ಜನವರಿ 22 ರ ಶನಿವಾರ ಸಂಜೆ ಅಸ್ಸಾಂನ ನಗಾಂವ್ ಜಿಲ್ಲೆಯಲ್ಲಿ 22 ವರ್ಷದ ಮಾಜಿ ವಿದ್ಯಾರ್ಥಿ ನಾಯಕನ ಮೇಲೆ ಪೊಲೀಸರು ಗುಂಡು ಹಾರಿಸಿದ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಘಟನೆಯ ಕುರಿತು ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಏಕವ್ಯಕ್ತಿ ತನಿಖಾ ಆಯೋಗವನ್ನು ರಚಿಸಿದ್ದು, ವರದಿಯನ್ನು ಏಳು ದಿನಗಳಲ್ಲಿ ಸಲ್ಲಿಸಬೇಕು ಎಂದು ಆದೇಶಿಸಿದ್ದಾರೆ.
ಮಾಜಿ ವಿದ್ಯಾರ್ಥಿ ನಾಯಕ ಕೀರ್ತಿ ಕಮಲ್ ಬೋರಾ ಮಾದಕ ದ್ರವ್ಯ ದಂಧೆಯಲ್ಲಿ ತೊಡಗಿದ್ದರು. ನಾಗಾವ್‌ನ ಕಚಲುಖುವಾ ಪ್ರದೇಶದಲ್ಲಿ ಡ್ರಗ್ ವಿರೋಧಿ ಕಾರ್ಯಾಚರಣೆಯ ಸಂದರ್ಭದಲ್ಲಿ ಪೊಲೀಸರ ಮೇಲೆ ದಾಳಿ ಮಾಡಿದರು. ಹೀಗಾಗಿ ಆತ್ಮರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.
ಆಲ್ ಅಸ್ಸಾಂ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಎಎಸ್‌ಯು) ಸದಸ್ಯರಾಗಿ ಮತ್ತು ನಗಾಂವ್ ಕಾಲೇಜಿನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ 22 ವರ್ಷದ ಬೋರಾ ಅವರ ಎಡತೊಡೆ, ಎಡಗೈ ಮತ್ತು ಹಣೆಯ ಮೇಲೆ ಗಾಯಗಳಾಗಿದ್ದು, ಸದ್ಯ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: ಉತ್ತರ ಪ್ರದೇಶ: ಉಪ ಮುಖ್ಯಮಂತ್ರಿಗೆ ಘೇರಾವ್ ಹಾಕಿ, ಸ್ವ ಕ್ಷೇತ್ರದಿಂದ ವಾಪಸ್ ಕಳುಹಿಸಿದ ಮಹಿಳೆಯರು
ಪೊಲೀಸ್ ಕ್ರಮದ ವಿರುದ್ಧ ಬೋರಾ ಅವರ ಕುಟುಂಬ ಮತ್ತು ಸಹಚರರು ಪ್ರತಿಭಟನೆ ನಡೆಸಿದ ನಂತರ, ಅಸ್ಸಾಂ ಸರ್ಕಾರ ಭಾನುವಾರ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಬನ್ ಕುಮಾರ್ ಬೋರ್ತಕೂರ್ ಅವರ ಏಕವ್ಯಕ್ತಿ ತನಿಖಾ ಆಯೋಗವು ಜನವರಿ 22 ರಂದು ನಾಗಾಂವ್ ಪೊಲೀಸ್ ಫೈರಿಂಗ್ ಘಟನೆಯ ತನಿಖೆ ನಡೆಸಿ 7 ದಿನಗಳಲ್ಲಿ ವರದಿಯನ್ನು ಸಲ್ಲಿಸುತ್ತದೆ. ಪೊಲೀಸರು ಯಾವುದೇ ತಪ್ಪು ಮಾಡಿರುವುದು ಕಂಡುಬಂದರೆ, ತಕ್ಷಣವೇ ಕ್ರಮ ತೆಗೆದುಕೊಳ್ಳಲಾಗುವುದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Govt of Assam appoints a One-man Committee of Additional Chief Secretary Shri Paban Borthakur to facilitate an in-depth investigation into the circumstances leading to the police firing that took place on January 22 in Nagaon. pic.twitter.com/tws9ZmWaVz
— Chief Minister Assam (@CMOfficeAssam) January 23, 2022
ಘಟನೆಯ ಹಿನ್ನೆಲೆ:
ಜನವರಿ 22 ರ ಶನಿವಾರ ಸಂಜೆ ನಾಗಾಂವ್‌ನಲ್ಲಿ ಕೆಲವು ಬೈಕ್ ಸವಾರರು ಡ್ರಗ್ಸ್ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ ಎಂದು ನಾಗಾಂವ್ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಮಿಶ್ರಾ ಪಿಟಿಐಗೆ ತಿಳಿಸಿದ್ದಾರೆ.
