Homeಕರ್ನಾಟಕ"ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಸಿಗಲಿ": ಸ್ವಾತಂತ್ರ್ಯ ದಿನಾಚರಣೆಯಂದು ದಿಟ್ಟ ಹೋರಾಟ...

“ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಸಿಗಲಿ”: ಸ್ವಾತಂತ್ರ್ಯ ದಿನಾಚರಣೆಯಂದು ದಿಟ್ಟ ಹೋರಾಟ…

- Advertisement -
- Advertisement -

“ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಸಿಗಲಿ” ಎಂದು ಒತ್ತಾಯಿಸಿ  ಅಗಸ್ಟ್ 14 ಮತ್ತು 15 ರಂದು ಬೆಂಗಳೂರಿನ ಆನಂದರಾವ್ ವೃತ್ತದ ಬಳಿಯಿರುವ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ಮತ್ತು ಅಹೋರಾತ್ರಿ ಧರಣಿಯ ಬಗ್ಗೆ ನಡೆಯಲಿದೆ.

ಕರ್ನಾಟಕದ ಯುವಜನತೆ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ನಿರುದ್ಯೋಗ ಸಮಸ್ಯೆ ಪ್ರಮುಖವಾದುದು. ಸಾಕಷ್ಟು ಉದ್ಯೋಗ ಸೃಷ್ಟಿಯಾಗದೇ ಇರುವುದು ಒಂದೆಡೆಯಾದರೆ ಇನ್ನೊಂದೆಡೆ ಇಲ್ಲಿ ಸೃಷ್ಟಿಯಾದ ಉದ್ಯೋಗಗಳನ್ನು ಪರಭಾಷಿಕರು ಬಂದು ಕಬಳಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ನಮ್ಮ ನೆಲದಲ್ಲಿನ ಉದ್ಯೋಗ ನಮ್ಮವರಿಗೆ ಸಿಗದಂತಾಗಿದೆ. ರಾಜ್ಯದ ಸಂಪನ್ಮೂಲಗಳನ್ನು ಬಳಸಿಕೊಂಡು ಇಲ್ಲಿಯೇ ಬೀಡುಬಿಟ್ಟಿದ್ದರೂ ಇಲ್ಲಿನ ಬಹುರಾಷ್ತ್ರೀಯ ಕಂಪನಿಗಳು, ಬ್ಯಾಂಕುಗಳು ಮತ್ತು ಇತರ ಉದ್ಯಮಗಳು ಕನ್ನಡಿಗರಿಗೆ ಕೆಲಸ ಕೊಡಲು ಮೀನಮೇಷ ಎಣಿಸುತ್ತಿವೆ. ಹಾಗಾಗಿ ನಮ್ಮ ಕನ್ನಡಿಗರ ಅನ್ನಕ್ಕೆ ಇನ್ನಷ್ಟು ಕುತ್ತು ಬರುವುದನ್ನು ಹೇಗಾದರೂ ಮಾಡಿ ತಡೆಯಲೇಬೇಕೆಂದು ನಿರ್ಧರಿಸಿ ಈ ಹೋರಾಟ ಹಮ್ಮಿಕೊಂಡಿದ್ದೇವೆ ಎನ್ನುತ್ತಾರೆ ಕರ್ನಾಟಕ ರಣಧೀರ ಪಡೆಯ ಅಧ್ಯಕ್ಷರಾದ ಬಿ.ಹರೀಶ್ ಕುಮಾರ್.

