Homeಕರ್ನಾಟಕಕೊಪ್ಪಳ: ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್‌ಗೆ ಸುವರ್ಣಾವಕಾಶ!?

ಕೊಪ್ಪಳ: ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್‌ಗೆ ಸುವರ್ಣಾವಕಾಶ!?

- Advertisement -
- Advertisement -

ಹಿಂದುತ್ವ ರಾಜಕಾರಣದ ವಿಚಾರದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಕಳೆದ ಒಂದೂವರೆ ದಶಕದಿಂದ ಥೇಟ್ ಚಿಕ್ಕಮಗಳೂರು-ಶಿವಮೊಗ್ಗದ ತದ್ರೂಪಿ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಹಿಂದುತ್ವದ ಅಜೆಂಡಾ ಇಲ್ಲಿ ನಿರ್ಣಾಯಕ. ಆದರೆ, 2014ರಲ್ಲಿ ಲೋಕಸಭಾ ಕಣಕ್ಕೆ ಸಂಗಣ್ಣ ಕರಡಿ ಪ್ರವೇಶದೊಂದಿಗೆ ವ್ಯಕ್ತಿಗತ ಸ್ವಪ್ರತಿಷ್ಠೆಗೂ ಕೊಪ್ಪಳ ವೇದಿಕೆಯಾಗಿದೆ. ಮೋದಿ ಅಲೆ ಠುಸ್ ಎನಿಸಿರುವ, ಹಿಂದುತ್ವವೂ ಬಳಲಿ ಬೆಂಡಾಗಿರುವ 2024ರ ಕೊಪ್ಪಳ ಚುನಾವಣೆಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಪಾಲಿಗೆ ಸ್ವಪ್ರತಿಷ್ಠೆ ಕೈಹಿಡಿದರಷ್ಟೇ ಗೆಲುವು ಎಂಬ ವಾತಾವರಣ ನಿರ್ಮಾಣವಾಗಿದೆ.

ಅಸಲಿಗೆ ರಾಜ್ಯದಲ್ಲಿ ವಿಭಿನ್ನತೆಗೆ ಹೆಸರಾದ ಕ್ಷೇತ್ರಗಳ ಪೈಕಿ ಕೊಪ್ಪಳವೂ ಒಂದು. ಸ್ವಾತಂತ್ರ್ಯಾನಂತರ ಮೊದಲ ಚುನಾವಣೆ 1952ರಲ್ಲಿ ಈ ಕ್ಷೇತ್ರವನ್ನು ಕುಷ್ಟಗಿ ಲೋಕಸಭಾ ಕ್ಷೇತ್ರ ಎಂದು ಹೆಸರಿಸಲಾಗಿತ್ತು. ದೇಶದಾದ್ಯಂತ ಕಾಂಗ್ರೆಸ್ ಅಲೆ, ರಾಜ್ಯದಲ್ಲಿ ಕೆಂಗಲ್ ಹನುಮಂತಯ್ಯನವರ ವರ್ಚಸ್ಸಿನ ನಡುವೆಯೂ ಶಿವಮೂರ್ತಿ ಅಳವಂಡಿ ಪಕ್ಷೇತರರಾಗಿ ಲೋಕಸಭಾ ಸದಸ್ಯರಾಗಿ ಸಂಸತ್ ಮೆಟ್ಟಿಲೇರಿದ್ದು ಇತಿಹಾಸ.

