Homeಮುಖಪುಟಜಿಡಿಪಿ 4.5%, ಆರ್ಥಿಕ ಹಿಂಜರಿಕೆಯತ್ತ ಭಾರತ?

ಜಿಡಿಪಿ 4.5%, ಆರ್ಥಿಕ ಹಿಂಜರಿಕೆಯತ್ತ ಭಾರತ?

- Advertisement -
- Advertisement -

| ಬಿ.ಸಿ .ಬಸವರಾಜ್ |

ಕೇಂದ್ರ ಸರ್ಕಾರ ಇನ್ನೂ ಕೂಡ ನಮ್ಮ ಆರ್ಥಿಕತೆಯ ಗಂಭೀರತೆಯನ್ನು ಗುರುತಿಸುವ ಕೆಲಸವನ್ನೇ ಮಾಡದಿರುವುದರಿಂದ, ಇದಕ್ಕೆ ತಕ್ಕ ಪರಿಹಾರಗಳನ್ನು ಹುಡುಕುವ ಕೆಲಸವೂ ಸರ್ಕಾರದ ಕೈಯಲ್ಲಿ ಆಗುತ್ತಿಲ್ಲ. ಇದರಿಂದಾಗಿ, ಮುಂಬರುವ ದಿನಗಳು ಮತ್ತಷ್ಟು ನಿರುದ್ಯೋಗದ, ಬಡತನದ ದಿನಗಳಾಗಲಿವೆ ಎಂದೇ ಅನಿಸುತ್ತಿದೆ.

ಇತ್ತೀಚೆಗೆ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‍ರವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ” ಈಗ ಉಂಟಾಗಿರುವುದು ಕೇವಲ ಆರ್ಥಿಕ ಅಭಿವೃದ್ಧಿಯಲ್ಲಿ ಇಳಿಕೆಯೇ ಹೊರತು ಇದು ಆರ್ಥಿಕ ಹಿಂಜರಿತವಲ್ಲ. ಕೇಂದ್ರ ಸರ್ಕಾರ ಈ ಅಭಿವೃದ್ಧಿಯ ಇಳಿತವನ್ನು ಸರಿಪಡಿಸಲು ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಂಡಿದ್ದು ಅದರ ಒಳ್ಳೆಯ ಫಲಿತಾಂಶಗಳು ಈಗ ಬರುತ್ತಿವೆ. ಆದ್ದರಿಂದ ಭಾರತ ಸದ್ಯದಲ್ಲಿ ಆರ್ಥಿಕ ಹಿಂಜರಿತಕ್ಕೆ ಒಳಗಾಗುವ ಪ್ರಶ್ನೆಯೇ ಇಲ್ಲ” ಎಂದಿದ್ದಾರೆ.

