Homeನ್ಯಾಯ ಪಥಮೋದಿ ಯಾಕೆ ಸಂಘಪರಿವಾರಕ್ಕೆ ಬೇಡವಾದರು?: ಮೋದಿ ಜಾಗಕ್ಕೆ ಗಡ್ಕರಿ!

ಮೋದಿ ಯಾಕೆ ಸಂಘಪರಿವಾರಕ್ಕೆ ಬೇಡವಾದರು?: ಮೋದಿ ಜಾಗಕ್ಕೆ ಗಡ್ಕರಿ!

- Advertisement -
- Advertisement -

ರಾಜಶೇಖರ ಅಕ್ಕಿ |

ನಮ್ಮ ಅಂಕಣಕಾರರಾದ ಎಚ್.ಎಸ್.ದೊರೆಸ್ವಾಮಿಯವರು ತಮ್ಮ `ನೂರರ ನೋಟ’ ಅಂಕಣದಲ್ಲಿ ಇಲ್ಲಿಗೆ ನಾಲ್ಕು ಸಂಚಿಕೆಗಳ ಹಿಂದೆ, ಅಂದರೆ ಈ ವರ್ಷದ ಮೊದಲ ಸಂಚಿಕೆಯಲ್ಲಿ (೦೨ ಜನವರಿ ೨೦೧೯) ಮುಖ್ಯವಾದ ಸಂಗತಿಯೊಂದನ್ನು ಪ್ರಸ್ತಾಪಿಸಿದ್ದರು. `ಮುಳುಗು ದೋಣಿ ಮೋದಿಯೂ, ನಾಜೂಕು ನಾವಿಕ ಸಂಘವೂ’ ಎಂಬ ಆ ಲೇಖನದಲ್ಲಿ ಮುಂದಿನ ಸಲ ಮೋದಿಯನ್ನು ಸಂಘ ಪರಿವಾರವೇ ಪ್ರಧಾನಿ ಅಭ್ಯರ್ಥಿಯಾಗಿ ಮಾಡುವುದಿಲ್ಲ ಎಂಬ ಸುಳಿವು ನೀಡಿದ್ದರು. ದೇಶದಲ್ಲಿ ನಡೆಯುತ್ತಿರುವ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಅದನ್ನು ದಟ್ಟವಾಗಿಯೇ ಖಾತ್ರಿಪಡಿಸುತ್ತಿವೆ.

ಮೋದಿ ಮತ್ತು ಗಡ್ಕರಿ

ಬಿಜೆಪಿ ಪಕ್ಷದೊಳಗೇ ಇದ್ದುಕೊಂಡು ಕೇಂದ್ರ ಸಚಿವ ನಿತಿನ್ ಗಡ್ಕರಿ, ಅಮಿತ್ ಶಾರನ್ನು ಟೀಕಿಸುತ್ತಿರೋದು, ಕಾಂಗ್ರೆಸ್ಸಿನ ಇಂದಿರಾಗಾಂಧಿಯನ್ನು ಹೊಗಳುತ್ತಿರೋದು, ಸರ್ಕಾರದ ನೀತಿಗಳನ್ನು ಕಟುವಾಗಿ ವಿಮರ್ಶಿಸುತ್ತಿರುವುದೆಲ್ಲ ಕೇವಲ ಕಾಕತಾಳೀಯವಲ್ಲ. ಅದರ ಹಿಂದೆ ಆರೆಸ್ಸೆಸ್‌ನ ಪಕ್ಕಾ ಲೆಕ್ಕಾಚಾರವಿದೆ. ಬಿಜೆಪಿ ಅಂದ್ರೆ ಮೋ-ಶಾ ಜೋಡಿ ಮಾತ್ರ ಎನ್ನುವಂತಿದ್ದ ಪಕ್ಷದೊಳಗೆ ಈಗ ಎಲ್ಲವೂ ಮೊದಲಿನಂತಿಲ್ಲ. ಸಂಘ ಪರಿವಾರ ಮೋದಿಗೆ ಎದುರಾಗಿ ನಿತಿನ್ ಗಡ್ಕರಿಯನ್ನು ಹೊಸ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುತ್ತಿರೋದು ರಹಸ್ಯವಾಗೇನೂ ಉಳಿದಿಲ್ಲ. ಲಾಭ ಮತ್ತು ನಿರ್ದಿಷ್ಟ ಲೆಕ್ಕಾಚಾರಗಳನ್ನಿಟ್ಟುಕೊಂಡೇ ಪರಿವಾರ ಈ ತೀರ್ಮಾನಕ್ಕೆ ಬಂದಿರೋದನ್ನು ಆಂತರಿಕ ಮೂಲಗಳೇ ಖಾತ್ರಿಪಡಿಸುತ್ತಿವೆ. ಅಂದಹಾಗೆ, ಈ ಪ್ರಯತ್ನ ಕಳೆದ ಎರಡು ವರ್ಷಗಳಿಂದಲೇ ಸೈಲೆಂಟಾಗಿ ಚಾಲನೆ ಪಡೆದುಕೊಂಡಿತ್ತಂತೆ. ಅದಕ್ಕೆ ಸಾಕಷ್ಟು ನಿದರ್ಶನಗಳಿವೆ.

