Homeಅಂಕಣಗಳುಇಸ್ರೇಲ್ ನಡೆಸುತ್ತಿರುವ ಮಾರಣಹೋಮದ ಮಧ್ಯೆ ಭಾರತೀಯ ಮಾಧ್ಯಮಗಳ ಬರ್ಬರತೆ

ಇಸ್ರೇಲ್ ನಡೆಸುತ್ತಿರುವ ಮಾರಣಹೋಮದ ಮಧ್ಯೆ ಭಾರತೀಯ ಮಾಧ್ಯಮಗಳ ಬರ್ಬರತೆ

- Advertisement -
- Advertisement -

(ಇದು ನ್ಯಾಯಪಥ ಅಕ್ಟೋಬರ್ 15-30 ಸಂಚಿಕೆಯಲ್ಲಿ ಪ್ರಕಟವಾಗಿದ್ದ ಬರಹ)

ಈ ಬರಹದ ಶೀರ್ಷಿಕೆಯನ್ನು ಮೊದಲು ’ಮಾಧ್ಯಮಗಳ ಕೋತಿ ಚೇಷ್ಟೆ’ ಎಂದು ಕರೆದಿದ್ದೆ; ಇಂದು ಗಾಜಾ ಪಟ್ಟಿಯಲ್ಲಿ ಪ್ಯಾಲೆಸ್ತೀನಿಯನ್ನರ ಮೇಲೆ ಇಸ್ರೇಲ್ ನಡೆಸಿರುವ ಆಕ್ರಮಣ, ದಾಳಿ ಮತ್ತು ಮಾರಣಹೋಮದ ಸಮಯದಲ್ಲಿ, ಕೋತಿ ಚೇಷ್ಟೆ ಎಂಬ ಪದಗುಚ್ಛ ಭಾರತದ ಮುಖ್ಯವಾಹಿನಿ ಮಾಧ್ಯಮಗಳು ನಡೆಸುತ್ತಿರುವ ಪ್ರಹಸನವನ್ನು ವಿವರಿಸಲು ಬಹಳ ಸಾಧುವಾಯಿತೆನ್ನಿಸಿತು. ಅದೂಅಲ್ಲದೆ ಕೋತಿ ಚೇಷ್ಟೆ ಯಾವುದೋ ದುರುದ್ದೇಶದಿಂದ ಕೂಡಿರುವಂಥದ್ದಲ್ಲ; ಆದರೆ ಈ ಮಾಧ್ಯಮಗಳು ವರದಿಗಾರಿಕೆಯ ಹೆಸರಿನಲ್ಲಿ ಯುದ್ಧಭೂಮಿಯಲ್ಲಿ ಮಾಡುತ್ತಿರುವ ಚೇಷ್ಟೆಗೆ, ಯುದ್ಧೋನ್ಮಾದ ಇಸ್ರೇಲ್‌ಅನ್ನು ಮೀರಿಸುವ ಕ್ರೌರ್ಯ ಸೇರಿರುವುದರಿಂದ ಕೋತಿಗಳನ್ನು ಅವಮಾನಿಸುವುದು ಸರಿಯೂ ಅಲ್ಲ.

