Homeಅಂಕಣಗಳುರೈತ ಹೋರಾಟಗಳ ಹಿನ್ನೆಲೆಯಲ್ಲಿ ಚಳವಳಿಗಳು ಮತ್ತು ಚುನಾವಣೆಗಳು

ರೈತ ಹೋರಾಟಗಳ ಹಿನ್ನೆಲೆಯಲ್ಲಿ ಚಳವಳಿಗಳು ಮತ್ತು ಚುನಾವಣೆಗಳು

- Advertisement -
- Advertisement -

ಇತ್ತೀಚಿನ ಯುಪಿ, ಪಂಜಾಬ್ ಚುನಾವಣೆಗಳ ಫಲಿತಾಂಶಗಳು ಬಂದ ನಂತರ ರೈತ ಚಳವಳಿಗಳು ಮತ್ತು ಚುನಾವಣೆಗಳ ನಡುವಣ ಸಂಬಂಧದ ಬಗ್ಗೆ ಹಲವು ರೀತಿಯ ಚರ್ಚೆಗಳು ಆರಂಭವಾಗಿದೆ. ದೆಹಲಿ ಗಡಿಯ ರೈತರ ಸಂಘರ್ಷ ಚಿಮ್ಮಿದ ನೆಲದಲ್ಲಿ ನಡೆದ ಚುನಾವಣೆಗಳು ಎಂದ ಮೇಲೆ ಇದು ಸಹಜವೇ! ಅದರಲ್ಲಿಯೂ ಚುನಾವಣೆಗಳಿಗೆ ಮೊದಲು ರೈತ ಚಳವಳಿಯಿಂದ ಚುನಾವಣೆಗಳಲ್ಲಿ ಬಿಜೆಪಿಗೆ ಸೋಲು ಗ್ಯಾರಂಟಿ ಎಂಬ ಉತ್ಪ್ರೇಕ್ಷಿತ ವರದಿ, ಅಂದಾಜುಗಳು ಮತ್ತು ಕೋಮುವಾದಿ ಶಕ್ತಿಗಳ ಸೋಲು ಬಯಸುವವರ ಅತಿ ನಿರೀಕ್ಷೆಗಳು ಮತ್ತು ಫಲಿತಾಂಶಗಳ ನಡುವಣ ವ್ಯತ್ಯಾಸವನ್ನು ನೋಡಿದರೆ ಚರ್ಚೆ ಏಳಲೇಬೇಕಲ್ಲವೇ?

ಚಳವಳಿಗಳು ಮತ್ತು ಚುನಾವಣೆಗಳ ನಡುವಣ ಸಂಬಂಧ ಸೀದಾಸಾದಾ ಸರಳ ರೇಖೆಯಂತಹುದಲ್ಲ. ಹಲವು ಆಯಾಮಗಳಿಂದ ಕೂಡಿದೆ. ಕರ್ನಾಟಕ ರಾಜ್ಯ ರೈತಸಂಘದ ಚುನಾವಣಾ ಅನುಭವಗಳು ಇದನ್ನು ಎತ್ತಿ ತೋರಿಸುತ್ತದೆ. ಕರ್ನಾಟಕ ರಾಜ್ಯ ರೈತ ಸಂಘದ ಇಳಿಮುಖ ಬೆಳವಣಿಗೆ, ಅದರ ಒಡಕುಗಳಿಗೂ, ನಂಜುಂಡಸ್ವಾಮಿಯವರು ಆ ಸಮಯದಲ್ಲಿ ಕೈಗೊಂಡ ತೀರ್ಮಾನಗಳಿಗೂ, ರೈತ ಸಂಘ ಚುನಾವಣೆಗಳಲ್ಲಿ ಪಡೆದ ಕಹಿ ಅನುಭವಕ್ಕೂ ಇರುವ ಸಂಬಂಧದ ಬಗ್ಗೆ ರೈತಸಂಘದ ಒಳಗೆ-ಹೊರಗೆ ಬಹಳ ಚರ್ಚೆಗಳಾಗಿವೆ.