ಈ ಹೋರಾಟದ ಮತ್ತೊಬ್ಬ ಪ್ರಮುಖರಾದ ರಮಾನಂದ ಅಂಕೋಲಾರವರು ಮಾತನಾಡಿ, ರಾಜ್ಯದಲ್ಲಿ ಜನಜಾಗೃತಿ ಮೂಡಿಸುವ ಜೊತೆಗೆ ನಮ್ಮನ್ನಾಳುವ ಸರ್ಕಾರಗಳ ಗಮನ ಸೆಳೆಯಲು ಮೇ ತಿಂಗಳ ೩ನೇ ತಾರೀಖಿನಂದು ನಾವು #KarnatakaJobsForKannadigas ಎಂಬ ಅಡಿಬರಹದ ಟ್ವಿಟರ್ ಅಭಿಯಾನವನ್ನು ಹಮ್ಮಿಕೊಂಡಿದ್ದೆವು. ಇಡಿ ದೇಶವೇ ನಮ್ಮತ್ತ ತಿರುಗಿ ನೋಡುವಂತೆ ನಾಡಾಭಿಮಾನಿಗಳ ಸಹಕಾರದಿಂದ ನಡೆದ ಈ ಅಭಿಯಾನಕ್ಕೆ ಬೆಂಬಲ‌ಸೂಚಿಸುತ್ತಾ ಆಗಿನ ಮುಖ್ಯಮಂತ್ರಿಗಳಾದ  ಶ್ರೀಯುತ ಕುಮಾರ ಸ್ವಾಮಿಯವರು “ಕನ್ನಡಿಗರ ಹಕ್ಕೊತ್ತಾಯ ಪರಿಗಣಿಸಿ ಕಾನೂನಿನ ಚೌಕಟ್ಟಿನಲ್ಲಿ ಹೇಗೆ ಕಾರ್ಯರೂಪಕ್ಕೆ ತರಬಹುದು ಎಂದು ಸಲಹೆ ಪಡೆಯಲಾಗುವುದು” ಎಂದು ಹೇಳಿದ್ದರು. ನಂತರ ಮೇ 18ರಂದು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ರಚಿಸಿ ಮತ್ತೊಮ್ಮೆ ನಮ್ಮ ಹಕ್ಕೊತ್ತಾಯವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ನಂತರ ಕರ್ನಾಟಕದ ೧೫ಕ್ಕೂ ಹೆಚ್ಚು ಜಿಲ್ಲೆಗಳ ೫೦೦ಕ್ಕೂ ಹೆಚ್ಚು ಬ್ಯಾಂಕ್ ಶಾಖೆಗಳಿಗೆ ನಮ್ಮ ಕಾರ್ಯಕರ್ತರು ಖುದ್ದಾಗಿ ತೆರಳಿ ಕನ್ನಡಿಗರಿಗೇ ಉದ್ಯೋಗ ಕೊಡುವಂತೆ ಮನವಿ ಮಾಡಿದ್ದೇವೆ ಎನ್ನುತ್ತಾರೆ.

ಅಭಿಯಾನದ ಯಶಸ್ಸು ಎನ್ನುವಂತೆ ಈ  ಅಭಿಯಾನ ಶುರುವಾದ ಮೇಲೆಯೇ ಕರ್ನಾಟಕದ ಕೆಲವು ಲೋಕಸಭಾ ಸದಸ್ಯರು ನಮ್ಮ ಬೇಡಿಕೆಗಳಲ್ಲೊಂದಾಗಿದ್ದ ಐಬಿಪಿಎಸ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶಕೊಡುವ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತಿದ್ದರಿಂದ ನಮ್ಮ ತಾಯ್ನೆಲದ ಭಾಷೆಯಾದ ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿದೆ. ಕಳೆದ ವಾರವಷ್ಟೇ ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಮೀಸಲಾಗಬೇಕು ಎಂದು ಒತ್ತಾಯಿಸಿ ರಾಜ್ಯದ ನಾಲ್ಕು ಸಂಸದರು ರಾಜ್ಯಸಭೆಯಲ್ಲಿ ಧ್ವನಿ ಎತ್ತಿದ್ದಾರೆ. ನಂತರ ಮೊನ್ನೆ  ಅಂದರೆ ಅಗಷ್ಟ್ ೧೦ ರಂದು ಮತ್ತೊಮ್ಮೆ ಟ್ವಿಟರ್ ಅಭಿಯಾನ ನಡೆಸಿ ನಮ್ಮ ಹಕ್ಕೊತ್ತಾಯವನ್ನು ಮಂಡಿಸಿದಾಗ ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು  ಈಗಿನ ಮುಖ್ಯಮಂತ್ರಿಗಳಾದ ಶ್ರೀಯುತ ಯಡಿಯೂರಪ್ಪನವರು ನೀಡಿದ್ದಾರೆ. ಹಿಂದಿನ ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ ಇದೂ ಸಹ ಕೇವಲ ಟ್ವಿಟರಿನಲ್ಲಿ ನೀಡಿದ ಭರವಸೆಯಾಗಿ ಉಳಿದುಕೊಳ್ಳುವ ಸಾಧ್ಯತೆ ಇದೆ. ಕಳೆದ ತಿಂಗಳಷ್ಟೇ ನಮ್ಮ ಪಕ್ಕದ ರಾಜ್ಯವಾದ ಆಂಧ್ರಪ್ರದೇಶ ಸರ್ಕಾರ ಸ್ಥಳಿಯರಿಗೆ ತನ್ನ ಉದ್ಯೋಗದಲ್ಲಿ ೭೫% ಮೀಸಲಾತಿ ನೀಡಲು ಶಾಸನ ಜಾರಿ ಮಾಡುವತ್ತ ಹೆಜ್ಜೆ ಇಟ್ಟಿದೆ.ನಮ್ಮ ರಾಜ್ಯದಲ್ಲೂ ಸಹ ಇಂತಹ ಒಂದು ಕಾಯ್ದೆಯನ್ನು ಮಾಡಿ ಎಂದು ನಾವು ನಮ್ಮ ಮುಖ್ಯಮಂತ್ರಿಯನ್ನು ಈ ಸಂದರ್ಭದಲ್ಲಿ ಬಲವಾಗಿ ಒತ್ತಾಯಿಸುತ್ತೇವೆ ಎಂದಿದ್ದಾರೆ.

