Homeಕರ್ನಾಟಕಅಹಿಂದ ನಾಯಕ, ಸಮಾಜವಾದಿ ಸಿದ್ದರಾಮಯ್ಯರ ರಾಜಕೀಯ ಪಯಣದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ..

ಅಹಿಂದ ನಾಯಕ, ಸಮಾಜವಾದಿ ಸಿದ್ದರಾಮಯ್ಯರ ರಾಜಕೀಯ ಪಯಣದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ..

- Advertisement -
- Advertisement -

ರಾಜ್ಯದ ಚುಕ್ಕಾಣೆ ಹಿಡಿಯುತ್ತಿರುವ ಸಿದ್ದರಾಮಯ್ಯ ಅವರು ಈಗಾಗಗಲೇ ಒಂದು ಬಾರಿ ಮುಖ್ಯಮಂತ್ರಿಯಾಗಿ ಜನಪರ ಯೋಜನೆಗಳ ಮೂಲಕ ಪ್ರಖ್ಯಾತಿ ಪಡೆದಿದ್ದಾರೆ. ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎನ್ನುವುದು ರಾಜ್ಯದ ಬಹುತೇಕ ಜನರ ಆಶಯವೂ ಆಗಿದೆ, ಅದರಂತೆ ಇದೀಗ ರಾಜ್ಯದ ಮುಖ್ಯಮಂತ್ರಿ ಆಗುವುದು ಖಚಿತವಾಗಿದೆ.

ಸಿದ್ದರಾಮಯ್ಯ ಅವರು ವೃತ್ತಿಯಿಂದ ವಕೀಲರಾಗಿದ್ದವರು, ಸಮಾಜವಾದಿ ಯುವಜನ ಸಭಾ ಮೂಲಕ ರಾಜಕೀಯಕ್ಕೆ ಬಂದರು. 1975ರಲ್ಲಿ ದೇಶದಲ್ಲಿ ಪ್ರಧಾನಿ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದಾಗ ಅದರ ವಿರುದ್ಧ ಪ್ರತಿಭಟನೆ ನಡೆಸಿದ ಸಿದ್ದರಾಮಯ್ಯರನ್ನೂ ಬಂಧಿಸಲಾಗಿತ್ತು. 1978ರವರೆಗೂ ಇವರು ಜ್ಯೂನಿಯರ್ ಲಾಯರ್ ಆಗಿ ಕೆಲಸ ಮಾಡಿದರು. ಅದೇ ವರ್ಷದಲ್ಲಿ ಮೈಸೂರು ಲಾಲೂಕು ಬೋರ್ಡ್ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧೆ ಮಾಡಿ ಆಯ್ಕೆಯಾದರು.

1983ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲಬಾರಿಗೆ ಶಾಸಕರಾಗಿ ಆಯ್ಕೆಯಾದರು. ಅದೇ ಅವಧಿಯಲ್ಲಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಸ್ಥಾನ ಮತ್ತು ರೇಷ್ಮೆ ಸಚಿವರಾಗಿ ಕಾರ್ಯ ನಿರ್ವಹಿಸಿದರು.

1985ರ ಮಧ್ಯಂತರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆಲುವು ಕಂಡರು.

1989ರಲ್ಲಿ ಜನತಾ ಪಕ್ಷದಲ್ಲಿ ಒಡಕು ಮೂಡಿತ್ತು, ಆಗ ಜನತಾದಳದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರು ಸೋಲುಕಂಡರು.

1991ರ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡಿ ಸೋಲು ಕಂಡರು. ಆ ಬಳಿಕ ಅವರು ಲೋಕಸಭಾ ಚುನಾವಣೆಗಳತ್ತ ಮುಖ ಮಾಡಲೇ ಇಲ್ಲ.

1994ರಲ್ಲಿ ಜನತಾದಳದಲ್ಲಿ ಒಗ್ಗಟ್ಟು ಮೂಡಿದ್ದರಿಂದ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡರು.

1999ರಲ್ಲಿ ಜನತಾದಳವು ಭಾಗವಾಗಿ ಬಿಜೆಪಿ ಬೆಂಬಲಿಸುವ ಜೆಡಿಯು ಒಂದು ಬಣವಾದರೆ, ಮತ್ತೊಂದು ಜಾತ್ಯಾತೀತ ಸಿದ್ಧಾಂತವುಳ್ಳ ನಾಯಕರ ಮತ್ತೊಂದು ಗುಂಪು ಜಾತ್ಯಾತೀತ ಜನತಾದಳ ಪಕ್ಷವಾಯಿತು. ಸಿದ್ದಾರಾಮಯ್ಯ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದರು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಸೋಲುಕಂಡರು.

2004ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಭಾರೀ ಅಂತರದ ಗೆಲುವು ಸಾಧಿಸಿದರು, ಆದರೆ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಯಿತು. ಸಿದ್ದರಾಮಯ್ಯ ಅವರು ರಾಜ್ಯದ ಉಪಮುಖ್ಯಮಂತ್ರಿಯಾದರು.

