Homeಕರ್ನಾಟಕವಿಚಾರಕ್ರಾಂತಿಗೆ ಆಹ್ವಾನ: ಆಗ- ಈಗ

ವಿಚಾರಕ್ರಾಂತಿಗೆ ಆಹ್ವಾನ: ಆಗ- ಈಗ

- Advertisement -
- Advertisement -

ಡಿಸೆಂಬರ್ 8, 1974ರಂದು ಶ್ರೀಕುವೆಂಪು ಅವರು ಬೆಂಗಳೂರು ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವದಲ್ಲಿ ಸ್ನಾತಕರನ್ನು ಉದ್ದೇಶಿಸಿ ಮಾತನಾಡಿದರು. ಈ ಸಮಾರಂಭ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಿತು, ಕುವೆಂಪು ಅವರ ಈ ಉಪನ್ಯಾಸ ಆಗ ಮತ್ತು ಅನಂತರದಲ್ಲಿ ಬಹುಚರ್ಚಿತವಾಗಿದೆ. ಅದೇ ವರುಶ ಏಪ್ರಿಲ್‌ನಲ್ಲಿ ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಬರಹಗಾರರ ಒಕ್ಕೂಟದ ಉದ್ಘಾಟನೆಯ ಹೊತ್ತಿನಲ್ಲಿ ಅವರೇ ನೀಡಿದ ’ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ ಎಂಬ ಉಪನ್ಯಾಸ ಹಲವು ವಿವಾದಗಳಿಗೆ ಒಳಗಾಯಿತು. ಬೆಂಗಳೂರಿನ ಉಪನ್ಯಾಸ ಹಾಗೆ ಯಾವ ವಿವಾದಕ್ಕೂ ಕಾರಣವಾಗಲಿಲ್ಲ. 1944ರಲ್ಲಿ ಪ್ರಕಟಗೊಂಡ ಕುವೆಂಪು ಅವರದ್ದೇ ಆದ ನಾಲ್ಕು ಉಪನ್ಯಾಸ ಬರಹಗಳ ಸಂಕಲನ ’ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ’ ಎಂಬುದರ ಮುಂದುವರಿಕೆ ಎಂಬಂತೆ ಪರಿಗಣಿತವಾಯಿತು. ಸುಮಾರು ಮೂವತ್ತು ವರುಶಗಳ ಬಳಿಕ 1963ರಲ್ಲಿ ಇದೇ ಹೊತ್ತಿಗೆಯ ಮರುಮುದ್ರಣಕ್ಕೆ ಬರೆದ ಮೊದಲ ಮಾತುಗಳಲ್ಲಿಯೂ ಅವರ ಚಿಂತನೆಯ ಸ್ವರೂಪ ಯಾವ ನೆಲೆಯಲ್ಲಿ ರೂಪುಗೊಳ್ಳುತ್ತಿತ್ತು ಎಂಬುದು ತಿಳಿಯುತ್ತದೆ.

1974ರ ಹೊತ್ತಿನಲ್ಲಿ ಕರ್ನಾಟಕದಲ್ಲಿ, ಇಂಡಿಯಾದಲ್ಲಿ ಅಷ್ಟೇಕೆ ಜಾಗತಿಕವಾಗಿ ಹಲವು ಬಿಕ್ಕಟ್ಟುಗಳು ಉಂಟಾಗುತ್ತಿದ್ದವು; ಇಂತಹ ಕೆಲವು ಬಿಕ್ಕಟ್ಟುಗಳನ್ನು ಪರಿಹರಿಸಿಕೊಳ್ಳಲು ಯತ್ನಗಳೂ ನಡೆಯುತ್ತಿದ್ದವು. ಇಂಡಿಯಾದ ಮಟ್ಟಿಗೆ ಅದು ತುರ್ತು ಪರಿಸ್ಥಿತಿ ಘೋಷಣೆಯಾಗುವ ಮುನ್ನಾ ದಿನಗಳು. ಆ ಸರಿಸುಮಾರಿಗಾಗಲೇ ಜಯಪ್ರಕಾಶ ನಾರಾಯಣ ಅವರು ಮೊದಲು ಮಾಡಿದ್ದ ಸಂಪೂರ್ಣ ಕ್ರಾಂತಿಯ ಚಳವಳಿ ನಾಡಿನ ಹಲವು ಕಡೆಗಳಲ್ಲಿ ವ್ಯಾಪಿಸುತ್ತಿತ್ತು. ಕರ್ನಾಟಕದಲ್ಲೂ ಅದರ ಕೆಲವು ಚಾಚುಗಳು ಕಾಣಿಸತೊಡಗಿದ್ದವು. ಮುದ್ರಣ ಮಾಧ್ಯಮದ ಒಂದು ಭಾಗ ಈ ಚಳವಳಿಯ ವ್ಯಾಪಕ ಪ್ರಚಾರಕ್ಕೆ ಪೂರಕವಾದ ವಾತಾವರಣವನ್ನು ಕಟ್ಟಿಕೊಡುತ್ತಿತ್ತು. ಮುಂಬಯಿಯಿಂದ ಹೊರಬರುತ್ತಿದ್ದ “Everyman’s” ಎಂಬ ವಾರಪತ್ರಿಕೆ ಈ ಉದ್ದೇಶವನ್ನು ಮುಂದಿಟ್ಟುಕೊಂಡಿತ್ತು. ಸಂಪೂರ್ಣ ಕ್ರಾಂತಿಗೆ ಕರೆಕೊಟ್ಟಿದ್ದ ಈ ಚಳವಳಿ ನೇರವಾಗಿ ಅಧಿಕಾರ ಕೇಂದ್ರಕ್ಕೆ ಸವಾಲನ್ನು ಹಾಕಿತ್ತು. ಮುಖ್ಯವಾಗಿ ಯುವಜನತೆಯನ್ನು ಸೆಳೆದುಕೊಂಡಿದ್ದ ಈ ಚಳವಳಿ ಆ ಹೊತ್ತಿಗೆ ಆರಂಭಗೊಂಡಿದ್ದ ರಾಜಕೀಯ ಧ್ರುವೀಕರಣದ ಜೊತೆಗೂ ತಳುಕು ಹಾಕಿಕೊಂಡಿತ್ತು. ಕೇಂದ್ರ ಸರಕಾರ ಈ ಚಳವಳಿಯನ್ನು ಬಲಪಂಥೀಯ ಶಕ್ತಿಗಳು ಮೇಲುಗೈ ಪಡೆಯಲು ನಡೆಸಿರುವ ಹುನ್ನಾರವೆಂದು ತಿಳಿಯಲು ಕಾರಣಗಳಿದ್ದವು. ಮುಂದಿನ ಕೆಲವು ವರುಶಗಳು ಈ ಗ್ರಹಿಕೆಯು ಸರಿಯಾಗಿಯೇ ಇತ್ತು ಎಂಬುದನ್ನು ತೋರಿಸಿಕೊಡಲಿದ್ದವು. ಅದೇನೇ ಇರಲಿ. ದೇಶದಲ್ಲಿ ಅದರಲ್ಲೂ ಯುವಜನತೆಯಲ್ಲಿ ಬದಲಾವಣೆಗಾಗಿ ತುಡಿಯುವ ನೆಲೆಯು ಬೇರೂರುವಂತಿತ್ತು.

