Homeಮುಖಪುಟರೈತ ಹೋರಾಟ ತಡೆಗೆ ಹಲವು ಕುತಂತ್ರಗಳು, ಜಗ್ಗದ ಅನ್ನದಾತರು: ವಿಶೇಷ ವರದಿ

ರೈತ ಹೋರಾಟ ತಡೆಗೆ ಹಲವು ಕುತಂತ್ರಗಳು, ಜಗ್ಗದ ಅನ್ನದಾತರು: ವಿಶೇಷ ವರದಿ

ಸರ್ಕಾರ ಇಂಟರ್‌ನೆಟ್ ಸಂಪರ್ಕ ತೆಗೆದುಹಾಕಿದ ಮೇಲೆ ರೈತ ಮುಖಂಡರು ತಮ್ಮ ವ್ಯಾನ್‌ಗಳಲ್ಲಿ ತೆರಳಿ ಮಾಹಿತಿ ನೀಡಲು ಆರಂಭಿಸಿದರು. ಯಾವ ಯಾವ ಗಡಿಗಳಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡುತ್ತಾ, ಪ್ರತಿಭಟನೆ ಹತ್ತಿಕ್ಕಲು ಆಡಳಿತ ವ್ಯವಸ್ಥೆ ಕುತಂತ್ರ ನಡೆಸುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರು.

- Advertisement -
- Advertisement -

ಜನವರಿ 26ರ ಈ ಬಾರಿಯ ಕಿಸಾನ್ ಗಣರಾಜ್ಯೋತ್ಸವ ಮಾಧ್ಯಮಗಳಲ್ಲಿ ಹೆಚ್ಚು ಚರ್ಚಿತವಾಗುತ್ತಿದೆ. ಟ್ರ್ಯಾಕ್ಟರ್ ಪರೇಡ್ ಬಳಿಕ ದೇಶದಲ್ಲಿ ರೈತ ಪ್ರತಿಭಟನೆ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ವಿದೇಶಿ ಸರ್ಕಾರ ಹಾಗೂ ಮಾಧ್ಯಮಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ದೇಶದ ನಾಗರಿಕರು ಹಲವು ರೀತಿಯಲ್ಲಿ ಈ ಹೋರಾಟವನ್ನು ನೋಡುತ್ತಿದ್ದಾರೆ. ಇಷ್ಟು ದಿನ ಸಿಂಘು ಮತ್ತು ಟಿಕ್ರಿ ಗಡಿಗಳು ಹೆಚ್ಚು ಸದ್ದಾಗುತ್ತಿದ್ದವು. ಆದರೆ ಈ ಬಾರಿ ಗಾಝಿಪುರ್ ಗಡಿಯ ಪ್ರತಿಭಟನೆ ಎಲ್ಲರ ಗಮನ ಸೆಳೆದಿದ್ದು, ಕೇಂದ್ರಬಿಂದುವಾಗಿ ಪರಿಣಮಿಸಿದೆ.

ಆಡಳಿತ ವ್ಯವಸ್ಥೆ ಹೋರಾಟವನ್ನು ಹತ್ತಿಕ್ಕುವ ಹಲವು ಪ್ರಯತ್ನಗಳನ್ನು ನಡೆಸುತ್ತಿದೆ. ಬಜೆಟ್ ಅಧಿವೇಶನದ ನೆಪ ಇಟ್ಟುಕೊಂಡು ರೈತ ಮುಖಂಡರ ಜೊತೆಗಿನ ಮಾತುಕತೆಯನ್ನು ಮುಂದೂಡಲಾಗಿದೆ. ಈ ನಡುವೆಯೇ ಪ್ರತಿಭಟನಾಕಾರರನ್ನು ಒಕ್ಕಲೆಬ್ಬಿಸುವ ಪ್ರಯತ್ನಗಳು ಹಲವು ಬಾರಿ ನಡೆದು ವಿಫಲವಾಗಿವೆ. ಸಾಮಾಜಿಕ ಮಾಧ್ಯಮಗಳು ಮತ್ತು ಸ್ವತಂತ್ರ ಸುದ್ದಿ ಮಾಧ್ಯಮಗಳ ವರದಿಗಳಿಂದಾಗಿ ಪ್ರತಿಭಟನೆ ದೇಶ ವಿದೇಶಗಳಲ್ಲಿ ಮತ್ತಷ್ಟು ಜನರ ಗಮನ ಸೆಳೆದಿದೆ.