ಅಗಸ್ಟ್ 14 ಮತ್ತು 15 ರಂದು ನಡೆಯುವ ಉಪವಾಸ ಸತ್ಯಾಗ್ರಹ ಮತ್ತು ಅಹೋರಾತ್ರಿ ಧರಣಿಯಲ್ಲಿ ಹೋರಾಟಗಾರರಾದ ವಾಟಾಳ್ ನಾಗರಾಜ್, ಕರವೇ ನಾರಾಯಣ ಗೌಡ, ಕರವೇ ಪ್ರವೀಣ್ ಕುಮಾರ್ ಶೆಟ್ಟಿ,  ಚಿತ್ರನಟ ಉಪೇಂದ್ರ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಸ್ ಜಿ ಸಿದ್ದರಾಮಯ್ಯ ಸೇರಿದಂತೆ ನಾಡಿನ ಹಿರಿಯ ಸಾಹಿತಿಗಳು, ಬರಹಗಾರರು, ನಟರು, ಹೋರಾಟಗಾರರು, ರಾಜಕಾರಣಿಗಳು ಮತ್ತು ದೊಡ್ಡ ಪ್ರಮಾಣದ ಯುವಜನತೆ ಭಾಗವಹಿಸಲಿದ್ದಾರೆ. ಈ ಧರಣಿ ಅಗಸ್ಟ್ 14 ರಂದು ಬೆಳಿಗ್ಗೆ 10 ಗಂಟೆಗೆ ಶುರುವಾಗಿ ಅಗಸ್ಟ್ 15 ರ ಬೆಳಿಗ್ಗೆ 10 ಗಂಟೆಗೆ ಮುಕ್ತಾಯವಾಗಲಿದೆ ಎಂದು ಫೇಸ್ ಬುಕ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಹಕ್ಕೊತ್ತಾಯಗಳು
1. ಎಲ್ಲಾ ಖಾಸಗಿ ವಲಯದ ಉದ್ಯಮಗಳಿಗೆ ರಾಜ್ಯ ಸರ್ಕಾರ ಹಲವು ಮೂಲಭೂತ(ನೆಲ,ಜಲ,ವಿದ್ಯುತ್, ರಸ್ತೆ ಮುಂತಾದ) ಸವಲತ್ತುಗಳನ್ನು ನೀಡುತ್ತಿರುವುದರಿಂದ ಕಟ್ಟುನಿಟ್ಟಾಗಿ ಉದ್ಯೋಗಗಳು ಸ್ಥಳಿಯರಿಗೆ(ಕನ್ನಡಿಗರಿಗೆ) ಮೀಸಲಿಡಲು ಕರಾರು ಪತ್ರದಲ್ಲೇ ಪೂರ್ವಷರತ್ತು ಹಾಕಬೇಕು. ರಾಜ್ಯದ ಸರ್ಕಾರಿ ವಲಯದ ಉದ್ಯಮಗಳಲ್ಲಿ ಎಲ್ಲ ಹುದ್ದೆಗಳಿಗೂ ಕನ್ನಡಿಗರನ್ನೇ ಆಯ್ಕೆ ಮಾಡಬೇಕು. ಅನಿವಾರ್ಯ ಸಂದರ್ಭದಲ್ಲಿ ಹೊರ ರಾಜ್ಯದವರನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆದು ನೇಮಕ ಮಾಡಿಕೊಳ್ಳಬೇಕು. ಇಲ್ಲಿನ ಐಟಿ ಉದ್ಯಮಗಳಿಗೆ ರಾಜ್ಯದ ಇಂಜಿನಿಯರಿಂಗ್/ಮ್ಯಾನೇಜ್ಮೆಂಟ್ ಕಾಲೇಜುಗಳಿಂದಲೇ ಕ್ಯಾಂಪಸ್ ನೇಮಕಾತಿ ಮಾಡಿಕೊಳ್ಳಲು ಸೂಚಿಸಬೇಕು.

