ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳ ವೇಳೆ ಪೊಲೀಸರು ನಡೆಸಿದ್ದರೆನ್ನಲಾದ ಅತಿಯಾದ ಬಲಪ್ರಯೋಗ, ಸಾರ್ವಜನಿಕರ ಸಂಚಾರ ನಿರ್ಬಂಧ ಹಾಗೂ ಪ್ರಮುಖ ಪ್ರತಿಭಟನಾ ಸ್ಥಳವಾಗಿದ್ದ ‘ಜಂತರ್ ಮಂತರ್’ ಅನ್ನು ರದ್ದುಗೊಳಿಸಿದ (De-notification) ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಈ ಕುರಿತು ಕೇಂದ್ರ ಸರ್ಕಾರ ಹಾಗೂ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ ಎಂದು ‘ಬಾರ್ ಅಂಡ್ ಬೆಂಚ್’ ವರದಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಅವರಿದ್ದ ದ್ವಿಪೀಠವು ಈ ಪ್ರಮುಖ ವಿಚಾರಣೆ ನಡೆಸಿದ್ದು, ಪ್ರತಿಭಟನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳ ಬಳಿಯಿರುವ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಕಾಯ್ದಿರಿಸುವಂತೆ ಕಾನೂನು ಜಾರಿ ಸಂಸ್ಥೆಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿರುವ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಕೋರ್ಟ್ ಆದೇಶದ ನೆಪ ಹೇಳಿ ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳದ ಪಟ್ಟಿಯಿಂದ ತೆಗೆದುಹಾಕಲಾಗಿದೆ, ಅದನ್ನು ತಕ್ಷಣವೇ ಮರುಸ್ಥಾಪಿಸಬೇಕು ಎಂದು ಕೋರಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದೆಡೆ ಹಿರಿಯ ವಕೀಲೆ ಮುಕ್ತಾ ಗುಪ್ತಾ ವಾದ ಮಂಡಿಸಿ, “ನವದೆಹಲಿ ಕೇವಲ ಕೆಲವು ಜನರಿಗಾಗಿ ಮಾತ್ರ ಇಲ್ಲ; ಶಾಂತಿಯುತವಾಗಿ ಪ್ರತಿಭಟಿಸುವುದು ನಾಗರಿಕರ ಮೂಲಭೂತ ಹಕ್ಕು,” ಎಂದು ಪ್ರತಿಪಾದಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಜಂತರ್ ಮಂತರ್ ರದ್ದತಿಗೆ ಯಾವುದೇ ನ್ಯಾಯಾಲಯದ ಆದೇಶ ಕಾರಣವಲ್ಲ; ಬದಲಿಗೆ ಉನ್ನತ ಮಟ್ಟದ ಸಮಿತಿಯ ವರದಿಯ ಆಧಾರದ ಮೇಲೆಯೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ. ವಿಷಯವನ್ನು ಪರಿಶೀಲಿಸಲು ಮುಂದಾಗಿರುವ ಸುಪ್ರೀಂ ಕೋರ್ಟ್, ತಕ್ಷಣದ ಮಧ್ಯಂತರ ತಡೆ ನೀಡಲು ನಿರಾಕರಿಸಿದ್ದು, ಸರ್ಕಾರದ ನಿಲುವನ್ನು ತಿಳಿಯಲು ನೋಟಿಸ್ ಜಾರಿ ಮಾಡಿದೆ.
ಮಹಿಳಾ ಪತ್ರಕರ್ತೆಯರ ಭದ್ರತೆ ಹಾಗೂ ತನಿಖಾ ಸಮಿತಿ:
ಪ್ರತಿಭಟನೆಯ ವರದಿಗಾರಿಕೆಗೆ ತೆರಳಿದ್ದಾಗ ಮಹಿಳಾ ಪತ್ರಕರ್ತೆಯರ ಮೇಲೆ ನಡೆದಿದೆ ಎನ್ನಲಾದ ಕಿರುಕುಳ ಮತ್ತು ದೌರ್ಜನ್ಯದ ದೂರುಗಳನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತ ದೂರುಗಳನ್ನು ಸೀಲ್ಡ್ ಕವರ್ನಲ್ಲಿ ಸಲ್ಲಿಸಲು ಅನುಮತಿ ನೀಡಿರುವ ಸಿಜೆಐ ಸೂರ್ಯ ಕಾಂತ್, ಪ್ರಕರಣದ ತನಿಖೆಗೆ ಕೇವಲ ಮಹಿಳೆಯರೇ ಇರುವ (ನಿವೃತ್ತ ಮಹಿಳಾ ನ್ಯಾಯಾಧೀಶರು, ಮಾಜಿ ಮಹಿಳಾ ಐಪಿಎಸ್ ಅಧಿಕಾರಿ ಹಾಗೂ ಮಹಿಳಾ ಸಾಮಾಜಿಕ ಹೋರಾಟಗಾರ್ತಿಯರನ್ನು ಒಳಗೊಂಡ) ತನಿಖಾ ಸಮಿತಿ ರಚಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ‘ಬಾರ್ ಅಂಡ್ ಬೆಂಚ್’ ತಿಳಿಸಿದೆ..
ಹೊಸ ಅರ್ಜಿ ಸಲ್ಲಿಸದಂತೆ ವಕೀಲರಿಗೆ ಕೋರ್ಟ್ ಮನವಿ:
ಈಗಾಗಲೇ 46 ಪ್ರತ್ಯೇಕ ಅರ್ಜಿಗಳು ಸಲ್ಲಿಕೆಯಾಗಿರುವುದನ್ನು ಗಮನಿಸಿರುವ ಸುಪ್ರೀಂ ಕೋರ್ಟ್, ಇನ್ನು ಮುಂದೆ ಈ ವಿಚಾರದಲ್ಲಿ ಹೊಸ ಅರ್ಜಿಗಳನ್ನು ಸಲ್ಲಿಸಬೇಡಿ ಎಂದು ವಕೀಲರಲ್ಲಿ ಮನವಿ ಮಾಡಿದೆ. ವಿಚಾರಣೆಯನ್ನು ಸುಲಭಗೊಳಿಸಲು ಉಭಯ ಪಕ್ಷಗಳ ಪರವಾಗಿ ‘ನೋಡಲ್ ವಕೀಲರನ್ನು’ ನೇಮಿಸಿಕೊಳ್ಳುವಂತೆ ಸೂಚಿಸಿರುವ ನ್ಯಾಯಪೀಠವು, ಸರ್ಕಾರದ ಲಿಖಿತ ಉತ್ತರಕ್ಕಾಗಿ ಕಾಯ್ದಿರಿಸಿ ವಿಚಾರಣೆಯನ್ನು ಮುಂದೂಡಿದೆ.


