Homeಮುಖಪುಟಅಕ್ರಮ ಹಣ ವರ್ಗಾವಣೆ ಪ್ರಕರಣ: 5 ಗಂಟೆಗಳ ಕಾಲ ಹೇಮಂತ್ ಸೊರೇನ್ ವಿಚಾರಣೆ

ಅಕ್ರಮ ಹಣ ವರ್ಗಾವಣೆ ಪ್ರಕರಣ: 5 ಗಂಟೆಗಳ ಕಾಲ ಹೇಮಂತ್ ಸೊರೇನ್ ವಿಚಾರಣೆ

- Advertisement -
- Advertisement -

ಭೂ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಶನಿವಾರ ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ‘ಇದು ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ’ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಆರೋಪಿಸಿದ್ದಾರೆ.

ಕೇಂದ್ರ ತನಿಖಾ ಸಂಸ್ಥೆಯು ಹೇಮಂತ್ ಸೊರೇನ್ ಅವರನ್ನು ಮತ್ತೊಂದು ದಿನ ವಿಚಾರಣೆ ನಡೆಸುವ ಸಾಧ್ಯತೆ ಇದ್ದು, ವಿಚಾರಣಾ ದಿನಾಂಕವನ್ನು ನಂತರ ನಿರ್ಧರಿಸಲಾಗುವುದು ಎಂದು ಇಡಿ ಮೂಲಗಳಿಂದ ತಿಳಿದುಬಂದಿದೆ. ಭಾರೀ ಭದ್ರತಾ ನಿಯೋಜನೆಯ ನಡುವೆ ಇಡಿ ಅಧಿಕಾರಿಗಳು ರಾಜ್ಯ ರಾಜಧಾನಿ ರಾಂಚಿಯ ಸಿಎಂ ಅವರ ಕಂಕೆ ರಸ್ತೆಯ ನಿವಾಸದಿಂದ ವಿಚಾರಣೆ ಮುಗಿಸಿ ನಿರ್ಗಮಿಸಿದರು.

‘ಅವರು (ಕೇಂದ್ರ) ನಮ್ಮ ವಿರುದ್ಧ ಷಡ್ಯಂತ್ರಗಳನ್ನು ಹೆಣೆಯುತ್ತಿದ್ದಾರೆ. ನಾವು ಅವರ ಷಡ್ಯಂತ್ರಗಳನ್ನು ಚೂರುಚೂರು ಮಾಡುವ ಮೂಲಕ ರಾಜ್ಯದ ಅಭಿವೃದ್ಧಿಯನ್ನು ಮಾಡುತ್ತಿದ್ದೇವೆ. ಅವರ ಶವಪೆಟ್ಟಿಗೆಗೆ ಅಂತಿಮ ಮೊಳೆ ಹಾಕುವ ಸಮಯ ಬಂದಿದೆ. ಹೇಮಂತ್ ಸೊರೆನ್ ಯಾವಾಗಲೂ ಕಾರ್ಮಿಕರೊಂದಿಗೆ ನಿಲ್ಲುತ್ತಾರೆ’ ಎಂದು ಜೆಎಂಎಂನ ಕಾರ್ಯಕಾರಿ ಅಧ್ಯಕ್ಷರು ವಿಚಾರಣೆಯ ನಂತರ ಬೆಂಬಲಿಗರಿಗೆ ತಿಳಿಸಿದರು.

ಸೊರೇನ್ ಅವರು ಮೊದಲ ಏಳು ಸಮನ್ಸ್‌ಗಳನ್ನು ನಿರ್ಲಕ್ಷಿಸಿದ್ದರು. ನಂತರ, ಎಂಟನೇ ಬಾರಿಗೆ ತನಿಖಾ ಸಂಸ್ಥೆ ಅವರನ್ನು ಕರೆಸಿದಾಗ ವಿಚಾರಣೆಗೆ ತಮ್ಮ ಒಪ್ಪಿಗೆಯನ್ನು ಸೂಚಿಸಿ, ದಿನ ಹಾಗೂ ಸ್ಥಳ ನಿಗದಿ ಮಾಡಿದ್ದರು.

