Homeಸಾಹಿತ್ಯ-ಸಂಸ್ಕೃತಿಕಥೆಆ ಪತ್ರ ( ಕಥೆ ) : ಗುಜರಾತಿ ಮೂಲ- ಧೂಮಕೇತು. ಕನ್ನಡಕ್ಕೆ- ಗಿರೀಶ್ ತಾಳಿಕಟ್ಟೆ

ಆ ಪತ್ರ ( ಕಥೆ ) : ಗುಜರಾತಿ ಮೂಲ- ಧೂಮಕೇತು. ಕನ್ನಡಕ್ಕೆ- ಗಿರೀಶ್ ತಾಳಿಕಟ್ಟೆ

- Advertisement -
- Advertisement -

ಗುಜರಾತಿ ಮೂಲ- ಧೂಮಕೇತು
ಕನ್ನಡಕ್ಕೆ- ಗಿರೀಶ್ ತಾಳಿಕಟ್ಟೆ

ಧೂಮುಕೇತು ಎಂಬ ಕಾವ್ಯನಾಮದಿಂದ ಗುಜರಾತಿ ಸಾಹಿತ್ಯದಲ್ಲಿ ಖ್ಯಾತರೆನಿಸಿದ ಗೌರಿಶಂಕರ ಗೋವರ್ಧನ್‍ರಾಂ ಜೋಶಿಯವರು ಸಣ್ಣ ಕತೆಗಳಿಗೆ ಹೊಸ ಆಯಾಮ ತಂದುಕೊಟ್ಟವರು. ಸಣ್ಣಕತೆಗಳ 21 ಸಂಕಲನಗಳನ್ನಲ್ಲದೆ 29 ಐತಿಹಾಸಿಕ ಮತ್ತು 7 ಸಾಮಾಜಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಮನುಷ್ಯನ ಭಾವನೆಗಳ ತಾಕಲಾಟವನ್ನು ಕಾವ್ಯಾತ್ಮಕವಾಗಿ ಕಟ್ಟಿಕೊಡುವಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಇವರು 1926ರಲ್ಲಿ ಮೊದಲ ಬಾರಿಗೆ ಪ್ರಕಟಿಸಿದ `ಠಾಕಾ’ ಕಥಾ ಸಂಕಲನ ಗುಜರಾತಿ ಸಾಹಿತ್ಯ ವಲಯದ ಮೈಲುಗಲ್ಲುಗಳಲ್ಲಿ ಒಂದೆನಿಸಿದೆ. ಅಮೆರಿಕಾವು ಅರವತ್ತು ದೇಶಗಳಿಂದ ಆಯ್ದ ಅತ್ಯುತ್ತಮ ಕಥೆಗಳ ಸಂಗ್ರಹವಾದ ಪ್ರತಿಷ್ಠಿತ `ಸ್ಟೋರೀಸ್ ಆಫ್ ಮೆನಿ ಲ್ಯಾಂಡ್ಸ್’ ಕೃತಿಯಲ್ಲಿ ಭಾರತದ ಪರವಾಗಿ ಇವರ ಈ ಕಥೆ ಆಯ್ಕೆಯಾಗಿತ್ತು. 1965ರಲ್ಲಿ ಇವರು ತೀರಿಕೊಂಡರು.

ಮುಂಜಾವಿನ ಮಬ್ಬುಗತ್ತಲ ಆಗಸದಲ್ಲಿ ನಕ್ಷತ್ರಗಳಿನ್ನು ಮಿನುಗುತ್ತಲೇ ಇದ್ದವು, ಕೊನೆಗಾಲವ ಸಮೀಪಿಸಿದ ಜೀವವೊಂದರ ಮುಖದ ಮೇಲೆ ಹಳೆಯ ಸವಿನೆನಪುಗಳು ಉಕ್ಕಿಸುವ ಸಂತಸದ ರೀತಿಯಲ್ಲಿ. ವಯಸ್ಸಾದ ಮುದುಕನೊಬ್ಬ ಮೈನಡುಗಿಸುವ ಛಳಿ ಮತ್ತು ಕೊರೆವ ಥಂಡಿ ಗಾಳಿಯಿಂದ ದೇಹವನ್ನು ಬೆಚ್ಚಗಿಟ್ಟುಕೊಳ್ಳುವ ಸಲುವಾಗಿ ಆಗಾಗ್ಗೆ ಸ್ವೆಟ್ಟರನ್ನು ಕುತ್ತಿಗೆಗೆ ಅತ್ತನಾಗಿ ಬಿಗಿದುಕೊಳ್ಳುತ್ತ ಪಟ್ಟಣದ ಬೀದಿಯಲ್ಲಿ ಕತ್ತಲನ್ನು ಸೀಳಿಕೊಂಡು ನಡೆಯುತ್ತಿದ್ದ. ತುಸು ದೂರದಲ್ಲಿದ್ದ ಮನೆಗಳಲ್ಲಿ ತಮ್ಮ ದೈನಂದಿನ ಮನೆಗೆಲಸ ಮಾಡುತ್ತಲೇ ಗುನುಗುತ್ತಿದ್ದ ಹೆಂಗಸರ ಮಧುರ ದನಿಯ ಹಾಡುಗಳು, ತಿರುಗುತ್ತಿದ್ದ ಗಿರಣಿಗಳ ಸದ್ದುಗಳಷ್ಟೇ ಅವನ ನಡಿಗೆಗೆ ಜೊತೆಗೂಡಿದ್ದ ಸಂಗಾತಿಗಳು. ಆಗೊಮ್ಮೆ ಈಗೊಮ್ಮೆ ಕೇಳಿಬರುತ್ತಿದ್ದ ನಾಯಿಯ ಬೊಗಳಾಟ, ಮುಂಜಾನೆಯ ಕೆಲಸಕ್ಕೆ ಹೊರಟಿದ್ದ ಜನರ ಮಾತುಗಳು, ಸುಖ ನಿದ್ರೆಗೆ ತಡೆಬಂದು ರೋಧಿಸುತ್ತಿದ್ದ ಹಕ್ಕಿಗಳ ಕಲರವ ಬಿಟ್ಟರೆ ಇಡೀ ನಗರದ ತುಂಬಾ ಸ್ಮಶಾನ ಮೌನ. ಬಹಳಷ್ಟು ಜನ, ಪ್ರಾಣಿ-ಪಕ್ಷಿಗಳು ನಿದ್ರಾದೇವಿಯ ಬಿಸಿಯಪ್ಪುಗೆಯಲ್ಲಿ ಕಳೆದುಹೋಗಿದ್ದರು. ಛಳಿ ಹೆಚ್ಚಾದಂತೆಲ್ಲ ನಿದಿರೆಯ ತೆಕ್ಕೆಯೂ ಬಿಗಿಗೊಂಡು ನಿದ್ರೆ ದೀರ್ಘವಾಗುತ್ತದೆ, ತಾನೇ ಆರಿಸಿಕೊಂಡ ಬಲಿಪಶುವನ್ನೂ ಅಕ್ಕರೆಯ ಮುಗುಳ್ನಗೆಯಿಂದ ನೇವರಿಸುವ ಮಿಥ್ಯ ಗೆಣೆಕಾರನಂತೆ. ಆವರಿಸಿಕೊಂಡ ಛಳಿಗೆ ದೇಹ ಸಣ್ಣಗೆ ನಡುಗುತ್ತಿದ್ದರೂ, ಪಟ್ಟು ಬಿಡದ ಆಸಾಮಿಯಂತೆ ಭಾರವಾದ ಹೆಜ್ಜೆಗಳನ್ನು ಎತ್ತಿಡುತ್ತಲೇ ಆ ಮುದುಕ ಊರ ಅಗಸೆಯನ್ನು ದಾಟಿ ನೇರ ರಸ್ತೆಯೊಂದಕ್ಕೆ ಬಂದು ತಲುಪಿದ. ತನ್ನ ಹಳೆಯ ಊರುಗೋಲಿನ ಆಸರೆ ಮೇಲೆಯೇ ನಿಧಾನದ ನಡಿಗೆ ಮುಂದುವರೆಸಿದ.

