ಗೋಮೂತ್ರ ಉಪಯೋಗಿಸಿದ್ದರಿಂದ ಕ್ಯಾನ್ಸರ್ ಕಡಿಮೆಯಾಗಿದೆ ಎಂದು ಕಾಂಗ್ರೆಸ್ ಸಂಸದರೊಬ್ಬರು ರಾಜ್ಯಸಭೆಯಲ್ಲಿ ಮಾತನಾಡಿದ್ದಾರೆ ಎಂದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಆ ಪೋಸ್ಟ್‌ನಲ್ಲಿ ಹೇಳೀರುವುದು ಎಷ್ಟು ಸತ್ಯ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಫೇಕ್ ನ್ಯೂಸ್ ವೆಬ್‌ಸೈಟ್ ಪೋಸ್ಟ್ ಕಾರ್ಡ್ ಸಂಪಾದಕ ಮಹೇಶ್ ವಿಕ್ರಮ್ ಹೆಗಡೆ ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.
ಸೆ.13 ರಂದು ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಅವರು ನಿಧನರಾದರು. ಅಂದು ತಮ್ಮ ವಾಲ್‌ನಲ್ಲಿ, “ಮಾಜಿ ಕೇಂದ್ರ ಸಚಿವರು, ಹಿರಿಯ ಕಾಂಗ್ರೆಸ್ ನಾಯಕರಾದ ಆಸ್ಕರ್ ಫರ್ನಾಂಡಿಸ್ ಅವರು ಇಹಲೋಕ ತ್ಯಜಿಸಿದ್ದಾರೆ. ಕಾಂಗ್ರೆಸ್ ನಾಯಕನಾಗಿದ್ದರೂ ಗೋಮೂತ್ರದಲ್ಲಿ ಕ್ಯಾನ್ಸರ್ ಗುಣಪಡಿಸುವ ಶಕ್ತಿ ಇದೆ. ದೇಸಿ ಗೋವುಗಳನ್ನು ಸಂರಕ್ಷಿಸಬೇಕೆಂದು ಸಂಸತ್ ನಲ್ಲಿ ಗಟ್ಟಿ ಧ್ವನಿಯಿಂದ ಪ್ರತಿಪಾದಿಸಿದ, ಯೋಗ, ಭಾರತೀಯ ವೈದ್ಯ ಪದ್ದತಿಗಳ ಬಗ್ಗೆ ಅಪಾರ ಗೌರವ ಹೊಂದಿದ್ದ ಹಿರಿಯ ನಾಯಕನಿಗೆ ನಮನಗಳು” ಎಂದು ವಿಡಿಯೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ರಾಯಚೂರಿನಲ್ಲಿ ಮಸೀದಿ ಕೆಡವಿದಾಗ ದೇವಾಲಯ ಪತ್ತೆಯಾಯಿತೆ?

ಪೋಸ್ಟ್‌ನಲ್ಲಿ ಹೇಳಲಾಗಿರುವ ವಿಷಯಗಳ ಮಾಹಿತಿಗಾಗಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ, ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಅವರು 18 ಮಾರ್ಚ್ 2020 ರಂದು ‘ಪ್ರಿಂಟ್’ ಪ್ರಕಟಿಸಿದ ಲೇಖನದಲ್ಲಿ ‘ಗೋಮೂತ್ರ’ದಿಂದ ಕ್ಯಾನ್ಸರ್‌ರನ್ನು ಜಯಿಸಿದ ವ್ಯಕ್ತಿಯ ಕಥೆಯನ್ನು ರಾಜ್ಯಸಭೆಯಲ್ಲಿ ಉಲ್ಲೇಖಿಸಿದ್ದಾರೆ’ ಎಂದು ತಿಳಿದುಬಂದಿದೆ.
ಹೋಮಿಯೋಪತಿ ಮತ್ತು ಭಾರತೀಯ ವೈದ್ಯಕೀಯ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಆಯೋಗಗಳ ಸ್ಥಾಪನೆಯ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಆಸ್ಕರ್ ಫರ್ನಾಂಡೀಸ್ ಅವರು ತಮಗೆ ತಿಳಿದಿರುವ ವ್ಯಕ್ತಿಯೊಬ್ಬರು ‘ಗೋಮೂತ್ರ’ದ ಮೂಲಕ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಜಯಿಸಿದ್ದಾರೆ ಎಂದು ಲೇಖನ ವರದಿ ಮಾಡಿದೆ.

