Homeಮುಖಪುಟರಾಮಮಂದಿರ ಉದ್ಘಾಟನೆಗೆ ಆಹ್ವಾನ: 'ಕೈ' ನಾಯಕರ ಭಿನ್ನ ಹೇಳಿಕೆ, ಕೇರಳ ಕಾಂಗ್ರೆಸ್‌ನಲ್ಲಿ ಗೊಂದಲ!

ರಾಮಮಂದಿರ ಉದ್ಘಾಟನೆಗೆ ಆಹ್ವಾನ: ‘ಕೈ’ ನಾಯಕರ ಭಿನ್ನ ಹೇಳಿಕೆ, ಕೇರಳ ಕಾಂಗ್ರೆಸ್‌ನಲ್ಲಿ ಗೊಂದಲ!

- Advertisement -
- Advertisement -

ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕತ್ವಕ್ಕೆ ನೀಡಿರುವ ಆಹ್ವಾನದ ಕುರಿತು ಯಾವ ರಾಜಕೀಯ ನಿಲುವು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಕೇರಳ ರಾಜ್ಯ ಘಟಕದಲ್ಲಿ ಗೊಂದಲ ಉಂಟಾಗಿದೆ.

ಈ ಕುರಿತು ಮಾತನಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ಸಂಸದ ಕೆ. ಮುರಳೀಧರನ್, ‘ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸದಂತೆ ಪಕ್ಷದ ರಾಜ್ಯ ಘಟಕವು ರಾಷ್ಟ್ರೀಯ ನಾಯಕತ್ವವನ್ನು ಒತ್ತಾಯಿಸಿದೆ’ ಎಂದು ಹೇಳಿದರು.

‘ಈ ಬಗ್ಗೆ ರಾಜ್ಯ ಘಟಕವು ರಾಷ್ಟ್ರೀಯ ನಾಯಕತ್ವಕ್ಕೆ ತನ್ನ ನಿಲುವನ್ನು ತಿಳಿಸುವ ಬಗ್ಗೆ ನನಗೆ ತಿಳಿದಿಲ್ಲ. ಆದರೆ, ರಾಜ್ಯ ಘಟಕದ ನಿಲುವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರಿಗೆ ತಿಳಿಸಲಾಗಿದೆ’ ಎಂದು ಕೇರಳ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಸುಧಾಕರನ್ ಹೇಳಿದರು.

‘ಕಾಂಗ್ರೆಸ್ ನಾಯಕರು ಯಾವುದೇ ಕಾರಣಕ್ಕೂ ಸಮಾರಂಭದಲ್ಲಿ ಭಾಗವಹಿಸಬಾರದು. ಅದು ಪಕ್ಷದ ರಾಜ್ಯ ನಾಯಕತ್ವದ ನಿರ್ಧಾರ, ರಾಜ್ಯ ಘಟಕದ ಭಾವನೆಗಳನ್ನು ವೇಣುಗೋಪಾಲ್ ಅವರಿಗೆ ತಿಳಿಸಲಾಗಿದೆ’ ಎಂದು ಮುರಳೀಧರನ್ ಸುದ್ದಿಗಾರರಿಗೆ ತಿಳಿಸಿದರು.

‘ಆದರೆ, ಕಾಂಗ್ರೆಸ್ ಪಕ್ಷವು ಬಿಜೆಪಿ ವಿರೋಧಿ ಒಕ್ಕೂಟವಾದ ‘ಇಂಡಿಯಾ’ ಮೈತ್ರಿಕೂಟವನ್ನು ಮುನ್ನಡೆಸುವ ರಾಷ್ಟ್ರೀಯ ಪಕ್ಷವಾಗಿದ್ದು, ಈ ಬಗ್ಗೆ ರಾಷ್ಟ್ರೀಯ ನಾಯಕತ್ವವು ಅವರೊಂದಿಗೆ ಚರ್ಚಿಸಿದ ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ಇಂಡಿಯಾ ಒಕ್ಕೂಟದ ಪ್ರಮುಖ ಪಕ್ಷವಾದ ಸಮಾಜವಾದಿ ಪಕ್ಷವು ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸುವುದಾಗಿ ಈಗಾಗಲೆ ಘೋಷಿಸಿದೆ’ ಎಂದು ಮುರಳೀಧರನ್ ಹೇಳಿದರು.

