ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ, ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಳಿಗ್ಗೆ ದೆಹಲಿಯಲ್ಲಿ ಭೇಟಿಯಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ.
ಮಧ್ಯಪ್ರದೇಶ ಕಾಂಗ್ರೆಸ್ಸಿನ ಪ್ರಭಾವಿ ನಾಯಕರಾದ ಸಿಂಧಿಯಾ ಬಿಜೆಪಿಗೆ ಸೇರುತ್ತಾರೆ ಎಂದು ಉಹಾಪೋಹಗಳನ್ನು ಅವರು ನಿಜಮಾಡಿದ್ದಾರೆ. ಈ ಬೆನ್ನಲ್ಲೇ ಮಧ್ಯಪ್ರದೇಶದ ಕಮಲ್ ನಾಥ್ ಸರ್ಕಾರವನ್ನು ಉರುಳಿಸಲು 20 ಕಾಂಗ್ರೆಸ್ ಶಾಸಕರು ಮಧ್ಯಪ್ರದೇಶದ ವಿಧಾನಸಭೆಯ ಸ್ಪೀಕರ್‌ಗೆ ರಾಜೀನಾಮೆ ಪತ್ರಗಳನ್ನು ಸಲ್ಲಿಸಲು ಸಿದ್ಧರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾಟಕೀಯ ಬದಲಾವಣೆ ಪ್ರಾರಂಭವಾದಾಗಿನಿಂದ ಸಿಂಧಿಯಾ ಅವರನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಸೋಮವಾರ ರಾತ್ರಿ ಸುದ್ದಿಗಾರರಿಗೆ ತಿಳಿಸಿದರು. “ನಾವು ಸಿಂಧಿಯಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೆವು ಆದರೆ ಅವರಿಗೆ ಹಂದಿ ಜ್ವರವಿದೆ ಎಂದು ಹೇಳಲಾಗುತ್ತಿದೆ, ಆದ್ದರಿಂದ ಅವರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ” ಎಂದು ದಿಗ್ವಿಜಯ ಸಿಂಗ್ ಹೇಳಿದ್ದಾರೆ.
ಶಕ್ತಿ ಪ್ರದರ್ಶನಕ್ಕಾಗಿ ತನ್ನ ಶಾಸಕರನ್ನು ಭೋಪಾಲ್‌ಗೆ ಕರೆಸಿಕೊಂಡಿದ್ದ ಬಿಜೆಪಿ ಸಂಜೆ 6 ಗಂಟೆಗೆ ನಗರದ ಹೋಟೆಲ್‌ವೊಂದರಲ್ಲಿ ಸಭೆ ನಡೆಸಲಿದೆ.
ಕಾಂಗ್ರೆಸ್ ನಾಯಕರಾದ ಸಚಿನ್ ಪೈಲಟ್ ಮತ್ತು ಕರಣ್ ಸಿಂಗ್ ಅವರು ಪಕ್ಷದ ಬಿಕ್ಕಟ್ಟು ಶಮನ ಮಾಡಲು ಶ್ರಮಿಸುತ್ತಿದ್ದಾರೆ. “ನಾಯಕರು ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಸಮರ್ಥರಾಗಿದ್ದಾರೆ ಮಧ್ಯಪ್ರದೇಶದ ಬಿಕ್ಕಟ್ಟು ಶೀಘ್ರದಲ್ಲೇ ಕೊನೆಗೊಳ್ಳುತ್ತದೆ” ಎಂದು ಸಚಿನ್ ಪೈಲಟ್ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಗಾಂಧಿ ಕುಟುಂಬಕ್ಕೆ ಹತ್ತಿರವಾಗಿದ್ದ ಸಿಂಧಿಯಾ ಕೆಲವು ಸಮಯದಿಂದ ಹಿರಿಯ ಕಾಂಗ್ರೆಸ್ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಜಮ್ಮು ಕಾಶ್ಮೀರದ 370 ನೇ ವಿಧಿ ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಬಹಿರಂಗವಾಗಿ ಬೆಂಬಲಿಸಿದ್ದರು.
230 ಸದಸ್ಯರಿರುವ ಮಧ್ಯಪ್ರದೇಶದ ವಿಧಾನಸಭೆಯಲ್ಲಿ ಸರ್ಕಾರವು ಒಟ್ಟು 120 ಶಾಸಕರ ಬೆಂಬಲವನ್ನು ಹೊಂದಿದೆ. ಇದರಲ್ಲಿ 114 ಮಂದಿ ಕಾಂಗ್ರೆಸ್ ಮೂಲದವರಾದರೆ, ಇಬ್ಬರು ಬಿಎಸ್ಪಿ, ಒಬ್ಬ ಸಮಾಜವಾದಿ ಪಕ್ಷ ಮತ್ತು ನಾಲ್ವರು ಪಕ್ಷೇತರರಾಗಿದ್ದಾರೆ. ಬಿಜೆಪಿಯಲ್ಲಿ 107 ಶಾಸಕರು ಇದ್ದಾರೆ ಹಾಗು ಎರಡು ಸ್ಥಾನಗಳು ಖಾಲಿ ಇವೆ. ಕಾಗ್ರೇಸ್ ನ 17-20 ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ.
ಕಮಲ್ ನಾಥ್ ಸರಕಾರವನ್ನು ಉರುಳಿಸಲು 10 ಶಾಸಕರು ಕಳೆದವಾರ ದೆಹಲಿಯ ರೆಸಾರ್ಟ್ ಒಂದರಲ್ಲಿ ಬೀಡು ಬಿಟ್ಟಿದ್ದರು. ಅದರಲ್ಲಿ ದಿಗ್ವಿಜಯ ಸಿಂಗ್ ಆರು ಜನರನ್ನು ಮರಳಿ ಕರೆಸುವಲ್ಲಿ ಸಫಲಾಗಿದ್ದರು. ಆದರೆ ಉಳಿದಿದ್ದ ನಾಲ್ವರಲ್ಲಿ ಒಬ್ಬರಾದ ಹರ್ದೀಪ್ ಡಾಂಗ್ ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್‌ಗೆ ಕಳುಹಿಸಿದ ನಂತರ ಕಮಲ್ ನಾಥ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.