Homeಅಂಕಣಗಳುಉಗ್ರರನ್ನೇ ಬಿಡದ ಮೋದಿ ರೌಡಿಗಳನ್ನು ಬಿಟ್ಟಾರಾ!

ಉಗ್ರರನ್ನೇ ಬಿಡದ ಮೋದಿ ರೌಡಿಗಳನ್ನು ಬಿಟ್ಟಾರಾ!

- Advertisement -
- Advertisement -

ಸದ್ಯದ ಬಿಜೆಪಿ ಪಾರ್ಟಿಯೊಳಗೆ ರೌಡಿಗಳ ನೂಕುನುಗ್ಗಲು ನೋಡಿದ ಪ್ರತಾಪ ಸಿಮ್ಮ, ರೌಡಿಗಳು ಹೆದರಿ ಬಿಜೆಪಿಯೊಳಕ್ಕೆ ಬರಲುಕಾರಣ ನಮ್ಮ ಮೋದಿಯವರೇ ಎಂದರಂತಲ್ಲಾ; ಮೋದಿ ಉಗ್ರರನ್ನೇ ಅಟ್ಟಾಡಿಸಿಕೊಂಡು ಲಾಠಿ ಬೀಸುತ್ತಿದ್ದಾರೆ, ಆ ಲಾಠಿಗೆ ಸಿಕ್ಕ ಉಗ್ರರ ಕೆನ್ನೆ ಸಿಗಿದು ಹಲ್ಲು ಮುರಿದಿವೆ, ಕಣ್ಣು ಗೋಲಿಯಂತೆ ಆಕಾಶಕ್ಕೆ ಹಾರಿವೆ, ಕಿವಿ ತೂತುಬಿದ್ದು ಕೋಳ ತೊಡಿಸುವಂತಾಗಿವೆ; ಇದನ್ನ ನೋಡಿದ ಕೇಳಿದ ಊರ ರೌಡಿಗಳು, ಸದ್ಯಕ್ಕೆ ನಮ್ಮ ಅಂಗಾಂಗಗಳು ಆರೋಗ್ಯವಾಗಿರಬೇಕಾದರೆ, ಇದ್ದಂತೆಯೇ ಇರಬೇಕಾದರೆ ಮೋದಿ ಪಾರ್ಟಿಗೆ ಹೋಗಿ ಜೈಕಾರ ಹಾಕುವುದು ಬಿಟ್ಟು ಬೇರೆ ದಾರಿಯೇ ಕಾಣುತ್ತಿಲ್ಲ ಆದ್ದರಿಂದ ಬಿಜೆಪಿ ದಾರಿಯೇ ನಮಗೆ ಸೂಕ್ತವೆಂದು ತೀರ್ಮಾನಿಸಿದ್ದಾರೆ ಎಂದರಂತಲ್ಲಾ. ಇದಕ್ಕೆ ಒಂದು ಕಾರಣ ಸೇರಿಸುವುದಾದರೇ ಮೋದಿ ಸರಕಾರದ ಸಮಯದಲ್ಲಿ ಸಾವಿರಾರು ಮುಸ್ಲಿಮರನ್ನು ಸದೆಬಡಿದವರು ದೊಡ್ಡದೊಡ್ಡ ಹುದ್ದೆಗೆ ಏರಿದರು; ಇನ್ನು ಅವರ ಪಾರ್ಟಿಯ ರಾಜಕಾರಣಿಯೊಬ್ಬ ಕೇಸೊಂದರಲ್ಲಿ ಗಡಿಪಾರಾಗಿ ಕೊನೆಗೆ ಗೃಹಮಂತ್ರಿಯಾಗಿ ತನಗಾಗದವರ ಪಟ್ಟಿ ತಯಾರಿಸುತ್ತ ಕುಳಿತಿದ್ದಾರಂತಲ್ಲ. ಇಂತಹ ಜನ ಮುಂದೆ ಏನಾದರೂ ಮಾಡಬಲ್ಲರಾದ್ದರಿಂದ, ಆಡಳಿತ ನಡೆಸುತ್ತಿರುವ ಪಾರ್ಟಿಗೆ ಹೋಗಿ ಅಡಗಿಕೊಳ್ಳುವುದು ಸೂಕ್ತ ಎಂದು ಆಲೋಚಿಸುತ್ತಿರುವಾಗ ಫೈಟರ್ ರವಿ ಎಂಬಾತ ನಾಗಮಂಗಲದ ಕಡೆ ಹೊರಟನಂತಲ್ಲಾ, ಥೂತ್ತೇರಿ.