ಇಂತಹ ಅನುಭವ ಕರ್ನಾಟಕ ರಾಜ್ಯ ಸಂಘದ್ದಷ್ಟೇ ಅಲ್ಲ. 80ರ ದಶಕದ ರೈತ ಚಳವಳಿಗಳೆಲ್ಲ ಸಾಮಾನ್ಯವಾಗಿ ಇಂತಹ ಕಹಿ ಉಂಡಿವೆ. ಪಂಜಾಬಿನ, ಮಹಾರಾಷ್ಟ್ರದ, ಯುಪಿಯ ರೈತ ಚಳವಳಿಗಳು ಹಲವು ಚುನಾವಣೆಗಳಲ್ಲಿ ತೆಗೆದುಕೊಂಡ ನಿಲುವುಗಳಿಂದ ಮತ್ತು ಭಾಗವಹಿಸಿದ್ದರಿಂದ ಇಂತಹದೇ ಅನುಭವ ಪಡೆದಿವೆ. ಶರದ್ ಜೋಷಿಯವರಂತೂ ನಾನು ಮಾಡಿದ ಮಹಾ ಪ್ರಮಾದವೆಂದರೆ ರಾಜಕೀಯ ಪಕ್ಷವಾಗಲು ಹೊರಟದ್ದು ಎಂದು ತಮ್ಮನ್ನು ತಾವೇ ಟೀಕಿಸಿಕೊಂಡಿದ್ದಾರೆ. ಆದರೆ, ಈ ಸಂಘಟನೆಗಳು ಚುನಾವಣಾ ರಾಜಕೀಯದ ಪ್ರಯತ್ನ ನಡೆಸಿದ್ದು ಅಲ್ಪ ಕಾಲ ಮಾತ್ರ. ಈ ಎಲ್ಲ ಸಂಘಟನೆಗಳಿಗಿಂತ ಕರ್ನಾಟಕ ರಾಜ್ಯ ರೈತಸಂಘವೇ ಸುಮಾರು ಒಂದು ದಶಕದ ಕಾಲ ವಿವಿಧ ರೀತಿಯ ರಾಜಕೀಯ ಪ್ರಯೋಗಗಳನ್ನು ಕೈಗೊಂಡದ್ದು.

ಪ್ರೊ.ಎಂ.ಡಿ. ನಂಜುಂಡಸ್ವಾಮಿ

ಕೇವಲ ರೈತ ಚಳವಳಿಗಳು ಮಾತ್ರವೇ ಅಲ್ಲದೆ ಕಾರ್ಮಿಕ, ದಲಿತ ಮೊದಲಾದ ಚಳವಳಿಗಳದ್ದೂ ಇಂತಹುದೇ ಕಹಿ ಅನುಭವ.

ಆದ್ದರಿಂದ ಇಂದಿನ ಮತ್ತು ಅಂದಿನ ಚುನಾವಣಾ ಅನುಭವಗಳೆಲ್ಲವನ್ನೂ ಒಟ್ಟಾರೆ ಸಾಮಾಜಿಕ ಚಳವಳಿಗಳೆಲ್ಲದರ ಅನುಭವದ ಭಾಗವಾಗಿಯೇ ನೋಡಬೇಕು. ನಮ್ಮ ದೇಶದ ಕ್ಷೇತ್ರ ಕೇಂದ್ರಿತ ಹಾಗೂ ಒಂದು ಓಟು ಹೆಚ್ಚಿಗೆ ಪಡೆದವರು ಗೆದ್ದರು ಎನ್ನುವ ಚುನಾವಣಾ ವ್ಯವಸ್ಥೆಯಲ್ಲಿ, ಪಕ್ಷ ರಾಜಕೀಯ ಹಾಗೂ ಪಕ್ಷಗಳ ಸ್ವರೂಪ, ಜಾತಿವ್ಯವಸ್ಥೆ, ಹಣ-ಭ್ರಷ್ಟಾಚಾರ ದೊಡ್ಡ ಪಾತ್ರ, ಇವುಗಳನ್ನು ಈ ಲೇಖನದ ಎರಡನೇ ಭಾಗದಲ್ಲಿ ವಿವರವಾಗಿ ವಿಶ್ಲೇಷಿಸಬಯಸುತ್ತೇನೆ.

ಈಗ ಕರ್ನಾಟಕ ರಾಜ್ಯ ರೈತ ಸಂಘದ ಚುನಾವಣಾ ಸಾಹಸಗಳನ್ನು ಪರಿಶೀಲಿಸೋಣ.