2005ರ ಸಮಯಕ್ಕೆ ಹುಬ್ಬಳ್ಳಿಯಲ್ಲಿ ಅಹಿಂದ ಸಂಘಟನೆಯ ಸಮಾವೇಶ ಮಾಡಲು ಮುಂದಾದಾಗ ದೇವೇಗೌಡರು ವಿರೋಧ ಮಾಡಿದರು. ಆದರೆ ಸಿದ್ದರಾಮಯ್ಯ ಸಮಾವೇಶ ಮಾಡಿ ಸಾಕಷ್ಟು ಜನಪ್ರಿಯತೆ ಗಳಿಸಿದರು. ಇತ್ತ ಜೆಡಿಎಸ್ ಪಕ್ಷ ಅವರನ್ನು ಉಚ್ಛಾಟನೆ ಮಾಡಿತು.

2006 ಜೂನ್ 1ರಂದು ಸೋನಿಯಾಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.

2006ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ರೋಚಕ ಗೆಲುವು ಕಂಡರು.

2008ರ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡರು.

2009ರಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಡಳಿತ ಪಕ್ಷದ ನಾಯಕರ ವಿರುದ್ಧ ಗುಡುಗುತ್ತಿದ್ದ ರೀತಿ ಇನ್ನೂ ಜನಮೆಚ್ಚಿಗೆಗೆ ಕಾರಣವಾಯಿತು.

2012ರಲ್ಲಿ ಅವರು ಬೆಂಗಳೂರಿನಿಂದ ಬಳ್ಳಾರಿವರೆಗೂ ಐತಿಹಾಸಿಕ ಪಾದಯಾತ್ರೆ ನಡೆಸಿ ಮತ್ತಷ್ಟು ಪ್ರಖ್ಯಾತಿ ಪಡೆದರು.

2013ರಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವವಾಗಿ ಗೆದ್ದು ಕರ್ನಾಟಕದ ಗದ್ದುಗೆ ಏರಲು ಸಿದ್ದರಾಮಯ್ಯ ಅವರ ಪಾತ್ರ ದೊಡ್ಡದಿತ್ತು. ಮೇ 13ರಂದು ಕರ್ನಾಟಕ ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಅತಿ ಹೆಚ್ಚು ಬಜೆಟ್ ಮಂಡಿಸಿದ ಹೆಗ್ಗಳಿಕೆ

23 ವರ್ಷಗಳಲ್ಲೇ 13 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ, ಅದರಲ್ಲಿ ಎರಡು ಬಜೆಟ್‌ಗಳನ್ನು ಹಣಕಾಸು ಸಚಿವನಾಗಿ ಮಂಡಿಸಿದ್ದರೆ, ಐದು ಬಜೆಟ್‌ಗಳನ್ನು ಉಪಮುಖ್ಯಮಂತ್ರಿಯಾಗಿ ಮಂಡಿಸಿದ್ದಾರೆ. ಇನ್ನು ಮುಖ್ಯಮಂತ್ರಿಯಾಗಿ ಸತತ 6 ಬಜೆಟ್ ಮಂಡಿಸಿ ದಾಖಲೆ ಬರೆದಿದ್ದಾರೆ. ಈ ಮೂಲಕ ಯಡಿಯೂರಪ್ಪ ಸತತ ಬಜೆಟ್ ಮಂಡನೆ ಸಾಧನೆಯನ್ನು ಮುರಿದಿದ್ದಾರೆ.

ಸಿದ್ದರಾಮಯ್ಯ ಅವರು, 2013 ರಿಂದ 2018ರ ತನಕ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಈ ಅವಧಿಯಲ್ಲಿ ಅವರು ತಂದ ಜನಪರ ಯೋಜನೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಅವರು ಅನ್ನಭಾಗ್ಯ ಯೋಜನೆಯಿಂದಲೇ ಅತಿಹೆಚ್ಚು ಜನಮನ್ನಣೆ ಗಳಿಸಿದರು. ರಾಜ್ಯದ ಜನರು ಹಸಿವಿನಿಂದ ಇರಬಾರದು, ಹಸಿವುಮುಕ್ತ ಕರ್ನಾಟಕ ಮಾಡುತ್ತೇನೆ ಎಂದು ಅಧಿಕಾರ ವಹಿಸಿದ ಕ್ಷಣದಲ್ಲೇ ಅನ್ನಭಾಗ್ಯ ಯೋಜನೆ ಜಾರಿಗೆ ತಂದರು.

