Homeಅಂಕಣಗಳುಬಿಳಿಯರ ಪಾಪನಿವೇದನೆಯ ’ಕಿಲ್ಲರ್ಸ್ ಆಫ್ ದ ಫ್ಲವರ್ ಮೂನ್'

ಬಿಳಿಯರ ಪಾಪನಿವೇದನೆಯ ’ಕಿಲ್ಲರ್ಸ್ ಆಫ್ ದ ಫ್ಲವರ್ ಮೂನ್’

- Advertisement -
- Advertisement -

(ಇದು ನ್ಯಾಯಪಥ ಡಿಸೆಂಬರ್ 1-15 ಸಂಚಿಕೆಯಲ್ಲಿ ಪ್ರಕಟವಾಗಿತ್ತು.)

80 ವರ್ಷದ ಜನಪ್ರಿಯ ಹಾಲಿವುಡ್ ನಿರ್ದೇಶಕ ಮಾರ್ಟಿನ್ ಸ್ಕಾರ್ಸೆಸಿ ಅವರು ’ಕಿಲ್ಲರ್ಸ್ ಆಫ್ ದ ಫ್ಲವರ್ ಮೂನ್’ ಸಿನಿಮಾ ಮಾಡುತ್ತಿದ್ದೇನೆಂದು ಘೋಷಿಸಿದಾಗಿನಿಂದಲೂ ಸಿನಿಮಾಸಕ್ತರ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ರೇಸಿಸಂ ವಿರುದ್ಧವಾಗಿ ಅಮೆರಿಕದಲ್ಲಿ ಇನ್ನೂ ಹೋರಾಟಗಳು ನಡೆಯುತ್ತಲೇ ಇವೆ ಮತ್ತು ಕೆಲವು ವರ್ಷಗಳ ಹಿಂದೆ ’ಬ್ಲಾಕ್ ಲೈವ್ಸ್ ಮ್ಯಾಟರ್‍ಸ್’ ತೀವ್ರತಮವಾಗಿ ಹಬ್ಬಿತ್ತು ಕೂಡ; ಇಂತಹ ಕಾಲಘಟ್ಟದಲ್ಲಿ, ಅಲ್ಲಿಯ ಬಿಳಿಯ ನಿರ್ದೇಶಕರೊಬ್ಬರು ತಮ್ಮ ದೇಶದ ಮೂಲನಿವಾಸಿಗಳ ಬಗ್ಗೆ, ಅವರ ಮೇಲೆ ಎಸಗಿರುವ ದೌರ್ಜನ್ಯಗಳ ಬಗ್ಗೆ ಮಾನವೀಯ ದೃಷ್ಟಿಕೋನದಲ್ಲಿ ಸಿನಿಮಾ ಮಾಡುವುದು ಒಂದು ಬಗೆಯ ಆತ್ಮಾವಲೋಕನವಂತೂ ಹೌದು. ಜಗತ್ತಿನೆಲ್ಲೆಡೆ ಪಶ್ಚಿಮದ ಆಕ್ರಮಣಶೀಲ ಬಲಾಢ್ಯ ಸಾಮ್ರಾಜ್ಯಗಳು ತಾವು ಕಟ್ಟಿಕೊಂಡ ದೋಷಪೂರಿತ ತತ್ವ ಸಿದ್ಧಾಂತದಡಿ ಎಷ್ಟೋ ಮೂಲನಿವಾಸಿಗಳನ್ನು ಕೊಲೆಗೈದಿವೆ ಮತ್ತು ಶೋಷಿಸಿವೆ; ಜನರನ್ನು ಮತ್ತು ಅವರ ಸಂಸ್ಕೃತಿಯನ್ನು ನಿರ್ನಾಮ ಮಾಡಲು ಪ್ರಯತ್ನಿಸಿವೆ. ಇಂತಹ ಸಾಮ್ರಾಜ್ಯಶಾಹಿ ದೇಶಗಳು ಬುಡಕಟ್ಟು ಸಮುದಾಯಗಳ ಬಗ್ಗೆ ಕಟ್ಟಿದ ಕಥನಗಳು ತಮ್ಮ ಸಾಮ್ರಾಜ್ಯಶಾಹಿ ಧೋರಣೆಗೆ ಮತ್ತು ವ್ಯವಹಾರಗಳಿಗೆ ಸಹಾಯವಾಗುವುದಕ್ಕೆ ಸೃಷ್ಟಿಸಿದ ಸುಳ್ಳಿನ ಕಂತೆಗಳು ಎಂದು ಹಲವು ವರ್ಷಗಳ ಅಧ್ಯಯನಗಳ ನಂತರ ಸಾಬೀತಾಗುತ್ತಿದೆ. ಈಗ ಸ್ಕಾರ್ಸೆಸಿಯವರು, ಅಮೆರಿಕದ ಒಸಾಜ್ ಎಂಬ ಬುಡಕಟ್ಟು ಸಮುದಾಯವನ್ನು ಅಮೆರಿಕದ ಮುಖ್ಯವಾಹಿನಿ ಜನರು ಮತ್ತು ಪ್ರಭುತ್ವ ಶೋಷಿಸಿದ ಕಥೆಯನ್ನು ಈ ಸಿನಿಮಾದ ಹೆಸರಿನದ್ದೇ ಆದ ನಾನ್-ಫಿಕ್ಷನ್ ಪುಸ್ತಕದಿಂದ ಅಳವಡಿಸಿಕೊಂಡಿದ್ದಾರೆ.

