ಬಿಜೆಪಿಯವರಿಂದ ನಿರ್ಮಿಸಿಕೊಂಡು ಅನಾವರಣಗೊಂಡ ಕೆಂಪೇಗೌಡರ ಪ್ರತಿಮೆಯನ್ನ ನೋಡಿದ್ದೀರಾ? ನೋಡದಿದ್ದರೆ ಸರಿಯಾಗಿ ನೋಡಿ, ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯವೇ ಮೆಚ್ಚಿದ ಪಾಳೇಗಾರ. ಪಾಳೇಗಾರ ಪರಾಕ್ರಮಿಯಾಗಿ ಮೆರೆಯುತ್ತಿದ್ದ ಕಾಲ ಅದು. ಆದರೆ ನಮ್ಮ ಬಿಜೆಪಿಗಳು ಕೆತ್ತಿಸಿ ನಿಲ್ಲಿಸಿರುವ ಕೆಂಪೇಗೌಡರು ಹಿಡಿದ ಕತ್ತಿ ಮತ್ತು ಮುಖಭಾವಕ್ಕೆ ಒಂದಿಷ್ಟು ಹೋಲಿಕೆಯಿಲ್ಲವಂತಲ್ಲಾ. ಅತ್ತ ಶಿವಗಂಗೆಯಲ್ಲಿರುವ ಕೆಂಪೇಗೌಡರ ಸಾತ್ವಿಕತೆಯೂ ಅದರಲ್ಲಿ ಇಲ್ಲವಂತಲ್ಲಾ. ಬೇಲಿ ಸವರಲು ಕತ್ತಿ ಹಿಡಿದಂತೆ ಕಾಣುವ ಕೆಂಪೇಗೌಡರ ಪ್ರತಿಮೆ ಕಡಿದ ಶಿಲ್ಪಿಗೆ ಕೆಂಪೇಗೌಡರ ತಲೆ ಅಷ್ಟುಗಾತ್ರವಿದ್ದ ಮೇಲೆ ಎದೆಭಾಗ ಎಷ್ಟಿರಬೇಕೆಂಬುದೇ ಗೊತ್ತಿಲ್ಲ ಅಂತ ಕಾಣಿಸುತ್ತೆ. ಪ್ರತಿಮೆಯಲ್ಲಿ ತೊಡಿಸಿರುವ ಬಟ್ಟೆಯಂತೂ ಕೆಂಪೇಗೌಡರ ಕಾಲವನ್ನು ಪ್ರತಿನಿಧಿಸುತ್ತಿಲ್ಲ. ಈಗಲೂ ಕಾಲ ಮಿಂಚಿಲ್ಲ ಕೆಂಪೇಗೌಡರ ಪ್ರತಿಮೆಯನ್ನ ಅನಾವರಣಗೊಳಿಸಲು ಆಹ್ವಾನವಿಲ್ಲದೆ ಅವಮಾನಗೊಂಡವರೆಲ್ಲಾ ಸೇರಿ ಒಳ್ಳೆ ಪ್ರತಿಮೆ ಮಾಡಿಸಿ ನಿಲ್ಲಿಸಬಹುದಂತಲ್ಲಾ, ಥೂತ್ತೇರಿ.
*****
ಬಿಜೆಪಿಗಳು ಯಾವ ಕೆಲಸ ಮಾಡಿದರೂ ಅಲ್ಲೊಂದು ಸಂಚು ಮತ್ತು ಸೇಡು ಇದೇ ಇರುತ್ತದೆ. ಅಶೋಕ ಮತ್ತು ಅಶ್ವತ್ಥ ನಾರಾಯಣರ ಜೊತೆಗೆ ನಿರ್ಮಲಾನಂದ ಸ್ವಾಮಿ ಇದ್ದರೆ ಸಾಕು, ಇಡೀ ಒಕ್ಕಲಿಗ ಸಮಾಜ ಬಿಜೆಪಿ ದೊಡ್ಡಿಗೆ ಬಂದು ತುಂಬಿಕೊಳ್ಳುತ್ತದೆ ಅಂದುಕೊಂಡಿದ್ದಾರೆ. ಹೀಗೆ ಭಾವಿಸಿರುವ ಅಶ್ವತ್ತಶೋಕರು ಆದಿಚುಂಚನಗಿರಿ ಸ್ವಾಮಿಗೆ ನಮ್ಮಷ್ಟು ಹತ್ತಿರ ಯಾರೂ ಇಲ್ಲ ಎಂಬ ಸಲುಗೆ ತೋರಲು ಅವರ ಭುಜ ಹಿಡಿದು ಪೋಜು ಕೊಟ್ಟಿವೆಯಲ್ಲಾ. ಜಗದ್ಗುರುವಿನ ಭುಜವನ್ನ ಸಲುಗೆಯಿಂದ ಮುಟ್ಟಿರುವ ಕಾರಣಕ್ಕೆ ದೂರು ದಾಖಲಿಸಿ ಕೇಸುಮಾಡಲು ಒಕ್ಕಲಿಗ ಲಾಯರು ತಯಾರಾಗಿದ್ದರಂತಲ್ಲಾ. ಆದರೆ ಭುಜವನ್ನ ಮುಟ್ಟಿಸಿಕೊಂಡ ಜಗದ್ಗುರುವೇ ಮೋಹಕವಾಗಿ ನಗುತ್ತ ಹಾಗೆ ಭುಜ ಮುಟ್ಟಲು ನಾನೇ ಹೇಳಿದೆ ಎಂದರೆ ಮಾಡುವುದೇನು ಎಂದು ಸುಮ್ಮನಾದರಂತಲ್ಲಾ. ಅದೇನಾದರಾಗಲಿ ಕೃಷಿಕ ಸಮಾಜದ ಸಿದ್ಧಾಂತಗಳನ್ನ ಕೈಬಿಟ್ಟು ವೈದಿಕ ಪರಂಪರೆ ಕಡೆ ಸಾಗುತ್ತಿರುವ ಚುಂಚನಗಿರಿ ಮಠವನ್ನ ಆ ಭೈರವೇಶ್ವರನೇ ಬಚಾವು ಮಾಡಬೇಕಂತಲ್ಲಾ, ಥೂತ್ತೇರಿ.
*****
ಇದನ್ನೂ ಓದಿ: ರಂಜಿಸಿ ವಂಚಿಸುವ ಕಾಂತಾರ
ಇತ್ತ ಹೊನ್ನಾಳಿ ಕಡೆಯಿಂದ ಬಂದ ಸುದ್ದಿ ಶಾನೆ ಶಾಕಿಂಗಾಗಿದೆಯಲ್ಲಾ. ನನ್ನ ಸೋದರನ ಮಗನದ್ದು ಗ್ಯಾರಂಟಿ ಕೊಲೆ, ಅದನ್ನ ಪತ್ತೆ ಹಚ್ಚಲಾಗದ ನೀವು ಎಂತಹ ಪೊಲೀಸರು ಎಂದು ಸಾರ್ವಜನಿಕವಾಗಿ ಅವಾಜುಹಾಕಿ ಅವಮಾನ ಮಾಡಿದ ರೇಣುಕಾಚಾರಿ ಇದ್ದಕ್ಕಿದ್ದಂತೆ ಬಾಯಿ ಬಂದ್ ಮಾಡಿಕೊಂಡು, ಇದ್ದಾರೂ ಇಲ್ಲವೋ ಅನ್ನುವಂತಾಗಿದ್ದಾರಲ್ಲಾ. ಹೊನ್ನಾಳಿ ಚಂದ್ರಶೇಖರರ ಸಾವು ಸಂಭವಿಸುವ ಮುನ್ನ ಆತ ಗೌರಿಗದ್ದೆ ಕಡೆಯಿಂದ ಬರಲು ಕಾರಣವೇನು ಎಂದು ಹುಡುಕಿಹೋದ ಪೊಲೀಸರಿಗೆ ಗೌರಿಗದ್ದೆಯಲ್ಲಿ ವಾಸಿಸುವ ’ಅವಧೂತ’ನ ಚರಿತ್ರೆ ಶಾನೆ ಕುತೂಹಲ ಮೂಡಿಸಿದೆಯಂತಲ್ಲಾ. ಈ ಮಠಗಳ ಕರ್ಮಕಾಂಡ ಶುರುವಾದದ್ದು ರಾಮಚಂದ್ರಾಪುರದ ಮಠದ ಕಡೆಯಿಂದ. ಆ ನಂತರ ಉಡುಪಿ ಮಠಗಳು. ಅಲ್ಲೂಬ್ಬ ಸ್ವಾಮಿ ಆತ್ಮಹತ್ಯೆ ಮಾಡಿಕೊಂಡ. ಈಚೆಗೆ ಮುರುಘ ಶರಣರ ಸ್ಥಿತಿ ನೋಡಿದ ಇಬ್ಬರು ಲಿಂಗೈಕ್ಯರಾದರು. ಇನ್ನು ದಿನದಿಂದ ದಿನಕ್ಕೆ ಮುರುಘ ಶರಣರ ದೌರ್ಜನ್ಯಗಳು ಬಿಚ್ಚಿಕೊಳ್ಳುತ್ತಿದ್ದಂತೆ ಗೌರಿಗದ್ದೆ ಬಾಲಕನ ವಿರುದ್ಧವೂ ಅನುಮಾನ ಆರೋಪಗಳು ಏಳುತ್ತಿವೆ. ಇದರ ಅಪಾಯವರಿತ ಜವಬ್ದಾರಿವಂತರು ಇಂಥ ಮಠಗಳ ಕಡೆಗೆ ಮಹಿಳೆ-ಮಕ್ಕಳು-ಹುಡುಗರನ್ನು ಕಳಿಸಬೇಡಿ ಎಂಬ ಎಚ್ಚರಿಕೆ ಫಲಕಗಳನ್ನ ಬರೆಯುತ್ತಿದ್ದಾರಂತಲ್ಲಾ, ಥೂತ್ತೇರಿ.
