ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಮತ್ತು ದೆಹಲಿಯಲ್ಲಿ ರೈತರು ನಡೆಸಿರುವ ಪ್ರತಿಭಟನೆಯನ್ನು ಬೆಂಬಲಿಸಿ ಕರೆ ನೀಡಿರುವ ಭಾರತ್ ಬಂದ್‌ಗೆ ತುಮಕೂರು ಮತ್ತು ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ನಡೆಸಲಾಯಿತು. . ರೈತ-ದಲಿತ-ಕಾರ್ಮಿಕ ಸಂಘಟನೆಗಳು, ಎಡಪಕ್ಷಗಳು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಟೌನ್ ಹಾಲ್ ವೃತ್ತದಲ್ಲಿ ಪ್ರತಿಭಟನಾನಿರತ ರೈತರು ಪ್ರಧಾನಿ ನರೆಂದ್ರ ಮೋದಿಯ ಪ್ರತಿಕೃತಿ ದಹನ ಮಾಡಿ ಕಿಡಿಕಾರಿದರು. ರೈತ-ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿದರು. ಕೃಷಿ ಸಂಬಂಧಿ ಸುಗ್ರೀವಾಜ್ಞೆಗಳ ಜಾರಿಯಿಂದ ದೇಶಕ್ಕೆ ಅನ್ನ ನೀಡುವ ರೈತ ಸಮೂಹ ಬೀದಿಗೆ ಬೀಳಲಿದೆ. ತೀವ್ರ ಸಂಕಷ್ಟಕ್ಕೆ ಗುರಿಯಾಗಲಿದೆ. ಅನ್ನ ನೀಡುವ ರೈತ ಮತ್ತೊಬ್ಬರ ಬಾಗಿಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ಎದುರಾಗಲಿದೆ.
ಬಡ, ಮಧ್ಯಮ ವರ್ಗದ ರೈತರ ಬಳಿ ಇರುವ ಅಲ್ಪಸ್ವಲ್ಪ ಭೂಮಿಯೂ ಶ್ರೀಮಂತರ ಕೈ ಸೇರಲಿದೆ. ಕಾರ್ಪೋರೇಟ್ ಕುಳಗಳು ಜಮೀನು ಖರೀದಿ ರೈತರನ್ನು ಕೂಲಿ ಇಟ್ಟುಕೊಳ್ಳುವಂತಹ ವ್ಯವಸ್ಥೆ ಮತ್ತೆ ಬರಲಿದೆ. ರೈತರು ಸ್ವತಂತ್ರವಾಗಿರಬೇಕು. ಯಾರ ಹಿಡಿತವೂ ಇರಬಾರದು. ಮತ್ತೊಬ್ಬರ ಗುಲಾಮ ರಾಗಿ ಜೀವನ ನಡೆಸಬಾರದು ಎಂಬ ನ್ಯಾಯದ ವ್ಯವಸ್ಥೆಗೆ ಧಕ್ಕೆ ಬರಲಿದೆ. ಹಾಗಾಗಿ ಭಾರತ ಸರ್ಕಾರ ಹೊಸ ಕೃಷಿ ಸುಗ್ರೀವಾಜ್ಞೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರತ್ ಬಂದ್‌ಗೆ ಭಾರಿ ಬೆಂಬಲ: ಹೋರಾಟ ಯಶಸ್ವಿ
ಪಾವಗಡ, ಮಧುಗಿರಿ, ಶಿರಾ, ಕೊರಟಗೆರೆ, ಗುಬ್ಬಿ, ತಿಪಟೂರು, ಕುಣಿಗಲ್, ತುರುವೇಕೆರೆ, ಚಿಕ್ಕನಾಯಕನ ಹಳ್ಳಿ ಹೀಗೆ ಜಿಲ್ಲೆಯ ಎಲ್ಲಾ ಹತ್ತೂ ತಾಲೂಕು ಕೇಂದ್ರಗಳಲ್ಲೂ ಪ್ರತಿಭಟನೆಗಳು ಜೋರಾಗಿ ನಡೆದವು. ರಾಜ್ಯ ರೈತ ಸಂಘಟನೆ ಮತ್ತು ಹಸಿರು ಸೇನೆಯ ಎರಡೂ ಬಣಗಳ ಕಾರ್ಯಕರ್ತರು ಮಿನಿವಿಧಾನ ಸೌಧಗಳ ಬಳಿ ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು.
