ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ರಾಷ್ಟ್ರವ್ಯಾಪಿ ಭಾರತ್ ಬಂದ್‌ಗೆ ಕರೆ ನೀಡಿದ್ದು, ಪರಿಣಾಮವಾಗಿ ದೆಹಲಿ-ಮೀರತ್ ರಾಷ್ಟ್ರೀಯ ಹೆದ್ದಾರಿಯನ್ನು ಇಂದು ಮಧ್ಯಾಹ್ನ 3 ಗಂಟೆಯವರೆಗೆ ನಿರ್ಬಂಧಿಸುವುದಾಗಿ ಪ್ರತಿಭಟನಾ ನಿರತ ರೈತರು ಹೇಳಿದ್ದಾರೆ. ದೆಹಲಿಯಲ್ಲಿ ಸಾರಿಗೆ ಸೇವೆಗಳು ಸೇರಿದಂತೆ ಕಛೇರಿಗಳು, ಅಂಗಡಿಗಳು ಬಹುತೇಕ ಬಂದ್ ಆಗಿವೆ.
ದೆಹಲಿ ಮತ್ತು ಹರಿಯಾಣದಲ್ಲಿ ಸಾವಿರಾರು ರೈತರು ಪ್ರತಿಭಟಿಸುತ್ತಿದ್ದು, ಶಾಂತಿಯುತ ಪ್ರತಿಭಟನೆ ಮಾಡುವುದಾಗಿ ರೈತ ಸಂಘಟನೆಗಳು ಹೇಳಿವೆ. ಈ ಬಂದ್‌ಗೆ ಕಾಂಗ್ರೆಸ್, ಆಮ್ ಆದ್ಮಿ ಸೇರಿದಂತೆ ಹಲವಾರು ಪಕ್ಷಗಳು ಬೆಂಬಲ ಸೂಚಿಸಿವೆ.
ಇದನ್ನೂ ಓದಿ: ಇನ್ನು ಮುಂದೆ ಜೈಲಿನ ಅಂಕಿಅಂಶಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವರ್ಗ
ದೇಶದಾದ್ಯಂತ ಇರುವ ರೈತರು ನಡೆಸುತ್ತಿರುವ ಈ ದೊಡ್ಡಮಟ್ಟದ ಪ್ರತಿಭಟನೆಯ ಪ್ರಮುಖ ಅಂಶಗಳು ಇಲ್ಲಿವೆ.
- ದೆಹಲಿ ಮತ್ತು ಉತ್ತರ ಪ್ರದೇಶದ ಮೀರತ್ ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ -24 ನ್ನು ರೈತರು ಮುತ್ತಿಗೆ ಹಾಕಿದ್ದಾರೆ. ಮಧ್ಯಾಹ್ನ 3 ಗಂಟೆಯವರೆಗೆ ಹೆದ್ದಾರಿಯನ್ನು ನಿರ್ಬಂಧಿಸುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ. ದೊಡ್ಡಮಟ್ಟದ ಪೊಲೀಸ್ ನಿಯೋಜನೆಯ ಹೊರತಾಗಿಯೂ ಪ್ರತಿಭಟನಾಕಾರರು ರಸ್ತೆಗಳನ್ನು ಆಕ್ರಮಿಸಿಕೊಂಡಿದ್ದಾರೆ.
- ಭಾರತ್ ಬಂದ್ ಅನ್ನು ಬೆಂಬಲಿಸಲು ಮುಂಬೈನ ವಾಶಿಯಲ್ಲಿನ ಅತಿದೊಡ್ಡ ಕೃಷಿ ಮಾರುಕಟ್ಟೆ ಮುಚ್ಚಲಾಗಿದೆ. “ಈ ಮಾರುಕಟ್ಟೆಯು ಮುಂಬೈ ಮತ್ತು ಹತ್ತಿರದ ಪ್ರದೇಶಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿತ್ತು. ಲಕ್ಷಾಂತರ ಜನರು ರಸ್ತೆಗಿಳಿಯಬಹುದಾದರೂ, ನಾವು ಶಾಂತಿಯುತ ಪ್ರತಿಭಟನೆಯನ್ನು ಬಯಸುತ್ತೇವೆ. ಸರ್ಕಾರ ಈಕಡೆ ಗಮನಹರಿಸಬೇಕು” ಎಂದು ಶಾಸಕ ಮತ್ತು ಎನ್‌ಸಿಪಿ ಮುಖಂಡ ಶಶಿಕಾಂತ್ ಶಿಂಧೆ ಇಂದು ಬೆಳಿಗ್ಗೆ ಎನ್‌ಡಿಟಿವಿಗೆ ತಿಳಿಸಿದರು.
