Homeಮುಖಪುಟಪೌರತ್ವದ ಹಕ್ಕುಗಳಿಗಾಗಿ ಮಾರ್ಚ್ 12 ರಂದು ರಾಜ್ಯಾದ್ಯಂತ ಉಪವಾಸ ಸತ್ಯಾಗ್ರಹ : ಸಸಿಕಾಂತ್‌ ಸೆಂಥಿಲ್‌

ಪೌರತ್ವದ ಹಕ್ಕುಗಳಿಗಾಗಿ ಮಾರ್ಚ್ 12 ರಂದು ರಾಜ್ಯಾದ್ಯಂತ ಉಪವಾಸ ಸತ್ಯಾಗ್ರಹ : ಸಸಿಕಾಂತ್‌ ಸೆಂಥಿಲ್‌

ರಸ್ತೆಗಳಲ್ಲಿ, ಎಲ್ಲಿಯೂ ಯಾರಿಗೂ ತೊಂದರೆಯಾಗದಂತೆ, ಅಧಿಕಾರದಲ್ಲಿರುವವರ ಮನವೊಲಿಸುವ ಮಹತ್ವದ ಹೋರಾಟದ ಮಾದರಿಯಾಗಿ ಉಪವಾಸ ಸತ್ಯಾಗ್ರಹವನ್ನು ಮಾಡಲಾಗುತ್ತಿದೆ.

- Advertisement -
- Advertisement -

ನಾವು ಭಾರತೀಯರು–We the people of India, ಜಂಟಿ ಕ್ರಿಯಾ ಸಮಿತಿ – ಕರ್ನಾಟಕ ಹಾಗೂ ಸಂವಿಧಾನ ಉಳಿಸಿ ವೇದಿಕೆಗಳ ವತಿಯಿಂದ ಮಾರ್ಚ್ 12 ರಂದು “ಉಪ್ಪಿನ ಸತ್ಯಾಗ್ರಹ – 90” ನೆನಪು ಹಾಗೂ ಸ್ಪೂರ್ತಿಯಲ್ಲಿ ಸಂವಿಧಾನ ಹಾಗೂ ಪೌರತ್ವದ ಹಕ್ಕುಗಳನ್ನು ಉಳಿಸಿಕೊಳ್ಳಲು ರಾಜ್ಯಾದ್ಯಂತ ಉಪವಾಸ ಸತ್ಯಾಗ್ರಹ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಿದೆ.

ರಾಜ್ಯಾದ್ಯಂತ ಪ್ರತೀ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಮತ್ತು ಬೆಂಗಳೂರಿನಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಯ ಬಳಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಯಲಿದೆ. ದೇಶದ ಜನರ ಸಾಂವಿಧಾನಿಕ ಹಕ್ಕುಗಳು, ಪೌರತ್ವದ ಹಕ್ಕುಗಳಿಗೆ ಕುತ್ತು ಬಂದಿರುವ ಹಿನ್ನೆಲೆಯಲ್ಲಿ ಈ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, “ಇಂದು ಆ ಸ್ವಾತಂತ್ರ್ಯ ಹಾಗೂ ಸಂವಿಧಾನಗಳಿಗೆ ಕುತ್ತು ಬಂದಿದೆ. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗದ ಪರಂಪರೆಯುಳ್ಳವರು ದೇಶದಲ್ಲಿ ಅಧಿಕಾರ ಹಿಡಿದಿದ್ದಾರೆ. ಸ್ವಾತಂತ್ರ್ಯ ಚಳವಳಿಯಲ್ಲಿ ಧೀರೋದಾತ್ತವಾಗಿ ಸೆಣೆಸಿದ ಎಲ್ಲ ಧರ್ಮಗಳಿಗೆ ಸೇರಿದವರು, ಆದಿವಾಸಿಗಳು, ದಲಿತರು, ರೈತ ಕಾರ್ಮಿಕರು, ಮಹಿಳೆಯರು ತಾವು ಈ ದೇಶದ ಪೌರರು ಎಂದು ತಾವೇ ಓಟು ಹಾಕಿ ಗೆಲ್ಲಿಸಿದ ಸರ್ಕಾರದ ಮುಂದೆ ಸಾಬೀತು ಮಾಡಬೇಕಾದ ದುಸ್ಥಿತಿ ಬಂದು ನಿಂತಿದೆ. ಇದನ್ನು ಖಂಡಿಸಿ ದೇಶಾದ್ಯಂತ ಕಳೆದ ಮೂರು ತಿಂಗಳಿಂದ ಬೃಹತ್ ಆಂದೋಲನವು ಎದ್ದು ನಿಂತಿದೆ. ಅತ್ಯಂತ ಶಾಂತಿಯುತವಾಗಿ ನಡೆಯುತ್ತಿರುವ ಈ ಚಳವಳಿಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮವೇ ಸ್ಫೂರ್ತಿ ಮತ್ತು ಮಾದರಿ” ಎಂದು ಹೇಳಿದ್ದಾರೆ.