ಅನ್ನದಾತರ ಬೆನ್ನು ಮೂಳೆ ಮುರಿಯುವ ಕೆಲಸವನ್ನು ಭಾರತ ಸರ್ಕಾರ ಮಾಡುತ್ತಿದೆ. ಪ್ರತಿಯೊಬ್ಬರು ಅನ್ನ ತಿಂದೇ ಬದುಕಬೇಕು ಅನ್ನವಿಲ್ಲದೆ ಬಲವೂ ಇಲ್ಲ. ಜ್ಞಾನವೂ ಪಡೆಯಲು ಆಗುವುದಿಲ್ಲ. ಇದನ್ನು ಕಾರ್ಪೋರೇಟ್ ಬೆಂಬಲಿತ ಸರ್ಕಾರ ಗಳ ಅರ್ಥ ಮಾಡಿಕೊಳ್ಳಬೇಕು. ಇದು ಅರ್ಥವಾಗದಿದ್ದರೆ ದೇಶವನ್ನು ಆಳ್ವಿಕೆ ಮಾಡಲು ಯೋಗ್ಯರಲ್ಲ. ನಿಮಗೆ ಹೇಗೆ ಅರ್ಥಮಾಡಿಸಬೇಕೆಂಬುದನ್ನು ಚುನಾವಣೆಯಲ್ಲಿ ತಿಳಿಸುತ್ತೇವೆ ಎಂದು ಸವಾಲು ಹಾಕಿದರು.

ತುಮಕೂರು ಚರ್ಚ್ ವೃತ್ತದಿಂದ ಟೌನ್ ಹಾಲ್‌ವರೆಗೂ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದನ್ನು ಖಂಡಿಸಿದರು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುವ ಪ್ರಧಾನಿ ರೈತರನ್ನು ಒಳಗೊಳ್ಳದೆ ಹೇಗೆ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಎಂದು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಪದೇಪದೇ ಉಲ್ಲೇಖಿಸುವ ಪ್ರಧಾನಿ ರೈತರ ಬೇಡಿಕೆಯೊಂದನ್ನು ಈಡೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಬಾಯಿ ಮಾತಿಗೆ ಮಾತ್ರ ರೈತಮಂತ್ರ ಜಪಿಸುವ ಮೋದಿ ಕೇವಲ ಡೋಂಗಿಯಂತೆ ನಟಿಸುತ್ತಿದ್ದಾರೆ. ರೈತರ ಪರ ಕಾಳಿಜಿ ಇಲ್ಲದ ಪ್ರಧಾನಿ ಅದಾನಿ ಅಂಬಾನಿಯಂಥ ಬಂಡವಾಳಗಾರರಿಗೆ ಮಣೆ ಹಾಕುತ್ತಿದ್ದಾರೆ. ರೈತರನ್ನು ಕಡೆಗಣಿಸಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಟಿ.ಬಿ.ಜಯಂದ್ರ ಮಾತನಾಡಿ, ’ನಮ್ಮ ಪಕ್ಷ ರೈತರ ನೆರವಿಗೆ ನಿಲ್ಲುತ್ತದೆ. ರೈತರು ಈ ದೇಶದ ಎಲ್ಲಾ ವರ್ಗದ ಜನರಿಗೂ ಅನ್ನ ನೀಡುವವರು. ಅವರು ಸಂಕಷ್ಟಕ್ಕೆ ಸಿಲುಕಿದರೆ ದೇಶವೇ ಸಂಕಷ್ಟಕ್ಕೆ ಸಿಲುಕಿದಂತೆ ಆಗುತ್ತದೆ. ಕಳೆದ ಹಲುವು ದಿನಗಳಿಂದ ದೆಹಲಿಯಲ್ಲಿ ನೂರಾರು ರೈತ ಸಂಘಟನೆ ಗಳು ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಗಮನಹರಿಸುತ್ತಿಲ್ಲ’ ಎಂದರು.