ಕರ್ನಾಟಕದಲ್ಲೂ ಆ ಹೊತ್ತಿಗೆ ಬಸವಲಿಂಗಪ್ಪನವರು ಜಾರಿಗೊಳಿಸಿದ್ದ ಮಲ ಹೊರುವ ಪದ್ಧತಿಯ ನಿಷೇಧ ಕಾನೂನು ಮತ್ತು ಅವರದ್ದೇ ಒಂದು ಹೇಳಿಕೆಯನ್ನು ಆಧರಿಸಿ ನಡೆದಿದ್ದ ಬೂಸಾ ಚಳವಳಿ, ಹಾವನೂರು ವರದಿಯ ಮಂಡನೆ ಮತ್ತು ಜಾರಿಗೊಳಿಸಿದ್ದು, 1961ರ ಭೂ ಸುಧಾರಣೆಯ ಕಾನೂನನ್ನು ಇನ್ನಷ್ಟು ಪರಿಷ್ಕರಣೆಯೊಂದಿಗೆ ಜಾರಿಗೊಳಿಸಿದ್ದು ಇಂತಹುದೇ ಕೆಲವು ಬಹು ಮುಖ್ಯವಾದ ಮತ್ತು ಸಾಮಾಜಿಕ ನೆಲೆಯಲ್ಲಿ ಉದ್ವಿಗ್ನತೆಯನ್ನು ಉಂಟುಮಾಡುವ ಬದಲಾವಣೆಗಳು ನಡೆದಿದ್ದವು. ಕುವೆಂಪು ಅವರ ಈ ಉಪನ್ಯಾಸವನ್ನು ಹಿನ್ನೆಲೆಯಲ್ಲಿ ಗಮನಿಸುವ ಅಗತ್ಯವಿದೆ.

ಓದು ಮುಗಿಸಿ ದುಡಿಯುವ ವಲಯಕ್ಕೆ ಪ್ರವೇಶಿಸಲಿರುವ ಸ್ನಾತಕರನ್ನು ಉದ್ದೇಶಿಸಿ ಈ ಉಪನ್ಯಾಸ ಗುರಿಯಾಗಿ ಇರಿಸಿಕೊಂಡಿದೆ ಎಂದರೂ ಅದರಾಚೆಗೂ ಇರುವ ಯುವಜನ ಸಮೂಹವನ್ನು ಕೂಡಾ ಉದ್ದೇಶಿಸಿದೆ. ಈ ಸಂದರ್ಭದಲ್ಲೇ ಈ ಉಪನ್ಯಾಸವನ್ನು ನೀಡುವುದಕ್ಕೂ ಮೂವತ್ತು ವರುಶಗಳ ಹಿಂದೆ ಕುವೆಂಪು ಅವರು ಮಾಡಿದ್ದ ನಾಲ್ಕು ಉಪನ್ಯಾಸಗಳನ್ನು ಗಮನಿಸಬೇಕು. ಇಂಡಿಯಾದಲ್ಲಿ 1947ರಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆಯು ನಡೆಯಿತಾದರೂ ಆ ಬಳಿಕ ಇಪ್ಪತ್ತೈದು ವರುಶಗಳು ಕಳೆದರೂ ಆ ಮೊದಲು ಕಂಡಿದ್ದ ಕನಸುಗಳು ನನಸಾಗದೇ ಉಳಿದಿವೆ; ಅಲ್ಲದೆ ಮತ್ತಷ್ಟು ಹದಗೆಡುವ ಕಡೆಗೆ ಸಾಗುತ್ತಿದೆ ಎಂಬ ನಿಲುವು 1974ರ ಈ ಉಪನ್ಯಾಸದಲ್ಲಿದೆ. 1944ರ ಸುಮಾರಿನ ಉಪನ್ಯಾಸಗಳಲ್ಲಿ ಯುವಜನತೆಗೆ ಕರೆನೀಡುವಾಗ ಪರಕೀಯ ಆಳ್ವಿಕೆಯಿಂದ ಬಿಡಿಸಿಕೊಂಡು ಸಾಧಿಸಬೇಕಾದ ಗುರಿ ಮತ್ತು ಆದರ್ಶಗಳ ಕಡೆಗೆ ಸಾಗಲು ಸನ್ನದ್ಧರಾಗಬೇಕು ಎಂದು ಹುರಿದುಂಬಿಸುವ ಉದ್ದೇಶವಿದೆ. ಆದರೆ 1974ರ ಹೊತ್ತಿನಲ್ಲಿ ಈ ಉತ್ಸಾಹದ ದನಿ ಮೆದುಗೊಂಡಿದೆ. ಹೀಗೆ ಕರೆನೀಡುವ ಯಾವ ಮಾತುಗಳಾಗಲೀ ದಿಟವಾಗಿಯೂ ಕಾರ್ಯಶೀಲರಾಗಲು ಯುವಜನರನ್ನು ಪ್ರೇರೇಪಿಸಬಲ್ಲವೇ ಎಂಬ ಸಂಶಯ ಕೂಡ ಕುವೆಂಪು ಅವರ ಮಾತಿನಲ್ಲಿದೆ. ಮಹಾಭಾರತದ ಕೊನೆಯಲ್ಲಿ, ’ಯಾವುದು ಸರಿ ದಾರಿ, ಯಾವುದು ಅಲ್ಲ ಎಂಬುದನ್ನು ಎರಡೂ ಬಾಹುಗಳನ್ನೆತ್ತಿ ತಾನು ತೋರಿಸಿ ಹೇಳುತ್ತಿದ್ದರೂ ಹೋಗುವವರು ತನ್ನ ಈ ಮಾತುಗಳನ್ನು ಲೆಕ್ಕಿಸದೇ ತಂತಮ್ಮ ದಾರಿಯಲ್ಲಿ ಹೋಗುತ್ತಲೇ ಇದ್ದಾರೆ’ ಎಂದು ವ್ಯಾಸನು ವಿಷಣ್ಣತೆಯಲ್ಲಿ ನುಡಿಯುತ್ತಾನೆ. ಕುವೆಂಪು ಅವರ ಮಾತುಗಳಲ್ಲೂ ಈ ವಿಷಣ್ಣತೆ ತಲೆಹಾಕಿದೆ.