ಇದನ್ನೂ ಓದಿ: ಸಿಎಂ ಸ್ಥಾನದ ಹಗ್ಗಜಗ್ಗಾಟಕ್ಕೆ ಬಿತ್ತು ಬ್ರೇಕ್: ಸಿದ್ದು-ಸಿಎಂ, ಡಿಕೆಶಿ-ಡಿಸಿಎಂ; ಇಂದು ಶಾಸಕಾಂಗ ಸಭೆ

ಸಿದ್ದರಾಮಯ್ಯ ಕನಸಿನ ಅನ್ನಭಾಗ್ಯ ಯೋಜನೆ

ಅಧಿಕಾರವಹಿಸಿಕೊಂಡ ದಿನವೇ ಸಿದ್ದರಾಮಯ್ಯ ಘೋಷಿಸಿದ ಯೋಜನೆ ಅನ್ನಭಾಗ್ಯ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ 1 ರೂ.ಗೆ 1 ಕೆಜಿ ಅಕ್ಕಿ ನೀಡುವ ಯೋಜನೆ ಇದಾಗಿತ್ತು. 2015ರ ಮೇ 1ರಿಂದ ಇದರಲ್ಲಿ ಬದಲಾವಣೆ ಮಾಡಿ ಪ್ರತಿ ಕುಟುಂಬ ಸದಸ್ಯನಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಯಿತು. ಇದರ ಜೊತೆ ರಿಯಾಯಿತಿ ದರದಲ್ಲಿ ಉಪ್ಪು ಮತ್ತು ತಾಳೆ ಎಣ್ಣೆಯನ್ನು ವಿತರಣೆ ಮಾಡಲಾಯಿತು.

ಮೊಬೈಲ್ ಆಡಳಿತಕ್ಕಾಗಿ ಮೊಬೈಲ್ ಒನ್

ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು 4 ಸಾವಿರ ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನು ಪಡೆಯಬಹುದಾದ ‘ಮೊಬೈಲ್‌ ಒನ್‌’ ಸೇವೆಯನ್ನು ದೇಶದಲ್ಲೇ ಮೊದಲ ಬಾರಿಗೆ ಆರಂಭಿಸಲಾಯಿತು. ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಈ ಸೇವೆಯನ್ನು ಲೋಕಾರ್ಪಣೆ ಮಾಡಿದರು. ಮೊಬೈಲ್ ಆಡಳಿತದತ್ತ ಗಮನಹರಿಸುವ ನಿಟ್ಟಿನಲ್ಲಿ ಕರ್ನಾಟಕ ಮಹತ್ವದ ಹೆಜ್ಜೆ ಇಟ್ಟಿತು.

ಅಲ್ಪಸಂಖ್ಯಾತರಿಗಾಗಿ ಶಾದಿಭಾಗ್ಯ

ಮುಸ್ಲಿಂ, ಕ್ರೈಸ್ತ, ಜೈನ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಬಡ ಕುಟುಂಬಗಳ ಹೆಣ್ಣುಮಕ್ಕಳ ಮದುವೆಗೆ 50 ಸಾವಿರ ರೂ. ನೆರವು ನೀಡುವ ‘ಶಾದಿಭಾಗ್ಯ’ ಯೋಜನೆ ಜಾರಿ ಮಾಡಿದರು. ಈ ಯೋಜನೆಯನ್ನು ಎಲ್ಲಾ ವರ್ಗದವರಿಗೂ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಡಲಾಯಿತು. ಆರ್ಥಿಕ ಲಭ್ಯತೆ ನೋಡಿಕೊಂಡು ಎಲ್ಲ ವರ್ಗಗಳ ಬಡ ಮಹಿಳೆಯರಿಗೆ ಯೋಜನೆ ವಿಸ್ತರಣೆಗೆ ಮಾಡಲು ಪರಿಶೀಲನೆ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು.

ಶಾಲಾ ಮಕ್ಕಳಿಗಾಗಿ ಕ್ಷೀರಭಾಗ್ಯ ಯೋಜನೆ

ಶಾಲಾ ಮಕ್ಕಳಿಗಾಗಿ ಸಿದ್ದರಾಮಯ್ಯ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದರು. ಯೋಜನೆಯಡಿ 64 ಸಾವಿರ ಅಂಗನವಾಡಿ, 51 ಸಾವಿರ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಟ್ಟು 1 ಕೋಟಿಗೂ ಹೆಚ್ಚು ಮಕ್ಕಳಿಗೆ ವಾರದಲ್ಲಿ ಮೂರು ದಿನ ಹಾಲು ವಿತರಣೆ ಮಾಡಲಾಗುತ್ತಿದೆ. ಇದನ್ನು ಐದು ದಿನಗಳಿಗೆ ವಿಸ್ತರಣೆ ಮಾಡುವ ಉದ್ದೇಶವೂ ಸರ್ಕಾರದ ಮುಂದಿದೆ.

ಮೈತ್ರಿ ಮತ್ತು ಮನಸ್ವಿನಿ ಯೋಜನೆಗಳು

ಅವಿವಾಹಿತ ಹಾಗೂ ವಿಚ್ಛೇದನ ಪಡೆದಿರುವ ಮಹಿಳೆಯರಿಗೆ ಪ್ರತಿ ತಿಂಗಳು ರೂ 500 ಮಾಸಾಶನ ನೀಡುವ ‘ಮನಸ್ವಿನಿ’ ಯೋಜನೆ ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ರೂ 500 ಮಾಸಾಶನ ನೀಡುವ ‘ಮೈತ್ರಿ’ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿತು.

