Homeಮುಖಪುಟಕಾರ್ಪೋರೇಟ್ ಸಂಸ್ಥೆಗಳಿಂದ ಹಠಾತ್ ವಜಾ: ಅತಂತ್ರರಾದ ಸಾವಿರಾರು ಉದ್ಯೋಗಿಗಳು

ಕಾರ್ಪೋರೇಟ್ ಸಂಸ್ಥೆಗಳಿಂದ ಹಠಾತ್ ವಜಾ: ಅತಂತ್ರರಾದ ಸಾವಿರಾರು ಉದ್ಯೋಗಿಗಳು

- Advertisement -
- Advertisement -

ದೇಶದಲ್ಲಿ ನಿರೋದ್ಯೋಗದ ಸಮಸ್ಯೆ ಉತ್ತುಂಗಕ್ಕೆ ಏರಿರುವ ನಡುವೆ, ಸಾವಿರಾರು ಉದ್ಯೋಗಿಗಳು ಪ್ರಸ್ತುತ ಇರುವ ಕೆಲಸವನ್ನೂ ಕಳೆದುಕೊಳ್ಳುತ್ತಿದ್ದಾರೆ. ಕಾರ್ಪೋರೇಟ್ ಕಂಪನಿಗಳ ಹಠಾತ್ ವಜಾಗೊಳಿಸುವಿಕೆ ಪ್ರಕ್ರಿಯೆ ಮುಂದುವರೆದಿದ್ದು, ಯುವ ಉದ್ಯೋಗಿಗಳಿಗೆ ಆತಂಕಕಾರಿ ಬೆಳವಣಿಗೆಯಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ, ಡಿಜಿಟಲ್ ಪಾವತಿ ಆ್ಯಪ್‌ ಪೇಟಿಎಂ(Paytm) ತನ್ನ 1,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ಕಂಪನಿಯ ಮಾರಾಟ ಮತ್ತು ಇಂಜಿನಿಯರಿಂಗ್ ವಿಭಾಗದ ಉದ್ಯೋಗಿಗಳನ್ನು ಕೈ ಬಿಡಲಾಗಿದೆ ಎಂದು ತಿಳಿದು ಬಂದಿದೆ.

“ನಾವು ಕೃತಕ ಬುದ್ದಿಮತ್ತೆ(Artificial Intelligence-AI)ಗೆ ಬದಲಾಗುತ್ತಿದ್ದೇವೆ. ಇದರ ಪರಿಣಾಮ ನಮ್ಮ ಇಂಜಿನಿಯರಿಂಗ್ ಮತ್ತು ಮಾರಾಟ ವಿಭಾಗದ ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದೇವೆ. ಸಂಸ್ಥೆಯ ನಿರ್ವಹಣಾ ವೆಚ್ಚ ಕಡಿತಗೊಳಿಸುವುದು ವಜಾಗೊಳಿಸುವಿಕೆಯ ಪ್ರಮುಖ ಉದ್ದೇಶ. ಇದಕ್ಕಾಗಿ ನಾವು ಎಐ ತಂತ್ರಜ್ಞಾನ ಅಳವಡಿಸಿಕೊಂಡಿದ್ದೇವೆ. ಎಐ ತಂತ್ರಜ್ಞಾನದಿಂದ ಶೇ.10ರಿಂದ 15ರಷ್ಟು ವೆಚ್ಚ ಕಡಿಮೆಯಾಗಲಿದೆ. ಅಲ್ಲದೆ ಕೆಲಸವೂ ಅತೀ ವೇಗದಲ್ಲಿ ಆಗಲಿದೆ” ಎಂದು ಪೇಟಿಎಂ ವಕ್ತಾರ ಹೇಳಿರುವುದಾಗಿ ಮನಿ ಕಂಟ್ರೋಲ್ ವರದಿ ಮಾಡಿದೆ.

ಒನ್ 97 ಕಮ್ಯೂನಿಕೇಶನ್ ಮಾಲಕತ್ವದ ಪೇಟಿಎಂ ಸಂಸ್ಥೆ, 2021ರಲ್ಲಿ 500ರಿಂದ 700 ಉದ್ಯೋಗಿಗಳನ್ನು ವಜಾಗೊಳಿಸಿತ್ತು ಎಂದು ವರದಿಗಳು ಹೇಳಿವೆ.