ತದನಂತರ ಕಾಲಘಟ್ಟದಲ್ಲಿ ಇಂದಿರಾ ಗಾಂಧಿ ಅವರ ಪರಮಾಪ್ತರಾದ ಎಚ್.ಜಿ. ರಾಮುಲು ಈ ಕ್ಷೇತ್ರದಲ್ಲಿ 4 ಬಾರಿ ಗೆಲುವು ಕಂಡು ದಾಖಲೆ ಬರೆದಿದ್ದರು. ಕೊಪ್ಪಳವನ್ನು ಕಾಂಗ್ರೆಸ್ ಭದ್ರಕೋಟೆಯನ್ನಾಗಿಸುವ ನಿಟ್ಟಿನಲ್ಲಿ ಎಚ್.ಜಿ. ರಾಮುಲು ಅವರ ಪಾತ್ರ ದೊಡ್ಡದು. ಆದರೆ, ಸರಿಯಾಗಿ ಎರಡು ದಶಕಗಳ ಹಿಂದೆ ಗಂಗಾವತಿಯಲ್ಲಿ ಮೊಕ್ಕಾಂ ಹೂಡಿದ್ದ ಹಿಂದುತ್ವ ಸಂಘಟನೆಗಳು ಥೇಟ್ ಚಿಕ್ಕಮಗಳೂರಿನ ದತ್ತಪೀಠದ ರೀತಿಯಲ್ಲೇ, ಹನುಮ ಹುಟ್ಟಿದ ಸ್ಥಳ ಎಂದು ಹಿಂದೂ ಜನಸಮೂಹದಿಂದ ನಂಬಲಾಗುವ ಅಂಜನಾದ್ರಿ ಪರ್ವತದಿಂದ ತಮ್ಮ ಎಂದಿನ ಹಿಂದುತ್ವ ರಾಜಕೀಯ ಆಟವಾಡಿ ಕೋಮು ಧ್ರುವೀಕರಣ ಶುರು ಮಾಡಿದ್ದವು.

ಎಚ್.ಜಿ. ರಾಮುಲು

ಪರಿಣಾಮ ಕೊಪ್ಪಳ ಜಿಲ್ಲೆಯ ರಾಜಕೀಯ ಕಣವೇ ಸಂಪೂರ್ಣ ಬದಲಾಗಿಹೋಯ್ತು. ಕೋಮುವಾದದ ಬೆಳೆ ಬಿತ್ತಿ ಮೊದಲ ಫಲ ಉಂಡವರು ಮಾಜಿ ಸಂಸದರಾದ ಶಿವರಾಮೇಗೌಡ. 2009ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಿವರಾಮೇಗೌಡ ಅಂದಿನ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 89,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದರು. ಆದರೆ, 2014ರ ಚುನಾವಣೆಯಲ್ಲಿ ಶಿವರಾಮೇಗೌಡ ಅವರನ್ನು ಒತ್ತಾಯಪೂರ್ವಕವಾಗಿ ಕೆಳಗಿಳಿಸಿದ್ದ ಬಿಜೆಪಿ ಕೊಪ್ಪಳದ ಜನಪ್ರಿಯ ನಾಯಕರಾದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ನೀಡಿ ಎರಡು ಅವಧಿಗೆ ಗೆಲ್ಲಿಸಿಕೊಂಡು ಬಂದಿತ್ತು. ಆದರೆ, ಈ ಬಾರಿಯ ಚಿತ್ರಣ ಸಂಪೂರ್ಣ ಬದಲಾಗಿದೆ.

ಸಂಗಣ್ಣನಿಗೆ ಕೊಕ್ ಕೊಟ್ಟು ಕೆಟ್ಟಿತಾ ಬಿಜೆಪಿ?