ಇದನ್ನೂ ಓದಿ: ವರ್ತಮಾನದ ತಲ್ಲಣಗಳ ನುಡಿಗನ್ನಡಿ ಕುವೆಂಪು

ಉಪನ್ಯಾಸದಲ್ಲಿ ಮೂರು ನೆಲೆಗಳಿವೆ. ಒಂದು: ಸಮಕಾಲೀನ ಸಂದರ್ಭದ ವಿಶ್ಲೇಷಣೆ, ಎರಡು: ಈ ಪರಿಸ್ಥಿತಿ ಉಂಟಾಗಲು ಇದ್ದಿರಬಹುದಾದ ಕಾರಣಗಳ ವಿವರಣೆ ಮತ್ತು ಮೂರು: ಈ ಬಿಕ್ಕಟ್ಟಿನಿಂದ ಹೊರಬರಲು ತುಳಿಯಬೇಕಾದ ದಾರಿಯ ಸೂಚನೆ. 1947ರ ಬಳಿಕ ಸ್ಥಳೀಯ ಆಡಳಿತ ವ್ಯವಸ್ಥೆ ಜಾರಿಗೆ ಬಂದಿತಾದರೂ ಆ ಆಡಳಿತವು ಕೈಗೊಂಡ ನಿರ್ಧಾರಗಳು ಮತ್ತು ಆ ನಿರ್ಧಾರಗಳನ್ನು ಜಾರಿಗೊಳಿಸಿದ ಕ್ರಮದಿಂದಾಗಿ ನಮ್ಮ ಬದುಕು ಏರುಪೇರಾಗುತ್ತಾ ನಡೆದಿದೆ ಎಂಬುದು ಕುವೆಂಪು ಅವರ ಗ್ರಹಿಕೆ. ಗಾಂಧಿ ಪ್ರತಿಪಾದಿಸಿದ ಹಾದಿಯನ್ನು ಬಿಟ್ಟು ಬೃಹದ್ ಗಾತ್ರದ ಮತ್ತು ಸಂಪನ್ಮೂಲಗಳನ್ನು ನುಂಗಿನೊಣೆಯುವ ಉತ್ಪಾದನಾ ವ್ಯವಸ್ಥೆಗಳನ್ನು ರೂಪಿಸಿದ್ದು ತಪ್ಪು; ಹೀಗೆ ಮಾಡಿದ್ದರಿಂದ ಜನಸಾಮಾನ್ಯರ ಅದರಲ್ಲೂ ಶ್ರಮಜೀವನವನ್ನು ನಡೆಸುತ್ತಿರುವವರ ಬದುಕು ಹಾಳಾಯಿತು ಎಂಬುದು ಕುವೆಂಪು ಅವರ ವಿಶ್ಲೇಷಣೆ. ಹೀಗೆ ತಪ್ಪು ನಿರ್ಣಯಗಳನ್ನು ಕೈಗೊಳ್ಳುವವರು ಆಡಳಿತದ ಚುಕ್ಕಾಣಿ ಹಿಡಿದವರೇ ಆಗಿದ್ದಾರೆ. ಅರ್ಹರಲ್ಲದವರನ್ನು ಮುಂಗಾಣ್ಕೆ ಇಲ್ಲದವರನ್ನು ಚುನಾಯಿಸಿ ಕಳಿಸಿದ್ದರಿಂದಲೇ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಪರೋಕ್ಷವಾಗಿ ಜನರೇ ಕಾರಣರಾದರು ಎಂಬುದು ಕುವೆಂಪು ಅವರ ವಿವರಣೆ. ಇಂಡಿಯಾ ದೇಶವು ಸಾಂಪ್ರದಾಯಿಕವಾಗಿ ರಾಜರ ಆಡಳಿತಕ್ಕೆ ಒಗ್ಗಿಹೋಗಿದ್ದುದರಿಂದ ಜನರಲ್ಲಿ ಪ್ರಜಾಪ್ರಭುತ್ವವು ತಂದುಕೊಡುವ ಹೊಣೆಗಾರಿಕೆಯನ್ನು ನಿರ್ವಹಿಸುವ ಸಾಮರ್ಥ್ಯವೇ ಇರಲಿಲ್ಲ ಎಂದೂ ವಿವರಿಸುತ್ತಾರೆ. ಪ್ರಜೆಗಳ ಆಶೋತ್ತರಗಳನ್ನು ಪ್ರತಿನಿಧಿಸಲು ತಕ್ಕವರಲ್ಲದ ಜನರನ್ನು ಆಡಳಿತದ ಗಾದಿಯ ಮೇಲೆ ಕೂರಿಸಿದ್ದರಿಂದಲೇ ಅಂತಹವರು ಕೈಗೊಂಡ ನಿರ್ಧಾರಗಳ ಅಪಾಯಕ್ಕೆ ಇಡೀ ಸಮಾಜವೇ ತುತ್ತಾಗಿದೆ ಎನ್ನುವುದು ಕುವೆಂಪು ಅವರ ಇನ್ನೊಂದು ನಿಲುವು.