*****

ಈ ನಾಗಮಂಗಲಕ್ಕೂ ರಾಜಕಾರಣ ಕುಖ್ಯಾತಿಗೂ ಒಂದು ಇತಿಹಾಸವಿದೆ. ಈ ಹಿಂದೆ ಇಲ್ಲಿ ಶಾಸಕ, ಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರಾಗಿದ್ದ ಹೆಚ್.ಟಿ ಕೃಷ್ಣಪ್ಪನವರು, ಹಿಂದೆ ಬಂದರೆ ಒದೆಯದ ಮುಂದೆ ಬಂದರೆ ಹಾಯದ ಗೋವಿನ ರೀತಿಯ ವ್ಯಕ್ತಿ; ಇದನ್ನು ತಮ್ಮ ಬದುಕಿನುದ್ದಕ್ಕೂ ಪಾಲಿಸಿದ್ದ ಮತ್ತು ವಕೀಲರಾಗಿದ್ದ ಇವರು ರಾಜಕಾರಣಕ್ಕೆ ಬಂದಿದ್ದು ಕೊಲೆಗಾರ ಅಪರಾಧಿಗಳನ್ನು ಬಿಡಿಸಿದ ಕಾರಣಕ್ಕೆ. ಗುಳುಕಾಯಿ ಹೊಸಳ್ಳಿ ಜನ ಶಾನುಭೋಗರನ್ನೇ ಕೊಲೆ ಮಾಡಿ ಜೈಲಿಗೆ ಹೋದರು. ಅವರನ್ನೆಲ್ಲಾ ನಿರಪರಾಧಿಗಳೆಂದು ತಾಂತ್ರಿಕ ಕಾರಣಗಳ ಮುಖಾಂತರ ಖುಲಾಸೆಗೊಳಿಸಿದರು. ಕೊಲೆಗಾರರನ್ನು ಬಿಡಿಸಿದ ವ್ಯಕ್ತಿ ನಮ್ಮನ್ನ ರಕ್ಷಿಸುತ್ತಾನೆಂದು ಭಾವಿಸಿದ ಜನ ಚುನಾವಣೆಯಲ್ಲಿ ಗೆಲ್ಲಿಸಿ ಶಾಸಕನನ್ನಾಗಿ ಮಾಡಿದರು. ಇವರ ನಂತರ ಬಂದ ಶಿವರಾಮೇಗೌಡ, ಗಂಗಾಧರಮೂರ್ತಿಯ ಕೊಲೆ ಕೇಸಿನಲ್ಲಿ ಸಿಲುಕಿ ಅಂತೂ ಆರೋಪಮುಕ್ತರಾಗಿ ಬಚಾವಾದರು. ಇವರ ನಂತರ ಬಂದ ಚಲುವರಾಯಸ್ವಾಮಿ ಬಳಿಯಿದ್ದ ಕೆಲ ರೌಡಿಗಳು ನಿಷ್ಠಾವಂತ ನಾಯಿಗಳಂತೆ ಬಾಲ ಅಲ್ಲಾಡಿಸಿದರೆ ಹೊರತು ಯಾರ ಮೇಲೂ ದಾಳಿ ಮಾಡಲಿಲ್ಲ. ಇವರ ನಂತರ ಬಂದ ಸುರೇಶ್‌ಗೌಡ ಹೆಚ್‌ಎಎಲ್‌ನ ವಸತಿ ನಿರ್ಮಾಣದ ಸೊಸೈಟಿ ಹಣದ ಅವ್ಯವಹಾರದ ಜೊತೆಗೆ ರೌಡಿಗಳಿಂದಲೂ ಹಣ ಪಡೆದು ಅದನ್ನು ಹಿಂದಿರುಗಿಸದೇ ಇರುವುದರಿಂದ ಆತನನ್ನ ಸೋಲಿಸಲೆಂದೇ ಫೈಟರ್ ರವಿ ಎಂಬ ರೌಡಿ ಬಂದು ಇಡೀ ತಾಲೂಕಿನ ತುಂಬ ಕಟೌಟ್ ಹಾಕಿದ್ದನಂತಲ್ಲಾ. ಏನು ಮಾಡಿದರೂ ರೌಡಿಯಂತೆ ಕಾಣದೆ ಮಠದ ಮೃತ ಸ್ವಾಮಿಯಂತೆ ಕಾಣುತ್ತಿದ್ದಾನೆ ಎಂದು ಜನ ನಗುತ್ತಿದ್ದಾರಲ್ಲಾ, ಥೂತ್ತೇರಿ.