೨೦೧೪ರಲ್ಲಿ ಗೆದ್ದು ಗದ್ದುಗೆ ಏರಿದ ತರುವಾಯ ಮೋದಿ ಮತ್ತು ಶಾ ಜೋಡಿ ಯಾವ ಪರಿ ಬಿಜೆಪಿಯನ್ನು ಆಕ್ರಮಿಸಿಕೊಂಡಿತೆಂದರೆ ಆ ಪಕ್ಷದ ವೃದ್ಧ ರಾಜಕಾರಣಿ ಕಂ ರಥಯಾತ್ರಿ ಅಡ್ವಾಣಿಯವರನ್ನೇ ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಯ್ತು. ವಯಸ್ಸಿನ ನೆಪ ಕೊಟ್ಟು ಮಾರ್ಗದರ್ಶಕ ಮಂಡಳಿ ಅನ್ನೇ ಬೋರ್ಡು ತಗುಲುಹಾಕಿ, ಮೋದಿ ಮುಂದೆ ಕೈಮುಗಿದು ನಿಲ್ಲುವ ದೈನೇಸಿ ಸ್ಥಿತಿಗೆ ಅವರನ್ನು ತರಲಾಯ್ತು. ಇದು ಕಟ್ಟರ್ ಬಿಜೆಪಿಗಳಿಗೇ, ಆರೆಸ್ಸಿಸಿಗರಿಗೇ ಇಷ್ಟವಿಲ್ಲದಿದ್ದರೂ ಮೋದಿ ಜನಪ್ರಿಯತೆ ಮುಂದೆ ಸುಮ್ಮನಿರುವಂತೆ ಮಾಡಿತ್ತು. ಕೊನೆಗೆ ರಾಷ್ಟ್ರಪತಿ ಆಯ್ಕೆ ಸಂದರ್ಭದಲ್ಲಿ ಅಡ್ವಾಣಿ ಹೆಸರು ಬಂದಾಗಲೂ ಅಯೋಧ್ಯೆ ವಿವಾದಕ್ಕೆ ಮರುಜೀವ ನೀಡಿ ಶಾಶ್ವತವಾಗಿ ಅವರ ರಾಜಕಾರಣಕ್ಕೆ ಮಂಗಳ ಹಾಡಿದ್ದು ಖಂಡಿತವಾಗಲೂ ಕಾಕತಾಳೀಯ ಅಲ್ಲ.