ಬದಲಾಗುತ್ತಾ ಹೋದ ನಿಲುವುಗಳು

“ಮೂರೂವರೆ ಕೋಟಿ ಕನ್ನಡಿಗರೆಲ್ಲ ಒತ್ತಾಯಿಸಿದರೂ ನಾವು ಅಧಿಕಾರ ರಾಜಕೀಯಕ್ಕೆ ಸೇರುವುದಿಲ್ಲ. ಸಂಸದೀಯ ರಾಜಕೀಯಕ್ಕೆ ಕಾಲಿಡುವುದಿಲ್ಲ ಇದು ನಂಜುಂಡಸ್ವಾಮಿಯವರು 1982ರಲ್ಲಿ ಮಾಡಿದ ಘೋಷಣೆ. ಅವರು 1980ರಲ್ಲಿ ರೈತ ಚಳವಳಿಗೆ ಕಾಲಿಟ್ಟಾಗಿನಿಂದ ರೈತ ಚಳವಳಿಗೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂಬ ನಿಲುವನ್ನು ಪದೇಪದೇ ಹೇಳುತ್ತಾ ಬಂದಿದ್ದಾರೆ. ನರಗುಂದ-ನವಲಗುಂದ ಚಳವಳಿಯ ಸ್ಫೋಟದ ಕೆಲವೇ ವಾರಗಳಲ್ಲಿ, 11.8.80ರಂದು ಹುಬ್ಬಳ್ಳಿಯಲ್ಲಿ ನರಗುಂದ-ನವಲಗುಂದ ಚಳವಳಿಯ ನಾಯಕರು, ರುದ್ರಪ್ಪನವರ ನೇತೃತ್ವದ ಶಿವಮೊಗ್ಗ ರೈತ ಸಂಘ ಮತ್ತು ಒಟ್ಟು 17 ಜಿಲ್ಲೆಗಳ ರೈತ ನಾಯಕರನ್ನು ಒಳಗೊಂಡ ಒಂದು ರಾಜ್ಯ ಮಟ್ಟದ ಸಂಯೋಜಕ ಸಮಿತಿ ರೂಪುಗೊಂಡಿತ್ತು. ನಂತರ ಅಕ್ಟೋಬರ್ ವೇಳೆಗೆ ಸುಂದರೇಶ್, ಕಡಿದಾಳು ಶಾಮಣ್ಣ ಮೊದಲಾದವರ ಪ್ರಯತ್ನದಿಂದ ನಂಜುಂಡಸ್ವಾಮಿಯವರನ್ನು ಆ ಸಮಿತಿಗೆ ಆಹ್ವಾನಿಸಲಾಯಿತು. ಅವರು ಭಾಗವಹಿಸಿದ ಮೊದಲ ಸಭೆಯಲ್ಲಿಯೇ ರೈತ ಚಳವಳಿ ರಾಜಕೀಯೇತರವಾಗಿರಬೇಕು ಮತ್ತು ಈ ಸಮನ್ವಯ ಸಮಿತಿಯಲ್ಲಿ ರಾಜಕೀಯ ಪಕ್ಷಗಳ ಸದಸ್ಯರುಗಳು ಇರಬಾರದು ಎಂಬ ನಿಲುವನ್ನು ಪ್ರತಿಪಾದಿಸಿದರು. ಆ ವೇಳೆಗೆ ನಂಜುಂಡಸ್ವಾಮಿಯವರು ಸಮಾಜವಾದಿ ಪಕ್ಷದಿಂದ ಹೊರಬಂದಿದ್ದರು ಎಂಬುದನ್ನು ನೆನಪಿಸಿಕೊಳ್ಳೋಣ. ಈ ನಿಲುವಿನ ಫಲವಾಗಿ ನರಗುಂದ-ನವಲಗುಂದದ ಐತಿಹಾಸಿಕ ಬಂಡಾಯದ ಬಹುತೇಕ ನಾಯಕರು, ಎಡಪಕ್ಷಗಳು, ಇತರ ಪಕ್ಷಗಳ ಈ ಸಮಿತಿಯಿಂದ ಹೊರಬಂದರು. ಇತರ ಕೆಲ ಜಿಲ್ಲೆಗಳ ನಾಯಕರೂ ಅದನ್ನು ಅನುಸರಿಸಿದರು.

ಹೀಗೆ ರಾಜಕೀಯ ರಹಿತ ಚಳವಳಿಯನ್ನು ಅಂದಿನಿಂದಲೇ ಪ್ರತಿಪಾದಿಸುತ್ತಾ ಬಂದ ನಂಜುಂಡಸ್ವಾಮಿಯವರು ಮುಂದೆ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸಿದರೆಂಬ ಕಾರಣಕ್ಕೆ ಬಳ್ಳಾರಿಯ ರೈತ ನಾಯಕ ರೇವಣಸಿದ್ಧಪ್ಪ ಮೊದಲಾದ ಮೂರು ಜನರನ್ನು ಸಂಘದಿಂದ ಹೊರಹಾಕಿದರು.

ಆದರೆ ರಾಜ್ಯ ರೈತ ಸಂಘದ ಬಹಿರಂಗ ಸಭೆಗಳಲ್ಲಿ ಲಕ್ಷಗಟ್ಟಲೆ ಜನರು ಭಾಗವಹಿಸತೊಡಗಿದಂತೆ, ರೈತ ಸಂಘ ರಾಜಕೀಯ ಪ್ರವೇಶಿಸಬೇಕೆಂಬ ದಿಸೆಯಲ್ಲಿ ಅವರ ಅಭಿಪ್ರಾಯ ಬದಲಾಯಿತು. ಇಂದಿರಾ ಹತ್ಯೆಯ ಹಿನ್ನೆಲೆಯಲ್ಲಿ ನಡೆದ 1984ರ ಲೋಕಸಭಾ ಚುನಾವಣೆಗಳಲ್ಲಿ ’ಮತದಾರರ ಅಭ್ಯರ್ಥಿ’ ಎಂಬ ಹೆಸರಿನಲ್ಲಿ ’ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರದ, ಸಮಾಜದ ಬಗ್ಗೆ ಕಳಕಳಿ ಇರುವ ರೈತ ಸಂಘದ ಹೊರಗಿನ ಪ್ರಸಿದ್ಧ ಸಭ್ಯ ವ್ಯಕ್ತಿಗಳನ್ನು’ ಚುನಾವಣೆಗೆ ನಿಲ್ಲಿಸಿ, ರೈತ ಸಂಘ ಅವರ ಗೆಲುವಿಗೆ ಶ್ರಮಿಸಬೇಕೆಂದು ತೀರ್ಮಾನಕ್ಕೆ ಬಂದರು.