ಇದನ್ನೂ ಓದಿ: ದೆಹಲಿ-ಮೀರತ್ ರಾಷ್ಟ್ರೀಯ ಹೆದ್ದಾರಿ ತಡೆದ ರೈತರು: ಭಾರತ್ ಬಂದ್‌ನ ಪ್ರಮುಖ ಅಂಶಗಳು ಇಲ್ಲಿವೆ…
’ಇದು ಬಿಜೆಪಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂಬುದನ್ನು ತೋರಿಸುತ್ತದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ಗಳು ರೈತರು, ಜನಸಾಮಾನ್ಯರನ್ನು ಕತ್ತಲಿಗೆ ದೂಡಲಿವೆ. ಜನರು ಆಹಾರದ ಸಮಸ್ಯೆಯನ್ನು ಎದುರಿಸುವಂಥ ದಿನಗಳು ದೂರವಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ಕೂಡಲೇ ರೈತರ ಬೇಢಿಕೆಗಳಿಗೆ ಸ್ಪಂದಿಸಬೇಕು. ನೂತನ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿ ಮೊದಲಿನ ವ್ಯವಸ್ಥೆಯನ್ನೇ ಅನುಷ್ಠಾನಕ್ಕೆ ತರಬೇಕು’ ಎಂದು ಒತ್ತಾಯಿಸಿದರು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಉಭಯ ಬಣಗಳ ತುಮಕೂರು ಜಿಲ್ಲಾಧ್ಯಕ್ಷರಾದ ಎ.ಗೋವಿಂದ ರಾಜು, ಆನಂದ ಪಟೇಲ್, ’ಮಾತನಾಡಿ ಪ್ರಧಾನಿ ಮೋದಿ ಮೊಂಡುತನವನ್ನು ಬಿಟ್ಟು ರೈತರ ಜೊತೆ ಮಾತು ನಡೆಸಬೇಕು. ಕೃಷಿ ಸಂಬಂಧಿ ಕಾಯ್ದೆಗಳ ತಿದ್ದುಪಡಿಗೆ ನಮಗೆ ಒಪ್ಪಿಗೆ ಇಲ್ಲ. ಆದ್ದರಿಂದ ಕೃಷಿ-ಕಾರ್ಮಿಕ ವಿರೋಧಿ ಕಾಯ್ದೆಗಳನ್ನೇ ರದ್ದುಪಡಿಸಬೇಕು. ಹಲವು ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನಕ್ಕೆ ಜಾರಿರುವುದು ಬೇಜವಾಬ್ದಾರಿಯನ್ನು ತೋರಿಸುತ್ತದೆ. ಹಿಟ್ಲರ್ ಕೂಡ ಸರ್ವಾಧಿಕಾರಿಯಾಗಿ ಆಡಳಿತ ನಡೆಸಿ ಪತನಗೊಂಡ. ಇದನ್ನು ಪ್ರಧಾನಿ ಅರ್ಥ ಮಾಡಿಕೊಂಡರೆ ಒಳ್ಳೆಯದು. ಐದು ಸುತ್ತಿನ ಮಾತುಕತೆಯಲ್ಲೂ ರೈತರ ಬೇಡಿಕೆಯೊಂದನ್ನು ಈಡೇರಿಸಲು ಆಗಿಲ್ಲ. ಬರೀ ಮಾತು ಆಡಿದರೆ ಸಾಲದು. ರೈತರ ಬೇಡಿಕೆ ಈಡೇರಿಸಬೇಕು’ ಎಂದು ಹೇಳಿದರು.
ಆರ್.ಕೆ.ಎಸ್. ಮುಖಂಡ ಎಸ್.ಎನ್.ಸ್ವಾಮಿ, ಎಐಟಿಯುಸಿ ಗಿರೀಶ್, ಎಐಕೆಎಸ್ ಶಶಿಕಾಂತ್, ಎಐಕೆಎಸ್ ಸಿಸಿ ಕಾರ್ಯದರ್ಶಿ ಸಿ.ಯತಿರಾಜು, ಕಾರ್ಮಿಕ ಮುಖಂಡರು ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆಯ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