ಉದಾಹರಣೆಗೆ ಕನ್ನಡದ ಮುಖ್ಯವಾಹಿನಿ ಮಾಧ್ಯಮವಾದ ಸುವರ್ಣ ನ್ಯೂಸ್‌ನಿಂದ ಇಸ್ರೇಲ್-ಗಾಜಾ ಸಂಘರ್ಷವನ್ನು ವರದಿ ಮಾಡಲು ಹೋಗಿರುವ ಅಜಿತ್ ಹನಮಕ್ಕನವರ್ ಎಂಬ ವ್ಯಕ್ತಿಯ ಕೆಲವು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದವು. ಇಸ್ರೇಲ್ ದೇಶದ ದಾಳಿಯನ್ನು ವೈಭವೀಕರಿಸುತ್ತಾ, ಅವರ ರಕ್ಷಣಾ ತಂತ್ರದ ಬಗ್ಗೆ ಕೊಚ್ಚಿಕೊಳ್ಳುತ್ತಾ ಇದ್ದ ವಿಡಿಯೋಗಳು ಅವು; ಇಸ್ರೇಲಿ ಪ್ರಭುತ್ವ ಇಂತಹವರನ್ನು ತನ್ನ ಮೌಥ್‌ಪೀಸ್ ಆಗಲೆಂದು ಕರೆಸಿಕೊಂಡಿದೆಯೇನೋ ಎನ್ನುವ ಮಟ್ಟಕ್ಕೆ ಆತ ಮಾತನಾಡುತ್ತಿದ್ದರು. ಅಂದಹಾಗೆ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಸಶಸ್ತ್ರ ಗುಂಪು ರಾಕೆಟ್ ದಾಳಿ ನಡೆಸಿ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದ ಮೇಲೆ, ಗಾಜಾ ಪಟ್ಟಿಯ ಮೇಲೆ ಯುದ್ಧ ಹೂಡಿರುವ ಇಸ್ರೇಲ್ ಈ ಲೇಖನ ಬರೆಯುವ ಹೊತ್ತಿಗೆ ಮೂರು ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನಿಗಳನ್ನು ಕೊಂದಿದೆ. ಅದರಲ್ಲಿ ಬಹುಪಾಲು ನಾಗರಿಕರಾಗಿದ್ದು ಸುಮಾರು 1000 ಮಕ್ಕಳು ಮತ್ತು 1000 ಮಹಿಳೆಯರು ಹತ್ಯೆಗೀಡಾಗಿದ್ದಾರೆ ಎಂದು ಅಂದಾಜಿಸಲಾಗಿದೆ. (ಸಾವಿನ ಸಂಖ್ಯೆ ಈಗ 13,000 ದಾಟಿದೆ) ವಾಸ್ತವ ಚಿತ್ರಣ ಹೀಗಿರುವಾಗ, ಸುವರ್ಣ ಸುದ್ದಿವಾಹಿನಿಗೆ ಏಕಪಕ್ಷೀಯವಾಗಿ ಇಸ್ರೇಲ್ ದಾಳಿಯನ್ನು ವೈಭವೀಕರಿಸುವ ದರ್ದು ಎಂಥದ್ದು? ಪ್ಯಾಲೆಸ್ತೀನ್-ಇಸ್ರೇಲ್ ಸಂಘರ್ಷದ ಸಾಂದರ್ಭಿಕ ಹಿನ್ನೆಲೆಯನ್ನು, ಇಸ್ರೇಲ್‌ನ ವಸಾಹತೀಕರಣದ ಹಿಂಸೆಯ ಇತಿಹಾಸವನ್ನು ಮರೆಮಾಚಿ ವರದಿ ಮಾಡುವುದರಿಂದ ಇಂತಹ ಬಲಪಂಥೀಯ ಸುದ್ದಿ ಮಾಧ್ಯಮಗಳಿಗೆ ಲಾಭವೇನು? ಭಾರತದಲ್ಲಾದರೂ ಬಲಪಂಥೀಯ ಪಕ್ಷಪಾತದ ವರದಿಯಿಂದ, ಒಕ್ಕೂಟ ಸರ್ಕಾರದ ಕೃಪಾಕಟಾಕ್ಷಕ್ಕೆ ಒಳಗಾಗುವ ಮತ್ತು ಸರ್ವಾಧಿಕಾರಿ ಧೋರಣೆಯ ಪ್ರಭುತ್ವದ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳುವ ಆಮಿಷವನ್ನು ಅರ್ಥಮಾಡಿಕೊಳ್ಳಬಹುದು, ಆದರೆ, ಬೇರೆ ದೇಶಗಳಲ್ಲಿಯೂ ಶೋಷಕ ಪ್ರಭುತ್ವಗಳ ಪಕ್ಷಪಾತದ ವರದಿ ಮಾಡುವುದಕ್ಕೆ ಕಾರಣಗಳೇನು? ಇಂತಹ ಆಮಿಷಕ್ಕೆ ಇರಬಹುದಾದ ಸಂಭಾವ್ಯ ಕಾರಣಗಳ ಬಗ್ಗೆ ಚರ್ಚಿಸುವುದಕ್ಕೂ ಮುಂಚೆ, ಅಜಿತ್ ಹನಮಕ್ಕನವರ್ ತಾನೆಂದು ಹೇಳಿಕೊಂಡಿರುವ ಫೇಸ್‌ಬುಕ್ ಖಾತೆ, ತನ್ನ ಇಸ್ರೇಲ್ ನೆಲದ ಯುದ್ಧ ವರದಿಗಾರಿಕೆಯ ಬಗ್ಗೆ ಹಂಚಿಕೊಂಡ ಈ ಎರಡು ಪೋಸ್ಟ್‌ಗಳನ್ನು ಗಮನಿಸಿದರೆ, ಮುಖ್ಯವಾಹಿನಿ ಪತ್ರಿಕೋದ್ಯಮ ಕುಸಿದಿರುವ ಪಾತಾಳದ ಅರಿವು ಆಗದೆ ಇರದು.

