Homeಮುಖಪುಟಪವಾರ್ ಸೇರಿ 9 ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಿದ ಎನ್‌ಸಿಪಿ

ಪವಾರ್ ಸೇರಿ 9 ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಿದ ಎನ್‌ಸಿಪಿ

- Advertisement -
- Advertisement -

ಭಾನುವಾರದಂದು ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ಬೆಳವಣಿಗೆ ನಡೆದಿದ್ದು, ಎನ್‌ಸಿಪಿ ನಾಯಕ ಅಜಿತ್ ಪವಾರ್ ಮತ್ತು ಇತರ ಎಂಟು ಶಾಸಕರು ಬಿಜೆಪಿ-ಶಿವಸೇನೆ ಸರ್ಕಾಕ್ಕೆ ಬೆಂಬಲ ಘೋಷಿಸಿ, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೀಗ ಈ ಎಲ್ಲ ನಾಯಕರ ಅನರ್ಹತೆ ಅರ್ಜಿ ಸಲ್ಲಿಸಲಾಗಿದೆ ಎಂದು ಎನ್‌ಸಿಪಿ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ರವಿವಾರ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಭಾನುವಾರ ತಡರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಟೀಲ್, ”ಅನರ್ಹತೆ ಅರ್ಜಿಯನ್ನು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.

”ಶಾಸಕರ ಸಂಖ್ಯೆ ಮುಖ್ಯವಲ್ಲ, ಪಕ್ಷದ ಅಧಿಕೃತ ವಿಪ್ ಪರಿಗಣಿಸಲಾಗುವುದು ಮತ್ತು ಇದು ಎಲ್ಲಾ ಶಾಸಕರಿಗೂ ಅನ್ವಯಿಸುತ್ತದೆ. ಪಕ್ಷವು ನೇಮಿಸಿದ ವಿಪ್ ಅನ್ನು ಅಧಿಕೃತವೆಂದು ಪರಿಗಣಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪು ಸ್ಪಷ್ಟವಾಗಿ ಹೇಳುತ್ತದೆ” ಎಂದು ಅವರು ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಏಕನಾಥ್ ಶಿಂಧೆ ಅವರು ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಲು ಶಾಸಕರ ಗುಂಪಿನೊಂದಿಗೆ ಪಕ್ಷದಿಂದ ಹೊರನಡೆದ ನಂತರ ಶಿವಸೇನೆಯಲ್ಲಿನ ಒಡಕಿನ ಕುರಿತು ಸುಪ್ರೀಂ ಕೋರ್ಟ್ ತೀರ್ಪನ್ನು ಪಾಟೀಲ್ ಉಲ್ಲೇಖಿಸಿದ್ದಾರೆ.

ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರಿಗೆ ಹೆಚ್ಚಿನ ಶಾಸಕರ ಬೆಂಬಲ ಇದೆ ಎಂದು ತಿಳಿಸಲು ಪಕ್ಷವು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ ಎಂದು ಪಾಟೀಲ್ ಹೇಳಿದರು. ಹೆಚ್ಚಿನ ಶಾಸಕರು ಎನ್‌ಸಿಪಿಗೆ ಮರಳುತ್ತಾರೆ ಎಂದು ನಾವು ನಂಬುತ್ತೇವೆ ಮತ್ತು ನಾವು ಅವರನ್ನು ಮತ್ತೆ ಒಪ್ಪಿಕೊಳ್ಳುತ್ತೇವೆ” ಎಂದು ಅವರು ಹೇಳಿದರು, ಎಎನ್‌ಐ ವರದಿ ಮಾಡಿದೆ.

ಈ ಮಧ್ಯೆ ಎನ್‌ಸಿಪಿ ವಕ್ತಾರ ಕ್ಲೈಡ್ ಕ್ರಾಸ್ಟೊ ಅವರು, ”ಅಜಿತ್ ಪವಾರ್ ಅವರು ಪ್ರತಿಪಾದಿಸುತ್ತಿರುವ 36 ಶಾಸಕರ ಬೆಂಬಲವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳುವುದನ್ನು ತಪ್ಪಿಸಲು ಅಜಿತ್ ಪವಾರ್ ಅವರಿಗೆ 36 ಶಾಸಕರ ಬೆಂಬಲ ಬೇಕಾಗಿದೆ. ಪಾಟೀಲ್ ಮತ್ತು ಪಕ್ಷದ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಎಲ್ಲಾ 53 ಶಾಸಕರೊಂದಿಗೆ ಸಂಪರ್ಕದಲ್ಲಿದ್ದಾರೆ” ಎಂದು ಕ್ರಾಸ್ಟೊ ತಿಳಿಸಿದ್ದಾರೆ.

