Homeಮುಖಪುಟಸೇತುಮಾನ್: ಫ್ಯೂಡಲ್ ಸಮುದಾಯದ ಒಣ ಪ್ರತಿಷ್ಠೆ, ಹೇಡಿತನ, ಕ್ರೌರ್ಯದ ಅನಾವರಣ

ಸೇತುಮಾನ್: ಫ್ಯೂಡಲ್ ಸಮುದಾಯದ ಒಣ ಪ್ರತಿಷ್ಠೆ, ಹೇಡಿತನ, ಕ್ರೌರ್ಯದ ಅನಾವರಣ

- Advertisement -
- Advertisement -

ಇದುವರೆಗೂ ನಾವು ನೋಡುತ್ತಾ ಬಂದಿರುವ ಬಹುಪಾಲು ಸಿನಿಮಾ, ಓದುತ್ತಾ ಬಂದಿರುವ ಸಾಹಿತ್ಯ ಹಾಗೂ ಇನ್ನಿತರ ಕಲಾ ಪ್ರಕಾರಗಳ ಸಾಂಗತ್ಯ, ಅವುಗಳಿಗೆ ಬಂದ ವಿಮರ್ಶೆ, ಚರ್ಚೆ, ಸಂವಾದಗಳು ಮತ್ತು ಇವುಗಳ ಪ್ರಭಾವದಿಂದ ನಮ್ಮಲ್ಲಿ ಆಳವಾಗಿ ಬೇರೂರಿವ ಅಭಿರುಚಿಗಳನ್ನು ಇವತ್ತಿಗೆ ಮತ್ತೊಮ್ಮೆ ಪರಾಮರ್ಶಿಸಿಕೊಳ್ಳಬೇಕಾದ ಜರೂರು ಇದೆ. ನಮ್ಮ ವಾಸ್ತವದ ಬದುಕು, ಸಮಾಜ, ವ್ಯವಸ್ಥೆ, ಪರಿಸರಗಳನ್ನ ಕಲಾ ಮಾಧ್ಯಮಗಳಲ್ಲಿ ಪ್ರತಿಬಿಂಬಿಸಿ, ಕಲಾರಸಿಕನ ಅಲೋಚನೆ ಮತ್ತು ಅಭಿರುಚಿಗಳನ್ನು ಬೆಳೆಸಬೇಕಾದ ಪ್ರಾಥಮಿಕ ಜವಾಬ್ದಾರಿ ಇವುಗಳ ನಿರ್ಮಾತೃಗಳಿಗಿದೆ. ಆದರೆ ಹೆಚ್ಚಿನ ಬಾರಿ ಈ ಕಲಾ ಮಾಧ್ಯಮಗಳು ಅಗ್ಗದ ಮನರಂಜನೆಗೆ ಸೀಮಿತವಾಗಿದ್ದು ಮಾತ್ರ ದುರಂತ. ನಮ್ಮ ವಾಸ್ತವದ ಬದುಕು, ವ್ಯವಸ್ಥೆಯಲ್ಲಿರುವ ಅಸಮಾನತೆ, ದೌರ್ಜನ್ಯಗಳನ್ನು ಇವುಗಳು ಒಳಗೊಳ್ಳಲೇ ಇಲ್ಲವೆಂದಲ್ಲ. ಆದರೆ, ಆಳದ ಪ್ರಜ್ಞೆಯಿಂದ ಕಾರ್ಯಕಾರಣಗಳ ಸಮೇತ ಸಮರ್ಪಕವಾಗಿ ಅದನ್ನು ನಿರ್ವಹಿಸಲಿಲ್ಲ ಮತ್ತು ಸಮಾಜದ ಎಲ್ಲಾ ಸಮುದಾಯವನ್ನು ಪ್ರತಿನಿಧಿಸಲು ಅವಕ್ಕೆ ಸಾಧ್ಯವಾಗಿಲ್ಲ. ಈ ಪರಂಪರೆಯಲ್ಲಿ ಯಜಮಾನಿಕೆ ಸಾಧಿಸಿದ್ದ ಒಂದು ಸಮುದಾಯ ಬಹುತೇಕ ಈ ಎಲ್ಲಾ ಕಲಾ ಪ್ರಕಾರಗಳು ಮತ್ತು ಅದರ ಸಂಪರ್ಕ ಸಾಧನಗಳನ್ನು ತನ್ನ ಕಪಿ ಮುಷ್ಠಿಯಲ್ಲಿಟ್ಟುಕೊಂಡಿದ್ದು, ಆ ಸಮುದಾಯದ ಪೂರ್ವಾಗ್ರಹ, ಸೀಮಿತ ತಿಳಿವಳಿಕೆ ಮತ್ತು ಹಿತಾಸಕ್ತಿಗೆ ಅನುಗುಣವಾಗಿ ಅಭಿರುಚಿಗಳು ಬೆಳೆದು ಅದೇ ಚೌಕಟ್ಟಿನಲ್ಲಿಯೇ ಸಿಲುಕಿಕೊಂಡಿವೆ.