ಟ್ರ್ಯಾಕ್ಟರ್ ಪರೇಡ್‌ನ ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತ ನಾಯಕರ ಮೇಲೆ ದೂರು ದಾಖಲಿಸಲಾಗಿತ್ತು. ಘಟನೆಯ ನೈತಿಕ ಹೊಣೆ ಹೊತ್ತು ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ಫೆಬ್ರವರಿ ಒಂದರಂದು ನಡೆಯಬೇಕಿದ್ದ ಪಾರ್ಲಿಮೆಂಟ್ ಚಲೋ ಪಾದಯಾತ್ರೆಯನ್ನು ಮುಂದೂಡಿದ್ದರು. ಜೊತೆಗೆ ಹುತಾತ್ಮ ದಿನದಂದು (ಜನವರಿ 30) ಉಪವಾಸ ಸತ್ಯಾಗ್ರಹ ನಡೆಸಿದರು.

ಇತ್ತ, ಕಿಸಾನ್ ಗಣರಾಜ್ಯೋತ್ಸವದ ಘಟನೆಯ ಲಾಭ ಪಡೆಯಲು ಮುಂದಾದ ಸರ್ಕಾರ, ಕೊಂಚ ಮಟ್ಟಿಗೆ ಕಡಿಮೆ ಸಂಖ್ಯೆಯ ರೈತರಿದ್ದ ದೆಹಲಿ-ಉತ್ತರ ಪ್ರದೇಶ ಹೆದ್ದಾರಿಯ ಚಿಲ್ಲಾ ಬಾರ್ಡರ್‌ನಲ್ಲಿ ರೈತರನ್ನು ಬಲವಂತವಾಗಿ ಹೊರಹಾಕಲು ಪ್ರಯತ್ನಿಸಿತು. ಪೊಲೀಸರ ಸಹಾಯದೊಂದಿದೆ ರೈತರನ್ನು ಹೆದರಿಸಿ, ಲಾಠಿ ಪ್ರಹಾರ ನಡೆಸಿ ಅಲ್ಲಿಂದ ಓಡಿಸಲಾಯಿತು. ತಮ್ಮ ಟೆಂಟ್, ಟ್ರ್ಯಾಲಿಗಳನ್ನು ಅಲ್ಲಿಯೇ ಬಿಟ್ಟು ಹಲವು ರೈತರು ಚಿಲ್ಲಾ ಬಾರ್ಡರ್ನಿಂದ ತಮ್ಮ ಹಳ್ಳಿಗಳಿಗೆ, ಮತ್ತೆ ಕೆಲವರು ಗಾಜಿಪುರ್ ಬಾರ್ಡರ್‌ಗಳಿಗೆ ತಲುಪಿದರು. ಅಲ್ಲಿದ್ದ ಅನ್ಯರಾಜ್ಯದ ಜನರನ್ನು ರೈತರು ತಮ್ಮ ಮನೆಗಳಿಗೆ ಕರೆದುಕೊಂಡು ಹೋದ ಘಟನೆಗಳು ಸಂಭವಿಸಿವೆ.

ಚಿಲ್ಲಾ ಬಾರ್ಡರ್‌ನಲ್ಲಿ ರೈತರನ್ನು ಒಕ್ಕಲೆಬ್ಬಿಸಿದ ಖುಷಿಯಲ್ಲಿ ಗಾಝಿಪುರ್ ಬಾರ್ಡರ್ ಕಡೆಗೆ ಸರ್ಕಾರದ ಗಮನ ಹರಿಯಿತು. ಅಲ್ಲಿಗೆ ವಿದ್ಯುಚ್ಛಕ್ತಿ ಮತ್ತು ನೀರಿನ ಸರಬರಾಜನ್ನು ಉತ್ತರ ಪ್ರದೇಶ ಸರ್ಕಾರ ನಿಲ್ಲಿಸಿತು. ಪೊಲೀಸರು ರೈತರನ್ನು ಓಡಿಸಲು ಪ್ರಯತ್ನ ನಡೆಸಿದರು. ಆದರೆ, ಅವರ ಈ ಪ್ರಯತ್ನ ಸರ್ಕಾರ ಮತ್ತು ಪೊಲೀಸರಿಗೆ ಮುಳುವಾಗಿ ಬದಲಾಯಿತು.