2. ಮಹಾರಾಷ್ಟ್ರದಲ್ಲಿ ಇರುವಂತೆ ರಾಜ್ಯ ಸರ್ಕಾರ ಸ್ಥಳೀಯರಿಗೆ ನಿಗದಿಪಡಿಸಿದ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುವ ಬಗ್ಗೆ ರಾಜ್ಯದ ಖಾಸಗಿ ಉದ್ದಿಮೆಗಳಿಂದ ಪ್ರತಿವರ್ಷ ಘೋಷಣೆ ಪತ್ರ ಪಡೆಯಬೇಕು. ಅಭ್ಯರ್ಥಿಗಳನ್ನು ಸ್ಥಳೀಯರು ಎಂದು ಪರಿಗಣಿಸಲು ೧೫ ವರ್ಷಗಳ ಕಾಲ ಅವರು ರಾಜ್ಯದಲ್ಲಿ ವಾಸವಾಗಿದ್ದಲ್ಲದೇ ರಾಜ್ಯಭಾಷೆಯಾದ ಕನ್ನಡದಲ್ಲಿ ಮಾತನಾಡಲು,ಓದಲು ಮತ್ತು ಬರೆಯಲು ಬರಬೇಕು.

3. ರಾಜ್ಯದಲ್ಲಿ ವ್ಯವಹರಿಸುವ ಎಲ್ಲಾ ಬ್ಯಾಂಕುಗಳು ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ರಾಜ್ಯದ ಅಧಿಕೃತ ಭಾಷೆಯಾದ ಕನ್ನಡ ಭಾಷಾಜ್ಞಾನವನ್ನು ಕಡ್ಡಾಯಗೊಳಿಸಬೇಕು.ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಸಂಸ್ಥೆಯು ಬ್ಯಾಂಕಿಂಗ್ ನೇಮಕಾತಿಗೆ ನಡೆಸುವ  ಪೂರ್ವಭಾವಿ ಮತ್ತು ಮುಖ್ಯಪರೀಕ್ಷೆಯನ್ನು  ಕನ್ನಡದಲ್ಲೂ ಬರೆಯುವ ಅವಕಾಶವಿರಬೇಕು.

4. ರಾಜ್ಯ/ಕೇಂದ್ರ ಸರ್ಕಾರಿ ಉದ್ಯಮಗಳು ಹಾಗೂ ಇಲಾಖೆಗಳಲ್ಲಿ ದಿನಗೂಲಿ ಕೆಲಸಗಳಿಗೆ ಕಾರ್ಮಿಕರನ್ನು/ನೌಕರರನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಕನ್ನಡಿಗರನ್ನೇ ನೇಮಿಸಿಕೊಳ್ಳಬೇಕು. ಹೊರಗುತ್ತಿಗೆ ಸಂಸ್ಥೆಗಳಿಗೂ ಈ ಷರತ್ತು ವಿಧಿಸಬೇಕು.

5. ಕೇಂದ್ರ/ರಾಜ್ಯ ಸರ್ಕಾರದ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಕಡ್ಡಾಯವಾಗಿ ಕನ್ನಡದಲ್ಲಿಯೂ ಇರಬೇಕು.

ಈ ಹೋರಾಟವು ಯಾವುದೇ ಬ್ಯಾನರಿನಡಿಯಲ್ಲಿ ನಡೆಯುತ್ತಿಲ್ಲ. ಹೋರಾಟದ ನೇತೃತ್ವವನ್ನು ಯಾವುದೇ ಸಂಘಟನೆ ಅಥವಾ ವ್ಯಕ್ತಿ ವಹಿಸಿಲ್ಲ. ಇದು ಸಮಗ್ರ ಕನ್ನಡಿಗರೆಲ್ಲರ ಹೋರಾಟ. ಎಲ್ಲರ ಭಾಗವಹಿಸುವಿಕೆ ಇರಲಿ ಎಂದು Karnataka Jobs For Kannadigas (ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಸಿಗಲಿ) ತಂಡದ ಸಂಘಟಕರು ಕೋರಿದ್ದಾರೆ. ಭಾಗವಹಿಸುವವರು ಸಂಪರ್ಕಿಸಬೇಕಾದ ನಂಬರ್:  990000727, 8123363995, 9663000183

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...