ಕೆಲವು ಬಿಡಿ ಪ್ರಯತ್ನಗಳ ಹೊರತಾಗಿಯೂ ನಮ್ಮಲ್ಲಿ ಆಳವಾಗಿ ಬೇರೂರಿಸಿರುವ ಪೂರ್ವಾಗ್ರಹ ಪೀಡಿತ ಜಡತ್ವದ ಅಭಿರುಚಿಗಳನ್ನು ತೊಡೆದು ಹಾಕುವುದು ಕಷ್ಟದ ಕೆಲಸ. ಇದಕ್ಕೆ ಒಂದು ಸಂಘಟಿತ ಮತ್ತು ಸಾಮೂಹಿಕ ಪ್ರಯತ್ನ ಬೇಕು. ಈ ಪ್ರಯತ್ನದ ಹಾದಿಯಲ್ಲಿ ಸಿನಿಮಾ ರಂಗಕ್ಕೆ ಹೊಸ ಗ್ರಹಿಕೆ, ಹೊಸ ಕಣ್ಣೋಟ, ಹೊಸ ಸಾಧ್ಯತೆಗಳನ್ನು ತೋರಿಸುತ್ತಿರುವುದು ಪ. ರಂಜಿತ್ ಹುಟ್ಟು ಹಾಕಿರುವ ’ನೀಲಂ ಪ್ರೊಡಕ್ಷನ್’ ಎಂಬ ನಿರ್ಮಾಣ ಸಂಸ್ಥೆ. ಇದರ ಭಾಗವಾಗಿಯೇ ನಿರ್ಮಾಣಗೊಂಡ ಸಿನಿಮಾ ಸೇತುಮಾನ್.

ಸೇತುಮಾನ್ (The Pig)

