Homeಮುಖಪುಟಸೈಬರ್‌ ವಂಚನೆ: 100 ವೈಬ್‌ಸೈಟ್‌ಗಳನ್ನು ಬ್ಲಾಕ್‌ ಮಾಡಿದ ಕೇಂದ್ರ ಸರಕಾರ

ಸೈಬರ್‌ ವಂಚನೆ: 100 ವೈಬ್‌ಸೈಟ್‌ಗಳನ್ನು ಬ್ಲಾಕ್‌ ಮಾಡಿದ ಕೇಂದ್ರ ಸರಕಾರ

- Advertisement -
- Advertisement -

ಆನ್‌ಲೈನ್‌ನಲ್ಲಿ ಅರೆಕಾಲಿಕ ಉದ್ಯೋಗ ನೀಡುವುದಾಗಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವು 100 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದೆ. ರಾಷ್ಟ್ರೀಯ ಸೈಬರ್ ಕ್ರೈಮ್ ಥ್ರೆಟ್ ಅನಾಲಿಟಿಕ್ಸ್ ಯುನಿಟ್ ಶಿಫಾರಸ್ಸಿನ ಮೇಲೆ ಈ ಕ್ರಮವನ್ನು ಕೈಗೊಂಡಿರುವುದಾಗಿ ಕೇಂದ್ರ ಸರಕಾರ ಹೇಳಿದೆ.

ಆಪಾದಿತ 100 ವೆಬ್‌ಸೈಟ್‌ಗಳು ಆರ್ಥಿಕ ವಂಚನೆಗಳಲ್ಲಿ ಭಾಗಿಯಾಗಿದ್ದವು ಮತ್ತು ಈ ಆದಾಯವನ್ನು ಭಾರತದಿಂದ ಹೊರಗೆ ವರ್ಗಾಯಿಸುತ್ತಿದ್ದವು. ಡಿಜಿಟಲ್ ಜಾಹೀರಾತು, ಚಾಟ್ ಮೆಸೆಂಜರ್‌ಗಳಲ್ಲಿ ಜಾಹೀರಾತುಗಳನ್ನು ನೀಡುವ ಮೂಲಕ ಜನರನ್ನು ವಂಚಿಸುತ್ತಿದ್ದರು ಎನ್ನುವುದು ಬಯಲಾಗಿದೆ. ಈ ರೀತಿಯ ವಂಚನೆಗಳಿಂದ ಗಳಿಸಿದ ಆದಾಯವನ್ನು ಕಾರ್ಡ್ ನೆಟ್‌ವರ್ಕ್‌, ಕ್ರಿಪ್ಟೋ ಕರೆನ್ಸಿ, ಸಾಗರೋತ್ತರ ಎಟಿಎಂ ವಿತ್‌ ಡ್ರಾ ಮತ್ತು ಅಂತಾರಾಷ್ಟ್ರೀಯ ಫಿನ್ಟೆಕ್ ಕಂಪನಿಗಳನ್ನು ಬಳಸಿಕೊಂಡು ಭಾರತದಿಂದ ಹೊರಗೆ ಸಾಗಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಎನ್‌ಸಿಟಿಎಯು ಕಳೆದ ವಾರ ಸಂಘಟಿತ ಹೂಡಿಕೆ, ಅರೆಕಾಲಿಕ ಉದ್ಯೋಗ ವಂಚನೆಗಳಲ್ಲಿ ತೊಡಗಿರುವ 100ಕ್ಕೂ ಹೆಚ್ಚು ವೆಬ್‌ಸೈಟ್‌ಗಳನ್ನು ಗುರುತಿಸಿತ್ತು ಮತ್ತು ನಿಷೇಧಕ್ಕೆ ಶಿಫಾರಸು ಮಾಡಿತ್ತು. ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಾಹಿತಿ ತಂತ್ರಜ್ಞಾನ ಕಾಯಿದೆ 2000ದ ಅಡಿಯಲ್ಲಿ ತನ್ನ ಅಧಿಕಾರವನ್ನು ಚಲಾಯಿಸಿ ಈ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದೆ ಎಂದು ಸರ್ಕಾರ ಹೇಳಿದೆ.