‘ಇದು ಪಕ್ಷದ ರಾಷ್ಟ್ರೀಯ ನಾಯಕತ್ವದ ತೀರ್ಮಾನವಾಗಿದೆ; ಈ ವಿಚಾರದಲ್ಲಿ ನಮ್ಮ ನಿಲುವು ಕೇಳಿದರೆ ಅವರಿಗೆ ತಿಳಿಸುತ್ತೇವೆ’ ಎಂದು ಸುಧಾಕರನ್ ಹೇಳಿದ್ದಾರೆ.

ನಿರ್ಧಾರ ತೆಗೆದುಗೊಳ್ಳಲು ನಮಗೆ ಕಾಲಾವಕಾಶ ನೀಡಿ: ತರೂರ್

ರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಆಹ್ವಾನವನ್ನು ತಿರಸ್ಕರಿಸುವ ಸಿಪಿಐ (ಎಂ) ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಸಿಡಬ್ಲ್ಯೂಸಿ ಸದಸ್ಯ ಮತ್ತು ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್, ‘ಎಡಪಕ್ಷಗಳಿಗೆ ಯಾವುದೇ ಧರ್ಮದಲ್ಲಿ ನಂಬಿಕೆಯಿಲ್ಲದ ಕಾರಣ ಈ ವಿಷಯದ ಬಗ್ಗೆ ಅವರು ಸುಲಭವಾಗಿ ನಿರ್ಧಾರ ತೆಗೆದುಕೊಳ್ಳಬಹುದು. ಕಾಂಗ್ರೆಸ್‌ ಪಕ್ಷದಲ್ಲಿ ಸಿಪಿಐ(ಎಂ) ಅಥವಾ ಬಿಜೆಪಿಯ ಯಾವುದೇ ಸಿದ್ಧಾಂತಗಳಿಲ್ಲ, ನಾವು ಹಿಂದುತ್ವವನ್ನು ರಾಜಕೀಯ ಸಿದ್ಧಾಂತವಾಗಿ ನೋಡುತ್ತಿದ್ದೇವೆ, ಅದು ಹಿಂದೂ ಧರ್ಮದೊಂದಿಗೆ ಸಂಪರ್ಕ ಹೊಂದಿಲ್ಲ. ಆದ್ದರಿಂದ ನಾವು ಸಿಪಿಐ(ಎಂ) ಅಥವಾ ಬಿಜೆಪಿಯವರಂತಲ್ಲ. ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ನಮಗೆ ಕಾಲಾವಕಾಶ ನೀಡಿ’ ಎಂದು ತಿಳಿಸಿದರು.

ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಬಗ್ಗೆ ಕಾಂಗ್ರೆಸ್ ಪಕ್ಷವು ನಿರ್ಧಿಷ್ಟ ನಿಲುವು ತೆಗೆದುಕೊಂಡಿಲ್ಲ ಎಂದು ಕೇರಳದ ಪ್ರಮುಖ ಸುನ್ನಿ ಮುಸ್ಲಿಂ ಪಾದ್ರಿ ಟೀಕಿಸಿದ ಒಂದು ದಿನದ ನಂತರ ಕಾಂಗ್ರೆಸ್ ನಾಯಕರು ಈ ಹೇಳಿಕೆಗಳನ್ನು ನೀಡಿದ್ದಾರೆ. ‘ಕಾಂಗ್ರೆಸ್ ಮೃದು ಹಿಂದುತ್ವ ಧೋರಣೆ ಹೊಂದಿದೆ’ ಎಂದು ಸಮಸ್ತದ ಮುಖವಾಣಿ ‘ಸುಪ್ರಭಾತಂ’ ಸಂಪಾದಕೀಯ ಆರೋಪಿಸಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಲೋಕಸಭೆ ನಾಯಕ ಅಧೀರ್ ರಂಜನ್ ಚೌಧರಿ ಸೇರಿದಂತೆ ತನ್ನ ಪ್ರಮುಖ ನಾಯಕರು ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆಯೇ ಎಂಬುದನ್ನು ಕಾಂಗ್ರೆಸ್ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ; ಶೀಘ್ರದಲ್ಲೆ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ’ ಜಾರಿ ಮಾಡುತ್ತೇವೆ: ಸಿಎಂ ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...