HomeಮುಖಪುಟExplained : ಏನಿದು ನೀಟ್ 2024 ಪರೀಕ್ಷೆ ಫಲಿತಾಂಶ ವಿವಾದ

Explained : ಏನಿದು ನೀಟ್ 2024 ಪರೀಕ್ಷೆ ಫಲಿತಾಂಶ ವಿವಾದ

ನೀಟ್‌ ಮಾರ್ಕಿಂಗ್ ಸ್ಕೀಮ್ ಪ್ರಕಾರ, ಅಭ್ಯರ್ಥಿ ಸರಿಯಾದ ಉತ್ತರ ನೀಡಿದರೆ 4 ಅಂಕಗಳನ್ನು ಪಡೆಯುತ್ತಾರೆ. ತಪ್ಪಾದ ಉತ್ತರಕ್ಕೆ ಒಂದು ಅಂಕ ಕಳೆದುಕೊಳ್ಳುತ್ತಾರೆ. ಅಭ್ಯರ್ಥಿ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸದಿದ್ದರೆ ಯಾವುದೇ ಅಂಕವನ್ನು ನೀಡಲಾಗುವುದಿಲ್ಲ. ಆದರೆ, ಈ ವರ್ಷ ಇಬ್ಬರು ಅಭ್ಯರ್ಥಿಗಳು ಅಖಿಲ ಭಾರತ ಮಟ್ಟದಲ್ಲಿ 68 ಮತ್ತು 69ನೇ ರ‍್ಯಾಂಕ್ ಪಡೆದಿದ್ದಾರೆ. ಅವರು ಕ್ರಮವಾಗಿ 719 ಮತ್ತು 718 ಅಂಕಗಳನ್ನು ಪಡೆದಿದ್ದಾರೆ.

- Advertisement -
- Advertisement -

ಈ ವರ್ಷದ (2024) ನೀಟ್-ಯುಜಿ ವೈದ್ಯಕೀಯ ಪ್ರವೇಶ ಪರೀಕ್ಷೆ ದೇಶದಾದ್ಯಂತ ದೊಡ್ಡ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.

ಬರೋಬ್ಬರಿ 24 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದ ಪರೀಕ್ಷೆ ಮೇ 5, 2024 ರಂದು ನಡೆದಿತ್ತು. ಜೂನ್ 4, 2024ರಂದು ಫಲಿತಾಂಶ ಪ್ರಕಟಗೊಂಡ ನಂತರ ಭಾರೀ ವಿವಾದಕ್ಕೆ ಕಾರಣವಾಗಿದೆ.

ಪರೀಕ್ಷೆಯ ಫಲಿತಾಂಶ ಜೂನ್ 14 ರಂದು ಪ್ರಕಟಗೊಳ್ಳಬೇಕಿತ್ತು. ಆದರೆ, 10 ದಿನ ಮುಂಚಿತವಾಗಿ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ದಿನ ಜೂನ್ 4 ರಂದು ಬಿಡುಗಡೆ ಮಾಡಲಾಗಿದೆ.

ನೀಟ್-ಯುಜಿ ಫಲಿತಾಂಶ ವಿವಾದಕ್ಕೀಡಗಳು ಪ್ರಮುಖ ಕಾರಣಗಳು ಇಲ್ಲಿವೆ:

  • ಒಟ್ಟು 67 ಅಭ್ಯರ್ಥಿಗಳು 720ಕ್ಕೆ 720 ಅಂಕಗಳನ್ನು ಪಡೆದಿರುವುದು
  • ಕೆಲ ಅಭ್ಯರ್ಥಿಗಳು 718, 719 ಅಂಕಗಳನ್ನು ಗಳಿಸಿದ್ದಾರೆ. ಇದು ನೀಟ್ ಅಂಕಗಳ ಯೋಜನೆಯ ಪ್ರಕಾರ ಅಸಾಧ್ಯವಾಗಿದೆ.
  • ನೀಟ್-ಯುಜಿ ಫಲಿತಾಂಶವನ್ನು ನಿಗದಿತ ದಿನಾಂಕಕ್ಕಿಂತ 10 ದಿನ ಮುಂಚಿತವಾಗಿ ಜೂನ್ 4 ರಂದು ಪ್ರಕಟಿಸಿರುವುದು. ಅದೇ ದಿನ ಲೋಕಸಭೆ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ.
  • ಹರಿಯಾಣದ ಒಂದೇ ಪರೀಕ್ಷಾ ಕೇಂದ್ರದ 6 ಅಭ್ಯರ್ಥಿಗಳು ಟಾಪರ್ ಆಗಿರುವುದು
  • ನೀಟ್ ಪ್ರಶ್ನೆ ಪತ್ರಿಕೆಗಳ ಸೋರಿಕೆ ಆರೋಪಗಳು
  • ಎಕ್ಸ್‌ನಲ್ಲಿ ವ್ಯಕ್ತಿಯೊಬ್ಬರು ‘ಹಗರಣ’ದ ಸ್ವರೂಪವನ್ನು ವಿವರಿಸಿರುವುದು.

