ಪ್ರತಿಭಟನಾ ಪ್ರದೇಶ ಎಂಬ ಮಾನ್ಯತೆಯನ್ನು ರದ್ದುಗೊಳಿಸಲಾಗಿರುವ ಜಂತರ್ ಮಂತರ್ಗೆ ಅಕ್ರಮವಾಗಿ ಪ್ರವೇಶಿಸುವ ಮೂಲಕ ಶಾಂತಿ ಕದಡುವುದಿಲ್ಲ ಎಂಬ ಬಾಂಡ್ ಉಲ್ಲಂಘಿಸಿದ ಆರೋಪದ ಮೇಲೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಬುಧವಾರ (ಅ.14) ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತಿಹಾರ್ ಜೈಲಿಗೆ ಕಳುಹಿಸಲಾಗಿದೆ ಎಂದು newindianexpress.com ವರದಿ ಮಾಡಿದೆ.
ಸಿಜೆಪಿಯ ಮತ್ತೊಬ್ಬ ನಾಯಕ ಅಜಿಂಕ್ಯ ಶಿಂಧೆ ಅವರ ಜಾಮೀನು ಬಾಂಡ್ ಪ್ರಕ್ರಿಯೆಗಳನ್ನು ಅಂತಿಮಗೊಳಿಸಲಾಗುತ್ತಿದೆ. ಈ ಮೂವರನ್ನು ಬುಧವಾರ ಬೆಳಗ್ಗೆ ಮತ್ತೆ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು ಎಂದು ವರದಿ ಉಲ್ಲೇಖಿಸಿದೆ.
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಾ, ಇತ್ತೀಚೆಗಷ್ಟೇ ಧರಣಿಗಳಿಗೆ ನಿಗದಿಪಡಿಸಲಾಗಿದ್ದ ಸ್ಥಳಗಳ ಪಟ್ಟಿಯಿಂದ ಕೈ ಬಿಟ್ಟಿರುವ ಜಂತರ್ ಮಂತರ್ನ ಬ್ಯಾರಿಕೇಡ್ಗಳನ್ನು ದಾಟಿ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಈ ಮೂವರನ್ನು ಮಂಗಳವಾರ (ಅ.13) ಮುಂಜಾನೆ ವಶಕ್ಕೆ ಪಡೆಯಲಾಗಿತ್ತು.
ಪೊಲೀಸರು ಬಂಧಿತರ ವಿರುದ್ಧ ಅಕ್ರಮ ಪ್ರವೇಶ, ನಿಷೇಧಾಜ್ಞೆಗಳ ಉಲ್ಲಂಘನೆ, ಶಾಂತಿ ಬಾಂಡ್ನ ಉಲ್ಲಂಘನೆ ಮತ್ತು ಸರ್ಕಾರಿ ನೌಕರರ ಅಧಿಕೃತ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪಗಳು ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಅ.10ರಂದು ದೆಹಲಿಯಲ್ಲಿ ಕರೆಕೊಟ್ಟಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದ ಸಿಜೆಪಿ ನಾಯಕರಾದ ಅಭಿಜೀತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ದೆಹಲಿ ಪೊಲೀಸರು ವಿಮಾನದೊಳಗೆಯೇ ವಶಕ್ಕೆ ಪಡೆದಿದ್ದರು. ಬಳಿಕ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರ ಮುಂದೆ ಮೂವರೂ ಕೂಡ ಒಂದು ವರ್ಷದವರೆಗೆ ಶಾಂತಿ ಕಾಪಾಡುವ ಬಗ್ಗೆ ಮುಚ್ಚಳಿಕೆ ಬರೆದುಕೊಟ್ಟಿದ್ದರು ಎಂದು ಹೇಳಲಾಗ್ತಿದೆ.
