ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಸೋಮವಾರ (ಸೆ.21) ಆದೇಶಿಸಿದೆ. ಈ ಪ್ರಕರಣದಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮೂರು ತಿಂಗಳೊಳಗೆ ಅನುಪಾಲನಾ ವರದಿಯನ್ನು (compliance report) ಸಲ್ಲಿಸಬೇಕು ಎಂದು ನ್ಯಾಯಾಲಯವು ನಿರ್ದೇಶನ ನೀಡಿದೆ ಎಂದು thenewsminute.com ವರದಿ ಮಾಡಿದೆ.
ಅಕ್ಟೋಬರ್ 2012ರಲ್ಲಿ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ನಡೆದಿತ್ತು. ಈಗ ದಶಕದ ಬಳಿಕ ಸುಪ್ರೀಂ ಕೋರ್ಟ್‌ನಿಂದ ಈ ಆದೇಶ ಬಂದಿದೆ. ಕರ್ನಾಟಕದ ಅಪರಾಧ ತನಿಖಾ ಇಲಾಖೆ (ಸಿಐಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸಿದ್ದಾಗ್ಯೂ, ಸೌಜನ್ಯಗಳ ಸಾವಿಗೆ ಕಾರಣರಾದವರನ್ನು ಇದುವರೆಗೆ ಗುರುತಿಸಲು ಸಾಧ್ಯವಾಗಿಲ್ಲ.
ಹೊಸದಾಗಿ ತನಿಖೆ ನಡೆಸಬೇಕೆಂದು ಕೋರಿ ಸೌಜನ್ಯಳ ತಾಯಿ ಕುಸುಮಾವತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈಗ ಮರುತನಿಖೆ ಅದೇಶ ನೀಡಿದೆ. ಹಿಂದಿನ ಸಿಐಡಿ ಮತ್ತು ಸಿಬಿಐ ತನಿಖೆಗಳಲ್ಲಿ ಪ್ರಮುಖ ಸಾಕ್ಷ್ಯಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಕುಸುಮಾವತಿ ಆರೋಪಿಸಿದ್ದರು ಹಾಗೂ ಆ ತನಿಖೆಗಳಲ್ಲಿದ್ದ ಲೋಪದೋಷಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಬಂಧಿತರಾಗಿದ್ದ ಸಂತೋಷ್ ರಾವ್ ಅವರನ್ನು 2023ರ ಜೂನ್ 16ರಂದು ಸಿಬಿಐ ವಿಶೇಷ ನ್ಯಾಯಾಲಯವು ದೋಷಮುಕ್ತಗೊಳಿಸಿತ್ತು. ಪ್ರಾಸಿಕ್ಯೂಷನ್ ಆರೋಪಗಳನ್ನು ಯಾವುದೇ ಸಂಶಯಕ್ಕೆ ಆಸ್ಪದವಿಲ್ಲದಂತೆ ಸಾಬೀತುಪಡಿಸಲು ವಿಫಲವಾಗಿದೆ ಎಂದು ವಿಚಾರಣಾ ನ್ಯಾಯಾಲಯವು ಅಭಿಪ್ರಾಯಪಟ್ಟಿತ್ತು. ಅಲ್ಲದೆ, ತನಿಖೆಯಲ್ಲಿ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ದೋಷಮುಕ್ತಿ ಸಮಿತಿಯನ್ನು (acquittal committee) ರಚಿಸುವಂತೆ ನ್ಯಾಯಾಲಯವು ನಿರ್ದೇಶನ ನೀಡಿತ್ತು.
ಸಂತೋಷ್ ರಾವ್ ಅವರನ್ನು ಈ ಪ್ರಕರಣದಲ್ಲಿ ಸುಳ್ಳು ಆರೋಪ ಹೊರಿಸಿ ಸಿಲುಕಿಸಲಾಗಿದೆ ಎಂದು ಸೌಜನ್ಯಳ ಕುಟುಂಬದವರು ಮೊದಲಿನಿಂದಲೂ ಸತತವಾಗಿ ವಾದಿಸುತ್ತಾ ಬಂದಿದ್ದರು ಮತ್ತು ತನಿಖೆಯಲ್ಲಿ ಗಂಭೀರ ಲೋಪದೋಷಗಳು ನಡೆದಿವೆ ಎಂದು ಆರೋಪಿಸಿದ್ದರು. ಅಲ್ಲದೆ, ನಿಜವಾದ ಅಪರಾಧಿಗಳನ್ನು ರಕ್ಷಿಸಲಾಗಿದೆ ಎಂದೂ ಕುಟುಂಬಸ್ಥರು ದೂರಿದ್ದರು.
2024ರಲ್ಲಿ, ಕುಸುಮಾವತಿ ಅವರು ಹೊಸದಾಗಿ ಸಿಬಿಐ ತನಿಖೆ ನಡೆಸುವಂತೆ ಕೋರಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, 2024ರ ಆಗಸ್ಟ್ 20ರಂದು ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತಾದರೂ, ಮತ್ತಷ್ಟು ತನಿಖೆಯ ಅಗತ್ಯತೆಯ ಕುರಿತು ಅವಲೋಕನ ಮಾಡಿತ್ತು. ಸಂತೋಷ್ ರಾವ್ ಅವರ ದೋಷಮುಕ್ತಿಯು ಈ ಕೃತ್ಯಕ್ಕೆ ಬೇರೆ ಯಾರಾದರೂ ಜವಾಬ್ದಾರರೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ ಎಂದು ಹೇಳಿದ್ದ ನ್ಯಾಯಾಲಯ, ಈ ಪ್ರಕರಣವು “ಖಂಡಿತವಾಗಿಯೂ ಮರುತನಿಖೆಯನ್ನು ಬಯಸುತ್ತದೆ” ಎಂದು ಅಭಿಪ್ರಾಯಪಟ್ಟಿತ್ತು.
Courtesy : thenewsminute.com