ಕೈಯ್ಯಲ್ಲಿ ಬುಲೆಟ್‌ಗಳನ್ನು ಆಯ್ದುಕೊಂಡು ಪ್ರಸನ್ನಮುಖಿಯಾಗಿ ಅವುಗಳೊಂದಿಗೆ ಪೋಸ್ ಕೊಟ್ಟಿರುವ ಫೋಟೋ ಹಂಚಿಕೊಂಡಿರುವ ಅಜಿತ್ “ಭೇಟಿಕೊಟ್ಟ ಜಾಗದ ನೆನಪಿಗೆ souvenir ತರುತ್ತಾರೆ. ಈ ರಣರಂಗದಿಂದ ಏನು ತರಲಿ..?” ಎಂದು ಬರೆದುಕೊಳ್ಳುತ್ತಾರೆ! ಮತ್ತೊಂದು ಪೋಸ್ಟ್‌ನಲ್ಲಿ ಇಸ್ರೇಲಿ ಮಹಿಳಾ ಸೈನಿಕೆಯೊಂದಿಗೆ ಪೋಸ್ ಕೊಡುತ್ತಾ, “ಪೆಪ್ಸಿ – ಕೋಕಾಕೋಲಾ ಕುಡಿಯದೇ ಹನ್ನೆರಡು ವರ್ಷಗಳ ಮೇಲಾಗಿತ್ತು. ಈ ಸುಂದರಿ ಅಷ್ಟು ದೂರದಿಂದ ನಡಕೊಂಡು ಬಂದು ಪ್ರೀತಿಯಿಂದ ಕೊಟ್ಟಾಗ ಬೇಡ ಅನ್ನಲಾಗಲಿಲ್ಲ. ಒಂದು ಮಾರಣಹೋಮದಿಂದ ಇನ್ನೂ ಸುಧಾರಿಸಿಕೊಳ್ಳದ Sderot ಪಟ್ಟಣವನ್ನ ಕಾಯುತ್ತಿರುವ ಇಸ್ರೇಲಿ ಯೋಧೆ” ಎಂದು ಹೇಳಿಕೊಂಡಿದ್ದಾರೆ. ಇವರು ಸವೆನಿಯರ್ ಬಗ್ಗೆ ಫೇಸ್‌ಬುಕ್ ಪೋಸ್ಟ್ ಹಾಕುವ ದಿನ, ಅಂದರೆ ಅಕ್ಟೋಬರ್ 16ರಂದು ಗಾಜಾ ಪಟ್ಟಿಯ ಅಲ್-ಅಹ್ಲಿ ಅರಬ್ ಆಸ್ಪತ್ರೆಯ ಮೇಲೆ ನಡೆದ ರಾಕೆಟ್-ಕ್ಷಿಪಣಿ ದಾಳಿಯಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದು ವರದಿಯಾಗಿತ್ತು. ಈ ಮಾರಣಹೋಮವನ್ನು ಭಾರತ ಸರ್ಕಾರವೂ ಸೇರಿದಂತೆ ಜಗತ್ತಿನಾದ್ಯಂತ ಬಹುತೇಕ ಎಲ್ಲ ಮುಖಂಡರು ಖಂಡಿಸಿದ್ದರು. ಇದು ಹಮಾಸ್‌ನವರ ರಾಕೆಟ್ ತಾಂತ್ರಿಕ ಸಮಸ್ಯೆಯಿಂದಾಗಿ ಗುರಿತಪ್ಪಿ ಆದ ದುರಂತ ಎಂದು ಇಸ್ರೇಲ್ ಮಿಲಿಟರಿ ವಾದಿಸಿತ್ತು. ತಮ್ಮ ಮತ್ತು ಅಮೆರಿಕದ ಅತಿದೊಡ್ಡ ಪ್ರಪೊಗಾಂಡ ಜಾಲದ ಮೂಲಕ ’ಮಿಸ್‌ಇನ್ಫರ್ಮೇಶನ್’ ಹರಡುವ ಮತ್ತು ತಮ್ಮ ನಡೆಗಳನ್ನು ಸಮರ್ಥಿಸಿಕೊಳ್ಳಲು ತನ್ನ ಪರವಾದ ಸುದ್ದಿಗಳನ್ನು ಉತ್ಪಾದಿಸಿ ಪ್ರಸಾರ ಮಾಡುವುದರಲ್ಲಿ ನಿಷ್ಣಾತನಾಗಿರುವ ಇಸ್ರೇಲ್, ಅಲ್-ಅಹ್ಲಿ ಅರಬ್ ಆಸ್ಪತ್ರೆಯ ಮೇಲಿನ ದಾಳಿಯ ಬಗ್ಗೆ ನೀಡಿದ ಮಾಹಿತಿಯ ಬಗ್ಗೆ ಹಲವು ಸ್ವತಂತ್ರ ಮಾಧ್ಯಮಗಳು ಮತ್ತು ನಿಷ್ಪಕ್ಷಪಾತಿಗಳು ಎಂದು ತೋರಿಸಿಕೊಳ್ಳಲು ಹವಣಿಸುವ ಕೆಲವು ಪಶ್ಚಿಮದ ಮಾಧ್ಯಮಗಳು ತನಿಖೆ ನಡೆಸಲು ಮುಂದಾದರೆ, ಅಜಿತ್ ಹನಮಕ್ಕನವರ್, ವಾರ್ ಕ್ರೈಮ್‌ಗಳಿಗೂ ಕಡಿಮೆಯೇನಿಲ್ಲ ಎಂಬಂತೆ ಇಸ್ರೇಲ್ ನಡೆಸುತ್ತಿದ್ದ ಅಮಾನವೀಯ ದಾಳಿಗಳನ್ನು ಸಂಭ್ರಮದ ರೀತಿಯಲ್ಲಿ ವರದಿ ಮಾಡುವಲ್ಲಿ ನಿರತರಾಗಿದ್ದರು!