ಸಂಗಣ್ಣ ಕರಡಿ ಕೊಪ್ಪಳ ಜಿಲ್ಲೆಯ ಪಾಲಿನ ಜನಪ್ರಿಯ ನಾಯಕ. ಯಾವುದೇ ಪಕ್ಷದ ಚಿಹ್ನೆ ಇಲ್ಲದೆಯೂ ಪಕ್ಷೇತರನಾಗಿ ಗೆದ್ದು ಬರುವ ಶಕ್ತಿ ಹೊಂದಿರುವ ನಾಯಕ ಎಂದೇ ಪ್ರಸದ್ಧಿ ಪಡೆದಿದ್ದಾರೆ. ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸಂಗಣ್ಣ ಕರಡಿ, 2013ರಲ್ಲಿ ಸೋಲುಂಡ ಕಾರಣ ಬಿಜೆಪಿ ಸೇರ್ಪಡೆಯಾಗಿದ್ದರು. 2014ರ ಲೋಕಸಭಾ ಟಿಕೆಟ್‌ಅನ್ನೂ ಗಿಟ್ಟಿಸಿದ್ದರು. ಹಿಂದುತ್ವದ ಬಲ, ಮೋದಿ ಅಲೆ ಹಾಗೂ ಸ್ವಪ್ರತಿಷ್ಠೆಯ ಕಾರಣಕ್ಕೆ ಸಂಗಣ್ಣ ಕರಡಿ ಎರಡು ಅವಧಿಗೆ ಗೆದ್ದು ಸಂಸತ್‌ನಲ್ಲಿ ಕೊಪ್ಪಳವನ್ನು ಪ್ರತಿನಿಧಿಸಿದ್ದರು. ಕೊಪ್ಪಳವೂ ಬಿಜೆಪಿ ಭದ್ರಕೋಟೆಯಾಗಿ ಮಾರ್ಪಾಡಾಗಿತ್ತು. ಆದರೆ, ಈ ಬಾರಿ ಬಿಜೆಪಿ ಅವರಿಗೆ ಟಿಕೆಟ್ ನಿರಾಕರಿಸಿರುವುದು ತೀರಾ ಅನಿರೀಕ್ಷಿತ.

ಕೊಪ್ಪಳ ಜಿಲ್ಲೆಯಲ್ಲಿ ಈವರೆಗೆ ಯಾರೂ ಹ್ಯಾಟ್ರಿಕ್ ಗೆಲುವು ಸಾಧಿಸಿದ ಇತಿಹಾಸ ಇಲ್ಲ. ಎಚ್.ಜಿ. ರಾಮುಲು ಈ ಕ್ಷೇತ್ರದಿಂದ 4 ಬಾರಿ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದ್ದರೂ ಮಧ್ಯೆ ಎರಡು ಬಾರಿ ಸೋಲುಂಡಿದ್ದರು. ಹೀಗಾಗಿ ಸಂಗಣ್ಣ ಕರಡಿ ಹ್ಯಾಟ್ರಿಕ್ ಗೆಲುವು ಸಾಧಿಸಿ ದಾಖಲೆ ಬರೆಯುವ ಹುಮ್ಮಸ್ಸಿನಲ್ಲಿದ್ದರು. ಆದರೆ, ಬಿಜೆಪಿಯಿಂದ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಅಲ್ಲದೆ, ಟಿಕೆಟ್ ನಿರಾಕರಣೆಗೆ ಬಿಜೆಪಿ ಹೈಕಮಾಂಡ್ ನಿಖರ ಕಾರಣವನ್ನೂ ತಿಳಿಸದೆ ಇರುವುದು ಸಂಗಣ್ಣ ಕರಡಿ ಅವರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ.

ಕಳೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿ ಯಶಸ್ಸು ಕಂಡಿತ್ತು. ಅದೇ ತಂತ್ರದ ಭಾಗವಾಗಿ ಈಗ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಹೊಸಮುಖ ಡಾ. ಬಸವರಾಜ ಕ್ಯಾವಟರ್ ಅವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಅಸಮಾಧಾನಕ್ಕೆ ಒಳಗಾಗಿರುವ ಸಂಗಣ್ಣ ಕರಡಿ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಒಲ್ಲದ ಮನಸ್ಸಿನಲ್ಲೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ತಮ್ಮ ರಾಜಕೀಯ ಹಿನ್ನಡೆಗೆ ಬಿಜೆಪಿಯಲ್ಲಿರುವ ಹಲವರು ಕಾರಣ ಎಂದು ಆರೋಪಿಸಿ, ತಮ್ಮ 30 ವರ್ಷಗಳ ರಾಜಕೀಯ ಎದುರಾಳಿ ಹಿಟ್ನಾಳ ಕುಟುಂಬದ ಪರ ಮತ ಕೇಳುತ್ತಿದ್ದಾರೆ.