ಇತ್ತೀಚೆಗೆ ಉದ್ಯೋಗಿಗಳನ್ನು ವಜಾಗೊಳಿಸಿದ ಮತ್ತೊಂದು ಕಾರ್ಪೋರೇಟ್ ಸಂಸ್ಥೆ ಶೇರ್ ಚಾಟ್. ಬೆಂಗಳೂರು ಮೂಲದ ಮೊಹಲ್ಲಾ ಟೆಕ್ ಸಂಸ್ಥೆಯ ಮಾಲಕತ್ವದ ಸಾಮಾಜಿಕ ಜಾಲತಾಣ ಆ್ಯಪ್‌ ಶೇರ್ ಚಾಟ್ ಸುಮಾರು 200 ಉದ್ಯೋಗಿಗಳನ್ನು ಇತ್ತೀಚೆಗೆ ವಜಾಗೊಳಿಸಿದೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ತಿಳಿಸಿದೆ.

ಸ್ಟಾರ್ಟ್‌ ಅಪ್‌ ಅಗಿರುವ ಶೇರ್‌ ಚಾಟ್, ಕಂಪನಿಯ ಕಾರ್ಯತಂತ್ರದ ಪುನರ್‌ರಚನೆ ಮತ್ತು ವೆಚ್ಚ ಕಡಿತದ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಬೆನ್ನಲ್ಲೇ ಕಳೆದ ಬುಧವಾರ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ತಿಳಿದು ಬಂದಿದೆ.

ವರದಿಗಳ ಪ್ರಕಾರ, ಕಂಪನಿ ಈ ವರ್ಷ ನಷ್ಟ ಅನುಭವಿಸಿರುವುದೂ ಉದ್ಯೋಗಿಗಳ ವಜಾಕ್ಕೆ ಮತ್ತೊಂದು ಕಾರಣ. 2023ರಲ್ಲಿ ಕಂಪನಿ ಸುಮಾರು 28,300 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಈ ವರ್ಷ ವಿವಿಧ ಕಾರಣಗಳಿಗೆ ಒಟ್ಟು 800 ಉದ್ಯೋಗಿಗಳನ್ನು ಶೇರ್‌ ಚಾಟ್ ಕೈ ಬಿಟ್ಟಿದೆ. ಎಐ ತಂತ್ರಜ್ಞಾನ ಅಳವಡಿಕೆಯೂ ಉದ್ಯೋಗಿಗಳ ವಜಾಕ್ಕೆ ಮಗದೊಂದು ಕಾರಣ ಎನ್ನಲಾಗಿದೆ.

ಈ ಕುರಿತು ನಾನೂ ಗೌರಿ ಜೊತೆ ಮಾತನಾಡಿರುವ ಕಂಪನಿಯ ಉದ್ಯೋಗಿಯೊಬ್ಬರು, “ವಜಾಗೊಳಿಸುವ ಮುನ್ನ ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡಿಲ್ಲ. ಏಕಾಏಕಿ ವಜಾ ಪ್ರಕ್ರಿಯೆ ನಡೆದಿದೆ. ವಜಾಗೊಂಡವರು ಕಚೇರಿಗೆ ಬಂದು ಇಡೀ ದಿನ ಮಾಡುವ ಕೆಲಸಗಳೇನು ಇರಲಿಲ್ಲ. ಉದ್ಯೋಗಿಗಳ ಸಂಖ್ಯೆ ಅಗತ್ಯಕ್ಕಿಂತ ಹೆಚ್ಚಿತ್ತು. ಇದು ಕೂಡ ವಜಾಕ್ಕೆ ಕಾರಣ. ನನಗೆ ತಿಳಿದಿರುವ ಪ್ರಕಾರ, ವಜಾಗೊಂಡವರಿಗೆ ಕಂಪನಿ ಮುಂದಿನ ಮೂರು ತಿಂಗಳ ವೇತನ ಪಾವತಿಸಿದೆ. ಆದರೆ, ಏಕಾಏಕಿ ಕೆಲಸ ಕಳೆದುಕೊಂಡವರು ಅತಂತ್ರರಾಗಿದ್ದಾರೆ” ಎಂದು ಹೇಳಿದ್ದಾರೆ.

ಅತಂತ್ರರಾದ ಉದ್ಯೋಗಿಗಳು : ಕೋವಿಡ್ ಸಾಂಕ್ರಾಮಿಕದ ಬಳಿಕ ಕಾರ್ಪೋರೇಟ್ ಸಂಸ್ಥೆಗಳು ಉದ್ಯೋಗಿಗಳ ವಜಾಗೊಳಿಸುವಿಕೆ ನಡೆಸುತ್ತಿವೆ. ಟೆಕ್ ದೈತ್ಯಗಳಾದ ಗೂಗಲ್, ಮೈಕ್ರೋಸಾಫ್ಟ್, ಇನ್ಪೋಸಿಸ್, ವಿಪ್ರೋಗಳು ಕೂಡ ಇದಕ್ಕೆ ಹೊರತಾಗಿಲ್ಲ. ವಜಾಗೊಳಿಸುವಿಕೆಗೆ ಕಂಪನಿಗಳು ನೀಡುತ್ತಿರುವ ಕಾರಣ ವೆಚ್ಚ ಕಡಿತ ಮತ್ತು ಎಐ ತಂತ್ರಜ್ಞಾನದ ಅನುಷ್ಠಾನ. ಏನೇ ಆದರೂ, ಕಂಪನಿಗಳ ದಿಢೀರ್ ನಿರ್ಧಾರದಿಂದ ಕೆಲಸ ಕಳೆದುಕೊಂಡ ಉದ್ಯೋಗಿಗಳು ಮಾತ್ರ ಅಕ್ಷರಶಃ ಬೀದಿಗೆ ಬೀಳುತ್ತಿದ್ದಾರೆ.