ರೈತರ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ ಭಾರತೀಯ ಕಿಸಾನ್ ಯೂನಿಯನ್ ಟಿಕಾಯತ್ ಬಣದ ಮುಖಂಡ ರಾಕೇಶ್ ಟಿಕಾಯತ್ ಮಾಡಿದ ಭಾವುಕ ಭಾಷಣ ಇಡೀ ಉತ್ತರಪ್ರದೇಶದ ರೈತರಲ್ಲಿ ಹೊಸ ಹುರುಪು ತುಂಬಿತು. ರಾಕೇಶ್ ಟಿಕಾಯತ್ ಅವರ ಕಣ್ಣೀರು ಗಾಝಿಪುರ್ ಪ್ರತಿಭಟನಾ ಸ್ಥಳಕ್ಕೆ ರೈತರ ಸಾಗರವನ್ನೇ ಹರಿಸಿತು. ಟಿಕಾಯತ್ ಮಾತು ಕೇಳಿ ಸಿಂಘು ಮತ್ತು ಟಿಕ್ರಿ ಗಡಿ ಭಾಗಗಳಿಂದ ಪ್ರತಿಭಟನಾ ನಿರತ ಯುವಜನತೆ ರಾತ್ರೋರಾತ್ರಿ ತಮ್ಮ ಟ್ರ್ಯಾಲಿಗಳಲ್ಲಿ ಗಾಜಿಪುರ್ ಗಡಿಯನ್ನು ತಲುಪಿ ರೈತರಿಗೆ ರಕ್ಷಣೆ ಮತ್ತು ಬೆಂಬಲ ನೀಡಿದರು. ಮರುದಿನ ಉತ್ತರ ಪ್ರದೇಶದ ಹಳ್ಳಿಗಳಲ್ಲಿ ನಡೆದ ಮಹಾ ಪಂಚಾಯತ್ ಸಭೆಗಳಲ್ಲಿ ಸಾವಿರಾರು ಜನರು ಸೇರಿದ್ದರು. ಗಾಝಿಪುರ್‌ಗೆ 10 ಸಾವಿರಕ್ಕೂ ಹೆಚ್ಚು ಜನರು ಬಂದು ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳಲು ಸಾಧ್ಯವಾಯಿತು. ನಂತರ ಗಾಝಿಪುರ್ ಗಡಿ ಭಾಗಕ್ಕೆ ದೆಹಲಿಯ ಕೇಜ್ರಿವಾಲ್ ಸರ್ಕಾರ ನೀರಿನ ವ್ಯವಸ್ಥೆ ಮಾಡಿತ್ತು. ಇದನ್ನೂ ಪೊಲೀಸರು ತಡೆದಿದ್ದರು. ಬಳಿಕ ಸ್ಥಳೀಯರೇ ರೈತರ ಸಹಾಯಕ್ಕೆ ನಿಂತರು.

ಇಷ್ಟರಲ್ಲಾಗಲೇ ಕೆಲವು ಕಾರ್ಪೊರೆಟ್ ಹಿಡಿತದ ಮಾಧ್ಯಮಗಳು ಮತ್ತು ಕೇಂದ್ರ ಸರ್ಕಾರದ ಆಡಳಿತ ಪಕ್ಷದ ಐಟಿ ಸೇನೆ, ಗಡಿಗಳು ಖಾಲಿಯಾಗುತ್ತಿವೆ, ರೈತರು ತಮ್ಮ ತಮ್ಮ ಊರುಗಳಿಗೆ ತೆರಳುತಿದ್ದಾರೆ ಎಂಬ ವದಂತಿ ಹಬ್ಬಿಸಲು ಆರಂಭಿಸಿದ್ದವು. ಪರೇಡ್‌ಗಾಗಿ ಬಂದಿದ್ದ ಟ್ರ್ಯಾಕ್ಟರ್‌ಗಳು ವಾಪಸ್ ಹೋಗುತ್ತಿದದ್ದನ್ನು ರೈತರೇ ವಾಪಸ್ ಹೋಗುತ್ತಿದ್ದಾರೆ ಎಂದು ಪ್ರತಿಪಾದಿಸಲಾಯಿತು. ಪ್ರತಿಭಟನಾ ಸ್ಥಳಗಳಾದ ಸಿಂಘು, ಟಿಕ್ರಿ, ಶಹಾಜಾನ್‌ಪುರ್ ಮತ್ತು ಗಾಝಿಪುರ್ ಗಡಿಗಳಲ್ಲಿ ಇಂಟರ್‌ನೆಟ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು. ರೈತ ಹೋರಾಟದ ವಾಸ್ತವ ಸುದ್ದಿಗಳು ಜನರನ್ನು ತಲುಪದಿರಲು ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ರೈತರು ಕೊಂಚಮಟ್ಟಿಗೆ ಆತಂಕಕ್ಕೆ ಒಳಗಾಗಿದ್ದರು. ಮನೆಗಳಲ್ಲಿ ಮಾಧ್ಯಮಗಳ ಸುದ್ದಿಯನ್ನು ನೋಡಿ ಕರೆ ಮಾಡುವವರ ಸಂಖ್ಯೆ ಹೆಚ್ಚಾದಂತೆ ಪ್ರತಿಭಟನಾಕಾರರಲ್ಲೂ ಬೇಸರ ಶುರುವಾಗಿತ್ತು. ಇದನ್ನು ರೈತ ಮುಖಂಡರು ಉತ್ತಮ ರೀತಿಯಲ್ಲಿ ಬಗೆಹರಿಸುವಲ್ಲಿ ಸಫಲರಾದರು.