ಇದನ್ನೂ ಓದಿ: ಗಾಜಾದಿಂದ ತೆರಳದಿದ್ದರೆ ಭಯೋತ್ಪಾದಕರೆಂದು ಪರಿಗಣಿಸಲಾಗುವುದು: ಪ್ಯಾಲೆಸ್ತೀನಿಯರಿಗೆ ಇಸ್ರೇಲ್ ಎಚ್ಚರಿಕೆ

ಭಾರತದ ನ್ಯಾಷನಲಿಸಂ ಜೊತೆಗೆ ಜಿಯೋನಿಸ್ಟ್‌ಗಳ (ಪ್ಯಾಲೆಸ್ತೀನ್‌ನಲ್ಲಿ ಯಹೂದಿಗಳಗೆ ಸ್ವಂತ ನೆಲೆಯನ್ನು ಸೃಷ್ಟಿಸಬೇಕೆಂದು ನಡೆದ ಹೋರಾಟ) ಭಾರವನ್ನು ಕೂಡ ಇಂತಹ ಬಲಪಂಥೀಯ ಧೋರಣೆಯ ಪತ್ರಕರ್ತರು ಯಾಕೆ ಹೊರುತ್ತಿದ್ದಾರೆ? ಇದು ಭಾರತದಲ್ಲಿ ತಾವು ಪ್ರತಿನಿಧಿಸುವ ಮುಸ್ಲಿಂ ದ್ವೇಷದ ಮುಂದುವರಿಕೆಯೇ? ಅಥವಾ ಸರ್ವಾಧಿಕಾರಿ ಧೋರಣೆಯ ನಾಯಕರುಗಳ ಬಗ್ಗೆ ಇರುವ ತಮ್ಮ ಅಪಾರ ಒಲವು ಈ ರೀತಿ ಮಾಡಲು ಅವರನ್ನು ಪ್ರೇರೇಪಿಸುತ್ತಿದೆಯೇ? (ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಂತಹ ಒಬ್ಬ ಸರ್ವಾಧಿಕಾರಿ ಧೋರಣೆಯ ಮುಖಂಡ ಎಂಬುದು ನಿರ್ವಿವಾದವಾಗಿ ದಾಖಲಾಗಿರುವ ಸಂಗತಿ) ಇನ್ನೂ ಒಂದು ಮುಖ್ಯ ಕಾರಣ, ಕಾರ್ಪೊರೆಟೈಸ್ ಆಗಿರುವ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಇಂದು ಜಾಗತಿಕವಾಗಿ ಹಬ್ಬಿರುವ ತಮ್ಮ ಉದ್ದಿಮೆಗಳ ಸಂಬಂಧದ ಬೆಸುಗೆಯ ಕಾರಣಕ್ಕೆ ಶೋಷಕರನ್ನು ಸಮರ್ಥಿಸಿಕೊಳ್ಳುವುದು ಅತ್ಯಗತ್ಯವಾಗಿದೆಯೇ? ಭಾರತದ ಕೆಲವು ಮುಖ್ಯವಾಹಿನಿ ಮಾಧ್ಯಮಗಳು ಇಸ್ರೇಲಿ ನೆಲದಿಂದ ಮಾಡುತ್ತಿರುವ ವರದಿಗಳನ್ನು ಗಮನಿಸಿದರೆ ಇವೆಲ್ಲದರ ಒಟ್ಟು ಮೊತ್ತ ಈ ವರದಿಗಳ ಧೋರಣೆಯಾಗಿದೆ ಎಂಬುದು ಸ್ಪಷ್ಟ.

ಇದು ಭಾರತದ ಮಾಧ್ಯಮಗಳದ್ದಷ್ಟೇ ಸಮಸ್ಯೆಯಲ್ಲ!

