“ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥರಾದ ಅಮಿತ್ ಮಾಳವೀಯ ಅವರ ಕೆಲಸವನ್ನು ಸುದ್ದಿವಾಹಿನಿಗಳೇ ಮಾಡುತ್ತಿವೆ” ಎಂದು ಆಲ್ಟ್‌ನ್ಯೂಸ್ ಸಹಸಂಸ್ಥಾಪಕ, ಖ್ಯಾತ ಪತ್ರಕರ್ತ ಮೊಹಮ್ಮದ್ ಜುಬೇರ್ ತಿಳಿಸಿದ್ದಾರೆ.
ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾಮೀನು ಪಡೆದು ಹೊರಗೆ ಬಂದಿರುವ ಅವರು, ಕನ್ನಡದ ಸುದ್ದಿ ಜಾಲತಾಣ ‘ಈ ದಿನ’ಕ್ಕೆ ವಿಶೇಷ ಸಂದರ್ಶನ ನೀಡಿದ್ದು, ಮುಖ್ಯವಾಹಿನಿ ಮಾಧ್ಯಮಗಳ ವರ್ತನೆಗಳನ್ನು ವಿಶ್ಲೇಷಿಸಿದ್ದಾರೆ.
ಪತ್ರಕರ್ತ ಎಸ್.ಕುಮಾರ್ ಅವರು ನಡೆಸಿರುವ ಸಂದರ್ಶನದಲ್ಲಿ, “ದ್ವೇಷವನ್ನು ಬಯಲು ಮಾಡುವವರನ್ನು ಬೇಟೆಯಾಡಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ, ಬಾಬಿ ಘೋಷ್ ಹೇಟ್ ಟ್ರ್ಯಾಕ್ ಮಾಡಿದ್ದಕ್ಕೆ ಕೆಲಸ ಕಳೆದುಕೊಂಡರು, ಹಿಂದುಸ್ತಾನ್ ಟೈಮ್ಸ್ ಅವರನ್ನು ಕೆಲಸದಿಂದ ತೆಗೆದು ಹಾಕಿತು. ನಿಮ್ಮಂತಹ ಫ್ಯಾಕ್ಟ್‌ಚೆಕರ್‌ಗಳು ಕೂಡ ವಿನಾ ಕಾರಣ ವಿವಿಧ ರೀತಿಯ ಒತ್ತಡಕ್ಕೆ ಗುರಿಯಾಗುತ್ತಿದ್ದಾರೆ. ಇಂತಹ ಹೊತ್ತಲ್ಲಿ ಮಾಧ್ಯಮಗಳು ಹೇಗಿರಬೇಕು? ಈ ವಿದ್ಯಮಾನವನ್ನು ಹೇಗೆ ನೋಡ್ತೀರಿ?” ಎಂದು ಕೇಳಿರುವ ಪ್ರಶ್ನೆಗೆ ಜುಬೇರ್ ಪ್ರತಿಕ್ರಿಯೆ ನೀಡಿ ಮಾಧ್ಯಮಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ನಾವು ಇಂದು ನೋಡುತ್ತಿರುವ ದ್ವೇಷದ ವಾತಾವರಣಕ್ಕೆ ಟಿವಿ ಚಾನೆಲ್‌ಗಳೇ ಕಾರಣ. 2014ರ ನಂತರವೂ ಎರಡು ಮೂರು ವರ್ಷ ಕಾಲ ಬಿಜೆಪಿ ಐಟಿ ಸೆಲ್ ಕ್ಯಾಂಪೇನ್‌ಗಳನ್ನು ಮಾಡುತ್ತಿತ್ತು. ಆಗ ಮಾಧ್ಯಮ ವಿರೋಧಿಸದೇ, ಸುಮ್ಮನಿದ್ದು ಬಿಡುತ್ತಿತ್ತು. ಯಾವುದೇ ಪ್ರೊಪಗಾಂಡ ಪ್ರಚಾರಕ್ಕೆ ಅಮಿತ್ ಮಾಳವೀಯಾ ಮತ್ತವರ ತಂಡ ಕೆಲಸ ಮಾಡುತ್ತಿತ್ತು. ಹ್ಯಾಷ್‌ಟ್ಯಾಗ್, ಮೋದಿ ಹೊಗಳಿಕೆ ಇತ್ಯಾದಿ ನಡೆಸುತ್ತಿದ್ದರು. ಗಮನಿಸಬೇಕಾದ ಸಂಗತಿಯೆಂದರೆ, ಕಳೆದ ಎರಡು ವರ್ಷಗಳಿಂದ ಅವರು ಈ ರೀತಿಯ ಕ್ಯಾಂಪೇನ್ ನಡೆಸುತ್ತಿಲ್ಲ. ಈಗ ಈ ಕೆಲಸವನ್ನು ಸುದ್ದಿವಾಹಿನಿಗಳಿಗೆ ಮತ್ತು ಅದರ ಆಂಕರ್‌ಗಳಿಗೆ ನೀಡಲಾಗಿದೆ” ಎಂದಿದ್ದಾರೆ.
“ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಸ್ವತಃ ತಾವೇ ಟ್ವಿಟ್ ಮಾಡುವುದಿಲ್ಲ ಬದಲಿಗೆ ಸುದ್ದಿವಾಹಿನಿಯೊಂದರ ಅಂಕರ್‌ಗಳು ಮಾಡಿದ ಟ್ವೀಟನ್ನು ರೀಟ್ವೀಟ್ ಮಾಡುತ್ತಾರೆ. ಸುಧೀಶ್ ಚೌಧರಿ, ಚಿತ್ರಾ ಹೀಗೆ ಹಲವರಿದ್ದಾರೆ, ಮೊದಲು ಸುದ್ದಿಯಾಗುತ್ತದೆ. ಆಮೇಲೆ ಬಿಜೆಪಿ ಐಟಿ ಸೆಲ್ ನಿಂದ ವೈರಲ್ ಆಗುತ್ತದೆ. ಬಿಜೆಪಿ ಐಟಿ ಸೆಲ್ ಮಾಡುತ್ತಿದ್ದ ಕೆಲಸವನ್ನು ಈಗ ಮುಖ್ಯವಾಹಿನಿ ಸುದ್ದಿ ವಾಹಿನಿಗಳು ಮಾಡಲಾರಂಭಿಸಿವೆ. ಹಾಗಾಗಿ ಜನ ನಂಬುತ್ತಿದ್ದಾರೆ” ಎಂದು ವಿಷಾದಿಸಿದ್ದಾರೆ.
“ನಮ್ಮ ಕೆಲಸ ಸತ್ಯವನ್ನು ಹೇಳುವುದು. 90% ಸರಿ ಇದ್ದರೂ, ಶೇ. 10 ತಪ್ಪು ಏನು ಎಂಬುದನ್ನು ಬಯಲು ಮಾಡುವುದು. ಆದರೆ ಪ್ರಸ್ತುತ ಪ್ರತಿಯೊಂದನ್ನು ಸಂಪೂರ್ಣವಾಗಿ ಮರೆಮಾಚಲಾಗುತ್ತಿದೆ. ಸುದ್ದಿ ವಾಹಿನಿಗಳು ರಾಜಿಯಾಗಿವೆ. ಬಹುಶಃ, ಇಡಿ, ಐಟಿಗೆ ಹೆದರಿರಬಹುದು. ಕೆಲವರು ಸೈದ್ಧಾಂತಿಕವಾಗಿ ಅವರ ಜೊತೆಗೆ ಇರುವ ಕಾರಣಕ್ಕೂ ಮಾಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
“2 ಕೋಟಿ ರೂ.ಗೆ ಟ್ವೀಟ್ ಮಾಡಿ ದೇಣಿಗೆಯನ್ನು ಸ್ವಂತ ಖಾತೆಗೆ ಪಡೆದುಕೊಂಡಿದ್ದಾರೆ” ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, “ನನಗೆ 2 ರೂ. ಕೋಟಿ ವಿಚಾರ ಗೊತ್ತೇ ಇರಲಿಲ್ಲ. ಬಿಡುಗಡೆಯಾಗಿ ಹೊರಬರುತ್ತಿರುವಾಗ ಪೊಲೀಸ್ ಅಧಿಕಾರಿಯೊಬ್ಬರು ತಮಾಷೆ ಮಾಡುತ್ತಾ, ‘ಇನ್ನು ಮೇಲೆ 2 ಕೋಟಿ ರೂ. ಸಂಪಾದಿಸುತ್ತೀರಿ’ ಎಂದರು. ಆಗಲೂ ಅರ್ಥವಾಗಲಿಲ್ಲ. ಉತ್ತರ ಪ್ರದೇಶ ಗರಿಮಾ ಪ್ರಸಾದ್ ಈ ಆರೋಪ ಮಾಡಿದ್ದರು. ಟ್ವೀಟ್ ಮಾಡುವುದಕ್ಕೆ ಯಾರು 2 ರೂ. ಕೋಟಿ ಕೊಡುತ್ತಾರೆ? ಅಂತಾರಾಷ್ಟ್ರೀಯ ಖ್ಯಾತಿಯ ಸೆಲೆಬ್ರಿಟಿಯೊಬ್ಬರು ಯಾವುದಾದರೂ ಕಮರ್ಷಿಯಲ್ ವಸ್ತುವಿನ ಪ್ರಚಾರಕ್ಕೆ ಅಷ್ಟು ಪಡೆಯಬಹುದೇನೊ! ಅದಲ್ಲದೆ, ಪಾಕಿಸ್ತಾನ, ಸಿರಿಯಾದಿಂದ ದೇಣಿಗೆ ಪಡೆದಿದ್ದೇನೆ ಎಂಬ ಆರೋಪವೂ ಬಂತು” ಎಂದಿದ್ದಾರೆ.