ಅಮೆರಿಕನ್ ಮೂಲ ನಿವಾಸಿಗಳು ಅವರ ಪರಂಪರೆಯ ಭಾಗವಾದ ಒಂದು ’ಸ್ಮೋಕಿಂಗ್ ಪೈಪ್’ಅನ್ನು ಹೂತುಹಾಕುವ ಮೂಲಕ, ಬಿಳಿಯ ಜನಾಂಗದ ಆಗಮನವನ್ನು ಒಂದು ರೀತಿಯ ಆತಂಕದಿಂದ ಘೋಷಿಸುವ ನಿಗೂಢ ಆಚರಣೆಯ ಮೊದಲ ದೃಶ್ಯದೊಂದಿಗೆ ಸಿನಿಮಾ ಆರಂಭವಾಗುತ್ತದೆ. ಬಹುಶಃ ಮೂಲನಿವಾಸಿಗಳ ಬದುಕು ಆಚರಣೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತು ಆ ನಿಗೂಢತೆಗೆ ತಪ್ಪು ಅರ್ಥದ ಬಣ್ಣಬಣ್ಣದ ಕಥೆಗಳನ್ನು ಕಟ್ಟಿದ, ಮುಖ್ಯವಾಹಿನಿ ಜನರ ಮನೋಧೋರಣೆಯನ್ನು ಚಿತ್ರಿಸಲೇನೋ ಎಂಬಂತೆ ಕಟ್ಟಿದ ಈ ಮೊದಲ ದೃಶ್ಯ ತೈಲ ನಿಕ್ಷೇಪ ಚಿಮ್ಮುವ ಸೀನ್‌ನೊಂದಿಗೆ, ಒಸಾಜ್ ಪ್ರದೇಶ ತೈಲ ನಿಕ್ಷೇಪಗಳಿಂದ ಸಂಪದ್ಭರಿತವಾಗಿರುವುದನ್ನು ನಿರ್ದೇಶಕ ಕಟ್ಟಿಕೊಡುತ್ತಾರೆ.