ಮೋದಿ ಎದುರು ಅಡ್ವಾಣಿಯ ದೈನೇಸಿ ಸ್ಥಿತಿ

ಒಂದಾದ ಮೇಲೊಂದು ವಿಧಾನಸಭಾ ಚುನಾವಣೆಗಳನ್ನು ಗೆಲ್ಲುತ್ತಾ ಬಂದ ಮೋದಿ ಅಹಮ್ಮಿಕೆ ಯಾವ ಮಟ್ಟ ತಲುಪಿತೆಂದರೆ ಬಿಜೆಪಿಯ ಮಾತು ಒತ್ತಟ್ಟಿಗಿರಲಿ ಮಾತೃಸಂಸ್ಥೆ ಆರೆಸ್ಸೆಸ್ಸನ್ನೇ ನಿಯಂತ್ರಿಸುವ ಸಾಹಸಕ್ಕೂ ಕೈಹಾಕಿಬಿಟ್ಟರು. ಆರೆಸ್ಸೆಸ್ ಕಳವಳಗೊಂಡದ್ದೇ ಆಗ. ಬಿಜೆಪಿಗೆ ಬ್ರಾಹ್ಮಣ್ಯವಾದವೇ ಮೂಲ ಅಜೆಂಡಾವಾದರು ಅದೊಂದು ಪೊಲಿಟಿಕಲ್ ಪಾರ್ಟಿ. ಏನಿಲ್ಲವೆಂದರು ಕಡೇಪಕ್ಷ Political gain ಕಾರಣಕ್ಕಾದರು ಅಲ್ಲಿಗೆ ಬ್ರಾಹ್ಮಣೇತರರಿಗೆ ಮಣೆ ಹಾಕಲೇಬೇಕು, ಅದು ಅನಿವಾರ್ಯ ಕೂಡಾ. ಆದರೆ ಆರೆಸ್ಸೆಸ್ ಹಾಗಲ್ಲ. ಅಲ್ಲಿ ಪಕ್ಕಾ ಬ್ರಾಹ್ಮಣರ ಪಾಳೆಗಾರಿಕೆ. ಬ್ರಾಹ್ಮಣೇತರರು ಆರೆಸೆಸ್‌ನ ಉನ್ನತ ಹುದ್ದೆಗೇರಿದ ನಿದರ್ಶನವೇ ಅಲ್ಲಿಲ್ಲ. ಶೂದ್ರರು ಏನಿದ್ದರು ಬಳಕೆಯ ಮಟ್ಟಕ್ಕಷ್ಟೆ ಸೀಮಿತ. ನಿಯಂತ್ರಕರೇನಿದ್ದರು ಬ್ರಾಹ್ಮಣರೆ. ಅಂತದ್ದರಲ್ಲಿ ಬ್ರಾಹ್ಮಣನಲ್ಲದ ಶೂದ್ರ ಸಮುದಾಯದ ಮೋದಿ ಆರೆಸೆಸ್ಸನ್ನೇ ನಿಯಂತ್ರಿಸುವಷ್ಟರ ಮಟ್ಟಿಗೆ ಬೆಳೆಯುತ್ತಿರೋದನ್ನು ಅದು ಹೇಗೆ ತಾನೆ ನೋಡಿಕೊಂಡು ಸುಮ್ಮನೆ ಕೂತೀತು. ಮೋದಿ ಕೇವಲ ತನ್ನ ಪ್ರಭಾವದ ಮೂಲಕ ಮಾತ್ರವಲ್ಲ ತಾಂತ್ರಿಕವಾಗಿಯೂ ಆರೆಸ್ಸೆಸ್ ಅನ್ನು ತನ್ನ ಕಬ್ಜಾ ಮಾಡಿಕೊಳ್ಳಲು ಮುಂದಾದದ್ದು, ಆರೆಸೆಸ್ ಸರಸಂಘಚಾಲಕ ಆಯ್ಕೆಯ ಮೂಲಕ. ಕಳೆದ ವರ್ಷ ಮಾರ್ಚಿಯಲ್ಲಿ ಆರೆಸೆಸ್‌ನ ಸರಸಂಘಚಾಲಕರಾದ ಭೈಯ್ಯಾಜಿ ಜೋಷಿ ಅವರ ಕಾರ್ಯಾವಧಿ ಮುಗಿಯಲಿತ್ತು. ದತ್ತಾಜಿ ಹೊಸಬಾಳೆ ಎನ್ನುವವರನ್ನು ಸರಸಂಘಚಾಲಕರಾಗಿ ನೇಮಕ ಮಾಡಲು ಸ್ವತಃ ಮೋದಿಯೇ ಮುತುವರ್ಜಿವಹಿಸಿ ಕಾರ್ಯಾಚರಣೆಗಿಳಿದಿದ್ದರು. ಯಾಕೆಂದರೆ ಹೊಸಬಾಳೆ ಮೋದಿ ಬಳಗದ ಅತ್ಯಾಪ್ತ ವ್ಯಕ್ತಿಯಾಗಿದ್ದರು. ಹೆಚ್ಚೂಕಮ್ಮಿ ಅವರ ಆಯ್ಕೆ ಫೈನಲ್ ಆಗಿಹೋಗಿತ್ತು. ಹಾಗೇನಾದರು ಆದರೆ, ಈಗ ಬಿಜೆಪಿ ಪಕ್ಷವನ್ನು ತಮ್ಮ ಸುಪರ್ದಿಗೆ ಪಡೆದಿರುವಂತೆ ನಾಳೆ ಇಡೀ ಆರೆಸೆಸ್ ಪಾಳೆಯಪಟ್ಟನ್ನೇ ಮೋದಿ ತನ್ನ ಮುಷ್ಠಿಯಲ್ಲಿ ಇಟ್ಟುಕೊಳ್ಳುತ್ತಾರೆ ಎಂಬ ತರ್ಕಕ್ಕೆ ಬಿದ್ದ ಸಂಘ ಕೊನೇ ಘಳಿಗೆಯಲ್ಲಿ ಭೈಯ್ಯಾಜಿ ಜೋಷಿ ಅವರ ಕಾರ್ಯಾವಧಿಯನ್ನು ಇನ್ನೊಂದು ಟರ್ಮಿಗೆ ವಿಸ್ತರಿಸಿತು. ಅಷ್ಟಲ್ಲದೆ, ಮೋದಿಯವರ ಆತ್ಮೀಯ ದತ್ತಾಜಿ ಹೊಸಬಳೆ ಅವರನ್ನು ಅರೆಸೆಸ್‌ನಲ್ಲಿ ಮೂಲೆಗುಂಪಾಗಿಸಲಾಗಿದೆ. ಅರೆಸೆಸ್‌ನಲ್ಲಿ ಹಸ್ತಕ್ಷೇಪ ಮಾಡಿ, ಹೊಸಬಾಳೆಯವರನ್ನು ಮುಖ್ಯಸ್ಥನನ್ನಾಗಿಸಿ ಆರೆಸೆಸ್ ಅನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕೆನ್ನುವ ಮೋದಿಯ ಹುನ್ನಾರಕ್ಕೆ ಕೊಟ್ಟ ಉತ್ತರ ಇದು. ಆದಾಗ್ಯೂ ಚಿನ್ನದ ಮೊಟ್ಟೆಯಿಡುವ ಕೋಳಿಯಂತಿದ್ದ ಮೋದಿಯನ್ನು ಅದು ಸಹಿಸಿಕೊಂಡೇ ಬಂತು, ಒಳ್ಳೆಯ ಸಮಯಕ್ಕಾಗಿ ಕಾಯುತ್ತಾ!