ಇದು ರಾಜಕೀಯದಲ್ಲಿ ಹೊಸದೊಂದು ಪ್ರಯೋಗವಾಗಿತ್ತು. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 7 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿತು. ಆದರೆ ವಿಶ್ವದೆಲ್ಲೆಡೆಯ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಭಾರತದ ಸಂವಿಧಾನಕ್ಕೆ ಭಿನ್ನವಾಗಿದ್ದ ಈ ಪ್ರಯೋಗ ಸೋತಿತು. ಮತ್ತೆ ಯಾವ ಚುನಾವಣೆಗಳಲ್ಲಿಯೂ ನಂಜುಂಡಸ್ವಾಮಿಯವರು ಈ ಪ್ರಯೋಗದ ಮಾತೆತ್ತದಿದ್ದುದೇ ಇದಕ್ಕೆ ಸಾಕ್ಷಿ.

ಆದರೆ ಮುಂದೆ ನಜೀರ್ ಸಾಬರ ಪ್ರಯತ್ನದಿಂದ ಸ್ಥಾಪಿತವಾಗಿ ಪಕ್ಷಾಧಾರಿತವಾಗಿ ನಡೆದ ಜಿಲ್ಲಾ ಪರಿಷತ್ ಸ್ಥಾನಗಳ ಸ್ಪರ್ಧೆಗೆ ಆಯಾ ಜಿಲ್ಲಾ ರೈತ ಸಂಘದ ಸಮಿತಿ ಸ್ವತಂತ್ರವಾಗಿ ತೀರ್ಮಾನ ಕೈಗೊಳ್ಳಲು ಅನುಮತಿ ನೀಡಲಾಯಿತು. ಈ ಚುನಾವಣೆಗಳಲ್ಲಿಯೂ ಉತ್ತಮ ಸಾಧನೆಯೇನೂ ಕಂಡುಬರಲಿಲ್ಲ.

ಪರ್ಯಾಯ ರಾಜಕೀಯ ಪಕ್ಷದ ರಚನೆ ಮತ್ತು ಪರಿಣಾಮ

ಈ ಚುನಾವಣೆಗಳ ಆಸುಪಾಸಿನಲ್ಲಿಯೇ ನಂಜುಂಡಸ್ವಾಮಿಯವರು 1986ರಲ್ಲಿ ಪರ್ಯಾಯ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸುವ ಚಿಂತನೆ ಮತ್ತು ಪ್ರಯತ್ನ ಆರಂಭಿಸಿದರು. ಈ ಪರ್ಯಾಯದಲ್ಲಿ ದಲಿತ ಸಂಘರ್ಷ ಸಮಿತಿಗಳು, ಕನ್ನಡ ಸಂಘಗಳನ್ನು ಒಳಗೊಳ್ಳುವ ಇರಾದೆ ಅವರದಾಗಿತ್ತು.

ಇದೇ ಸಮಯದಲ್ಲಿ ಪಿ.ಲಂಕೇಶ್, ತೇಜಸ್ವಿ, ರಾಮದಾಸ್ ಮೊದಲಾದ ಸಾಹಿತಿಗಳು ಪ್ರಗತಿರಂಗ ಎಂಬ ಪಕ್ಷವನ್ನು ಕಟ್ಟಲು ಪ್ರಯತ್ನ ಆರಂಭಿಸಿದ್ದರು. ಈ ಎರಡೂ ಪ್ರಯತ್ನಗಳನ್ನು ಒಗ್ಗೂಡಿಸಲು ಹಲವಾರು ಬಾರಿ ಪ್ರಯತ್ನಿಸಿದರೂ ಲಂಕೇಶರ ಜೊತೆಗೂಡಿ ಪಕ್ಷ ರಚಿಸಲು ನಂಜುಂಡಸ್ವಾಮಿಯವರು ನಿರಾಕರಿಸಿದರು. ಸಿಪಿಎಂ, ಸಿಪಿಐ, ಪ್ರಗತಿರಂಗ, ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿಗಳು ಒಟ್ಟಿಗೆ ಸೇರಿ ಒಕ್ಕೂಟ ರಚಿಸಬೇಕೆಂದು ಕೊಟ್ಟ ಸಲಹೆಯನ್ನೂ ನಂಜುಂಡಸ್ವಾಮಿಯವರು ತಿರಸ್ಕರಿಸಿದರು. ಈ ಸಂದರ್ಭದಲ್ಲಿ ಪ್ರಗತಿ ರಂಗ ಮತ್ತು ದಲಿತ ಸಂಘರ್ಷ ಸಮಿತಿಗಳೊಂದಿಗೆ ಸೇರಿಯೇ ಪಕ್ಷ ರಚಿಸಬೇಕೆಂಬ ಅಭಿಪ್ರಾಯ ಹೊಂದಿದ್ದ ಮುಖ್ಯವಾದ ಹಲವು ರಾಜ್ಯ ಹಾಗೂ ಜಿಲ್ಲಾ ನಾಯಕರುಗಳನ್ನು ರೈತ ಸಂಘದಿಂದ ಉಚ್ಚಾಟಿಸಲಾಯಿತು. ಇದೇ ಸಂದರ್ಭದಲ್ಲೇ ಕಡಿದಾಳು ಶಾಮಣ್ಣನವರನ್ನೂ ಉಚ್ಚಾಟಿಸಲಾಯಿತು. ಮಂಜುನಾಥ ದತ್ತ, ಆರ್.ಪಿ ವೆಂಕಟೇಶ ಮೂರ್ತಿ ಮೊದಲಾದವರನ್ನು ಒಳಗೊಂಡಂತೆ ಹಾಸನ, ಚಿಕ್ಕಮಗಳೂರು, ತುಮಕೂರು ಮೊದಲಾದ ನಾಲ್ಕಾರು ಜಿಲ್ಲೆಗಳ ಮುಖ್ಯ ನಾಯಕರನ್ನು ಕಳೆದುಕೊಂಡು ರಾಜ್ಯ ರೈತ ಸಂಘ ದುರ್ಬಲವಾಯಿತು.

