Homeಅಂಕಣಗಳುಅನಂತನಾಗ್ ಮೋದಿ ಮೆಚ್ಚಿದ್ದರಲ್ಲಿ ಅಚ್ಚರಿಯೇನಿಲ್ಲ!

ಅನಂತನಾಗ್ ಮೋದಿ ಮೆಚ್ಚಿದ್ದರಲ್ಲಿ ಅಚ್ಚರಿಯೇನಿಲ್ಲ!

- Advertisement -
- Advertisement -

ನಮ್ಮ ಸಿನಿಮಾರಂಗದ ಒಂದೆರೆಡು ಸುದ್ದಿಗಳು ಶಾನೆ ಸ್ವಾರಸ್ಯವಾಗಿವೆಯಂತಲ್ಲಾ! ಗೋಳಿನ ದನಿಯಿಂದ ಹಾಸ್ಯನಟನಾಗಿ ಮೇಲೆ ಬಂದ ಕೋಮಲ್, ಅದು ಬಿಟ್ಟು ಹೀರೋ ಆದಾಗ ಜನ ತಿರಸ್ಕರಿಸಿದರು. ತನ್ನನ್ನು ಜನ ಹೇಗೆ ನೋಡಲು ಬಯಸುತ್ತಾರೆ ಎಂಬುದನ್ನು ಯಾವುದೇ ನಟ ಮೊದಲು ಗ್ರಹಿಸಿಕೊಳ್ಳಬೇಕು. ಅದಾಗದಿದ್ದರೆ, ಜೋತಿಷ್ಯದ ಮೊರೆ ಹೋಗುತ್ತಾರೆ; ಆದರೆ ಕೋಮಲ್ ಜ್ಯೋತಿಷ್ಯಕ್ಕಾಗಿ ದೂರ ಹೋಗದೆ ತನ್ನ ಅಣ್ಣನನ್ನೆ ಆಶ್ರಯಿಸಿದ್ದಾರೆ. ನವರಸ ನಾಯಕ ಜಗ್ಗೇಶ್ ಈಗ ಜ್ಯೋತಿಷಿಯಂತೆ ಜಾತಕ ಹಿಡಿದು ಗ್ರಹಗತಿಗಳ ಸ್ಥಾನ ಗುರುತಿಸಿ ನಿಮಗೆ ಯಾವ ಗ್ರಹದ ಕಾಟವಿದೆ ಎಂದೆಲ್ಲಾ ಕರಾರುವಕ್ಕಾಗಿ ಹೇಳುತ್ತಾರಂತೆ; ಅಲ್ಲಿಗೆ ಈ ಮಾಜಿ ಹಾಸ್ಯನಟ ದಶರಸ ನಟನಾಗಿರುವ ಸುದ್ದಿ ಕೋಮಲ್‌ರಿಂದ ಹೊರಬಿದ್ದಿದೆ. ನಿನಗೆ ಕೇತು ದೆಸೆಯಿಂದ ಕೇಡಾಗಿದೆ ಎಂದು ತಮ್ಮನಿಗೆ ಹೇಳಿ ಆತ ಐದು ವರ್ಷ ಮೂಲೆಯಲ್ಲಿ ಕೂರುವಂತೆ ಮಾಡಿದ ಈ ಆಧುನಿಕ ಜ್ಯೋತಿಷಿ ಆ ಅವಧಿಯಲ್ಲಿ ತಾನೇ ಮೆರೆಯಲು ಯೋಚಿಸಿದ್ದರಾ? ದಾಯಾದಿ ಮತ್ಸರ ಹೀಗೆ ಎಂದು ಹೇಳಲು ಬರುವುದಿಲ್ಲ. ಕೇತುವಿನಿಂದ ಕೇಡಾಗುತ್ತದೆಂದು ಐದು ವರ್ಷ ಮನೆಯಲ್ಲಿರಲು ತನ್ನ ತಮ್ಮನಿಗೆ ಹೇಳಿದ ಜಗ್ಗೇಶ ತನ್ನ ಜಾತಕ ಕುಂಡಲಿ ಹರಡಿಕೊಂಡು ಗ್ರಹಗತಿಗಳ ಸ್ಥಾನಗಳನ್ನು ಗ್ರಹಿಸಿ ತನ್ನ ಸಿನಿಮಾ ತೋತಾಪುರಿ ತೋಪೆದ್ದೋಗುವ ಸತ್ಯವನ್ನು ಗ್ರಹಿಸಬಹುದಿತಲ್ಲಾ. ಆದ್ದರಿಂದ ಧಿಡೀರನೆ ಉದ್ಭವಿಸಿರುವ ಈ ಉದಯೋನ್ಮುಖ ಬಿಜೆಪಿ ಜ್ಯೋತಿಷಿಯಿಂದ ಹುಷಾರಾಗಿರಿ ಎಂದು ಕಾಂಗೈಗಳು ಪ್ರಚಾರ ಮಾಡುತ್ತಿವೆಯಂತಲ್ಲಾ, ಥೂತ್ತೇರಿ.