ಬಿಜೆಪಿಯನ್ನು ಈ ಬಾರಿ ಸೋಲಿಸಿ ಮುಯ್ಯಿ ತೀರಿಸಿಕೊಳ್ಳುವುದಾಗಿ ಈಗಾಗಲೇ ಘೋಷಿಸಿರುವ ಸಂಗಣ್ಣ ಕರಡಿ ಕುಟುಂಬ ಸಮೇತರಾಗಿ ಬೀದಿಗಿಳಿದು ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸುತ್ತಿದ್ದಾರೆ. ಸ್ಥಳೀಯ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಸಚಿವ ಕೃಷ್ಣ ಬೈರೇಗೌಡ ಅವರ ಜೊತೆ ಸೇರಿ ಹಿಟ್ನಾಳ್ ಪರ ಅವರು ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿರುವುದು ಇಡೀ ಕ್ಷೇತ್ರದ ಜನರ ಹುಬ್ಬೇರುವಂತೆ ಮಾಡಿದೆ.

ಸಂಗಣ್ಣ ಕರಡಿ

ಲಿಂಗಾಯತ ಸಮುದಾಯದ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ಸಂಗಣ್ಣ ಕರಡಿ ಕಾಂಗ್ರೆಸ್ ಜೊತೆ ಕೈಜೋಡಿಸುವ ಮೂಲಕ ಲಿಂಗಾಯತ ಮತಗಳನ್ನು ಒಡೆಯುತ್ತಾರೆಯೇ? ಎಂಬ ಆತಂಕದ ಜೊತೆಗೆ ಜಿಲ್ಲೆಯಲ್ಲಿ ರಾಜಕೀಯವಾಗಿ ಬಲಿಷ್ಠವಾಗಿರುವ ಹಿಟ್ನಾಳ್ ಹಾಗೂ ಕರಡಿ ಕುಟುಂಬ ಈ ಚುನಾವಣೆಯಲ್ಲಿ ಒಂದಾಗಿರುವುದು ಬಿಜೆಪಿ ಪಾಲಿಗೆ ಪಾಲಿಗೆ ನುಂಗಲಾರದ ತುತ್ತಾಗಿದೆ. ಅಲ್ಲದೆ ಹಿಟ್ನಾಳ್ ಅವರ ಸ್ವಸಮುದಾಯ ಕುರುಬ ಮತಗಳು ಕೂಡ ದೊಡ್ಡ ಸಂಖ್ಯೆಯಲ್ಲಿದ್ದು, ಸಿದ್ದರಾಮಯ್ಯನವರ ಕಾರಣಕ್ಕೂ ಅವು ಇಡುಗಂಟಿನಲ್ಲಿ ಕಾಂಗ್ರೆಸ್ ಪಾಲಾಗಲಿವೆ ಎನ್ನಲಾಗುತ್ತಿದೆ. ಆದುದರಿಂದ ಕಾಂಗ್ರೆಸ್ ಪಾಲಿಗೆ ಈ ಚುನಾವಣೆ ಬಿಜೆಪಿ ಕೋಟೆ ಭೇದಿಸುವ ಕೊನೆಯ ಅವಕಾಶ ಎನಿಸಿಕೊಂಡಿದೆ.

ಚುನಾವಣೆಗೆ ಮುನ್ನವೇ ಆಪರೇಷನ್ ಕಮಲ, ಬಿಜೆಪಿಗೆ ರೆಡ್ಡಿ ಬಲ!

ಕೊಪ್ಪಳ ಲೋಕಸಭಾ ಚುನಾವಣೆ ಬಿಜೆಪಿಯ ಹಲವು ನಾಯಕರ ಪಾಲಿನ ಅಳಿವು-ಉಳಿವಿನ ಪ್ರಶ್ನೆ ಎಂದೇ ಬಣ್ಣಿಸಲಾಗಿದೆ. ಏಕೆಂದರೆ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕೊಪ್ಪಳದ 6 ಕ್ಷೇತ್ರಗಳನ್ನು ವಶಪಡಿಸಿಕೊಳ್ಳುವಲ್ಲಿ ಕಾಂಗ್ರೆಸ್ ಸಫಲವಾಗಿದ್ದರೆ, ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ದಕ್ಕಿದ್ದು ಕೇವಲ 1 ಕ್ಷೇತ್ರ ಮಾತ್ರ. ಹೀಗಾಗಿ ತಾವು ಬೆಂಬಲ ನೀಡಿದ ಅಭ್ಯರ್ಥಿಗಳು ಗೆದ್ದರೆ ಮಾತ್ರ ತಮ್ಮ ಮುಂದಿನ ರಾಜಕೀಯ ನಡೆ ಮತ್ತಷ್ಟು ಗಟ್ಟಿಯಾಗುವುದು ಎಂಬುದು ಸ್ಥಳೀಯ ಬಿಜೆಪಿ ನಾಯಕರ ಲೆಕ್ಕಾಚಾರ.

ಈ ಲೆಕ್ಕಾಚಾರದ ಭಾಗವಾಗಿಯೇ ಶಾಸಕ ದೊಡ್ಡನಗೌಡ, ಮಾಜಿ ಸಚಿವ ಹಾಲಪ್ಪ ಆಚಾರ್, ಮಾಜಿ ಶಾಸಕ ಪರಣ್ಣ ಮುನವಳ್ಳಿ, ವಿಧಾನಸಭೆ ಪ್ರತಿಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣಗಳವರ, ಮಾಜಿ ಶಾಸಕ ಬಸವರಾಜ ದಢೇಸೂಗೂರು, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ಸೇರಿ ಹಲವು ನಾಯಕರು ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ತಮ್ಮಿಂದಾದ ಎಲ್ಲಾ ಕಸರತ್ತುಗಳನ್ನೂ ನಡೆಸುತ್ತಿದ್ದಾರೆ. ಈ ಪೈಕಿ ಆಪರೇಷನ್ ಕಮಲವೂ ಒಂದು.

ಇದನ್ನೂ ಓದಿ: FACT CHECK : ಬಿಜೆಪಿ ಮಾತ್ರ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂಬ ಮೋದಿ…

ಬಿಜೆಪಿ ಸಾಮಾನ್ಯವಾಗಿ ಚುನಾವಣೆಯ ನಂತರ ಆಪರೇಷನ್ ಮಾಡುವುದು ವಾಡಿಕೆ. ಆದರೆ, ಈ ಬಾರಿ ಚುನಾವಣೆಗೆ ಮುನ್ನವೇ ಕೊಪ್ಪಳ ಕ್ಷೇತ್ರದಲ್ಲಿ ಆಪರೇಷನ್ ಕಸರತ್ತಿಗೆ ಮುಂದಾಗಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಪಂಚಮಸಾಲಿ ಸಮುದಾಯದವರಾಗಿದ್ದು, ಇದೇ ಸಮುದಾಯದ ಮಾಜಿ ಸಂಸದ ಶಿವರಾಮೇಗೌಡ ಅವರ ಸೇರ್ಪಡೆಯಿಂದ ಮತಗಳ ಕ್ರೋಢೀಕರಣಕ್ಕೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಅವರನ್ನು ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಮತ್ತೆ ಬಿಜೆಪಿಗೆ ಕರೆತರಲಾಗಿದೆ.

ಜನಾರ್ದನ ರೆಡ್ಡಿ

ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಕಳೆದ ಒಂದು ದಶಕದಿಂದ ಮುಚ್ಚಲಾಗಿದ್ದ ಬಿಜೆಪಿ ಬಾಗಿಲನ್ನು ಈ ಬಾರಿಯ ಚುನಾವಣೆ ಗೆಲುವಿಗಾಗಿ ತೆರೆಯಲಾಗಿದೆ. ಈ ಬೆಳವಣಿಗೆ ಬಿಜೆಪಿ ಬಲವನ್ನು ಕ್ಷೇತ್ರದಲ್ಲಿ ಇಮ್ಮಡಿಗೊಳಿಸಿದ್ದು, ಇನ್ನೂ ಹಲವು ಸಮುದಾಯಗಳ ನಾಯಕರಿಗೆ ಬಲೆ ಬೀಸಲಾಗಿದೆ ಎಂಬ ವರ್ತಮಾನವೂ ಬರುತ್ತಿದೆ.

