ಭಾರತದಲ್ಲಿ ದ್ವೇಷದ ವಾತಾವರಣವನ್ನು ಹದಗೊಳಿಸಿದ ಬಗೆಯಲ್ಲಿ ಒಂದು ವಿನ್ಯಾಸವನ್ನು ಗುರುತಿಸಬಹುದು. ಕರ್ನಾಟಕದಲ್ಲಂತೂ ಆ ವಿನ್ಯಾಸ ತ್ವರಿತ ಗತಿಯಲ್ಲಿ ಏರುಮುಖದ ಬೆಳವಣಿಗೆ ಕಂಡಿದೆಯೆಂಬುದು ಯಾರಿಗಾದರೂ ಸುಲಭವಾಗಿ ಗೋಚರಿಸುತ್ತದೆ.
ಈ ವಿನ್ಯಾಸದ ಮೊದಲ ಹಂತದಲ್ಲಿ ಆರ್‌ಎಸ್‌ಎಸ್ ಕೋಮು ಧ್ರುವೀಕರಣದ ಸಲುವಾಗಿ ಮತ್ತು ಸಮಾಜದಲ್ಲಿ ದ್ವೇಷ ಬಿತ್ತಲು ಆಯ್ಕೆ ಮಾಡಿಕೊಳ್ಳುತ್ತಿದ್ದ ಪ್ರಕರಣಗಳಲ್ಲಿ ತಾವು ನಡೆಸುವ ವಿಕೃತಿಯನ್ನು ಸುಳ್ಳೋ, ಕಪೋಲಕಲ್ಪಿತ ಸಂಗತಿಗಳಿಂದಲೋ ಅಥವಾ ಇನ್ವೆಂಟ್ ಮಾಡಲಾದ ಇತಿಹಾಸದಿಂದಲೋ ಸಮರ್ಥನೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿತ್ತು. ಬಾಬರಿ ಮಸೀದಿ ಧ್ವಂಸದ ವಿಷಯವನ್ನೇ ತೆಗೆದುಕೊಂಡರೆ, ಮಸೀದಿ ಜಾಗದಲ್ಲಿ ಮೊದಲು ಹಿಂದೂ ದೇವಾಲಯವಾಗಿತ್ತು ಎನ್ನುವ ಕಲ್ಪಿತ ಕಥೆಯನ್ನು ಜನರ ಮನಸ್ಸಿನಲ್ಲಿ ಬಿತ್ತುವ ಮೂಲಕ ತನ್ನ ಕೆಲಸವನ್ನು ಸಾಧಿಸಲು ಪ್ರಯತ್ನಿಸಿತ್ತು ಮತ್ತು ರಾಮಮಂದಿರ ಕಟ್ಟುವ ಅಭಿಯಾನವನ್ನು ಆ ಮೂಲಕ ಸಾಮಾನ್ಯರ ಮನಸ್ಸಿನಲ್ಲಿ ಬಿತ್ತಲು ಪ್ರಯತ್ನಿಸಿತ್ತು. (ಇದರ ಜೊತೆಗೆ ಇನ್ನಷ್ಟು ಸುಳ್ಳು ಇತಿಹಾಸಗಳನ್ನು ಸೃಷ್ಟಿಸಲಾಯ್ತು). ಆದರೆ ಈ ಪ್ರಕರಣಗಳ ಸುತ್ತಮುತ್ತ ನಡೆಸಲಾಗುತ್ತಿದ್ದ ಹಿಂಸಾಚಾರದಿಂದ ದೂರವುಳಿಯುವ ’ತಂತ್ರಗಾರಿಕೆ’ಯನ್ನು ಅದು ಹಲವು ಬಾರಿ ಪ್ರದರ್ಶಿಸುತ್ತಿತ್ತು. ಅಂತಹ ಹಿಂಸಾಚಾರದಲ್ಲಿ ಭಾಗಿಯಾದವರನ್ನು ಫ್ರಿಂಜ್ ಎಲಿಮೆಂಟ್‌ಗಳೆಂದು ಕರೆಯುವ ಮೂಲಕ ತನ್ನ ಕೃತ್ಯಗಳು ಅವಕ್ಕಿಂತಲೂ ಸೌಮ್ಯವೆಂದು ಬಿಂಬಿಸಿಕೊಳ್ಳುತ್ತಿತ್ತು. ಮುಖ್ಯವಾಹಿನಿ ಮಾಧ್ಯಮಗಳು ಇನ್ನೂ ಮಾರಿಕೊಂಡಿರದ ಸಂದರ್ಭ ಅದು. ಸಂಘಪರಿವಾರದ ಅಜೆಂಡಾವನ್ನು ಸಂಪೂರ್ಣವಾಗಿ ಒಪ್ಪದೆ, ಅದನ್ನು ಪ್ರಶ್ನಿಸಿ ಜನರಿಗೆ ತಿಳಿವಳಿಕೆ ಮೂಡಿಸುತ್ತಿದ್ದ ಸಮಯ ಕೂಡ ಇದಾಗಿತ್ತು ಮತ್ತು 20-30 ವರ್ಷಗಳ ದೀರ್ಘಾವಧಿಯಲ್ಲಿ ಗ್ರಾಜುಯಲ್ ಆಗಿ ಆದ ಬದಲಾವಣೆಯ ಹಂತವಿದು.