*****

ಹಿಂದೆ ಹೆಚ್ಚು ಯುದ್ಧಗಳಾಗುತ್ತಿದ್ದವು; ದೈಹಿಕವಾಗಿ ಭಲಾಢ್ಯವಾಗಿದ್ದ ಮತ್ತು ತೋಳು ತಿಮಿರಿನ ಜನ ಸೈನ್ಯಕ್ಕೆ ಸೇರಿ ಹತರಾಗುತ್ತಿದ್ದರು. ಅವರ ಹೆಂಡತಿಯರು ಅನಿವಾರ್ಯವಾಗಿ ಸಮಸ್ಯೆಗಳಿಗೆ ತುತ್ತಾಗುತ್ತಿದ್ದರು. ಇವರೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಶೋಷಿತ ಸಮುದಾಯಗಳ ಜನ. ಸ್ವಾತಂತ್ರ್ಯಾನಂತರ ರಾಜಗುರುಗಳು ನಿರ್ನಾಮವಾಗಿ ಸೈನಿಕರು ಇಲ್ಲವಾದ ಕಾರಣ ಆ ಮನಸ್ಥಿತಿಯವರು ಊರುಗಳಲ್ಲೇ ರೌಡಿಗಳಾದರು; ಅವರು ಆ ತರಹ ಆಗಲು ಒಂದು ಸಣ್ಣ ಕಾರಣ ಸಾಕು, ಮುಂದೆ ಪೊಲೀಸರೇ ಬೆಳೆಸಿ ಭೂಗತಲೋಕ ಸೇರಿಸುತ್ತಾರೆ. ಈ ಭೂಗತ ಲೋಕದ ಕೃತ್ಯಗಳು ಭಯಾನಕ. ರೌಡಿಗಳ ಆಯಸ್ಸು ಮುಗಿದು ಸತ್ತ ಉದಾಹರಣೆ ವಿರಳ. ಭೂಗತ ಲೋಕದ ರಾಜ-ಡಾನ್ ದೈತ್ಯ ದೇಹಿಯಾಗಿರುತ್ತಾನೆ. ಜಯರಾಜ್, ಬಲರಾಮ್, ಫಯಾಜ್, ಕೊತ್ವಾಲ, ಶಿವರಾಂ, ಸುನಿಲ್ ಇತ್ಯಾದಿ ವ್ಯಕ್ತಿಗಳ ಆಕಾರ ನೋಡಿದರೆ ನಿಮಗೆ ತಿಳಿಯುತ್ತದೆ. ಆದರೆ ದೇಹಾಕೃತಿಯಲ್ಲ ದುರ್ಬಲವಾಗಿದ್ದ ಮುತ್ತಪ್ಪ ರೈ ಬುದ್ಧಿವಂತಿಕೆ ಉಪಯೋಗಿಸಿ ಭೂಗತಲೋಕಕ್ಕೆ ಪಿಸ್ತೂಲು ತಂದ ವ್ಯಕ್ತಿ. ಅದನ್ನ ಆತನೇ ಉಪಯೋಗಿಸಬೇಕಿಲ್ಲ; ಕಾಸುಕೊಟ್ಟು ನಿರ್ದೇಶನ ನೀಡಿದರೆ ಸಾಕು; ಯಾವ ಹುಡುಗನಾದರೂ ಆ ಕೆಲಸ ಮಾಡಿ ತಲೆಮರೆಸಿಕೊಳ್ಳಬಲ್ಲ. ಇಂತಹ ಕೆಲಸವನ್ನ ದುಬಾಯಿಯಲ್ಲಿ ಕುಳಿತು ಮಾಡಿ ಯಾವ ಕೇಸುಗಳನ್ನು ಕಡಿಮೆ ಅಂಟಿಸಿಕೊಂಡು ಬದುಕಿದವನು ಈ ಮುತ್ತಪ್ಪ ರೈ. ಅಂತಹ ರೈಗೂ ನಾಗಮಂಗಲದ ಕಡೆ ಚಿಲ್ಲರೆ ರಾಜಕಾರಣಿಯೊಬ್ಬ ಕೋಟ್ಯಂತರ ರೂಪಾಯಿಗಳ ನಾಮ ಎಳೆದು, ನಾಳೆ ಕೊಡುತ್ತೇನೆ ನಾಡಿದ್ದು ಗ್ಯಾರಂಟಿ ಎಂದು ಹೇಳುತ್ತಿರುವಾಗಲೇ ಮುತ್ತಪ್ಪ ರೈ ದೇಹ ತ್ಯಜಿಸಿದ. ಅಂತಹ ಮುತ್ತಪ್ಪನಿಗೆ ಮಣ್ಣು ತಿನ್ನಿಸಿದವರು ಈ ನಾಗಮಂಗಲದ ಮಣ್ಣಿನವನು ಅನ್ನುವುದಾದರೆ ಇನ್ನ ಬಿಜೆಪಿ ರೌಡಿಗಳು ಇಲ್ಲಿ ಉದ್ಧಾರವಾಗುವುದುಂಟೆ, ಥೂತ್ತೇರಿ.