ಸರ್ಕಾರ ಇಂಟರ್‌ನೆಟ್ ಸಂಪರ್ಕ ತೆಗೆದುಹಾಕಿದ ಮೇಲೆ ರೈತ ಮುಖಂಡರು ತಮ್ಮ ವ್ಯಾನ್‌ಗಳಲ್ಲಿ ತೆರಳಿ ಮಾಹಿತಿ ನೀಡಲು ಆರಂಭಿಸಿದರು. ಯಾವ ಯಾವ ಗಡಿಗಳಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡುತ್ತಾ, ಪ್ರತಿಭಟನೆ ಹತ್ತಿಕ್ಕಲು ಆಡಳಿತ ವ್ಯವಸ್ಥೆ ಕುತಂತ್ರ ನಡೆಸುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರು.

ಈ ಬಾರಿ ಉತ್ತರಪ್ರದೇಶ ಮತ್ತು ಹರಿಯಾಣದ ರೈತರು ಪ್ರತಿಭಟನಾ ಸ್ಥಳಗಳಿಗೆ ಬರಲು ಆರಂಭಿಸಿದರು. ಟ್ರ್ಯಾಕ್ಟರ್ ಮಾರ್ಚ್ ಮುಗಿಸಿ ಮನೆಗೆ ತೆರಳಿದ್ದ ಟ್ರ್ಯಾಕ್ಟರ್‌ಗಳು ಮಾಧ್ಯಮಗಳ ಸುದ್ದಿ ನೋಡಿ ಮತ್ತೆ ಬಾರ್ಡರ್ ಕಡೆಗೆ ಮುಖ ಮಾಡಿದವು. ಸಾವಿರಾರು ಸಂಖ್ಯೆಯಲ್ಲಿ ಟ್ರ್ಯಾಕ್ಟರ್‌ಗಳು ಟಿಕ್ರಿ ಮತ್ತು ಗಾಝಿಪುರ್ ಗಡಿಗಳಿಗೆ ಬರಲಾರಂಭಿಸಿದವು. ಹರಿಯಾಣದ ಪ್ರತಿ ಮನೆಗಳಿಂದ ಒಬ್ಬರು ಪ್ರತಿಭಟನಾ ಸ್ಥಳಕ್ಕೆ ಹೋಗಲೇಬೇಕು ಎಂಬ ಜನಾದೇಶ ಜಾರಿಯಾಯಿತು. ಪಂಚಾಯತ್ ಸಭೆಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಲಾರಂಭಿಸಿದರು. ರೈತ ಮುಖಂಡರು ಜನರನ್ನು ಒಂದೆಡೆ ಸೇರಿಸುವಲ್ಲಿ ಸಫಲರಾದರು.

ಪ್ರತಿಭಟನಾ ಸ್ಥಳಗಳಲ್ಲಿ ಪೊಲೀಸರು ಮತ್ತು ಸರ್ಕಾರದ ಬೆಂಬಲಿಗರು ರೈತರ ಮೇಲೆ ಹಲ್ಲೆ ನಡೆಸುತ್ತಿರುವ ವಿಚಾರ ಎಲ್ಲಾ ಗಡಿಗಳಲ್ಲಿ ತಿಳಿದ ಮೇಲೆ ಸ್ವಯಂ ರಕ್ಷಣ ಪಡೆಗಳ ಸಂಖ್ಯೆಯನ್ನು ಹೆಚ್ಚು ಮಾಡಲಾಯಿತು. ಮೂರು ಟ್ರ್ಯಾಲಿಗಳಿಗೆ ಇಬ್ಬರಂತೆ ಸ್ವಯಂಸೇವಕರನ್ನು (ವಾಲೆಂಟಿಯರ್ ಪೊಲೀಸ್) ಪಾಳಿಯಲ್ಲಿ ಕಾರ್ಯ ನಿರ್ವಹಿಸಲು ಸೂಚಿಸಲಾಯಿತು. ಇಡೀ ರಾತ್ರಿ ಜಾಗರಣೆ ಮಾಡುವ ಮೂಲಕ ಪಹರೆ ಕಾಯುವುದು ಇವರ ಕೆಲಸವಾಗಿದೆ.