ನಂತರ ಬಿಜೆಪಿ ಸರ್ಕಾರಗಳು ಹಲವು ರಾಜ್ಯಗಳಲ್ಲಿ ಅಧಿಕಾರ ಹಿಡಿದ ಮೇಲೆ, ಮತ್ತು ಒಕ್ಕೂಟ ಸರ್ಕಾರದಲ್ಲಿ ಮೊದಮೊದಲ ಬಾರಿಗೆ ಅಧಿಕಾರ ನಡೆಸಿದ ಸಮಯ, ’ಸಮರ್ಥನೆ’ ನೀಡಿ ದ್ವೇಷ ಬಿತ್ತುವ ಪಡೆಗಳಿಗೂ ಮತ್ತು ಹಿಂಸಾಚಾರಕ್ಕೆ ಇಳಿಯುವ ಪಡೆಗಳಿಗೂ ಇದೆ ಎಂದು ಪ್ರತಿಪಾದಿಸುತ್ತಿದ್ದ ವ್ಯತ್ಯಾಸಗಳನ್ನು ಬ್ಲರ್ ಮಾಡಲು ದೊಡ್ಡದಾಗಿ ಪ್ರಯತ್ನಿಸಿದ ಕಾಲಘಟ್ಟವಾಗಿತ್ತು. ಇದನ್ನು ಒಟ್ಟಾರೆ ವಿನ್ಯಾಸದಲ್ಲಿ ಎರಡನೇ ಹಂತವೆನ್ನಬಹುದು. ಈ ಸಮಯದಲ್ಲಿ ತನ್ನ ಬೆಂಬಲಕ್ಕಾಗಿಯೇ ಹೊಸಹೊಸ ಮಾಧ್ಯಮಗಳನ್ನು ಹುಟ್ಟುಹಾಕಲಾಯಿತು. ಅಂತಹ ಒಂದು ’ವಿಷ’ಕಾರಿ ದಿನಪತ್ರಿಕೆ ಕರ್ನಾಟಕದಲ್ಲೂ ಜನ್ಮತಳೆದು, ಯುವಕರನ್ನು ಸೆಳೆಯಲು ದೊಡ್ಡಮಟ್ಟದ ಜಾಲವನ್ನೇ ಸೃಷ್ಟಿಸಲಾಯಿತು. ಈ ಹಂತದಲ್ಲಿ ಫ್ರಿಂಜ್ ಎಲಿಮೆಂಟ್‌ಗಳ ದುಷ್ಕೃತ್ಯಗಳಿಗೂ ’ಸಮರ್ಥನೆ’ಗಳನ್ನು ಸೃಷ್ಟಿಸುವ ಕೆಲಸವನ್ನು ಈ ಮಾಧ್ಯಮಗಳ ಪ್ರೊಪೋಗಾಂಡದ ಮೂಲಕ ಪ್ರಯತ್ನಿಸಲಾಯಿತು. ಜನರ ಸಮ್ಮತಿಯನ್ನು ಉತ್ಪಾದಿಸಲೂ ತಂತ್ರಗಳನ್ನು ಹೆಣೆಯಲಾಯಿತು. ಯಂತ್ರಗಳನ್ನು ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಯಿತು. ಪಬ್ ಮೇಲೆ ಪುಂಡುಪೋಕರಿಗಳು ಮಾಡುವ ಗಲಾಟೆಗಳಿಗೂ ’ಸಂಸ್ಕೃತಿ’ಯ ಹೆಸರಿನಲ್ಲಿ ’ಸಮರ್ಥನೆಗೆ’ ಪ್ರಯತ್ನಿಸಲಾಯಿತು. ಬೀಫ್ ನಿಷೇಧಕ್ಕೆ ನೆಲೆಯನ್ನು ಸೃಷ್ಟಿಸಲು, ಇನ್ನೂ ಇಂತಹ ಹತ್ತು ಹಲವು ಬೀದಿ ಗಲಾಟೆಗಳನ್ನು ಸೃಷ್ಟಿಸಬಹುದಾದ ’ಇಶ್ಯೂ’ಗಳನ್ನು ಹೆಚ್ಚೆಚ್ಚು ಕಂಡುಹಿಡಿಯಲು ಕಾರ್ಯೋನ್ಮುಖವಾದ ಕಾಲವಿದು. ಕೆಲವು ಮಾಧ್ಯಮಗಳ ಹಿಡಿತದಿಂದ ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರ ಭಾಗಶಃ ಯಶಸ್ಸು ಪಡೆದ ಅವಧಿ ಇದು ಎನ್ನಬಹುದು.
