು, ಮಾರ್ಚ್ 15 ರಂದು ಶಿವಮೊಗ್ಗದಲ್ಲಿ ಬೃಹತ್ ರೈತ ಮಹಾ ಪಂಚಾಯತ್ ನಡೆಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ: ಮಾರ್ಚ್ 15 ಕ್ಕೆ ಶಿವಮೊಗ್ಗದಲ್ಲಿ ಬೃಹತ್ ರೈತ ಮಹಾಪಂಚಾಯತ್: ಚಳವಳಿ ಬಲಪಡಿಸಲು ರೈತಮುಖಂಡರ ಒಕ್ಕೊರಲ ಸಂಕಲ್ಪ

ಇದೊಂದು ಆಶಾದಾಯಕ ಬೆಳೆವಣಿಗೆ.