ಸಿಂಘು ಗಡಿಯಲ್ಲಿರುವ ಸಂಯುಕ್ತ ಕಿಸಾನ್ ಮಜ್ದೂರ್ ಸಂಘರ್ಷ ಕಮಿಟಿಯ ಸದಸ್ಯರು ಕೆಲ ಬಿಜೆಪಿ ಬೆಂಬಲಿಗರ ಜೊತೆ ಸೇರಿ ಕೆಂಪುಕೋಟೆ ಪ್ರಕರಣ ನಡೆದು ಕಿಸಾನ್ ಆಂದೋಲನಕ್ಕೆ ಕಪ್ಪು ಚುಕ್ಕೆ ಬಂತು ಎಂದು ಹಲವು ರೈತರು ಆರೋಪಿಸಿದ್ದಾರೆ. ಇದರಿಂದ ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯರು ಮತ್ತು ಸಂಯುಕ್ತ ಕಿಸಾನ್ ಮಜ್ದೂರ್ ಸಂಘರ್ಷ ಕಮಿಟಿಯ ಸದಸ್ಯರ ನಡುವೆ ಹಲವು ಚಿಕ್ಕ-ಪುಟ್ಟ ಜಟಾಪಟಿ ನಡೆಯಿತು. ಇದನ್ನೂ ಸರ್ಕಾರ ತನ್ನ ಲಾಭಕ್ಕೆ ಬಳಕೆ ಮಾಡಿಕೊಳ್ಳಲು ಮುಂದಾಯಿತು. ಆಡಳಿತ ಪಕ್ಷ ತನ್ನ ಬೆಂಬಲಿಗರನ್ನು ಸ್ಥಳೀಯರು ಎಂದು ಬಿಂಬಿಸಿ ಕಲ್ಲು ತೂರಾಟ ನಡೆಸಿತು. ಇದೇ ನೆಪದಲ್ಲಿ ಬ್ಯಾರಿಕೇಡ್‌ಗಳ, ಪೊಲೀಸರ ಸಂಖ್ಯೆ ಹೆಚ್ಚಿಸಿತು. ಜೊತೆಗೆ ಪ್ರತಿಭಟನಾ ಸ್ಥಳಗಳಿಂದ ದೆಹಲಿಯನ್ನು ಸಂಪರ್ಕಿಸುತ್ತಿದ್ದ ರಸ್ತೆಗಳು, ಪ್ರತಿಭಟನಾ ಸ್ಥಳಗಳಿಗೆ ಬೆಂಬಲಿಗರು ಹೋಗಲು ಇದ್ದ ದಾರಿಗಳನ್ನು ಬಂದ್ ಮಾಡಲಾಗಿದೆ.

ಬಾರ್ಡರ್‌ಗಳಿಗೆ ಭೇಟಿ ನೀಡಿ ಸುದ್ದಿ ಮಾಡುತ್ತಿದ್ದ ಪರ್ತಕತ್ರರನ್ನು ಬೆದರಿಸುವುದು ಮತ್ತು ಬಂಧಿಸುವುದನ್ನ ಪೊಲೀಸರು ಆರಂಭಿಸಿದ್ದರು. ಕಾರವಾನ್ ಪತ್ರಿಕೆಗೆ ಬರೆಯುವ ಸ್ವತಂತ್ರ ಪತ್ರಕರ್ತ ಮಂದೀಪ್ ಪುನಿಯಾ ಸೇರಿದಂತೆ ಮೂವರು ಪತ್ರಕರ್ತರನ್ನು ಬಂಧಿಸಲಾಗಿತ್ತು. ನಂತರ ಇಬ್ಬರನ್ನು ಬಿಡುಗಡೆ ಮಾಡಲಾಯಿತು. ಆದರೆ ಮಂದೀಪ್ ಪುನಿಯಾಗೆ ನಾಲ್ಕು ದಿನಗಳ (ಫೆಬ್ರವರಿ 2) ಬಳಿಕ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. ಇವರ ಮೇಲೆ ಪೊಲೀಸರೊಂದಿಗೆ ಕೆಟ್ಟದಾಗಿ ವರ್ತಿಸಿದ ಆರೋಪ ಹೊರಿಸಲಾಗಿತ್ತು.

