Homeಮುಖಪುಟಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದ ಆರೋಪಿಗಿತ್ತು ಗೌರಿ ಲಂಕೇಶ್ ಹತ್ಯೆ ಆರೋಪಿ ಜೊತೆ ನಂಟು

ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದ ಆರೋಪಿಗಿತ್ತು ಗೌರಿ ಲಂಕೇಶ್ ಹತ್ಯೆ ಆರೋಪಿ ಜೊತೆ ನಂಟು

- Advertisement -
- Advertisement -

ರಾಜ್ಯದ ಹಲವು ಪ್ರಮುಖ ಸಾಹಿತಿಗಳಿಗೆ, ಬರಹಗಾರರಿಗೆ ಬೆದರಿಕೆ ಪತ್ರ ಬರೆದ ಆರೋಪಿಯನ್ನು ಕರ್ನಾಟಕ ಪೊಲೀಸರು ಸೆಪ್ಟೆಂಬರ್‌ನಲ್ಲಿ ಬಂಧಿಸಿದ್ದರು. ಬೆದರಿಕೆ ಪತ್ರ ಬರೆದ ಆರೋಪಿ ದಾವಣಗೆರೆ ಮೂಲದ ಶಿವಾಜಿ ರಾವ್ ಜಾಧವ್ (41) ಎಂಬಾತ ಎಂ.ಎಂ ಕಲಬುರ್ಗಿ, ಗೌರಿ ಲಂಕೇಶ್‌ ಹತ್ಯೆಗೈದ ತಂಡಕ್ಕೆ ರಿಕ್ರೂಟರ್ ಆಗಿ ಕೆಲಸ ಮಾಡುತ್ತಿದ್ದ ಸುಜಿತ್ ಕುಮಾರ್‌ ಜೊತೆ ಸಂಪರ್ಕವನ್ನು ಹೊಂದಿದ್ದ ಎನ್ನುವುದು ಬಯಲಾಗದೆ.

ತನಿಖಾ ಸಂಸ್ಥೆಗಳ ಪ್ರಕಾರ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮೂಲದ ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್ ಅಲಿಯಾಸ್ ಮಂಜುನಾಥ್  ಹೆಚ್ಚಾಗಿ ಹಿಂದುತ್ವ ಗುಂಪುಗಳಲ್ಲಿರುವವರು ಮತ್ತು ಅಪರಾಧಗಳನ್ನು ಮಾಡುವ ಸಾಮರ್ಥ್ಯವಿರುವ ಯುವಕರನ್ನು ಗುರುತಿಸುತ್ತಿದ್ದ. ಬಳಿಕ  ಅವರನ್ನು ಬ್ರೈನ್‌ ವಾಶ್‌ ಮಾಡಿ ಗ್ಯಾಂಗ್‌ಗೆ ಸೇರಿಸಿಕೊಳ್ಳುತ್ತಿದ್ದ.

ಈತ 2013 ಮತ್ತು 2017ರ ನಡುವೆ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ನಾಲ್ವರು ಬರಹಗಾರರು ಮತ್ತು  ಸಾಮಾಜಿಕ ಕಾರ್ಯಕರ್ತರನ್ನು ಹತ್ಯೆಗೈದ ಆರೋಪವಿರುವ ಗೋವಾ ಮೂಲದ ಸನಾತನ ಸಂಸ್ಥೆ ಮತ್ತು ಅದರ ಸಹೋದರ ಸಂಘಟನೆ ಹಿಂದೂ ಜನಜಾಗೃತಿ ಸಮಿತಿಯೊಂದಿಗೆ ಮತ್ತು ಅದರ ನೇತೃತ್ವ ವಹಿಸಿರುವ ಹೆಚ್ಚಿನವರ ಜೊತೆ ಸಂಪರ್ಕ ಹೊಂದಿದ್ದ.

ಗೌರಿ ಲಂಕೇಶ್ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಆತನಿಗೆ ಆರೋಪಿ ಸಂಖ್ಯೆ 13 ಎಂದು ಪಟ್ಟಿ ಮಾಡಲಾಗಿದೆ ಮತ್ತು ಆತ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಗೌರಿ ಲಂಕೇಶ್‌ಗೆ ಶೂಟರ್‌ ಎಂದು ಆರೋಪಿಸಿರುವ ಪರಶುರಾಮ್‌ ವಾಘ್‌ಮೋರೆಯನ್ನು ಕೂಡ ಇದೇ ಸುಜಿತ್‌ ಕುಮಾರ್‌ ನೇಮಕ ಮಾಡಿದ್ದ ಎಂದು ಆರೋಪಿಸಲಾಗಿದೆ.