ನೀಟ್ ಫಲಿತಾಂಶ ಹೊರಬಿದ್ದ ಮರುದಿನ (ಜೂನ್‌ 5ರಂದು) ಎಕ್ಸ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದ Sambhav Wadhawan (@iamskwadhawan) ಎಂಬ ಬಳಕೆದಾರ “ನೀಟ್-2024ರ ಪರೀಕ್ಷೆಯು ಒಂದು ಹಗರಣವಾಗಿದೆ. ನಾನು ಎಲ್ಲವನ್ನೂ ಥ್ರೆಡ್ ರೂಪದಲ್ಲಿ ವಿವರಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ಗಳ ಮೂಲಕ ಈ ಬಾರಿಯ ನೀಟ್ ಪರಿಕ್ಷಾ ಹಗರಣ ಹೇಗೆ ನಡೆದಿದೆ ಎಂದು ಎಕ್ಸ್ ಬಳಕೆದಾರ ವಿವರಿಸಿದ್ದಾರೆ. ಅವುಗಳು ಹೀಗಿವೆ..

“ನೀಟ್-ಯುಜಿ 2024ರ ಆನ್‌ಲೈನ್ ನೋಂದಣಿ 9 ಫೆಬ್ರವರಿ 2024 ರಂದು ಪ್ರಾರಂಭವಾಗಿತ್ತು. ಮಾರ್ಚ್ 16 ರವರೆಗೆ ಸಮಯ ವಿಸ್ತರಿಸಲಾಗಿತ್ತು. ಅಲ್ಲಿಯವರೆಗೆ ಎಲ್ಲವೂ ಚೆನ್ನಾಗಿತ್ತು”

“ಮಾರ್ಚ್ 16ರಂದು ನೋಂದಣಿ ಮುಕ್ತಾಯಗೊಂಡಿತ್ತು. ಆದರೆ, ಒಂದು ತಿಂಗಳ ಬಳಿಕ ಏಪ್ರಿಲ್ 9 ಮತ್ತು 10ರಂದು ಎರಡು ದಿನಗಳ ಕಾಲ ಮತ್ತೊಮ್ಮೆ ನೋಂದಣಿಗೆ ಅವಕಾಶ ನೀಡಲಾಗಿತ್ತು. ಅಕಾಂಕ್ಷಿಗಳ ಮನವಿ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎನ್‌ಟಿಎ ಹೇಳಿತ್ತು. ಎರಡೆರಡು ಬಾರಿ ನೋಂದಣಿ ಮುಗಿಸಿದ್ದರೂ, ಮತ್ತೊಮ್ಮೆ ಅವಕಾಶ ನೀಡಿದ್ದು ಏಕೆ? ಅದೂ ಕೂಡ ಒಂದು ತಿಂಗಳ ಬಳಿಕ”

“ಮೇ 5ರಂದು ನೀಟ್‌-ಯುಜಿ ಪರೀಕ್ಷೆ ನಡೆದಿತ್ತು. ಆದರೆ, ಅದೇ ದಿನ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ರಾಜಸ್ಥಾನದ ಪರೀಕ್ಷಾ ಕೇಂದ್ರವೊಂದರಲ್ಲಿ ಮೊದಲೇ ಗುರುತಿಸಲಾದ ಉತ್ತರಗಳೊಂದಿಗೆ ಪ್ರಶ್ನೆ ಪತ್ರಿಕೆಯನ್ನು ನೀಡಲಾಗಿದೆ. ಬಳಿಕ ಅದನ್ನು ವಾಪಸ್ ಪಡೆದುಕೊಳ್ಳಲಾಗಿದೆ. ಹಿಂದಿ ಮಾಧ್ಯಮದ ಅಭ್ಯರ್ಥಿಗಳಿಗೆ ಇಂಗ್ಲಿಷ್ ಪೇಪರ್ ನೀಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿತ್ತು”