ಮಾರ್ಟಿನ್ ಸ್ಕಾರ್ಸೆಸಿ

ಮುಂದಿನ ದೃಶ್ಯದಲ್ಲಿ ಎಲ್ಲಾ ಬದಲಾಗಿರುವ ಚಿತ್ರಣ. ದೊಡ್ಡದೊಡ್ಡ ಕಟ್ಟಡಗಳು, ಗಿಜಿಗುಟ್ಟುತ್ತಿರುವ ಕಾರುಗಳು, ರೈಲುಗಳು, ಕಾಫಿ ಹೌಸ್‌ಗಳು- ಈ ಹಿನ್ನೆಲೆಯಲ್ಲಿ ಅರ್‍ನೆಸ್ಟ್ ಬಕ್‌ಹಾರ್ಟ್ (ಲಿಯೋನಾರ್ಡೋ ಡಿಕ್ಯಾಪ್ರಿಯೋ) ಆ ಪಟ್ಟಣಕ್ಕೆ ಬರುತ್ತಾನೆ. ತಮ್ಮ ನೆಲದ ಮೇಲಿನ ನಿಯಂತ್ರಣವನ್ನು ಒಸಾಜ್ ಸಮುದಾಯ ಇನ್ನೂ ಉಳಿಸಿಕೊಂಡಿದ್ದರೂ, ಅದರಿಂದ ತೈಲವನ್ನು ತೆಗೆಯಲು ಅವರು ರಾಯಲ್ಟಿ ಪಡೆಯುತ್ತಿದ್ದರೂ, ಉಳಿದೆಲ್ಲಾ ವ್ಯವಹಾರಗಳು ಬಹುತೇಕ ಬಿಳಿಯರ ಕೈಲಿವೆ. ಆಗತಾನೆ ಬಂದಿರುವ ಅರ್‍ನೆಸ್ಟ್‌ಗೆ ಅವನ ಸೋದರಸಂಬಂಧಿ ’ಶೆರಿಫ್’ ವಿಲಿಯಮ್ ಕಿಂಗ್ ಹೇಲ್, ಕಂದು ಬಣ್ಣದ ಜನ ಮಿತಭಾಷಿಗಳಾದರೂ ತೀಕ್ಷ್ಣಮತಿಗಳು ಮತ್ತು ಅವರ ಜೊತೆಗೆ ಹುಷಾರಾಗಿ ವ್ಯವಹರಿಸಬೇಕೆಂಬ ’ಬುದ್ಧಿಮಾತು’ಗಳನ್ನು ಹೇಳುತ್ತಾನೆ.

ಟ್ಯಾಕ್ಸಿ ಚಲಾಯಿಸುವ ಕೆಲಸ ಶುರು ಮಾಡುವ ಅರ್‍ನೆಸ್ಟ್, ಅತಿ ದೊಡ್ಡ ಎಸ್ಟೇಟ್‌ಅನ್ನು ಹೊಂದಿರುವ ಮೂಲ ನಿವಾಸಿ ಮೋಲಿಯನ್ನು (ಲಿಲ್ಲಿ ಗ್ಲಾಡ್‌ಸ್ಟೋನ್) ಭೇಟಿಯಾಗುತ್ತಾನೆ. ತನ್ನ ಪ್ರೀತಿಯನ್ನು ಆಕೆಗೆ ನಿವೇದಿಸಿಕೊಳ್ಳುತ್ತಾನೆ. ಆಸ್ತಿಗಾಗಿ ಆತ ನಿನ್ನನ್ನು ಪ್ರೀತಿಸುತ್ತಿದ್ದಾನೆ ಎಂದು ಸಹೋದರಿಯರು ಎಚ್ಚರಿಸಿದರೂ, ಅದು ತನಗೇ ತಿಳಿದಿದ್ದರೂ, ಅರ್‍ನೆಸ್ಟ್‌ನನ್ನು ಮೋಲಿ ಮದುವೆಯಾಗುತ್ತಾಳೆ. ಒಂದು ಕಡೆ ತನ್ನೊಬ್ಬಳು ತಂಗಿ ಯಾವುದೋ ನಿಗೂಢ ರೋಗದಿಂದ ಮೃತಪಟ್ಟರೆ, ಮತ್ತಿಬ್ಬರು ತಂಗಿಯರು ಕೊಲೆಯಾಗುತ್ತಾರೆ. ಮೋಲಿ ಕೂಡ ಡಯಾಬಿಟಿಸ್‌ನಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುತ್ತಾಳೆ. ಅತ್ತ ಅರ್‍ನೆಸ್ಟ್ ತನ್ನ ಸಹೋದರ ಬೈರನ್ ಮತ್ತು ಅಂಕಲ್ ಹೇಲ್‌ರ ಪಿತೂರಿಗೆ ಸಹಕರಿಸಿ, ಮೋಲಿಯ ಆಸ್ತಿ ಕಬಳಿಕೆಗಾಗಿ ತನ್ನ ಹೆಂಡತಿಯ ವಿರುದ್ಧವೇ ಕೆಲಸ ಮಾಡುತ್ತಾನೆ. ಒಂದು ಕಡೆ ತನ್ನ ಕುಟುಂಬದ ಸದಸ್ಯರು ಕೊಲೆಯಾಗುತ್ತಿದ್ದಾರೆ; ಮತ್ತೊಂದು ಕಡೆ ತನ್ನ ಆರೋಗ್ಯ ಸುಧಾರಿಸುತ್ತಿಲ್ಲ; ಮೂಲನಿವಾಸಿಗಳ ಈ ಸರಣಿ ಕೊಲೆಗಳಿಂದ, ಮೋಲಿ ಜತೆಗೆ ಇಡೀ ಸಮುದಾಯವೇ ಆತಂಕಪಡುತ್ತದೆ. ಆದರೆ ಅದನ್ನು ತನಿಖೆಗೆ ಒಳಪಡಿಸಲಾಗದ, ನ್ಯಾಯ ಕಂಡುಕೊಳ್ಳಲಾಗದ ಸಂತ್ರಸ್ತ ಸ್ಥಿತಿಗೆ ಒಸಾಜ್ ಸಮುದಾಯ ಬಂದು ನಿಂತಿದೆ.

