ಭಾರತೀಯ ಚುನಾವಣಾ ಆಯೋಗದಲ್ಲಿ (ಇಸಿಐ) ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಸರ್ವಾಧಿಕಾರಿ ಧೋರಣೆ ಬಟಾಬಯಲಾಗಿ ದೇಶದಾದ್ಯಂತ ಭಾರೀ ಚರ್ಚೆಯಾಗುತ್ತಿರುವ ನಡುವೆಯೇ, ಕರ್ನಾಟಕದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್ಐಆರ್) ಸಂಬಂಧಪಟ್ಟಂತೆ ಬೆಚ್ಚಿ ಬೀಳಿಸುವ ವಿಚಾರವೊಂದು ಬೆಳಕಿಗೆ ಬಂದಿದೆ.
ರಾಜ್ಯದ ಬೀದರ್ ಜಿಲ್ಲೆಯ ಭಾಲ್ಕಿ ಮತ್ತು ಬೆಳಗಾವಿ ಜಿಲ್ಲೆಯ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ಫಾರಂ ನಂಬರ್-7 ಸಲ್ಲಿಸಿ ಸಾವಿರಾರು ಅರ್ಹ ಮತದಾರರ ಹೆಸರುಗಳನ್ನು (ವಿಶೇಷವಾಗಿ ಮುಸ್ಲಿಂ ಮತದಾರರ ಹೆಸರುಗಳು) ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಿಸಲು ಪ್ರಯತ್ನಿಸಿರುವುದು ಗೊತ್ತಾಗಿದೆ.
ಎರಡೂ ಕಡೆ ಬಿಜೆಪಿ ಕಾರ್ಯಕರ್ತರು ಈ ಅಕ್ರಮಗಳನ್ನು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಭಾಲ್ಕಿ ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 107ರಲ್ಲಿ 200, 114ರಲ್ಲಿ 198, 111 ರಲ್ಲಿ 200, 115ರಲ್ಲಿ 230 ಮತ್ತು 129ರಲ್ಲಿ 200 ಫಾರಂ ನಂಬರ್-7 ಸಲ್ಲಿಕೆ ಮಾಡಲಾಗಿದೆ ಎಂಬ ಮಾಹಿತಿ ದೊರೆತಿದೆ.
ಸೆಪ್ಟಂಬರ್ 22ರಂದು ಎಲ್ಲಾ ಫಾರಂ-7 ಅನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್ಒಗಳಿಗೆ) ಸಲ್ಲಿಕೆ ಮಾಡಲಾಗಿದೆ.
“ಬೆಂಗಳೂರು ಕಚೇರಿಯಿಂದ ಬಂದಿದ್ದೇವೆ, ಇವರೆಲ್ಲರ ಹೆಸರನ್ನು ಡಿಲೀಟ್ ಮಾಡಬೇಕೆಂದು ಬಿಎಲ್ಒಗಳಿಗೆ ಹೇಳಿದ್ದಾರೆಂದು” ಅಲ್ಲಿನ ಬಿಎಲ್ಒ ಒಬ್ಬರು ಮಾಹಿತಿ ನೀಡಿದ್ದಾರೆ.
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 194, 195, 196 ಮತ್ತು 199ರಲ್ಲಿ ನೂರಾರು ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಫಾರಂ ನಂಬರ್-7 ಸಲ್ಲಿಕೆ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, ವೋಟ್ ಡಿಲೀಟ್ ಮಾಡಲು ಸಲ್ಲಿಕೆ ಮಾಡಲಾಗಿದೆ ಎನ್ನಲಾದ ನೂರಾರು ಫಾರಂ ನಂಬರ್-7 ಮತ್ತು ಈ ಫಾರಂಗಳಲ್ಲಿ ಹೆಸರಿಸಲಾದ ವ್ಯಕ್ತಿಗಳನ್ನು ತೋರಿಸಿದ್ದಾರೆ.
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸಲ್ಲಿಕೆಯಾದ 8 ಫಾರಂ-7 ಅನ್ನು ನಾವು ಪರಿಶೀಲಿಸಿದ್ದೇವೆ. ಅದರಲ್ಲಿ ಅರ್ಜಿ ಸಲ್ಲಿಸಿದವರ ಪೈಕಿ 5 ಅರ್ಜಿಗಳನ್ನು ಶಿವಂ, 1 ಅರ್ಜಿಯನ್ನು ಮಹಾದೇವ್, 1 ಅರ್ಜಿಯನ್ನು ವಿನೋದ್ ಸಲ್ಲಿಸಿದ್ದಾರೆ ಎಂದಿದೆ. ಮತ್ತೊಂದು ಅರ್ಜಿ ಸಲ್ಲಿಸಿದವರ ಹೆಸರು ಬರೆದಿಲ್ಲ. ಈ ಎಲ್ಲಾ 8 ಅರ್ಜಿಗಳಲ್ಲಿ ಮುಸ್ಲಿಂ ಮತದಾರರ ಹೆಸರುಗಳೇ ಇವೆ.








ಈ ನಡುವೆ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲೂ ಸಾವಿರಾರು ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಸ್ವತಃ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅರ್ಜಿ ಸಲ್ಲಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ (ಸೆ.24) ಸುದ್ದಿಗೋಷ್ಠಿ ನಡೆಸಿದ ಬಿ.ಕೆ.ಹರಿಪ್ರಸಾದ್, ಎಸ್ಐಆರ್ ಪ್ರಕ್ರಿಯೆ ವೇಳೆ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ 2000 ಮತದಾರರ ಹೆಸರು ಡಿಲೀಟ್ ಮಾಡಲು ಅಭಯ್ ಪಾಟೀಲ್ ಪತ್ರ ಬರೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಮತದಾರರ ಹೆಸರು ಡಿಲೀಟ್ ಮಾಡಿ ಎಂದು ಪತ್ರ ಬರೆಯಲು ಇವರು ಯಾರು? ಅಭಯ್ ಪಾಟೀಲ್ ಬರೆದಿರುವ ಪತ್ರ ನಮ್ಮ ಬಳಿ ಇದೆ ಎಂದು ಹರಿಪ್ರಸಾದ್ ದಾಖಲೆ ಬಿಡುಗಡೆ ಮಾಡಿದ್ದಾರೆ. ಶಾಸಕರು ಕಾನೂನು ಮೀರಿ ಶಾಸಕರು ಸಾಮೂಹಿಕ ಡಿಲೀಷನ್ಗೆ ಕೋರಿ ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ.
ಶಾಸಕ ಅಭಯ್ ಪಾಟೀಲ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.
ಬಿ.ಕೆ ಹರಿಪ್ರಸಾದ್ ಆರೋಪಿಸಿರುವಂತೆ ಅಭಯ್ ಪಾಟೀಲ್ ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರ ಮತ್ತು ಆ ರೀತಿ ಸಾಮೂಹಿಕವಾಗಿ (ಬಲ್ಕ್) ಅರ್ಜಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಿ ಅಧಿಕಾರಿ ಬರೆದಿರುವ ಪತ್ರವನ್ನು ಕೆಳಗೆ ನೋಡಬಹುದು…