ಆ ರಸ್ತೆಯ ಒಂದು ಬದಿಯಲ್ಲಿ ಸಾಲುಮರಗಳು ಸಾಲುಗಟ್ಟಿ ನಿಂತಿದ್ದರೆ, ಮತ್ತೊಂದು ಬದಿಯಲ್ಲಿ ಪಾರ್ಕು. ಕತ್ತಲಿನ್ನೂ ದಟ್ಟವಾಗಿತ್ತು. ಹಗಲು ತಾರೆಯನ್ನು ಮಸುಕಾಗಿಸುವ ಹಠಕ್ಕೆ ಬಿದ್ದಂತೆ ವಾತಾವರಣದ ತುಂಬಾ ಮಂಜು ಆವರಿಸಿಕೊಳ್ಳಲು ಶುರುವಾಯ್ತು. ಛಳಿ ತನ್ನ ಕೊರೆತವನ್ನು ಹೆಚ್ಚಿಸಿತು. ಆ ಪಾರ್ಕಿನ ಅಂಚಿನಲ್ಲಿ ಎದ್ದುನಿಂತಿದ್ದ ನವೀನ ಶೈಲಿಯ ಆಕರ್ಷಕ ಕಟ್ಟಡವೊಂದರ ಮುಚ್ಚಿದ ಬಾಗಿಲು ಮತ್ತು ಕಿಟಕಿಯ ಸಂಧಿಗಳಿಂದ ಒಳಗಿನ ಲೈಟ್ ಬೆಳಕಿನ ಪ್ರಭೆ ಹೊರಕ್ಕೆ ಇಣುಕಲು ಹವಣಿಸುತ್ತಿತ್ತು.

ಕಮಾನು ಆಕಾರದಲ್ಲಿದ್ದ ಆ ಕಟ್ಟಡದ ಬೋರ್ಡ್ ನೋಡುತ್ತಿದ್ದಂತೆಯೇ, ಅವನ ಮುಖದ ಮೇಲೆ ಯಾತ್ರಿಯೊಬ್ಬ ಕಷ್ಟಪಟ್ಟು ದೇವರ ದರ್ಶನ ಪಡೆದಾಗ ಮೂಡುವ ತನ್ಮಯತೆಯ ಭಾವ ಹರಿದಾಡಿತು. ತೂಗುಹಾಕಿದ್ದ ಹಳೆಯ ಕಮಾನು ಬೋರ್ಡಿನ ಮೇಲೆ ಹೊಸದಾಗಿ ಬರೆದ ಐದೂವರೆ ಅಕ್ಷರಗಳು ಎದ್ದು ಕಾಣುತ್ತಿದ್ದವು; `ಅಂಚೆ ಕಚೇರಿ’. ಮೆಲ್ಲಗೆ ವರಾಂಡದ ಒಳತೂರಿದ ಮುದುಕ, ಗೋಡೆಗೆ ಹತ್ತಿರವಾಗಿ ಕೂತು ಒಳಗಿನಿಂದ ಕೇಳಿ ಬರುವ ದನಿಗಾಗಿ ಕಿವಿಯಾನಿಸಿದ. ಒಳಗಡೆ ಕೆಲಸ ಮಾಡುತ್ತಿದ್ದ ಒಂದಿಬ್ಬರ ದನಿಗಳು ಗೋಡೆ, ಮುಚ್ಚಿದ ಬಾಗಿಲುಗಳನ್ನು ಬೇಧಿಸಿಕೊಂಡು ಸಣ್ಣಗೆ ಕೇಳಿಸುತ್ತಿದ್ದವು.

`ಪೊಲೀಸ್ ಸೂಪರಿಂಟೆಂಡೆಂಟ್’ ಒಳಗಿನ ದನಿಯೊಂದು ತೀಕ್ಷ್ಣವಾಗಿ ಕೂಗಿತು. ದನಿ ಬಂದ ಕಡೆಗೆ ಅವಸರದಲ್ಲಿ ಏಳಲು ಅಣಿಯಾದ ಮುದುಕ, ತನ್ನನ್ನು ತಾನು ಸಾವರಿಸಿಕೊಂಡು ಅಲ್ಲೇ ಕೂತು ಕಾಯಲು ಮುಂದಾದ. ತನ್ನೊಳಗಿದ್ದ ನಂಬಿಕೆ ಮತ್ತು ಪ್ರೀತಿಯ ಮುಂದೆ ಅವನಿಗೆ ಈ ಛಳಿ ಏನೇನೂ ಅನ್ನಿಸಲಿಲ್ಲ.

ಪತ್ರಗಳ ಮೇಲೆ ಬರೆದಿದ್ದ ಇಂಗ್ಲಿಷ್ ಅಡ್ರೆಸ್‍ಗಳನ್ನು ಒಂದಾದ ಮೇಲೊಂದು ಓದುತ್ತಾ, ಆಯಾ ಏರಿಯಾದ ಪೋಸ್ಟ್‍ಮನ್‍ಗಳತ್ತ ಎಸೆಯುತ್ತಿದ್ದ ಅಂಚೆ ಕಾರಕೂನನ ದನಿ ಆ ಮುದುಕನ ಸಮಷ್ಠಿಯೂ ಆಗಿತ್ತು. ವರ್ಷಾನುವರ್ಷ ಅದೇ ಕೆಲಸ ಮಾಡುತ್ತಾ ಬಂದಿದ್ದ ಕಾರಕೂನನಿಗೆ ಆ ಕಾಯಕ ಎಷ್ಟು ಅಭ್ಯಾಸವಾಗಿತ್ತೆಂದರೆ ನೂರಾರು ಪತ್ರಗಳನ್ನು ಕ್ಷಣಮಾತ್ರದಲ್ಲಿ ಓದಿ ವಿಂಗಡಿಸಿ ಎಸೆದುಬಿಡುತ್ತಿದ್ದ – ಕಮೀಷನರ್, ಸೂಪರಿಂಟೆಂಡೆಂಟ್, ದಿವಾನ್ ಸಾಹೇಬರು, ಲೈಬ್ರರಿಯನ್…. ಹೀಗೆ.

ಈ ಕೆಲಸದ ನಡುವೆ ಲೇವಡಿಯ ದನಿಯೊಂದು ಕೂಗಿತು, `ಟಾಂಗಾವಾಲಾ ಅಲಿ’!
ಆ ಹೆಸರು ಕಿವಿ ಮೇಲೆ ಬೀಳುತ್ತಿದ್ದಂತೆಯೇ ಕೂತಲ್ಲಿಂದ ದಢಾರನೇ ಎದ್ದು ನಿಂತ ಮುದುಕ, ಆಗಸದತ್ತ ಕತ್ತೆತ್ತಿ ಕಣ್ಣಲ್ಲೇ ಸ್ವರ್ಗಕ್ಕೆ ಧನ್ಯವಾದ ಹೇಳುತ್ತಾ, ಬಾಗಿಲಿನ ಮೇಲೆ ಕೈಯಿಟ್ಟು ತಳ್ಳಿದ.
“ಗೋದುಲ್ ಅಣ್ಣಾ!”
“ಹ್ಞಾಂ. ಯಾರದು?”
“ಈಗಷ್ಟೇ ನೀವು ಟಾಂಗಾವಾಲಾ ಅಲಿ ಅಂತ ಹೆಸ್ರು ಕೂಗಿದ್ರಲ್ವಾ? ನಾನೇ ಅವನು. ಕೊಡಿ, ನನಗೆ ಬಂದಿರೋ ಆ ಪತ್ರ ಕೊಡಿ”
“ಒಹ್, ಇವನೊಬ್ಬ ಹುಚ್ಚ ಸಾ. ಪ್ರತಿದಿನ ಬಂದು ಬರದೇ ಇರೊ ಪತ್ರಕೋಸ್ಕರ, ನನಗೆ ಬಂದಿರೋ ಲೆಟರ್ ಕೊಡಿ ಅಂತ ಪ್ರಾಣ ತಿಂತಾನೆ.” ಕಾರಕೂನ ಪೋಸ್ಟ್ ಮಾಸ್ಟರ್‍ಗೆ ಹೇಳಿದ.
ಆ ಮುದುಕ, ನಿಧಾನಕ್ಕೆ ಹೆಜ್ಜೆಗಳನ್ನು ಕಿತ್ತಿಡುತ್ತಾ ವರಾಂಡದಲ್ಲಿದ್ದ ಬೆಂಚಿನ ಮೇಲೆ ಬಂದು ಕೂತ. ಕಳೆದ ಐದು ವರ್ಷದಿಂದ ಆ ಬೆಂಚು ಅವನ ಖಾಯಂ ಸಂಗಾತಿ.