2018ರಲ್ಲಿ ಸುಜಿತ್ ಕುಮಾರ್ ಬಂಧನದ ಸಮಯದಲ್ಲಿ ವಶಪಡಿಸಿಕೊಂಡ ಡೈರಿಯಲ್ಲಿ ಶಿವಾಜಿ ರಾವ್ ಜಾಧವ್‌ನ ಹೆಸರು ಮತ್ತು ಅವನ ಹಳೆಯ ಫೋನ್ ಸಂಖ್ಯೆ ಕಂಡು ಬಂದಿತ್ತು. ಶಿವಾಜಿ ರಾವ್‌ ಈತನಿಗೆ ಹಲವು ಬಾರಿ ಭೇಟಿಯಾಗಿರುವುದನ್ನು ಆತನ ಫೋಟೊ ನೋಡಿ ಒಪ್ಪಿಕೊಂಡಿದ್ದಾನೆ. ಆತನಿಗೆ ಮಂಜುನಾಥ್ ಎಂಬ ಹೆಸರಿನಿಂದ ತಿಳಿದಿದ್ದೇನೆ ಎಂದು ಹೇಳಿದ್ದಾನೆ ಎಂದು ಕೇಂದ್ರೀಯ ಅಪರಾಧ ವಿಭಾಗದ (CCB) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಜಿತ್ ಕುಮಾರ್‌ನ ಸಂಭಾವ್ಯ ನೇಮಕಾತಿಗಳಲ್ಲಿ ಒಬ್ಬನೆಂದು ಶಿವಾಜಿ ರಾವ್‌ನನ್ನು ಗುರುತಿಸಲಾಗಿದೆ. ಶಿವಾಜಿ ಕೊಲೆಗಳ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ಹೇಳುತ್ತಾನೆ. ಆದರೆ 2018ರಲ್ಲಿ ಸುಜಿತ್‌ನನ್ನು ಎಸ್‌ಐಟಿ ಬಂಧಿಸದಿದ್ದರೆ ಬಹುಶಃ ಅವನು ಶಿವಾಜಿ ರಾವ್‌ನನ್ನು ಮತ್ತಷ್ಟು ಬೆಳೆಸಿರಬಹುದು ಮತ್ತು ಏನಾದರೂ ಅಪರಾಧ ಮಾಡಲು ಅವನನ್ನು ಬಳಸಿಕೊಳ್ಳುವ ಸಾಧ್ಯತೆ ಇತ್ತು ಎಂದು ಅಧಿಕಾರಿ ಹೇಳಿದ್ದಾರೆ.

8ನೇ ತರಗತಿಯನ್ನು ತೊರೆದ ಶಿವಾಜಿ ರಾವ್ ಜಾಧವ್ ದಾವಣಗೆರೆಯ ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿಯಾಗಿದ್ದಾನೆ. ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದ ಈತ ಹತ್ತಿರದ ಗ್ರಂಥಾಲಯದಲ್ಲಿ ಪತ್ರಿಕೆಗಳನ್ನು ದಿನನಿತ್ಯ ಓದುತ್ತಿದ್ದ ಜೊತೆಗೆ ಹಿಂದುತ್ವ ಸಿದ್ಧಾಂತವನ್ನು ಮೌಲ್ಯೀಕರಿಸುವ ಪುಸ್ತಕಗಳನ್ನು ಓದುತ್ತಿದ್ದ. ಇದು ಆತನಿಗೆ ಹಲವಾರು ಬರಹಗಾರರಿಗೆ ಬೆದರಿಕೆ ಪತ್ರಗಳನ್ನು ಬರೆಯಲು ಪ್ರೇರೇಪಿಸಿದೆ.

ಈತ ಸಾಹಿತಿಗಳಾದ ವೀರಭದ್ರಪ್ಪ, ಬಿ.ಟಿ. ಲಲಿತಾ ನಾಯಕ್, ವಸುಂಧರಾ ಭೂಪತಿ, ಬಂಜಗೆರೆ ಜಯಪ್ರಕಾಶ್, ಬಿ.ಎಲ್. ವೇಣು ಮತ್ತು ನಿಜಗುಣಾನಂದ ಸ್ವಾಮಿ ಅವರಿಗೆ ಬಂಧನಕ್ಕಿಂತ ಮೊದಲು ಬೆದರಿಕೆ ಪತ್ರವನ್ನು ಬರೆದಿದ್ದ.