ಜಯಪ್ರಕಾಶ ನಾರಾಯಣ

ಅಂದಿನ ವಾಸ್ತವ ಸ್ಥಿತಿಯನ್ನು ಇನ್ನೊಂದು ನೆಲೆಯಿಂದ ನೋಡೋಣ. ಚುನಾವಣೆಗಳ ತಂತ್ರಗಾರಿಕೆಯನ್ನು ಕುವೆಂಪು ವಿವರಿಸಿರುವ ಬಗೆಯನ್ನು ನಿರಾಕರಿಸಲು ಆಗುವುದಿಲ್ಲ. ಆದರೆ ಆಡಳಿತವನ್ನು ನಡೆಸುತ್ತಿದ್ದವರು ತೆಗೆದುಕೊಂಡ ನಿರ್ಣಯಗಳ ಪರಿಣಾಮವನ್ನು ವಿವರಿಸಿರುವ ಬಗೆಯನ್ನು ಮರುಪರಿಶೀಲಿಸಬೇಕೆಂದು ತೋರುತ್ತದೆ. ಹಾಗೆ ನೋಡಿದರೆ ಆ ಹೊತ್ತಿಗೆ ಮೊದಲ ಪಂಚವಾರ್ಷಿಕ ಯೋಜನೆ ಮೊದಲಾಗಿ ಸುಮಾರು ಎರಡು ದಶಕಗಳು ಕಳೆದಿದ್ದವು. ಮೊದಲೆರಡು ಪಂಚವಾರ್ಷಿಕ ಯೋಜನೆಗಳು ಕೃಷಿ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸುವ ಗುರಿಯನ್ನು ಹೊಂದಿದ್ದವು. ಅದಕ್ಕೆ ತಕ್ಕಂತೆ ಕಾರ್ಯ ಯೋಜನೆಗಳನ್ನು ಜಾರಿಗೊಳಿಸಿದ್ದವು. ಆಹಾರ ಉತ್ಪಾದನೆಯಲ್ಲಿ ಹೆಚ್ಚಳ, ಸುಧಾರಿತ ಕೃಷಿ ಪದ್ಧತಿ, ನೀರಾವರಿ ವ್ಯವಸ್ಥೆಗೆ ಹೊಸ ಯೋಜನೆಗಳು, ರೈತರಿಗೆ ಬೇಕಾದ ಮಾಹಿತಿಯ ರವಾನೆಗೆ ಅನುಕೂಲಕರವಾದ ಪ್ರಚಾರ ವ್ಯವಸ್ಥೆ ಇವೆಲ್ಲವೂ ನಡೆದಿದ್ದವು. ಸರಕಾರದ ಕಡೆಯಿಂದ ಈ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿದ್ದಾಗಲೇ ನಾಡಿನ ಹಲವು ಕಡೆ ಭೂರಹಿತರು ಭೂಮಿಯ ಒಡೆತನವನ್ನು ಪಡೆದುಕೊಳ್ಳಲು ಬಗೆಬಗೆಯ ಹೋರಾಟಗಳನ್ನು ಮಾಡುತ್ತಿದ್ದರು. ತೆಲಂಗಾಣದಲ್ಲಿ ನಡೆದ ಹೋರಾಟ, 1967ರ ಸುಮಾರಿನಲ್ಲಿ ಪಶ್ಚಿಮ ಬಂಗಾಳದಲ್ಲಿ ನೆಲೆಯೂರಿದ ನಕ್ಸಲೀಯ ಹೋರಾಟಗಳು ಒಂದೆಡೆಯಾದರೆ ಭೂಮಿಯ ಒಡೆತನದ ಸಮರ್ಪಕ ವಿತರಣೆಗಾಗಿ ವಿನೋಬಾ ಅವರು ಕೈಗೊಂಡಿದ್ದ ಭೂದಾನ ಕಾರ್ಯಕ್ರಮ ಇನ್ನೊಂದೆಡೆ ನಡೆದಿತ್ತು. ಕರ್ನಾಟಕದಲ್ಲೇ ಕಾಗೋಡು, ಸಂಡೂರು ಮುಂತಾದ ಕಡೆಗಳಲ್ಲಿ ಅ ಹೊತ್ತಿಗೆ ರೈತರ ಹೋರಾಟಗಳು ನಡೆದಿದ್ದವು. ಹಾಗಿದ್ದಲ್ಲಿ ಕುವೆಂಪು ಅವರು ಈ ಉಪನ್ಯಾಸ ನೀಡುವ ಹೊತ್ತಿನಲ್ಲಿ ಅವರು ಬಿಂಬಿಸಿದ ರೈತರ ಸಂಕಷ್ಟಗಳಿಗೆ ಕಾರಣವೇನು? ಸರಕಾರದ ಕಾರ್ಯ ಯೋಜನೆಗಳು ಭೂಮಾಲೀಕರಿಗೆ ಹೆಚ್ಚು ಅನುಕೂಲವಾಗುವಂತಿದ್ದವು. ಆಗ ಚುನಾವಣೆಯಲ್ಲಿ ಆಯ್ಕೆಯಾಗಿ ಅಧಿಕಾರ ಕೇಂದ್ರಗಳಿಗೆ ದಾಟಿಕೊಂಡವರು ಬಹುಮಟ್ಟಿಗೆ ಈ ವರ್ಗದಿಂದಲೇ ಬಂದವರಾಗಿದ್ದರು; ಇಲ್ಲವೆ ಅವರ ಬೆಂಬಲವನ್ನು ಪಡೆದವರಾಗಿದ್ದರು. ಕರ್ನಾಟಕದಲ್ಲಂತೂ ಆ ಮೊದಲು ಇದ್ದ ಪ್ರಜಾಪ್ರತಿನಿಧಿ ಸಭೆಯ ರಚನೆಯ ಹಿಂದಿದ್ದ ತರ್ಕವೇ ಹೊಸದಾಗಿ ಮೈದಳೆದ ವಿಧಾನಸಭೆಯ ಸದಸ್ಯರ ಹಿನ್ನೆಲೆಗಳನ್ನು ಬಿಂಬಿಸುವಂತಿತ್ತು. (1972ರ ಚುನಾವಣೆಯ ಬಳಿಕ ಮಾತ್ರ ಬದಲಾವಣೆಗಳು ನಡೆದಿದ್ದವು.) ಈ ಜಮೀನುದಾರರುಗಳಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಸಣ್ಣ ಹಿಡುವಳಿದಾರರು ಮತ್ತು ಭೂ ಒಡೆತನವಿಲ್ಲದ ಕೃಷಿಕಾರ್ಮಿಕರು ಸರಕಾರದ ಯೋಜನೆಗಳಿಂದ ದೊಡ್ಡ ಪ್ರಮಾಣದ ಪ್ರಯೋಜನವನ್ನು ಪಡೆಯುವಂತಿರಲಿಲ್ಲ. ಹೆಚ್ಚಿನ ಉತ್ಸಾಹದಿಂದ ಮೊದಲಾಗಿದ್ದ ಸಾಮೂಹಿಕ ಕೃಷಿಯ ನಡೆಯೂ ಕೂಡ ನೆಲಕಚ್ಚಿತ್ತು. ಅಂದರೆ ಕುವೆಂಪು ಅವರು ಕಾಣುತ್ತಿದ್ದ ಸಂಕಷ್ಟದ ಪರಿಸ್ಥಿತಿಗೆ ಕಾರಣಗಳು ಬೇರೆಯೇ ಆಗಿದ್ದವು. ಸರಕಾರದ ಅಲಕ್ಷ್ಯಕ್ಕಿಂತ ಹೆಚ್ಚಾಗಿ ಭೂಮಿಯ ಮೇಲಿನ ಒಡೆತನದ ಹಂಚಿಕೆಯಲ್ಲಿದ್ದ ವಿಪರ್ಯಾಸಗಳು ಇದಕ್ಕೆ ಕಾರಣವಾಗಿದ್ದವು. ಕರ್ನಾಟಕದಲ್ಲೇ ನಡೆದಿದ್ದ ಚಳವಳಿಗಳಾಗಲೀ, ಸಮಾಜವಾದಿ ಚಿಂತನೆಗಳ ಪರಿಚಯವಾಗಲೀ ಕುವೆಂಪು ಅವರಿಗೆ ಇದ್ದಿರಲಿಲ್ಲ ಎನ್ನುವಂತಿಲ್ಲ. 1974ಕ್ಕಿಂತ ಮೊದಲೇ ಹೊರಬಂದಿದ್ದ ಲೋಹಿಯಾ ಕೆಂಪು ಪುಸ್ತಕಕ್ಕೆ ಅವರು ಮುನ್ನುಡಿಯನ್ನು ಬರೆದಿದ್ದರು. ಆದರೂ ಅವರ ಇಲ್ಲಿನ ಚಿಂತನೆ ಮಾತ್ರ ದಿಟವಾದ ಕಾರಣಗಳನ್ನು ಬಿಟ್ಟುಕೊಟ್ಟಿದೆ. ಕೇವಲ ಚುನಾವಣೆ ವ್ಯವಸ್ಥೆಯ ಕೊರತೆಗಳನ್ನೇ ಮುಂದುಮಾಡಿದೆ.

ಆ ಹೊತ್ತಿನಲ್ಲಿ ನಾಡು ಎದುರಿಸುತ್ತಿದ್ದ ಬಿಕ್ಕಟ್ಟುಗಳಿಗೆ ಮತ್ತೊಂದು ಕಾರಣವನ್ನು ಕುವೆಂಪು ಮುಂದಿಡುತ್ತಾರೆ. ಜನರಲ್ಲಿ ವೈಚಾರಿಕ ಪ್ರಜ್ಞೆ ಮತ್ತು ವಿಜ್ಞಾನ ಬುದ್ಧಿಗಳು ಮನೆಮಾಡಿಲ್ಲದೆ ಇರುವುದರಿಂದ ಅವರು ಮೌಢ್ಯದಲ್ಲಿ ಮುಳುಗಿದ್ದಾರೆ. ಜಾತಿ ಮತಗಳ ಭ್ರಾಂತಿಯಲ್ಲಿ ಸಿಲುಕಿದ್ದಾರೆ ಎಂಬುದು ಅವರ ವಿಶ್ಲೇಷಣೆ. ಕುವೆಂಪು ಅವರು ಆ ಸುಮಾರಿಗೆ ಒಂದು ದಶಕದಿಂದಲೂ ತಮ್ಮ ಮಾತು ಬರಹಗಳಲ್ಲಿ ಈ ಪರಿಹಾರವನ್ನು ಸೂಚಿಸುತ್ತಲೇ ಬಂದಿದ್ದರು. ನನ್ನ ತಿಳಿವಳಿಕೆ ಸರಿಯಿದ್ದರೆ 1964ರಲ್ಲಿ ನೆಹರೂ ಅವರು ಕಾಲವಶರಾದಾಗ ಬರೆದ ಲೇಖನದಲ್ಲಿ ಮೊದಲಿಗೆ ವೈಚಾರಿಕತೆ ಮತ್ತು ವಿಜ್ಞಾನ ಬುದ್ಧಿಗಳ ಪ್ರಸ್ತಾವವನ್ನು ಮಾಡುತ್ತಾರೆ. ಈ ಎರಡೂ ನೆಹರೂ ಅವರಲ್ಲಿ ನೆಲೆಯೂರಿದ್ದವೆಂದು ಪ್ರತಿಪಾದಿಸುತ್ತಾರೆ. ಮತ ಮತ್ತು ರಾಜಕೀಯಗಳ ಜಾಗದಲ್ಲಿ ಅಧ್ಯಾತ್ಮ ಮತ್ತು ವಿಜ್ಞಾನಗಳು ನೆಲೆಯೂರದಿದ್ದರೆ ನಾಡಿಗೆ ಉಳಿಗಾಲವಿಲ್ಲ ಎಂಬ ವಿನೋಬಾ ಅವರ ನುಡಿಗಳನ್ನು ಬೇರೊಂದೆಡೆ ಉಲ್ಲೇಖಿಸಿ ಸಮರ್ಥಿಸುತ್ತಾರೆ.

ಇದನ್ನೂ ಓದಿ: ನಮ್ಮ ಕಾಲಕ್ಕೆ ಬೇಕಿದೆ ಕುವೆಂಪು ಸಂಹಿತೆ

ವೈಚಾರಿಕ ಪ್ರಜ್ಞೆ ಮತ್ತು ವಿಜ್ಞಾನ ಬುದ್ಧಿ ಎಂದರೇನು ಎಂಬುದನ್ನು ಅವರು ಎಲ್ಲಿಯೂ ಸುಲಭವಾಗಿ ಅರಿವಿಗೆ ಬರುವಂತೆ ವಿವರಿಸಲು ಹೋಗಿಲ್ಲ. ಈ ಎರಡೂ ಇಲ್ಲದಿದ್ದಾಗ ಉಂಟಾಗುವ ಅಪಾಯಗಳನ್ನು ವಿವರಿಸುವ ಕಡೆಗೆ ಅವರೆ ಗಮನ ಹೆಚ್ಚಾಗಿ ಹರಿದಿದೆ. ಈ ಎರಡೂ ಪದರಚನೆಗಳ ಅರ್ಥವ್ಯಾಪ್ತಿಯನ್ನು ಕುವೆಂಪು ಅವರ ಇತರ ಚಿಂತನೆಗಳ ಹಿನ್ನೆಲೆಯಲ್ಲಿ ಊಹಿಸುವ ಪ್ರಯತ್ನವನ್ನು ಮಾಡಬಹುದು. ವೈಚಾರಿಕ ಪ್ರಜ್ಞೆ ಎನ್ನುವುದು ಸಾಮರ್ಥ್ಯವೆಂದೂ ವಿಜ್ಞಾನ ಬುದ್ಧಿ ಎನ್ನುವುದು ಈ ಸಾಮರ್ಥ್ಯದ ಆವಿಷ್ಕಾರವೆಂದೂ ತಿಳಿಯಬೇಕಿದೆ. ಮೊದಲನೆಯದು ಕಾರಣ ಮತ್ತು ಎರಡನೆಯದು ಆ ಕಾರಣಜನ್ಯವಾದ ಫಲಿತ ಅಥವಾ ಕಾರ್ಯ. ವೈಚಾರಿಕತೆಯ ಗ್ರಹಿಕೆಗಳಿಗೆ ವಿಜ್ಞಾನವು ಒರೆಗಲ್ಲಾಗಬೇಕು ಎಂಬುದು ಒಟ್ಟಾರೆಯಾಗಿ ಕುವೆಂಪು ಅವರ ನಿಲುವು ಎಂದು ಗ್ರಹಿಸಬೇಕಿದೆ.

ಸಮಸ್ಯೆ ಇರುವುದು ಇಲ್ಲಿಂದ ಮುಂದಕ್ಕೆ. ವೈಚಾರಿಕ ಪ್ರಜ್ಞೆಯಾಗಲಿ ವಿಜ್ಞಾನ ಬುದ್ಧಿಯಾಗಲೀ ಇಲ್ಲದಿರುವುದರಿಂದ ಜನರು ಮತಮೌಢ್ಯಗಳಿಗೆ ಒಳಗಾಗಿದ್ದಾರೆ ಎಂಬುದನ್ನು ಒಪ್ಪಿದರೂ ಈ ಎರಡೂ ಜನರಲ್ಲಿ ತಲೆ ಎತ್ತುವಂತೆ ಮಾಡುವುದು ಹೇಗೆ ಎಂಬುದಕ್ಕೆ ಉತ್ತರ ಸುಲಭವಾಗಿಲ್ಲ. ಬೇರೊಂದು ಕಡೆಯಲ್ಲಿ ಕುವೆಂಪು ಅವರು ಉತ್ತಮವಾದುದರ ಅನುಸಂಧಾನದಿಂದ ಈ ಗುಣಗಳನ್ನು ಪಡೆದುಕೊಳ್ಳಬಹುದೆಂದು ಹೇಳಿದಂತಿದೆ. ಶಿಕ್ಷಣದ ಮೂಲಕವೂ ಇದು ಸಾಧ್ಯವೆಂಬುದು ಅವರ ಪ್ರತಿಪಾದನೆಯಾಗಿದೆ.