******

ಮಾತನಾಡಿಸಿದ ಕೂಡಲೇ ಸೋಮಾರಿ ಮತ್ತು ಜವಬ್ದಾರಿಯಿಲ್ಲದ ಸ್ವಾರ್ಥಿಯಂತೆ ಕಾಣುವ ಅನಂತನಾಗ್ ಹೀರೋ ಆಗಿ ನಲವತ್ತಾರು ವರ್ಷ ತುಂಬಿರುವ ಈ ಸಂದರ್ಭದಲ್ಲಿ ನಾನು ಮೋದಿಯ ಕಟ್ಟಾ ಅಭಿಮಾನಿ ಎಂದುಬಿಟ್ಟಿದ್ದಾರಲ್ಲಾ. ಇಂತಹ ಮಾತು ಇಂತವರ ಬಾಯಲ್ಲಿ ಸುಮ್ಮಸುಮ್ಮನೆ ಬರುವುದಿಲ್ಲ. ಯಾಕೆಂದರೆ ಇಂತವರ ಬಾಯನ್ನೇ ನೋಡುತ್ತಿರುವ ಆರೆಸ್ಸೆಸ್ಸಿಗರು ತಮ್ಮ ಅಜೆಂಡಾಗಳ ರಿಜಿಸ್ಟರಿನಲ್ಲಿ ತಮ್ಮ ಪರ ಮಾತನಾಡಿದವರ ಹೆಸರನ್ನು ದಾಖಲಿಸಿಕೊಂಡು ಅವರನ್ನು ಸ್ಥಾನಮಾನ ಬಿರುದು ಬಾವಲಿಗಳ ಪಟ್ಟಿಗಳಿಗೆ ಸೇರಿಸಿಕೊಳ್ಳುತ್ತವೆ. 1985ರಲ್ಲಿ ಇದೇ ಅನಂತನಾಗ್ ರಾಮಕೃಷ್ಣ ಹೆಗಡೆ ಹೇಳಿದರೆ ನಾನು ಹಾಳು ಬಾವಿಗೂ ಬೀಳಬಲ್ಲೆ ಎಂದುಬಿಟ್ಟಿದ್ದರು. ಆ ಕೂಡಲೇ ಹೆಗಡೆ ಹಾಳು ಬಾವಿ ಮುಚ್ಚಿ ನಜೀರ್ ಸಾಹೇಬರು ಬೋರ್‌ವೆಲ್ ಮುಖಾಂತರ ಜನರಿಗೆ ನೀರುಕೊಡುವ ವ್ಯವಸ್ಥೆ ಮಾಡಿದ್ದು ಈಗ ಇತಿಹಾಸ. ಆದರೆ ಹೆಗಡೆಯವರು ಎಂತಹ ಕಿಲಾಡಿಯೆಂದರೆ ಅನಂತನಾಗ್‌ಗೆ ತಾನೇ ಸಹಾಯ ಮಾಡುವುದರ ಬದಲು ಪಟೇಲರಿಗೆ ಹೇಳಿ ಮಂತ್ರಿ ಮಾಡಿಸಿದರು. ಪಟೇಲರ ಯಣ್ಣೆಪಾರ್ಟಿಗೆ ಒಬ್ಬ ಗುಂಡಿನ ಗೆಳೆಯ ಸಿಕ್ಕಂತಾಯ್ತು. ನಗರಾಭಿವೃದ್ಧಿ ಸಚಿವನಾಗಿ ಈತ ಮಾಡಿದ ಸಾಧನೆ ಎಲ್ಲಿ ಹುಡುಕಿದರೂ ಸಿಗುವುದಿಲ್ಲ. ಕೆಲವು ದಿನ ಖಾತೆಯೇ ಇಲ್ಲದೆ ಮಂತ್ರಿಯಾಗಿದ್ದ ದಾಖಲೆ ಮಾತ್ರ ಈತನ ಹೆಸರಿನಲ್ಲಿ ಹಾಗೇಯೇ ಇದೆ. ಅನಂತನಾಗ್ ಎಂಬ ನಟನ ಬಾಯಿಂದ ಮೋದಿ ಹೊಗಳಿಕೆ ಮಾತು ಸುಮ್ಮಸುಮ್ಮನೆ ಬರುವುದಿಲ್ಲ. ಮೋದಿ ಸರಕಾರದಿಂದ ಅದ್ಯಾವ ಸ್ಥಾನಮಾನ ಪ್ರಶಸ್ತಿ ಸಿಗುತ್ತದೋ ನೋಡಬೇಕೆಂಬುದು ಆತನನ್ನು ಕಂಡರಾಗದವರ ಅಭಿಪ್ರಾಯವಾಗಿದೆಯಲ್ಲಾ, ಥೂತ್ತೇರಿ.