ಪ್ರತಿಯೊಬ್ಬರ ನಟನೆಯೂ ಅದ್ಭುತವಾಗಿ ಮೂಡಿಬಂದಿರುವ, ವೈಯಕ್ತಿಕ ಪ್ರೀತಿ-ದ್ರೋಹದ ಕಥೆಯ ಈ ಸಿನಿಮಾ, ಒಂದು ಮೂಲನಿವಾಸಿ ಸಮುದಾಯವನ್ನು ಅವರ ನಿಯಂತ್ರಣದಲ್ಲಿರುವ ಸಂಪನ್ಮೂಲಗಳ ಕಬಳಿಕೆಗಾಗಿ ಹೇಗೆ ನಿರ್ನಾಮ ಮಾಡಲಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ತಮ್ಮ ಸಂಪನ್ಮೂಲಗಳನ್ನು ಕಳೆದುಕೊಳ್ಳುವುದರ ಜತೆಗೆ ತಮ್ಮ ಜೀವನಶೈಲಿಯನ್ನೂ ಕಳೆದುಕೊಂಡಿರುವ, ಬಿಳಿಯರ ವ್ಯವಹಾರದ ಮತ್ತು ಅದರ ಸುತ್ತ ಬೆಳೆದಿರುವ ಸಂಸ್ಕೃತಿಗೆ ಒಗ್ಗಿಕೊಳ್ಳಲೂ ಆಗದೆ, ಬಿಡಲೂ ಆಗದೆ ನರಳುತ್ತಿರುವ ಒಸಾಜ್ ಸಮುದಾಯ ದೈಹಿಕವಾಗಿಯೂ ಸಿಕ್ಕಾಪಟ್ಟೆ ಬಳಲಿದೆ. ಮೋಲಿ ಕುಟುಂಬದ ಬಹುತೇಕರು ಒಂದಲ್ಲಾ ಒಂದು ರೋಗಗಳಿಗೆ ತುತ್ತಾಗಿದ್ದಾರೆ; ಬಹುಶಃ ಅದು ಸಮುದಾಯದ ಇತರರ ಪಾಡೂ ಹೌದು.