ನೆಹರೂ

ಈ ಬಗೆಯ ಚಿಂತನೆಗಳು ಪ್ರತಿಪಾದಿಸುವ ಕುವೆಂಪು ಅವರು ಭಾವನಾವಾದಿಯಾಗಿ ಕಾಣುತ್ತಾರೆ. ವಸ್ತು ಜಗತ್ತು ಮತ್ತು ಚೈತನ್ಯ ಜಗತ್ತು ಇವೆರಡರ ನಡುವೆ ಇರುವ ನಂಟು ಯಾವ ಬಗೆಯದ್ದು ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರ ಸ್ಪಷ್ಟವಾಗಿದೆ. ವ್ಯಕ್ತಿಯಲ್ಲಿ ಉಂಟಾಗುವ ಉನ್ನತಿಯೇ ಪರಿಸರದ ಉನ್ನತಿಗೆ ನೇರವಾಗಿ ಕಾರಣವಾಗುತ್ತದೆ ಎಂಬ ನಿಲುವು ಅವರದ್ದು. ಈ ಎರಡೂ ಜಗತ್ತುಗಳ ನಡುವೆ ಇರುವ ಗತಿತಾರ್ಕಿಕ ಸಂಬಂಧವನ್ನು ಅವರು ಒಪ್ಪುವಂತೆ ತೋರುವುದಿಲ್ಲ.

ವಿಚಾರ ಕ್ರಾಂತಿ, ಸಂಸ್ಕೃತಿ ಕ್ರಾಂತಿಗಳನ್ನು (1974ರ ಏಪ್ರಿಲ್‌ನಲ್ಲಿ ಅವರು ಮಾಡಿದ ಉಪನ್ಯಾಸದಲ್ಲಿ ಬಳಸಿದ ಮಾತು) ಪ್ರತಿಪಾದಿಸುವ ಕುವೆಂಪು ಅವರು ಇದೇ ಉಪನ್ಯಾಸದಲ್ಲಿ ಚುನಾವಣೆಯ ಪದ್ಧತಿಯಲ್ಲಿ ಬದಲಾವಣೆಗಳನ್ನು ತರಲು ಉಗ್ರ ಕ್ರಾಂತಿಯನ್ನೂ ಮಾಡಬೇಕಾಗಿ ಬಂದರೂ ಅದಕ್ಕೆ ಸಿದ್ಧರಿರಬೇಕೆಂದು ಕರೆನೀಡಿದ್ದಾರೆ. ಕ್ರಾಂತಿ ಎಂಬುದು ಒಂದು ಪ್ರಕ್ರಿಯೆಯೋ ಇಲ್ಲವೇ ಅದು ಒಂದು ಗುರಿಯೋ ಎಂಬ ಪ್ರಶ್ನೆ ಹಾಗೇ ಉಳಿಯುತ್ತದೆ. ಗುರಿ ನೈತಿಕವಾದುದಾದರೆ ಅದನ್ನು ಸಾಧಿಸಲು ಅನುಸರಿಸಬೇಕಾದ ದಾರಿ ಕೂಡ ನೈತಿಕವೇ ಆಗಿರಬೇಕೆಂಬ ನಿಲುವನ್ನು ಕುವೆಂಪು ತಳೆಯುತ್ತಾರೆ. ಈ ಉಪನ್ಯಾಸವನ್ನು ಅವರು ನೀಡುತ್ತಿದ್ದ ಸಂದರ್ಭದಲ್ಲಿ ಜಯಪ್ರಕಾಶ ನಾರಾಯಣ ಅವರು ಪ್ರತಿಪಾದಿಸುತ್ತಿದ್ದ ಸಂಪೂರ್ಣ ಕ್ರಾಂತಿಯ ಪರಿಕಲ್ಪನೆಯಲ್ಲಿ ಈ ಗುರಿ ಮತ್ತು ದಾರಿಗಳ ನಂಟು ಇದೇ ಬಗೆಯಲ್ಲಿ ಇದ್ದಿತೋ ಇಲ್ಲವೋ ಎಂಬುದನ್ನು ಆ ಬಳಿಕ ಸಂಭವಿಸಿದ ಚರಿತ್ರೆಯ ಪುಟಗಳಲ್ಲಿ ಹುಡುಕಬಹುದಾಗಿದೆ. ಅದು ಬೇರೆಯ ಚರ್ಚೆಗೆ ದಾರಿ ಮಾಡಿಕೊಡುತ್ತದೆ.

ಇದನ್ನೂ ಓದಿ: ಅವಸರಗಳ ಕಾಲದಲ್ಲಿ ಗ್ರಹಿಸಲಾರದೆ ಹೋಗಿರುವ ಕುವೆಂಪು..

1964ರ ಬರಹ ಒಂದರಲ್ಲಿ ನೆಹರೂ ಅವರ ವೈಚಾರಿಕ ಪ್ರಜ್ಞೆ ಮತ್ತು ವಿಜ್ಞಾನ ಬುದ್ಧಿಗಳು ನಾಡನ್ನು ಸರಿಯಾದ ದಾರಿಯಲ್ಲಿ ಒಯ್ಯಲು ಹೇಗೆ ಸನ್ನದ್ಧವಾಗಿದ್ದವು ಎಂಬುದನ್ನು ವಿವರಿಸುವ ಕುವೆಂಪು ಅವರು ಈ ಉಪನ್ಯಾಸದಲ್ಲಿ ಮತ್ತು ಇದಕ್ಕೂ ಮೊದಲು ಬರೆದ ಲೋಹಿಯಾ ಕೆಂಪು ಪುಸ್ತಕದ ಮುನ್ನುಡಿಯಲ್ಲಿ ಬೇರೆಯದೇ ನಿಲುವನ್ನು ತಳೆಯುತ್ತಾರೆ. ನೆಹರೂ ಅಧಿಕಾರವನ್ನು ಪಡೆದ ಮೇಲೆ ತಮ್ಮ ಮೊದಲಿನ ಆದರ್ಶಗಳನ್ನು ತೊರೆದರೆಂದೂ ಅವರಲ್ಲಿ ’ರಕ್ತಗತವಾಗಿ ಬಂದಿದ್ದ ಶ್ರೀಮಂತಿಕೆಯ ಉಚ್ಚವರ್ಗದ ಮತ್ತು ಬೂರ್ಜುವಾ ಮನೋಧರ್ಮದ ಪ್ರಭಾವದಿಂದ ಪಾರಾಗಲು’ ಅವರಿಗೆ ಸಾಧ್ಯವಾಗಲಿಲ್ಲ ಎಂದು ಹೇಳುತ್ತಾರೆ. ಇದೇ ಕಾರಣವಾಗಿ ಅವರು ಕೈಗೊಂಡ ತಪ್ಪು ನಿರ್ಣಯಗಳೇ ಇಂಡಿಯಾ ದೇಶದ ಬಿಕ್ಕಟ್ಟುಗಳಿಗೆ ಕಾರಣವಾದವು ಎಂಬ ನಿಲುವನ್ನು ಮಂಡಿಸುತ್ತಾರೆ. ನೆಹರೂ ಅವರನ್ನು ಕುವೆಂಪು ಅವರು ವ್ಯಾಖ್ಯಾನಿಸಿದ ಬಗೆಯಲ್ಲಿ ಬದಲಾವಣೆಯಾದರೆ ಅದರಲ್ಲಿ ತಪ್ಪೇನೂ ಇಲ್ಲವಾದರೂ ಅದಕ್ಕೆ ಕಾರಣಗಳನ್ನು ನಾವು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಥವಾ ಹೀಗೂ ಹೇಳಬಹುದೇನೋ. ಈ ಮೊದಲೇ ಹೇಳಿದಂತೆ ವ್ಯಕ್ತಿಯೊಬ್ಬರು ಪರಿಸರವನ್ನು ಮೂಲಭೂತವಾಗಿ ಬದಲಿಸಲು ಶಕ್ತರಾಗಿರುತ್ತಾರೆ ಎಂಬು ತಿಳಿವಳಿಕೆಯೇ ಇಂತಹ ನಿಲುವುಗಳನ್ನು ತಳೆಯಲು ಕಾರಣವಾಗಿರಲೂಬಹುದು. ಸಾಮಾಜಿಕ ಚಲನಶೀಲತೆಯ ಚೌಕಟ್ಟಿನಲ್ಲಿ ವ್ಯಕ್ತಿಗಳು ನಿಮಿತ್ತ ಮಾತ್ರ ಆಗಿರುತ್ತಾರೆ ಅಥವಾ ಅವರು ಆಯಾ ಚಾರಿತ್ರಿಕ ಸಂದರ್ಭದ ಫಲಿತವಾಗಿರುತ್ತಾರೆ ಎಂದು ತಿಳಿಯುವುದಾದರೆ ಆಗ ಕುವೆಂಪು ಅವರ ವಿಚಾರಗಳನ್ನು ಮರುಪರಿಶೀಲನೆಗೆ ಒಳಪಡಿಸುವ ಅಗತ್ಯ ಎಂದಿಗಿಂತ ಈಗ ಹೆಚ್ಚಾಗಿ ಇದೆ. ಅಜ್ಜನ ಹೆಗಲ ಮೇಲೆ ಕುಳಿತ ಮೊಮ್ಮಗ ಜಾತ್ರೆಯನ್ನು ಹೆಚ್ಚು ವಿಸ್ತಾರವಾಗಿ ನೋಡಲು ಸಾಧ್ಯ ತಾನೆ. ಈ ಹೋಲಿಕೆಯಲ್ಲಿ ನೋಡಿದಾಗ ಮೇಲಿನ ಮಾತುಗಳೂ ಕೂಡ ಕುವೆಂಪು ಅವರನ್ನು ಓದುತ್ತಾ ಬಂದದ್ದರ ಪರಿಣಾಮವೇ ಎಂದು ತಿಳಿದಿದ್ದೇನೆ.

ಕೆ ವಿ ನಾರಾಯಣ

ಕೆ ವಿ ನಾರಾಯಣ
ಭಾಷಾಶಾಸ್ತ್ರಜ್ಞ, ವಿಮರ್ಶಕ. ’ತೊಂಡುಮೇವು’ ಕೆವಿಎನ್ ಅವರ ಬರಹಗಳನ್ನು ಸಂಕಲಿಸಿದ ಸಂಪುಟ ಸರಣಿ. ಇತ್ತೀಚಿಗೆ ಸಾರ್ತ್ರನ ’ಬುದ್ಧಿಜೀವಿಗಳ ಬಿಕ್ಕಟ್ಟು’ ಪುಸ್ತಕವನ್ನು ಕನ್ನಡದಲ್ಲಿ ನಿರೂಪಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...