ಅಜಿತ್ ಪವಾರ್ 2019ರಲ್ಲೂ ಬಿಜೆಪಿಯೊಂದಿಗೆ ಕೈಜೋಡಿಸಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದಾಗ್ಯೂ, ಮೈತ್ರಿ ಮೂರು ದಿನಗಳಿಗಿಂತ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಮಹಾ ವಿಕಾಸ್ ಅಘಾಡಿ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತಿದ್ದಂತೆ ಎನ್‌ಸಿಪಿಗೆ ಮರಳಿದರು. ಮಹಾ ವಿಕಾಸ್ ಅಘಾಡಿ ಸಮ್ಮಿಶ್ರ ಸರ್ಕಾರದಲ್ಲಿ ಅವರು ಮತ್ತೆ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನು ಎಂಟು ಎನ್‌ಸಿಪಿ ಶಾಸಕರಾದ ಧರ್ಮೋಬಾಬಾ ಅತ್ರಮ್, ಛಗನ್ ಭುಜಬಲ್, ದಿಲೀಪ್ ವಾಲ್ಸೆ ಪಾಟೀಲ್, ಹಸನ್ ಮುಶ್ರೀಫ್, ಧನಂಜಯ್ ಮುಂಡೆ, ಅದಿತಿ ತತ್ಕರೆ, ಅನಿಲ್ ಪಾಟೀಲ್, ಸಂಜಯ್ ಭನ್ಸೋಡೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ತಮ್ಮ ಪ್ರಮಾಣ ವಚನದ ನಂತರ ಮಾತನಾಡಿದ ಅಜಿತ್ ಪವಾರ್ ಅವರು, ನಾವು ಪಕ್ಷವನ್ನು ಒಡೆದಿಲ್ಲ, ನಮಗೆ ಎಲ್ಲಾ ಶಾಸಕರ ಬೆಂಬಲವಿದೆ. ಬಿಜೆಪಿ-ಶಿವಸೇನೆ ಸರ್ಕಾರಕ್ಕೆ ಎನ್‌ಸಿಪಿಯೇ ಬೆಂಬಲ ನೀಡಿದೆ ಎಂದು ಹೇಳಿದ್ದಾರೆ.

ಬಿಜೆಪಿ ಶಾಸಕರ ಖರೀದಿ ದಂಧೆ: ವಿರೋಧ ಪಕ್ಷಗಳ ಟೀಕೆ

ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಅವರು ಬಿಜೆಪಿ-ಶಿವಸೇನೆ ಸರ್ಕಾರಕ್ಕೆ ಬೆಂಬಲವನ್ನು ನೀಡಿದ ನಂತರ ವಿರೋಧ ಪಕ್ಷಗಳು ಭಾನುವಾರ ಬಿಜೆಪಿಯನ್ನು ಟೀಕಿಸಿದವು. ಕೇಸರಿ ಪಕ್ಷವು “ಎಂಎಲ್‌ಎ ಖರೀದಿಯ ಭರಾಟೆ”ಯಲ್ಲಿದೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

”ಮಹಾರಾಷ್ಟ್ರದ ಜನಾದೇಶವನ್ನು ಬಿಜೆಪಿ ಪದೇ ಪದೇ ದುರ್ಬಲಗೊಳಿಸುತ್ತಿರುವ ವಿಧಾನವನ್ನು ಖಂಡಿಸಲು ಯಾವುದೇ ಪದಗಳು ಸಾಕಾಗುವುದಿಲ್ಲ. ಪ್ರಜಾಪ್ರಭುತ್ವವನ್ನು ಕಸಿದುಕೊಳ್ಳುವುದು ಮಾತ್ರವಲ್ಲದೆ ಅವರು ಅಂತಹ ಅವಮಾನಕರ ಕೃತ್ಯಗಳಿಗೆ ರಕ್ಷಣೆ ನೀಡಲು ರಾಷ್ಟ್ರಗೀತೆಯನ್ನು ಬಳಸುತ್ತಿದ್ದಾರೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

”ಬಿಜೆಪಿಯು ತನ್ನ ‘ವಾಷಿಂಗ್ ಮೆಷಿನ್ ಕಾರ್ಯಾಚರಣೆ’ಯನ್ನು ಪುನರಾರಂಭಿಸಿದೆ ಎಂಬುದು ಸ್ಪಷ್ಟವಾಗಿದೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

”ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಸೇರ್ಪಡೆಯಾದವರು ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಅಧಿಕಾರಿಗಳಿಂದ ಗಂಭೀರ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈಗ ಅವರೆಲ್ಲರಿಗೂ ಕ್ಲೀನ್ ಚಿಟ್ ಸಿಕ್ಕಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಅಜಿತ್ ಪವಾರ್, ಭುಜಬಲ್ ಮತ್ತು ಮುಶ್ರಿಫ್ ಅವರು ಜಾರಿ ನಿರ್ದೇಶನಾಲಯದ ತನಿಖೆಯನ್ನು ಎದುರಿಸುತ್ತಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: ಇಬ್ಬಾಗವಾದ ಎನ್‌ಸಿಪಿ; ಶಿಂಧೆ ಸರ್ಕಾರಕ್ಕೆ ಬೆಂಬಲ ಘೋಷಿಸಿ, ಡಿಸಿಎಂ ಆದ ಅಜಿತ್ ಪವಾರ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...