*******

ಈ ದೇಶದಲ್ಲಿ ಮೀಸಲಾತಿ ವಿರೋಧಿಗಳೆಲ್ಲಾ ಹಠಾತ್ತನೆ ಮೀಸಲಾತಿಗಾಗಿ ಹೋರಾಟ ಶುರು ಮಾಡಿಕೊಂಡಿದ್ದಾರಲ್ಲಾ. ಇದೊಂದು ರೀತಿ ಬಸವಣ್ಣನವರ ವಚನದಂತೆ ’ಏರಿಯೇ ಕೆರೆನೀರು ಕುಡಿದಂತೆ, ಬೇಲಿಯೇ ಹೊಲಮೇಯ್ದು ಬಿಸಾಡಿದಂತಲ್ಲಾ’. ಹಿಂದಣದನ್ನು ನೆನಪಿಸಿಕೊಳ್ಳುವುದಾದರೆ, ಮಂಡಲ ವರದಿ ವಿರುದ್ದ ತಿರುಗಿ ಬಿದ್ದ ಬಿಜೆಪಿಯವರು ಕಂಡವರ ಮಕ್ಕಳಿಗೆ ಬೆಂಕಿ ಹಚ್ಚಿದರು. ಉತ್ತರ ಭಾರತದಲ್ಲಿ ಒಕ್ಕಲಿಗರನ್ನು ಮೀಸಲಾತಿಯ ಮಂಡಲ ಕಮೀಷನ್ ಒಳಗೆ ಸೇರಿಸಿದ್ದನ್ನು ಅರಿಯದ ಒಕ್ಕಲಿಗರು ಇಲ್ಲಿ ಮಂಡಲದ ವಿರುದ್ಧ ಪ್ರತಿಭಟಿಸಿದರು. ಮಂಡಲದೊಳಗೆ ನೀವೂ ಇದ್ದೀರಿ ಎಂದು ಯಾರೂ ಹೇಳಲಿಲ್ಲ. ಏಕೆಂದರೆ ನಮ್ಮನ್ನಾಳುವ ಜನ ಮಂಡಲ ಕಮಿಷನ್ ವರದಿಯನ್ನೇ ಓದಿಕೊಂಡಿರಲಿಲ್ಲ. ಈಗ ಈ ಸಮುದಾಯದ ಪ್ರತಿನಿಧಿ ರಾಜಕಾರಣಿಗಳು ಮೀಸಲಾತಿ ಗಲಭೆ ಎಬ್ಬಿಸಲಿದ್ದಾರಲ್ಲಾ. ಹೊಸ ತಲೆಮಾರು ಇದಕ್ಕೆ ಹುಚ್ಚೆದ್ದು ಕುಣಿಯಬಹುದು. ಈಗ ಮೀಸಲು ಗಲಭೆ ಬೇಕಿರುವುದು ಮುಂದುವರಿದ ರಾಜಕಾರಣಿಗಳಿಗೆ. ಉದ್ಯೋಗಗಳೇ ಇಲ್ಲದಿದ್ದರೂ ಎಲ್ಲರೂ ಮೀಸಲು ಕೇಳುವಂತೆ ಮಾಡಿ ಮೀಸಲನ್ನೆ ರದ್ದು ಮಾಡುವ ಸಂಚಿಗಾಗಿ ಬಿಜೆಪಿ ಕಾಯುತ್ತಿದೆಯಂತಲ್ಲಾ, ಥೂತ್ತೇರಿ.