ಗ್ರಾಮೀಣ ಭಾಗಕ್ಕಾಗಿ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆ

ಗ್ರಾಮೀಣ ಭಾಗದ ರಸ್ತೆಗಳಿಗೆ ಕಾಯಕಲ್ಪ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಮೊದಲ ಹಂತದಲ್ಲಿ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 2೦ ಕಿ.ಮೀ.ಯಂತೆ ಒಟ್ಟು 3,714 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಮಾಡುವ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಪ್ರಥಮ ಚಿಕಿತ್ಸೆ ನೀಡಲು ಬಂತು ಬೈಕ್ ಆಂಬ್ಯುಲೆನ್ಸ್

ಸಂಚಾರ ದಟ್ಟಣೆ ಹೆಚ್ಚಿರುವ ಬೆಂಗಳೂರಿನಂತಹ ನಗರದಲ್ಲಿ ಅಪಘಾತ ಸಂಭವಿಸಿದರೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಲು ಸರ್ಕಾರ ಬೈಕ್ ಅಂಬ್ಯುಲೆನ್ಸ್ ಪರಿಚಯಿಸಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಗಳೂರು, ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ.

ಸೋಲಾರ್ ಬಳಕೆ ಉತ್ತೇಜಿಸಲು ರೈತ ಸೂರ್ಯ ಯೋಜನೆ

ರೈತರು ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಿ, ಅದನ್ನು ಸರ್ಕಾರಕ್ಕೆ ಮಾರಾಟ ಮಾಡುವ ‘ಸೂರ್ಯ ರೈತ’ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿತು. ರಾಜ್ಯದಲ್ಲಿ ಸೌರಶಕ್ತಿ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಇದನ್ನು ಜಾರಿಗೊಳಿಸಿತು. ರೈತರು ಉತ್ಪಾದನೆಯಾಗುವ ವಿದ್ಯುತ್‌ನಲ್ಲಿ ತಮ್ಮ ಕೃಷಿ ಚಟುವಟಿಕೆಗೆ ಅಗತ್ಯವಾದಷ್ಟು ಬಳಕೆ ಮಾಡಿಕೊಂಡು ಹೆಚ್ಚುವರಿ ವಿದ್ಯುತ್‌ಅನ್ನು ಪ್ರತಿ ಯೂನಿಟ್‌ಗೆ 9.56 ರೂ. ದರದಲ್ಲಿ ಸರ್ಕಾರಕ್ಕೆ ಮಾರಾಟ ಮಾಡಬಹುದಾಗಿದೆ.

ರೈತರಿಗಾಗಿ ಬಂತು ಕೃಷಿ ಭಾಗ್ಯ ಯೋಜನೆ

ಮಳೆಯಾಶ್ರಿತ ಪ್ರದೇಶದ ರೈತರ ಜೀವನೋಪಾಯ ಉತ್ತಮಪಡಿಸಲು ‘ಕೃಷಿ ಭಾಗ್ಯ’ ಯೋಜನೆಯನ್ನು ಜಾರಿಗೆ ತರಲಾಗಿದೆ. ಸ್ವಾಭಾವಿಕ ಸಂಪನ್ಮೂಲ ಮಣ್ಣು ಮತ್ತು ನೀರಿನ ಸಂರಕ್ಷಣೆಯೊಂದಿಗೆ ಕೃಷಿ ಉತ್ಪಾದಕತೆ ಮತ್ತು ರೈತರು ಹಾಗೂ ಕೃಷಿ ಕಾರ್ಮಿಕರ ಆದಾಯ ಮಟ್ಟ ಹೆಚ್ಚಿಸುವುದು ಕೃಷಿ ಭಾಗ್ಯ ಯೋಜನೆಯ ಪ್ರಮುಖ ಉದ್ದೇಶ. ಮೊದಲ ಹಂತದಲ್ಲಿ 23 ಜಿಲ್ಲೆಗಳ ವ್ಯಾಪ್ತಿಯ 5 ಮುಖ್ಯ ಒಣ ಭೂಮಿ ವಲಯಗಳ 45 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಯೋಜನೆ ಜಾರಿಗೆ ಬಂದಿದೆ.