ಕೇಂದ್ರದಲ್ಲಿ ಬಿಜೆಪಿ ದೈತ್ಯ ಯಶಸ್ಸಿನಿಂದ ಅಧಿಕಾರ ಹಿಡಿದ ಕಳೆದ ಎಂಟು ವರ್ಷಗಳಿಂದ ಈಗ ಇದು ಮೂರನೇ ಹಂತ ತಲುಪಿದೆ. ಮುಖ್ಯವಾಹಿನಿ ಮಾಧ್ಯಮಲೋಕದ ಬಹುತೇಕ ಸಂಸ್ಥೆಗಳನ್ನು ಬೆದರಿಸಿಯೋ ಅಥವಾ ತನ್ನ ಬೆಂಬಲಕ್ಕೆ ನಿಂತಿರುವ ಕ್ರೋನಿ ಉದ್ದಿಮೆದಾರರು ಅವುಗಳನ್ನು ಕೊಂಡುಕೊಳ್ಳುವಂತೆ ಮಾಡಿಯೋ, ಸಾಮಾನ್ಯರನ್ನು ಪ್ರಶ್ನೆಗಳನ್ನೇ ಕೇಳದಂತೆ ಮಾಡಿ, ಮನಬಂದಂತೆ ’ಮದ್ದು’ ಅರೆಯುವ ಕೆಲಸವಾಗುತ್ತಿದೆ. ಈ ಹಂತದಲ್ಲಿ ಮೊದಲೆರಡು ಹಂತಗಳಲ್ಲಿ ನಡೆದ ಎಲ್ಲ ಕೆಲಸಗಳು ಚುರುಕುಗೊಂಡಿದ್ದಷ್ಟೇ ಅಲ್ಲದೆ, ದ್ವೇಷ ಬಿತ್ತಲು ಅದಕ್ಕೆ ಎಂಥದಾದರೊಂದು ಸಮರ್ಥನೆಯನ್ನು ಸಿದ್ಧಪಡಿಸಿಕೊಳ್ಳಬೇಕೆನ್ನುವ ನಿಯಮವೂ ಬೇಡವಾಗಿದೆ. ಅಲ್ಲದೆ ಅಧಿಕಾರ ನಡೆಸುತ್ತಿರುವವರು, ಮೂಲ ಸೈದ್ಧಾಂತಿಕವಾದಿಗಳು, ಬೀದಿಯಲ್ಲಿ ಗಲಭೆ ಎಬ್ಬಿಸುವ ಫ್ರಿಂಜ್‌ಗಳು ಯಾರು ಯಾರೆಂಬ ಗೆರೆಯೂ ಸಂಪೂರ್ಣವಾಗಿ ಅಳಿಸಿಹೋಗಿರುವುದು ಈ ಹಂತದ ವಿಶೇಷ. ಸಿಎಎ-ಎನ್‌ಆರ್‌ಸಿ ಸಮಯದಲ್ಲಿ ಧರ್ಮದ ಆಧಾರದಲ್ಲಿ ಹೊರಗಿಡಬಹುದಾದ ನೀತಿಯನ್ನು ಸರ್ಕಾರವೇ ಜಾರಿಗೊಳಿಸಿತು. ಮಸೀದಿ ಉರುಳಿಸಿದ್ದು ಕ್ರಿಮಿನಲ್ ಅಪರಾಧವಾದರೂ, ಮಂದಿರ ಕಟ್ಟುವುದಕ್ಕೆ ಯಾವುದೇ ತಾರ್ಕಿಕ-ತಾತ್ವಿಕ ಕಾರಣಗಳನ್ನು ಹುಡುಕಲು ಸಾಧ್ಯವಾಗಿಲ್ಲದಿದ್ದರೂ, ಮಂದಿರ ಕಟ್ಟುವುದರ ಪರವಾಗಿ ತೀರ್ಪನ್ನು ಪಡೆದುಕೊಳ್ಳಲಾಯಿತು. ಯುಪಿ ಮತ್ತು ಗುಜರಾತ್ ರಾಜ್ಯಗಳಲ್ಲಿ ಪ್ರಜಾಪ್ರಭುತ್ವವನ್ನು ಅಣಕಿಸುವ ಎಷ್ಟೋ ಘಟನಗಳು ಲೀಲಾಜಾಲವಾಗಿ ನಡೆದುಹೋದವು! ಎಷ್ಟೋ ಫ್ರಿಂಜ್ ಎಲಿಮೆಂಟ್‌ಗಳು ಶಾಸಕ, ಸಂಸದ, ಮಂತ್ರಿಗಳಾಗಿಹೋದರು!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50₹100 ₹500 ₹1000 Others
