ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು ಬಿಜೆಪಿ ಮೇಲಿನ ಮಾತಿನ ದಾಳಿಯನ್ನು ಕಡಿಮೆ ಮಾಡಿದ್ದಾರೆ. ಜೊತೆಗೆ ಬಿಜೆಪಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಿತ್ರರಾಗಿ “ಸಮ್ಮಿಶ್ರ ಧರ್ಮ” ವನ್ನು ಅನುಸರಿಸುತ್ತಿದೆ ಎಂದು ಹೇಳಿದ್ದಾರೆ.
“ನಾನು ಪ್ರಧಾನ ಮಂತ್ರಿಯೊಂದಿಗಿನ ನನ್ನ ಸಂಬಂಧವನ್ನು ಪ್ರದರ್ಶಿಸುವ ಅಗತ್ಯವಿಲ್ಲ. ನನ್ನ ತಂದೆ ಆಸ್ಪತ್ರೆಯಲ್ಲಿದ್ದ ಸಮಯದಿಂದ ಅವರ ಕೊನೆಯ ವಿಧಿವಿಧಾನಗಳವರೆಗೆ, ಪ್ರಧಾನಿಗಳು ನನಗಾಗಿ ಮಾಡಿದ ಕೆಲಸಗಳನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ”ಎಂದು ಪಾಸ್ವಾನ್ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್, ಭಾರತೀಯ ಜನತಾ ಪಕ್ಷ ಮತ್ತು ಎಲ್‌ಜೆಪಿ ನಡುವೆ ಅಂತರವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪಾಸ್ವಾನ್ ಆರೋಪಿಸಿದ್ದಾರೆ.
ಜೆಡಿ (ಯು) ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ, ತಮ್ಮ ಮಿತ್ರರಿಗೆ ಕೃತಜ್ಞತೆ ತಿಳಿಸಬೇಕು. ಏಕೆಂದರೆ ನಿತೀಶ್ ಕುಮಾರ್ ವಿರುದ್ಧ ಅಷ್ಟು ಕೋಪವಿದ್ದರೂ ಸಹ ಸಮ್ಮಿಶ್ರ ಧರ್ಮ ಅನುಸರಿಸುತ್ತಿರುವುದಕ್ಕೆ ಎಂದಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಎನ್‌ಡಿಎ ಮೈತ್ರಿ ತೊರೆದ ಚಿರಾಗ್ ಪಾಸ್ವಾನ್!
“ನನ್ನ ಕಾರಣದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ಸಂದಿಗ್ಧ ಸ್ಥಿತಿಯಲ್ಲಿ ಇರುವುದು ನಾನು ಬಯಸುವುದಿಲ್ಲ. ಅವರು ತನ್ನ ಸಮ್ಮಿಶ್ರ ಧರ್ಮವನ್ನು ಅನುಸರಿಸಬೇಕು. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತೃಪ್ತಿಪಡಿಸಲು ಯಾವುದೇ ಸಂಕೋಚವಿಲ್ಲದೆ ಅವರು ನನ್ನ ವಿರುದ್ಧ ಏನು ಬೇಕಾದರೂ ಹೇಳಬಹುದು, ”ಎಂದು ಹೇಳಿದ್ದಾರೆ.
ಬಿಹಾರದ ವಿಧಾನಸಭಾ ಚುನಾವಣೆಗಳಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಇತರ ಸಮ್ಮಿಶ್ರ ಮುಖಂಡರೊಂದಿಗೆ ಹಲವಾರು ಚುನಾವಣಾ ರ್‍ಯಾಲಿಗಳಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.
ಬಿಹಾರ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಸ್ಫರ್ಧಿಸುವ ಇಚ್ಛೆಯಿಂದ ಬಿಜೆಪಿ ಮತ್ತು ಜೆಡಿಯು ಒಳಗೊಂಡ ಎನ್‌ಡಿಎಯಿಂದ ಎಲ್‌ಜೆಪಿ ಹೊರನಡೆದಿದೆ. ಈ ನಿರ್ಧಾರವು ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿಯೇ ಎಲ್‌ಜೆಪಿಯನ್ನು ನೀರಿನಲ್ಲಿ ಮುಳುಗಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: ’ಮಹಾಘಟಬಂಧನ್’ ಗೆದ್ದರೆ ಕೇಂದ್ರದ ಕೃಷಿ ವಿರೋಧಿ ಕಾನೂನುಗಳು ರದ್ದು!
ಜೆಡಿಯು ವಿರುದ್ಧ ಅಭ್ಯರ್ಥಿಗಳನ್ನು ಹಾಕುವ ಮೂಲಕ ಅದನ್ನು ಗುರಿಯಾಗಿಸಲು ಪಾಸ್ವಾನ್ ದೃಢನಿಶ್ಚಯದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮತ್ತೊಂದೆಡೆ ಅವರ ಪಕ್ಷ ಬಿಜೆಪಿ ಅಭ್ಯರ್ಥಿಗಳಿರುವ ಚುನಾವಣಾ ಕಣಗಳಲ್ಲಿ ಸ್ಪರ್ಧಿಸುತ್ತಿಲ್ಲ.
ಆದರೆ ಕಳೆದ ಕೆಲವು ದಿನಗಳಲ್ಲಿ ಚಿರಾಗ್ ತನ್ನ ಹಿರಿಯ ನಾಯಕರ ಸಾಮೀಪ್ಯವನ್ನು ತಿಳಿಸುವ ಮೂಲಕ ಗೊಂದಲವನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಎನ್‌ಡಿಎ ಮೈತ್ರಿಕೂಟವು ಜಯಗಳಿಸಿದರೆ ನಿತೀಶ್ ಕುಮಾರ್ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ಪುನರುಚ್ಚರಿಸಿದೆ.
ಮೊನ್ನೆಯಷ್ಟೇ ಪಾಸ್ವಾನ್ ನನ್ನ ಹೃದಯದಲ್ಲಿ ಮೋದಿ ನೆಲೆಸಿದ್ದಾರೆ. ನಾನು ಚುನಾವಣಾ ಪ್ರಚಾರಕ್ಕೆ ಅವರ ಚಿತ್ರ ಬಳಸಬೇಕಿಲ್ಲ. ಬೇಕಿದ್ದರೇ ನನ್ನ ಹೃದಯ ತೆರೆದು ನೋಡಬಹುದು. ನಾನು ಮೋದಿಯ ಹನುಮನಿದ್ದಂತೆ ಎಂದಿದ್ದರು. ಆದರೆ ಬಿಜೆಪಿಯವರು ಪಾಸ್ವಾನ್ ಮತ ವಿಭಜಕ, ಮೈತ್ರಿಯಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