ಮೋಲಿ ಡಯಾಬಿಟಿಸ್‌ನಿಂದ ನರಳುತ್ತಿರುವುದು ಕೂಡ ಸಿನಿಮಾದಲ್ಲಿ ಮುಖ್ಯ ಎಳೆಯಾಗಿ ಕಾಣಿಸಿಕೊಳ್ಳುತ್ತದೆ. ಆಗತಾನೆ ಪರಿಚಯವಾಗಿರುವ ಇನ್ಸುಲಿನ್, ಅದನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸುವ ಆತನ ಗಂಡ ಅದನ್ನು ಕಲಬೆರಕೆ ಮಾಡಿಕೊಡುವ ಕಥೆ, ಒಂದು ವೈಯಕ್ತಿಕ ದ್ರೋಹದ ಕಥೆಯಾದರೂ, ಬಿಳಿಯ ಅಮೆರಿಕ ಪ್ರಭುತ್ವ ಮತ್ತು ಮುಖ್ಯವಾಹಿನಿ ಜನರು ಮೋಸದಿಂದಲೇ ಮೂಲ ನಿವಾಸಿಗಳನ್ನು ನಿರ್ನಾಮ ಮಾಡಿದ ವಾಸ್ತವಕ್ಕೆ ರೂಪಕವಾಗಿದೆ. ಕೊನೆಗೆ, ಮೋಲಿಯ ಪ್ರಯತ್ನದಿಂದ, ಒಸಾಜ್ ಕೊಲೆಗಳ ಬಗ್ಗೆ ವಾಶಿಂಗ್‌ಟನ್‌ನಲ್ಲಿ ಸರ್ಕಾರಿ ಅಧಿಕಾರಿಗಳ ಗಮನ ಸೆಳೆಯಲು ಸಾಧ್ಯವಾಗಿ, ಫೆಡರಲ್ ಪೊಲೀಸರು ಬಂದು ತನಿಖೆ ನಡೆಸುತ್ತಾರೆ. ಅರ್ನೆಸ್ಟ್ ತನ್ನ ಹಾಗು ತನ್ನ ಕುಟುಂಬದ ತಪ್ಪುಗಳನ್ನು ಸಮರ್ಥಿಸಿಕೊಳ್ಳುವ ಮತ್ತು ಆತ್ಮಸಾಕ್ಷಿಯ ನಡುವಿನ ತೊಳಲಾಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಾನೆ. ಇಂತಹ ತೊಳಲಾಟವನ್ನು ಅನ್-ಹೀರೋಯಿಕ್ ಆಗಿ ಲಿಯೊನಾರ್ಡೋ ಡಿಕ್ಯಾಪ್ರಿಯೋ ಉತ್ತಮವಾಗಿ ನಟಿಸಿದ್ದರೆ, ಲಿಲ್ಲಿ ಗ್ಲಾಡ್‌ಸ್ಟೋನ್ ಸಮುದಾಯದ ಬಳಲಿಕೆ, ಆತಂಕ, ನೋವುಗಳಿಗೆ ರೂಪಕವಾಗಿ ಅದ್ಭುತ ನಟನೆಯನ್ನು ನೀಡಿದ್ದಾರೆ. ಕೋರ್ಟ್ ವಿಚಾರಣೆಯೊಂದಿಗೆ ಸಿನಿಮಾ ಮುಗಿಯುತ್ತದೆ. ಇದು ವಾಸ್ತವದಲ್ಲಿ ಎಫ್‌ಬಿಐನ ಹುಟ್ಟಿಗೆ ಕಾರಣವಾಯಿತು ಎಂದು ಕೂಡ ಹೇಳಲಾಗುತ್ತದೆ. ಬಿಳಿ ಮನುಷ್ಯನ ತಪ್ಪಿತಸ್ಥ ಮನೋಭಾವದ ಆತ್ಮಾವಲೋಕನದಂತೆ ಕಾಣುವ ಈ ಸಿನಿಮಾ, ನಿರೂಪಣೆಯ ತಾಂತ್ರಿಕತೆ, ಮನಮುಟ್ಟುವ ನಟನೆ ಮತ್ತು ಶೋಷಿತರ ಪರವಾಗಿ ತಳೆಯುವ ನಿಲುವುಗಳ ಕಾರಣಕ್ಕೆ ಬಹಳ ಮುಖ್ಯವಾದ ಸಿನಿಮಾ ಆಗತ್ತೆ. ಆದರೆ ಅದರ ಜತೆಗೆ ಕೆಲವು ಪ್ರಶ್ನೆಗಳು ಕೂಡ ಏಳುತ್ತವೆ.