‘ನಿಮ್ಮ ಬೆಂಬಲಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳುತ್ತೇನೆ; ನಾನು ಅವರಿಗೆ ಭಯಪಡುವುದಿಲ್ಲ ಅಥವಾ ಭಾಗುವುದಿಲ್ಲ ಎಂದು ನಿಮಗೆ ಭರವಸೆ ನೀಡಲು ಬಯಸುತ್ತೇನೆ. ಯಾವುದೇ ಅಡೆತಡೆಗಳನ್ನು ಲೆಕ್ಕಿಸದೆ ನಾವು ಸುಳ್ಳಿಗೆ ತಲೆಬಾಗುವುದಿಲ್ಲ’ ಎಂದು ಅವರು ತಮ್ಮ ಮನೆಯ ಹೊರಗೆ ಮಾಡಿದ ಭಾಷಣದಲ್ಲಿ ಹೇಳಿದರು. ಅಲ್ಲಿ ಇಡಿ ಕ್ರಮವನ್ನು ಪ್ರತಿಭಟಿಸಲು ನೂರಾರು ಜೆಎಂಎಂ ಬೆಂಬಲಿಗರು ಜಮಾಯಿಸಿದ್ದರು.

‘ನಾವು ಪ್ರತಿಪಕ್ಷಗಳ ಷಡ್ಯಂತ್ರದ ಜಾಲವನ್ನು ಬಿಡಿಸುತ್ತಾ ಮುನ್ನಡೆಯುತ್ತಿದ್ದೇವೆ. ನೀವು ಭಯಪಡುವ ಅಗತ್ಯವಿಲ್ಲ. ನಿಮ್ಮ ನೈತಿಕತೆಯನ್ನು ಉನ್ನತ ಮಟ್ಟದಲ್ಲಿ ಇರಿಸಿ. ನಮ್ಮ ಮೇಲೆ ಹಾರಿದ ಮೊದಲ ಬುಲೆಟ್ ಅನ್ನು ನಿಮ್ಮ ನಾಯಕನೇ ತೆಗೆದುಕೊಳ್ಳುತ್ತಾನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ’ ಎಂದು ಸೊರೆನ್ ಹೇಳಿದರು.

ರಾಂಚಿಯ ಬಜ್ರಾ ಪ್ರದೇಶದಲ್ಲಿ 7.16 ಎಕರೆ ವಿಸ್ತೀರ್ಣದ ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದ ಆಪಾದಿತ ಭೂ ಹಗರಣಕ್ಕೆ ಸಂಬಂಧಿಸಿ ಕೇಂದ್ರೀಯ ಏಜೆನ್ಸಿಯ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಸೋರೆನ್ ವಿರುದ್ಧ ತನಿಖೆ ನಡೆಸುತ್ತಿದೆ. ಸೇನಾ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂಬ ಆರೋಪಿಸಲಾಗಿದೆ. ಆದರೆ, ‘ಪ್ರಕರಣವು ಸ್ಪಷ್ಟವಾಗಿಲ್ಲ ಮತ್ತು ಅವರ ಆಸ್ತಿಯ ವಿವರಗಳು ಈಗಾಗಲೇ ಸಾರ್ವಜನಿಕವಾಗಿವೆ’ ಎಂದು ಸೊರೇನ್ ಸರ್ಕಾರ ಹೇಳಿದೆ.

‘ಇಡಿ ಅಧಿಕಾರಿಗಳ ತಂಡ ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಿಎಂ ನಿವಾಸವನ್ನು ತಲುಪಿತು; ಮಧ್ಯಾಹ್ನ 3 ಗಂಟೆಯ ಸುಮಾರಿಗೆ ವಿಚಾರಣೆ ಆರಂಭಿಸಿದರು’ ಎಂದು ಜಾರ್ಖಂಡ್ ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘2023 ರಲ್ಲಿ ದಾಖಲಾದ ಜಾರಿ ಪ್ರಕರಣ ಮಾಹಿತಿ ವರದಿಗೆ ಸಂಬಂಧಿಸಿದಂತೆ ಭಾನು ಪ್ರತಾಪ್ ಪ್ರಸಾದ್, ಆಗಿನ ಕಂದಾಯ ಸಬ್ ಇನ್ಸ್ಪೆಕ್ಟರ್ಗಳು ಮತ್ತು ಇತರರನ್ನು ಒಳಗೊಂಡಿರುವ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದೆ. ತನಿಖಾ ಸಂಸ್ಥೆಯು ಈ ವಿಷಯಕ್ಕೆ ಸಂಬಂಧಿಸಿದಂತೆ ಸೊರೇನ್ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದೆ. ಅವರ ಸ್ವಾಧೀನದಲ್ಲಿರುವ ಆಸ್ತಿಗಳ ವಿವರಗಳನ್ನು ಪಡೆಯುತ್ತಿದೆ’ ಎಂದು ತಿಳಿದುಬಂದಿದೆ.