ಎಂ.ಎಂ ಕಲ್ಬುರ್ಗಿ ಮಾತ್ರವಲ್ಲದೆ ಗೌರಿ ಲಂಕೇಶ್, ಮಹಾರಾಷ್ಟ್ರದ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ್ ಪನ್ಸಾರೆ ಅವರ ಹತ್ಯೆಯ ಪ್ರಮುಖ ಆರೋಪಿಗಳಾದ ಅಮೋಲ್ ಕಾಳೆ, ಸುಜಿತ್ ಕುಮಾರ್ ಮತ್ತು ಮನೋಹರ್ ಎಡವೆ ಅವರ ಹಿಟ್ ಲಿಸ್ಟ್ ಮತ್ತು ಹೆಸರುಗಳು, ಕೋಡ್ ಹೆಸರುಗಳು ಮತ್ತು ಫೋನ್ ಸಂಖ್ಯೆಗಳನ್ನು ಬರೆದ ಅನೇಕ ಡೈರಿಗಳನ್ನು ತನಿಖಾಧಿಖಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಡೈರಿಗಳ ಸುಳಿವುಗಳ ಆಧಾರದಲ್ಲಿ ಗೌರಿ ಲಂಕೇಶ್ ಅವರನ್ನು ಗುರಿಯಾಗಿಸಿಕೊಂಡ ಆರೋಪಿ ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಲಾಗಿದೆ. ಎಸ್‌ಐಟಿಯು ಈ ಹೆಸರುಗಳ ಪಟ್ಟಿಯನ್ನು ತಯಾರಿಸಿ ಅವುಗಳನ್ನು ರಾಜ್ಯ ಮತ್ತು ಕೇಂದ್ರ ತನಿಖಾ ಏಜೆನ್ಸಿಗಳಿಗೆ ನೀಡಿದೆ ಮತ್ತು ಅವರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಆಶಿಸಿದ್ದರು.

ನಾಲ್ವರನ್ನು ಹತ್ಯೆ ಮಾಡಿದ ಗ್ಯಾಂಗ್‌ನ ಇತಿಹಾಸವನ್ನು ನೋಡಿದಾಗ ತಂಡದ ಮೊದಲ ನೇತೃತ್ವ ವಹಿಸಿದ್ದು 2016ರಲ್ಲಿ ನರೇಂದ್ರ ದಾಭೋಲ್ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧಿಸಲ್ಪಟ್ಟ ವೀರೇಂದ್ರ ತಾವ್ಡೆ. ನಂತರ ಅಮೋಲ್ ಕಾಳೆ ಗ್ಯಾಂಗ್‌ನ್ನು ಮುನ್ನಡೆಸಿದ್ದ. ಇದೀಗ ಆ ಗ್ಯಾಂಗ್ ಕರ್ನಾಟಕದಲ್ಲಿ ಮತ್ತೆರಡು ಹತ್ಯೆ ನಡೆಸಿದೆ.  ಆ ಗ್ಯಾಂಗ್ ಕೂಡ ಬಂಧಿಯಾಗಿದೆ. ಆದರೆ ಈ ಗ್ಯಾಂಗ್ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಅನೇಕ ಬಾಂಬ್ ಸ್ಫೋಟಗಳನ್ನು ನಡೆಸಿದೆ.  ಅದು ಕೂಡ ಭೇದಿಸಲ್ಪಟ್ಟಿದೆ. ಈ ಹಿಂದಿನ ಗ್ಯಾಂಗ್‌ನಿಂದ ಅನೇಕ ಶಂಕಿತರು ಇಂದಿಗೂ ಕಾಣೆಯಾಗಿದ್ದಾರೆ. ಆದ್ದರಿಂದ ಈ ಹಂತಕರ ಗುಂಪು ಮರುಸಂಘಟನೆಯ ಸಾಧ್ಯತೆಯನ್ನು ಕೂಡ ಅಲ್ಲಗಳೆಯುವಂತಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನು ಓದಿ: ಇಡಿ ಚುನಾವಣೆಗೆ ಹಣ ಹಂಚುತ್ತಿದೆ: ರಾಜಸ್ಥಾನ ಸಿಎಂ ಗೆಹ್ಲೋಟ್ ಗಂಭೀರ ಆರೋಪ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...