ಕೊರೊನಾ ವೈರಸ್ ನಿವಾರಿಸುತ್ತದೆ ಎಂಬ ನಂಬಿಕೆಯಲ್ಲಿ ಹಸುವಿನ ಸಗಣಿ ಬಳಸುವ ಅಭ್ಯಾಸದ ವಿರುದ್ಧ ದೇಶದಲ್ಲಿ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಹಸುವಿನ ಸಗಣಿ ಕೊರೊನ ನಿವಾರಣೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದಿದ್ದಾರೆ.
ಈ ರೀತಿ ಸಗಣಿಯ ಬಳಕೆಯಿಂದ ಇತರ ರೋಗಗಳು ಹರಡುವ ಅಪಾಯವಿದೆ ಎಂದು ದೇಶದಲ್ಲಿ ವೈದ್ಯರು ಹೇಳಿದ್ದಾರೆ. ಗುಜರಾತ್‌ನಲ್ಲಿ, ಕೆಲವು ಮಂದಿ ವಾರಕ್ಕೊಮ್ಮೆ ಗೋಶಾಲೆಗೆ ಹೋಗಿ ತಮ್ಮ ದೇಹವನ್ನು ಗೋವಿನ ಸಗಣಿ ಮತ್ತು ಮೂತ್ರದಲ್ಲಿ ಮುಚ್ಚಿಡುತ್ತಾರೆ, ಇದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚುತ್ತದೆ ಮತ್ತು ಕೊರೊನಾ ವೈರಸ್‌ನಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಂಬಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ದೇಶದಲ್ಲಿ ಬಾರಿ ಪರಿಣಾಮ ಉಂಟುಮಾಡಿದ್ದು, ಲಸಿಕೆಗಳ ಕೊರತೆ, ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆ, ಆಕ್ಸಿಜನ್ ಬಿಕ್ಕಟಿಗೆ ಕಾರಣವಾಗಿದೆ. ದೇಶದ ನಾಗರಿಕರು ಆಸ್ಪತ್ರೆಯ ಹಾಸಿಗೆಗಳು, ಆಮ್ಲಜನಕ ಅಥವಾ ಔಷಧಿಗಳನ್ನು ಹುಡುಕಲು ಹೆಣಗಾಡುತ್ತಿದ್ದಾರೆ, ಚಿಕಿತ್ಸೆಯ ಕೊರತೆಯಿಂದಾಗಿ ಅನೇಕರು ಕೊರೊನಾಗೆ ಬಲಿಯಾಗುತ್ತಿದ್ದಾರೆ.
ಇದನ್ನೂ ಓದಿ: ಬೆಡ್ ಬ್ಲಾಕಿಂಗ್ ಹಗರಣಕ್ಕೆ ಕೋಮುಬಣ್ಣ: ಪತ್ರಕರ್ತರ ಮುಖ್ಯ ಪ್ರಶ್ನೆಗಳಿಗೆ ಸಂಸದ ತೇಜಸ್ವಿ ಸೂರ್ಯ ನಿರುತ್ತರ!
“ವೈದ್ಯರು ಸಹ ಇಲ್ಲಿಗೆ ಬರುವುದನ್ನು ನಾವು ನೋಡುತ್ತಿದ್ದೇವೆ. ಈ ಚಿಕಿತ್ಸೆಯು ಅವರ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಇದರಿಂದ ಅವರು ಯಾವುದೇ ಭಯವಿಲ್ಲದೆ ಕೊರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಬಹುದು ಎಂಬುದು ಅವರ ನಂಬಿಕೆ” ಎಂದು ಔಷಧೀಯ ಕಂಪನಿಯ ಸಹಾಯಕ ವ್ಯವಸ್ಥಾಪಕ ಗೌತಮ್ ಮನಿಲಾಲ್ ಬೋರಿಸಾ ಹೇಳಿದ್ದಾರೆ. ಜೊತೆಗೆ ಕಳೆದ ವರ್ಷ ಕೊರೊನಾದಿಂದ ಗೌತಮ್ ಮನಿಲಾಲ್ ಬೋರಿಸಾ ಅವರು ಚೇತರಿಸಿಕೊಳ್ಳಲು ಸಹಾಯ ಮಾಡಿದೆ ಎಂದು ತಿಳಿಸಿದ್ದಾರೆ.