ವಿದ್ಯಾರ್ಥಿಗಳಿಗಾಗಿ ವಿದ್ಯಾಸಿರಿ ಯೋಜನೆ

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ‘ಊಟ ವಸತಿ ಸಹಾಯ ಯೋಜನೆ’ಯಾದ ‘ವಿದ್ಯಾಸಿರಿ’ 2013 ರಿಂದ ರಾಜ್ಯಾದಾದ್ಯಂತ ಜಾರಿ ಮಾಡಲಾಯಿತು. ವಿದ್ಯಾರ್ಥಿಗಳ ಊಟ ಮತ್ತು ವಸತಿಗಾಗಿ ವಾರ್ಷಿಕ ರೂ 15,000 ನೆರವು ನೀಡುವುದು ‘ವಿದ್ಯಾಸಿರಿ’ ಯೋಜನೆ. ಪ್ರತಿ ತಿಂಗಳಿಗೆ ರೂ 1,500 ದಂತೆ ಹತ್ತು ತಿಂಗಳಿಗೆ ರೂ 15,000 ಆರ್ಥಿಕ ನೆರವನ್ನು ಫಲಾನುಭವಿಗಳಿಗೆ ಸರ್ಕಾರದಿಂದ ನೀಡಲಾಗುತ್ತಿತ್ತು. .ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಸ್ನಾತಕೋತ್ತರ ಹಾಗೂ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೂ ಸಹ ವಿಸ್ತರಣೆ. ಮೂರು ವರ್ಷಗಳಲ್ಲಿ ವಿದ್ಯಾಸಿರಿ ಯೋಜನೆಯಡಿ ಒಟ್ಟು 2.20 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ

ಕ್ಷೀರಭಾಗ್ಯ ಯೋಜನೆಯಡಿ 1 ರಿಂದ 10ನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 62.50 ಲಕ್ಷ ಮಕ್ಕಳಿಗೆ ವಾರದಲ್ಲಿ ಮೂರು ದಿನ 150 ಮಿ.ಲೀ. ಹಾಲನ್ನು ವಿತರಿಸಲಾಗುತ್ತಿದೆ. ಸರ್ಕಾರಿ ಪಾಠಶಾಲೆಗಳಲ್ಲಿ 1ನೇ ತರಗತಿಗೆ ಹೆಣ್ಣುಮಕ್ಕಳ ದಾಖಲಾತಿ ಮತ್ತು ಹಾಜರಾತಿಯನ್ನು ಉತ್ತೇಜಿಸಲು ಹೆಣ್ಣುಮಕ್ಕಳಿಗೆ ಪ್ರತಿ ದಿನದ ಹಾಜರಾತಿಗೆ 2 ರೂ. ಪ್ರೋತ್ಸಾಹಧನ ನೀಡುವುದನ್ನು ಜಾರಿಗೆ ತಂದಿದೆ. 1 ರಿಂದ 10ನೇ ತರಗತಿಯ ಶಾಲಾ ಮಕ್ಕಳಿಗೆ 113.57 ಕೋಟಿ ರೂ. ವೆಚ್ಚದಲ್ಲಿ ಒಂದು ಜೊತೆ ಶೂಗಳು ಮತ್ತು ಎರಡು ಜೊತೆ ಕಾಲುಚೀಲಗಳನ್ನು ಒದಗಿಸಿದೆ.

ಉನ್ನತ ಶಿಕ್ಷಣ ಇಲಾಖೆ

ಕಳೆದ ಮೂರು ವರ್ಷಗಳಲ್ಲಿ 24 ಮಹಿಳಾ ಪದವಿ ಕಾಲೇಜು ಮತ್ತು 27 ಸಹ ಶಿಕ್ಷಣ ಕಾಲೇಜು ಸೇರಿದಂತೆ ಒಟ್ಟು 51 ಸರ್ಕಾರಿ ಶಾಲೆಗಳನ್ನು ಹೊಸದಾಗಿ ಪ್ರಾರಂಭಿಸಲಾಗಿದೆ. ಎಲ್ಲಾ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಾಗೂ ಸರ್ಕಾರಿ ಪಾಲಿಟೆಕ್ನಿಕ್‍ಗಳಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಒಳಗೊಂಡ ನೈಪುಣ್ಯ ನಿಧಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಹೆಚ್.ಐ.ವಿ/ಕುಷ್ಟರೋಗ ಪೀಡಿತ ಪಾಲಕರ ಮಕ್ಕಳ ವಿದ್ಯಾರ್ಥಿವೇತನ ಯೋಜನೆಯನ್ನು ಜಾರಿಗೆ ತಂದಿದೆ.

ಅಲ್ಪ ಸಂಖ್ಯಾತರ ಕಲ್ಯಾಣ

ಮೂರು ವರ್ಷಗಳಲ್ಲಿ 32 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 600 ಕೋಟಿ ರೂ.ಗಳ ವಿದ್ಯಾರ್ಥಿವೇತನ ನೀಡಿಕೆ. ಅಲ್ಪಸಂಖ್ಯಾತರ ಹೆಣ್ಣು ಮಕ್ಕಳ ಮದುವೆಗಾಗಿ ಸಹಾಯಧನ ನೀಡುವ ‘ಬಿದಾಯಿ’ ಯೋಜನೆಯಡಿ 14 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ 70.65 ಕೋಟಿ ರೂ.ಗಳ ನೀಡಿಕೆ. ಜಿಲ್ಲಾ ಮಟ್ಟದ ಶಾದಿ ಮಹಲ್/ಸಮುದಾಯ ಭವನಗಳ ನಿರ್ಮಾಣದ ಘಟಕ ವೆಚ್ಚ 1 ಕೋಟಿ ರೂ.ಗಳಿಗೆ ಏರಿಕೆ.