ಕೆಂಪುಕೋಟೆ ಪ್ರಕರಣವನ್ನು ತನಿಖೆ ಮಾಡುತ್ತಿರುವ ಪೊಲೀಸ್ ಇಲಾಖೆ ಗೊತ್ತು ಗುರಿ ಇಲ್ಲದೆ ರೈತರನ್ನು ಬಂಧಿಸಿದೆ. ಈವರೆಗೆ ಸುಮಾರು ಎರಡು ಸಾವಿರ ರೈತರ ಮೇಲೆ ಎಫ್‌ಐಆರ್ ದಾಖಲಿಸಿದೆ. ಪ್ರತಿಭಟನಾ ಸ್ಥಳಗಳಿಂದ ಮುನ್ನೂರಕ್ಕೂ ಹೆಚ್ಚು ಮಂದಿ ರೈತರು ಕಾಣೆಯಾಗಿದ್ದಾರೆ. ಪ್ರಕರಣದಲ್ಲಿ ಯಾರನ್ನು ಬಂಧಿಸಲಾಗಿದೆ ಎಂಬ ಮಾಹಿತಿಯನ್ನು ಪೊಲೀಸರು ನೀಡುತ್ತಿಲ್ಲ. ಇನ್ನು ಟ್ರ್ಯಾಕ್ಟರ್ ಪರೇಡ್‌ನಲ್ಲಿ ಭಾಗವಹಿಸದೇ ಇರುವವರನ್ನು ಕೂಡ ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಬುರಾಡಿ ಮೈದಾನದಿಂದ ಸಿಂಘು ಗಡಿ ಕಡೆಗೆ ತೆರಳುತ್ತಿದ್ದ 20ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ. ಮೊಗ್ಗಾ ಜಿಲ್ಲೆಯಿಂದ 19 ಮಂದಿ ಕಾಣೆಯಾಗಿದ್ದಾರೆ. ಒಟ್ಟಾರೆ ಪಂಜಾಬ್ ಟ್ರಿಬ್ಯೂನಲ್ ವರದಿ ಮಾಡಿದಂತೆ ನೂರು ಜನ ಲೆಕ್ಕಕ್ಕೆ ಸಿಗುತ್ತಾರೆ. ಕಾಣೆಯಾಗಿರುವ ಇತರರ ಬಗ್ಗೆ ಮಾಹಿತಿ ಪಡೆಯುವ ಉದ್ದೇಶದಿಂದ ಸಂಯುಕ್ತ ಕಿಸಾನ್ ಏಕ್ತಾ ಮೋರ್ಚಾ ಎಲ್ಲ ಊರುಗಳಲ್ಲಿ ಮತ್ತು ಪ್ರತಿಭಟನಾ ಸ್ಥಳಗಳಲ್ಲಿ ಯಾರು ಕಾಣೆಯಾಗಿದ್ದಾರೆ ಮಾಹಿತಿ ನೀಡಿ ಎಂದು ಪ್ರಕಟಣೆ ಹೊರಡಿಸಿ ಮಾಹಿತಿ ಸಂಗ್ರಹಿಸುತ್ತಿದೆ. ಪ್ರತಿಭಟನಾ ಸ್ಥಳದಲ್ಲಿ ಆರಂಭವಾಗಿರುವ ಟ್ರಾಲಿ ಟೈಮ್ಸ್ ಪತ್ರಿಕೆ ಕೂಡ ಕಾಣೆಯಾದವರ ಬಗ್ಗೆ ಮಾಹಿತಿ ಕೆದಕುತ್ತಿದ್ದು, ತಿಳಿದವರ ವಿವರವನ್ನು ಪ್ರಕಟಿಸುತ್ತಿದೆ.

