“ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ಬುಡಕಟ್ಟು ಸಮುದಾಯದ ಸಂಸ್ಕೃತಿ, ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಕೊಡುಗೆಯನ್ನು ಹೆಮ್ಮೆಯಿಂದ ಗೌರವಿಸಿ, ಸ್ಮರಿಸಲಾಗುತ್ತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
ಸ್ವಾತಂತ್ರ್ಯದ ನಂತರ ದಶಕಗಳ ಕಾಲ ದೇಶವನ್ನು ಆಳಿದವರು ತಮ್ಮ ಸ್ವಾರ್ಥ ರಾಜಕಾರಣಕ್ಕೆ ಆದ್ಯತೆ ನೀಡಿದ್ದರಿಂದ ಬುಡಕಟ್ಟು ಸಮುದಾಯದ ಬಗ್ಗೆ ಬಹಳ ಕಡಿಮೆ ತಿಳಿದಿದೆ ಎಂದು ವಿಪಕ್ಷ ಕಾಂಗ್ರೆಸ್ ಅನ್ನು ಟೀಕಿಸಿದ್ದಾರೆ.
“ಭಾರತದ ಜನಸಂಖ್ಯೆಯ ಸುಮಾರು 10 ಪ್ರತಿಶತದಷ್ಟು ಜನಸಂಖ್ಯೆಯನ್ನು ಒಳಗೊಂಡಿದ್ದರೂ ಸಹ, ದಶಕಗಳಿಂದ ಬುಡಕಟ್ಟು ಜನಾಂಗದವರ ಸಂಸ್ಕೃತಿ ಮತ್ತು ಸಾಮರ್ಥ್ಯವನ್ನು ಕಡೆಗಣಿಸಲಾಗಿದೆ. ಅವರ ಸಮಸ್ಯೆಗಳು, ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಯಾರು ಗಮನಹರಿಸಲಿಲ್ಲ” ಎಂದು ಆರೋಪಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ANI ಉಲ್ಲೇಖಿಸಿದೆ.
ಭೋಪಾಲ್‌ನ ಜಂಜಾಟಿಯಲ್ಲಿ ನಡೆದ ಗೌರವ್ ದಿವಸ್ ಮಹಾಸಮ್ಮೇಳನದಲ್ಲಿ ಬುಡಕಟ್ಟು ಸಮುದಾಯದ ಐತಿಹಾಸಿಕ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ.
ಇದನ್ನೂ ಓದಿ: ಬ್ರಿಟೀಷರ ಎದೆ ನಡುಗಿಸಿದ್ದ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ
“ರಾಷ್ಟ್ರ ನಿರ್ಮಾಣಕ್ಕೆ ಬುಡಕಟ್ಟು ಸಮುದಾಯದ ಕೊಡುಗೆಯ ಕುರಿತು ಚರ್ಚೆ ಬಂದಾಗ ಕೆಲವರು ಆಶ್ಚರ್ಯಚಕಿತರಾಗುತ್ತಾರೆ. ಏಕೆಂದರೆ ಅವರಿಗೆ ಅದರ ಬಗ್ಗೆ ಮಾಹಿತಿಯಿಲ್ಲ” ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಬುಡಕಟ್ಟು ಸಮುದಾಯದ ನಾಯಕ ಬಿರ್ಸಾ ಮುಂಡಾ ಅವರು ಬಿಹಾರ ಮತ್ತು ಜಾರ್ಖಂಡ್ ಸುತ್ತಮುತ್ತಲಿನ ಛೋಟಾನಾಗ್ಪುರ್ ಪ್ರಸ್ಥಭೂಮಿ ಪ್ರದೇಶದ ಮುಂಡಾ ಬುಡಕಟ್ಟು ಸಮುದಾಯದಲ್ಲಿ ನವೆಂಬರ್ 15, 1875 ರಲ್ಲಿ ಹುಟ್ಟಿದ್ದರು. ಇವರು ತಮ್ಮ ಬಾಲ್ಯದ ಬಹುಭಾಗವನ್ನು ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಸ್ಥಳಾಂತರಗೊಳ್ಳುವುದರಲ್ಲಿಯೇ ಕಳೆದರು. ಅವರು ತಮ್ಮ ಶಿಕ್ಷಕ ಜೈಪಾಲ್ ನಾಗ್ ಅವರ ಮಾರ್ಗದರ್ಶನದಲ್ಲಿ ಸಲ್ಗಾದಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದರು. ಜೈಪಾಲ್ ನಾಗ್ ಅವರ ಶಿಫಾರಸ್ಸಿನ ಮೇರೆಗೆ, ಜರ್ಮನ್ ಮಿಷನ್ ಶಾಲೆಗೆ ಸೇರಲು ಇವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು.
ಆರಂಭದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರೂ ನಂತರದ ದಿನಗಳಲ್ಲಿ ತಮ್ಮದೇ ಆದ ‘ಬಿರ್ಸೈಟ್’ ಎನ್ನುವ ಪಂಥವನ್ನು ಸ್ಥಾಪಿಸಿದರು. ಅತೀ ಶೀಘ್ರದಲ್ಲೇ ಮುಂಡಾ ಮತ್ತು ಒರಾನ್ ಸಮುದಾಯದವರು ಈ ಪಂಥಕ್ಕೆ ಸೇರಲು ಪ್ರಾರಂಭಿಸಿದರು. ಇದು ಬ್ರಿಟಿಷರ ಮತಾಂತರ ಚಟುವಟಿಕೆಗಳಿಗೆ ಸವಾಲಾಗಿ ಪರಿಣಮಿಸಿತು.
1886 ರಿಂದ 1890 ರ ಅವಧಿಯಲ್ಲಿ ಇವರು ಮಿಷನರಿ ವಿರೋಧಿ ಮತ್ತು ಸರ್ಕಾರ ವಿರೋಧಿ ಕಾರ್ಯಕ್ರಮಗಳ ಭಾಗವಾದರು. ಅವರು 1890 ರಲ್ಲಿ ಚೈಬಾಸಾವನ್ನು ತೊರೆಯುವ ಹೊತ್ತಿಗೆ, ಬಿರ್ಸಾ ಬುಡಕಟ್ಟು ಸಮುದಾಯಗಳ ಮೇಲಿನ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧದ ಚಳವಳಿಯಲ್ಲಿ ಬಿರ್ಸಾ ಮುಂಡಾ ತೀವ್ರವಾಗಿ ತೊಡಗಿಸಿಕೊಂಡರು.
ಮಾರ್ಚ್ 3, 1900 ರಂದು, ಬಿರ್ಸಾ ಮುಂಡಾ ತನ್ನ ಬುಡಕಟ್ಟು ಗೆರಿಲ್ಲಾ ಸೈನ್ಯದೊಂದಿಗೆ ಚಕ್ರಧರಪುರದ ಜಮ್ಕೋಪೈ ಕಾಡಿನಲ್ಲಿ ವಿಶ್ರಾಂತಿಯಲ್ಲಿದ್ದಾಗ ಬ್ರಿಟಿಷ್ ಪೊಲೀಸರು ಅವರನ್ನು ಬಂಧಿಸಿದರು. ನಂತರ ಜೂನ್ 9, 1900 ರಂದು 25 ನೇ ವಯಸ್ಸಿನಲ್ಲಿ ರಾಂಚಿ ಜೈಲಿನಲ್ಲಿ ನಿಧನರಾದರು. ಹೀಗೆ ಈ ಬುಡಕಟ್ಟು ಮತ್ತು ಆದಿವಾಸಿ ಸಮುದಾಯಗಳ ದೈವವಾಗಿ, ಅಲ್ಲಿನ ಸಮುದಾಯಗಳಲ್ಲಿ ಇಂದಿಗೂ ಒಂದು ದಂತಕಥೆಯಾಗಿ ಉಳಿದಿದ್ದಾರೆ.
ಇದನ್ನೂ ಓದಿ: ಇಂದು ‘ಬುಡಕಟ್ಟು ನಾಯಕ ಬಿರ್ಸಾ ಮುಂಡಾ’ ಜನ್ಮದಿನ – #BirsaMunda ಟ್ವಿಟರ್‌ನಲ್ಲಿ ಟ್ರೆಂಡಿಂಗ್!