ಸಮುದಾಯಗಳ ಬಲಾಬಲ?

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18,41,560 ಮತಗಳಿದ್ದು, ಅವುಗಳಲ್ಲಿ ಅಂದಾಜು 5 ಲಕ್ಷಕ್ಕೂ ಹೆಚ್ಚು ಲಿಂಗಾಯತ ಮತಗಳಿವೆ. ಈವರೆಗೆ ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದ ಲಿಂಗಾಯತ ಮತಗಳು ಈ ಬಾರಿ ಒಡೆದರೆ ಅಚ್ಚರಿ ಇಲ್ಲ. ಇದಲ್ಲದೆ, ಕ್ಷೇತ್ರದಲ್ಲಿ 4 ಲಕ್ಷ ಕುರುಬ, 4 ಲಕ್ಷ ಎಸ್‌ಸಿ, ಎಸ್‌ಟಿ ಹಾಗೂ 2 ಲಕ್ಷ ಮುಸ್ಲಿಂ ಮತದಾರರಿದ್ದಾರೆ. ಅಹಿಂದ ಒಳಗಿನ ಇತರೆ ಸಣ್ಣ ಜಾತಿ-ಪಂಗಡಗಳ ಒಟ್ಟು 3 ಲಕ್ಷ ಮತಗಳು ಇವೆ. ಲಿಂಗಾಯತರ, ಕುರುಬರ, ದಲಿತರ ಹಾಗೂ ಮುಸ್ಲಿಂ ಮತಗಳೇ ಇಲ್ಲಿನ ಅಭ್ಯರ್ಥಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

ಒಟ್ಟಿನಲ್ಲಿ ಬಿಜೆಪಿ ಈ ಬಾರಿ ಕೊಪ್ಪಳ ಕ್ಷೇತ್ರವನ್ನು ಪ್ರಯೋಗಕ್ಕೆ ಒಡ್ಡಿದೆ. ಉತ್ತರ ಭಾರತದಲ್ಲಿ ಕೈಹಿಡಿದ ಹೊಸ ಮುಖದ ಪ್ರಯೋಗ ಕರ್ನಾಟಕದಲ್ಲೂ ಕೈಹಿಡಿಯಲಿದೆ ಎಂಬ ಆಶಾಭಾವನೆಯಲ್ಲಿದೆ. ಗಂಗಾವತಿಯಲ್ಲಿ ಬೇರುಬಿಟ್ಟಿರುವ ಹಿಂದುತ್ವ ರಾಜಕಾರಣ ಹಾಗೂ ಗಾಲಿ ಜನಾರ್ದನ ರೆಡ್ಡಿ ಪ್ರತಿಷ್ಠೆ, ಜನಪ್ರಿಯತೆ ಹಾಗೂ ಹಣಬಲ ಗೆಲುವು ತಂದುಕೊಡಲಿದೆ ಎಂಬ ಭರವಸೆಯಲ್ಲಿದ್ದಾರೆ.

ಮತ್ತೊಂದು ಕಡೆ ರಾಜಕೀಯವಾಗಿ ಇಡೀ ಜಿಲ್ಲೆಯಲ್ಲಿ ಪ್ರತಿಷ್ಠೆಯ ಕುಟುಂಬ ಎನಿಸಿಕೊಂಡಿರುವ ಹಿಟ್ನಾಳ್-ಕರಡಿ ಕುಟುಂಬ ಒಂದಾಗಿದ್ದು ಜನಪ್ರಿಯತೆ ಆಧಾರದಲ್ಲಿ ಕೊಪ್ಪಳದಲ್ಲಿ ಕಾಂಗ್ರೆಸ್ ಖಾತೆ ತೆರೆಯುವ ಕನಸು ಕಂಡಿದೆ. ಮತದಾರರು ಮತಪೆಟ್ಟಿಗೆಯಲ್ಲಿ ತನ್ನ ಸ್ಪಷ್ಟ ಉತ್ತರ ಬರೆಯಲಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...