ಸೇತುಮಾನ್ ವರುಗರಿ (Roasted Meat) ಮತ್ತು ಮಾಪು ಕೊಡುಕ್ಕನುನ್ಜ್ ಸಾಮಿ (Grant us pardon, Sami) ಎಂಬ ಪೆರುಮಾಳ್ ಮುರಗನ್ ಅವರ ಎರಡು ಸಣ್ಣ ಕಥೆಗಳನ್ನು ಆಧರಿಸಿದ ಸಿನಿಮಾ ಸೇತುಮಾನ್ ಮೇಲುನೋಟಕ್ಕೆ ತಾತ ಮತ್ತು ಮೊಮ್ಮಗನ ನಡುವಿನ ಪ್ರೀತಿ ಮತ್ತು ಅವಲಂಬನೆಯನ್ನು ಹೇಳುತ್ತದೆ ಅನಿಸಿದರೂ, ಅದು ಬಹಳ ಮುಖ್ಯವಾಗಿ ಅನಾವರಣಗೊಳಿಸುವುದು ಫ್ಯೂಡಲ್ ಸಮುದಾಯದ ಒಣಪ್ರತಿಷ್ಠೆ, ಸಣ್ಣತನ, ಪುಕ್ಕಲು ಸ್ವಭಾವಗಳನ್ನು. ಇಷ್ಟೆಲ್ಲ ಅಸಹ್ಯಗಳ ನಡುವೆ ಅವರಲ್ಲಿ ಇರುವ ಜಾತಿ ಕ್ರೌರ್ಯವನ್ನು ಸಣ್ಣಸಣ್ಣ ಸಂಗತಿಗಳ ಮೂಲಕ ಬಹಳ ವಿವರವಾಗಿ ನಿರ್ದೇಶಕ ’ತಮಿಳ’ ಕಟ್ಟಿಕೊಡುತ್ತಾರೆ. ಮಾಂಸದ ಸಲುವಾಗಿ ದನವನ್ನು ಕೊಂದಿದ್ದಾನೆ ಎಂಬ ಕಾರಣಕ್ಕಾಗಿ ಪೂಚ್ಚಿಯಪ್ಪನ ಮಗನನ್ನು ಊರಿನ ಮೇಲ್ಜಾತಿ ಎಂದು ಕರೆದುಕೊಳ್ಳುವ ಜನ ಕೊಂದಿದ್ದಾರೆ. ಸೊಸೆ ಇದೇ ಕೊರಗಿನಲ್ಲಿ ಮಗುವಿಗೆ ಜನ್ಮ ನೀಡುವಾಗ ಅಸುನೀಗಿದ್ದಾಳೆ. ಈಗ ಬದುಕಿನಲ್ಲಿ ಅವನಿಗೆ ಉಳಿದಿರುವುದು ಮೊಮ್ಮಗ ಕುಮರೇಸನ್ ಮಾತ್ರ. ಅವನ ಏಕೈಕ ಗುರಿ ಮೊಮ್ಮಗನನ್ನು ವಿದ್ಯಾವಂತನನ್ನಾಗಿ ಮಾಡುವುದು. ಆ ಮೂಲಕ ಈ ಜಾತಿ ದೌರ್ಜನ್ಯದಿಂದ ಮುಕ್ತನನ್ನಾಗಿಸಿದರೆ, ತನ್ನ ಮೊಮ್ಮಗ ಘನತೆಯಿಂದ ಬದುಕಲು ಸಾಧ್ಯ ಎಂಬುದು ಅವನ ನಂಬುಗೆ. ಈ ಕಾರಣಕ್ಕಾಗಿ ಅವನು ಪ್ರಬಲ ಜಾತಿಯ ವಲ್ಲೈಯಾನ್ ಹತ್ತಿರ ಕೆಲಸಕ್ಕೆ ಸೇರಿದ್ದಾನೆ.

