ಕೊರೊನಾ ಸಾಂಕ್ರಾಮಿಕ ರೋಗದ ಎರಡನೇ ಅಲೆ ಕೇವಲ ರೋಗ ತರುವುದಕ್ಕೆ ಸೀಮಿತವಾಗಿಲ್ಲ. ಕಳೆದ ಬಾರಿಗಿಂತ ಈ ಬಾರಿ ಕೊರೊನಾ ಸಾವುಗಳು ಕೂಡ ಅಧಿಕವಾಗುತ್ತಿದೆ. ಹಲವು ರಾಜ್ಯಗಳು ಕೊರೊನಾ ಪ್ರಕರಣಗಳು, ಸಾವುಗಳ ಸಂಖ್ಯೆಯನ್ನು ಮರೆ ಮಾಚುತ್ತಿವೆ. ಉತ್ತರ ಪ್ರದೇಶ ಮತ್ತು ಗುಜರಾತ್ ಇದಕ್ಕೆ ಜೀವಂತ ಸಾಕ್ಷಿಯಾಗಿವೆ. ಇನ್ನು ಸತತ ಅಂತ್ಯಕ್ರಿಯೆ ನಡೆಸುತ್ತಿರುವ ಸ್ಮಶಾನಗಳ ಸಮಸ್ಯೆ ಕೂಡ ಮತ್ತೊಂದು ತರಹದ್ದು.
ಗುಜರಾತ್‌ನ ಸೂರತ್‌ನಲ್ಲಿ ಕೊರೊನಾ ಪ್ರಕರಣಗಳು, ಕೊರೊನಾ ಸಾವುಗಳು ಹೆಚ್ಚಾಗಿ ಪರಿಸ್ಥಿತಿ ಮೀತಿ ಮೀರಿದೆ. ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸುತ್ತಿರುವ ವಿದ್ಯುತ್ ಚಿತಾಗಾರದಲ್ಲಿ ಲೋಹದ ಯಂತ್ರಗಳು ಕೂಡ ಕರಗಿ ಹೋಗುತ್ತಿವೆ.
ಸೂರತ್‌ನಲ್ಲಿ ಕೊರೊನಾ ರೋಗಿಗಳಿಗೆ ಗೊತ್ತುಪಡಿಸಿದ ಆಸ್ಪತ್ರೆಗಳಲ್ಲಿ ಮಾತ್ರವಲ್ಲದೆ ಶ್ಮಶಾನದಲ್ಲಿಯೂ ಸಹ ಸಾಲುಗಳಲ್ಲಿ ನಿಲ್ಲಬೇಕಾಗಿದೆ. ಅಲ್ಲಿಯೂ ವಿಪರೀತ ಜನಸಂದಣಿ ಇರುವ ಕಾರಣ ಕಾಯುವ ಟೋಕನ್‌ಗಳನ್ನು ನೀಡಲಾಗುತ್ತಿದೆ.
ಸೂತರ್ ನಗರದ ಮೂರು ಮುಖ್ಯ ಸ್ಮಶಾನಗಳಲ್ಲಿ ಪ್ರತಿದಿನ ಸರಾಸರಿ 300 ಶವಗಳ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಆದರರೂ ಕೂಡ ಸ್ಮಶಾನಕ್ಕೆ ಅಂತ್ಯಕ್ರಿಯೆಗಾಗಿ ಬರುವ ಸಂಬಂಧಿಕರು, ಮನೆಯವರು ಕನಿಷ್ಠ 6 ಗಂಟೆಯಿಂದ 10 ಗಂಟೆಗಳವರೆಗೆ ಕಾಯಬೇಕಾಗಿರುವ ಪರಿಸ್ಥಿತಿ ಇದೆ.
ಇದನ್ನೂ ಓದಿ: ಕೊರೊನಾ ರೋಗಿಗಳ ಅಂತ್ಯಸಂಸ್ಕಾರ ಕಾಣಿಸದಂತೆ ಸ್ಮಶಾನಕ್ಕೆ ಶೀಟ್ ಗೋಡೆ ಹಾಕಿಸಿದ ಉತ್ತರ ಪ್ರದೇಶ ಸರ್ಕಾರ!
ಈ 300 ಮೃತದೇಹಗಳಲ್ಲಿ, ಕೊರೊನಾ ಮಾರ್ಗಸೂಚಿಗಳ ಪ್ರಕಾರ ಅಂದಾಜು 100 ರಿಂದ 120 ಶವಗಳನ್ನು ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಅಶ್ವಿನಿ ಕುಮಾರ್ ಸ್ಮಶಾನದಲ್ಲಿ ದಿನಕ್ಕೆ 125 ಕ್ಕೂ ಹೆಚ್ಚು ಶವಗಳು, ಜಹಾಂಗೀರ್‌ಪುರದ ಕುರುಕ್ಷೇತ್ರ ಶ್ಮಶಾನದಲ್ಲಿ ಸುಮಾರು 100 ಶವಗಳು ಮತ್ತು ಉಮ್ರಾದಲ್ಲಿರುವ ರಾಮನಾಥ ಘೇಲಾ ಸ್ಮಶಾನದಲ್ಲಿ ಸರಾಸರಿ 90 ಮೃತದೇಹಗಳನ್ನು ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಜೊತೆಗೆ ಸೂರತ್‌ನಿಂದ ಮೃತದೇಹಗಳನ್ನು ಶವಸಂಸ್ಕಾರಕ್ಕಾಗಿ ಹತ್ತಿರದ ಪಟ್ಟಣಗಳಾದ ಬಾರ್ಡೋಲಿ ಮತ್ತು ನವಸಾರಿಗಳಿಗೆ ಕೊಂಡೊಯ್ಯಲಾಗುತ್ತಿದೆ ಎಂದು ಮೂರು ಶ್ಮಶಾನಗಳ ಟ್ರಸ್ಟಿಯೊಬ್ಬರು ಮಾಹಿತಿ ನೀಡಿದ್ದಾರೆ.