ವಿತ್ತ ಮಂತ್ರಿಯವರು ಈ ಹೇಳಿಕೆ ನೀಡಿದನಂತರ ಬಿಡುಗಡೆಯಾದ ಜಿಡಿಪಿ ಅಂಕಿಅಂಶಗಳು 2019-20 ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಕೇವಲ 4.5% ರಷ್ಟೆಂದು ಹೇಳಿವೆ. ಹೋದವರ್ಷ ಅಂದರೆ 2018-19 ರ ಇದೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ 7.1% ರಷ್ಟಿತ್ತು. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 5% ರಷ್ಟಿದ್ದ ಜಿಡಿಪಿ ಈಗ 4.5% ರಷ್ಟಾಗಿರುವುದು ನೋಡಿದಾಗ ಕೇಂದ್ರ ಸರ್ಕಾರ ಆರ್ಥಿಕ ಅಭಿವೃದ್ಧಿಗೆ ಕೆಲ ತಿಂಗಳ ಹಿಂದೆ ತೆಗೆದುಕೊಂಡ ಕ್ರಮಗಳು ಏನೂ ಪರಿಣಾಮ ಉಂಟುಮಾಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ತಾಂತ್ರಿಕವಾಗಿ ನೋಡಿದಾಗ ವಿತ್ತ ಮಂತ್ರಿಯವರು ಹೇಳಿದಂತೆ ಇದು ಆರ್ಥಿಕ ಹಿಂಜರಿಕೆಯಲ್ಲ. ಸತತ ಎರಡು ತ್ರೈಮಾಸಿಕಗಳಲ್ಲಿ ಜಿಡಿಪಿಯು ಹೋದವರ್ಷಕ್ಕಿಂತ ಕಡಿಮೆಯಾದರೆ ಅಂದರೆ ನಕಾರಾತ್ಮಕ ಬೆಳವಣಿಗೆ (Negative growth) ತೋರಿಸಿದರೆ ಆಗ ಅರ್ಥಶಾಸ್ತ್ರೀಯವಾಗಿ ಅದನ್ನು ಆರ್ಥಿಕ ಹಿಂಜರಿತ (Recession) ಎನ್ನುತ್ತಾರೆ. ಹಾಗಾಗಿ ಭಾರತದಂತ ಬೆಳೆಯುತ್ತಿರುವ ಆರ್ಥಿಕತೆ ಸಾಮಾನ್ಯವಾಗಿ ಹಿಂಜರಿತದ ಮಟ್ಟಕ್ಕೆ ಹೋಗುವುದಿಲ್ಲ. ಆದರೆ, ಕಳೆದ ಆರೇಳು ತ್ರೈಮಾಸಿಕಗಳಿಂದ ಸತತವಾಗಿ ಇಳಿಯುತ್ತಿರುವ ಜಿಡಿಪಿ ಭಾರತದಂತ ಬೃಹತ್ ದೇಶಕ್ಕೆ ಆರ್ಥಿಕ ಹಿಂಜರಿತದಷ್ಟೇ ಕೆಟ್ಟ ಪರಿಣಾಮ ಉಂಟುಮಾಡುತ್ತದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.

ಈಗಲಂತೂ ನಮ್ಮ ಆರ್ಥಿಕ ಪರಿಸ್ಥಿತಿ ಹಿಂಜರಿಕೆಗೆ ಹತ್ತಿರವಿರುವಷ್ಟು ಗಂಭೀರವಾಗಿದೆ ಎಂಬುದು ಒಂದೆರಡು ಮುಖ್ಯ ಅಂಶಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಮೊದಲನೆಯದಾಗಿ, ತಯಾರಿಕಾ ಕ್ಷೇತ್ರ (Manufacturing sector) ಹೋದ ವರ್ಷದ (2018-19) ಎರಡನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ವರ್ಷ -1% ಬೆಳವಣಿಗೆ ತೋರಿಸಿದೆ. ಅಂದರೆ ಶೇ ಒಂದರಷ್ಟು ಬೆಳವಣಿಗೆ ಇಳಿಮುಖವಾಗಿದ್ದು (Negative growth) ಈ ವಲಯ ಹಿಂಜರಿತವನ್ನು ತೋರಿಸುತ್ತಿದೆ. ತಯಾರಿಕಾ ಕ್ಷೇತ್ರ ಒಟ್ಟು ಕೈಗಾರಿಕಾ ವಲಯದ ಪ್ರಮುಖ ಭಾಗವಾಗಿದ್ದು ಇದರ ನೆಗೆಟಿವ್ ಗ್ರೋಥ್‍ನಿಂದಾಗಿಯೇ ಕೈಗಾರಿಕಾ ಕ್ಷೇತ್ರ ಒಟ್ಟಾರೆಯಾಗಿ ಈಗ ಕೇವಲ 0.52% ರಷ್ಟು ಮಾತ್ರ ಬೆಳವಣಿಗೆ ದಾಖಲಿಸಿದೆ.