ಅಂತಹ ಸಮಯ ಇದೀಗ ಒದಗಿಬಂದಿರೋದು ಖಾತ್ರಿಯಾಗುತ್ತಿದ್ದಂತೆಯೇ ಮೋದಿಯ ಹುಳುಕುಗಳನ್ನಿಟ್ಟುಕೊಂಡೇ ತನ್ನ ಆಟ ಶುರು ಮಾಡಿದೆ. ನೋ ಡೌಟ್, ಬೇರಾವ ರಾಜಕಾರಣಿಗೆ ಹೋಲಿಸಿದರೂ ರಾಷ್ಟ್ರಮಟ್ಟದಲ್ಲಿ ಮೋದಿಯೇ ಜನಪ್ರಿಯ ರಾಜಕಾರಣಿ. ಆದರೆ ಆ ಜನಪ್ರಿಯತೆ ೨೦೧೪ರಲ್ಲಿ ಇದ್ದಷ್ಟು ಇಲ್ಲವೆನ್ನುವುದೂ ವಾಸ್ತವ. ೨೦೧೯ರ ಎಂಪಿ ಎಲೆಕ್ಷನ್‌ಗೆ ಮೈಲಿಗಲ್ಲು ಎಂದು ಹೇಳಲಾಗುವ ಪ್ರಮುಖ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿರುವುದೇ ಇದಕ್ಕೆ ಸಾಕ್ಷಿ. ಜನರೀಗ ಮೋದಿಯಿಂದ ದೂರ ಸರಿಯುತ್ತಿದ್ದಾರೆ. ಅದಕ್ಕೆ ಕಾರಣವೂ ಮೋದಿಯೇ ಹೊರತು ಮತ್ತ್ಯಾರು ಅಲ್ಲ. ಅಧಿಕಾರಕ್ಕೇರುವ ಧಾವಂತದಲ್ಲಿ ಸಾಧ್ಯಾಸಾಧ್ಯತೆಯನ್ನು ಯೋಚಿಸದೆ ಬಾಯಿಗೆ ಬಂದಂತೆ ಹರಿಬಿಟ್ಟ ಯಾವ ಆಶ್ವಾಸನೆಯನ್ನೂ ಮೋದಿ ಈಡೇರಿಸಲಿಲ್ಲ. `ಅಚ್ಚೇ ದಿನ್’ ಅಪಹಾಸ್ಯಕ್ಕೀಡಾಗಿದ್ದರೆ, ೧೫ ಲಕ್ಷದ ಸುಳಿವೇ ಇಲ್ಲ. ಇನ್ನು ಭ್ರಷ್ಟಮುಕ್ತ ಆಡಳಿತ ಕೊಡುತ್ತೇನೆ ಎಂದಿದ್ದ ಮೋದಿಗೆ ರಾಫೇಲ್ ಹಗರಣ ದೊಡ್ಡ ಹಿನ್ನಡೆ ಉಂಟುಮಾಡಿದೆ. ಕೃಷಿ ಬಿಕ್ಕಟ್ಟು, ನಿರುದ್ಯೋಗ ಸಮಸ್ಯೆಗಳನ್ನು ಕಡಿಮೆ ಮಾಡುವ ಬದಲು ತಮ್ಮ ಅಳತೆಗಿಟ್ಟ ಆರ್ಥಿಕ ನೀತಿಗಳಿಂದ ದುಪ್ಪಟ್ಟು ಮಾಡಿಟ್ಟಿದ್ದಾರೆ. ಇನ್ನು ಅವರು ಜಾರಿಗೆ ತಂದ ಹೊಸ ಯೋಜನೆಗಳೂ ಫೇಲಾದವು. ೫೯ ನಿಮಿಷದಲ್ಲಿ ಸಿಗುವ ಸಾಲ, ಮೋದಿಕೇರ್, ಸ್ವಚ್ಛ ಭಾರತ, ಮೇಕ್‌ಇನ್ ಇಂಡಿಯಾ, ಸ್ಟಾರ್ಟಅಪ್ ಇಂಡಿಯಾ, ಇಂತಹ ಅನೇಕವು. ಎಲ್ಲವೂ ಠುಸ್ಸೆಂದವು. ನೋಟು ರದ್ದತಿ, ಅದರಿಂದ ಬರಬೇಕಾದ ಕಪ್ಪುಹಣ, ಬರಲಿಲ್ಲ. ಅವರ ನೀತಿಗಳು ಫ್ಲಾಪ್ ಆದವು.