“ಅದೇ ದಿನ 120 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಗಿದೆ ಎಂದು ಎನ್‌ಟಿಎ ಸ್ಪಷ್ಟಪಡಿಸಿತ್ತು. ಆದರೆ, ಪರೀಕ್ಷೆ ಮುಗಿಯುವ ಮುನ್ನವೇ ಆನ್‌ಲೈನ್‌ನಲ್ಲಿ ಪ್ರಶ್ನೆ ಪತ್ರಿಕೆಗಳು ಹರಿದಾಡಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಪೋಸ್ಟ್‌ಗಳು ಕಂಡು ಬಂದಿತ್ತು. ಆದರೆ, ಎನ್‌ಟಿಎ ಸರಿಯಾದ ರೀತಿಯಲ್ಲಿ ಪರೀಕ್ಷೆ ನಡೆದಿದೆ ಎಂದು ಪ್ರಕಟಣೆ ಮೂಲಕ ಸಮರ್ಥಿಸಿಕೊಂಡಿತ್ತು”

“ಅಲೆನ್ ಮತ್ತು ಆಕಾಶ್‌ನಂತಹ ಪರಿಕ್ಷಾ ತರಬೇತಿ ಸಂಸ್ಥೆಗಳು ತಮ್ಮ ಎಷ್ಟು ವಿದ್ಯಾರ್ಥಿಗಳು ಪರಿಪೂರ್ಣ ಅಂಕಗಳನ್ನು ಪಡೆಯಬಹುದು ಎಂಬುವುದನ್ನು ಮೊದಲೇ ಊಹಿಸಿರುತ್ತದೆ. ಫಲಿತಾಂಶ ಪ್ರಕಟಗೊಳ್ಳುವ ಮುನ್ನ ಆಕಾಶ್ 5 ವಿದ್ಯಾರ್ಥಿಗಳು ಮತ್ತು ಅಲೆನ್ 4  ಅಭ್ಯರ್ಥಿಗಳು ಪರಿಪೂರ್ಣ ಅಂಕ ಗಳಿಸಿದ್ದಾರೆ ಎಂದು ಹೇಳಿಕೊಂಡಿತ್ತು.

 

ಎನ್‌ಟಿಎ ಬಿಡುಗಡೆ ಮಾಡಿರುವ ಬಿಡುಗಡೆ ಮಾಡಿರುವ ಕೀ ಉತ್ತರಗಳ ಆಧಾರದಲ್ಲಿ ಈ ಊಹೆ ಮಾಡಲಾಗಿದೆ ಎಂದು ಎರಡೂ ಸಂಸ್ಥೆಗಳು ಹೇಳಿತ್ತು.

“ಆದರೆ, ಫಲಿತಾಂಶದ ದಿನ ಅಲೆನ್ ಮತ್ತು ಆಕಾಶ್‌ನಿಂದ ತಲಾ 16 ವಿದ್ಯಾರ್ಥಿಗಳು ಪರಿಪೂರ್ಣ ಅಂಕ ಗಳಿಸಿದ್ದರು. ಯಾರಿಗೂ ಅನುಮಾನ ಬಾರದಂತೆ ಈ ವಿಷಯವನ್ನು ಅವರು ತಡವಾಗಿ ಪ್ರಕಟಿಸಿದ್ದರು. ಪ್ರಶ್ನೆ ಪತ್ರಿಕೆ ಸೋರಿಯಾಗಿರುವುದು ಅವರಿಗೂ ತಿಳಿದಿತ್ತು. ಈ ಹಗರಣದಲ್ಲಿ ಅವರೂ ಪಾಲ್ಗೊಂಡಿದ್ದಾರೆ ಎಂಬ ಅನುಮಾನಕ್ಕೆ ಕಾರಣವಾಗುವ ಅಂಶವೆಂದರೆ, ಎರಡೂ ಸಂಸ್ಥೆಗಳ ತಲಾ 16 ಅಭ್ಯರ್ಥಿಗಳು 720 ಪರಿಪೂರ್ಣ ಅಂಕಗಳನ್ನು ಪಡೆದಿರುವುದು ಎಂದು ಎಕ್ಸ್‌ ಬಳಕೆದಾರ ಹೇಳಿದ್ದಾರೆ.