ಈ ವಂಚನೆಗಳಿಗೆ ಸಂಬಂಧಿಸಿದಂತೆ ಸಹಾಯವಾಣಿ 1930 ಮತ್ತು ಎನ್‌ಸಿಆರ್‌ಪಿ  ಮೂಲಕ ಹಲವು ದೂರುಗಳು ಬಂದಿದೆ. ಈ ಅಪರಾಧಗಳು ನಾಗರಿಕರಿಗೆ ಬೆದರಿಕೆಗಳನ್ನು ಒಡ್ಡುವುದಷ್ಟೇ ಅಲ್ಲದೆ ಮಾಹಿತಿ ಭದ್ರತೆಗೆ ಅಪಾಯವೊಡ್ಡಿದೆ ಎಂದು ಸಚಿವಾಲಯ ಹೇಳಿದೆ.

ಗೂಗಲ್ ಮತ್ತು ಮೆಟಾದಂತಹ ಫ್ಲಾಟ್‌ಫಾರ್ಮ್‌ಗಳನ್ನು ಪ್ರಚಾರಕ್ಕೆ ಬಳಸಲಾಗುತ್ತಿತ್ತು. ಮನೆಯಲ್ಲಿ ಕುಳಿತು ಮಾಡಬಹುದಾದ ಕೆಲಸಗಳು, ಮನೆಯಲ್ಲಿ ಕುಳಿತು ಹಣವನ್ನು ಸಂಪಾದಿಸುವುದು ಹೇಗೆ? ಮುಂತಾದ ಜಾಹೀರಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗುತ್ತದೆ. ನಿವೃತ್ತ ಉದ್ಯೋಗಿಗಳು, ಮಹಿಳೆಯರು ಮತ್ತು ಅರೆಕಾಲಿಕ ಉದ್ಯೋಗಗಳನ್ನು ಹುಡುಕುತ್ತಿರುವವರನ್ನು ಇವರು ಟಾರ್ಗೆಟ್‌ ಮಾಡುತ್ತಿದ್ದರು ಎಂದು ಸಚಿವಾಲಯ ತಿಳಿಸಿದೆ.

ಬಳಕೆದಾರರು ಜಾಹೀರಾತಿನ ಮೇಲೆ ಕ್ಲಿಕ್ ಮಾಡಿದ ನಂತರ ವಾಟ್ಸಾಪ್, ಟೆಲಿಗ್ರಾಮ್ ಬಳಸುವ ಏಜೆಂಟ್‌ಗಳು ಕರೆ ಮಾಡಲು ಪ್ರಾರಂಭಿಸುತ್ತಾರೆ. ಆರಂಭದಲ್ಲಿ ವಿಡಿಯೊ ಲೈಕ್‌ನಂತಹ ಕೆಲವು ಕಾರ್ಯಗಳನ್ನು ನಿರ್ವಹಿಸಲು ಸೂಚಿಸುತ್ತಾರೆ. ಕೆಲಸ ಪೂರ್ಣಗೊಂಡಾಗ ಕಮಿಷನ್ ನೀಡಲಾಗುತ್ತದೆ. ಬಳಿಕ ಹೆಚ್ಚಿನ ಆದಾಯಕ್ಕಾಗಿ ಅಧಿಕ ಹೂಡಿಕೆ ಮಾಡಲು ಕೇಳಲಾಗುತ್ತದೆ. ಒಂದು ವೇಳೆ ದೊಡ್ಡ ಮೊತ್ತವನ್ನು ಠೇವಣಿ ಇಟ್ಟರೆ ಅದನ್ನು ಸ್ಥಗಿತಗೊಳಿಸಲಾಗುತ್ತದೆ ಮತ್ತೆ ಅವರು ಸಂಪರ್ಕಕ್ಕೆ ಸಿಗದೆ ವಂಚನೆ ಮಾಡಲಾಗುತ್ತದೆ. ಹೆಚ್ಚಿನ ಕಮಿಷನ್‌-ಪಾವತಿಸುವ ಆನ್‌ಲೈನ್ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೊದಲು ಎಚ್ಚರಿಕೆ ವಹಿಸುವಂತೆ ಗೃಹ ವ್ಯವಹಾರಗಳ ಸಚಿವಾಲಯವು ಸೂಚಿಸಿದೆ.

ಇದನ್ನು ಓದಿ: ರಾಜ್ಯದಲ್ಲಿ ಜೀವಂತವಾಗಿರುವ ಅಸ್ಪೃಷ್ಯತೆ ಆಚರಣೆ: ಸದನಕ್ಕೆ ವರದಿ ನೀಡಿದ ಸಮಿತಿ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read