ಇವೆಲ್ಲ ಆಡಳಿತಗಾರನಾಗಿ ಮೋದಿಯನ್ನು ವೈಫಲ್ಯದತ್ತ ತಳ್ಳಿದರೆ, ಇನ್ನು ಅವರ ಐಡಿಯಾಲಜಿಗಳು ಮೋದಿಯನ್ನು ಜನರಿಂದ ಮತ್ತಷ್ಟು ದೂರ ಸರಿಸಿದವು. ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯ ಓಲೈಕೆ ರಾಜಕಾರಣದಿಂದ ಬೇಸತ್ತಿದ್ದ ಜನ ಮೋದಿಯ ಬಲಪಂಥವನ್ನು ೨೦೧೪ರಲ್ಲಿ ಒಪ್ಪಿಕೊಂಡಿದ್ದರಾದರು ಅದು ಇಷ್ಟು ಭೀಕರ ರೂಪದಲ್ಲಿ ಜಾರಿಗೆ ಬಂದದ್ದನ್ನು ಸಹಿಸಿಕೊಳ್ಳುವ ಮನಸ್ಥಿತಿ ಭಾರತದ್ದಾಗಿರಲಿಲ್ಲ. ಯೋಗಿ ಆದಿತ್ಯನಾಥರಂತಹ ವ್ಯಕ್ತಿಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿಯನ್ನಾಗಿಸಿದ್ದು, ನಗರಗಳ ಹೆಸರುಗಳನ್ನು ಬದಲಾಯಿಸಿದ್ದು, ಗೋಮಾತೆಯ ರಾಜಕೀಯ, ಗೋವಿನ ಹೆಸರಿನಲ್ಲಿ ಆದ ಕೊಲೆಗಳು, ಪ್ರಗತಿಪರರ ಹತ್ಯೆಗಳು, ಆ ವಿಚಾರದಲ್ಲಿ ಮೋದಿಯ ಮೌನದ ಹುನ್ನಾರಗಳೆಲ್ಲವು ಮೋದಿ ಒಬ್ಬ ಹಿಂಸಾವಾದಿಯೆಂಬಂತೆ ಬಿಂಬಿಸಿದವು. ಮೋದಿಯನ್ನು ಬೆಂಬಲಿಸಿದ ಅನೇಕರು ಈ ಎಲ್ಲ ಕಾರಣಗಳಿಂದ ದೂರ ಸರಿಯಲಾರಂಭಿಸಿದರು. ಮೋದಿ ತನ್ನ ಜನಪ್ರಿಯತೆಯನ್ನು ಇನ್ನಷ್ಟು ಕಳೆದುಕೊಂಡರು.

ಇದೆಲ್ಲವೂ ಸಂಘ ಪರಿವಾರಕ್ಕೆ ಗೊತ್ತಿದ್ದರೂ ಅದು ಮೋದಿ ವಿರುದ್ಧ ಕಾರ್ಯಾಚರಣೆಗಿಳಿದಿರಲಿಲ್ಲ. ಏಕೆಂದರೆ ಜನರ ನಡುವೆ ಮೋದಿಯ ಜನಪ್ರಿಯತೆ ಕುಸಿಯುತ್ತಿದ್ದರೂ ಅದು ಪೊಲಿಟಿಕಲ್ ಇಂಪ್ಯಾಕ್ಟ್ ಆಗಿ ಬದಲಾಗಬಲ್ಲದೆ ಎಂಬುದಕ್ಕೆ ಒಂದು ಸರ್ಟಿಫಿಕೇಷನ್ ಬೇಕಾಗಿತ್ತು. ಪಂಚ ರಾಜ್ಯ ಚುನಾವಣೆಗಳು ಅದನ್ನು ಸಾಬೀತು ಮಾಡಿದವು. ಆಗಿನಿಂದ ತೆರೆಮರೆಯಲ್ಲಿ ನಡೆಸುತ್ತಿದ್ದ ಕಸರತ್ತುಗಳನ್ನು ಆರೆಸ್ಸೆಸ್ ಬಹಿರಂಗವಾಗೇ ಪ್ರಚಾರಕ್ಕೆ ತಂದಿತ್ತು. ಅದರ ಭಾಗವಾಗಿಯೇ ಗಡ್ಕರಿ ಮೋದಿ-ಶಾ ವಿರುದ್ಧವೇ ದನಿ ಬಿಚ್ಚಲು ಶುರು ಮಾಡಿದ್ದು.