ಇದು ಕೇವಲ ಭಾರತೀಯ ಮಾಧ್ಯಮಗಳ ಧೋರಣೆ ಮಾತ್ರವಾಗಿರದೆ, ಹಲವು ದೇಶಗಳಿಗೆ ಹೋಲಿಸಿಗಾಗ, ಪ್ರಭುತ್ವದಿಂದ ಹೆಚ್ಚು ಸ್ವತಂತ್ರವಾಗಿರುವ ಅಮೆರಿಕದ ಮಾಧ್ಯಮಗಳನ್ನು ಸೇರಿಸಿದಂತೆ ಪಶ್ಚಿಮದ ಮಾಧ್ಯಮ ಸಂಸ್ಥೆಗಳು ಕೂಡ ಇಸ್ರೇಲಿ ಪಕ್ಷಪಾತಿಗಳಾಗಿ ನಿಲ್ಲುವುದು ಸಾಮಾನ್ಯವಾಗಿದೆ. ಇಲ್ಲಿಯವರೆಗೆ ಪ್ಯಾಲೆಸ್ತೀನಿಯನ್ನರ ಮೇಲೆ ಇಸ್ರೇಲ್ ನಡೆಸಿರುವ ಮಾರಣಹೋಮಗಳ ಹಿನ್ನೆಲೆಯಲ್ಲಿ ಸದರಿ ಸಂಘರ್ಷವನ್ನು ಈ ಮಾಧ್ಯಮಗಳು ಚರ್ಚಿಸುವ ಗೋಜಿಗೆ ಹೋಗುವುದೇ ಇಲ್ಲ. ವರ್ಷಗಳಿಂದ ಗಾಜಾಪಟ್ಟಿಯನ್ನು ಸುತ್ತುವರಿದು, ನಾಗರಿಕರ ಚಲನವಲನವನ್ನು ನಿಯಂತ್ರಿಸಿ, ಮೂಲ ಅಗತ್ಯಗಳಿಂದ ವಂಚಿಸಿ ಕತ್ತುಹಿಸುಕುತ್ತಿರುವ ವಾಸ್ತವವನ್ನು ಈ ಮಾಧ್ಯಮಗಳು ಮರೆಮಾಚುತ್ತಿವೆ. 2006ರಲ್ಲಿ ಹಮಾಸ್ ರಾಜಕೀಯವಾಗಿ ಪಾಲ್ಗೊಂಡು ಪ್ಯಾಲೆಸ್ತೀನ್ ಚುನಾವಣೆಯನ್ನು ಗೆದ್ದಾಗ, ಇಸ್ರೇಲ್-ಯುಎಸ್ ಮಧ್ಯಪ್ರವೇಶಿಸಿ ಹಮಾಸ್ ವಿರುದ್ಧ ಅಪಪ್ರಚಾರ ಮಾಡಲು ತೊಡಗಿದಾಗ ಈ ಮಾಧ್ಯಮಗಳು ಅದಕ್ಕೆ ತುತ್ತೂರಿಯಾಗುತ್ತವೆ. ಸದರಿ ಸಂಘರ್ಷದಲ್ಲಿ ಇಸ್ರೇಲ್, ಗಾಜಾ ಪಟ್ಟಿಗೆ ನೀರು, ಆಹಾರ ಮತ್ತು ವಿದ್ಯುತ್‌ನಂತಹ ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸುತ್ತಿರುವ ಸಮಯದಲ್ಲಿ, ’ಇಡೀ ವಿಶ್ವ ಮಾನವೀಯತೆಯನ್ನು ಕಳೆದುಕೊಳ್ಳುತ್ತಿದೆ’ ಎಂದು ಯುಎನ್‌ಆರ್‌ಡಬ್ಯುಎ (The United Nations Relief and Works Agency for Palestine Refugees in the Near East) ಹೇಳಿದಾಗಲೂ ಅದು ನಾಮಕಾವಸ್ಥೆ ಸುದ್ದಿಯಾಗಿ ಕಾಣೆಯಾಗುತ್ತದೆ. ಗಾಜಾದಲ್ಲಿ ನಡೆಯುತ್ತಿರುವುದು ’ಮಾರಣಹೋಮ’ ಎಂದು ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್ ಸಂಸ್ಥೆ ಹೇಳಿದಾಗಲೂ ಅದಕ್ಕೆ ಹೆಚ್ಚಿನ ಮಹತ್ವ ಸಿಗುವುದಿಲ್ಲ. ’ದಕ್ಷಿಣಕ್ಕೆ ತೆರಳಿರಿ; ಇಲ್ಲವೆಂದರೆ ನಿಮ್ಮನ್ನು ಭಯೋತ್ಪಾದಕರ ಸಂಗಾತಿಗಳು ಎಂದು ನಿರ್ಧರಿಸಬೇಕಾಗುತ್ತದೆ’ ಎಂದು ಅವರದ್ದೇ ಜಾಗದಿಂದ ಸ್ಥಳಾಂತರಗೊಳ್ಳಲು ಗಾಜಾದ ಪ್ಯಾಲೆಸ್ತೀನ್ ನಾಗರಿಕರಿಗೆ ಇಸ್ರೇಲ್ ಮಿಲಿಟರಿ ಬೆದರಿಕೆ ಹಾಕುತ್ತಿದ್ದರೂ, ಈ ಶೋಷಕ ಪ್ರಭುತ್ವದ ವಿರುದ್ಧ ತಳೆಯಬೇಕಾದ ಆಕ್ರೋಶ ಈ ಮಾಧ್ಯಮಗಳಲ್ಲಿ ಕಾಣಿಸುವುದಿಲ್ಲ. ಇನ್ನು ಹಲವು ವರ್ಷಗಳಿಂದ ಇಸ್ರೇಲ್‌ನಲ್ಲಿ ಸಿಲುಕಿರುವ ಪ್ಯಾಲೆಸ್ತೀನಿಯನ್ನರ ಮತದಾನದ ಹಕ್ಕನ್ನು ಕಸಿದುಕೊಂಡಿರುವುದರಿಂದ ಹಿಡಿದು, ಹೇಗೆ ಅವರ ಸ್ವಾತಂತ್ರ್ಯಹರಣ ಮಾಡಿ ಎರಡನೇ ದರ್ಜೆಯ ನಾಗರಿಕರನ್ನಾಗಿಸಲಾಗಿದೆ ಎಂಬುದಂತೂ ಈ ಮಾಧ್ಯಮಗಳಲ್ಲಿ ರಿಫ್ಲೆಕ್ಟ್ ಆಗಲೇ ಇಲ್ಲ. ಇಂತಹ ಮಾಧ್ಯಮಗಳು ಈಗಿನ ಸಂಘರ್ಷವನ್ನು ಏಕಪಕ್ಷೀಯವಾಗಿ ಕಟ್ಟಿಕೊಡುತ್ತಿರುವುದರಲ್ಲಿ ಅಚ್ಚರಿಯೇನೂ ಇಲ್ಲವಾದರೂ, ಇದು ಮಾನವೀಯ ಬಿಕ್ಕಟ್ಟಿನಲ್ಲಿ ಮಾಧ್ಯಮಗಳ ಪಾತ್ರವನ್ನು ಸ್ಪಷ್ಟವಾಗಿ ಗುರುತಿಸುತ್ತದೆ.

