HomeUncategorizedಪರಿಶಿಷ್ಟ ಜಾತಿಯವನು ಎಂಬ ಕಾರಣಕ್ಕೆ ಹೆಡಗೇವಾರ್ ಮ್ಯೂಸಿಯಂ ಪ್ರವೇಶಕ್ಕೆ ನಿರಾಕರಣೆ: ಗೂಳಿಹಟ್ಟಿ ಶೇಖರ್

ಪರಿಶಿಷ್ಟ ಜಾತಿಯವನು ಎಂಬ ಕಾರಣಕ್ಕೆ ಹೆಡಗೇವಾರ್ ಮ್ಯೂಸಿಯಂ ಪ್ರವೇಶಕ್ಕೆ ನಿರಾಕರಣೆ: ಗೂಳಿಹಟ್ಟಿ ಶೇಖರ್

- Advertisement -
- Advertisement -

‘ನಾನು ಪರಿಶಿಷ್ಠ ಜಾತಿಯವನು ಎಂಬ ಕಾರಣಕ್ಕೆ ನಾಗಪುರದ ಹೆಡಗೇವಾರ್ ವಸ್ತು ಸಂಗ್ರಹಾಲಯದ ಪ್ರವೇಶ ನಿರಾಕರಿಸಿದ್ದಾರೆ’ ಎಂದು ಹೊಸದುರ್ಗ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಆರೋಪಿಸಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಆರ್‌ಎಸ್‌ಎಸ್‌ ಮುಖಂಡ ಬಿ.ಎಲ್. ಸಂತೋಷ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೆ ಗೂಳಿಹಟ್ಟಿ ಶೇಖರ್ ಆಡಿಯೋ ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದ್ದು, ‘ಬಹಳ ಖುಷಿಯಿಂದ ನಾನು ಆರ್‌ಎಸ್‌ಎಸ್ ಕಚೇರಿಗೆ ಹೋದೆ, ಪರಿಶಿಷ್ಟ ಜಾತಿಗೆ ಸೇರಿದವನಾದರೂ ಹಿಂದುತ್ವದ ಬಗ್ಗೆ ನನಗೆ ಹೆಮ್ಮೆ ಇದೆ. ಚುನಾವಣೆ ಘೋಷಣೆಯಾಗುವುದಕ್ಕೂ ಎರಡು ತಿಂಗಳ ಮುಂಚೆ ಸ್ನೇಹಿತರ ಜತೆಗೆ ಮಹಾರಾಷ್ಟ್ರದ ನಾಗಪುರದ ಆರೆಸ್ಸೆಸ್ ಕಚೇರಿಗೆ ಖುಷಿಯಿಂದ ಭೇಟಿ ನೀಡಿದ್ದೆ. ಹೆಡಗೇವಾರ್ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯಿಂದ ವಸ್ತುಸಂಗ್ರಹಾಲಯಕ್ಕೆ ತೆರಳಿದಾಗ ನನ್ನನ್ನು ಪರಿಶಿಷ್ಟ ಜಾತಿಯವನಾ ಎಂದು ಕೇಳಿದರು, ನಾನು ಹೌದು ಎಂದಿದ್ದಕ್ಕೆ ಪ್ರವೇಶ ನಿರಾಕರಿಸಲಾಯಿತು. ಇದರಿಂದ ನನಗೆ ಬಹಳ ನೋವಾಗಿದೆ’ ಎಂದು ಹೇಳಿದ್ದಾರೆ.

‘ಮ್ಯೂಸಿಯಂ ವೀಕ್ಷಣೆಗೆ ಬರುವವರ ಮಾಹಿತಿಯನ್ನು ಪ್ರವೇಶ ದ್ವಾರದಲ್ಲಿ ಸಂಗ್ರಹಿಸಲಾಗುತ್ತಿತ್ತು. ಪುಸ್ತಕದಲ್ಲಿ ಹೆಸರು ನೋಂದಾಯಿಸಿ ಒಳಗೆ ಹೆಜ್ಜೆ ಇಡುತ್ತಿದ್ದಾಗ ವ್ಯಕ್ತಿಯೊಬ್ಬರು ತಡೆದರು. ತಪ್ಪು ತಿಳಿಯಬೇಡಿ, ನೀವು ಮೀಸಲಾತಿ ಪಡೆದುಕೊಳ್ಳುವ ಜಾತಿಗೆ ಸೇರಿದ್ದೀರಾ ಎಂದು ಕೇಳಿದರು. ನಾನು ಹೌದು ಎಂದಿದ್ದಕ್ಕೆ ನನಗೆ ಪ್ರವೇಶ ನಿರಾಕರಿಸಿದರು. ನನ್ನೊಂದಿಗೆ ಬಂದಿದ್ದ ಇಬ್ಬರು ಸ್ನೇಹಿತರು ಮಾತ್ರ ಒಳಗೆ ಹೋದರು. ಪರವಾಗಿಲ್ಲ ಎಂದು ಹೇಳಿದ ನಾನು, ಹೊರಗೆ ಕಾಯುತ್ತಾ ಕುಳಿತುಕೊಂಡೆ. ಗೋವಿಂದ ಕಾರಜೋಳ ಹಾಗೂ ಸಂಸದ ಆನೇಕಲ್ ನಾರಾಯಣಸ್ವಾಮಿ ಅವರಿಗೂ ಪ್ರವೇಶ ನಿರಾಕರಿಸಲಾಗಿತ್ತಾ? ಇದಕ್ಕೆ ಕಾರಣ ಏನು ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಬಿ.ಎಲ್. ಸಂತೋಷ್ ಅವರಲ್ಲಿ ಮನವಿ ಮಾಡಿದ್ದಾರೆ.

ಬಿಜೆಪಿಯಿಂದ ದೂರ ಉಳಿದಿರುವ ಗೂಳಿಹಟ್ಟಿ:

ಹೊಸದುರ್ಗ ಮೀಸಲು ಕ್ಷೇತ್ರದಿಂದ ಗೆದ್ದು ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದ ಗೂಳಿಹಟ್ಟಿ ಶೇಖರ್, 2023ರ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಪರಾಭವಗೊಂಡಿದ್ದಾರೆ. ಹೊಸದುರ್ಗ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ಗೂಳಿಹಟ್ಟಿ ಶೇಖರ್‌ಗೆ ಹೈಕಮಾಂಡ್ ಟಿಕೆಟ್ ನೀಡಲಿಲ್ಲ. ಬದಲಿಗೆ ಅಂದಿನ ಖನಿಜ ನಿಗಮದ ಅಧ್ಯಕ್ಷರಾಗಿದ್ದ ಎಸ್. ಲಿಂಗಮೂರ್ತಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಗೂಳಿಹಟ್ಟಿ ರಾಜೀನಾಮೆ ನೀಡಿದ್ದರು.

ತಮ್ಮದೇ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ:

ಬಿಜೆಪಿ ಸರ್ಕಾರದ ಅವಧಿಯಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಅವರು, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯಲ್ಲಿ ಸುಮಾರು ₹23 ಸಾವಿರ ಕೋಟಿ ಅಕ್ರಮ ನಡೆದಿದೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು.

ಇದನ್ನೂ ಓದಿ; ಹುತಾತ್ಮ ಕ್ಯಾ.ಪ್ರಾಂಜಲ್ ಕುರಿತ ಸಿಎಂ ಹೇಳಿಕೆ ತಿರುಚಿದ ತೇಜಸ್ವಿ ಸೂರ್ಯ: ಕ್ಷಮೆಯಾಚಿಸುವಂತೆ ಆಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...