ಬಿಜೆಪಿಯೊಳಗೆ ಈಗ ಸ್ಪಷ್ಟವಾಗಿ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ. ‘ಚುನಾವಣೆಗಳನ್ನು ಗೆದ್ದಾಗ ಎಲ್ಲಾ ಕ್ರಡಿಟ್ ತೆಗೆದುಕೊಳ್ಳುತ್ತಾರೆ, ಸೋತಾಗಲೂ ಅದರ ಹೊಣೆ ಹೊರಬೇಕಲ್ಲವೇ?’ ಎಂದು ನಿತಿನ್ ಗಡ್ಕರಿ ಐದು ರಾಜ್ಯಗಳಲ್ಲಿ ಬಿಜೆಪಿ ಸೋತಾಗ ಹೇಳಿದ್ದು ಮೋದಿ-ಶಾರನ್ನು ಉದ್ದೇಶಿಸಿಯೇ. ಇನ್ನು ಮೋದಿ ಟೀಮಿನ ಲೆಕ್ಕದಯ್ಯ ಅರುಣ್ ಜೇಟ್ಲಿ ‘ಬರೀ ಘೋಷಣೆಗಳು ಜನರ ಆಕಾಂಕ್ಷೆಗಳನ್ನು ತಣಿಸುವುದಿಲ್ಲ, ನೀತಿಗಳು ಆ ಕೆಲಸ ಮಾಡುತ್ತವೆ’ ಎಂದಿದ್ದು ಮೋದಿಯನ್ನು ತಿವಿಯುವುದಕ್ಕೆಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಅಚ್ಛೆ ದಿನ್ ಆಯೇಂಗೆ, ಮೇಕ್ ಇನ್ ಇಂಡಿಯಾ, ಅದು ಇದು ಹೇಳಿ ಜನರನ್ನು ಮರಳು ಮಾಡಲಾಗುವುದಿಲ್ಲ. ಪ್ರಾರಂಭದಲ್ಲಿ ಜನರಿಗೆ ಇಷ್ಟ ಆಗಬಹುದು, ಒಂದು ದಿನ, ಒಂದು ತಿಂಗಳು ಅಥವಾ ಒಂದು ವರ್ಷ ಜನರು ಘೋಷಣೆಗಳನ್ನು ಕೇಳಿ ಸಂತೋಷ ಪಡಬಹುದು (ಹೀಗೆ ಆಯಿತು ಕೂಡ), ಆಮೇಲೆ? ಏನಾಯಿತು ಎಂದು ಕೇಳುತ್ತಾರೆ. ಇದು ಅರುಣ್ ಜೇಟ್ಲಿ ಮಾತಿನ ತಿವಿತದ ವಿಶ್ಲೇಷಣೆ. ಇನ್ನು ಸುಷ್ಮಾ ಸ್ವರಾಜ್ ರಾಜಕೀಯದಿಂದ ಸುಮ್ಮನಾಗಿದ್ದಾದೂ ಅವರ ಒಲವು ಯಾವಕಡೆ ಇದೆ ಎಂದು ಎಲ್ಲರಿಗೂ ಗೊತ್ತು. ಇನ್ನೊಬ್ಬ ಪ್ರಮುಖ ವ್ಯಕ್ತಿಯಾದ ರಾಜನಾಥ ಸಿಂಗ್ ಮಾತನ್ನೇ ಆಡುತ್ತಿಲ್ಲ. ಅವರ ಮೌನ ಮಾತ್ರ ಬಹಳ ಮಾತನಾಡುತ್ತಿದೆ. ವಾಸ್ತವವೇನೆಂದರೆ, ನಿಧಾನವಾಗಿ ಇವರೆಲ್ಲರೂ ‘ನಾಯಕ’ನಿಂದ ದೂರಸರಿಯುತ್ತಿದ್ದಾರೆ. ಬಂಡಾಯದ ಬಾವುಟ ಹಾರಿಸಲು ಹೋಗಿ ಅಡ್ವಾಣಿಯಂತ ದೊಡ್ಡ ನಾಯಕರೇ ಮೂಲೆಗುಂಪಾಗಿರುವಾಗ ಇವರೆಲ್ಲ ಮೋದಿ-ಶಾ ವಿರುದ್ಧ ಮಾತಾಡುವ ಧೈರ್ಯ ತೋರುತ್ತಾರೆಂದರೆ ಅವರ ಬೆನ್ನಿಗೆ ಆರೆಸ್ಸೆಸ್ ಇದೆ ಅನ್ನೋದನ್ನು ಯಾರು ಬೇಕಾದರು ಅರ್ಥ ಮಾಡಿಕೊಳ್ಳಬಹುದು.