“ಸಿವಿಲ್ ಡ್ರೆಸ್‌ನಲ್ಲಿದ್ದ ಇಬ್ಬರು ಪೊಲೀಸರು ಸ್ಥಳಕ್ಕೆ ತಲುಪಿದಾಗ, ಈ ಯುವಕ ಅವರನ್ನು ನೀವು ಪೊಲೀಸಿನವರೇ ಎಂದು ಕೇಳಿದರು. ಅವರು ಸಕಾರಾತ್ಮಕವಾಗಿ ಉತ್ತರಿಸಿದಾಗ, ಆರೋಪಿಯು ಅವರಲ್ಲಿ ಒಬ್ಬರನ್ನು ತನ್ನ ಹೆಲ್ಮೆಟ್‌ನಿಂದ ಹೊಡೆದು ಗಾಯಗೊಳಿಸದ್ದಾರೆ. ಸಮೀಪದಲ್ಲಿದ್ದ ಬ್ಯಾಕ್‌ಅಪ್ ಪೊಲೀಸ್ ತಂಡವೂ ಸ್ಥಳಕ್ಕೆ ತಲುಪಿತು. ಆದರೆ, ಆತ ಅವರ ಮೇಲೆ ದಾಳಿಯನ್ನು ಮುಂದುವರೆಸಿದ್ದಾರೆ, ಬೇರೆ ದಾರಿಯಿಲ್ಲದೆ ಪೊಲೀಸರು ಅವನ ಕಾಲಿಗೆ ಗುಂಡು ಹಾರಿಸಿದ್ದಾರೆ. ಆತನ ವಶದಿಂದ ಎಂಟು ಹೆರಾಯಿನ್ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದೆಡೆ, ಆಲ್ ಅಸ್ಸಾಂ ಸ್ಟೂಡೆಂಟ್ಸ್ ಅಸೋಸಿಯೇಷನ್ (AASU), ಬೋರಾ ಔಷಧಾಲಯದಿಂದ ಮನೆಗೆ ಹಿಂದಿರುಗುತ್ತಿದ್ದಾಗ, ರಸ್ತೆಯಲ್ಲಿ ಕುಡಿದ ಪೊಲೀಸ್ ಅಧಿಕಾರಿಗಳಿಂದ ತೊಂದರೆಗೀಡಾದ ಯುವಕನನ್ನು ರಕ್ಷಿಸಲು ತನ್ನ ಬೈಕ್ ಅನ್ನು ನಿಲ್ಲಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪೊಲೀಸರು ಆತನ ಮೇಲೆ ಗುಂಡು ಹಾರಿಸಿ, ಹೆರಾಯಿನ್ ಅನ್ನು ಅವರೇ ಸಿಗುವಂತೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂತ್ರಸ್ತ ಕೀರ್ತಿ ಕಮಲ್ ಬೋರಾ ಅವರ ತಾಯಿ ಮತ್ತು ಕೆಲವು ವಿದ್ಯಾರ್ಥಿಗಳು ನಗಾಂವ್ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು. ಇದರಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಬೇಕು ಮತ್ತು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು.
ಹಿರಿಯ ಕಾಂಗ್ರೆಸ್ ನಾಯಕ ರಿಪುನ್ ಬೋರಾ ಅವರು ಪೊಲೀಸರ ಗುಂಡಿನ ದಾಳಿಯನ್ನು ಖಂಡಿಸಿದ್ದಾರೆ. ಈ ಕ್ರಮ “ಅಸ್ಸಾಂನಲ್ಲಿ ಪೊಲೀಸ್ ಜಂಗಲ್ ರಾಜ್”ಗೆ ಉದಾಹರಣೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಯುಪಿ ಚುನಾವಣೆ: ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಮೇನಕಾ ಗಾಂಧಿ, ವರುಣ್ ಗಾಂಧಿ ಔಟ್