ಮಹೇಂದ್ರ ಟಿಕಾಯತ್‌

ಈ ಎಲ್ಲದರ ನಡುವೆ 1987ರಲ್ಲಿ ಕನ್ನಡ ದೇಶ ಎಂಬ ಪಕ್ಷದ ಘೋಷಣೆಯಾಯಿತು. ಈಗ ರಾಜ್ಯ ರೈತ ಸಂಘದ ಸದಸ್ಯರು ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಿರಬಾರದೆಂಬ ನಿಯಮವನ್ನು ತೆಗೆದು ರಾಜ್ಯ ರೈತ ಸಂಘ ಮತ್ತು ಕನ್ನಡ ದೇಶ ಪಕ್ಷಗಳೆರಡೂ ಸೇರಿದಂತೆ ದ್ವಿ ಸದಸ್ಯತ್ವ ಪಡೆಯಬಹುದೆಂಬ ತಿದ್ದುಪಡಿಯಾಯಿತು. ಕನ್ನಡ ದೇಶ ಪಕ್ಷದ ಉದ್ಘಾಟನೆಯಾಗುವಾಗ ಸಾಹಿತಿ ಮತ್ತು ಕಲಾವಿದರ ಬಳಗ, ಕನ್ನಡ ಕ್ರಿಯಾ ಸಮಿತಿ ಮೊದಲಾದ ಕನ್ನಡ ಸಂಘಟನೆಗಳು ಸೇರಿದ್ದರೂ, ಎಲ್ಲ ತೀರ್ಮಾನ ರಾಜ್ಯ ರೈತ ಸಂಘಕ್ಕೆ ಅನುಗುಣವಾಗಿ ನಡೆಯುತ್ತಿದ್ದುದರಿಂದ ಈ ಸಂಘಟನೆಗಳೂ ಹಿಂದೆ ಸರಿದವು. ಕೊನೆಗೆ ರಾಜ್ಯ ರೈತ ಸಂಘವೊಂದೇ ಕನ್ನಡ ದೇಶದಲ್ಲಿ ಉಳಿದುಕೊಂಡದ್ದು. ರೈತ ಸಂಘವೇ ಒಂದು ಪಕ್ಷವಾಯಿತು.

ಈ ಹಿನ್ನೆಲೆಯಲ್ಲಿ ಮತ್ತು ಈ ಹೊಸ ಪಕ್ಷಕ್ಕಿಂತ ರಾಜ್ಯ ರೈತ ಸಂಘದ ಹೆಸರೇ ಜನರಿಗೆ ಹೆಚ್ಚು ಪರಿಚಯವಿದ್ದುದರಿಂದ ಕರ್ನಾಟಕ ರಾಜ್ಯ ರೈತ ಸಂಘದ ಹೆಸರಿನಲ್ಲಿಯೇ ಚುನಾವಣೆಗಳಿಗೆ ಸ್ಫರ್ಧಿಸಲು ತೀರ್ಮಾನವಾಯಿತು. ಹೀಗೆ ರೈತ ಚಳವಳಿ ತಾನೇ ಒಂದು ರಾಜಕೀಯ ಪಕ್ಷವಾಗಿ ಪರಿವರ್ತನೆಯಾಯಿತು. ಈ ಘಟನೆಯೂ ರಾಜ್ಯ ರೈತ ಸಂಘಕ್ಕೆ ಹಾನಿಕರವಾಗಿ ಪರಿಣಮಿಸಿತು.