ಗಡಿಗಳಲ್ಲಿ ರೈತ ಪ್ರತಿಭಟನೆಗೆ ಬೆಂಬಲಿಸಲು ತೆರಳುವವರಿಗೆ ಸಾಧ್ಯವಾಗದಂತೆ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಬ್ಯಾರಿಕೇಡ್‌ಗಳನ್ನು ಹೆಚ್ಚು ಮಾಡಲಾಗಿದೆ. ಸ್ಥಳೀಯರಿಗೂ ಓಡಾಡಲು ಅವಕಾಶ ನೀಡುತ್ತಿಲ್ಲ. ಸಿಂಘು ಬಾರ್ಡರ್‌ನಲ್ಲಿ ಇರುವ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಸಂಯುಕ್ತ ಕಿಸಾನ್ ಮಜ್ದೂರ್ ಸಂಘರ್ಷ ಕಮಿಟಿಯ ವೇದಿಕೆಗಳ ನಡುವೆಯೇ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು ಓಡಾಟವನ್ನು ನಿರ್ಬಂಧಿಸಲಾಗಿದೆ. ಈಗ ಅಲ್ಲಿಯೇ ಕಾಂಕ್ರಿಟ್ ಗೋಡೆಯನ್ನು ಕಟ್ಟಲಾಗುತ್ತಿದೆ. ದೆಹಲಿ ಕಡೆ ಇರುವ ಕಿಸಾನ್ ಮಜ್ದೂರ್ ಸಂಘರ್ಷ ಕಮಿಟಿಯ ಜನರ ಲಂಗರ್‌ಗಳು ಹರಿಯಾಣ ಭಾಗದಲ್ಲಿರುವ ಸಂಯುಕ್ತ ಕಿಸಾನ್ ಮೋರ್ಚಾ ವೇದಿಕೆಯ ಕಡೆ ಇದ್ದು ಪ್ರತಿಭಟನಾಕಾರರು ಊಟ ಉಪಚಾರಗಳಿಗೆ ಸುಮಾರು 2 ಕಿಲೋಮೀಟರ್ ಓಡಬೇಕಾಗಿದೆ. ಸಿಂಘು ಗಡಿ ಭಾಗದಲ್ಲಿರುವ ಸ್ಥಳೀಯರು ಕೂಡ ಐದಾರು ಕಿಲೋಮೀಟರ್ ನಡೆದರೆ ಮಾತ್ರ ಅವರಿಗೆ ತಮ್ಮ ಕೆಲಸದ ಸ್ಥಳಗಳಿಗೆ ಸೇರಲು ಸಾಧ್ಯವಾಗುತ್ತದೆ. ಇದರ ಜೊತೆಗೆ ನಡೆದುಕೊಂಡು ಹೋಗಲು ಇದ್ದ ಮಾರ್ಗಗಳಲ್ಲೂ ಪೊಲೀಸರು ಗುಂಡಿಗಳನ್ನು ತೋಡಿ ಸಂಚಾರಕ್ಕೆ ಅಡಚಣೆ ಮಾಡಿದ್ದಾರೆ. ಈ ಮೂಲಕ ಸ್ಥಳೀಯರಲ್ಲಿ ಪ್ರತಿಭಟನಾಕಾರರ ಮೇಲೆ ಆಕ್ರೋಶ ಮೂಡಿಸುವ ಉಪಾಯ ಸರ್ಕಾರದ್ದು ಎಂದು ರೈತರು ಆರೋಪಿಸುತ್ತಾರೆ.

ಗಾಝಿಪುರ್ ಗಡಿಯಲ್ಲಿ ರೈತರ ಟ್ರ್ಯಾಕ್ಟರ್‌ಗಳು ಮತ್ತು ಟ್ರ್ಯಾಲಿಗಳು ಒಳ ಬರದಂತೆ ತಡೆಯಲು ರಸ್ತೆಯಲ್ಲಿ ಕಬ್ಬಿಣದ ಕಂಬಿಗಳನ್ನು ನೆಡಲಾಗಿದೆ.

ಇತ್ತ ಟಿಕ್ರಿ ಗಡಿ ಭಾಗದಲ್ಲಿ ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಇದನ್ನು ತಡೆಯಲು ಹೆದ್ದಾರಿಯಲ್ಲಿಯೇ ಕಂಟೈನರ್‌ಗಳ ಪಕ್ಕ ದೊಡ್ಡ ದೊಡ್ಡ ಗುಂಡಿಗಳನ್ನು ತೆಗೆಯಲಾಗುತ್ತಿದೆ. ರೈತರು ತಮ್ಮ ಟ್ರ್ಯಾಕ್ಟರ್‌ಗಳಿಂದ ಈ ಗುಂಡಿಗಳನ್ನು ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದ್ದಾರೆ. ಆಡಳಿತ ವ್ಯವಸ್ಥೆಯ ಈ ಕುತಂತ್ರಗಳು ನಮ್ಮ ಮುಂದೆ ನಡೆಯುವುದಿಲ್ಲ ಎಂಬ ವಿಶ್ವಾಸದಲ್ಲಿದ್ದಾರೆ ರೈತರು.