ಯಶಸ್ವಿನಿ ಯೋಜನೆ

ಕಳೆದ ಮೂರು ವರ್ಷಗಳಲ್ಲಿ ಯಶಸ್ವಿನಿ ಯೋಜನೆಯಡಿ 119.92 ಲಕ್ಷ ಸದಸ್ಯರನ್ನು ನೋಂದಾಯಿಸಿ, 3.88 ಲಕ್ಷ ಫಲಾನುಭವಿಗಳಿಗೆ ಶಸ್ತ್ರ ಚಿಕಿತ್ಸೆ ಹಾಗೂ 5.47 ಲಕ್ಷ ಫಲಾನುಭವಿಗಳಿಗೆ ಹೊರ ರೋಗಿ ಚಿಕಿತ್ಸೆ ನೀಡಿಕೆ. ಇದಕ್ಕಾಗಿ ಒಟ್ಟು 524.52 ಕೋಟಿ ರೂ. ಗಳನ್ನು ಭರಿಸಿದೆ.

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ

ರಾಜ್ಯವು ಹಾಲು ಉತ್ಪಾದನೆಯಲ್ಲಿ ದೇಶದಲ್ಲಿ ಹತ್ತನೇ ಸ್ಥಾನದಲ್ಲಿ ಹಾಗೂ ಸಹಕಾರ ಕ್ಷೇತ್ರದಲ್ಲಿ ಹಾಲು ಸಂಗ್ರಹಣೆಯಲ್ಲಿ ಎರಡನೆ ಸ್ಥಾನಕ್ಕೇರಿದೆ.  ಪ್ರತಿ ಲೀಟರ್ ಹಾಲಿಗೆ ನೀಡುವ 2 ರೂ.ಗಳ ಪ್ರೋತ್ಸಾಹ ಧನ 4 ರೂ.ಗಳಿಗೆ ಹೆಚ್ಚಳ. 2015-16ನೇ ಸಾಲಿನಲ್ಲಿ 8.61 ಲಕ್ಷ ಫಲಾನುಭವಿಗಳಿಗೆ 1015 ಕೋಟಿ ರೂ.ಗಳಷ್ಟು ಪ್ರೋತ್ಸಾಹಧನ ನೀಡಿಕೆ. ಪಶುಪಾಲಕರಿಗೆ ವರದಾನದ “ಪಶು ಭಾಗ್ಯ” ಯೋಜನೆ ಜಾರಿ.

ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ

ಸಂವಿಧಾನಕ್ಕೆ ತಿದ್ದುಪಡಿ ಮಾಡಿ 371ನೆ (ಜೆ) ಪರಿಚ್ಚೇದದಡಿಯಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ. ವಿಶೇಷ ಸ್ಥಾನಮಾನದ ಅನ್ವಯ ಹೈದರಾಬಾದ್ ಕರ್ನಾಟಕದ ಭಾಗದ ಉನ್ನತ ಶಿಕ್ಷಣ, ತಾಂತ್ರಿಕ, ವೈದ್ಯಕೀಯ ಶಿಕ್ಷಣ ಹಾಗೂ ಇತರೆ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶೇ.70ರಷ್ಟು ಸ್ಥಾನಗಳು ಸ್ಥಳೀಯರಿಗೆ ಮೀಸಲು. ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಗೆ ಮೂರು ವರ್ಷಗಳಲ್ಲಿ 1750 ಕೋಟಿ ರೂ. ನೀಡಿಕೆ. 1216 ಕಾಮಗಾರಿಗಳು ಪೂರ್ಣ.

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ

ಎಲ್ಲಾ ಅಂಗನವಾಡಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರದ ಜೊತೆಗೆ ವಾರದಲ್ಲಿ ಮೂರು ದಿನ 150 ಎಂ.ಎಲ್ ಹಾಲನ್ನು ವಿತರಿಸಲಾಗುತ್ತಿದೆ. ಸರ್ಕಾರವು ಸತತ 3ನೇ ಭಾರಿಗೆ ಅಂಗನವಾಡಿ ಕಾರ್ಯಕರ್ತೆ / ಸಹಾಯಕಿಯರಿಗೆ ಗೌರವಧನವನ್ನು ಹೆಚ್ಚಿಸಿದೆ. ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಆರ್ಥಿಕ ಪರಿಹಾರ ನೀಡಲು ರಾಜ್ಯ ಮಟ್ಟದಲ್ಲಿ 50 ಕೋಟಿ ರೂ.ಗಳ ‘ಸ್ಥೈರ್ಯ ನಿಧಿ’ಯನ್ನು ಸ್ಥಾಪಿಸಿದೆ.