ಒಂದಾನೊಂದು ಕಾಲದಲ್ಲಿ ಈ ಅಲಿ ಶಿಕಾರಿ ಮಾಡೋದ್ರಲ್ಲಿ ಎತ್ತಿದ ಕೈ. ಶಿಕಾರಿಯಲ್ಲಿ ಅವನು ಎಷ್ಟು ಪಳಗಿದ್ದನೆಂದರೆ, ಒಂದೇಒಂದು ದಿನವೂ ಶಿಕಾರಿ ಬಿಟ್ಟು ಇರೋದಕ್ಕೆ ಅವನಿಂದ ಆಗುತ್ತಿರಲಿಲ್ಲ. ಬೇರೆಯವರ ಕಣ್ಣಿಗೆ ಅಷ್ಟು ಸುಲಭಕ್ಕೆ ಕಾಣಲೊಲ್ಲದ ಬೂದು ಬಣ್ಣದ ಕೌಜುಗ ಹಕ್ಕಿಗಳೂ ಇವನಿಗೆ ಸಲೀಸಾಗಿ ಕಂಡುಬಿಡುತ್ತಿದ್ದವು. ಒಮ್ಮೆ ಅವುಗಳ ಮೇಲೆ ಇವನ ಕಣ್ಣುಬಿತ್ತೆಂದರೆ, ಮರುಕ್ಷಣದಲ್ಲೇ ಅವು ಇವನ ಶಿಕಾರಿ ಬುಟ್ಟಿ ಸೇರಿಬಿಡುತ್ತಿದ್ದವು. ಬಿಲದೊಳಗೆ ಅವಿತಿದ್ದ ಮೊಲಗಳೂ ಇವನ ಕಣ್ಣಳತೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಒಣಗಿದ ಪೆಳೆಯೊಳಗೆ ಮರಾಮೋಸದಿಂದ ಅವಿತಿಟ್ಟುಕೊಂಡ ಪ್ರಾಣಿಗಳು ನಾಯಿಗಳ ಕಣ್ಣಿಗೆ ಮಣ್ಣೆರಚಿದರೂ ಅಲಿಯ ಕಣ್ಣಿಗೆ ಮೋಸ ಮಾಡಲು ಸೋತುಬಿಡುತ್ತಿದ್ದವು; ಮರುಕ್ಷಣದಲ್ಲಿ ಅವು ಸತ್ತವೆಂದೇ ಲೆಕ್ಕ. ಕಾಡಿನ ಶಿಕಾರಿ ಜೊತೆಗೆ ಆಗಾಗ್ಗೆ ತನ್ನ ಗೆಳೆಯರು, ಬೆಸ್ತರ ಜೊತೆಗೆ ಮೀನು ಹಿಡಿಯುವುದಕ್ಕೂ ಹೋಗುತ್ತಿದ್ದ.

ಅವನ ಬಾಳಿನ ಮೇಲೆ ಮುಸ್ಸಂಜೆ ಕವಿದಂತೆಲ್ಲಾ, ಬದುಕಿನ ರೀತಿಯೇ ಬದಲಾಗಿಹೋಯ್ತು, ಹೊಸ ತಿರುವಿಗೆ ಬಂದು ನಿಂತ. ಅವನ ಒಬ್ಬಳೇ ಮಗಳು ಮಿರಿಯಮ್ಮ, ಮದುವೆಯಾಗಿ ಹೊರಟುಹೋದಳು. ಸೈನಿಕ ಗಂಡನ ಜೊತೆ ಅವನು ಕೆಲಸ ಮಾಡುತ್ತಿದ್ದ ಪಂಜಾಬಿನ ರೆಜಿಮೆಂಟಿಗೆ ಹೋದ ಆಕೆಯಿಂದ ಕಳೆದ ಐದು ವರ್ಷಗಳಲ್ಲಿ ಯಾವ ಸುದ್ದಿಯೂ ಇಲ್ಲ. ಒಬ್ಬಳೇ ಮಗಳಿಗಾಗಿ ಬದುಕಿದ್ದ ಅವನ ಜೀವನವೇ ಈಗ ಸಪ್ಪೆಯಾಗಿಹೋಯ್ತು. ಆದರು ಅವಳಿಂದ ಇವತ್ತಲ್ಲ ನಾಳೆ ಸುದ್ದಿ ಬರುಬಹುದು ಎಂಬ ಕಾತರವಷ್ಟೇ ಅವನನ್ನು ಈ ಭೂಮಿ ಮೇಲೆ ಬದುಕಿಸಿತ್ತು. ಈಗ ಅವನಿಗೆ ಪ್ರೀತಿ ಮತ್ತು ಅಗಲಿಕೆಯ ಬೆಲೆ ಗೊತ್ತಾಗುತ್ತಿದೆ. ಪ್ರಾಣಿಯನ್ನೋ ಪಕ್ಷಿಯನ್ನೋ ತನ್ನ ಸಂಗಾತಿಗಳಿಂದ, ಚಿಕ್ಕಪುಟ್ಟ ಕೌಜುಗನ ಮರಿಗಳನ್ನು ಅವುಗಳ ಹೆತ್ತವರಿಂದ ನಿರ್ದಾಕ್ಷಿಣ್ಯವಾಗಿ ದೂರ ಮಾಡುತ್ತಿದ್ದ ಹಳೆಯ ಶಿಕಾರಿತನದ ಬಗ್ಗೆಯೇ ಅವನಿಗೆ ಹೇವರಿಕೆಯಾಗುತ್ತಿದೆ. ಮೊದಲೆಲ್ಲ ಖುಷಿಕೊಡುತ್ತಿದ್ದ ಶಿಕಾರಿ ಈಗ ಮುಳ್ಳಿನಿಂದ ಎದೆಯನ್ನು ಚುಚ್ಚಿದಂತಾಗುತ್ತಿದೆ.

ರಕ್ತ, ಮಾಂಸದ ತುಂಬೆಲ್ಲ ಶಿಕಾರಿತನವನ್ನೇ ತುಂಬಿಕೊಂಡಿದ್ದ ಅಲಿಗೆ ಈಗ, ಮಗಳು ಮಿರಿಯಮ್ಮ ದೂರವಾದ ನಂತರ, ಈ ಏಕಾಂತ ದಟ್ಟಡವಿಯಲ್ಲಿ ಕಳೆದುಹೋದ ವ್ಯಕ್ತಿಯಂತೆ ಕಂಗೆಡಿಸಿದೆ. ಈಗವನಿಗೆ ಮನದಟ್ಟಾಗಿದೆ, ಈ ಜಗತ್ತು ಬೆಸೆದುಕೊಂಡಿರುವುದೇ ಪ್ರೀತಿಯ ಬಂಧದಿಂದ, ಪ್ರೀತಿಪಾತ್ರರ ಅಗಲಿಕೆಯ ಸಂಕಟ ಅನಂತವಾದುದು ಎಂದು. ಅದು ಅರ್ಥವಾದ ದಿನ ಮರವೊಂದರ ಕೆಳಗೆ ಕೂತು ಗಂಟೆಗಟ್ಟಲೆ ಬಿಕ್ಕಿಬಿಕ್ಕಿ ಅತ್ತಿದ್ದ. ಕಣ್ಣೀರು ಖಾಲಿಯಾಯಿತು, ಎದೆಯೊಳಗಿನ ಹೆಪ್ಪುಗಟ್ಟಿದ್ದ ದುಃಖ ಮಾತ್ರ ಹಾಗೇ ಇತ್ತು. ಅವತ್ತಿನಿಂದ ದಿನಾ ಬೆಳಿಗ್ಗೆ ನಾಲ್ಕು ಗಂಟೆಗೇ ಎದ್ದು ಪೋಸ್ಟಾಫೀಸಿಗೆ ಬರುತ್ತಾನೆ. ಅವನ ಜೀವಮಾನದಲ್ಲಿ ಯಾವತ್ತೂ ಅವನಿಗೆ ಪತ್ರವೇ ಬಂದಿಲ್ಲ, ಆದರೂ ಮಗಳಿಂದ ಪತ್ರ ಬಂದೇ ಬರುತ್ತೆ, ಅವಳ ಯೋಗಕ್ಷೇಮದ ಸುದ್ದಿ ತಂದೇ ತರುತ್ತೆ ಎಂಬ ನಂಬಿಕೆಯೇ ಅವನನ್ನು ಕೊರೆವ ಚಳಿ, ಸುರಿವ ಮಳೆಯಲ್ಲೂ ಇಲ್ಲಿಗೆ ತಂದು ನಿಲ್ಲಿಸುತ್ತದೆ.

