ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ತನ್ನ ಏಳು ವರ್ಷಗಳ ಆಡಳಿತದಲ್ಲಿ ಹಿಂದಿನ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಸರ್ಕಾರವು ಎರಡು ಪೂರ್ಣ ಅವಧಿಗಳಲ್ಲಿ ಹೊರಡಿಸಿದಕ್ಕಿಂತ ಹೆಚ್ಚಿನ ಸುಗ್ರೀವಾಜ್ಞೆಗಳನ್ನು ಹೊರಡಿಸಿದೆ.
ಈ ಕುರಿತು ಅಂಕಿ ಅಂಶಗಳ ಸಮೇತ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಯಾವುದೇ ಕಾನೂನುಗಳನ್ನು ತ್ವರಿತವಾಗಿ ಜಾರಿಗೆ ತರಲು ಸುಗ್ರೀವಾಜ್ಞೆಗಳನ್ನು ಸರ್ಕಾರ ಬಳಸಿಕೊಳ್ಳುತ್ತವೆ.
PRS ಲೆಜಿಸ್ಲೇಟಿವ್ ರಿಸರ್ಚ್ ಮತ್ತು ಲೋಕಸಭಾ ಕಾರ್ಯದರ್ಶಿಳ ಡೇಟಾದ ಆಧಾರದ ಮೇಲೆ, ಮೇ 2004 ಮತ್ತು ಮೇ 2014 ರ ನಡುವೆ ಯುಪಿಎ ಸರ್ಕಾರ 61 ಸುಗ್ರೀವಾಜ್ಞೆಗಳನ್ನು ಹೊರಡಿಸಿದೆ. ಆದರೆ, 2014 ರಲ್ಲಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಇಲ್ಲಿಯವರೆಗೆ 76 ಮಸೂದೆಗಳನ್ನು ಸುಗ್ರೀವಾಜ್ಞೆಯ ಮಾರ್ಗದ ಮೂಲಕ ಜಾರಿಗೆ ತಂದಿದೆ.
ಇದನ್ನೂ ಓದಿ: ಎಲ್ಲಾ ಹಿಂದೂಗಳು ಮುಸ್ಲಿಮರ ಕ್ಷಮೆ ಯಾಚಿಸಬೇಕಾಗಿದೆ: ಕುಂಭಮೇಳದ ಬಗ್ಗೆ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಅಗತ್ಯವಿರುತ್ತದೆ ಮತ್ತು ಭಾರತದ ರಾಷ್ಟ್ರಪತಿಗಳ ಒಪ್ಪಿಗೆಯ ಅಗತ್ಯವಿದೆ. ಸಂಸತ್ತಿನ ಅಧಿವೇಶನ ನಡೆಯದಿದ್ದಾಗ ಮಾತ್ರ ಕಾನೂನನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಸುಗ್ರೀವಾಜ್ಞೆ ವಿಧಾನವನ್ನು ಅಳವಡಿಸಿಕೊಳ್ಳಬಹುದು ಎಂದು ಸಂವಿಧಾನ ತಿಳಿಸುತ್ತದೆ.
ಸುಗ್ರೀವಾಜ್ಞೆಯು ಎಲ್ಲಾ ಸರ್ಕಾರಗಳು ಬಳಸುವ ಕಾನೂನುಬದ್ಧ ಮಾರ್ಗವಾಗಿದೆ. ಆದರೆ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಂಗೀಕರಿಸಿದ ಕೆಲವು ಸುಗ್ರೀವಾಜ್ಞೆ ವಿವಾದಾಸ್ಪದವಾಗಿವೆ. ಅವುಗಳಲ್ಲಿ ಹೆಚ್ಚು ಪ್ರತಿಭಟನೆಗೆ ಕಾರಣವಾಗಿದ್ದು ಕೃಷಿ ಕಾನೂನುಗಳು.
ಈ ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ, ದೇಶದ ರೈತರು ಕಳೆದ ನವೆಂಬರ್ ತಿಂಗಳಿನಿಂದಲೂ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಸುಗ್ರೀವಾಜ್ಞೆ, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದದ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020 ಮತ್ತು ಅಗತ್ಯ ಸರಕುಗಳ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂರು ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ಜೂನ್ 2020 ರಲ್ಲಿ ಜಾರಿಗೆ ತರಲಾಯಿತು.
ಇದನ್ನೂ ಓದಿ: ಕೊರೊನಾ ಹಿನ್ನೆಲೆ ರೈತ ಹೋರಾಟ ಮುಂದೂಡಿ, ಮಾತುಕತೆಗೆ ಬನ್ನಿ ಎಂದ ಕೃಷಿ ಸಚಿವ