ಪೂಚ್ಚಿಯ ಯಜಮಾನ ವಲ್ಲೈಯಾನ್‌ಗೆ ಹಂದಿ ಮಾಂಸ ತಿನ್ನುವ ಮಹದಾಸೆ. ಹಂದಿ ಮಾಂಸ ತಿಂದರೆ ದೇಹಕ್ಕೆ ಯಾವ ರೀತಿಯ ಅನುಕೂಲಗಳಿವೆ ಎಂಬುದನ್ನು ತನ್ನ ಸಂಗಡಿಗರಿಗೆ ಮನವರಿಕೆ ಮಾಡಿ ಹಂದಿ ಕಡಿದು ಮಾಂಸ ಪಾಲು ಮಾಡಿಕೊಳ್ಳಲು ಪುಸಲಾಯಿಸುತ್ತಾನೆ. ದರ್ಪ, ಪ್ರತಿಷ್ಠೆ, ಕ್ರೌರ್ಯವನ್ನೆ ಮೈದುಂಬಿಸಿಕೊಂಡಿರುವ ಈ ಫ್ಯೂಡಲ್ ಸಮುದಾಯದ ಜನ ತನ್ನ ಇಷ್ಟದ ಊಟ ಮಾಡುವುದಕ್ಕೆ ಹೇಗೆ ಹೇಡಿಗಳ ರೀತಿ ವರ್ತಿಸುತ್ತಾರೆ ಮತ್ತು ಅದೇ ಸಂದರ್ಭದಲ್ಲಿ ದಲಿತರು ತಿನ್ನುವ ಆಹಾರದ ಬಗ್ಗೆ ಅಪಹಾಸ್ಯ ಮಾಡುವ ಇವರ ಬೂಟಾಟಿಕೆ, ಒಂದು ಮರದ ರೆಂಬೆಯ ವಿಷಯವಾಗಿ ವಲ್ಲೈಯಾನ್ ಮತ್ತು ಅವನ ದಾಯಾದಿ ನಡುವೆ ನಡೆಯುವ ಜಗಳದ ದೃಶ್ಯಗಳು ಈ ಸಮುದಾಯದ ಒಣಪ್ರತಿಷ್ಠೆಯನ್ನು ಅನಾವರಣ ಮಾಡುತ್ತದೆ. ಒಂದು ಮರದ ರೆಂಬೆಗೆ ಬಡಿದಾಡಿಕೊಳ್ಳುವ ಈ ದಾಯಾದಿಗಳು, ವಲ್ಲೈಯಾನ್ ತೋಟದಲ್ಲಿ, ಹಂದಿ ಮಾಂಸದ ಪಾಲಿಗೋಸ್ಕರ ತನ್ನ ಪ್ರತಿಷ್ಠೆ ಬಿಟ್ಟು ನಿಲ್ಲುವುದಂತು ಹಾಸ್ಯದ ಜೊತೆಗೆ ಹೇಸಿಗೆ ಹುಟ್ಟಿಸುತ್ತದೆ. ಆದರೆ ಮಾಂಸಕ್ಕಾಗಿ ಈ ದಾಯಾದಿಗಳಿಬ್ಬರ ನಡುವಿನ ಜಗಳ ಮತ್ತೆ ಶುರುವಾಗುತ್ತದೆ. ಇದನ್ನು ಬಿಡಿಸಲು ಬಂದ ಪೂಚ್ಚಿ ಸಾವಿನಲ್ಲಿ ಜಗಳ ಕೊನೆಯಾಗುತ್ತದೆ. ಕೊನೆಗೆ ಕುಮರೇಸನ್ ಅನಾಥನಾಗುತ್ತಾನೆ. ಈ ರೀತಿ ಫ್ಯೂಡಲ್ ಸಮುದಾಯದ ಒಣಪ್ರತಿಷ್ಠೆ, ದರ್ಪ, ಕ್ರೌರ್ಯಕ್ಕೆ ಬಲಿಯಾಗಿರುವ ಅಸಂಖ್ಯಾತ ಪೂಚ್ಚಿಯಪ್ಪ ಮತ್ತು ಈ ಕಾರಣಗಳಿಗಾಗಿಯೇ ಅನಾಥರಾದ ಅಸಂಖ್ಯಾತ ಕುಮರೇಸನ್ ನಮ್ಮ ಕಣ್ಣು ಮುಂದೆ ಇದ್ದಾರೆ ಮತ್ತು ಇಂತ ಘಟನೆಗಳು ಪ್ರತಿ ದಿನ ಘಟಿಸುತ್ತಲೆ ಇವೆ. ಆದರೆ ಯಜಮಾನಿಕೆಯ ಸಮುದಾಯಗಳ ಕಲಾ ನಿರ್ಮಾತೃಗಳಿಗೆ ಅವೆಲ್ಲಾ ಕಾಣಿಸುವುದು ಇಲ್ಲವೇ ಇಲ್ಲವೆನ್ನುವಷ್ಟು ವಿರಳವಾದ ವಿದ್ಯಮಾನ.