******

ಕರ್ನಾಟಕ ಈವರೆಗೆ ಕಂಡರಿಯದ ಧಾರಾಳತನದ ಮುಖ್ಯಮಂತ್ರಿಗಳು ಏನೂ ಕೇಳಿದರೂ ಕೊಡುವಂತಹ ಕೊಡುಗೈ ದಾನಿಗಳಾಗಿದ್ದಾರಂತಲ್ಲಾ. ಮೀಸಲಾತಿ ವಿಷಯ ಬಂದರೆ ಎಷ್ಟು ಪರಸೆಂಟ್ ಬೇಕು ಹೇಳಿ ಎಂದು ಅವರೇ ಕೇಳುತ್ತಾರೆ. ಅಡಿಕೆ ತೋಟಕ್ಕೆ ಎಲೆಚುಕ್ಕೆ ರೋಗಬಂದು ಯಕ್ಕುಟ್ಟಿ ಹೋಗಿದೆ ಸ್ವಾಮಿ ಎಂದರೆ ಅದರ ಕೊತೆಗೆ ಹವಮಾನ ವೈಪರೀತ್ಯದಿಂದ ಉಂಟಾದ ನಷ್ಟವನ್ನು ಸೇರಿಸಿ ಕೇಳಿ ಎನ್ನುತ್ತಾರೆ. ಇನ್ನ ಶರಾವತಿ ಡ್ಯಾಮಿನ ಹಿನ್ನೀರಿಗೆ ಸಿಕ್ಕಿ ದಿಕ್ಕಾಪಾಲಾದ ಜನರು ಭೂಮಿ ಹಕ್ಕಿನ ಪತ್ರ ಕೇಳಿದರೆ, ಡಿಸೆಂಬರ್ ಒಳಗೆ ಹಿನ್ನೀರಿನಲ್ಲೇ ಹಕ್ಕುಪತ್ರ ಕೊಡುತ್ತೇನೆ ಎನ್ನುತ್ತಾರೆ, ಜೊತೆಗೆ ನೂರಾರು ಕೋಟಿ ರೂಗಳ ಕಾಮಗಾರಿ ಕಲ್ಲುಗಳನ್ನು ಸತ್ತವರ ಗೋರಿಕಲ್ಲುಗಳಂತೆ ನೆಡುತ್ತ ಹೋಗುತ್ತಿದ್ದಾರೆ. ಆದರೆ ಕಬ್ಬಿನ ಬೆಂಬಲ ಬೆಲೆಗಾಗಿ ಹೋರಾಟ ಮಾಡುತ್ತಿರುವ ರೈತರ ಕಡೆ ತಿರುಗಿ ನೋಡಿಲ್ಲ. ಅಕಸ್ಮಾತ್ ಅಲ್ಲಿಗೆ ಹೋದದ್ದಾದರೆ ರೈತರು ಹಿಡಿದು ಉರುಳುಸೇವೆ ಮಾಡಿಸುತ್ತಾರೆಂಬ ಇಲ್ಲದ ಮಾಹಿತಿಯನ್ನ ತಾವೇ ಊಹಿಸಿಕೊಂಡು ಸದ್ಯಕ್ಕೆ ಪರಿಹಾರ ಕಾಣದ ಅಡಿಕೆ ಚುಕ್ಕೆರೋಗ ಇರುವ ಜಾಗ ಹುಡುಕುತ್ತ ಹೊರಟರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಕೆಂಪೇಗೌಡರ ಪ್ರತಿಮೆಯನ್ನು ಸರಿಯಾಗಿ ನೋಡಿದ್ದೀರ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಎನ್‌ಡಿಎ ಮೈತ್ರಿ ಪಕ್ಷದ ನಾಯಕ ರಾಜೀನಾಮೆ

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬಿಜೆಪಿಯ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರ ಪುತ್ರನಿಗೆ ಟಿಕೆಟ್ ನೀಡಿದ ಬೆನ್ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ ಎನ್‌ಡಿಎ ಮೈತ್ರಿ ಪಕ್ಷ ಆರ್‌ಎಲ್‌ಡಿಯ ರಾಷ್ಟ್ರೀಯ ವಕ್ತಾರ ರೋಹಿತ್...