ಈಗ ಕರ್ನಾಟಕ ಚುನಾವಣೆಯ ಹೊಸ್ತಿಲಲ್ಲಿರುವಂತೆ ಒಂದರಹಿಂದೊಂದರಂತೆ ದ್ವೇಷ ಹಬ್ಬಿಸುವ, ಜನಸಾಮಾನ್ಯರನ್ನು ಒಡೆಯುವ ಮತ್ತು ಕೋಮು ಧ್ರುವೀಕರಣದ ಅಹಿತಕರ ಘಟನೆಗಳಿಗೆ ನಾಡು ಸಾಕ್ಷಿಯಾಗುತ್ತಿದೆ. ಕರ್ನಾಟಕ ಮೂರನೇ ಹಂತದ ತುತ್ತತುದಿ ತಲುಪಿರುವುದಕ್ಕೆ ಸಾಕ್ಷಿ, ಇತ್ತೀಚಿಗೆ ಹಲವು ಜಾತ್ರೆಗಳಲ್ಲಿ ಮುಸ್ಲಿಮರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದೆಂಬ ನಂಜಿನಕಿಡಿ ವೇಗವಾಗಿ ಹಬ್ಬುತ್ತಿರುವುದು. ಶಿವಮೊಗ್ಗದ ಮಾರಿಕಾಂಬ ಜಾತ್ರೆಯಲ್ಲಿ ಪ್ರಾರಂಭವಾಗಿ ಉಡುಪಿ, ದಕ್ಷಿಣಕನ್ನಡ ಸೇರಿದಂತೆ ಈಗ ರಾಜ್ಯದ ಹಲವೆಡೆ ಈ ದ್ವೇಷ ನುಗ್ಗಿದೆ. ತಲೆತಲಾಂತರದಿಂದ ಮುಸ್ಲಿಮರು ಈ ಜಾತ್ರೆಗಳಲ್ಲಿ ಭಾಗವಹಿಸಿಕೊಂಡು ಬರುತ್ತಿದ್ದರೂ, ಈಗ ಅದು ಉಂಟುಮಾಡುತ್ತಿರುವ ’ಹಾನಿ’ಯೇನು ಎಂಬುದರ ಬಗ್ಗೆ ಕಪೋಲಕಲ್ಪಿತ ಸಮರ್ಥನೆಗಳಿಗೂ ಸಂಘಪರಿವಾರ ಇಳಿದಿಲ್ಲ. ರಾತ್ರಿ ಬಂದ ದ್ವೇಷದ ಅಜೆಂಡಾವನ್ನು ಬೆಳಗ್ಗೆಯಿಂದಲೇ ಜಾರಿ ಮಾಡುವುದಷ್ಟೇ ಅದರ ತುರ್ತಾಗಿದೆ. ಹಿಂದೆ ಒಡಕು ಮೂಡಿಸಲು, ಅನ್ಯ ಕೋಮಿನ ಮೇಲೆ ಆಳವಾದ ಅಪನಂಬಿಕೆ ಬೆಳೆಸಲು ಅಗತ್ಯವಾಗಿದ್ದ – ತಮ್ಮ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವೆನಿಸಿಕೊಂಡ ಮಾಂಸವನ್ನು ಪೂಜಾ ಆವರಣದಲ್ಲಿ ಕದ್ದುತಂದು ಎಸೆದು ಅಲ್ಪಸಂಖ್ಯಾತ ಕೋಮಿನವರ ಮೇಲೆ ಆರೋಪಿಸುವ ಕುತಂತ್ರ ಕೂಡ- ಇವತ್ತಿಗೆ ಬೇಡವಾಗಿರುವುದು ಈ ಕಾಲದ ಬಿಕ್ಕಟ್ಟನ್ನು ಸೂಚಿಸುತ್ತದೆ.