ಈ ಪ್ರಕರಣದಲ್ಲಿ 2011ರ ಬ್ಯಾಚ್‌ನ ಐಎಎಸ್ ಅಧಿಕಾರಿ ಛವಿ ರಂಜನ್, ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಮತ್ತು ರಾಂಚಿಯ ಉಪ ಆಯುಕ್ತ ಭಾನು ಪ್ರತಾಪ್ ಪ್ರಸಾದ್ ಮತ್ತು ಉದ್ಯಮಿಗಳಾದ ಅಮಿತ್ ಅಗರವಾಲ್ ಮತ್ತು ಬಿಷ್ಣು ಅಗರವಾಲ್ ಸೇರಿದಂತೆ 14 ಜನರನ್ನು ಬಂಧಿಸಿದೆ.

ಶನಿವಾರ ನೂರಾರು ಜೆಎಂಎಂ ಕಾರ್ಯಕರ್ತರು, ವಿವಿಧ ಬುಡಕಟ್ಟು ಸಂಘಟನೆಗಳೊಂದಿಗೆ ರಾಜ್ಯಾದ್ಯಂತ ಪ್ರದರ್ಶನಗಳನ್ನು ನಡೆಸಿದರು. ಸೋರೆನ್ ಅವರನ್ನು ಭಾರತೀಯ ಜನತಾ ಪಾರ್ಟಿ ನೇತೃತ್ವದ ಕೇಂದ್ರ ಸರ್ಕಾರವು ಇಡಿಯಂತಹ ಏಜೆನ್ಸಿಗಳ ಮೂಲಕ ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದರು. ಇಡಿ ಪ್ರಶ್ನಿಸಿರುವುದನ್ನು ವಿರೋಧಿಸಿ ಬುಡಕಟ್ಟು ಸಂಘಟನೆ ಆದಿವಾಸಿ ಸಂಘವು ಗಿರಿದಿಹ್-ಡುಮ್ರಿ ರಸ್ತೆಯನ್ನು ತಡೆದಿತ್ತು.

1,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವುದರೊಂದಿಗೆ ಸಿಎಂ ಮನೆಯ ಸುತ್ತಲಿನ ಪ್ರದೇಶವು ತಾತ್ಕಾಲಿಕ ಕೋಟೆಯಾಗಿ ಮಾರ್ಪಟ್ಟಿತ್ತು. ‘ಒಂದು ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಮೂರು ಹಂತದ ಭದ್ರತೆಯನ್ನು ಖಾತ್ರಿಪಡಿಸಲಾಗಿದೆ’ ಎಂದು ರಾಂಚಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಚಂದನ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.

‘ಯಾವುದೇ ಸಂಭವನೀಯ ಅಹಿತಕರ ಘಟನೆಯನ್ನು ತಪ್ಪಿಸಲು ರಾಂಚಿ ಆಡಳಿತವು ತನಿಖಾ ಸಂಸ್ಥೆಯ ಕಚೇರಿ ಮತ್ತು ಸಿಎಂ ಮನೆಯ ಸುತ್ತಲೂ ಮೂರು ಹಂತದ ಭದ್ರತಾ ವ್ಯವಸ್ಥೆಯನ್ನು ಖಾತ್ರಿಪಡಿಸಿದೆ’ ಎಂದು ಅವರು ಹೇಳಿದರು.

ಬಹುಕೋಟಿ ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಇಡಿ ಅಧಿಕಾರಿಗಳ ಮೇಲೆ ನಡೆದ ದಾಳಿ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ; ರಾಮಮಂದಿರ ಉದ್ಘಾಟನೆ: ದೆಹಲಿ ಏಮ್ಸ್‌ಗೆ ಅರ್ಧದಿನ ರಜೆ, ಒಪಿಡಿ ಸೇವೆ ಬಂದ್?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರ: ಪೊಲೀಸ್‌ ಕಸ್ಟಡಿಯಲ್ಲಿದ್ದ ಇಬ್ಬರು ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ; ಠಾಣೆಗೆ ಬೆಂಕಿ ಹಚ್ಚಿದ ಗುಂಪು

0
ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಆರೋಪದಲ್ಲಿ ಬಂಧಿತ ಯುವಕ ಮತ್ತು ಆತನ ಅಪ್ರಾಪ್ತ 'ಪತ್ನಿ' ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿ ಕೋಪಗೊಂಡ ಗ್ರಾಮಸ್ಥರು ಪೊಲೀಸ್‌ ಠಾಣೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಉದ್ರಿಕ್ತರು,...