ಜೊತೆಗೆ ತಯಾರಿಕಾ ಕ್ಷೇತ್ರ ದೇಶದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಕ್ಷೇತ್ರವೂ ಆಗಿದ್ದು ಇಲ್ಲಿಯ ಹಿಂಜರಿತ ಮತ್ತಷ್ಟು ಉದ್ಯೋಗ ನಷ್ಟಕ್ಕೆ ಎಡೆಮಾಡಿಕೊಡಲಿದೆ. ಇದರಿಂದಾಗಿ ಇಡೀ ದೇಶದಲ್ಲಿ ಮತ್ತಷ್ಟು ನಿರುದ್ಯೋಗ, ಮತ್ತಷ್ಟು ಇಳಿಮುಖವಾಗುವ ಗ್ರಾಹಕ ಬೇಡಿಕೆ ಮತ್ತು ಅದರಿಂದಾಗಿ ಮತ್ತಷ್ಟು ಆರ್ಥಿಕ ಹಿಂಜರಿಕೆ. ಹೀಗೆ, ಈಗಿನ ಆರ್ಥಿಕ ಅಭಿವೃದ್ಧಿ ಇಳಿಕೆ ಆರ್ಥಿಕ ಹಿಂಜರಿತವಾಗುವ ಲಕ್ಷಣಗಳು ಇಲ್ಲಿ ಕಾಣಿಸುತ್ತಿವೆ.

ಇನ್ನು, ಈಗಿನ ಒಟ್ಟು ಜಿಡಿಪಿಯ 4.5% ನಲ್ಲಿ ಸರ್ಕಾರದ ವೆಚ್ಚವನ್ನು (Government expenditure) ಕಳೆದು ನೋಡಿದರೆ ಕಂಡುಬರುವ ಜಿಡಿಪಿ ಬೆಳವಣಿಗೆ ದರ ಕೇವಲ 3%. ಉಳಿದ ಸರ್ಕಾರೇತರ ಜಿಡಿಪಿಯಲ್ಲಿ ಖಾಸಗಿ ಬಳಕೆಯ ವೆಚ್ಚ (private consumption expenditure), ಖಾಸಗಿ ಬಂಡವಾಳ (private investment ) ಮತ್ತು ಒಟ್ಟು ರಫ್ತು (Net exports) ಬರುತ್ತವೆ.

ಈ ಸರ್ಕಾರೇತರ ಜಿಡಿಪಿಯ ಭಾಗದ ಬೆಳವಣಿಗೆ ಈ ಎರಡನೇ ತ್ರೈಮಾಸಿಕದಲ್ಲಿ ಕೇವಲ 3% ಇದೆ. ಯಾವಾಗಲೂ ದೇಶದ ಜಿಡಿಪಿಯಲ್ಲಿ ಸರ್ಕಾರೇತರ ಜಿಡಿಪಿಯ ಪಾಲು ಶೇ 87 ರಿಂದ ಶೇ 92 ರಷ್ಟಿರುತ್ತದೆ. ಈ ತ್ರೈಮಾಸಿಕದಲ್ಲಿ ಇದರ ಪಾಲು ಶೇ 87 ರಷ್ಟಿದೆ.

ಅಂದರೆ, ದೇಶದ ಜಿಡಿಪಿಯಲ್ಲಿ ಶೇ 87 ರಷ್ಟಿರುವ ಸರ್ಕಾರೇತರ ಜಿಡಿಪಿ ಕೇವಲ 3% ರಷ್ಟು ಮಾತ್ರ ಬೆಳವಣಿಗೆಯಾಗಿದೆ ಎಂದರೆ, ದೇಶದ ಆರ್ಥಿಕ ಸ್ಥಿತಿಯ ಗಂಭೀರತೆಯನ್ನು ನಾವು ಅರ್ಥ ಮಾಡಿಕೊಳ್ಳಬಹುದು.

ತಯಾರಿಕಾ ಕ್ಷೇತ್ರದ ನಕಾರಾತ್ಮಕ ಬೆಳವಣಿಗೆ ಮತ್ತು ಉಳಿದೆಲ್ಲ ಕ್ಷೇತ್ರಗಳ ಕನಿಷ್ಟ ಬೆಳವಣಿಗೆ ಮೇಲಿನ ಅಂಶವನ್ನು ಸ್ಪಷ್ಟಪಡಿಸುತ್ತಿವೆ.

