ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳ ಮೇಲೆ ಸುಲಿಗೆ ಆರೋಪ ಬಂದಿದ್ದು, ದೂರು ಕೂಡ ದಾಖಲಾಗಿರುವ ಸಂಗತಿ ಬಯಲಾಗಿದೆ. ಈ ಕುರಿತು ‘ದಿ ಫೈಲ್.ಇನ್’ ವಿಸ್ತೃತವಾಗಿ ವರದಿ ಮಾಡಿದೆ. ಈ ಹಿನ್ನೆಲೆ ಕರ್ನಾಟಕ ಎಎಪಿ, ರವಿ ಚನ್ನಣ್ಣನವರ್ ಅಮಾನತಿಗೆ ಆಗ್ರಹಿಸಿದೆ.
’ಅಕ್ರಮ ಮರಳು ದಂಧೆ ಪ್ರಕರಣವನ್ನು ಮುಚ್ಚಿ ಹಾಕಲು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ಅವರನ್ನು ಅಮಾನತು ಮಾಡಿ, ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಆಗ್ರಹಿಸಿದ್ದಾರೆ.
“ಕ್ರಷರ್ ಉದ್ಯಮಿ ಸೇರಿ ಹಲವರಿಂದ 3.96 ಕೋಟಿ ಮೊತ್ತ ವಂಚನೆಯಾಗಿದೆ ಎಂದು ಸಲ್ಲಿಕೆಯಾಗಿದ್ದ ದೂರನ್ನು ಆಧರಿಸಿ ಆರೋಪಿಗಳ ವಿರುದ್ಧ ರವಿ ಡಿ ಚನ್ನಣ್ಣನವರ್ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಬೇಕಾಗಿತ್ತು. ಆದರೆ, ಪೊಲೀಸ್ ಅಧಿಕಾರಿಗಳೇ ಆರೋಪಿಗಳಿಂದ 50 ಲಕ್ಷ ರೂ. ಲಂಚ ಪಡೆದಿರುವ ಆರೋಪ ಕೇಳಿಬಂದಿದೆ. ಇಂತಹ ಗಂಭೀರ ಆರೋಪ ಹೊತ್ತಿರುವ ರವಿ ಡಿ ಚನ್ನಣ್ಣನವರ್ರವರು ಸಿಐಡಿ ಎಸ್ಪಿ ಹುದ್ದೆಯಲ್ಲಿ ಮುಂದುವರಿಯುವುದು ಸರಿಯಲ್ಲ. ತಕ್ಷಣವೇ ಅಮಾನತು ಮಾಡಿ ಸಮಗ್ರ ನ್ಯಾಯಾಂಗ ತನಿಖೆ ನಡೆಸಬೇಕು” ಎಂದಿದ್ದಾರೆ
ಇದನ್ನೂ ಓದಿ: ನಟಿಯ ಬಗ್ಗೆ ಅಸಂಬದ್ದ ಸುದ್ದಿ ಪ್ರಕಟಿಸಿ ‘ವಿಕೃತಿ’ ಮೆರೆದ ವಿಜಯವಾಣಿ.ನೆಟ್
’ಈ ಪ್ರಕರಣ ಸಂಬಂಧ ಮಂಜುನಾಥ್ ಎಂಬುವವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ರವಿ ಚನ್ನಣ್ಣನವರ್ 25 ಲಕ್ಷ, ಡಿವೈಎಸ್ಪಿ 15 ಲಕ್ಷ ಹಾಗೂ ಮತ್ತೊಬ್ಬ ಅಧಿಕಾರಿ 10 ಲಕ್ಷ ರೂಪಾಯಿ ಸ್ವೀಕರಿಸಿರುವ ಕುರಿತು ದೂರಿನಲ್ಲಿ ಸ್ಪಷ್ವವಾಗಿ ಉಲ್ಲೇಖಿಸಿದ್ದಾರೆ. ಪ್ರಭಾವಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಕೂಡ ಪೊಲೀಸ್ ಅಧಿಕಾರಿಗಳು ಲಕ್ಷಗಟ್ಟಲೆ ಲಂಚ ಕೇಳಿರುವ ಮಾಹಿತಿ ದೂರಿನಲ್ಲಿದೆ. ಆರೋಪಗಳಿಗೆ ಸಂಬಂಧಿಸಿ ಧ್ವನಿ ಮುದ್ರಣ, ವಾಟ್ಸಪ್ ಸಂದೇಶ ಮುಂತಾದ ಸಾಕ್ಷಿಗಳಿವೆ ಎಂದು ಮಂಜುನಾಥ್ ಹೇಳಿದ್ದಾರೆ. ಅವೆಲ್ಲದರ ಆಧಾರದಲ್ಲಿ ತನಿಖೆ ನಡೆಸಿ, ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆದವರಿಗೆ ಹಾಗೂ ಅವರನ್ನು ರಕ್ಷಣೆ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ಇನ್ನು, ಆರೋಪಿ ಅಶೋಕ್ ಎಂಬವರೊಂದಿಗೆ ರವಿ ಡಿ.ಚನ್ನಣ್ಣನವರ್ ಹಾಗೂ ಡಿವೈಎಸ್ಪಿ ಮಹದೇವಪ್ಪ ಶಾಮೀಲಾಗಿ ತನಿಖೆಯಿಂದ ಆರೋಪಿ ಕೈತಪ್ಪಿಸಿಕೊಳ್ಳಲು ನೆರವಾಗಿದ್ದಾರೆ ಎಂದು ದೂರುದಾರ ಮಂಜುನಾಥ್ ಆರೋಪಿಸಿದ್ದಾರೆ.