“ದಂಡಿ ಸತ್ಯಾಗ್ರಹದ ನಡಿಗೆ ಆರಂಭಿಸಿದ ದಿನ, ಅದರಲ್ಲೂ ಈ ಸತ್ಯಾಗ್ರಹಕ್ಕೆ 90 ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ರಾಜ್ಯದೆಲ್ಲೆಡೆ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಂದು ಬೆಳಿಗ್ಗೆ 9ರಿಂದ ಸಂಜೆ 6ವರೆಗೆ ಸತ್ಯಾಗ್ರಹಿಗಳು ಉಪವಾಸ ಸತ್ಯಾಗ್ರಹವನ್ನು ನಡೆಸುವುದಲ್ಲದೇ, ಜಿಲ್ಲಾಧಿಕಾರಿಗಳು/ತಹಸೀಲ್ದಾರ್ ಮುಖಾಂತರ ಸರ್ಕಾರಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.

“ರಾಜ್ಯದೆಲ್ಲೆಡೆ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಉಪವಾಸ ಸತ್ಯಾಗ್ರಹವು ನಡೆಯುತ್ತಿರುವುದು ಬಹುಶಃ ಇದೇ ಮೊದಲು. ರಸ್ತೆಗಳಲ್ಲಿ, ಎಲ್ಲಿಯೂ ಯಾರಿಗೂ ತೊಂದರೆಯಾಗದಂತೆ, ಅಧಿಕಾರದಲ್ಲಿರುವವರ ಮನವೊಲಿಸುವ ಮಹತ್ವದ ಹೋರಾಟದ ಮಾದರಿಯಾಗಿ ಉಪವಾಸ ಸತ್ಯಾಗ್ರಹವನ್ನು ಮಾಡಲಾಗುತ್ತಿದೆ. ಮಹಾತ್ಮಾ ಗಾಂಧಿಯವರು ಆವಿಷ್ಕರಿಸಿದ ಸತ್ಯಾಗ್ರಹದ ಈ ಮಾದರಿಯು ಸರ್ಕಾರದ ಕಣ್ತರೆಸಲಿ ಎಂದು ಆಶಿಸುತ್ತೇವೆ. ನಮ್ಮ ಆಂದೋಲನವು ಸ್ವಾತಂತ್ರ್ಯ ಚಳವಳಿಯಲ್ಲಿ ಮಹಾತ್ಮಾ ಗಾಂಧಿಯವರು ಹಾಕಿಕೊಟ್ಟ ಪರಂಪರೆಯಂತೆಯೇ ಅಹಿಂಸಾತ್ಮಕವಾಗಿ ಇರಲಿದ್ದು, ಗುರಿ ಮುಟ್ಟುವವರೆಗೂ ನಿಲ್ಲುವುದಿಲ್ಲ ಎಂದು ನಮ್ಮೊಳಗೇ ಆತ್ಮಾನುಸಂಧಾನ ನಡೆಸಿಕೊಳ್ಳುವ ದಿನವಾಗಿಯೂ ಈ ಸತ್ಯಾಗ್ರಹವು ಇರಲಿದೆ” ಎಂದು ಸೆಂಥಿಲ್‌ ತಿಳಿಸಿದ್ದಾರೆ.

ಮಾರ್ಚ್ 12, 1930ರಂದು ಮಹಾತ್ಮಾ ಗಾಂಧಿಯವರು ದಂಡಿ (ಉಪ್ಪಿನ) ಸತ್ಯಾಗ್ರಹವನ್ನು ಆರಂಭಿಸಿದ್ದರು. ಭಾರತವನ್ನು ಆಳುತ್ತಿದ್ದ ಬ್ರಿಟಿಷರು, ತಮ್ಮ ಆರ್ಥಿಕ ದಬ್ಬಾಳಿಕೆಯನ್ನು ಮುಂದುವರೆಸುವುದರ ಭಾಗವಾಗಿ ಉಪ್ಪಿನ ಮೇಲೆ ಕರ ವಿಧಿಸಿದ್ದರು. ಅದನ್ನು ವಿರೋಧಿಸಿ ಸತ್ಯಾಗ್ರಹಿಗಳೊಂದಿಗೆ ಮಹಾತ್ಮಾ ಗಾಂಧಿಯವರು ಉಪ್ಪು ತಯಾರಿಸಲು ಸಮುದ್ರದೆಡೆಗೆ ನಡೆಸಿದ ಪ್ರಯಾಣ ಅಂದು ಶುರುವಾಗಿತ್ತು. ಅಂತಿಮವಾಗಿ ಸತ್ಯಾಗ್ರಹಿಗಳು ಬಂಧನಕ್ಕೊಳಗಾಗಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಯೂಸಫ್‌ ಕಣ್ಣಿ, ಡಾ.ಆಸೀಫಾ ಮತ್ತು ವಕೀಲರಾದ ವಿನಯ್‌ ಶ್ರೀನಿವಾಸನ್‌ ಹಾಜರಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...