ಅದೇ ಸರ್ಕಾರೀ ವೆಚ್ಚ ಈ ಆರ್ಥಿಕ ವರ್ಷದಲ್ಲಿ 12.3% ವೇಗದಲ್ಲಿ ಬೆಳೆದಿದೆ. ಇದರ ಕೊಡುಗೆಯ ಫಲವಾಗಿಯೇ ಜಿಡಿಪಿ 4.5% ರಷ್ಟಾದರೂ ಇದೆ. ಆದರೆ ಈ ಸರ್ಕಾರೀ ವೆಚ್ಚ ಆಡಳಿತ, ರಕ್ಷಣೆ ಮತ್ತು ಇತರ ಕೆಲವು ಸೇವೆಗಳಿಗೆ ಮಾತ್ರ ಹಂಚಲ್ಪಟ್ಟಿರುವುದರಿಂದ ಜನಸಾಮಾನ್ಯರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವಲ್ಲಿ ಸೋತಿದೆ.

ಇದೇ ಸರ್ಕಾರೀ ವೆಚ್ಚವು ಗ್ರಾಮೀಣ ಉದ್ಯೋಗ ಖಾತ್ರಿ ಮತ್ತು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಯತ್ತ ಕಡೆ ಗಮನ ಕೇಂದ್ರೀಕರಿಸಿದ್ದರೆ ಜನಗಳ ಕೈಯಲ್ಲಿ ಕೊಳ್ಳುವ ಶಕ್ತಿ ಹೆಚ್ಚಾಗಿ ಆರ್ಥಿಕ ಮುಂಚಲನೆ ಸಾಧ್ಯವಾಗುತ್ತಿತ್ತು.

ಜೊತೆಗೆ ಬಂಡವಾಳ ಹೂಡಿಕೆಯ ವೇಗವು ಕೇವಲ 1.02% ರಷ್ಟಿದ್ದು ಇದು ಆರ್ಥಿಕ ಹಿಂಜರಿಕೆಯಿಂದ ಪಾರುಮಾಡುವುದಕ್ಕಾಗಲೀ ಮತ್ತು ಉದ್ಯೋಗ ಸೃಷ್ಟಿಗಾಗಲೀ ಏನೇನೂ ಸಾಲದೆನಿಸಿದೆ.ಒಟ್ಟಾರೆಯಾಗಿ, ದೇಶ ತಾಂತ್ರಿಕವಾಗಿ ಆರ್ಥಿಕ ಹಿಂಜರಿತಕ್ಕೆ ಒಳಗಾಗದೆ ಇದ್ದರೂ, ವಲಯಾವಾರು ಪರಿಸ್ಥಿತಿಯನ್ನು ಗಮನಿಸಿದಾಗ ಅಂತಹ ಹಿಂಜರಿತದಷ್ಟೇ ಸ್ಥಿತಿ ಗಂಭೀರವಾಗಿದೆ.ಆದರೆ, ಕೇಂದ್ರ ಸರ್ಕಾರ ಇನ್ನೂ ಕೂಡ ನಮ್ಮ ಆರ್ಥಿಕತೆಯ ಗಂಭೀರತೆಯನ್ನು ಗುರುತಿಸುವ ಕೆಲಸವನ್ನೇ ಮಾಡದಿರುವುದರಿಂದ, ಇದಕ್ಕೆ ತಕ್ಕ ಪರಿಹಾರಗಳನ್ನು ಹುಡುಕುವ ಕೆಲಸವೂ ಸರ್ಕಾರದ ಕೈಯಲ್ಲಿ ಆಗುತ್ತಿಲ್ಲ.ಇದರಿಂದಾಗಿ, ಮುಂಬರುವ ದಿನಗಳು ಮತ್ತಷ್ಟು ನಿರುದ್ಯೋಗದ, ಬಡತನದ ದಿನಗಳಾಗಲಿವೆ ಎಂದೇ ಅನಿಸುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...