1989ರ ವಿಧಾನಸಭಾ ಚುನಾವಣೆಗಳಲ್ಲಿ ಎಲ್ಲ 224 ಸ್ಥಾನಗಳಿಗೂ ಸ್ಫರ್ಧಿಸಬೇಕೆಂಬ ಹುರುಪಿನಿಂದ, ತೀರ್ಮಾನ ತೆಗೆದುಕೊಂಡರೂ ಸ್ಫರ್ಧಿಸಿದ್ದು 111 ಕ್ಷೇತ್ರಗಳಲ್ಲಿ. ಗೆದ್ದದ್ದು ಎರಡು ಕ್ಷೇತ್ರಗಳಲ್ಲಿ. ಬೆಳಗಾವಿಯ ಬಾಬಾ ಗೌಡ ಪಾಟೀಲರು ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. 89 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರು.

ಬಾಬಾ ಗೌಡ ಪಾಟೀಲರು ಧಾರವಾಡ ಗ್ರಾಮೀಣ ಕ್ಷೇತ್ರದ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ನಂಜುಂಡಸ್ವಾಮಿಯವರು ಉಪಚುನಾವಣೆಯಲ್ಲಿ ಅಲ್ಲಿಂದ ಸ್ಪರ್ಧಿಸಿ ಗೆದ್ದರು. ಮುಂದೆ ನಂಜುಂಡಸ್ವಾಮಿಯವರಿಗೂ ಬಾಬಾ ಗೌಡರಿಗೂ ತೀವ್ರ ಭಿನ್ನಾಭಿಪ್ರಾಯಗಳು ಹುಟ್ಟಿ ಬಾಬಾ ಗೌಡರೂ ರಾಜ್ಯ ರೈತ ಸಂಘವನ್ನು ತ್ಯಜಿಸಿದರು.

ಮುಂದೆ 1991ರ ಲೋಕ ಸಭಾ ಚುನಾವಣೆಯಲ್ಲಿ ರಾಜ್ಯದ ಒಟ್ಟು ಸ್ಥಾನಗಳಾದ 28ರಲ್ಲಿ 14 ಕಡೆ ಸ್ಫರ್ಧಿಸಬೇಕೆಂದು ತೀರ್ಮಾನಿಸಲಾಯಿತಾದರೂ, ಐದು ಸ್ಥಾನಗಳಲ್ಲಿ ಸ್ಪರ್ಧಿಸಿ ಐದರಲ್ಲೂ ಠೇವಣಿ ನಷ್ಟವಾಯಿತು. 1994ರ ವಿಧಾನಸಭಾ ಚುನಾವಣೆಗಳಲ್ಲಿ 112 ಸ್ಥಾನಗಳಿಗೆ ಸ್ಫರ್ಧಿಸಿ ಪಾಂಡವಪುರದ ಒಂದು ಸ್ಥಾನದಲ್ಲಿ ಜಯಗಳಿಸಲಾಯಿತು. 101 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರು. ನಂಜುಂಡಸ್ವಾಮಿಯವರು ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ 2,000 ಮತಗಳಿಂದ ಸೋಲೊಪ್ಪಿದರು.

ಮುಂದೆ ಪುಟ್ಟಣ್ಣಯ್ಯನವರು ಹಾಗೂ ನಂಜುಂಡಸ್ವಾಮಿಯವರ ನಡುವೆ ತೀವ್ರ ಭಿನ್ನಾಭಿಪ್ರಾಯಗಳು ಬೆಳೆದು ಒಗ್ಗಟ್ಟು ಸಾಧಿಸಲು ಮಾಡಿದ ಪ್ರಯತ್ನವೆಲ್ಲ ವಿಫಲವಾಗಿ ರಾಜ್ಯ ರೈತ ಸಂಘ ಎರಡು ಹೋಳಾಯಿತು.

ಇಂತಹ ಪರಿಸ್ಥಿತಿಗೆ ಕಾರಣವೇನು, ಈ ಅನುಭವದಿಂದ ಕಲಿಯಬೇಕಾದ ಪಾಠವೇನು? ದಲಿತ, ಕಾರ್ಮಿಕ ಹಾಗೂ ಕಮ್ಯುನಿಸ್ಟ್ ಚಳುವಳಿಗಳ ಅನುಭವವೇನು?

ಒಟ್ಟಾರೆ ಚಳವಳಿಗಳು ಮತ್ತು ಚುನಾವಣೆಗಳ ನಡುವಣ ಸಂಬಂಧದ ವಿಶ್ಲೇಷಣೆ ಮುಂದಿನ ಸಂಚಿಕೆಯಲ್ಲಿ..