“ನಿಗದಿ ದಿನಾಂಕಕ್ಕಿಂತ 10 ದಿನಗಳ ಮುಂಚಿತವಾಗಿ ಪರೀಕ್ಷೆಯ ಫಲಿತಾಂಶವನ್ನು ಹೇಗೆ ಮತ್ತು ಏಕೆ ಪ್ರಕಟಿಸಲಾಯಿತು?” ಎಂದು ಎಕ್ಸ್ ಬಳಕೆದಾರ ಪ್ರಶ್ನಿಸಿದ್ದಾರೆ. “ಅಖಿಲ ಭಾರತದ ಮಟ್ಟದಲ್ಲಿ 62 ರಿಂದ 69ರವರೆಗೆ ರ‍್ಯಾಂಕ್ ಪಡೆದ ಹರಿಯಾಣದ ಪರೀಕ್ಷಾ ಕೇಂದ್ರವೊಂದರ ಅಭ್ಯರ್ಥಿಗಳು ಒಂದೇ ರೀತಿಯ ರೋಲ್ ನಂಬರ್ ಪಡೆದಿರುವುದು ಹೇಗೆ?” ಎಂದು ಅವರು ಕೇಳಿದ್ದಾರೆ.

“ಈ ಬಾರಿಯ ಪರೀಕ್ಷೆಯಲ್ಲಿ 67 ಅಭ್ಯರ್ಥಿಗಳು ಪರಿಪೂರ್ಣ 720 ಅಂಕಗಳನ್ನು ಗಳಿಸಿದ್ದಾರೆ. ಕ್ರಮವಾಗಿ 68 ಮತ್ತು 69 ನೇಯ ಇಬ್ಬರು ಅಭ್ಯರ್ಥಿಗಳು 719 ಮತ್ತು 718 ಅಂಕಗಳನ್ನು ಗಳಿಸಿದ್ದಾರೆ. ನೀಟ್ ವೈದ್ಯಕೀಯ ಪರೀಕ್ಷೆಯ ಯೋಜನೆಯ ಲೆಕ್ಕಾಚಾರದ ಪ್ರಕಾರ ಇದು ಸಾಧ್ಯವಿಲ್ಲ” ಎಂದಿದ್ದಾರೆ.

ನೀಟ್ ಮಾರ್ಕಿಂಗ್ ಸ್ಕೀಮ್ ಪ್ರಕಾರ, ಅಭ್ಯರ್ಥಿಯು ಸರಿಯಾದ ಉತ್ತರಕ್ಕಾಗಿ 4 ಅಂಕಗಳನ್ನು ಪಡೆಯುತ್ತಾರೆ. ತಪ್ಪು ಉತ್ತರವೊಂದಕ್ಕೆ ಒಂದು ಅಂಕ ಕಳೆದುಕೊಳ್ಳುತ್ತಾರೆ. ಅಭ್ಯರ್ಥಿಯು ಪ್ರಶ್ನೆಯನ್ನು ಪ್ರಯತ್ನಿಸದಿದ್ದರೆ, ಅದಕ್ಕೆ ಯಾವುದೇ ಅಂಕವನ್ನು ನೀಡಲಾಗುವುದಿಲ್ಲ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಹೇಳುತ್ತಿರುವುದೇನು? 