ಇಂದು ವಾಟ್ಸ್‌ಆಪ್‌ನಲ್ಲಿ ಹೇಳಿಕೆಯೊಂದನ್ನು ನೀಡಿ, ಅಥವಾ ದ್ವೇಷದ ಮಾತುಗಳುಳ್ಳ ಬ್ಯಾನರ್ ಒಂದನ್ನು ಎತ್ತಿನಿಲ್ಲಿಸಿ ಅದರ ಫೋಟೋವನ್ನು ಹಂಚಿಕೊಂಡರೆ ಸಾಕು, ಮೆಜಾರಿಟೇರಿಯನ್ ಎನ್ನಿಸಿಕೊಳ್ಳುವ ಜನರನ್ನು ಸುಲಭವಾಗಿ ಪ್ರಚೋದಿಸಬಹುದು ಎಂಬ ಹಂತಕ್ಕೆ ಸಂಘಪರಿವಾರ ಸಜ್ಜಾಗಿ ನಿಂತಿದೆ. ಅದೇ ಸಲುವಾಗಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಟಿಪ್ಪು ಹೆಸರಿನಲ್ಲಿ ನಿತ್ಯನಡೆಯುವ ಸಲಾಂ ಮಂಗಳಾರತಿಯನ್ನು ನಿಲ್ಲಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. ಇವೆಲ್ಲವುದಕ್ಕು ಬಿಜೆಪಿ ಆಡಳಿತದ ಸರ್ಕಾರ ಕೆಲವೊಮ್ಮೆ ನೇರವಾಗಿ ಮತ್ತೆ ಕೆಲವೊಮ್ಮೆ ಪರೋಕ್ಷ ಬೆಂಬಲಕ್ಕೆ ನಿಂತಿದೆ. ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ಇರಬೇಕಾದ ನಾಗರಿಕರ ಹಕ್ಕುಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಸಾರ್ವಜನಿಕ ಪ್ರದೇಶಗಳಾದ ಜಾತ್ರೆ ಮತ್ತು ದೇವಸ್ಥಾನಗಳಲ್ಲಿ ಧರ್ಮದ ಆಧಾರದಲ್ಲಿ ನಿಷೇಧದ ಮಾತುಗಳನ್ನಾಡುವುದು ಸಂವಿಧಾನ ಕೊಡಮಾಡುವ ಹಕ್ಕುಗಳ ಉಲ್ಲಂಘನೆ ಅನ್ನುವುದನ್ನು ಪರಿಗಣನೆಗೇ ತೆಗೆದುಕೊಳ್ಳದೆ ಪ್ರಭುತ್ವ ವರ್ತಿಸುತ್ತಿರುವುದು, ಅದಕ್ಕೆ ನಾಗರಿಕ ಸಮಾಜದ ಒಂದು ವರ್ಗ ಮತ್ತು ಮಾಧ್ಯಮಗಳು ಸಾಥ್ ಕೊಡುವುದು ಇವೆಲ್ಲ ಮೆಜಾರಿಟೇರಿಯನ್ ಫ್ಯಾಸಿಸಂನ ಸಾಂಪ್ರದಾಯಿಕ ಲಕ್ಷಣಗಳಾಗಿವೆ.