ಇದನ್ನೂ ಓದಿರಿ: ಜುಬೇರ್‌ಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್; ನ್ಯಾಯಾಲಯದಲ್ಲಿ ಏನಾಯಿತು? | ಸಂಕ್ಷಿಪ್ತ ವಿವರಣೆ
ಪೊಲೀಸ್ ವಿಚಾರಣೆಯ ಕುರಿತು ಮಾತನಾಡಿರುವ ಅವರು, “ಟ್ವೀಟ್ ಕಾರಣಕ್ಕೆ ನನ್ನ ಮೇಲೆ ಎಫ್‌ಐಆರ್ ಹಾಕಲಾಯಿತಾದರೂ ವಿಚಾರಣೆಯಲ್ಲಿ ಕೇಳಿದ್ದು ಬೇರೆಯದೇ ಪ್ರಶ್ನೆಗಳನ್ನು! ಹತ್ತು ಪರ್ಸೆಂಟ್‌ನಷ್ಟು ನನ್ನ ಟ್ವೀಟ್‌ಗಳ ಬಗ್ಗೆ ಕೇಳಲಿಲ್ಲ. ಹೆಚ್ಚು ಆಸಕ್ತಿ ಇದ್ದಿದ್ದು ಅಲ್ಟ್ ನ್ಯೂಸ್, ಅದಕ್ಕಿರುವ ಆರ್ಥಿಕ ಬೆಂಬಲ, ಹೇಗೆ ಶುರುವಾಯಿತು, ಪ್ರತೀಕ್ ಹೇಗೆ ಪರಿಚಯವಾದರು, ಪ್ರತೀಕ್ ತಂದೆಯ ಬಗ್ಗೆ ಮೊದಲಾಗಿ ಹೆಚ್ಚು ಪ್ರಶ್ನೆಗಳನ್ನು ಕೇಳಿದರು. ಮಾಧ್ಯಮಗಳಲ್ಲಿ ಟ್ವೀಟ್ ಕಾರಣಕ್ಕೆ ಎಂದು ಸುದ್ದಿಯಾಗುತ್ತಿದ್ದರೆ, ವಿಚಾರಣೆಯಲ್ಲಿ ಬೇರೆಯದೇ ಪ್ರಶ್ನೆಗಳು ನನ್ನ ಮುಂದೆ ಬರುತ್ತಿದ್ದವು. ವಿಚಾರಣೆ ಮಾಡುತ್ತಿದ್ದ ಅಧಿಕಾರಿಗಳಿಗೆ ವಾಟ್ಸ್ ಆಪ್ ಮೂಲಕ ಪ್ರಶ್ನೆಗಳು ಬರುತ್ತಿದ್ದವು. ನಾನು ಗಮನಿಸಿದ್ದೇನೆ. ಲಿಂಕ್‌ಗಳು ಬರುತ್ತಿದ್ದವು. ಒಪಿಇಂಡಿಯಾ ರೀತಿಯ ಲಿಂಕ್‌ಗಳು. ಅವುಗಳನ್ನು ಓಪನ್ ಮಾಡಿ, ನನ್ನನ್ನು ಪ್ರಶ್ನಿಸುತ್ತಿದ್ದರು” ಎಂದಿದ್ದಾರೆ.
ತಮ್ಮ ಜೀವನದ ಕುರಿತು ವಿಸ್ತೃತವಾಗಿ ‘ಈ ದಿನ.ಕಾಂ’ ಜೊತೆ ಜುಬೇರ್ ಮಾತನಾಡಿದ್ದಾರೆ. ತಮ್ಮ ಪತ್ರಿಕೋದ್ಯಮದ ಜೀವನದ ಸ್ವಾರಸ್ಯಕರ ಸಂಗತಿಗಳನ್ನು ಅವರು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಕನ್ನಡ ಮಾಧ್ಯಮವೊಂದಕ್ಕೆ ನೀಡಿದ ಮೊದಲ ಸಂದರ್ಶನವೂ ಇದಾಗಿದೆ. (ಸಂದರ್ಶನದ ಪೂರ್ಣ ಪಠ್ಯ ‘ಇಲ್ಲಿ’ ನೋಡಿ.)



ನಿನ್ನಂಥ ದೇಶ ದ್ರೋಹಿಯ ಮರಣ ಶಾಸನ ಬರೆಯುವ ಕೆಲಸವನ್ನು ಅವರೇ ಮಾಡಬಹುದೇ !