ಬಾಕಿ ಪ್ರಪಂಚಕ್ಕೆಲ್ಲ ಅತಿ ನೀರಸ ತಾಣವೆನಿಸುವ ಪೋಸ್ಟಾಫೀಸು, ಅಲಿಯ ಪಾಲಿಗೆ ಪುಣ್ಯಕ್ಷೇತ್ರವಾಯ್ತು. ದಿನಾ ಬಂದು ಒಂದು ನಿರ್ದಿಷ್ಟ ಮೂಲೆಯ ನಿರ್ದಿಷ್ಟ ಬೆಂಚಿನ ಮೇಲೆ ಕೂತು ಪತ್ರಕ್ಕಾಗಿ ಕಾಯುವುದು ಅವನ ಹವ್ಯಾಸವಾಯ್ತು. ಜನ ಅವನನ್ನು ನೋಡಿ ನಗಾಡಲು ಶುರು ಮಾಡಿದರು. ಅಂಚೆಯವರು ಅವನನ್ನು ಗೇಲಿ ಮಾಡುತ್ತಾ ತಮಾಷೆಯ ವಸ್ತುವಾಗಿ ಕಂಡರು. ಅವನಿಗೆ ಯಾವ ಪತ್ರವೂ ಬಂದಿರದಿದ್ದರು ಬೇಕುಬೇಕಂತಲೇ ಅವನ ಹೆಸರು ಕೂಗಿ ಕರೆದು, ಅವನು ದಡಬಡಾಯಿಸಿ ಒಳಗೆ ಬರುತ್ತಿದ್ದಂತೆಯೇ ಗೊಳ್ಳೆಂದು ನಗುತ್ತಿದ್ದರು. ಇವತ್ತು ಸಹಾ ಅವನ ಹೆಸರು ಕೂಗಿದ್ದು ಅಂತದ್ದೇ ಕುಚೇಷ್ಟೆಗೆ. ಆದರು ಎದೆಯೊಳಗಿದ್ದ ಅಪರಿಮಿತ ವಿಶ್ವಾಸ, ಅಗಾಧ ತಾಳ್ಮೆಯಿಂದ ಪ್ರತಿದಿನ ಬರುತ್ತಿದ್ದ. ಬಂದು ಅದೇ ಬೆಂಚಿನ ಮೇಲೆ ಕೂರುತ್ತಿದ್ದ. ಬೇರೆಯವರಿಗೆ ತಮಾಷೆಯ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದ. ತನಗ್ಯಾವ ಪತ್ರವೂ ಬಂದಿಲ್ಲವೆಂದು ತಿಳಿದು ಭಾರದ ನಡಿಗೆಯೊಂದಿಗೆ ವಾಪಾಸು ಹೋಗುತ್ತಿದ್ದ.
ಅಲಿ ಹೀಗೆ ದಿನಂಪ್ರತಿ ಬಂದು ಅಲ್ಲಿ ಕೂರುತ್ತಿದ್ದಾಗ, ಬೇರೆಬೇರೆ ಆಫೀಸುಗಳ ಜವಾನರು ಬಂದು ತಮ್ಮ ಕಚೇರಿಗೆ ಬಂದ ಪತ್ರಗಳನ್ನು ಪಡೆದು ಹೋಗುತ್ತಿದ್ದರು. ಹಾಗೆ ಬಂದವರು ತಮ್ಮ ಮೇಲಾಧಿಕಾರಿಗಳ ಬಗ್ಗೆ ಅಂತೆಕಂತೆ ವಿಚಾರಗಳನ್ನು ಮಾತಾಡಿಕೊಂಡು ಕೂರುತ್ತಿದ್ದರು. ಬಾಗಿಲು ತಳ್ಳಿಕೊಂಡು ಒಳಬರುತ್ತಿದ್ದ ಭಾವಾಭಿವ್ಯಕ್ತವೇ ಇರದ ಸಪ್ಪೆ ಮೋರೆಯ ವ್ಯಕ್ತಿಯೊಬ್ಬ ತನ್ನ ಕುರ್ಚಿಯಲ್ಲಿ ಕೂರುತ್ತಿದ್ದ. ಲವಲವಿಕೆಯೇ ಇಲ್ಲದ ಇಂಥಾ ವ್ಯಕ್ತಿಗಳನ್ನು ನೋಡುತ್ತಿದ್ದಂತೆಯೇ ಅವರು ಹಳ್ಳಿಯ ಮಾಸ್ತರರೋ, ಆಫೀಸಿನ ಕಾರಕೂನರೊ ಅಥವಾ ಪೋಸ್ಟ್ ಮಾಸ್ಟರೋ ಇರಬಹುದು ಎಂದು ಸುಲಭವಾಗಿ ಊಹಿಸಿಬಿಡಬಹುದು.

ಒಂದು ದಿನ ಯಥಾ ಪ್ರಕಾರ ಬಂದು ತನ್ನ ಜಾಗದಲ್ಲಿ ಕೂತಿದ್ದ, ಬಾಗಿಲು ತೆರೆದರೂ ಅವನು ತನ್ನ ಜಾಗದಿಂದ ಮೇಲೇಳಲಿಲ್ಲ.
`ಪೊಲೀಸ್ ಕಮೀಷನರ್!’ ಅಂಚೆ ಕಾರಕೂನ ಕೂಗಿದ, ಆ ಕಚೇರಿಯ ಜವಾನ ಮುಂದೆ ಬಂದು ಪತ್ರ ತೆಗೆದುಕೊಂಡ.
`ಸೂಪರಿಂಟೆಂಡೆಂಟ್!’ ಮತ್ತೊಬ್ಬ ಜವಾನ ಬಂದು ಆ ಪತ್ರ ತೆಗೆದುಕೊಂಡ; ಮತ್ತೆ ಕಾರಕೂನ ಇನ್ನೊಂದು ಹೆಸರು ಕೂಗಿದ. ಒಟ್ಟಾರೆ, ವಿಷ್ಣು ಸಹಸ್ರನಾಮ ಜಪಿಸುವ ಭಕ್ತನಂತೆ ಅವನು ಪತ್ರಗಳ ಹೆಸರುಗಳನ್ನು ಸರಸರನೆ ಕೂಗಿ ಹೇಳುತ್ತಾಹೋದ.
ಕೊನೆಗೆ ಎಲ್ಲರೂ ಹೋದರು. ಅಲಿಯೂ ಮೇಲಕ್ಕೆದ್ದು, ತನಗಿಂತಲೂ ನೂರಾರು ವರ್ಷಗಳ ಹಳೆಯ, ಅಪರೂಪದ ಪಳೆಯುಳಿಕೆ ಕಟ್ಟಡವೇನೊ ಎಂಬಂತೆ ಮತ್ತೆಮತ್ತೆ ಪೋಸ್ಟಾಫೀಸಿನತ್ತ ತಿರುತಿರುಗಿ ನೋಡುತ್ತಾ ಮನೆಯತ್ತ ಹೆಜ್ಜೆಹಾಕಿದ.