ವಸತಿ ಇಲಾಖೆ

ಪ್ರತಿ ವರ್ಷ 3 ಲಕ್ಷ ಮನೆಗಳ ಗುರಿ ಪೈಕಿ ಕಳೆದ ಮೂರು ವರ್ಷಗಳಲ್ಲಿ 8.5 ಲಕ್ಷ ಮನೆಗಳ ನಿರ್ಮಾಣ. 32 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಿದೆ. ಇದಕ್ಕಾಗಿ 7540 ಕೋಟಿ ರೂ. ವೆಚ್ಚ. ವಸತಿ ಯೋಜನೆಗಳಡಿ ಪ್ರತಿ ಮನೆಗೆ ನೀಡಲಾಗುವ ಸಹಾಯಧನದ 1.20 ಲಕ್ಷ ರೂ.ಗೆ ಹೆಚ್ಚಳ. ರಾಜೀವ್ ಅವಾಸ್ ಯೋಜನೆಯಡಿ 20 ಸಾವಿರ ಮನೆಗಳನ್ನು 1031 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ.

ಕಾರ್ಮಿಕ, ಉದ್ಯೋಗ ಮತ್ತು ತರಬೇತಿ ಇಲಾಖೆ

ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಎರಡು ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ. ಕಾರ್ಮಿಕರನ್ನು ಹಾಗೂ ಕೈಗಾರಿಕೆಗಳನ್ನು ಉತ್ತೇಜಿಸಲು ರಾಜ್ಯದಲ್ಲಿ ‘ಮುಖ್ಯಮಂತ್ರಿಗಳ ಶ್ರಮ ಶಕ್ತಿ ಪುರಸ್ಕಾರ’ ಯೋಜನೆ ಜಾರಿ. ನೂತನ ಕಾರ್ಮಿಕ ನೀತಿ-2015 ಅನ್ನು ಜಾರಿಗೊಳಿಸಿದೆ.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

ಗ್ರಾಮೀಣ ಜನರ ಜೀವನ ಮಟ್ಟ ಸುಧಾರಣೆಯ ಆಶಯದೊಂದಿಗೆ ಗ್ರಾಮಗಳ ವಿಕಾಸಕ್ಕೆ 21 ಅಂಶಗಳ ಸೂತ್ರವನ್ನು ಜಾರಿಗೆ ತಂದಿದೆ. ವಲಸೆ ತಡೆ, ಸ್ವಯಂ ಉದ್ಯೋಗ ಅವಕಾಶಗಳ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿಗೆ ಹೆಚ್ಚಿನ ಒತ್ತು. 21 ಅಂಶಗಳ ಕಾರ್ಯಕ್ರಮಗಳು 27,397 ಗ್ರಾಮಗಳಲ್ಲಿನ 59,532 ಜನವಸತಿ ಪ್ರದೇಶಗಳಲ್ಲಿ ಜಾರಿ.

ಬಯಲುಮುಕ್ತ ಶೌಚಾಲಯ

23.87 ಲಕ್ಷ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸುವ ಗುರಿ ಪೈಕಿ 20.89 ಲಕ್ಷ ಶೌಚಾಲಯಗಳ ನಿರ್ಮಾಣ. ಶೇ.87ರಷ್ಟು ಸಾಧನೆ. ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ದೇಶದಲ್ಲೇ ಪ್ರಥಮ. ಶೌಚಾಲಯ ಸಹಿತ ಸ್ನಾನದ ಮನೆಗಳನ್ನು ನಿರ್ಮಿಸುವ ‘ಗ್ರಾಮೀಣ ಗೌರವ’ ಯೋಜನೆ ಜಾರಿ.

ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು

ಗ್ರಾಮೀಣ ಜನರಿಗೆ ಕಡಿಮೆ ಬೆಲೆಗೆ ಶುದ್ಧ ಕುಡಿಯುವ ನೀರು ನೀಡಿಕೆ. 7802 ಶುದ್ಧಕುಡಿಯುವ ನೀರು ಘಟಕಗಳ ಸ್ಥಾಪನೆಯ ಗುರಿ ಪೈಕಿ 2320 ಘಟಕಗಳು ಪ್ರಾರಂಭ. 5482 ನೀರಿನ ಘಟಕಗಳ ಕಾಮಗಾರಿ ವಿವಿಧ ಹಂತದಲ್ಲಿದೆ. 118 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಿ, 1421 ಜನ ವಸತಿಗಳಿಗೆ ಶುದ್ಧಕುಡಿಯುವ ನೀರು ನೀಡಿಕೆ.
 
ನಗರಾಭಿವೃದ್ಧಿ ಇಲಾಖೆ

ರಾಜ್ಯದಲ್ಲಿ 10 ಪಟ್ಟಣ ಪಂಚಾಯಿತಿಗಳನ್ನು ಪುರಸಭೆಗಳನ್ನಾಗಿ ಮತ್ತು 13 ಪುರಸಭೆಗಳನ್ನು ನಗರಸಭೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಜೆಎನ್‍ನರ್ಮ್ ಯೋಜನೆಗಳ ಅನುಷ್ಟಾನದಲ್ಲಿ ರಾಜ್ಯವು ಇಡೀ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಸತತ ಎರಡನೇ ಬಾರಿ ಮೈಸೂರು ಸ್ವಚ್ಛ ನಗರ ಹಿರಿಮೆಗೆ ಪಾತ್ರವಾಯಿತು.

