ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಎನ್‌ಡಿಎ ಒಕ್ಕೂಟ ಸೇರುತ್ತಾರೆ ಎಂಬ ಊಹಪೋಹಗಳಿಗೆ ಮತ್ತೆ ಗರಿ ಕಟ್ಟಿದಂತಾಗಿದೆ. ಅದಕ್ಕೆ ಪೂರಕವೆಂಬಂತೆ ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಜಗನ್ ಭೇಟಿಯಾಗಿದ್ದಾರೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷವು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟಕ್ಕೆ (ಎನ್‌ಡಿಎ) ಸೇರಬಹುದು ಎಂಬ ಅನುಮಾನಗಳು ಮತ್ತೊಮ್ಮೆ ಗಟ್ಟಿಯಾಗಿವೆ. ಕಳೆದ ವಾರ ಸೆಪ್ಟೆಂಬರ್ 23 ಮತ್ತು 24 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಜಗನ್ ಭೇಟಿಯಾಗಿದ್ದರು.
ಆಂಧ್ರಪ್ರದೇಶದ ವಿರೋಧ ಪಕ್ಷ ತೆಲುಗು ದೇಶಂ ಪಕ್ಷ ನಾಯಕ ಎನ್.ಚಂದ್ರಬಾಬು ನಾಯ್ಡು, ಜಗನ್ ಮೋಹನ್ ರೆಡ್ಡಿ ತಮ್ಮ ವಿರುದ್ಧದ ಸಿಬಿಐ ಪ್ರಕರಣಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಲು ಕೇಂದ್ರದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: NPR ಅಲ್ಪಸಂಖ್ಯಾತರ ಮನಸ್ಸಿನಲ್ಲಿ ಅಭದ್ರತೆ ಉಂಟುಮಾಡಿದೆ: ಆಂಧ್ರ ಸಿಎಂ ಜಗನ್
Shri @ysjagan, @AndhraPradeshCM called on PM @narendramodi. pic.twitter.com/UoSi9rkdYK
— PMO India (@PMOIndia) October 6, 2020
ಶಿವಸೇನೆ ಮತ್ತು ಶಿರೋಮಣಿ ಅಕಾಲಿ ದಳ ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಹೊರಬಂದ ನಂತರ ಬಿಜೆಪಿಗೂ ಕೂಡ ಹೆಚ್ಚಿನ ಬೆಂಬಲ ಬೇಕಾಗಿದೆ.
ಆದರೆ, ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ಎನ್‌ಡಿಎಗೆ ಸೇರುವ ವಿಚಾರವನ್ನು ನಿರಾಕರಿಸಿದೆ. ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ರಾಜ್ಯವು ಕೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಮಯದಲ್ಲಿ ಕೇಂದ್ರದೊಂದಿಗೆ ಸ್ನೇಹಯುತವಾಗಿರುವುದು ಅನುಕೂಲಕರವಾಗಿದೆ ಎಂದು ಹಿರಿಯ ನಾಯಕರು ಹೇಳುತ್ತಾರೆ.
ಎನ್‌ಡಿಎಗೆ ಸೇರ್ಪಡೆಗೊಳ್ಳಲು ಆಂಧ್ರಪ್ರದೇಶಕ್ಕೆ ವಿಶೇಷ ವರ್ಗದ ಸ್ಥಾನಮಾನ ನೀಡಬೇಕೆಂಬ ಬೇಡಿಕೆಗೆ ಜಗನ್ ಅಂಟಿಕೊಂಡಿದ್ದಾರೆ ಎಂದು ನಂಬಲಾಗಿದೆ. ಏಕೆಂದರೆ ವೈಎಸ್‌ಆರ್‌ಸಿಪಿ ಮುಖಂಡರು ಈ ಒಂದು ಬೇಡಿಕೆಯನ್ನು ಮುಖ್ಯವಾಗಿಟ್ಟುಕೊಂಡು 2019 ರಲ್ಲಿ ತಮ್ಮ ಇಡೀ ವಿಧಾನಸಭಾ ಚುನಾವಣಾ ಪ್ರಚಾರ ಮಾಡಿದ್ದರು.
ಇದನ್ನೂ ಓದಿ: ಖಾಸಗಿ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ.75 ಮೀಸಲಾತಿ: ಕೊಟ್ಟ ಮಾತು ಉಳಿಸಿಕೊಂಡ ಜಗನ್
ಪ್ರಧಾನಿಯೊಂದಿಗಿನ 40 ನಿಮಿಷಗಳ ಸಭೆಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಪೋಲವರಂ ನೀರಾವರಿ ಯೋಜನೆಗೆ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡುವುದು ಸೇರಿದಂತೆ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.
ಕಡಪಾ ಸ್ಟೀಲ್ ಪ್ಲಾಂಟ್‌ನಂತಹ ವಿವಿಧ ಯೋಜನೆಗಳಿಗೆ ಬಾಕಿ ಇರುವ ಬಾಕಿ ಮತ್ತು ಅನುಮೋದನೆಗಳ ಕುರಿತು ಚರ್ಚಿಸಿದ್ದಾರೆ. ಸಭೆಯಲ್ಲಿ ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸಲಾಗಿದೆಯೇ ಎಂದು ತಿಳಿದಿಲ್ಲ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿದೆ.
ರಾಜ್ಯಕ್ಕೆ ಬಿಡುಗಡೆ ಮಾಡಬೇಕಿರುವ ಬಾಕಿ ಇರುವ ₹ 10,000 ಕೋಟಿ, ಪೋಲವರಂ ಯೋಜನೆಗೆ 3,250 ಕೋಟಿ ಹಣವನ್ನು ಜೊತೆಗೆ ಕರ್ನೂಲ್ ಜಿಲ್ಲೆಯಲ್ಲಿ ಹೈಕೋರ್ಟ್ ಸ್ಥಾಪಿಸುವುದರ ಬಗ್ಗೆ ಮುಖ್ಯಮಂತ್ರಿ ಪಿಎಂ ಮೋದಿಯವರನ್ನು ಕೋರಿದ್ದಾರೆ ಎಂದು ಮೂಲಗಳು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಕ್ಕೆ ತಿಳಿಸಿವೆ.