“ಆ ಮನುಷ್ಯ,” ಪೋಸ್ಟ್‍ಮಾಸ್ಟರ್ ಕೇಳಿದ, “ಹುಚ್ಚನಾ?”
“ಯಾರು, ಸಾ? ಓಹ್ ಅವನಾ, ಹೌದು” ಕಾರಕೂನ ಉತ್ತರಿಸಿದ “ಅವನೊಂಥರಾ ಹುಚ್ಚನೇ. ಛಳಿಯೇ ಇರಲಿ, ಮಳೆಯೇ ಬರಲಿ, ಕಳೆದ ಐದು ವರ್ಷದಿಂದ ದಿನಾ ಇಲ್ಲಿಗೆ ಬರ್ತಾನೆ. ಆದ್ರೆ ಅವುನಿಗೆ ಅಂತ ಒಂದೂ ಪತ್ರ ಬರಲಿಲ್ಲ”.
“ಅದು ನಂಗೊತ್ತು ಬಿಡು! ಪ್ರತಿದಿನ ಲೆಟರ್ ಬರೆಯೋಕ್ಕೆ ಯಾರಿಗೆ ಪುರಸೊತ್ತು ಇರುತ್ತೆ ಅನ್ಕೊಂಡಿದಾನೆ ಈ ಮುದುಕ”.
“ಆದ್ರೂ ಅಯ್ಯೋ ಅನ್ಸುತ್ತೆ ಸಾ. ಹಿಂದೆಲ್ಲಾ ತುಂಬಾ ಪಾಪಗಳ್ನ ಮಾಡಿದ ಮನುಷ್ಯನಂತೆ ಇವ್ನು; ಪುಣ್ಯಕ್ಷೇತ್ರಗಳಲ್ಲೂ ಸಾಕಷ್ಟು ರಕ್ತ ಹರಿಸಿದವನಂತೆ ಅವನು, ಆ ಪಾಪಕ್ಕೆಲ್ಲ ಈಗ ಪ್ರಾಯಶ್ಚಿತ್ತ ಅನುಭವುಸ್ತಾ ಇದಾನೆ” ಕಾರಕೂನ ತನ್ನನ್ನು ತಾನೇ ಸಮರ್ಥಿಸಿಕೊಳ್ಳುತ್ತ ನುಡಿದ.
“ಹುಚ್ರು ತುಂಬಾ ವಿಚಿತ್ರ ಜನಾ ಕಂಡ್ರಿ” ಪೋಸ್ಟ್‍ಮಾಸ್ಟರ್ ನುಡಿದ.
“ಹೌದು. ನಾನು ಅಹಮದಾಬಾದಿನಲ್ಲಿ ಒಬ್ಬ ಹುಚ್ಚನ್ನ ನೋಡಿದ್ದೆ, ಕಲ್ಲುಮಣ್ಣು ಕಸ ಕಡ್ಡಿಗಳ್ನೆ ಚಿನ್ನ ಬಂಗಾರದ ಥರ ಗುಡ್ಡೆ ಹಾಕ್ಕೊಂಡು ಜೋಪಾನ ಮಾಡ್ತಿದ್ದ. ಇನ್ನೊಬ್ಬ, ಅವನು ದಿನಾ ಬೆಳಿಗ್ಗೆನೆ ಎದ್ದು ನದಿ ದಂಡೆಗೆ ಹೋಗಿ ಒಂದು ಕಲ್ಲಿನ ಮ್ಯಾಲೆ ನೀರು ಸುರುದು ಬರ್ತಿದ್ದ!”
“ಓಹ್, ಅದೆಲ್ಲ ಏನೂ ಅಲ್ಲ ಬಿಡು” ಮತ್ತೊಬ್ಬ ಮೇಳ ಶುರು ಮಾಡಿಕೊಂಡ “ನಾನೊಬ್ಬ ಹುಚ್ಚನ್ನ ನೋಡಿದ್ದೆ. ಅವನು ಕೂತಕಡೆ ಕೂರ್ತಿರಲಿಲ್ಲ. ದಿನಪೂರ್ತಿ ಅತ್ತಿಂದಿತ್ತ ಇತ್ತಿಂದತ್ತ ಓಡಾಡೋದೆ ಕೆಲಸ. ಇನ್ನೊಬ್ಬ ಕವನದ ಮೇಲೆ ಕವನ ಹೇಳಿದ್ದೇ ಹೇಳಿದ್ದು. ಇನ್ನೂ ಒಬ್ಬ ಇದ್ದ. ಅವುನಂತು ತನ್ನ ಕಪಾಳಕ್ಕೆ ತಾನೇ ಹೊಡ್ಕಂಡು, ಯಾರೊ ಹೊಡುದ್ರು ಅಂತ ಅಳೋನು”.
ಪೋಸ್ಟಾಫೀಸಿನಲ್ಲಿದ್ದ ಪ್ರತಿಯೊಬ್ಬರು ಹುಚ್ಚಿನ ಬಗ್ಗೆ ಮಾತಾಡಲು ಶುರು ಮಾಡಿದರು. ಜವಾನನಿಂದ ದಿವಾನನವರೆಗೆ ಎಲ್ಲರೂ ತಮ್ಮ ಕೆಲಸ ಬಿಟ್ಟು ಇಂಥಾ ಹರಟೆಗಳಲ್ಲಿ ಒಂದಷ್ಟು ರಿಲ್ಯಾಕ್ಸ್ ಮಾಡ್ಕೊಳ್ಳೋದು ಹವ್ಯಾಸ ಆಗಿಬಿಟ್ಟಿದೆ. ಅಂಥ ಒಂದಷ್ಟು ಒಣಹರಟೆಗಳನ್ನು ಕೇಳಿಸಿಕೊಂಡ ನಂತರ, ಪೋಸ್ಟ್‍ಮಾಸ್ಟರ್ ಎದ್ದು ನಿಂತು ಹೇಳಿದ:
“ಇದುನ್ನೆಲ್ಲ ನೋಡ್ತಾ ಇದ್ದ್ರೆ ಹುಚ್ಚರು ತಮ್ಮದೇ ಲೋಕದಲ್ಲಿ ಬದುಕ್ತಾರೆ ಅನ್ಸುತ್ತೆ. ಅವರ ದೃಷ್ಟಿಯಲ್ಲಿ, ನಾವೇ ಹುಚ್ಚರಿರಬೌದು. ಬಹುಶಃ ಹುಚ್ಚರ ಲೋಕ, ನಮ್ಮ ಕವಿಗಳ ಲೋಕದ ಥರಾನೆ ಇರಬೌದೇನೊ ಅನ್ಸುತ್ತೆ”.
ಕೊನೆಯ ಶಬ್ಧಗಳು ತನ್ನ ಬಾಯಿಂದ ಹೊರಬರುತ್ತಿದ್ದಂತೆಯೇ, ಯಾವಾಗಲೂ ಅಸಂಬದ್ಧ ಕವನಗಳನ್ನು ಗೀಚಿ ತಮ್ಮ ತಲೆತಿನ್ನುವ ಒಬ್ಬ ಕಾರಕೂನನತ್ತ ನೋಡಿ, ಪೋಸ್ಟ್‍ಮಾಸ್ಟರ್ ಜೋರಾಗಿ ನಗಲು ಶುರು ಮಾಡಿದ. ನಗುತ್ತಲೇ ಅವನು ಹೊರನಡೆದ ನಂತರ ಕಚೇರಿಯನ್ನು ಮತ್ತೆ ಮೌನ ಆವರಿಸಿತು.

ಆದರೆ ಕೆಲದಿನಗಳು ಅಲಿ ಪೋಸ್ಟಾಫೀಸಿಗೆ ಬರಲೇ ಇಲ್ಲ. ಏನು ಕಾರಣವಿರಬಹುದು ಅಂತ ಊಹಿಸುವಷ್ಟು ಕನಿಕರವಾಗಲಿ, ಅವನ ಬಗ್ಗೆ ನಿಜವಾದ ಕಾಳಜಿಯಾಗಲಿ ಯಾರಿಗೂ ಇಲ್ಲದೆ ಹೋದರು, ಆತ ಯಾಕೆ ಬರುತ್ತಿಲ್ಲ ಎಂಬ ಕಾರಣವನ್ನು ತಿಳಿದುಕೊಳ್ಳುವ ಕುತೂಹಲ ಮಾತ್ರ ಎಲ್ಲರಿಗೂ ಇತ್ತು. ಕೊನೆಗೊಂದು ದಿನ ಅವನು ಮತ್ತೆ ಬಂದ; ಆದರೆ ಅವನು ಉಸಿರಾಡುವುದಕ್ಕೂ ಹರಸಾಹಸ ಪಡುವ ಸ್ಥಿತಿಯಲ್ಲಿದ್ದ, ಅವನ ಮುಖದ ಮೇಲೆ ಸಾವಿನ ಚಿಹ್ನೆಗಳು ಪುಟಿದೇಳುತ್ತಿದ್ದವು. ಅವತ್ತು ಅವನು ತಾಳ್ಮೆಯಿಂದ ಕೂತು ಎದ್ದೋಗುವ ಪರಿಸ್ಥಿತಿಯಲ್ಲಿ ಇರಲಿಲ್ಲ.

“ಮಾಸ್ಟರ್ ಸಾಬ್” ಪೋಸ್ಟ್‍ಮಾಸ್ಟರ್ ಮುಂದೆ ದೈನೇಸಿಯಾಗಿ ಬೇಡಿಕೊಂಡ, “ಮಿರಿಯಮ್ಮಳಿಂದ ಯಾವುದಾದರು ಪತ್ರ ಬಂದಿದೆಯಾ?”.
ಪೋಸ್ಟ್‍ಮಾಸ್ಟರ್ ಕಚೇರಿಯಿಂದ ಕಾರ್ಯನಿಮಿತ್ತ ಹೊರಹೋಗುವ ಆತುರದಲ್ಲಿದ್ದ.
“ಏಯ್, ಏನ್ ಮನುಷ್ಯನಯ್ಯಾ ನೀನು!” ಅವನು ರೇಗಿದ.
“ನನ್ನ ಹೆಸರು ಅಲಿ” ಮುದುಕನಿಂದ ಅಸಂಬದ್ದ ಉತ್ತರ ಹೊರಬಿತ್ತು.
“ಗೊತ್ತು, ಗೊತ್ತು. ಆದ್ರೆ ನಿನ್ನ ಮಿರಿಯಮ್ಮಳ ಹೆಸ್ರು ನಮ್ಮ ತಲೇಲಿ ಪ್ರಿಂಟ್ ಆಗಿರುತ್ತೆ ಅನ್ಕೊಂಡಿದೀಯಾ?”
“ಹಾಗಿದ್ದ್ರೆ, ಇವತ್ತು ಚೆನ್ನಾಗಿ ಆ ಹೆಸ್ರನ್ನ ನೆನಪಿಟ್ಕೊ ತಮ್ಮಾ. ನಾನು ಇಲ್ಲಿ ಇಲ್ದೇ ಇರೋವಾಗ ನನಿಗೆ ಯಾವ್ದಾದ್ರು ಪತ್ರ ಬಂದ್ರೆ, ಅದುನ್ನ ನನಿಗೆ ತಲುಪಿಸಿದ್ರೆ ತುಂಬಾ ಉಪ್ಕಾರ ಆಗುತ್ತೆ”. ತನ್ನ ಮೂರು ಮುಕ್ಕಾಲು ಜೀವನವನ್ನು ಶಿಕಾರಿಯಲ್ಲೇ ಕಳೆದ ಹಳೇ ಮುದುಕನಿಗೆ ತನ್ನ ಮಗಳು ಮಿರಿಯಮ್ಮಳ ಹೆಸರು ಉಳಿದ ಜಗತ್ತಿಗೆ ತೃಣಮಾತ್ರವೂ ಬೆಲೆಯುಳ್ಳದ್ದಲ್ಲ ಎಂಬುದು ಹೇಗೆ ತಾನೆ ಅರ್ಥವಾದೀತು.