ಉತ್ತರ ಪ್ರದೇಶದ ರೈತ ಚಳವಳಿ ಮತ್ತು ಚುನಾವಣೆಗಳು

ದೆಹಲಿ ಗಡಿಯಲ್ಲಿ ವರ್ಷಕ್ಕೂ ಹೆಚ್ಚು ಕಾಲ ತೀವ್ರಗತಿಯಲ್ಲಿ ನಡೆದ ರೈತ ಹೋರಾಟದಲ್ಲಿ ಉತ್ತರ ಪ್ರದೇಶದ ಪಶ್ಚಿಮ ಭಾಗದ ರೈತರು ಭಾಗವಹಿಸಲಾರಂಭಿಸಿದರು. ಬಿಜೆಪಿ ಕೇಂದ್ರ ಸರ್ಕಾರ 1980ರ ದಶಕದ ಭಾರತೀಯ ಕಿಸಾನ್ ಯೂನಿಯನ್‌ನ ನಾಯಕ ಮಹೇಂದ್ರ ಟಿಕಾಯತ್‌ರವರ ಮಗ ರಾಕೇಶ್ ಟಿಕಾಯತ್ ವ್ಯಾಪಕವಾಗಿ ದೆಹಲಿಯ ಎರಡು ಗಡಿಗಳಲ್ಲಿ ಭಾಗವಹಿಸಿದರು. ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಬಿಜೆಪಿ ಕುತಂತ್ರದಿಂದ ಉಂಟಾಗಿದ್ದ ಕೋಮು ಗಲಭೆಗಳ ಕಾರಣಕ್ಕೆ ಮನಸ್ತಾಪ ಬೆಳೆದಿದ್ದ ಮುಸ್ಲಿಂ ಮತ್ತು ಜಾಟ್ ರೈತರನ್ನು ಮತ್ತೆ ಒಂದುಗೂಡಿಸುವುದರಲ್ಲಿ ಈ ಚಳವಳಿ ಯಶಸ್ವಿಯಾಯಿತು. ಈ ಚಳವಳಿ ಬಲಿಷ್ಠವಾಗಿದ್ದುದು ಕಬ್ಬು ಬೆಳೆಗಾರ ಜಾಟ್ ರೈತರ ನಾಲ್ಕು ಜಿಲ್ಲೆಗಳಲ್ಲಿ- ಮುಝಫರ್‌ನಗರ್, ಶ್ಯಾಮ್ಲಿ, ಭಾಗಪತ್ ಮತ್ತು ಮೇರಠ್

ಈ ಜಿಲ್ಲೆಗಳ 16 ಗ್ರಾಮೀಣ ಕ್ಷೇತ್ರಗಳಲ್ಲಿ ಬಿಜೆಪಿ 13 ರಲ್ಲಿ ಸೋತಿದೆ. ಒಂದನ್ನು ಕೇವಲ 200 ಮತಗಳಿಂದ ಗೆದ್ದಿದೆ.

ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ರೈತ ನಾಯಕ ರಾಕೇಶ್ ಟಿಕಾಯತ್‌
ರಾಕೇಶ್ ಟಿಕಾಯತ್

2013ರಲ್ಲಿ ಬಿಜೆಪಿ ಮಾಡಿಸಿದ್ದ ಕೋಮುಗಲಭೆಗಳಿಂದ 2014ರ ಮತ್ತು ನಂತರದ 2017ರ ವಿಧಾನಸಭಾ ಚುನಾವಣೆಗಳಲ್ಲಿ ಈ ಪ್ರದೇಶದ ಎಲ್ಲ ಸ್ಥಾನಗಳನ್ನು ಕಬಳಿಸಿದ್ದ ಬಿಜೆಪಿಗೆ ರೈತ ಹೋರಾಟ ನೀಡಿದ ಹಿಂದೂ-ಮುಸ್ಲಿಂ ರೈತ ಒಗ್ಗಟ್ಟಿನ ಉತ್ತರ ಇದು. 2019ರಲ್ಲಿನ ಲೋಕಸಭಾ ಚುನಾವಣೆಯಲ್ಲಿಯೂ ಶೇ.90ರಷ್ಟು ರೈತರು ಬಿಜೆಪಿಗೆ ಮತ ನೀಡಿದ್ದರು.

ಆದರೆ ಈ ಪ್ರದೇಶ ಬಿಟ್ಟರೆ ರೈತ ಚಳವಳಿ ಆಲೂಗಡ್ಡೆ ಬೆಳೆಗಾರ ರೈತರು ಮತ್ತು ಇತರ ಜಾತಿಗಳ ರೈತರಿದ್ದ ಪ್ರದೇಶಗಳಲ್ಲಿ ವ್ಯಾಪಿಸಿರಲಿಲ್ಲ.

ಯುಪಿಯ ಮಧ್ಯ ಭಾಗಕ್ಕೆ ಸೇರುವ ಲಖೀಂಪುರಕೇರಿ ರೈತ ಕೊಲೆಗಳ ಪ್ರದೇಶ ಕೂಡಾ ತೀರಾ ಇತ್ತೀಚೆಗೆ ರೈತ ಚಳವಳಿಗೆ ಸೇರಿದ್ದು. ಮಾತ್ರವಲ್ಲ, ಅಲ್ಲಿ ಈ ಕೊಲೆಗಳ ಸಮಯದಲ್ಲಿ ಮತ್ತು ನಂತರದ ಹೋರಾಟದಲ್ಲಿ ಕೋಮು ದ್ವೇಷವನ್ನು ಹಬ್ಬಿಸಲಾಯಿತು. ಇಲ್ಲಿ ಕೊಲೆಯಾದವರಲ್ಲಿ ಹೆಚ್ಚಿನವರು ಸಿಖ್ಖರು ಎಂಬುದನ್ನು ಗಮನಿಸಬೇಕು.