ಪೂಚ್ಚಿ ತನ್ನ ಮೊಮ್ಮಗನನ್ನು ಶಾಲೆಗೆ ಬಿಡಲು ಬಂದಾಗ ಅಲ್ಲಿಯ ಶಿಕ್ಷಕ ಆತನನ್ನು ಮೂದಲಿಸುವ ದೃಶ್ಯ, ಪೂಚ್ಚಿಯ ಸಮುದಾಯ ಅಕ್ಷರ ಕಲಿಯುವುದರ ಬಗ್ಗೆ ಆ ಶಿಕ್ಷಕನಿಗೆ ಎಷ್ಟು ಅಸಹನೆ ಇದೆ ಎಂಬುದನ್ನು ತೋರಿಸುತ್ತದೆ. ಶಾಲೆಯಲ್ಲಿ ದಲಿತ ಮಕ್ಕಳ ಕೈಯಿಂದ ಖಾಸಗಿ ಕೆಲಸ ಮಾಡಿಸುವುದು; ಅವರು ತಿನ್ನುವ ಊಟವನ್ನು ಲೇವಡಿ ಮಾಡುವುದು; ಈ ತರದ ಸೂಕ್ಷ್ಮ ವಿಚಾರಗಳನ್ನು ತಮಿಳ ಮಧ್ಯೆಮಧ್ಯೆ ತರುತ್ತಾರೆ. ಶಾಲೆಯಲ್ಲಿ ಕುಮರೇಸನ್‌ನನ್ನು ನೀನು ಯಾವಯಾವ ಮಾಂಸ ತಿನ್ನುತ್ತೀಯ ಎಂದು ಪ್ರಶ್ನೆ ಕೇಳಿ ಹಾಸ್ಯ ಮಾಡುವ ಅದೇ ಫ್ಯೂಡಲ್ ಸಮುದಾಯದ ಶಿಕ್ಷಕ, ತಾನು ಹಂದಿ ಮಾಂಸ ತಿಂದ ಸಂಗತಿಯನ್ನು ಶಾಲೆಯಲ್ಲಿ ಯಾರಿಗೂ ಹೇಳಬೇಡ ಎಂದು ಅಂಗಲಾಚುತ್ತಾನೆ. ಈ ಶೂದ್ರ ಸಮುದಾಯದ ’ಬಲಿಷ್ಟ’ ಜಾತಿ ಜನರ ಬೂಟಾಟಿಕೆಯೆ ವೈದಿಕಶಾಹಿಗಳ ಬಂಡವಾಳ. ಈ ಬಲಿಷ್ಟ ಶೂದ್ರ ಸಮುದಾಯ ಪ್ರತಿದಿನ ತಾವು ವೈದಿಕರಾಗಲು ಹವಣಿಸುತ್ತಿದ್ದಾರೆ. ತಾವು ತಿನ್ನುವ ಆಹಾರದ ಬಗ್ಗೆ ಕೀಳರಿಮೆ ಇಟ್ಟುಕೊಂಡಿರುವುದು, ನಿರ್ದಿಷ್ಟ ವಾರಗಳಂದು ಮಾಂಸ ತಿನ್ನುವುದಿಲ್ಲ ಎನ್ನುವುದು, ತಮ್ಮ ಇಷ್ಟದ ಆಹಾರವನ್ನು ಕದ್ದು ಮುಚ್ಚಿ ತಿನ್ನುವ ಈ ಹೇಡಿತನದ ವಿಚಾರಗಳನ್ನು ಸಿನಿಮಾದ ದೃಶ್ಯಾವಳಿಗಳು ನೆನಪಿಸುತ್ತವೆ.