ಇದನ್ನೂ ಓದಿ: ರೈತ ಇದ್ರೇನೆ ದೇಶ: ರೈತ ಹೋರಾಟಕ್ಕೆ ನಟ ಶಿವರಾಜ್‌ಕುಮಾರ್ ಬೆಂಬಲ
- ಉತ್ತರಪ್ರದೇಶದ ಲಖನೌದಲ್ಲಿನ ಅತಿದೊಡ್ಡ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನೂ ಮುಚ್ಚಲಾಗಿದೆ. ಇಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸುಮಾರು 15,000 ಸಣ್ಣ ರೈತರು ಪ್ರತಿದಿನ ಮಾರುಕಟ್ಟೆಗೆ ಬರುತ್ತಾರೆ. ಇವರೆಲ್ಲರೂ ಪ್ರತಿಭಟನೆಯನ್ನ ಬೆಂಬಲಿಸಿದ್ದು, “ನಾವು ಸಣ್ಣ ರೈತರು. ಆದರೆ ನಾವು ಪ್ರತಿಭಟನೆಯನ್ನು ಬೆಂಬಲಿಸುತ್ತೇವೆ. ಖಾಸಗೀ ಉದ್ಯಮಿಗಳ ಭಾಗವಹಿಸುವಿಕೆಯಿಂದ ನಮಗೆ ಆತಂಕ ಎದುರಾಗಿದೆ” ಎಂದು ರೈತ ರಾಮ್ ವರ್ಮಾ ತಿಳಿಸಿದರು.
- ದೆಹಲಿಯಲ್ಲೂ ಸಾಗಾಣೆಗೆ ತೊಂದರೆಯಾಗಿದೆ. “ನಾವು ರೈತರ ಬಗ್ಗೆ ಸಹಾನುಭೂತಿ ಹೊಂದಿದ್ದೇವೆ. ಆದರೂ ನಾವು ಅಂಗಡಿಗಳನ್ನು ತೆರೆದಿದ್ದೇವೆ. ಆದರೆ ಗ್ರಾಹಕರು ಬರುತ್ತಿಲ್ಲ” ಎಂದು ಸಗಟು ಮಾರುಕಟ್ಟೆಯ ಅಂಗಡಿಯವರೊಬ್ಬರು ಹೇಳಿದರು. ರಾಷ್ಟ್ರ ರಾಜಧಾನಿಗೆ ಪ್ರಯಾಣಿಸುವ ಜನರಿಗೆ ಪೊಲೀಸರು ಪ್ರತ್ಯೇಕ ಪ್ರಯಾಣ ಮತ್ತು ಸಂಚಾರ ಸಲಹೆಗಳನ್ನು ನೀಡಿದ್ದಾರೆ. ಆದರೂ ಪ್ರಮುಖ ಹೆದ್ದಾರಿಗಳನ್ನು ತಡೆಯಲಾಗಿದೆ.
ಇದನ್ನೂ ಓದಿ: ಕರ್ನಾಟಕದ ಹೋರಾಟನಿರತ ರೈತರಿಂದ ಪ್ರಧಾನಿಗೆ ಪತ್ರ; ಅಷ್ಟಕ್ಕೂ ಅವರ ಹಕ್ಕೊತ್ತಾಯಗಳೇನು?