ಮೀನುಗಾರಿಕಾ ಇಲಾಖೆ

2000 ಒಳನಾಡು ಮೀನುಗಾರರಿಗೆ 1.99 ಕೋಟಿ ರೂ.ವೆಚ್ಚದಲ್ಲಿ ಉಚಿತವಾಗಿ ಫೈಬರ್ ಗ್ಲಾಸ್ ಹರಿಗೋಲು ವಿತರಣೆ ಮಾಡಿದೆ. ಮತ್ಸ್ಯಾಶ್ರಯ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ನೀಡುವ ಸಹಾಯಧನದ ಮೊತ್ತವನ್ನು 60 ಸಾವಿರ ರೂ.ಗಳಿಂದ 1.20 ಲಕ್ಷ ರೂ.ಗಳಿಗೆ ಹೆಚ್ಚಳ. ಮೂರು ವರ್ಷಗಳಲ್ಲಿ ಒಟ್ಟು 4865 ಮನೆಗಳ ಹಚಿಚಿಕೆ. ಯಾಂತ್ರೀಕೃತ ಮೀನುಗಾರರಿಗೆ ಮಾರಾಟ ಕರರಹಿತ ಡೀಸಲ್ ಪೂರೈಕೆ ಯೋಜನೆಯಡಿ ವಾರ್ಷಿಕ 150,000 ಕಿಲೋ ಲೀಟರ್ ಡೀಸಲ್ ನೀಡಿಕೆ.

ಸಹಕಾರ ಇಲಾಖೆ

ಇಡೀ ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ.ಗಳವರೆಗಿನ ಕೃಷಿ ಸಾಲವನ್ನು ಸರ್ಕಾರ ನೀಡಿದೆ. ಕಳೆದ ಮೂರು ವರ್ಷಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ 26,445 ಕೋಟಿ ರೂ.ಗಳ ಸಾಲವನ್ನು ರೈತರಿಗೆ ನೀಡಿದೆ. ಹಾಗೆಯೇ, ಶೇ.3ರ ಬಡ್ಡಿದರಲ್ಲಿ 3 ಲಕ್ಷದಿಂದ 10 ಲಕ್ಷ ರೂ.ಗಳವರೆ 1767.98 ಕೋಟಿ ರೂ.ಗಳ ಸಾಲವನ್ನು 1.15 ಲಕ್ಷ ರೈತರಿಗೆ ನೀಡಿದೆ. 2015-16ನೇ ಸಾಲಿನಲ್ಲಿ 10000 ಕೋಟಿ ರೂ.ಗಳ ಸಾಲವನ್ನು ಸುಮಾರು 23 ಲಕ್ಷ ರೈತರಿಗೆ ನೀಡಲು ಹಾಕಿಕೊಳ್ಳಲಾಗಿದ್ದ ಗುರಿ ಪೈಕಿ 10184 ಕೋಟಿ ರೂ.ಗಳನ್ನು 22.56 ಲಕ್ಷ ರೈತರಿಗೆ ನೀಡಿದೆ.

ಹೀಗೆ ಇನ್ನೂ ಸಾಕಷ್ಟು ಯೋಜನೆಗಳ ಮೂಲಕ ಎಲ್ಲ ವರ್ಗದ ಜನರನ್ನು ತಲುಪಿದ ಸಿದ್ದರಾಮಯ್ಯ ಅವರು ಎರಡನೇ ದೇವರಾಜ ಅರಸು ಎಂದು ಕರೆಯಿಸಿಕೊಂಡರು. 5 ವರ್ಷಗಳ ಸುಬದ್ರ ಆಡಳಿತ ನಡೆಸಿದ ಅವರು, ಯಾವುದೇ ಕಪ್ಪುಚುಕ್ಕೆಯಿಲ್ಲದಂತೆ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಿದರು.

ರಾಜ್ಯದಲ್ಲಿ ಕಳೆದ ಅವಧಿಯಲ್ಲಿ ಅಂದರೆ 2018ರಲ್ಲಿ ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಸರ್ಕಾರವಿತ್ತು. ಈ ವೇಳೆ ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಸಿದ್ದರಾಮಯ್ಯ 2019ರಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು. ವಿರೋಧ ಪಕ್ಷದ ನಾಯಕರಾಗಿ ಸದನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದಲ್ಲಿ ಸಿದ್ದರಾಮಯ್ಯ ನಿಸ್ಸೀಮರು.

ಇದೀಗ 2023ರ ಚುನಾವಣೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಂಘಟನೆಯ ಚಾತುರ್ಯ ಮತ್ತು ಸಿದ್ದರಾಮಯ್ಯನವರ ವರ್ಚಸ್ಸಿನ ಮೇಲೆ 136 ಸ್ಥಾನ ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷ ಭರ್ಜರಿ ಜಯ ಗಳಿಸಿದೆ. ಇದೀಗ ಸಿದ್ದರಾಮಯ್ಯ ಅವರು ರಾಜ್ಯದ 24ನೇ ಮುಖ್ಯಮಂತ್ರಿ ಆಗಲಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...