Homeಮುಖಪುಟನ್ಯಾಯಾಲಯದಲ್ಲೇ ಮತ ಎಣಿಕೆ, ನ್ಯಾಯಾಧೀಶರಿಂದಲೇ ಫಲಿತಾಂಶ ಘೋಷಣೆ: ಹೊಸ ಇತಿಹಾಸ ಬರೆದ ಸುಪ್ರೀಂ ಕೋರ್ಟ್

ನ್ಯಾಯಾಲಯದಲ್ಲೇ ಮತ ಎಣಿಕೆ, ನ್ಯಾಯಾಧೀಶರಿಂದಲೇ ಫಲಿತಾಂಶ ಘೋಷಣೆ: ಹೊಸ ಇತಿಹಾಸ ಬರೆದ ಸುಪ್ರೀಂ ಕೋರ್ಟ್

- Advertisement -
- Advertisement -

ಚಂಡೀಗಢ ಮೇಯರ್ ಚುನಾವಣೆಯ ಮತ ಎಣಿಕೆಗೆ ಸಾಕ್ಷಿಯಾಗಿದ್ದಲ್ಲದೆ, ಫಲಿತಾಂಶವನ್ನೂ ಘೋಷಿಸುವ ಮೂಲಕ ಸುಪ್ರೀಂ ಕೋರ್ಟ್‌ ಇಂದು (ಫೆ.20) ಹೊಸ ಇತಿಹಾಸ ನಿರ್ಮಿಸಿದೆ.

ಇಂದು ಬೆಳಗ್ಗೆ ಮತಪತ್ರಗಳನ್ನು ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್‌ ಪೀಠ, ಎಂಟು ಮತಪತ್ರಗಳನ್ನು ವಿರೂಪಗೊಳಿಸಿ ಅಮಾನ್ಯಗೊಳಿಸಿದ ಚುನಾವಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿತು. ನಂತರದ ಪ್ರಕ್ರಿಯೆಯನ್ನು ಚುನಾವಣಾ ಆಯೋಗಕ್ಕೆ ನೀಡಲು ನಿರಾಕರಿಸಿತು. ಹೊಸದಾಗಿ ಚುನಾವಣೆ ನಡೆಸುವಂತೆ ಕೋರಿದ್ದ ಬಿಜೆಪಿಯ ಮನವಿಯನ್ನೂ ತಿರಸ್ಕರಿಸಿತು.

“ಚಂಡೀಗಢದಲ್ಲಿ ನಡೆದಂತಹ ಕುತಂತ್ರಗಳಿಂದ ಪ್ರಜಾಪ್ರಭುತ್ವ ಪ್ರಕ್ರಿಯೆಯು ನಿಷ್ಪ್ರಯೋಜಕವಾಗದಂತೆ ನೋಡಿಕೊಳ್ಳುವುದು ನ್ಯಾಯಾಲಯದ ಕರ್ತವ್ಯ. ಇಂತಹ ವಿರಳ ಸನ್ನಿವೇಶಗಳಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಿ, ಮೂಲಭೂತ ಪ್ರಜಾಸತ್ತಾತ್ಮಕ ಜನಮತವನ್ನು ಖಾತರಿಗೊಳಿಸಬೇಕಿದೆ” ಎಂದು ನ್ಯಾಯಾಧೀಶರು ಹೇಳಿದರು.

ಮತ ಎಣಿಕೆಯ ಬಳಿಕ ಅರ್ಜಿದಾರ ಎಎಪಿಯ ಕುಲದೀಪ್ ಕುಮಾರ್ ಚಂಡೀಗಢ ಮುನ್ಸಿಪಲ್ ಕಾರ್ಪೋರೇಷನ್‌ನ ಮೇಯರ್‌ ಹುದ್ದೆಗೆ ಮಾನ್ಯವಾಗಿ ಚುನಾಯಿತರಾಗಿದ್ದಾರೆ ಎಂದು ನ್ಯಾಯಾಧೀಶರು ಘೋಷಿಸಿದರು.

ಚುನಾವಣೆಯಲ್ಲಿ ಅಕ್ರಮವೆಸಗಿದ ಬಿಜೆಪಿಯ ಅಲ್ಪ ಸಂಖ್ಯಾತ ಘಟಕದ ಮಾಜಿ ಸದಸ್ಯರೂ ಆಗಿರುವ ಅನಿಲ್ ಮಾಸಿಹ್ ವಿರುದ್ದ ಕ್ರಮ ಕೈಗೊಳ್ಳುವಂತೆ ಮುಖ್ಯನ್ಯಾಯಮೂರ್ತಿ ಸೂಚಿಸಿದರು. 8 ಮತಪತ್ರಗಳು ವಿರೂಪಗೊಂಡಿದ್ದರಿಂದ ಅವುಗಳ ಮೇಲೆ ಗುರುತು ಹಾಕಿದೆ ಎಂದು ನ್ಯಾಯಾಲಯಕ್ಕೆ ಸುಳ್ಳು ಹೇಳಿದ್ದ ಅನಿಲ್ ಮಾಸಿಹ್ ವಿರುದ್ದ ಸಿಆರ್‌ಪಿಸಿ ಸೆಕ್ಷನ್ 340 ಅಡಿಯಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಮುಖ್ಯ ನ್ಯಾಯಮೂರ್ತಿ ಆದೇಶಿಸಿದರು. ಮಾಸಿಹ್ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು? ಎಂದು ಮೂರು ವಾರದೊಳಗೆ ಕಾರಣ ತಿಳಿಸುವಂತೆ ಹೇಳಿದರು.