18 ಮಾರ್ಚ್ 2020 ರಂದು ರಾಜ್ಯಸಭೆಯಲ್ಲಿ ಆಸ್ಕರ್ ಫರ್ನಾಂಡೀಸ್ ಅವರು ತಮ್ಮ ಸಂಪೂರ್ಣ ಭಾಷಣವನ್ನು ಮಾಡುತ್ತಿರುವ ವೀಡಿಯೊವನ್ನು ‘ಸಂಸದ್ ಟಿವಿ’ ಸುದ್ದಿ ವಾಹಿನಿ ಪ್ರಕಟಿಸಿದೆ. ವಿಡಿಯೋದ ಸುಮಾರು 2:10 ನಿಮಿಷಗಳ ಸಮಯದಲ್ಲಿ ಆಸ್ಕರ್ ಫೆರ್ನಾಂಡಿಸ್ ಹೀಗೆ ಹೇಳಿದ್ದಾರೆ. “ನಾನು ಮೀರತ್‌ನಲ್ಲಿರುವ ಆಶ್ರಮಕ್ಕೆ ಹೋಗಿದ್ದೆ. ವಾಪಸಾಗುವುದು ತಡವಾದ ಕಾರಣ ಆಶ್ರಮ ಸ್ವಾಮೀಜಿಯವರು ತಮ್ಮ ಚಾಲಕನನ್ನು ನನ್ನ ಜೊತೆಯಲ್ಲಿ ಕಳುಹಿಸಿದರು. ಆ ಚಾಲಕನನ್ನು ಆಶ್ರಮದಲ್ಲಿ ನೀನೇಕೆ ಉಳಿದಿದ್ದಿಯಾ? ಎಂದು ಕೇಳಿದೆ, ‘ಸರ್, ನಾನು ಯಾವುದೇ ಚಿಕಿತ್ಸೆಯಿಂದ ಗುಣವಾಗದ ತೀವ್ರ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಗ ಈ ಆಶ್ರಮಕ್ಕೆ ಸೇರಿಕೊಂಡೆ. ಈ ಆಶ್ರಮ ನೀಡಿದ ಗೋಮೂತ್ರದಿಂದ ನನ್ನ ಕ್ಯಾನ್ಸರ್ ಸಂಪೂರ್ಣವಾಗಿ ವಾಸಿಯಾಯಿತು. ಅದಕ್ಕಾಗಿಯೇ ನನಗೆ ಹೊಸ ಜೀವನವನ್ನು ನೀಡಿದ ಈ ಆಶ್ರಮದ ಸೇವೆಯನ್ನು ನನ್ನ ಜೀವನದುದ್ದಕ್ಕೂ ಮಾಡಲು ನಿರ್ಧರಿಸಿದ್ದೇನೆ, ”ಎಂದು ಚಾಲಕ ಹೇಳಿಕೊಂಡರು ಎಂದು ಹೇಳಿದ್ದಾರೆ.
ಚಾಲಕನ ಬಗ್ಗೆ ಹೇಳೀರುವ ಮಾತುಗಳನ್ನು ಅರ್ಧಕ್ಕೆ ಕಟ್ ಮಾಡಿ ಆಸ್ಕರ್ ಫೆರ್ನಾಂಡಿಸ್ ಗೋಮೂತ್ರವನ್ನು ಬಳಸಿ ತಮ್ಮ ಕ್ಯಾನ್ಸರ್ ಕಡಿಮೆಯಾಗಿದೆ ಎಂದು ಹೇಳಿಕೊಂಡಿದ್ದಾರೆ ಎಂದು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

18 ಮಾರ್ಚ್ 2020 ರಂದು ರಾಜ್ಯಸಭೆಯಲ್ಲಿ ಆಸ್ಕರ್ ಫರ್ನಾಂಡಿಸ್ ಮಾಡಿದ ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಇದರಲ್ಲಿ ಆಸ್ಕರ್ ಫರ್ನಾಂಡಿಸ್ ರಾಜ್ಯಸಭೆಯಲ್ಲಿ ಚಾಲಕ ತನ್ನೊಂದಿಗೆ ಹಂಚಿಕೊಂಡ ಅನುಭವವನ್ನು ಸರಳವಾಗಿ ವಿವರಿಸಿದ್ದಾರೆ.