ಭಾರತ ಮತ್ತು ವಿಶ್ವದಾದ್ಯಂತದ ವೈದ್ಯರು ಮತ್ತು ವಿಜ್ಞಾನಿಗಳು ಕೊರೊನಾಗೆ ಪರ್ಯಾಯ ಚಿಕಿತ್ಸೆಯನ್ನು ತೆಗೆದುಕೊಳ್ಳುವುದರ ವಿರುದ್ಧ ಪದೇ ಪದೇ ಎಚ್ಚರಿಕೆ ನೀಡಿದ್ದಾರೆ. ಇಂತಹ ಅಭ್ಯಾಸಗಳು ಹಲವು ಬಗೆಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
“ಕೊರೊನಾ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಗಣಿ ಅಥವಾ ಗೋ ಮೂತ್ರವು ಕೆಲಸ ಮಾಡುತ್ತದೆ ಎಂಬುದಕ್ಕೆ ಯಾವುದೇ ದೃಢವಾದ ವೈಜ್ಞಾನಿಕ ಪುರಾವೆಗಳಿಲ್ಲ, ಇದು ಸಂಪೂರ್ಣವಾಗಿ ನಂಬಿಕೆಯನ್ನು ಆಧರಿಸಿದೆ” ಎಂದು ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ತಿಳಿಸಿದ್ದಾರೆ.
ಗೋ ಶಾಲೆಯಲ್ಲಿ ಚಿಕಿತ್ಸೆಗಾಗಿ ಬರುವವರರು ತಮ್ಮ ದೇಹದ ಮೇಲಿನ ಸಗಣಿ ಮತ್ತು ಮೂತ್ರದ ಮಿಶ್ರಣವನ್ನು ಬಳಿದುಕೊಂಡು ಅದು ಒಣಗುವವರೆಗೂ ಕಾಯುತ್ತಾರೆ. ಜೊತೆಗೆ ಆಶ್ರಯದಲ್ಲಿರುವ ಹಸುಗಳನ್ನು ತಬ್ಬಿಕೊಳ್ಳುತ್ತಾರೆ, ಗೌರವಿಸುತ್ತಾರೆ. ರೋಗನಿರೋಧಕ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಯೋಗವನ್ನು ಅಭ್ಯಾಸ ಮಾಡುತ್ತಾರೆ. ಸಗಣಿ ಮತ್ತು ಗೋಮೂತ್ರದ ಮಿಶ್ರಣ ಒಣಗಿದ ಮೇಲೆ ಅದನ್ನು ಹಾಲು ಅಥವಾ ಮಜ್ಜಿಗೆಯಿಂದ ತೊಳೆಯಲಾಗುತ್ತದೆ.
ಇದನ್ನೂ ಓದಿ: ತಮಿಳುನಾಡು: ಸ್ಟಾಲಿನ್ ಸಂಪುಟದಲ್ಲಿ ಪುರುಷರದೇ ದರ್ಬಾರು – ಮಹಿಳೆಯರಿಗೆ ಕನಿಷ್ಠ ಪ್ರಾತಿನಿಧ್ಯ!
“ಈ ಉತ್ಪನ್ನಗಳನ್ನು ಬಳಸುವುದು ಮತ್ತು ಸೇವಿಸುವುದರಿಂದ ಆರೋಗ್ಯದ ಅಪಾಯಗಳೂ ಇವೆ. ಇತರ ರೋಗಗಳು ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದು” ಎಂದು ವೈದ್ಯರು ಹೇಳಿದ್ದಾರೆ.
ಜೊತೆಗೆ ಕೊರೊನಾ ವೈರಸ್ ಹರಡಲು ಗೋಶಾಲೆಯಲ್ಲಿ ಚಿಕಿತ್ಸೆಗೆ ಬರುವ ಜನರು ಕಾರಣವಾಗಬಹುದು ಎಂಬ ಆತಂಕಗಳಿವೆ, ಏಕೆಂದರೆ ಗುಂಪು ಗುಂಪುಗಳಲ್ಲಿ ಜನ ಸೇರುತ್ತಿದ್ದಾರೆ. ಅಹಮದಾಬಾದ್‌ನ ಗೋಶಾಲೆಯ ಉಸ್ತುವಾರಿ ವಹಿಸಿಕೊಂಡಿರುವ ಮಧುಚರಣ್ ದಾಸ್ ಗೋಶಾಲೆಯಲ್ಲಿ ಚಿಕಿತ್ಸೆಗೆ ಭಾಗವಹಿಸುವವರ ಸಂಖ್ಯೆಯನ್ನು ಸೀಮಿತಗೊಳಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೇರಳಕ್ಕೆ ಆಕ್ಸಿಜನ್ ಅವಶ್ಯಕತೆ ಇದೆ, ಬೇರೆ ರಾಜ್ಯಗಳಿಗೆ ನೀಡಲಾಗದು- ಪಿಣರಾಯಿ ವಿಜಯನ್