*****
ಹೇಗಾದರೂ ಮಾಡಿ ಟಿಪ್ಪು ಸುಲ್ತಾನನನ್ನು ಕನ್ನಡ ದ್ರೋಹಿ ಮಾಡಲು ಹೆಣಗುತ್ತಿರುವವರ ಜೊತೆಗೆ ಈಗ ಎಸ್ಸೆಲ್ ಭೈರಪ್ಪ ಕೂಡ ಸೇರಿದ್ದಾರಲ್ಲಾ. ಟಿಪ್ಪು ಕನ್ನಡ ದ್ರೋಹಿಯಾಗಿದ್ದ ಎಂಬುದಕ್ಕೆ ಭೈರಪ್ಪ ಕೊಡುವ ಕಾರಣ ಆತ ಕಂದಾಯ ಇಲಾಖೆಯಲ್ಲಿ ಪರ್ಶಿಯನ್, ಪಾರ್ಸಿ ಹೆಸರುಗಳನ್ನ ಸೇರಿಸಲಾಗಿದೆ ಎಂಬುದಾಗಿದೆ. ಇಂಗ್ಲಿಷ್ ವಿರೋಧಿಯಾಗಿದ್ದ ಟಿಪ್ಪು ಪರ್ಶಿಯನ್ ಭಾಷೆ ಸೇರಿಸಿದ್ದು ಸಹಜ ಕ್ರಿಯೆಯಾಗಿತ್ತು. ಆದರೆ ಶ್ಯಾನುಭೋಗರ ಮನೆಯವರಾದ ಭೈರಪ್ಪ ಇತಿಹಾಸ ಕೆದಕಿದರೆ, ಟಿಪ್ಪು ಕಾಲದಲ್ಲಿ ಇಡೀ ನಾಡಿನ ಕಂದಾಯ ಇಲಾಖೆ ನೋಡಿಕೊಳ್ಳುತ್ತಿದ್ದವರು ಶಾನುಭೋಗರು. ಇನ್ನ ಟಿಪ್ಪು ಸಚಿವ ಸಂಪುಟದಲ್ಲಿ ಐದು ಜನ ಬ್ರಾಹ್ಮಣರಿದ್ದರು. ಟಿಪ್ಪು ಆಡಳಿತದಲ್ಲಿ ಯಾವುದೇ ಕಾನೂನು ಜಾರಿಯಾಗುವುದಿದ್ದರೂ ಅದಕ್ಕೆ ಬ್ರಾಹ್ಮಣರ ಚರ್ಚೆಗಳೂ ಮುಖ್ಯವಾಗುತ್ತಿದ್ದವು. ಒಂದು ವೇಳೆ ಟಿಪ್ಪು ತನ್ನ ಆಡಳಿತದಲ್ಲಿ ಪರ್ಶಿಯನ್ ಭಾಷೆ ತುರುಕಲು ಯತ್ನಿಸಿದ್ದರೆ ಅದನ್ನು ಖಂಡಿಸಿ ಬ್ರಾಹ್ಮಣರು ತಮ್ಮ ಹುದ್ದೆಗೆ ರಾಜೀನಾಮೆ ಕೊಡಬೇಕಿತ್ತು. ಹಾಗೆ ಮಾಡದೆ ಬಂದ ಬಳವಳಿಯವರು ಈಗ ಟಿಪ್ಪುವನ್ನು ಕನ್ನಡ ದ್ರೋಹಿ ಎಂದು ಬಗೆಯಲು ಪ್ರಯತ್ನಿಸಿದರೆ ಅವರನ್ನೇ ಈ ದ್ರೋಹಿಗಳ ಪಟ್ಟಿಯಲ್ಲಿ ಸೇರಿಸಲು ಜನ ಕಾಯುತ್ತಿದ್ದಾರಂತಲ್ಲಾ, ಥೂತ್ತೇರಿ.
ಕಂದಾಯ ಇಲಾಕೆಯ ಪರ್ಷೀಯನ್ ಪದಗಳಿಗೆ ಈಗಲಾದರೂ ಕನ್ನಡ ಪದಗಳನ್ನು ಹುಟ್ಟುಹಾಕಬಹುದಲ್ಲಾ?