ಆಸ್ಕರ್ ಫರ್ನಾಂಡೀಸ್ ಅವರು ತಮಗೆ ರೋಗವಿದೆ ಅಥವಾ ಗೋಮೂತ್ರ ಉಪಯೋಗದಿಂದ ಕ್ಯಾನ್ಸರ್ ಕಡಿಮೆಯಾಗುತ್ತದೆ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಿಡಿಯೊವನ್ನು ಕಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ ಎಂದು ಖಚಿತವಾಗಿ ಹೇಳಬಹುದು.
ಒಟ್ಟಾರೆ ಕಾಂಗ್ರೆಸ್ ಸಂಸದ ದಿವಂಗತ ಆಸ್ಕರ್ ಫರ್ನಾಂಡೀಸ್ ಅವರು ಗೋಮೂತ್ರ ಬಳಸಿ ಕ್ಯಾನ್ಸರ್‌ನಿಂದ ಗುಣವಾಗಿರುವುದನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿಲ್ಲ.
ಪ್ರತಿಪಾದನೆ: ಗೋಮೂತ್ರ ಉಪಯೋಗದಿಂದ ಕ್ಯಾನ್ಸರ್ ಸಂಪೂರ್ಣವಾಗಿ ಕಡಿಮೆಯಾಗಿದೆ ಎಂದು ಕಾಂಗ್ರೆಸ್ ಸಂಸದರೊಬ್ಬರು ರಾಜ್ಯಸಭೆಯಲ್ಲಿ ಮಾತನಾಡುತ್ತಿರುವ ದೃಶ್ಯಗಳು.
ನಿಜಾಂಶ: ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೊವನ್ನು ಎಡಿಟ್ ಮಾಡಲಾಗಿದೆ. ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ರಾಜ್ಯಸಭಾ ಸಂಸದ ಆಸ್ಕರ್ ಫರ್ನಾಂಡೀಸ್ ಅವರು 2020 ರಲ್ಲಿ ರಾಜ್ಯಸಭೆಯಲ್ಲಿ ಮಾತನಾಡುತ್ತಾ, ಕ್ಯಾನ್ಸರ್ ಅನ್ನು ಜಯಿಸಿದ ವ್ಯಕ್ತಿಯೊಂದಿಗೆ ಹಂಚಿಕೊಂಡ ಅನುಭವವನ್ನು ವಿವರಿಸಿದ್ದರು. ಮೀರತ್‌ನ ಆಶ್ರಮವೊಂದರಲ್ಲಿ ಕೆಲಸ ಮಾಡುತ್ತಿರುವ ಚಾಲಕರೊಬ್ಬರು ಗೋಮೂತ್ರ ಉಪಯೋಗಿಸಿದ್ದರಿಂದ ಕ್ಯಾನ್ಸರ್ ಅನ್ನು ಜಯಿಸಿದ್ದಾರೆ ಎಂದು ಆಸ್ಕರ್ ಫರ್ನಾಂಡೀಸ್ ಹೇಳಿದ್ದರು. ಆದರೆ, ಆಸ್ಕರ್ ಫರ್ನಾಂಡೀಸ್ ಅವರಿಗೆ ಕ್ಯಾನ್ಸರ್ ಇದೆ ಅಥವಾ ಗೋಮೂತ್ರದಿಂದ ಕ್ಯಾನ್ಸರ್ ಕಡಿಮೆಯಾಗುತ್ತದೆ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪುದಾರಿಗೆಳೆಯುವಂತಿದೆ.
ಫ್ಯಾಕ್ಟ್‌ಚೆಕ್: 2014 ರ ಬೀದಿ ನಾಟಕದ ದೃಶ್ಯ ‘ತಾಲಿಬಾನ್ ಮಹಿಳೆಯನ್ನು ಮಾರುತ್ತಿದೆ’ ಎಂದು ವೈರಲ್!