ಇದನ್ನೂ ಓದಿ: ಟ್ರಯಾಂಗಲ್ ಆಫ್ ಸ್ಯಾಡ್‌ನೆಸ್: ಕ್ಯಾಪಿಟಲಿಸಂನ ಅಮಾನುಷತೆಯ ಅನಾವರಣ

ಮೊದಲ ದೃಶ್ಯದಲ್ಲಿ ಬಿಟ್ಟರೆ ಉಳಿದಂತೆ ಒಸಾಜ್ ಸಮುದಾಯದ ಸಂಸ್ಕೃತಿ ಆಚರಣೆಗಳು ಸಮುದಾಯದ ದೃಷ್ಟಿಕೋನದಿಂದ ನಿರೂಪಣೆಯಲ್ಲಿ ಜಾಗ ಪಡೆಯದೆ ಇರುವುದು ತುಸು ನಿರಾಸೆ ಹುಟ್ಟಿಸುತ್ತದೆ. ಅರ್‍ನೆಸ್ಟ್‌ನನ್ನು ಕಥೆಯ ಮತ್ತು ನಿರೂಪಣೆಯ ಕೇಂದ್ರದಲ್ಲಿ ಇರಿಸಿರುವ ಸಂಗತಿಯೂ ಸಿನಿಮಾವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡುಹೋಗುವ ಅವಕಾಶವನ್ನು ಕೈಚೆಲ್ಲುವಂತೆ ಮಾಡಿದೆ. ಅದರ ಬದಲು ಮೋಲಿಯನ್ನು ಕಥೆಯ ಕೇಂದ್ರದಲ್ಲಿಟ್ಟು ಸಿನಿಮಾವನ್ನು ನಿರೂಪಿಸಲು ಪ್ರಯತ್ನಿಸಿದ್ದರೆ, ಆಗ ಒಸಾಜ್ ಸಮುದಾಯ ಕೇಂದ್ರಿತ ಉಪಕಥೆಗಳು ಹೆಚ್ಚೆಚ್ಚು ಕಾಣಿಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಹಾಗೆಯೇ, ಮೋಲಿ ವಾಶಿಂಗ್‌ಟನ್‌ನ ಅಧಿಕಾರಿಗಳ ಗಮನ ಸೆಳೆಯುವುದು ಪಾಸ್ಸಿಂಗ್ ರೆಫರೆನ್ಸ್ ಆಗಿ ಮೂಡಿ ಮಾಯವಾಗುತ್ತದೆ. ಬಿಳಿಯರ ತಪ್ಪಿತಸ್ಥ ಕೆಲಸಗಳನ್ನು ಕಟ್ಟಿಕೊಡುವಷ್ಟೇ, ಶೋಷಿತರ ಹೋರಾಟದ ವಿವರಗಳನ್ನು ತೆರೆಯ ಮೇಲೆ ಬಿಚ್ಚಿಡುವುದು ಅತಿ ಮುಖ್ಯ. ಅದು ಈ ನಿರೂಪಣೆಯಲ್ಲಿ ಮಹತ್ವವಾಗಿ ಕಾಣಿಸುವುದಿಲ್ಲ. ಹಾಗೆಯೇ, ಪ್ರಭುತ್ವದ ಭಾಗವಾದ ತನಿಖಾ ಏಜೆನ್ಸಿಯನ್ನು ಒಸಾಜ್ ಸಮುದಾಯದ ’ಬಿಡುಗಡೆಗಾರ’ನಾಗಿ ಕಟ್ಟಿಕೊಟ್ಟಿರುವುದು, ವಾಸ್ತವದ ಚಿತ್ರಣ ಇರಬಹುದಾದರೂ, ಮುಂದಿನ ಇಷ್ಟು ವರ್ಷಗಳಲ್ಲಿ ಆ ತನಿಖಾ ದಳವೇ ಅಮೆರಿಕದ ಎಲ್ಲ ಆಕ್ರಮಣಗಳಲ್ಲಿಯೂ ಸಹಕಾರ ನೀಡಿರುವ ದೀರ್ಘ ಇತಿಹಾಸ ನಮ್ಮ ಮುಂದಿರುವಾಗ, ಈ ಚಿತ್ರದ (ತಮ್ಮ ಇತಿಹಾಸದ) ನಿಜ ನಾಯಕರು ಮತ್ತು ಬಿಡುಗಡೆಕಾರರು ಒಸಾಜ್ ಸಮುದಾಯದವರೇ ಎಂಬುದನ್ನು ರೆಟ್ರೋಸ್ಪೆಕ್ಟಿವ್‌ನಲ್ಲಿ ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ. ಈ ನಿಟ್ಟಿನಲ್ಲಿ ಮೂಡುವ ಪ್ರಶ್ನೆಗಳ ಹೊರತಾಗಿಯೂ ’ಕಿಲ್ಲರ್ಸ್ ಆಫ್ ದ ಫ್ಲವರ್ ಮೂನ್’ ಒಂದು ಪ್ರಮುಖ ಸಿನಿಮಾವಾಗಿ ನಿಲ್ಲುತ್ತದೆ.