ಪೋಸ್ಟ್‍ಮಾಸ್ಟರ್‍ಗೆ ಸಿಟ್ಟು ನೆತ್ತಿಗೇರುತ್ತಿತ್ತು, “ನಿಮಿಗೇನು ಪ್ರಜ್ಞೆ ಇಲ್ವೇನ್ರಿ ಯಜಮಾನ್ರೇ?” ಜೋರಾಗಿ ಚೀರಿದ “ತೊಲುಗ್ರೀ ಇಲ್ಲಿಂದ! ನಿಮಿಗೆ ಬಂದ ಪತ್ರನ ನಾವು ತಿಂದ್ಕೊಂಡ್ ಬಿಡ್ತೀವಿ ಅನ್ಕಂಡಿದೀರಾ?” ಮುದುಕನನ್ನು ಲೆಕ್ಕಿಸದೆ ಹೊರನಡೆದ. ಅಲಿ ನಿಧಾನವಾಗಿ ಹೊರಬಂದ. ಪ್ರತಿ ಹೆಜ್ಜೆಗೂ ತಿರುತಿರುಗಿ ಪೋಸ್ಟಾಫೀಸು ನೋಡುತ್ತಾ ಮುಂದಡಿ ಇಟ್ಟ. ಎದೆಯೊಳಗೆ ಮಗಳಿಂದ ಪತ್ರ ಬರುವ ಬಗ್ಗೆ ಇನ್ನೂ ವಿಶ್ವಾಸ ಇತ್ತಾದರು, ಅವನ ಕಣ್ಣುಗಳಲ್ಲಿ ಅಸಹಾಯಕತೆಯ ಕಂಬನಿ ತುಂಬಿ ಬಂದಿದ್ದವು, ಅವನ ತಾಳ್ಮೆ ದಣಿದುಹೋಗಿತ್ತು. ಆದರೂ ಮಿರಿಯಮ್ಮಳಿಂದ ಪತ್ರ ಬರುವ ಬಗ್ಗೆ ಅವನಿಗೆ ಅದೆಂಥಾ ವಿಶ್ವಾಸ?
ತನ್ನ ಬೆನ್ನ ಹಿಂದೆ ಯಾರೋ ನಡೆದು ಬರುತ್ತಿರುವ ಹೆಜ್ಜೆ ಸಪ್ಪಳ ಅಲಿಯ ಮಂದ ಕಿವಿಗಳಿಗೆ ಕೇಳಿಸಿತು. ತಿರುಗಿ ನೋಡಿದ, ಅಂಚೆ ಕಚೇರಿಯ ಕಾರಕೂನ ತನ್ನದೇ ಮಗ್ನದಲ್ಲಿ ನಡೆದು ಬರುತ್ತಿದ್ದ.

“ತಮ್ಮಾ!” ಅಲಿ ಕೂಗಿದ.
ಕಾರಕೂನನಿಗೆ ಅಚ್ಚರಿಯಾಯಿತಾದರು, ಸಭ್ಯನಂತೆ “ಏನೂ!” ಎಂದ.
“ನೋಡಿಲ್ಲಿ, ತಗೋ ಇದನ್ನು” ತನ್ನ ಜುಬ್ಬದ ಜೇಬಿನ ಒಳಗಿಂದ ಹಳೆಯ ಸಣ್ಣ ಡಬ್ಬಿಯೊಂದನ್ನು ಹೊರಗಳೆದು ಕಾರಕೂನನ ಬೊಗಸೆಯೊಳಕ್ಕೆ ಐದು ಬಂಗಾರದ ಚಿಕ್ಕ ನಾಣ್ಯಗಳನ್ನು ಸುರಿದ. “ಅಷ್ಟ್ಯಾಕೆ ಬೆದರಿಕೊಳ್ತೀಯಾ” ಅಲಿ ಮಾತು ಮುಂದುವರೆಸಿದ, “ನನಗಂತೂ ಇವು ಉಪಯೋಗಕ್ಕೆ ಬರಲಿಲ್ಲ, ನಿನಗಂತೂ ಖಂಡಿತ ಉಪಯೋಗಕ್ಕೆ ಬರ್ತವೆ. ಆದ್ರೆ ನೀನು ನನಿಗೊಂದು ಸಹಾಯ ಮಾಡ್ತೀಯಾ?”.
“ಏನು?”
“ಅಲ್ಲಿ ನಿನಿಗೆ ಏನು ಕಾಣಿಸ್ತಿದೆ?” ಅಲಿ ತನ್ನ ತೋರ್ಬೆರಳನ್ನು ಆಗಸದತ್ತ ದಿಕ್ಕು ಮಾಡಿ ಕೇಳಿದ.
“ದೇವರ ಸ್ವರ್ಗ”
“ಹೌದು. ಅಲ್ಲಿ ಅಲ್ಲಾ ಇದಾನೆ. ಅವನ ಸಾಕ್ಷಿಯಾಗಿಟ್ಕೊಂಡು ನಿನಿಗೆ ಈ ಹಣ ಕೊಡ್ತಾ ಇದೀನಿ. ನನ್ನ ಮಿರಿಯಮ್ಮಳಿಂದ ಪತ್ರ ಬಂದಾಗ, ಅದನ್ನು ತಪ್ಪದೇ ನನಗೆ ತಂದುಕೊಡ್ಬೇಕು”.
“ಆದ್ರೆ ಎಲ್ಲಿಗೆ- ಎಲ್ಲಿಗೆ ಅಂತ ತಂದು ಕೊಡ್ಲಿ?” ಸಂಪೂರ್ಣವಾಗಿ ಬೆಚ್ಚಿಬಿದ್ದು ಕೇಳಿದ ಕಾರಕೂನ.
“ನನ್ನ ಸಮಾಧಿಗೆ!”
“ಏನು!?”
“ಹೌದು. ಸತ್ಯವಾಗ್ಲೂ. ಇವತ್ತೇ ನನ್ನ ಕೊನೇ ದಿನ: ನನ್ನ ಕಟ್ಟಕಡೇ ದಿನ. ಅಯ್ಯೋ! ನನಿಗೆ ನನ್ನ ಮಿರಿಯಮ್ಮಳನ್ನು ನೋಡಲಾಗ್ತಿಲ್ಲವಲ್ಲಾ ದೇವರೇ. ಅವಳಿಂದ ಒಂದು ಪತ್ರವೂ ಬರಲಿಲ್ಲ”. ಅಲಿಯ ಕಣ್ಣುಗಳೊಳಗೆ ಕಂಬನಿ ಕಾಳುಗಟ್ಟತೊಡಗಿದಂತೆ, ಕಾರಕೂನ ನಿಧಾನಕ್ಕೆ ಅಲ್ಲಿಂದ ಹೊರಟುಹೋದ, ಐದು ಚಿನ್ನದ ನಾಣ್ಯಗಳನ್ನು ಭದ್ರವಾಗಿ ತನ್ನ ಜೇಬಿನೊಳಕ್ಕೆ ಇಳಿಸಿಕೊಳ್ಳುತ್ತಾ…..