ಫ್ಯಾಸಿಸಂ ಪದಬಳಕೆ ಇವತ್ತಿನ ನಮ್ಮ ದೇಶದ ದ್ವೇಷದ ಪರಿಸ್ಥಿತಿಯನ್ನು ಮನವರಿಕೆ ಮಾಡಲು ಉಪಯುಕ್ತವಲ್ಲ ಎಂಬ ಮಾತೊಂದಿದೆ. ಆದರೆ, ಬಹುಸಂಖ್ಯಾತರ ಮಿತಿಮೀರಿದ ಅಧಿಕಾರ ಹಿಡಿತ, ಪ್ರಜಾಪ್ರಭುತ್ವದ ದಮನ, ಏಕವ್ಯಕ್ತಿ ಪೂಜಿತ ಸರ್ವಾಧಿಕಾರದೆಡೆಗಿನ ನಡೆ, ಅಲ್ಪಸಂಖ್ಯಾತರು ಮತ್ತು ದೀನರನ್ನು ಮೂಲೆಗುಂಪಾಗಿಸುವ ತಂತ್ರಗಾರಿಕೆ ಮತ್ತು ಇವೆಲ್ಲವನ್ನೂ ಪೊರೆಯುವ (ಬೆರಳೆಣಿಕೆಯ ಕೆಲವೇ ವ್ಯಕ್ತಿಗಳನ್ನು ಶ್ರೀಮಂತರನ್ನಾಗಿಸುವ) ಆರ್ಥಿಕ ವ್ಯವಸ್ಥೆ – ಈ ಎಲ್ಲವೂ ಏಕಕಾಲದಲ್ಲಿ ಘಟಿಸುತ್ತಿರುವುದು – ಎರಡನೇ ವಿಶ್ವಯುದ್ಧಕ್ಕೂ ಮುನ್ನಾ ಇಟಲಿ ಮತ್ತು ಜರ್ಮನಿಯಲ್ಲಿದ್ದ ಫ್ಯಾಸಿಸಂಗೆ ನಿಖರವಾಗಿ ಹೋಲುತ್ತದೆ. ಆ ನಿಟ್ಟಿನಲ್ಲಿ ಇಷ್ಟು ದಿನ ಹೊರಚಹರೆಯಲ್ಲಾದರೂ ಮರೆಮಾಚಿಕೊಳ್ಳುತ್ತಿದ್ದ ಫ್ಯಾಸಿಸಂ ಇಂದು ಬಹಿರಂಗವಾಗಿ ಮುನ್ನುಗ್ಗುತ್ತಿದೆ. ಜಾತ್ರೆಗಳಲ್ಲಿ, ದೇವಾಲಯಗಳ ಆವರಣಗಳಲ್ಲಿ ಮುಸಲ್ಮಾನರಿಗೆ ವ್ಯಾಪಾರ ಬಹಿಷ್ಕಾರ ಇದನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ.

ಸರ್ವಾಧಿಕಾರವೊಂದಕ್ಕೆ ಸಾಂಸ್ಕೃತಿಕ ಫ್ಯಾಸಿಸಂ ಬೆರೆತಾಗ ಅದು ವ್ಯವಸ್ಥೆಯ ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರ ಅನುಕೂಲ ಮಾಡಿಕೊಡುತ್ತದೆನ್ನುವುದು ಸಾರ್ವಕಾಲಿಕ ಸತ್ಯ. ಇನ್ನುಳಿದವರು ಈ ವ್ಯವಸ್ಥೆ ಥ್ರೈವ್ ಆಗುವಂತೆ ನೋಡಿಕೊಳ್ಳುವ ಕಾಲಾಳುಗಳಾಗಿ ಶೋಷಣೆಗೆ ಒಳಪಡುತ್ತಾರೆ. ಆ ನಿಟ್ಟಿನಲ್ಲಿ ನೋಡುವುದಾದರೆ ಜಾತಿವ್ಯವಸ್ಥೆ ಕೂಡ ಫ್ಯಾಸಿಸ್ಟ್ ಆಗಿದ್ದ ವ್ಯವಸ್ಥೆಯೇ! ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದು ಬೆಳೆಯುತ್ತಿರುವ ಫ್ಯಾಸಿಸ್ಟ್ ವ್ಯವಸ್ಥೆಯ ಹುನ್ನಾರ ಆ ಜಾತಿ ವ್ಯವಸ್ಥೆಯನ್ನು ಪ್ರಾಚೀನ ರೂಪದಲ್ಲಿಯೇ ಪ್ರತಿಷ್ಠಾಪಿಸುವುದಾಗಿದೆ. ಇದನ್ನು ಅರಿಯದ ಹಿಂದೂ ಧರ್ಮದ ಎಷ್ಟೋ ಯುವಕರು ಸಮೂಹಸನ್ನಿಯಲ್ಲಿ ಸಿಲುಕಿ ಮುಸ್ಲಿಂ ದ್ವೇಷವನ್ನು ಭಜಿಸುತ್ತಿದ್ದಾರೆ. ಮುಂದಿನ ಹಂತಗಳಲ್ಲಿ ಅದು ತಮ್ಮ ಮನೆ ಬಾಗಿಲಿಗೆ, ತಮ್ಮ ಪಾದಗಳಿಗೇ ಬಂದು ಎರಗುತ್ತದೆಂಬ ಸುಳಿವೂ ಇಲ್ಲದಂತೆ!