ಡೇವಿಡ್ ಗ್ರಾನ್ ಅವರು ಬರೆದಿರುವ ’ಕಿಲ್ಲರ್ಸ್ ಆಫ್ ದ ಫ್ಲವರ್ ಮೂನ್’ ಪುಸ್ತಕದ ಆರಂಭದ ಸಾಲುಗಳು ಹೀಗಿವೆ: “ಓಖ್ಲಹೋಮಾದ ಒಸಾಜ್ ಪ್ರದೇಶದ ಬ್ಲಾಕ್‌ಜಾಕ್ ಬೆಟ್ಟಗಳ ಮೇಲೆ ಹಾಗೂ ವಿಶಾಲವಾದ ಹುಲ್ಲುಗಾವಲಿನಲ್ಲಿ ಲಕ್ಷಾಂತರ ಸಣ್ಣಸಣ್ಣ ಹೂವುಗಳು ಅರಳಿ ಹರಡುತ್ತವೆ. ಅಲ್ಲಿ ಜಾನಿ-ಜಂಪ್-ಅಪ್ಸ್ ಮತ್ತು ಸ್ಪ್ರಿಂಗ್ ಬ್ಯೂಟೀಸ್ ಮತ್ತು ಲಿಟಲ್ ಬ್ಲೂಯೆಟ್ಸ್ ಹೂವುಗಳಿವೆ. ’ದೇವರುಗಳು ತನ್ನ ಹೊರಗವಸನ್ನು ಬಿಟ್ಟುಹೋಗಿದ್ದಾರೆ’ ಎನ್ನುವಂತೆ ಈ ಅಗಣಿತ ದಳಗಳು ಕಾಣುತ್ತಿದ್ದವು ಎಂದು ಒಸಾಜ್ ಲೇಖಕ ಜಾನ್ ಜೋಸೆಫ್ ಮ್ಯಾಥ್ಯೂಸ್ ಬರೆದಿದ್ದಾರೆ. ಮೇ ತಿಂಗಳಲ್ಲಿ ಯಾವಾಗ ನಿರ್ಭೀತ ದೊಡ್ಡ ಚಂದ್ರನ ಕೆಳಗೆ ನರಿಗಳು ಊಳಿಡುವುದಕ್ಕೆ ಪ್ರಾರಂಭಿಸುತ್ತವೋ ಆಗ ಉದ್ದದ ಸಸ್ಯಗಳಾದ ಸ್ಪೈಡರ್‌ವರ್ಟ್ಸ್ ಮತ್ತು ಬ್ಲಾಕ್-ಅಯ್ಡ್ ಸುಸಾನ್‌ಗಳು, ಸಣ್ಣಸಣ್ಣ ಮೊಗ್ಗುಗಳ ಮೇಲೆ ಹರಡಲು ಪ್ರಾರಂಭಿಸುತ್ತವೆ ಮತ್ತು ಅವುಗಳ ಬೆಳಕು ಮತ್ತು ನೀರನ್ನು ಕಸಿಯುತ್ತವೆ. ಸಣ್ಣ ಹೂವುಗಳ ಕತ್ತು ಮುರಿಯುತ್ತದೆ ಮತ್ತೆ ಅವುಗಳ ದಳಗಳು ಹಾರಿಹೋಗುತ್ತವೆ, ತದನಂತರ ಮಣ್ಣಿನಲ್ಲಿ ಹೂತುಹೋಗುತ್ತವೆ. ಇದೇ ಕಾರಣಕ್ಕೆ ಒಸಾಜ್ ಇಂಡಿಯನ್ಸ್ ಮೇ ತಿಂಗಳನ್ನು ಫ್ಲವರ್-ಕಿಲ್ಲಿಂಗ್ ಮೂನ್ ಸಮಯ ಎಂದು ಗುರುತಿಸುತ್ತಾರೆ.

ಸ್ಕಾರ್ಸೆಸಿ ಅವರು ಹೀಗೆ ಹೂವುಗಳನ್ನು ಕೊಂದ ಆಕ್ರಮಣಕಾರಿ ಪರಾವಲಂಬಿ ಬಳ್ಳಿಯ ಕಥೆಯನ್ನು ಬಹಳ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತಾರೆ. ಆದರೆ ಅಷ್ಟೇ ಮುಖ್ಯವಾದದ್ದು ಆ ಸಣ್ಣ ಹೂವುಗಳು ಕೂಡ ಹೋರಾಡಬಲ್ಲವು ಎಂಬ ಕಥೆ. ಸಸ್ಯದ ಎಕೋಸಿಸ್ಟಮ್‌ನಲ್ಲಿ ಅದು ಸಾಧ್ಯವೋ ಇಲ್ಲವೋ, ಆದರೆ ಮೂಲನಿವಾಸಿಗಳು ಒಂದು ಮಟ್ಟದ ಯಶಸ್ವಿ ಹೋರಾಟವನ್ನು ಮಾಡಿದ್ದಾರೆ. ಆ ಕಥೆಗಳು ಕೂಡ ಬಿಳಿಯ ಕಲಾವಿದರನ್ನು ಕಾಡಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...