ಬಿಜೆಪಿಯ ಪ್ರಧಾನಮಂತ್ರಿ ಮತ್ತು ಆರ್.ಎಸ್.ಎಸ್. ಮುಖ್ಯಸ್ಥರ ಮಧ್ಯೆ ಅಧಿಕಾರಕ್ಕಾಗಿ ಇಂತಹ ಗುದ್ದಾಟ ಎಂದೂ ನಡೆದಿರಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಆಗಿನ ಸರಸಂಘಚಾಲಕರಾದ ಸುದರ್ಶನ್ ಅವರ ಮಾತುಗಳನ್ನು ಮೀರುತ್ತಿದ್ದಿಲ್ಲ. ಆದರೆ ಮೋದಿ ಹಾಗಲ್ಲ, ನಾನು ಪ್ರಧಾನಿ, ನಿಮ್ಮ ಹಿಡಿತದಲ್ಲಿ ನಾನೇಕಿರಬೇಕು ಎನ್ನುವುದು ಮೋದಿ ಅವರ ಧೋರಣೆ. ಇದು ಆರ್.ಎಸ್.ಎಸ್. ನವರಿಗೆ ಇಷ್ಟ ಆಗತ್ತಿಲ್ಲವಂತೆ. ಅನೇಕ ಜನರಿಗೆ ಅನಿಸಿದಂತೆ ಆರ್.ಎಸ್.ಎಸ್. ಗೂ ಮೋದಿ ನೇತೃತ್ವದಲ್ಲಿ ಬಿಜೆಪಿ ಉಗ್ರವಾದವನ್ನು ಪ್ರತಿಪಾದಿಸುತ್ತಿದೆ ಎಂದು ಸ್ವತಃ ಸಂಘವೇ ಪರೋಕ್ಷವಾಗಿ ವರಾತ ಶುರುಮಾಡಿಕೊಂಡಿದೆ. ಅದೇ ಕಾರಣಕ್ಕೆ ಸರಸಂಘಚಾಲಕ ಜೋಷಿಯವರೇ ಖುದ್ದಾಗಿ ಸಭೆಯೊಂದರಲ್ಲಿ ‘ಹಿಂದುತ್ವವೆಂದರೆ, ವಿವಿಧತೆಯಲ್ಲಿ ಏಕತೆ, ಮುಸ್ಲೀಮರು ಭಾರತದಲ್ಲಿ ಬೇಡ ಎಂದರೆ ಅದು ಹಿಂದುತ್ವವಲ್ಲ, ಬೌದ್ಧಮತ ಬೇಡವೆಂದರೆ ಅದು ಹಿಂದುತ್ವವಲ್ಲ’ ಎಂದು ಹೇಳಬೇಕಾಯಿತು.

ಮೋದಿಯನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಸಂಘ ನಡೆಸುತ್ತಿರುವ ಪ್ರಯತ್ನ ಇದೇ ಮೊದಲನೆಯದೇನಲ್ಲ. ಈ ಹಿಂದೆ ಮೋದಿಯ ತವರು ರಾಜ್ಯ ಗುಜರಾತಿನಲ್ಲಿ ಹಾರ್ದಿಕ್ ಪಟೇಲ್ ಮೀಸಲಾತಿ ಗದ್ದಲ ಎಬ್ಬಿಸಿದಾಗ ಆರ್.ಎಸ್.ಎಸ್. ನ ಅನೇಕರು ಹಾರ್ದಿಕ್ ಪಟೇಲ್‌ಗೆ ಬೆಂಬಲಿಸಿದ್ದರು. ಸರಳ ಪದಗಳಲ್ಲಿ ಹೇಳಬೇಕೆಂದರೆ, ಆರ್.ಎಸ್.ಎಸ್.ಗೆ ಮೋದಿ ಬೇಕಾಗಿಲ್ಲ. ಆರ್.ಎಸ್.ಎಸ್. ನೊಂದಿಗೆ, ಸರಸಂಘಚಾಲಕರೊಂದಿಗೆ, ಎಲ್ಲಾ ಪದಾಧಿಕಾರಿಗಳೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿರುವ ನಿತಿನ್ ಗಡ್ಕರಿ ಇವೆಲ್ಲ ಕಾರಣಗಳಿಂದಾಗಿ ಮೊದಲ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ.