ಶಾಂತಿಯುತವಾಗಿ ಕಳೆದ 70 ದಿನಗಳಿಂದ ನಡೆಯುತ್ತಿರುವ ರೈತ ಹೋರಾಟವನ್ನು ಅಶಾಂತಿಗೊಳಿಸಲು ಸರ್ಕಾರದ ಆಡಳಿತ ಪಕ್ಷ ಮತ್ತದರೆ ಬೆಂಬಲಿಗರು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಪ್ರಯತ್ನಗಳು ನಮ್ಮ ಹೋರಾಟವನ್ನು ಮತ್ತಷ್ಟು ಬಲಪಡಿಸುತ್ತಿದೆ ಎನ್ನುತ್ತಾರೆ ರೈತರು. ಇಷ್ಟು ದಿನ ಕರಾಳ ಕಾನೂನುಗಳನ್ನು ರದ್ದು ಮಾಡಿಸಲು ನಡೆಯುತ್ತಿದ್ದ ಹೋರಾಟ ಈಗ ಸಾವು ಮತ್ತು ಬದುಕಿನ ಹೋರಾಟವಾಗಿಯೂ ಬದಲಾಗಿದೆ. ನಮ್ಮ ಹೋರಾಟಕ್ಕೆ ಮತ್ತಷ್ಟು ಬಲ ತುಂಬುತ್ತಿರುವ ಸರ್ಕಾರಕ್ಕೆ ಧನ್ಯವಾದಗಳು, ನಾವು ಇಲ್ಲಿಂದ ಕದಲುವ ಮಾತು ಇಲ್ಲ. ಸಮಸ್ಯೆಗಳು ಎಷ್ಟೇ ಬರಲಿ ಎದುರಿಸುತ್ತೇವೆ ಎನ್ನುತ್ತಾರೆ ಪ್ರತಿಭಟನಾನಿರತ ರೈತರು.

ಕಳೆದೆರಡು ತಿಂಗಳು ಇದ್ದ ಬೆಂಬಲಕ್ಕೂ ಈಗಿನ ಬೆಂಬಲಕ್ಕೂ ವ್ಯತ್ಯಾಸ ಹೆಚ್ಚು ಗೋಚರಿಸುತ್ತಿದೆ. ಜನ ಮತ್ತಷ್ಟು ತಂಡ ತಂಡವಾಗಿ ಗಡಿಗಳಿಗೆ ಬರುತ್ತಿದ್ದಾರೆ. ರಾಕೇಶ್ ಟಿಕಾಯತ್ ಭಾಷಣದ ಬಳಿಕ ಉತ್ತರ ಪ್ರದೇಶ ಮತ್ತು ಹರಿಯಾಣದ ರೈತರು ಸಾವಿರಾರು ಸಂಖ್ಯೆಯಲ್ಲಿ ಟಿಕ್ರಿ ಮತ್ತು ಗಾಝಿಪುರ್ ಗಡಿಗಲ್ಲಿ ಜಮಾಯಿಸಿದ್ದಾರೆ. ಪಂಜಾಬ್‌ನಲ್ಲಿ ಕಳೆದ ಸೆಪ್ಟಂಬರ್‌ನಲ್ಲಿ ಆರಂಭವಾದ ಈ ಹೋರಾಟ ದೆಹಲಿಯಲ್ಲಿ ಮತ್ತಷ್ಟು ತಿಂಗಳುಗಳು ನಡೆಯುವ ಮುನ್ಸೂಚನೆ ನೀಡಿದೆ. ರೈತರು ತಿಂಗಳುಗಳಲ್ಲ ವರ್ಷವಾದರೂ ಸರಿ ನಾವು ಇಲ್ಲಿಂದ ಕದಲುವುದಿಲ್ಲ. ಇದು ನಮ್ಮ ಅನ್ನದ ಪ್ರಶ್ನೆ. ಮೂರು ಕೃಷಿ ಕಾಯ್ದೆಗಳು ರದ್ದಾಗಿ, ನಮ್ಮ ಹಕ್ಕು ಸಿಗುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎನ್ನುತ್ತಾರೆ.


ಇದನ್ನೂ ಓದಿ: ರೈತರಿಗೆ ಬೆಂಬಲ: ಹರಿಯಾಣದ ಪ್ರತಿ ಹಳ್ಳಿಗೂ ಹರಡಿದ ಮಹಾಪಂಚಾಯತ್ – ಗ್ರೌಂಡ್ ರಿಪೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...