ಅಮೆರಿಕದ ಸಂದರ್ಭದಲ್ಲಿ ಈ ಮಾಧ್ಯಮಗಳು ಹೀಗೇಕೆ ಪಕ್ಷಪಾತಿಯಾಗಿ ವರ್ತಿಸುತ್ತವೆ ಎಂದು ಚಿಂತಕ ನೋಮ್ ಚಾಮ್ಸ್ಕಿ ಒಂದು ಚರ್ಚೆಯಲ್ಲಿ ಹೀಗೆ ಹೇಳುತ್ತಾರೆ: “ಅವುಗಳು (ಮಾಧ್ಯಮಗಳು) ಅಮೆರಿಕ ಸರ್ಕಾರವನ್ನು ನಡೆಸುವ ವ್ಯವಸ್ಥೆಯ ಒಂದು ಭಾಗ. ಇಂಡೋನೇಷಿಯಾ ಸಂಪನ್ಮೂಲಗಳ ಮುಖ್ಯ ಮೂಲವಾಗಿದ್ದು, ನಾವುಗಳು ಅವರನ್ನು ಶೋಷಿಸುತ್ತೇವೆ, ಮತ್ತು ಬಲಶಾಲಿ ಶಕ್ತಿಯಾಗಿ ಆ ಭಾಗದ ಮೇಲೆ ಅಧಿಪತ್ಯ ಸಾಧಿಸುತ್ತೇವೆ ಎಂಬ ಹಿತಾಸಕ್ತಿಯನ್ನು ಅವುಗಳು ಹಂಚಿಕೊಳ್ಳುತ್ತವೆ. ವಾಷಿಂಗ್ಟನ್ ಹೊಂದಿರುವ ಹಿತಾಸಕ್ತಿಯನ್ನೇ ಅವು ಹೊಂದಿವೆ. ಆದುದರಿಂದ ಅವುಗಳು ಏಕೆ ಸತ್ಯವನ್ನು ಬಯಲಿಗೆಳೆಯಬೇಕು? ನಿರ್ದಿಷ್ಟವಾಗಿ, ನೂರಾರು-ಸಾವಿರಾರು ಜನರ ಸಾವಿಗೆ ಕಾರಣವಾಗಿರುವ ಅವರ ಜಂಟಿ ಜವಾಬ್ದಾರಿಯ ವಾಸ್ತವವನ್ನು ಅವರೇಕೆ ಬಹಿರಂಗಪಡಿಸಿಕೊಳ್ಳಬೇಕು? ಇದೇ ಕಾರಣಕ್ಕಾಗಿ ಅವರು ಟರ್ಕಿಯ ಬಗ್ಗೆ ಕಳೆದೆರಡು ವರ್ಷಗಳಿಂದ ವರದಿ ಮಾಡಲಿಲ್ಲ. ಅದು ಅವರ ಹಿತಾಸಕ್ತಿಯ ವಿಷಯವಾಗಿರಲಿಲ್ಲ.

“ಮತ್ತೊಂದು ಸರಳ ಉದಾಹರಣೆ ಕೊಡುತ್ತೀನಿ. (ಇಸ್ರೇಲಿ) ಆಕ್ರಮಿತ ಪ್ರದೇಶಗಳಲ್ಲಿ ಸದರಿ ಇಂತಿಫಾದ (ಕಲ್ಲು ಎಸೆಯುವ ಮೂಲಕ ನಡೆದ ಪ್ರತಿಭಟನೆಗಳು) ಸೆಪ್ಟಂಬರ್ 2000, 29ರಂದು ಪ್ರಾರಂಭವಾಯಿತು. ಎರಡು ದಿನಗಳ ನಂತರ- ಅಕ್ಟೋಬರ್ 1ರಂದು ಇಸ್ರೇಲ್ ಅಮೆರಿಕದ ಹೆಲಿಕಾಪ್ಟರ್‌ಗಳನ್ನು ಬಳಸಲು ಪ್ರಾರಂಭಿಸಿತು- ಇಸ್ರೇಲ್ ಬಳಿ ತನ್ನದೇ ಆದ ಹೆಲಿಕ್ಯಾಪ್ಟರ್‌ಗಳಿಲ್ಲ- ನಾಗರಿಕ ಸಮುಚ್ಚಯಗಳನ್ನು, ಅಪಾರ್ಟ್‌ಮೆಂಟ್‌ಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡಿತು, ಹತ್ತಾರು ಜನರನ್ನು ಕೊಂದು ಗಾಯಗೊಳಿಸಲಾಯಿತು. ಇದು ಎರಡು ದಿನಗಳ ಕಾಲ ಮುಂದುವರಿಯಿತು. ಪ್ಯಾಲೆಸ್ತೀನ್‌ನಿಂದ ಯಾವುದೇ ಬೆಂಕಿ ಹರಡಲಿಲ್ಲ, ಮಕ್ಕಳಿಂದ ಕಲ್ಲು ತೂರಾಟ ಮಾತ್ರ ಇತ್ತು. ಇದಾದ ಎರಡು ದಿನದ ನಂತರ, ದಶಕದಲ್ಲೇ ಅತಿ ದೊಡ್ಡ ಡೀಲ್ ಒಂದರಲ್ಲಿ ಇಸ್ರೇಲ್‌ಗೆ ಮಿಲಿಟರಿ ಹೆಲಿಕಾಪ್ಟರ್‌ಗಳನ್ನು ಕಳುಹಿಸಲು ಕ್ಲಿಂಟನ್ ಮುಂದಾದರು. ಇಲ್ಲಿ ಮಾಧ್ಯಮ ಅದನ್ನು ಪ್ರಕಟಿಸಲು ನಿರಾಕರಿಸಿತು. ಇಲ್ಲಿಯವರೆಗೂ ಆದರ ಬಗ್ಗೆ ಒಂದೂ ವರದಿಯಿಲ್ಲ.