ಅವತ್ತಿನ ನಂತರ ಅಲಿ ಯಾರಿಗೂ ಕಾಣಿಸಿಕೊಳ್ಳಲಿಲ್ಲ. ಅವನ್ಯಾಕೆ ಕಾಣಿಸಿಕೊಳ್ಳುತ್ತಿಲ್ಲ ಎಂದು ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ.
ಒಂದು ದಿನ, ಆ ಅಂಚೆಕಚೇರಿಯ ಪೋಸ್ಟ್ ಮಾಸ್ಟರ್‍ರಿಗೆ ಸಮಸ್ಯೆ ಬಂದೇಬಿಟ್ಟಿತು. ಆತನ ಮಗಳು ಇನ್ನೊಂದು ಊರಿನಲ್ಲಿ ಕಾಯಿಲೆ ಮಲಗಿದ್ದಳು, ಅಲ್ಲಿಂದ ಬರುವ ಸುದ್ದಿಗಾಗಿ ಅವನು ಕಾತರದಿಂದ ಕಾಯುತ್ತಿದ್ದ. ಅವತ್ತಿನ ಅಂಚೆಗಳನ್ನೆಲ್ಲ ತಂದು ಟೇಬಲ್ಲಿನ ಮೇಲೆ ಗುಡ್ಡೆ ಹಾಕಲಾಯ್ತು. ತನಗೆ ಬರಬಹುದಾಗಿದ್ದ ಆಕಾರದ ಮತ್ತು ಬಣ್ಣದ ಎನ್ವಲಪ್ ನೋಡುತ್ತಿದ್ದಂತೆಯೇ ತಡಬಡಿಸಿ ಎತ್ತಿಕೊಂಡ. ಆದರೆ ಅದರ ಮೇಲೆ `ಟಾಂಗಾವಾಲಾ ಅಲಿ’ ಎಂಬ ವಿಳಾಸ ಬರೆದಿತ್ತು. ವಿದ್ಯುತ್ ಶಾಕ್ ತಗುಲಿತೇನೋ ಎಂಬಂತೆ ಅದನ್ನು ಟೇಬಲ್ಲಿನ ಮೇಲೆಸೆದು ಹೌಹಾರಿದ. ಅವನೊಳಗಿದ್ದ ಅಧಿಕಾರಿ ಗುಣದ ದರ್ಪವೆಲ್ಲ ಜರ್ರನೆ ಇಳಿದು, ಎದೆ ಮನುಷ್ಯತ್ವದ ಅಲೆಗಳ ಹೊಯ್ದಾಟದಿಂದ ಭಾರವಾದಂತೆನಿಸಿತು. ಇಷ್ಟು ದಿನ ಬೆಳ್ಳಂಬೆಳಿಗ್ಗೆ ಬಂದು ಕಾಯುತ್ತಿದ್ದ ಆ ಮುದುಕನಿಗೆ ಬಂದ ಪತ್ರವಿದು ಎಂಬುದು ಕೂಡಲೇ ಅರ್ಥವಾಯಿತು; ಅವನ ಮಗಳು ಮಿರಿಯಮ್ಮಳಿಂದಲೇ ಬಂದಿರಬೇಕು ಎಂದೆಣಿಸಿದ.

“ಲಕ್ಷ್ಮೀದಾಸ್!” ಪೋಸ್ಟ್‍ಮಾಸ್ಟರ್ ಕೂಗಿ ಕರೆದ. ಆ ಕೂಗಿಗೆ ಪ್ರತಿಯಾಗಿ “ಹ್ಞಾಂ, ಸಾರ್” ಎನ್ನುತ್ತಾ ಒಳಬಂದವನು ಅವತ್ತು ಅಲಿಯಿಂದ ಚಿನ್ನದ ನಾಣ್ಯ ಪಡೆದಿದ್ದ ಅದೇ ಕಾರಕೂನ!
“ಏನು ಸಾರ್”
“ತಗೋ, ಇದು ಆ ನಿಮ್ಮ ಮುದುಕಪ್ಪ ಟಾಂಗಾವಾಲಾ ಅಲಿಗೆ ಬಂದ ಪತ್ರ. ಎಲ್ಲಿದಾನೆ ಈಗವನು?”
“ನಾನ್ ನೋಡ್ಕಂಡು ಬರ್ತೀನಿ ಸಾರ್”
ಆದರೆ ಅವತ್ತು ತನ್ನ ಮಗಳಿಂದ ಕಾಯುತ್ತಿದ್ದ ಪತ್ರ ಪೋಸ್ಟ್ ಮಾಸ್ಟರ್‍ಗೆ ಬರಲೇ ಇಲ್ಲ. ರಾತ್ರಿಯಿಡಿ ನಿದ್ದೆ ಸುಳಿಯಲಿಲ್ಲ. ಮಗಳದೇ ಚಿಂತೆ. ಬೆಳಗಿನ ಜಾವ ಮೂರು ಗಂಟೆಗೆ ಎದ್ದವನೇ ತನ್ನ ಕಚೇರಿಗೆ ಬಂದು ಕುಳಿತ. `ನಾಲ್ಕು ಗಂಟೆಗೆ ಅಲಿ ಬರುತ್ತಿದ್ದಂತೆಯೇ ನಾನೇ ಅವನಿಗೆ ಈ ಪತ್ರ ತಲುಪಿಸಿಬಿಡ್ತೀನಿ’ ತನ್ನೊಳಗೆ ಗೊಣಗಿಕೊಂಡ.

ಅಲಿಯ ಆ ಕಾತರ ಮತ್ತು ವೇದನೆ ಈಗ ಅವನಿಗೆ ಅರ್ಥವಾಗತೊಡಗಿತು. ಕೇವಲ ಒಂದು ರಾತ್ರಿ, ಮಗಳ ಕುರಿತು ಬರಲಿರುವ ಸುದ್ದಿಗಾಗಿ ತಲ್ಲಣಿಸುತ್ತಾ ಕಾದ ಅವನಿಗೆ, ಕಳೆದ ಐದು ವರ್ಷಗಳಿಂದಲೂ ಇಂತಹ ಅದೆಷ್ಟೊ ರಾತ್ರಿಗಳನ್ನು ಇಂತದೇ ತಲ್ಲಣದೊಂದಿಗೆ ಕಾಯುತ್ತಿದ್ದ ಅಲಿಯ ಬಗ್ಗೆ ಅಪಾರ ಅನುಕಂಪ ಮೂಡಿತು. ಗಡಿಯಾರ ಐದು ಬಾರಿ ಬಾರಿಸುತ್ತಿದ್ದಂತೆಯೇ ಬಾಗಿಲನ್ನು ಯಾರೊ ಬಡಿದಂತಾಯ್ತು. ಅದು ಅಲಿಯೇ ಎಂಬುದು ಅವನಿಗೆ ಖಾತ್ರಿಯಾಯ್ತು. ಟೇಬಲ್ಲಿನ ಮೇಲಿದ್ದ ಆ ಪತ್ರವನ್ನು ಕೈಯಲ್ಲಿಡಿದು ಕುರ್ಚಿಯಿಂದ ಮೇಲೆದ್ದ ಆತ ಆತುರದಲ್ಲೆ ಬಾಗಿಲಿನತ್ತ ನಡೆದ.

“ಬನ್ನಿ ತಾತಾ, ತಗೋಳ್ಳಿ ನಿಮಗೆ ಬಂದಿರುವ ಈ ಪತ್ರ” ಎನ್ನುತ್ತಾ, ವೃದ್ಧಾಪ್ಯ ಹೆಗಲೇರಿ ಬೆನ್ನು ಬಾಗಿಸಿಕೊಂಡು ನಿಂತಿದ್ದ ಅಲಿಯ ಕೈಗೆ ಪತ್ರವನ್ನಿತ್ತ. ಊರುಗೋಲಿನ ಆಸರೆಯಿಂದ ಬಲು ಪ್ರಯಾಸದಿಂದ ನಿಂತಿದ್ದ ಅಲಿಯ ಕೆನ್ನೆಯ ಮೇಲೆ ಕಣ್ಣೀರು ಧುಮುಕಿದವು, ಅವತ್ತು ಕಾರಕೂನ ಹಣ ಪಡೆದು ದೂರಾದ ಕ್ಷಣದಲ್ಲಿ ಕಣ್ಣೊಳಗೆ ಕಾಳುಗಟ್ಟಿದ್ದ ಕಂಬನಿ ಇವತ್ತು ಕಟ್ಟೆಯೊಡೆದು ಧುಮ್ಮಿಕ್ಕುತ್ತಿವೆಯೇನೋ ಎಂಬಂತೆ. ಆದರೆ ಅವತ್ತಿಗಿಂತಲೂ ಮೆತ್ತಗಾದವನಂತೆ ಕಂಡುಬಂದ. ಅಲಿ ನಿಧಾನಕ್ಕೆ ಕಣ್ತೆರೆದ. ಅವನ ಕಣ್ಣೊಳಗಿಂದ ಮಿಂಚಿನ ಪ್ರಭೆಯೊಂದು ಚಿಮ್ಮಿದಂತಾಗಿ, ಪೋಸ್ಟ್‍ಮಾಸ್ಟರ್ ಭಯದೊಂದಿಗೆ ಹೌಹಾರಿ ಹಿಂದೆ ಸರಿದು ನಿಂತ.
ಹಿಂಬದಿಯ ಇನ್ನೊಂದು ಬಾಗಿಲನ್ನು ತಳ್ಳಿಕೊಂಡು ಅನುಮಾನ, ಆಶ್ಚರ್ಯದಿಂದ ಒಳಬಂದ ಲಕ್ಷ್ಮೀದಾಸ್ ಕೇಳಿದ, “ಯಾರ ಜೊತೆ ಮಾತನಾಡ್ತಾ ಇದ್ರಿ ಸಾ?”. ಆದರೆ ಪೋಸ್ಟ್‍ಮಾಸ್ಟರ್ ಲಕ್ಷ್ಮೀದಾಸನತ್ತ ತಿರುಗಿ ನೋಡಲಿಲ್ಲ. ಶೂನ್ಯದಲ್ಲಿ ದೃಷ್ಟಿ ನೆಟ್ಟವನಂತೆ, ಈಗಷ್ಟೇ ಅಲಿ ಅದೃಶ್ಯನಾದ ಬಾಗಿಲಿನ್ನೇ ದಿಟ್ಟಿಸುತ್ತಾ ದಿಗ್ಭ್ರಾಂತನಾಗಿ ನಿಂತಿದ್ದ. ಹಠಾತ್ತನೆ ಎತ್ತ ಮಾಯವಾದ ಈ ಮುದುಕ? ಅವನ ಮನಸ್ಸು ತರ್ಕಿಸುತ್ತಿತ್ತು.