- ಹಲವು ಬ್ಯಾಂಕ್ ಒಕ್ಕೂಟಗಳು ರೈತರೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದ್ದರೂ ಅವರು ನೇರವಾಗಿ ಬಂದ್‌ನಲ್ಲಿ ಭಾಗವಹಿಸುತ್ತಿಲ್ಲ. ಆದಾಗ್ಯೂ, ಕಪ್ಪು ಬ್ಯಾಡ್ಜ್‌ಗಳನ್ನು ಧರಿಸಿ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಬಹುತೇಕ ಎಲ್ಲಾ ವಾಣಿಜ್ಯ ಸಾರಿಗೆ ಮತ್ತು ಟ್ರಕ್ ಒಕ್ಕೂಟಗಳು ಬಂದ್‌ನಲ್ಲಿ ಭಾಗವಹಿಸುತ್ತಿವೆ. ಹಾಗಾಗಿ ಇದು ಡೈರಿ ಉತ್ಪನ್ನಗಳು, ಹಣ್ಣುಗಳು ಮತ್ತು ತರಕಾರಿಗಳ ಪೂರೈಕೆಯ ಮೇಲೆ ಪರಿಣಾಮ ಬೀರುತ್ತದೆ.
- ಕಾಂಗ್ರೆಸ್ ಆಡಳಿತದ ಪಂಜಾಬ್‌ನಲ್ಲಿ ರೈತರ ಪ್ರತಿಭಟನೆಯನ್ನು ಪಕ್ಷವೇ ಮುನ್ನಡೆಸಿದೆ. ಬಹುತೇಕ ಎಲ್ಲಾ ಕಾರ್ಮಿಕ ಸಂಘಗಳು ತಮ್ಮ ಬೆಂಬಲವನ್ನು ನೀಡಿವೆ. ಆಡಳಿತ ಪಕ್ಷದ ಶಾಸಕರು ಮತ್ತು ಪ್ರತಿಪಕ್ಷಗಳಾದ ಅಕಾಲಿ ದಳ ಮತ್ತು ಎಎಪಿ ತಮ್ಮ ಕ್ಷೇತ್ರಗಳಲ್ಲಿ ಧರಣಿ ನಡೆಸಿದ್ದಾರೆ. ಚಂಡೀಗಢದಲ್ಲಿ ಕೆಲವು ಮಾರುಕಟ್ಟೆ ಸಂಘಗಳು ಬಂದ್ ಅನ್ನು ಬೆಂಬಲಿಸಿವೆ.
ಇದನ್ನೂ ಓದಿ: ರೈತರನ್ನು ಬೆಂಬಲಿಸಿದ್ದಕ್ಕೆ ದೆಹಲಿ ಸಿಎಂ ಕೇಜ್ರಿವಾಲ್‌ರನ್ನೆ ಗೃಹ ಬಂಧನದಲ್ಲಿಟ್ಟ ಪೊಲೀಸರು: ಆಪ್ ಆರೋಪ
- ತೆಲಂಗಾಣವು ಬಂದ್ ಅನ್ನು ಬೆಂಬಲಿಸಿದ್ದು, ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಟಿಆರ್‌ಎಸ್ ಕಾರ್ಯಕರ್ತರಿಗೆ ಬಂದ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಲು ಕರೆ ನೀಡಿದರು.
- ಈಶಾನ್ಯ ರಾಜ್ಯಗಳಲ್ಲೂ ಭಾರತ್ ಬಂದ್ ಬಹುತೇಕ ಯಶಸ್ವಿಯಾಗಿದೆ.
ಇಂದಿನ ಭಾರತ್ ಬಂದ್ ದೇಶದ ನಾನಾ ಭಾಗಗಳಲ್ಲಿ ಪರಿಣಾಮಕಾರಿಯಾಗಿ ನಡೆಯುತ್ತಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಇನ್ನಷ್ಟು ತೀವ್ರಗೊಂಡಿದೆ.
ಇದನ್ನೂ ಓದಿ: ವಿರೋಧ ಪಕ್ಷಗಳು ಸಹ ಇದೇ ಕೃಷಿ ಕಾನೂನು ತರಬಯಸಿದ್ದವು, ಈಗ ವಿರೋಧಿಸುವುದು ಅವರ ಇಬ್ಬಂದಿತನ…