“ಅದು ಸಂಪಾದಕರುಗಳ ನಿರ್ಧಾರವಾಗಿತ್ತು. ನನಗೆ ಬೋಸ್ಟನ್ ಗ್ಲೋಬ್‌ನ ಕೆಲವರು ಸಂಪಾದಕರ ಪರಿಚಯವಿತ್ತು. ನಾನು ಅಲ್ಲಿ 45 ವರ್ಷಗಳಿಂದ ಬದುಕುತ್ತಿದ್ದೇನೆ. ನಾನು ಕೂಡ ಅವರ ಗುಂಪನ್ನು ಸೇರಿಕೊಂಡು ಅವರ ಜತೆಗೆ ಮಾತಾಡಿದೆ; ಆದರೆ ಅವರು ಅದನ್ನು ತಾವು ಪ್ರಕಟಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಅಮೆರಿಕದ ಎಲ್ಲ ಇತರ ದಿನಪತ್ರಿಕೆಗಳು, ಅಕ್ಷರಶಃ ಎಲ್ಲವೂ ಅದೇ ನಿರ್ಧಾರ ತಳೆದರು. ಯಾರೋ ಇದರ ಬಗ್ಗೆ ಡೇಟಾಬೇಸ್ ಸಂಶೋಧನೆ ಮಾಡಿದರು, ಈ ದೇಶದಲ್ಲಿ ಈ ಘಟನೆಯ ಬಗ್ಗೆ ಇದ್ದ ಒಂದೇ ಒಂದು ಉಲ್ಲೇಖ, ನಾರ್ಥ್ ಕೆರೋಲಿನಾದ ರಲೀಗ್‌ನಿಂದ ಬರೆದ ಒಂದು ಪತ್ರದಲ್ಲಿತ್ತು.

“ಈಗ ಹೇಳಿ, ಈ ವರದಿಯನ್ನು ಪ್ರಕಟಿಸದಂತೆ ಸರ್ಕಾರ ಹೇಳಿತಾ? ಇಲ್ಲ. ಅವರು ಪ್ರಕಟಿಸಬೇಡಿ ಎಂದು ಹೇಳಿದ್ದರೆ, ಅದಕ್ಕೆ ಆಕ್ರೋಶದ ಪ್ರತಿಕ್ರಿಯೆಯಾಗಿಯಾದರೂ ಬಹುಶಃ ಆಗ ಅದನ್ನು ಪ್ರಕಟಿಸುತ್ತಿದ್ದವು. ಹೆಚ್ಚುಕಮ್ಮಿ ಅಮೆರಿಕ ತಮ್ಮ ಮಿಲಿಟರಿ ನೆಲೆಯಾಗಿ ಆಯ್ಕೆ ಮಾಡಿಕೊಂಡಿರುವ ಇಸ್ರೇಲ್- ನಾಗರಿಕರನ್ನು ಕೊಲೆಮಾಡಲು ಅಮೆರಿಕದ ಹೆಲಿಕ್ಯಾಪ್ಟರ್‌ಗಳನ್ನು ಬಳಸಿಕೊಂಡಾಗ, ನಾವು ಹೆಚ್ಚಿನ ಹೆಲಿಕಾಪ್ಟರ್‌ಗಳನ್ನು ಕಳುಹಿಸುತ್ತೇವೆ ಎಂಬ ಸುದ್ದಿಯನ್ನು ಸಾರ್ವಜನಿಕರಿಗೆ ಹೇಳುವುದು ತಮ್ಮ ಹಿತಾಸಕ್ತಿಗೆ ಹೊಂದಿಕೊಳ್ಳುವುದಿಲ್ಲ ಎಂಬುದು ಅವರಿಗೆ ಅರಿವಾಗಿತ್ತು. ಅದು ಸಂಪಾದಕೀಯ ಕಚೇರಿಯ ಹಿತಾಸಕ್ತಿಯಾಗಿರಲಿಲ್ಲ, ಅದಕ್ಕೆ ವರದಿ ಮಾಡಲಿಲ್ಲ.”

ಹೀಗೆ ಮಾರ್ಚ್ 22, 2002ರಂದು ನಡೆದ ಒಂದು ಮಾತುಕತೆಯಲ್ಲಿ ಅಮೆರಿಕದ ಮಾಧ್ಯಮಗಳು ಇಸ್ರೇಲ್-ಯುಎಸ್ ಉತ್ಪಾದಿಸಿದ ಈ ಸಂಘರ್ಷದಲ್ಲಿ ಹೇಗೆ ಭಾಗಿದಾರರಾಗಿದ್ದರು ಎಂಬುದನ್ನು ಚಾಮ್ಸ್ಕಿ ವಿವರಿಸುತ್ತಾ ಹೋಗುತ್ತಾರೆ. ಸದರಿ ಸಂಘರ್ಷದಲ್ಲಿಯೂ ಹೆಚ್ಚಿನ ಮುಖ್ಯವಾಹಿನಿ ಮಾಧ್ಯಮಗಳು ಇಂತಹ ದಗಲ್‌ಬಾಜಿ ಕೆಲಸವನ್ನೇ ಮಾಡುತ್ತಿರುವುದು ನಮ್ಮೆಲ್ಲರ ಕಣ್ಣಮುಂದೆ ಸ್ಪಷ್ಟವಾಗಿದೆ.