ಆರೆಸೆಸ್ ಈಗ ಮೋದಿಯ ಬದಲಾಗಿ ನಿತಿನ್ ಗಡ್ಕರಿ ಅವರನ್ನು ಪ್ರಧಾನಿಯಾಗಿ ನೋಡಲು ಬಯಸುತ್ತಿದೆ. ಕಿಶೋರ್ ತಿವಾರಿ ಎನ್ನುವ ಆರೆಸೆಸ್‌ನ ರೈತನಾಯಕ, ಸಂಘದ ಹೆಡ್ಡಾಫೀಸಿಗೆ ಒಂದು ಪತ್ರ ಬರೆಯುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಧಾನಿಯಾಗಿ ನಿತಿನ್ ಗಡಕರಿ ಬರಬೇಕೆ ಹೊರತು ಮೋದಿ ಅವರಲ್ಲ ಎನ್ನುವುದು ಆ ಪತ್ರದ ಸಾರಾಂಶ. ಆ ಪತ್ರ ಬೇಕಂತಲೇ ಜನರ ನಡುವೆ ಹರಿದಾಡುವಂತೆ ಮಾಡಲಾಗುತ್ತೆ, ಮುಖ್ಯವಾಗಿ ತನ್ನ ಕಾರ್ಯಕರ್ತರ ನಡುವೆ. ತನ್ನನ್ನು ತಾನು ಒಂದು ಶಿಸ್ತಬದ್ಧ ಸಂಘಟನೆ ಎಂದು ಕರೆದುಕೊಳ್ಳುವ ಆರೆಸೆಸ್ ಇಂಥಾ ಅತಿಸೂಕ್ಷ್ಮ ಆಂತರಿಕ ಸಂಗತಿಯನ್ನು ಬಹಿರಂಗಪಡಿಸುತ್ತೆ ಅಂದರೆ ಅದಕ್ಕೆ ಅರ್ಥವೇನು? ಮೋದಿ ಈಗ ನಮ್ಮ ಆಯ್ಕೆಯಲ್ಲ ಎಂಬ ಸುದ್ದಿಗೆ ತನ್ನ ಜನರನ್ನು ನಿಧಾನಕ್ಕೆ ಅಣಿಗೊಳಿಸುವುದೇ ಆಗಿರುತ್ತೆ.

ಮೋದಿಗೆ ಹೋಲಿಸಿಕೊಂಡರೆ ನಿತಿನ್ ಗಡ್ಕರಿ ಸಂಘಕ್ಕೆ ನಿಷ್ಠ, ಮಿತ್ರಪಕ್ಷಗಳನ್ನು ಸೆಳೆಯುವ ಛಾಪೂ ಇದೆ, ಉಗ್ರ ಕೋಮುವಾದದ ಇಮೇಜು ಹೊಂದಿಲ್ಲ, ಅಹಮ್ಮು ಕಡಿಮೆ, ಪ್ರಶ್ನೆಗಳಿಗೆ ಬೆನ್ನು ತೋರಿ ಓಡುವ ಜಾಯಮಾನದವರಲ್ಲ. ದೇಶದಲ್ಲಿ ಕಾಂಗ್ರೆಸ್‌ನ ಜನಪ್ರಿಯತೆ ಹೆಚ್ಚುತ್ತಿದೆಯಾದರು ಸ್ಪಷ್ಟ ಬಹುಮತ ಪಡೆಯುವ ಲಕ್ಷಣಗಳು ಇನ್ನೂ ದಟ್ಟವಾಗಿಲ್ಲ. ಈಗಿಂದೀಗಲೇ ಎಲೆಕ್ಷನ್ ನಡೆದರೆ ಹಂಗ್ ಪಾರ್ಲಿಮೆಂಟ್ ಆಗುವ ಸಂಭವವೇ ಹೆಚ್ಚು. ಈಗಾಗಲೇ ಮೋದಿಯ ದುರಹಂಕಾರದಿಂದ ಬೇಸತ್ತು ದೂರ ಸರಿದಿರುವ ಶಿವಸೇನೆ, ಟಿಡಿಪಿಯಂತಹ ಮಿತ್ರಪಕ್ಷಗಳ ಜೊತೆ ಹೊಂದಾಣಿಕೆ ಕುದುರಿಸುವುದಕ್ಕೂ ನಿತಿನ್ ಗಡ್ಕರಿಯಂತಹ ತಟಸ್ಥ ಇಮೇಜಿನ ವ್ಯಕ್ತಿಯೇ ಸೂಕ್ತ ಎನ್ನುವ ಲೆಕ್ಕಾಚಾರದಲ್ಲಿ ಆರೆಸೆಸ್ ಗಡ್ಕರಿಯನ್ನು ಅಖಾಡಕ್ಕಿಳಿಸುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...