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನೀಟ್-ಯುಜಿ ಫಲಿತಾಂಶದ ಗೊಂದಲಗಳ ಬಗ್ಗೆ ಪ್ರತಿಕ್ರಿಯಿಸಿದ್ದು, “ಕೆಲ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಅಧೀಕ್ಷಕರ ಕಾರಣದಿಂದ ಪರೀಕ್ಷೆ ಬರೆಯಲು ಕಡಿಮೆ ಸಮಯ ಸಿಕ್ಕಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪರಿಹಾರವಾಗಿ ಸಾಮಾನ್ಯೀಕರಣ ಸೂತ್ರವನ್ನು ಅನ್ವಯಿಸಲಾಗಿದೆ.  ಪರಿಣಾಮ ಕೆಲ ಅಭ್ಯರ್ಥಿಗಳು 718 ಅಥವಾ 719 ಅಂಕಗಳನ್ನು ಪಡೆದಿದ್ದಾರೆ ಎಂದಿದೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಕುರಿತ ಆರೋಪಗಳ ಬಗ್ಗೆಯೂ ಎನ್‌ಟಿಎ ಪ್ರತಿಕ್ರಿಯಿಸಿದ್ದು, “ಈ ಆರೋಪ ಸಂಪೂರ್ಣ ಆಧಾರ ರಹಿತ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪ್ರಶ್ನೆ ಪತ್ರಿಕೆಗಳು ಮತ್ತು ನಿಜವಾದ ಪ್ರಶ್ನೆ ಪತ್ರಿಕೆಗಳಿಗೆ ಸಂಬಂಧವಿಲ್ಲ” ಎಂದು ಹೇಳಿದೆ.

ರಾಜಸ್ಥಾನದ ಸವಾಯಿ ಮಾಧೋಪುರದ ಪರೀಕ್ಷಾ ಕೇಂದ್ರದಲ್ಲಿ ಕೆಲ ಅಭ್ಯರ್ಥಿಗಳು ಪರೀಕ್ಷೆ ಮುಗಿಯುವ ಮುನ್ನ ಬಲವಂತವಾಗಿ ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡು ಹೋದ ಘಟನೆ ನಡೆದಿದೆ. ಈ ಪತ್ರಿಕೆಗಳ ಚಿತ್ರವನ್ನು ಪ್ರಶ್ನೆ ಪತ್ರಿಕೆ ಸೋರಿಕೆಯ ಘಟನೆಗೆ ಲಿಂಕ್ ಮಾಡಲಾಗಿದೆ ಎಂದು ಎನ್‌ಟಿಎ ತಿಳಿಸಿದೆ.

ಜೂನ್ 8ರಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎನ್‌ಟಿಎ ಮಹಾನಿರ್ದೇಶಕ ಸುಬೋಧ್ ಕುಮಾರ್ ಸಿಂಗ್,  “ನೀಟ್-ಯುಜಿ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ 1,500ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೀಡಿದ ಗ್ರೇಸ್ ಅಂಕಗಳನ್ನು  ಮರು ಪರಿಶೀಲಿಸಲು ಶಿಕ್ಷಣ ಸಚಿವಾಲಯ ನಾಲ್ವರು ಸದಸ್ಯರ ಸಮಿತಿ ರಚಿಸಿದೆ ಎಂದು ಹೇಳಿದ್ದಾರೆ.

ಕೀ ಉತ್ತರದಲ್ಲಿ ಎರಡು ಸರಿಯಾದ ಉತ್ತರಗಳನ್ನು ಹೊಂದಿರುವ ಪ್ರಶ್ನೆಗೆ ಸಂಬಂಧಿಸಿದಂತೆ ನೀಟ್ -ಯುಜಿ ಅಭ್ಯರ್ಥಿಯೊಬ್ಬರು ತಕರಾರು ಎತ್ತುವ ಮೂಲಕ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾದ ಅರ್ಜಿಗಳ ಸಂಬಂಧ ಕೋರ್ಟ್ ಮಂಗಳವಾರ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ)ಗೆ ನೋಟಿಸ್ ಜಾರಿ ಮಾಡಿದೆ. ಆದರೆ, ಕೌನ್ಸೆಲಿಂಗ್ ಪ್ರಕ್ರಿಯೆಗೆ ತಡೆ ನೀಡಲು ನಿರಾಕರಿಸಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ರಜಾಕಾಲದ ಪೀಠ, 67 ಅಭ್ಯರ್ಥಿಗಳು ಫಸ್ಟ್ ರ‍್ಯಾಂಕ್ ಪಡೆದಿರುವ ಆರೋಪ ಪರೀಕ್ಷೆಯ ಪಾವಿತ್ರ್ಯದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ.

ಇದನ್ನೂ ಓದಿ : ನೀಟ್-ಯುಜಿ ವಿವಾದ: ಹೊಸ ಪರೀಕ್ಷೆ ಕೋರಿ ಅರ್ಜಿ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸುಪ್ರಿಂನಿಂದ ನೋಟಿಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...