ಕನಸು ಕಾಣುವುದು ಸುಲಭ ಆದರೆ ಕಂಡ ಕನಸು ನನಸು ಮಾಡಿಕೊಳ್ಳಲು ಕಠಿಣ ಪರಿಶ್ರಮ ಅತ್ಯಗತ್ಯ. ಕನಸು ನನಸು ಮಾಡಿಕೊಳ್ಳುವ ದಾರಿಯಲ್ಲಿ ಸಾಗಿ ರಾತ್ರಿ ಪಾಳಿಯ ಕಾವಲುಗಾರನಾಗಿದ್ದ ರಂಜಿತ್ ರಾಮಚಂದ್ರನ್ ಇಂದು ರಾಂಚಿಯ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್ (ಐಐಎಂ)ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಹಲವರಿಗೆ ಮಾದರಿಯಾಗಿ ನಿಂತಿದ್ದಾರೆ.
28 ವರ್ಷದ ರಂಜಿತ್ ರಾಮಚಂದ್ರನ್, ಏಪ್ರಿಲ್ 9 ರಂದು ತಮ್ಮ ಸ್ಪೂರ್ತಿದಾಯಕ ಕಥೆಯನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು, 39,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದ್ದಾರೆ. ಕೇರಳದ ಹಣಕಾಸು ಸಚಿವ ಟಿ ಎಂ ಥಾಮಸ್ ಐಸಾಕ್ ಕೂಡ ಫೇಸ್‌ಬುಕ್‌ನಲ್ಲಿ ಅಭಿನಂದನೆ ತಿಳಿಸಿದ್ದಾರೆ.
ಪದವಿವರೆಗೆ ಮಾತೃಭಾಷೆ ಮಲಯಾಳಂನಲ್ಲಿ ಓದಿರುವ ರಂಜಿತ್ ರಾಮಚಂದ್ರನ್ ರಾತ್ರಿ ವೇಳೆಯಲ್ಲಿ ಕಾವಲುಗಾರನಾಗಿ ದುಡಿದು, ಹಗಲಿನ ಸಮಯವನ್ನು ವ್ಯರ್ಥ ಮಾಡದೇ ವಿದ್ಯಾಭ್ಯಾಸ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: ಕೇಂದ್ರದೊಂದಿಗೆ ಮಾತುಕತೆಗೆ ಸಿದ್ದವಿದ್ದೇವೆ, ಹಕ್ಕೊತ್ತಾಯಗಳು ಅವೆ ಇರಲಿವೆ- ರಾಕೇಶ್ ಟಿಕಾಯತ್
ರಾಮಚಂದ್ರನ್ ಅವರು ಕಾಸರಗೋಡಿನ ಪಣತ್ತೂರಿನಲ್ಲಿ ಬಿಎಸ್ಎನ್ಎಲ್ ದೂರವಾಣಿ ವಿನಿಮಯ ಕೇಂದ್ರದಲ್ಲಿ ರಾತ್ರಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು. ಅದೇ ಜಿಲ್ಲೆಯ ಸೇಂಟ್ ಪಯಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪದವಿ ಪಡೆದಿದ್ದಾರೆ. ನಂತರ ಉನ್ನತ ಶಿಕ್ಷಣಕ್ಕಾಗಿ ಮದ್ರಾಸ್‌ನ ಐಐಟಿಗೆ ಸೇರಿದ್ದಾರೆ.
“ನಾನು ಹಗಲಿನ ವೇಳೆಯಲ್ಲಿ ಕಾಲೇಜಿಗೆ ಹೋಗುತ್ತಿದ್ದೆ ಮತ್ತು ರಾತ್ರಿ ವೇಳೆಯಲ್ಲಿ ದೂರವಾಣಿ ವಿನಿಮಯ ಕೇಂದ್ರದಲ್ಲಿ ಕೆಲಸ ಮಾಡಿದ್ದೇನೆ” ಎಂದು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಮಲಯಾಳಂ ಭಾಷೆ ಮಾತ್ರ ತಿಳಿದಿದ್ದರಿಂದ ಅಧ್ಯಯನ ಮಾಡಲು ಕಷ್ಟವಾಗಿ, ಪಿಎಚ್‌ಡಿಯನ್ನು ಅರ್ಧದಲ್ಲೇ ತ್ಯಜಿಸಲು ರಂಜಿತ್ ನಿರ್ಧರಿಸಿದ್ದರು. ಆದರೆ ಅವರ ಮಾರ್ಗದರ್ಶಿ ಡಾ. ಸುಭಾಷ್ ಅವರು ಹಾಗೆ ಮಾಡದಂತೆ ಮನವೊಲಿಸಿರು ಎಂದು ತಿಳಿಸಿದ್ದಾರೆ. ಕಳೆದ ವರ್ಷ ಡಾಕ್ಟರೇಟ್ ಗಳಿಸಿದ ರಂಜಿತ್, ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಶೀಘ್ರವೇ ಐಐಎಂ– ರಾಂಚಿಯಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
“ಈ ಪೋಸ್ಟ್ ವೈರಲ್ ಆಗುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಇದು ನನ್ನ ಜೀವನ ಕಥೆ, ಇನ್ನೂ ಕೆಲವರಿಗೆ ಸ್ಫೂರ್ತಿ ನೀಡುತ್ತದೆ ಎಂದು ಭಾವಿಸುತ್ತೇನೆ. ಪ್ರತಿಯೊಬ್ಬರೂ ಒಳ್ಳೆಯ ಕನಸು ಕಾಣಬೇಕು ಮತ್ತು ಅವರ ಕನಸು ನನಸು ಮಾಡಲು ಹೋರಾಡಬೇಕೆಂದು ನಾನು ಬಯಸುತ್ತೇನೆ” ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆರ್ಥಿಕ ತೊಂದರೆಗಳಿಂದಾಗಿ ರಂಜಿತ್ ತಮ್ಮ ಶಾಲಾ ಶಿಕ್ಷಣವನ್ನು ತ್ಯಜಿಸಿ ಬೇಕಾದ ಸ್ಥತಿ ಇತ್ತು ಎಂದಿದ್ದಾರೆ. ರಂಜಿತ್ ಅವರ ತಂದೆ ದರ್ಜಿ ಕೆಲಸ ಮಾಡುತ್ತಾರೆ, ತಾಯಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದಿನಗೂಲಿ ಕಾರ್ಮಿಕರಾಗಿದ್ದಾರೆ.
ಇದನ್ನೂ ಓದಿ: ಬೀದಿಬದಿ ವಾಸಿಸುವ ಬಾಲಕಿಯರಿಗೆ ಸಿಎಎ, ಎನ್‌ಆರ್‌ಸಿ ಪಾಠ ಮಾಡಿದ್ದಕ್ಕೆ ದೇಶದ್ರೋಹ ಪ್ರಕರಣ ದಾಖಲು!