*****

ಬೆಂಗಳೂರಿಂದ ಎರಡೂವರೆ ಗಂಟೆ ಪ್ರಯಾಣದಷ್ಟು ದೂರವಿರುವ ನಾಗಮಂಗಲ ಕೆಲ ರೌಡಿಗಳಿಗೆ ಸುರಕ್ಷಿತ ಜಾಗ. ದರೋಡೆ ಕೇಸೊಂದರಿಂದ ಪರಾರಿಯಾಗಿ ಎಲ್ಲಿ ಅಡಗಿಕೊಳ್ಳಬೇಕೆಂದು ರೌಡಿಗಳೆಲ್ಲಾ ಚರ್ಚಿಸುತ್ತಿರುವಾಗ ಇವರಿಗೆ ಕಾಫಿ, ಸಿಗರೇಟು ತಂದುಕೊಡುತ್ತಿದ್ದ ಹುಡುಗನೊಬ್ಬ ,”ಸಾರ್ ನಾಗಮಂಗಲದತ್ರ ಇರೋ ನಮ್ಮೂರಲ್ಲಿರಿ, ಅಲ್ಲಿಗೆ ಯಾರೂ ಬರಕ್ಕಾಗಲ್ಲ” ಎಂದ. ಮರು ಮಾತನಾಡದ ರೌಡಿಗಳು ಆ ಮುಗ್ದ ಹುಡುಗನ ಹಿಂದೆ ಬಂದು ಅವನ ಮನೆಯೊಳಗೆ ಇಸ್ಪಿಟ್ ಆಡುತ್ತ, ಮಾಂಸ ಮದ್ಯದ ಅಮಲಲ್ಲಿ ತೇಲಾಡುತ್ತಿರುವಾಗ ಹುಡುಗನ ಅಪ್ಪ “ಮಗ ಯಾರ್ಲ ಇವುರು” ಅಂದ. “ಇವುರ್‍ಯೆಲ್ಲ ಬೆಂಗಳೂರು ರೌಡಿಗಳು ಕಣಪ್ಪ, ಯಾವ ಕ್ಯಲಸ ಮಾಡಕ್ಕೂ ಹೇಸದಿಲ್ಲ. ಅದೇನೊ ಮಾಡಿ ಇಲ್ಲಿ ಬಂದವುರೆ ಯಾರಿಗೂ ಹೇಳಬ್ಯಾಡ” ಅಂದ. ಕೂಡಲೇ ಆ ಅಪ್ಪ ರೌಡಿಯೊಬ್ಬನ ಜುಬ್ಬ ಹಾಕಿಕೊಂಡ; ಅದಾಗಲೇ ರೌಡಿಗಳೇ ಕೊಟ್ಟ ವಿಸ್ಕಿ ಕುಡಿದಿದ್ದರಿಂದ, ಊರಮುಂದಿನ ಕಟ್ಟೆಮೇಲೆ ಕುಳಿತು “ಅದ್ಯಾವನನ್ನ ಮಗ ಬತ್ತಿರೋ ಬರ್ಲಿ, ಏನಂತ ತಿಳಕಂಡಿದ್ದಿರಿ ಈ ನನ್ನ? ಬಂದು ಮುಟ್ಟಿ ನೋಡಿ ನಿಮ್ಮ ಕತೆ ಏನಾಯ್ತದೆ ಅಂತ ಗೊತ್ತಾಯ್ತದೆ. ಯಂಥಾ ಜನ ತಂದು ನನ್ನ ಮನಿಲಿ ಮಡಿಕಂಡಿದ್ದಿನಿ ಗೊತ್ತೆ? ಕೊಲೆ ಮಾಡಿ ಜಯಿಸಿಗಂಡೋರು ನನ್ನ ಮನೇಲಿ ಇಸ್ಪೀಟ್ ಆಡ್ತಾ ಅವುರೆ ಗೊತ್ತೆ” ಎಂದು ಅವಾಜ್ ಹಾಕಿದ. ಆತನ ಎದುರು ಜನ ಸೇರತೊಡಗಿದರು. ಇತ್ತ ರೌಡಿಗಳು ಹಿತ್ತಲ ಬಾಗಿಲಿಂದ ಎದ್ದುಬಿದ್ದು ಓಡತೊಡಗಿದರು! ಎಂದಿನಂತೆ ಊರ ಜನಕ್ಕೆ ಆ ಕೊಚ್ಚಿಕೊಂಡ ವ್ಯಕ್ತಿ ಮತ್ತೊಂದು ಸುಳ್ಳು ಹೇಳಿದಂತಾಯ್ತು. ಈಗ ಅಂತಹ ಸ್ಥಿತಿಯಿಲ್ಲ. ಫೈಟರ್ ರವಿ ಕಾರಣಕ್ಕೆ ಬೆಂಗಳೂರು ಕೆಲ ಪುಡಿರೌಡಿಗಳು ಬಂದು ಇಲ್ಲಿನ ತೋಟ ತುಡಿಕೆಯಲ್ಲಿ ಬೇಯುತ್ತಿರುವ ಬಾಡಿಗಾಗಿ ಕಾಯಬಹುದು. ಅಂತೂ ಬಿಜೆಪಿ ಪಾಪದಕೊಡ ರೌಡಿಗಳಿಂದ ತುಂಬತೊಡಗಿದೆಯಂತಲ್ಲಾ, ಥೂತ್ತೇರಿ.

ಇದನ್ನೂ ಓದಿ: ಅನಂತನಾಗ್ ಮೋದಿ ಮೆಚ್ಚಿದ್ದರಲ್ಲಿ ಅಚ್ಚರಿಯೇನಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...