ತಮ್ಮ ಸಂಬಳಕ್ಕೆ ತಕ್ಕಂತೆ ನಗರಕ್ಕೆ ಬಂದು ಜೀವನ ರೂಪಿಸಿಕೊಂಡಿರುವ ಉದ್ಯೋಗಿಗಳು, ಹಠಾತ್ ಕೆಲಸ ಕಳೆದುಕೊಂಡಾಗ ಹೊಸ ಕೆಲಸ ಹುಡುಕುವ ಅನಿವಾರ್ಯತೆ ಎದುರಾಗುತ್ತದೆ. ಹೊಸ ಕೆಲಸ ಸಿಗುವವರೆಗೆ ಕೈಯಲ್ಲಿ ಕೆಲಸ, ಸಂಬಳ ಇಲ್ಲದೆ ಬೆಂಗಳೂರಿನಂತಹ ನಗರಗಳಲ್ಲಿ ಬದುಕುದು ಅಸಾಧ್ಯ. ಹೊಸ ಕೆಲಸ ಹುಡುಕೋಣ ಎಂದರೆ ತ್ವರಿತವಾಗಿ ಎಲ್ಲೂ ಕೆಲಸ ಸಿದ್ದ ಇರುವುದಿಲ್ಲ. ತಮ್ಮ ಶಿಕ್ಷಣ, ಅನುಭವಕ್ಕೆ ತಕ್ಕಂತೆ ಕೆಲಸದ ಅವಕಾಶಗಳನ್ನು ಹುಡುಕಬೇಕು. ಎಲ್ಲಾದರು ಅವಕಾಶ ಇದ್ದರೆ ಲಿಖಿತ ಪರೀಕ್ಷೆ, ಸಂದರ್ಶನಕ್ಕೆ ಹಾಜರಾಗಬೇಕು. ಅದರಲ್ಲಿ ಯಶಸ್ವಿಯಾದರೆ ಮುಂದೆ ಸಂಬಳ ಹೊಂದಾಣಿಕೆಯಾಗಬೇಕು. ಉದ್ಯೋಗಿ ವಜಾಗೊಂಡವರು ಎಂದು ಗೊತ್ತಾದರೆ ಸಂಸ್ಥೆಗಳು ನೋಡುವ ರೀತಿಯೇ ಬೇರೆ. ಎಲ್ಲಾ ಸವಾಲುಗಳನ್ನು ಎದುರಿಸಿ ಕೊನೆಗೆ ಕೆಲಸ ಗಿಟ್ಟಿಸಿಕೊಳ್ಳುವ ಹೊತ್ತಿಗೆ ಬಡ, ಮಧ್ಯಮ ವರ್ಗದ ಯುವ ಜನತೆಯ ಜೀವನ ಬೀದಿಗೆ ಬಂದಿರುತ್ತದೆ. ಒಂದು ವಜಾಗೊಳಿಸುವಿಕೆ ದೊಡ್ಡ ಸಂಕಷ್ಟಕ್ಕೆ ತಳ್ಳಿ ಬಿಡುತ್ತದೆ.

ಇದನ್ನೂ ಓದಿ : WFI ಆಡಳಿತ ಮಂಡಳಿ ಅಮಾನತುಗೊಂಡಿಲ್ಲ, ಗೊಂದಲ ಸೃಷ್ಟಿಸಲು ಚಟುವಟಿಕೆ ಸ್ಥಗಿತ: ಪ್ರಿಯಾಂಕಾ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೈಸೂರು-ಕೊಡಗು ಸಂಸದ ಯದುವೀರ್‌ ಒಡೆಯರ್‌ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್‌ಗೆ ಅರ್ಜಿ

0
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯ್ಕೆ ಅಸಿಂಧುಗೊಳಿ, ಮರು ಚುನಾವಣೆ ನಡೆಸಲು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ. ಸಕಾರಣವಿಲ್ಲದೆ ತನ್ನ ನಾಮಪತ್ರ...