ಈ ರೀತಿಯ ಜಾತಿ ಅಸಮಾನತೆ, ದಬ್ಬಾಳಿಕೆ, ದೌರ್ಜನ್ಯಕ್ಕೆ ಪ್ರತಿರೋಧದ ಧ್ವನಿಯಾಗಿ ’ರಂಗ’ನ ಪಾತ್ರವನ್ನು ನಿರ್ದೇಶಕ ’ತಮಿಳ’ ಕಟ್ಟಿಕೊಡುತ್ತಾನೆ. ’ಈಗ ದಲಿತ ಸಮುದಾಯದ ಯುವಕರಲ್ಲಿ ಬೆಳೆಯುತ್ತಿರುವ ಪ್ರಜ್ಞೆಯ ಪ್ರತೀಕ ಈ ರಂಗ’ ಎಂದು ಈ ಪಾತ್ರದ ಬಗ್ಗೆ ನಿರ್ದೇಶಕ ಹೇಳುತ್ತಾರೆ. ಶಾಲೆಯಲ್ಲಿ ತನ್ನ ಮಗಳ ಕೈಯಲ್ಲಿ ಖಾಸಗಿ ಕೆಲಸ ಮಾಡುವುದನ್ನು, ಹೊಟೆಲ್‌ನಲ್ಲಿ ಇವನ ಜಾತಿ ನೋಡಿ ಪೇಪರ್ ಗ್ಲಾಸಿನಲ್ಲಿ ಟೀ ಕೊಡುವುದು, ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವ ಕಾರಣ ದೂರದೂರಿನ ಶಾಲೆಯ ಜೊತೆಗೆ ಅದನ್ನು ವಿಲೀನ ಮಾಡುವುದಕ್ಕೆ ಮುಂದಾಗುವುದನ್ನು ರಂಗ ಬಹಳ ಖಚಿತವಾಗಿ ವಿರೋಧಿಸುತ್ತಾನೆ. ನೇರವಾಗಿ ಟೀಕಿಸುತ್ತಾನೆ.

ಸೇತುಮಾನ್ ಸಿನಿಮಾ ಅದು ಚರ್ಚಿಸುವ ವಿಷಯದಿಂದಷ್ಟೆ ಮುಖ್ಯವಲ್ಲ, ಅದರ ಕಲಾತ್ಮಕತೆ, ಪಾತ್ರಾಭಿನಯಗಳಿಂದ ಕೂಡ ಪರಿಣಾಮಕಾರಿಯಾಗಿದೆ. ಇಷ್ಟಾಗಿಯೂ ಈ ಸಿನಿಮಾದ ಬಗ್ಗೆ ಯಾಕೆ ಹೆಚ್ಚು ಚರ್ಚೆಗಳು ನಡೆದಿಲ್ಲ ಎಂಬುದು ಸೋಜಿಗದ ಸಂಗತಿ. ಸಿನಿಮಾದಲ್ಲಿನ ಕೆಲವು ಲಾಂಗ್‌ಷಾಟ್‌ಗಳಲ್ಲಿ ತೋರುವ ಸ್ಥಿರ ದೃಶ್ಯಗಳು ಬಹಳ ಸಾವಯವಗಿ ಮೂಡಿವೆ. ಉದಾಹರಣೆಗೆ ಸಿನಿಮಾದ ಪ್ರಾರಂಭದಲ್ಲೆ, ವಿಸ್ತಾರವಾದ ಬಯಲಿನ ನಡುವೆ ಪೂಚ್ಚಿ ತನ್ನ ಮೊಮ್ಮಗನನ್ನು ಹೆಗಲ ಮೇಲೆ ಕೂರಿಸಿಕೊಂಡು ಶಾಲೆಗೆ ಬಿಡಲು ಹೋಗುತ್ತಿದ್ದಾನೆ. ತನ್ನ ತಾತನ ಹೆಗಲ ಮೇಲೆ ಕುಳಿತ ಕುಮರೇಸನ್ ಕೇಳುತ್ತಾನೆ: ’ನಾವ್ಯಾಕೆ ತಾತ ಊರಿನ ಹೊರಗೆ ಇರಬೇಕು, ಊರಿನ ಒಳಗೆ ಇದ್ದರೆ ನಾನು ಶಾಲೆಗೆ ಬೇಗ ಹೋಗಬಹುದಲ್ವಾ? ಈ ಪ್ರಶ್ನೆಯನ್ನು ಆ ದೃಶ್ಯ ಅದ್ಭುತವಾಗಿ ಕಟ್ಟಿಕೊಡುತ್ತದೆ. ಅದೇ ರೀತಿ ವಲ್ಲೈಯಾನ್ ತನ್ನ ಸಂಗಡಿಗರಿಗೆ ಹಂದಿ ಮಾಂಸದ ಮಹತ್ವವನ್ನು ವಿವರಿಸುವ ಮತ್ತು ಅವರ ನಡುವಿನ ಸಂಭಾಷಣೆಯ ದೃಶ್ಯ; ಸೇತುಮಾನ್‌ನಲ್ಲಿ ನಟಿಸಿರುವ ಕಲಾವಿದರನ್ನೂ ಈ ಹಿಂದೆ ಯಾವ ಸಿನಿಮಾಗಳಲ್ಲೂ ಹೆಚ್ಚು ಗಮನಿಸಿಲ್ಲ. ಇಡೀ ಸಿನಿಮಾ ಬಹಳ ತೀವ್ರವಾಗಿ ಪ್ರೇಕ್ಷಕನಿಗೆ ದಾಟುವುದಕ್ಕೆ ಈ ಪಾತ್ರಗಳ ಸಹಜ ಅಭಿನಯ ಮುಖ್ಯ ಕಾರಣ.