ಸೌರವ್ ಮತ್ತು ರಾಂಕಾ ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಭಿನ್ನಾಭಿಪ್ರಾಯವನ್ನು ಹತ್ತಿಕ್ಕಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
“ಅಶು ಮತ್ತು ಸೌರವ್ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಅವರ ತಪ್ಪಾದರೂ ಏನು? ಜಂತರ್ ಮಂತರ್ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದು!. ನರೇಂದ್ರ ಮೋದಿಯವರೇ.. ಸ್ವಲ್ಪ ಧೈರ್ಯ ತೋರಿಸಿ. ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ನೀವು ಅಷ್ಟೊಂದು ದೃಢಸಂಕಲ್ಪ ಮಾಡಿದ್ದರೆ, ಇಂತಹ ಹೇಡಿತನದ ತಂತ್ರಗಳ ಹಿಂದೆ ಅಡಗಿಕೊಳ್ಳುವ ಬದಲು ಅಧಿಕೃತವಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಧೈರ್ಯ ಮಾಡಿ” ಎಂದು ದೀಪ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ಯಲ್ಲಿ (ಎಸ್ಐಆರ್) ನಡೆದ ಅಕ್ರಮಗಳನ್ನು ವಿರೋಧಿಸಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದ್ದು, ಈ ಬಿಗಿ ಭದ್ರತೆಯ ನಡುವೆಯೇ ಹೋರಾಟಗಾರರು ವಿವಿಧ ರೀತಿಯಲ್ಲಿ ಪ್ರತಿರೋಧ ಒಡ್ಡುತ್ತಿದ್ದಾರೆ.
ಅಕ್ಟೋಬರ್ 11ರಂದು, ದೆಹಲಿ ಪೊಲೀಸ್ ಆಯುಕ್ತ ಅನುರಾಗ್ ಕುಮಾರ್ ಅವರು ರಾಮ್ಲೀಲಾ ಮೈದಾನ, ಬುರಾರಿ ಮೈದಾನ ಮತ್ತು ಸಿಬಿಡಿ ಮೈದಾನವನ್ನು ಪ್ರತಿಭಟನೆ, ಧರಣಿಗೆ ನಿಗದಿತ ಸ್ಥಳಗಳೆಂದು ಘೋಷಿಸಿ ಆದೇಶ ಹೊರಡಿಸಿದ್ದು, ಜಂತರ್ ಮಂತರ್ ಅನ್ನು ಪ್ರತಿಭಟನೆಗೆ ಮೀಸಲಾದ ಸ್ಥಳಗಳ ಪಟ್ಟಿಯಿಂದ ಕೈಬಿಡಲಾಗಿದೆ.
ರಾಷ್ಟ್ರ ರಾಜಧಾನಿಯ ರಾಜಕೀಯ ಕೇಂದ್ರದಿಂದ ಪ್ರತಿಭಟನೆಗಳನ್ನು ಬೇರೆಡೆಗೆ ಸ್ಥಳಾಂತರಿಸುವುದರಿಂದ ಸಾರ್ವಜನಿಕ ಅಸಮ್ಮತಿಯ ಗೋಚರತೆ ಕಡಿಮೆಯಾಗುತ್ತದೆ ಎಂದು ವಾದಿಸುವ ಮೂಲಕ ಸಿಜೆಪಿ (CJP) ಈ ಕ್ರಮವನ್ನು ಟೀಕಿಸಿದೆ.
ಸಿಜೆಪಿ ಈ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದು, ರಾಷ್ಟ್ರ ರಾಜಧಾನಿಯ ರಾಜಕೀಯ ಕೇಂದ್ರದಿಂದ ದೂರಕ್ಕೆ ಪ್ರತಿಭಟನೆಗಳನ್ನು ಸ್ಥಳಾಂತರಿಸುವುದರಿಂದ ಸಾರ್ವಜನಿಕ ಭಿನ್ನಾಭಿಪ್ರಾಯದ ದೃಶ್ಯ ಗೋಚರತೆ ಮತ್ತು ಪ್ರಭಾವವು ದುರ್ಬಲಗೊಳ್ಳುತ್ತದೆ ಎಂದು ವಾದಿಸಿದೆ.