ಸಾಮಾಜಿಕವಾಗಿ ಪ್ರಜಾಪ್ರಭುತ್ವವನ್ನು ಸಾಧಿಸಿಕೊಳ್ಳುವುದಕ್ಕೆ ಸಾಧ್ಯವಾಗದಿದ್ದರೆ ರಾಜಕೀಯ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವುದು ಕಷ್ಟ ಎಂಬುದು ಸಂವಿಧಾನ ಶಿಲ್ಪಿ ಬಾಬಾಸಾಹೇಬರ ವಾದವಾಗಿತ್ತು. ಆದುದರಿಂದಲೇ ಅವರು ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯದ ಕಲ್ಪನೆಗಳ ಜೊತೆಗೆ ಸಂವಿಧಾನದ ಪೀಠಿಕೆಯಲ್ಲಿ ಭ್ರಾತೃತ್ವದ (ಬುದ್ಧ ತತ್ವದ ಮೈತ್ರಿಯಿಂದ ಬಂದಿರುವಂತದ್ದು) ಮಹತ್ವವನ್ನು ಅವರು ಒತ್ತಿಹೇಳಿದ್ದು. ಆ ಭ್ರಾತೃತ್ವವನ್ನು ಅಳವಡಿಸಿಕೊಳ್ಳುವುದರಲ್ಲಿ ಭಾರತ ದಯನೀಯವಾಗಿ ಸೋತಿರುವುದು ಈಗಿನ ವಿದ್ಯಮಾನಗಳಿಂದ ಸ್ಪಷ್ಟವಾಗಿ ತಿಳಿಯುತ್ತದೆ.
ಭ್ರಾತೃತ್ವ ಭಾರತದ ದೇಶಕ್ಕೆ ಏಲಿಯನ್ ಆದ ಪರಿಕಲ್ಪನೆ, ಇದನ್ನು ಭಾರತದಂತಹ ಸಮಾಜದಲ್ಲಿ ಅಳವಡಿಸಿಕೊಳ್ಳುವುದು ಸುಲಭವಲ್ಲ ಎಂಬ ಮಾತುಗಳು ಕೂಡ ಕೇಳಿಬರುತ್ತವೆ. ’ನ್ಯಾಶನಲಿಸಂ’ ಪರಿಕಲ್ಪನೆ ಕೂಡ ಭಾರತಕ್ಕೆ ಹೊಚ್ಚಹೊಸದೇ! ಆದರೆ, ಇಂದು ದೇಶ ಬಹುಸಂಖ್ಯಾತವಾದದ ನ್ಯಾಶನಲಿಸಂ ಅಮಲಿನಲ್ಲಿ ತೇಲುತ್ತಿದೆ. ಅದನ್ನು ಜನರ ಮನಸ್ಸಿನಲ್ಲಿ ಹೇಗೆ ಬಿತ್ತಲಾಯಿತು ಎಂಬ ಪ್ರಶ್ನೆಗಳನ್ನು ಕೇಳಿಕೊಂಡಾಗ ನಮಗೆ ಹೊಸ ಉತ್ತರಗಳು ಮಾರ್ಗಗಳು ದೊರಕಬಹುದು. ಭಾರತದಲ್ಲಿ ಬಹುತೇಕರು ಜಾತಿವ್ಯವಸ್ಥೆಯಿಂದಲೋ ಅಥವಾ ಕೆಲವೇ ಜನರಿಗೆ ಲಾಭ ತರುವ ಆರ್ಥಿಕ ವ್ಯವಸ್ಥೆಯಿಂದಲೋ ತತ್ತರಿಸಿಹೋಗಿರುವವರೇ. ಎಷ್ಟೋ ಸುಧಾರಣೆಗಳ ಬಳಿಕವೂ ಶೋಚನೀಯ ಪರಿಸ್ಥಿತಿಯಲ್ಲಿರುವ ಜನರ ಸಂಖ್ಯೆಯೇ ಹೆಚ್ಚು. ಶೋಷಿತರ ಮಧ್ಯೆ ಭ್ರಾತೃತ್ವ ಬೆಳೆಯಲು ಹೆಚ್ಚಿನ ಅವಕಾಶವಿದೆ ಎಂಬುದು ಕೂಡ ಒಂದು ಮಟ್ಟಕ್ಕೆ ನಿಜ. ಆದರೆ ಇಂದು ಎಷ್ಟೋ ಜನ ತಾವೇ ಶೋಷಿತರಾಗಿದ್ದರೂ ತಮಗಿಂತ ಶೋಚನೀಯ ಪರಿಸ್ಥಿತಿಯಲ್ಲಿರುವರನ್ನು ಶೋಷಿಸುವ ಪರಿಪಾಠವನ್ನು ಬೆಳೆಸಿಕೊಂಡಿದ್ದರ ಪರಿಣಾಮ ತಮಗಾದ ಶೋಷಣೆಯ ಅರಿವು ಅವರಿಗಿಲ್ಲವಾಯಿತು. ಇಂದು ಆ ಎಲ್ಲ ಬಗೆಯ ಶೋಷಣೆಯ ಕಥೆಗಳನ್ನು ಮತ್ತೆ ಹೇಳಬೇಕಿದೆ. ಅದರ ಜೊತೆಗೆ, ಶೋಷಣೆಯ ವ್ಯವಸ್ಥೆಯಲ್ಲಿಯೂ, ನಿಧಾನಕ್ಕೆ ಸುಧಾರಿಸಿಕೊಂಡು ಕಟ್ಟಿಕೊಳ್ಳ ಪ್ರಯತ್ನಿಸುತ್ತಿದ್ದ ಸಾಮರಸ್ಯದ, ಕೂಡು ಸಂಸ್ಕೃತಿಯ ಕಥೆಗಳನ್ನು ಮರು ಶೋಧಿಸಿ ಮತ್ತೆಮತ್ತೆ ಹೇಳಬೇಕಿದೆ.
ಜಗತ್ತಿನಲ್ಲಿ ದ್ವೇಷ ಸಮಷ್ಠಿಯಾಗಿ ಒಳ್ಳೆಯದನ್ನು ಮಾಡಿರುವ ಉದಾಹರಣೆ ಎಲ್ಲೂ ಇಲ್ಲ. ದ್ವೇಷ ರಾಜಕಾರಣಕ್ಕೆ ಮರುಳಾಗಿರುವವರಿಗೆ ಕೂಡ ಅದರ ಅಪಾಯವನ್ನು ಮನಗಾಣಿಸುವ ಸವಾಲು ಇಂದು ಈ ದೇಶದ-ನಾಡಿದ ಸಾಮರಸ್ಯದ ಬಗ್ಗೆ ಚಿಂತಿಸುವ ಎಲ್ಲರ ಮುಂದಿದೆ. ಜಾತ್ರೆಗಳಲ್ಲಿ ಮೊದಲು ಇದ್ದಂತಹ ಬಾಂಧವ್ಯದ ಭಾಗವಹಿಸುವಿಕೆಯನ್ನು, ಕೂಡು ಬಾಳ್ವೆಯ ಸಾಮಾನ್ಯ ವಿವೇಕವನ್ನು ಸಂಘ ಪರಿವಾರದವರು ನಾಶಮಾಡದಂತೆ ತಡೆದು ರಕ್ಷಿಸುವುದಾಗಲೀ, ದ್ವೇಷದ ಅಜೆಂಡಾವನ್ನು ಮನೆಮನೆಗೆ ತಲುಪಿಸುವ ಪ್ರೊಪೊಗಾಂಡಾವನ್ನು ಸೋಲಿಸುವುದನ್ನಾಗಲೀ ನಾವೆಲ್ಲ ಇನ್ನಷ್ಟು ತೀವ್ರವಾಗಿ ಸೆಣೆಸಿ ಸೋಲಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ವಿಷಮ ಹಂತಕ್ಕೆ ತಲುಪಿರುವ ಈ ಕರಾಳ ದಿನಗಳಲ್ಲಿ ಸಾಮರಸ್ಯದ ಪದಗಳನ್ನು ಹೆಚ್ಚು ಹಾಡಬೇಕಿದೆ. ಆ ಮೂಲಕ ಭ್ರಾತೃತ್ವವನ್ನು ಬೆಳೆಸುವ, ಸಮಾಜದಲ್ಲಿ ಅದನ್ನು ಅಳವಡಿಸಿಕೊಳ್ಳಲು ಅನುವಾಗುವಂತಹ ಕಥೆಗಳನ್ನು ವೈರಲ್ ಮಾಡುವ ಕೆಲಸ ತುರ್ತಾಗಿ ಆಗಬೇಕಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿ: ಹುಸಿ ಕಾಳಜಿಯ, ಪಕ್ಷಪಾತ ಧೋರಣೆಯ, ದ್ವೇಷದ ಅಜೆಂಡಾವುಳ್ಳ ’ದ ಕಾಶ್ಮೀರ್ ಫೈಲ್ಸ್’