ಎಲ್ಲರಿಗೂ ಗೊತ್ತಿರುವಂತೆ ಯುಪಿಯ ರೈತರು ದೆಹಲಿಯ ರೈತ ಸಂಘರ್ಷಕ್ಕೆ ಸೇರಿದ್ದು ತಡವಾಗಿ. ಜ.26ರ ಪೊಲೀಸ್ ದೌರ್ಜನ್ಯದ ಘಟನೆಗಳ ನಂತರವೇ ಜಾಟ್ ಖಾಪ್ ಪಂಚಾಯತ್‌ಗಳು ನಡೆದದ್ದು ಹಾಗೂ ದೊಡ್ಡ ಸಂಖ್ಯೆಯಲ್ಲಿ ರೈತರು ಚಳವಳಿಯಲ್ಲಿ ಭಾಗವಹಿಸಿದ್ದು.

ಪಂಜಾಬ್ ರೈತರು ಮೂರು ವರ್ಷಗಳಿಂದ ವಿವಿಧ ರೀತಿಯ ಹೋರಾಟಗಳಲ್ಲಿದ್ದರು. 2020ರ ಜುಲೈ-ಆಗಸ್ಟ್ ತಿಂಗಳುಗಳಿಂದ ಹಳ್ಳಿ ಹಳ್ಳಿಗಳಲ್ಲಿ, ನಗರ ಪಟ್ಟಣಗಳಲ್ಲಿ ತೀವ್ರ ಹೋರಾಟಗಳು ನಡೆದವು. ರೈಲ್ವೆ ರೋಖೋಗಳು, ಕೇಂದ್ರ ಸರ್ಕಾರದ ಕಚೇರಿಗಳು, ರಿಲಯನ್ಸ್ ಫ್ರೆಶ್, ಪೆಟ್ರೋಲ್ ಬಂಕ್, ಅದಾನಿಯ ಬೃಹತ್ ಗೋದಾಮುಗಳ ವಿರುದ್ಧ ಪಿಕೆಟಿಂಗ್ ನಡೆಸಿದ್ದರು. ಜಿಯೋ ಬಾಯ್ಕಾಟ್ ಆರಂಭಿಸಿದ್ದರು. ದೆಹಲಿಯ ಗಡಿಯಲ್ಲಿ ಕೂಡಾ ಪೊಲೀಸ್ ದೌರ್ಜನ್ಯ, ಬಂಡೆಗಳು, ಮುಳ್ಳುಬೇಲಿಗಳ ಅಡೆತಡೆಗಳನ್ನು ಲೆಕ್ಕಿಸದೆ ಮುನ್ನುಗ್ಗಿ ರೈತ ಚಳವಳಿ ಯಶಸ್ವಿ ಮಾಡಿದ್ದರಲ್ಲಿ ಪಂಜಾಬಿನ ರೈತರ ಸಮರಧೀರತೆಯ ಕಾಣಿಕೆ ದೊಡ್ಡದು. ಅಲ್ಲಿ ರೈತ ವಿರೋಧಿ ಪಕ್ಷಗಳ ಸೋಲು ಹಾಗೂ ಅದರ ಪ್ರಯೋಜನ ಎಎಪಿಗೆ ಪಕ್ಷಕ್ಕೆ ದಕ್ಕಿದ್ದು ಗಮನಾರ್ಹ.

ಕರ್ನಾಟಕದಲ್ಲಿಯೂ 1980ರ ಚಳವಳಿಯ ನಂತರ ಅದರ ಫಲ ದಕ್ಕಿದ್ದು, ರೈತ ಚಳವಳಿಯಿಂದ ಮಾರು ದೂರ ಉಳಿದಿದ್ದ ಜನತಾ ಪಕ್ಷಕ್ಕೆ ಎಂಬುದನ್ನು ನೆನಪಿಸಿಕೊಳ್ಳೋಣ.

ಜಿ. ಎನ್. ನಾಗರಾಜ್

ಜಿ. ಎನ್. ನಾಗರಾಜ್
ಸರ್ಕಾರಿ ಅಧಿಕಾರಿಯಾಗಿದ್ದ ಜಿ.ಎನ್. ನಾಗರಾಜ್ 80ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣಾವಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.


ಇದನ್ನೂ ಓದಿ: ಆಳುವವರ ತಲೆಕೆಳಗು ನೀತಿಗಳು ಹಾಗೂ ಕಂಗೆಟ್ಟ ರೈತರ ಬದುಕು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...