ನ್ಯಾಯಾಲಯದ ಐತಿಹಾಸಿಕ ತೀರ್ಪಿನಿಂದ ಜನವರಿ 30ರಂದು ಚುನಾವಣಾಧಿಕಾರಿ ನೀಡಿದ್ದ ಫಲಿತಾಂಶ ರದ್ದಾಗಿದೆ. ಅಂದು ಮೇಯರ್ ಆಗಿ ಬಿಜೆಪಿಯ ಮನೋಜ್ ಸೋಂಕರ್ ಆಯ್ಕೆಯಾಗಿರುವುದೂ ರದ್ದುಗೊಂಡಿದೆ. ನ್ಯಾಯಯುತವಾಗಿ ಕಾಂಗ್ರೆಸ್-ಎಎಪಿಯ ಮೈತ್ರಿ ಅಭ್ಯರ್ಥಿ ಕುಲದೀಪ್ ಕುಮಾರ್ ಮೇಯರ್ ಪಟ್ಟಕ್ಕೇರಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಎಎಪಿಯ ಕುಲದೀಪ್ ಕುಮಾರ್ ಅವರಿಗೆ ನ್ಯಾಯ ಸಿಗಲು ಮುಖ್ಯ ಕಾರಣ ಕಾಂಗ್ರೆಸ್ ಮತ್ತು ಎಎಪಿ ಜಂಟಿಯಾಗಿ ಬಿಡುಗಡೆ ಮಾಡಿದ್ದ ವಿಡಿಯೋ ಆಗಿದೆ. ಅದರಲ್ಲಿ ಚುನಾವಣಾಧಿಕಾರಿ ಅನಿಲ್ ಮಾಸಿಹ್ ಎಎಪಿಯ ಎಂಟು ಸದಸ್ಯರ ಮತ ಪತ್ರಗಳ ಮೇಲೆ ಉದ್ದೇಶಪೂರ್ವಕವಾಗಿ ಮಾರ್ಕ್‌ ಮಾಡಿರುವುದು ಸ್ಪಷ್ಟವಾಗಿ ರೆಕಾರ್ಡ್‌ ಆಗಿತ್ತು.

ನಿನ್ನೆ (ಫೆ.19) ಪ್ರಕರಣ ವಿಚಾರಣೆ ನಡೆಸಿದ್ದ ನ್ಯಾಯಪೀಠ, “ಮತಪತ್ರಗಳ ಮೇಲೆ ಮಾರ್ಕ್‌ ಯಾಕೆ ಮಾಡಿದ್ರಿ? ಸಹಿ ಹಾಕುವುದನ್ನು ಹೊರತು ಬೇರೆ ಮಾರ್ಕ್‌ ಮಾಡಲು ನಿಯಮಗಳ ಪ್ರಕಾರ ನಿಮಗೆ ಎಲ್ಲಿ ಅವಕಾಶವಿದೆ? ಎಂದು ಅನಿಲ್ ಮಾಸಿಹ್‌ಗೆ ಖಾರವಾಗಿ ಕೇಳಿತ್ತು.

ಒಟ್ಟಿನಲ್ಲಿ ಮೊದಲ ಬಾರಿಗೆ ಸುಪ್ರೀಂ ಕೋರ್ಟ್‌ನಲ್ಲೇ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳುವ ಮೂಲಕ ಹೊಸ ಇತಿಹಾಸ ನಿರ್ಮಾಣವಾಗಿದೆ. ಈ ಪ್ರಕರಣವನ್ನು ನ್ಯಾಯಾಲಯ ಅತ್ಯಂತ ಮುತುವರ್ಜಿ ವಹಿಸಿ ತುರ್ತಾಗಿ ವಿಲೇವಾರಿ ಮಾಡಿದೆ.

ಇದನ್ನೂ ಓದಿ: ಎಎಪಿಯ ಕುಲದೀಪ್ ಕುಮಾರ್ ಚಂಡೀಗಢ ಮೇಯರ್: ಸುಪ್ರೀಂ ಕೋರ್ಟ್ ಮಹತ್ವದ ಘೋಷಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...