ಎಲ್ಲಾ ಮೂರು ಪ್ರಮುಖ ಸ್ಮಶಾನಗಳ ವ್ಯವಸ್ಥಾಪಕರ ಪ್ರಕಾರ, ’ವಿದ್ಯುತ್ ಚಿತಾಗಾರದಲ್ಲಿ ಅತಿಯಾದ ಬಳಕೆಯಿಂದಾಗಿ, ಅನಿಲ ಕುಲುಮೆಗಳ ಚೌಕಟ್ಟುಗಳು ಕರಗಿ ಹೋಗಿವೆ ಮತ್ತು ಬರ್ನರ್‌ಗಳು ಮುಚ್ಚಿಹೋಗಿವೆ. ಅಶ್ವಿನಿ ಕುಮಾರ್ ಚಿತಾಗಾರದಲ್ಲಿ ಎರಡು ಅನಿಲ ಕುಲುಮೆಗಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದವು. ತಕ್ಷಣ ಅವುಗಳನ್ನು ದುರಸ್ತಿ ಮಾಡಬೇಕಾಯಿತು’ ಎಂದಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ವಾರಾಂತ್ಯ ಕರ್ಫ್ಯೂ ಹೇರಿಕೆ: ಶವಸಂಸ್ಕಾರವೂ ಸಾಧ್ಯವಾಗದ ಒತ್ತಡ
ಈ ಸ್ಮಶಾನಗಳ ಮೇಲಿನ ಹೊರೆಯನ್ನು ಇಳಿಸುವ ಸಲುವಾಗಿ, ಸೂರತ್ ಆಡಳಿತವು 15 ವರ್ಷಗಳ ಹಿಂದೆ ಮುಚ್ಚಿದ ಪಾಲ್-ಭಟ್ಟ ಪ್ರದೇಶದಲ್ಲಿನ ಸ್ಮಶಾನವನ್ನು ಮತ್ತೆ ತೆರೆದಿದೆ. ಇಲ್ಲಿ ಪ್ರತಿದಿನ ಸರಾಸರಿ 30 ರಿಂದ 40 ಮೃತದೇಹಗಳ ಅಂತ್ಯಕ್ರಿಯೆ ನಡೆಸಬಹುದಾಗಿದೆ. ಮತ್ತೊಂದು ತಾತ್ಕಾಲಿಕ ಸ್ಮಶಾನವನ್ನು ವರಾಚಾ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ.
ಕೊರೊನಾ ಸೋಂಕು ದೃಢಪಟ್ಟು ಅಸ್ವಸ್ಥರಾಗಿ ಮರಣ ಹೊಂದಿರುವ ರೋಗಿಗಳನ್ನು ಕೊರೊನಾ ಸಾವುಗಳಿಗೆ ಸೇರಿಸದಂತೆ ಸರ್ಕಾರದಿಂದ ಆದೇಶಗಳಿವೆ ಎಂದು ಅಧಿಕೃತ ಮೂಲಗಳು ದೃಢಪಡಿಸಿವೆ. ಸೂರತ್ ಮೂಲದ ಡಾ. ಚಂದ್ರೇಶ್ ಜರ್ದೋಶ್, “ಇದು ಹೊಸ ವಿಷಯವೇನಲ್ಲ. ಲಾಕ್‌ಡೌನ್ ಯಶಸ್ವಿಯಾಗಿದೆ ಎಂದು ಸಾಬೀತುಪಡಿಸಲು ಕಳೆದ ವರ್ಷದಿಂದ ಕೊರೊನಾ ಸಾವುಗಳ ಸಂಖ್ಯೆಗಳನ್ನು ಕಡಿಮೆ ಮಾಡುವುದು ನಡೆಯುತ್ತಿದೆ” ಎಂದು ಹೇಳಿದ್ದಾರೆ.
ಸೂರತ್‌ನ ಚಿತಾಗಾರಗಳಲ್ಲಿ ಸ್ಥಳಾವಕಾಶವಿಲ್ಲದೇ ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆ, ವಿದ್ಯುತ್ ಚಿತಾಗಾರದ ಲೋಹದ ಯಂತ್ರಗಳು ಸತತ ಅಂತ್ಯಕ್ರಿಯೆಯಿಂದ ಕರಗಿ ಹೋಗುತ್ತಿವೆ. ಆದರೆ, ಸರ್ಕಾರ ಮಾತ್ರ ಕೊರೊನಾ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯಲ್ಲಿ ವ್ಯತ್ಯಾಸ ತೋರಿಸುವ ಅಂಕಿ ಅಂಶಗಳನ್ನು ನೀಡುತ್ತಿದೆ.
ಇದನ್ನೂ ಓದಿ: ಬಂಗಾಳ: ಸೀತಾಲ್ಕುಚ್ಚಿ ಗೋಲಿಬಾರ್ ವಿಡಿಯೋ ವೈರಲ್, ಕೇಂದ್ರ ಪಡೆಗಳ ಮೇಲೆ ಸಂಶಯದ ಹುತ್ತ!