“ಹ್ಞಾಂ, ಲಕ್ಷ್ಮೀದಾಸ್. ನಾನು ಈಗಷ್ಟೆ ಅಲಿಯ ಜೊತೆ ಮಾತಾಡುತ್ತಿದ್ದೆ” ವಾಸ್ತವಕ್ಕೆ ಮರಳಿ ಹೇಳಿದ.
“ಏನೇಳ್ತಿದೀರಾ ಸರ್. ಅಲಿ ಸತ್ತೋದನಂತೆ. ಎಲ್ಲಿ, ಅವನ ಪತ್ರ ಕೊಡಿ ನನಿಗೆ”
“ಏನು! ಆದ್ರೆ ಯಾವಾಗ? ನೀನು ನಿಜ ಹೇಳ್ತಿದೀಯಾ ಲಕ್ಷ್ಮಿದಾಸ್?”
“ಹೌದು ಸಾ. ನಿಜಾನೆ” ಒಳಬಂದ ಮತ್ತೊಬ್ಬ ಕಾರಕೂನ ನುಡಿದ, “ಅಲಿ ಮೂರು ತಿಂಗಳ ಹಿಂದೆಯೇ ಸತ್ತೋದ್ನಂತೆ”
ಪೋಸ್ಟ್‍ಮಾಸ್ಟರ್ ತಬ್ಬಿಬ್ಬಾಗಿ ನಿಂತ. ಅವನು ಅಲಿಯ ಕೈಗಿತ್ತ ಮಿರಿಯಮ್ಮಳ ಪತ್ರ, ಅಲ್ಲೇ ಬಾಗಿಲ ಬಳಿ ಬಿದ್ದಿತ್ತು. ಅಲಿ ನಿಂತಿದ್ದ ಚಿತ್ರಣ ಈಗಲೂ ಅವನ ಕಣ್ಣಿಗೆ ಕಟ್ಟಿದಂತಿದೆ. ಬಾಗಿಲು ಬಡಿದ ಸದ್ದು, ಅಲಿಯ ಕಣ್ಣಾಲಿಗಳಲ್ಲಿ ಸುರಿಯುತ್ತಿದ್ದ ಕಂಬನಿ ಇದ್ಯಾವುದನ್ನೂ ಸತ್ಯವಲ್ಲವೆಂದು ನಂಬಲು ಅವನ ಮನಸ್ಸು ಸಿದ್ದವಿರಲಿಲ್ಲ. ಗೊಂದಲದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಅವನಿಗೆ. ಅವನು ನಿಜವಾಗಲೂ ಅಲಿಯನ್ನೇ ನೋಡಿದ್ದಾ? ಅಥವಾ ಅದು ಅವನ ಭ್ರಮೆಯಾ? ಅಥವಾ ಲಕ್ಷ್ಮಿದಾಸನನ್ನು ಅವನು ಅಲಿಯೆಂದು ಭಾವಿಸಿದನಾ? ಯಾವುದೂ ಸ್ಪಷ್ಟವಾಗುತ್ತಿಲ್ಲ.

ದಿನವಹಿ ಕೆಲಸಗಳು ಶುರುವಾದವು. ಕಾರಕೂನ ವಿಳಾಸಗಳನ್ನು ಓದಲು ಶುರು ಮಾಡಿದ- ಪೊಲೀಸ್ ಕಮೀಷನರ್, ಸೂಪರಿಂಟೆಂಡೆಂಟ್, ಲೈಬ್ರರಿಯನ್. ಒಟ್ಟಾಗಿದ್ದ ಪತ್ರಗಳು ಒಂದೊಂದಾಗಿ ಬೇರ್ಪಡೆಗೊಂಡವು.
ಆದರೆ, ಈಗ ಪೋಸ್ಟ್‍ಮಾಸ್ಟರ್ ಆ ಪ್ರತಿಯೊಂದು ಪತ್ರದಲ್ಲೂ ಮಿಡಿಯುವ ಜೀವವಿದೆಯೇನೊ ಎಂಬಂತೆ ಒಂದೊಂದನ್ನೂ ಜಾಗರೂಕುತೆಯಿಂದ ನೋಡುತ್ತಾ ಕೂತ. ಅವು ಜೀವವಿಲ್ಲದ ಕೇವಲ ಪತ್ರಗಳು, ಎನ್ವಲಪ್ ಕವರುಗಳು ಎಂಬ ಪರಿಭಾಷೆಯಲ್ಲಿ ಅವುಗಳನ್ನು ಅವನಿಂದ ನೋಡಲಾಗಲಿಲ್ಲ. ಪ್ರತಿಯೊಂದು ಪತ್ರವೂ ಒಬ್ಬೊಬ್ಬ ಜೀವಂತ ಮನುಷ್ಯನಷ್ಟೆ ಅಮೂಲ್ಯವಾಗಿ ಕಾಣಿಸಿದವು ಅವನಿಗೆ.

ಅವತ್ತು ಸಂಜೆ ಲಕ್ಷ್ಮಿದಾಸ ಮತ್ತು ಪೋಸ್ಟ್‍ಮಾಸ್ಟರ್ ಇಬ್ಬರೂ ನಿಧಾನಕ್ಕೆ ಹೆಜ್ಜೆ ಹಾಕುತ್ತಾ ಸಾಗಿದರು, ಅಲಿಯ ಸಮಾಧಿಯತ್ತ. ಆ ಪತ್ರವನ್ನು ಅಲಿಯ ಸಮಾಧಿ ಮೇಲಿಟ್ಟು ಕ್ಷಣಹೊತ್ತು ಮೌನಗಟ್ಟಿ ನಿಂತವರು, ಬೆನ್ನು ಮಾಡಿ ವಾಪಾಸು ಅಂಚೆ ಕಚೇರಿಯತ್ತ ನಡೆದರು.

“ಲಕ್ಷ್ಮೀದಾಸ್, ಇವತ್ತು ಆಫೀಸಿಗೆ ನೀನೇ ಮೊದಲು ಬಂದದ್ದು ಅಂತ ಖಾತ್ರಿಯಿದೆಯಾ? ಅಥವಾ ನಿನಗಿಂತ ಮೊದಲೇ ಯಾರಾದರು ಬಂದಿದ್ದರಾ…”
“ಇಲ್ಲ ಸಾರ್. ನಾನೇ ಮೊದಲು ಬಂದದ್ದು”
“ಹಾಗಾದ್ರೆ, ಹೇಗೆ ಸಾಧ್ಯ? ಛೇ! ನನಗೆ ಒಂದೂ ಗೊತ್ತಾಗುತ್ತಿಲ್ಲ”
“ಏನು ಸಾರ್?”
“ಹ್ಞಾಂ, ಏನಿಲ್ಲ ಬಿಡು” ಪೋಸ್ಟ್ ಮಾಸ್ಟರ್ ಚುಟುಕಾಗಿ ಉತ್ತರಿಸಿ ಸುಮ್ಮನಾದ. ಪೋಸ್ಟಾಫೀಸ್ ಸಮೀಪಿಸುತ್ತಿದ್ದಂತೆಯೇ ಲಕ್ಷ್ಮೀದಾಸನಿಂದ ಅಗಲಿ ತಾನೊಬ್ಬನೇ ಕಚೇರಿ ಒಳಗೆ ಬಂದು ಕೂತ. ಹೊಸದಾಗಿ ಅವನೊಳಗೆ ತುಡಿಯಲು ಶುರುವಾದ ತಂದೆ-ಹೃದಯ, ಅಲಿಯ ವೇದನೆಯನ್ನು ಅರ್ಥ ಮಾಡಿಕೊಳ್ಳದೆ ಹೋದದ್ದಕ್ಕೆ ವಿಪರೀತ ವ್ಯಥೆ ಪಡುತ್ತಿತ್ತು. ಈಗವನು ಮಗಳ ಸುದ್ದಿಗಾಗಿ ಮತ್ತೊಂದು ನೆಮ್ಮದಿಯಿಲ್ಲದ ರಾತ್ರಿಯನ್ನು ಕಳೆಯಬೇಕಿತ್ತು. ಕಳವಳ ಮತ್ತು ಪಶ್ಚಾತ್ತಾಪದ ಬೇಗೆಯಲ್ಲಿ ಅವನು ಕುರ್ಚಿಯಲ್ಲಿ ಕೂತೇ ರಾತ್ರಿಯನ್ನು ದೂಡಿದ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...