ಸೇತುಮಾನ್ ನೀಲಂ ಪ್ರೊಡಕ್ಷನ್‌ನಲ್ಲಿ ನಿರ್ಮಾಣಗೊಂಡಿರುವ ನಾಲ್ಕನೇ ಸಿನಿಮಾ. ಸಿನಿಮಾರಂಗಕ್ಕೆ ಹೊಸ ಗ್ರಹಿಕೆ, ಹೊಸ ಕಣ್ಣೋಟ, ಹೊಸ ಸಾಧ್ಯತೆಗಳನ್ನು ಕಟ್ಟಿಕೊಟ್ಟ ಮಾರಿ ಸೆಲ್ವರಾಜ್, ಫ್ರಾಂಕ್ಲಿನ್ ಜಾಕಬ್, ತಮಿಳರಂತಹ ಯುವ ನಿರ್ದೇಶಕರಿಗೆ ಅವಕಾಶ ನೀಡಿದ ಹೆಗ್ಗಳಿಕೆ ನೀಲಂ ಪ್ರೊಡಕ್ಷನ್‌ದು. ಈ ತರಹದ ಸೂಕ್ಷ್ಮತೆಯುಳ್ಳ ಅಸಂಖ್ಯಾತ ಯುವ ನಿರ್ದೇಶಕರು ನೀಲಂ ಪ್ರೊಡಕ್ಷನ್‌ನಿಂದ ಬೆಳಕಿಗೆ ಬರುವ ಸಾಧ್ಯತೆಗಳು ಈಗಾಗಲೇ ದಟ್ಟವಾಗಿ ಗೋಚರಿಸಿದೆ.

ಸೇತುಮಾನ್ ಸಿನಿಮಾದ ಭಾಗವಾದ ಎಲ್ಲರಿಗೂ ಅಭಿನಂದನೆಗಳು. ಈ ಸಿನಿಮಾ Sony Live ಒಟಿಟಿ ವೇದಿಕೆಯಲ್ಲಿ ಲಭ್ಯವಿದೆ.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ


ಇದನ್ನೂ ಓದಿ: ನಚ್ಚತಿರಂ ನಗರ್ಗಿರದು: ಮನುವಾದಕ್ಕೆ ತಿರುಗೇಟು; ಮನಪರಿವರ್ತನೆಗೆ ಅವಕಾಶ- ಇದು ಪ.ರಂಜಿತ್‌ ಪ್ರೇಮಲೋಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...