ಇಂತಹ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿಯೂ ಭಾರತೀಯ ಮೂಲದ ಜನರು, ತಮಗೆ ಸದರಿ ಪ್ರಭುತ್ವ ಕಟ್ಟಿಕೊಟ್ಟಿರುವ ’ಮುಸ್ಲಿಂ ಶತ್ರು’ ಕಲ್ಪನೆಯಿಂದ ಕಣ್ಕಟ್ಟಿಗೆ ಒಳಗಾಗಿ ಹಲವು ಹಂತಗಳಲ್ಲಿ ಅಪ್ರೆಸರ್ ಇಸ್ರೇಲ್ ಪ್ರಭುತ್ವವನ್ನು ಸಮರ್ಥಿಸಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ’ನೆತನ್ಯಾಹು ಆಗಲೇ ವೀಕ್ ಆಗಿದ್ದ; ಆತನ ವಿರುದ್ಧ ಇಸ್ರೇಲ್‌ನಲ್ಲಿ ಭಾರಿ ಪ್ರತಿಭಟನೆ ನಡೆದಿತ್ತು. ಈ ಹಮಾಸ್ ದಾಳಿ ಈಗ ಆ ಪ್ರತಿಭಟನೆಗಳನ್ನು ನಿಲ್ಲುವಂತೆ ಮಾಡಿ, ಇಸ್ರೇಲ್‌ನಲ್ಲಿ ಎಲ್ಲರೂ ಒಗ್ಗೂಡುವಂತೆ ಮಾಡಿದೆ’ ಎಂಬರ್ಥದಲ್ಲಿ ಹಮಾಸ್ ಮೇಲೆಯೇ ಎಲ್ಲ ಹೊಣೆಯನ್ನು ಹಾಕಿ ಪ್ರಗತಿಪರ ಧೋರಣೆಯ ಹಲವರು ಚರ್ಚಿಸುತ್ತಿದ್ದಾರೆ. ಈ ವಾದದಲ್ಲಿ ಕೂಡ ಇಸ್ರೇಲ್ ಇಲ್ಲಿಯವರೆಗೆ ನಡೆಸಿರುವ ಮಾರಣಹೋಮಗಳನ್ನು (ನೆತನ್ಯಾಹುಗೆ ಮುಂಚೆಯಿಂದಲೂ ಇದನ್ನು ನಡೆಸಿಕೊಂಡು ಬರಲಾಗುತ್ತಿದೆ) ಮರೆಮಾಚುವ ಪ್ರಯತ್ನ ಇದೆ. ಅಲ್ಲದೆ, ಅಮೆರಿಕದ ಉದಾಹರಣೆಯನ್ನೇ ನೋಡುವುದಾದರೆ, ಅಲ್ಲಿನ ಅಧ್ಯಕ್ಷ ಡೆಮಾಕ್ರಟ್ ಪಕ್ಷದವನಾಗಿರಲಿ ಅಥವಾ ರಿಪಬ್ಲಿಕನ್ ಪಕ್ಷದವನಾಗಿರಲಿ, ಬುಷ್ ಇಂದ ಹಿಡಿದು ಒಬಾಮ ಮತ್ತು ಬೈಡನ್‌ವರೆಗೆ ಜಿಯೋನಿಸ್ಟ್ ಬೆಂಬಲಿಗರಾಗಿ ಪ್ಯಾಲೆಸ್ತೀನಿಯನ್ನರ ಶೋಷಣೆಯಲ್ಲಿ, ಅವರ ವಿರುದ್ಧದ ಹಿಂಸೆಯಲ್ಲಿ ಭಾಗಿಯಾಗಿದ್ದಾರೆ. ಹಮಾಸ್ ದಾಳಿಯನ್ನು ಖಂಡಿಸುವುದು ಸರಿ, ಆದರೆ ಅದು ಇಸ್ರೇಲ್ ಮತ್ತು ಅಮೆರಿಕ ಇಲ್ಲಿಯವರೆಗೆ ಪ್ಯಾಲೆಸ್ತೀನ್ ಮೇಲೆ ನಡೆಸಿರುವ ಹಿಂಸಾತ್ಮಕ ನರಮೇಧಗಳು, ಆಕ್ರಮಣಗಳನ್ನು ಮರೆತು ಶೋಷಕ ಪ್ರಭುತ್ವವನ್ನು ಕರುಣೆಗಣ್ಣಿನಿಂದ ನೋಡುತ್ತಾ, ಇತಿಹಾಸದ ದೌರ್ಜನ್ಯಗಳಿಗೆ ಬೆನ್ನು ಮಾಡುವುದು ಕುಚೋದ್ಯವೇ ಸರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...