ಶ್ರೀಕೃಷ್ಣನ ಜನ್ಮಸ್ಥಳದಲ್ಲಿ ನಿರ್ಮಿಸಲಾಗಿದೆ ಎಂಬ ಆರೋಪದ ಮೇಲೆ ಮಥುರಾದಲ್ಲಿನ ಈದ್ಗಾ ಮಸೀದಿ ತೆರವುಗೊಳಿಸಬೇಕು ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಮಸೀದಿಯ ನಿರ್ವಹಣಾ ಸಮಿತಿಯು ತಾವೇ ಈದ್ಗಾ ಮಸೀದಿಯನ್ನು ನೆಲಸಮ ಮಾಡಲು ಒಪ್ಪಿದರೇ ದೇವಾಲಯದ ಆವರಣದಲ್ಲಿರುವ ಭೂಮಿಗಿಂತ ಬೇರೆ ಕಡೆ ಹೆಚ್ಚಿನ ಭೂಮಿಯನ್ನು ನೀಡುತ್ತೇವೆ ಎಂದು ಹಿಂದೂ ಸಂಘಟನೆಯೊಂದು ಮಥುರಾ ನ್ಯಾಯಾಲಯಕ್ಕೆ ತಿಳಿಸಿದೆ.
ಮಥುರಾ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯಕ್ಕೆ ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿ ಸಲ್ಲಿಸಿರುವ ಅರ್ಜಿಯಲ್ಲಿ ಮಸೀದಿಯನ್ನು ಕೆಡವಿದರೇ, ನೆಲಸಮ ಮಾಡಿದರೇ, ಮಸೀದಿ ನಿರ್ವಹಣಾ ಸಮಿತಿಗೆ ದೇವಾಲಯ ಇರುವ ಪಟ್ಟಣ ಬಿಟ್ಟು, ಹೊರ ಭಾಗದಲ್ಲಿ ಮಸೀದಿ ನಿರ್ಮಿಸಲು ಹೆಚ್ಚಿನ ಭೂಮಿ ನೀಡುವುದಾಗಿ ತಿಳಿಸಿದೆ.
ಮಸೀದಿಯ ನಿರ್ವಹಣಾ ಸಮಿತಿಯು ಅಸ್ತಿತ್ವದಲ್ಲಿರುವ ಶಾಹಿ ಮಸೀದಿ ಈದ್ಗಾವನ್ನು ಸ್ವಯಂಪ್ರೇರಣೆಯಿಂದ ನೆಲಸಮಗೊಳಿಸಿ, ಭೂಮಿಯನ್ನು ಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿಗೆ ಒಪ್ಪಿಸಿದರೆ, ಮಸೀದಿ ಇರುವ ಜಾಗಕ್ಕಿಂತ ದೊಡ್ಡದಾದ ಭೂಮಿಯನ್ನು ನೀಡಲಾಗುವುದು ಎಂದು ಸಮಿತಿ ಅಧ್ಯಕ್ಷ ವಕೀಲ ಮಹೇಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಇಲ್ಲಿರುವ ಜಾತಿ ಸಮಸ್ಯೆಯನ್ನು ಮುಚ್ಚಿಡಬೇಕೆ? ಜಾತಿ ಬಗ್ಗೆ ಮಾತನಾಡಬಾರದೇ?: ಸತೀಶ್ ನಿನಾಸಂ
ಹಿರಿಯ ಸಿವಿಲ್ ನ್ಯಾಯಾಧೀಶರು ರಜೆಯಲ್ಲಿದ್ದ ಕಾರಣ ಅರ್ಜಿಯನ್ನು ಸಿವಿಲ್ ನ್ಯಾಯಾಧೀಶ II ಅನುಪಮ್ ಸಿಂಗ್ ಅವರಿಗೆ ಸಲ್ಲಿಸಲಾಗಿದೆ.
ದೇವಾಲಯದ ಸಮೀಪದಿಂದ ಮಸೀದಿಯನ್ನು ತೆರವುಗೊಳಿಸುವಂತೆ ನ್ಯಾಯಾಲಯವನ್ನು ಕೋರಿ ಹಿಂದೂ ಸಂಘಟನೆಯ ಪರ ವಕೀಲರು ಸಲ್ಲಿಸಿದ್ದ ಅರ್ಜಿ 2020 ರ ಡಿಸೆಂಬರ್‌ನಿಂದ ನ್ಯಾಯಾಲಯದಲ್ಲಿ ಬಾಕಿ ಇದೆ. ಈಗ ಸಮಿತಿಯು ಸಂಧಾನಕ್ಕೆ ಪ್ರಯತ್ನಿಸುತ್ತಿದೆ.
ಭಗವಾನ್ ಶ್ರೀ ಕೃಷ್ಣನ ಜನ್ಮಸ್ಥಳದ ಸಮೀಪವಿರುವ ಕತ್ರ ಕೇಶವ್ ದೇವ್ ದೇವಸ್ಥಾನದ 13.37 ಎಕರೆ ಆವರಣದಲ್ಲಿ 1669-70ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿದೆ. ಮಸೀದಿಯನ್ನು ತೆರವುಗೊಳಿಸಬೇಕೆಂದು ಕೋರಿ ಮಥುರಾದಲ್ಲಿ ವಿವಿಧ ಸಿವಿಲ್ ನ್ಯಾಯಾಲಯಗಳಲ್ಲಿ ಹಲವಾರು ಅರ್ಜಿಗಳು ಮತ್ತು ಮನವಿಗಳು ಬಾಕಿ ಉಳಿದಿವೆ. ಮಥುರಾದ ಸಿವಿಲ್ ನ್ಯಾಯಾಲಯ ಪ್ರಾರ್ಥನಾ ಸ್ಥಳಗಳ (ವಿಶೇಷ ನಿಬಂಧನೆ) ಕಾಯ್ದೆ 1991ರ ಅಡಿಯಲ್ಲಿ ಕೆಲವು ಅರ್ಜಿಗಳನ್ನು ವಜಾಗೊಳಿಸಿತ್ತು.
ಇದನ್ನೂ ಓದಿ: ಮಾನನಷ್ಟ ಪ್ರಕರಣ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ 2 ಕೋಟಿ ದಂಡ


