Homeಕರ್ನಾಟಕನಿಲ್ಲದ ಕೊಲೆ ಬೆದರಿಕೆ ಪತ್ರಗಳು; ಬಸವ ತತ್ವದ ಸ್ವಾಮೀಜಿಗಳ ಬೆನ್ನು ಹತ್ತಿದ ಮತಾಂಧರು

ನಿಲ್ಲದ ಕೊಲೆ ಬೆದರಿಕೆ ಪತ್ರಗಳು; ಬಸವ ತತ್ವದ ಸ್ವಾಮೀಜಿಗಳ ಬೆನ್ನು ಹತ್ತಿದ ಮತಾಂಧರು

- Advertisement -
- Advertisement -

ಕೋಮುವಾದದ ವಿರುದ್ಧ ಧ್ವನಿ ಎತ್ತಿದರೆ ಅವರ ಜೀವವನ್ನೇ ತೆಗೆಯುವ ಹಂತಕ್ಕೆ ಧರ್ಮಾಂಧರು ಬಂದು ತಲುಪಿದ್ದಾರೆ. ದಿಟ್ಟ ಪತ್ರಕರ್ತೆ, ಚಿಂತಕಿ, ವಿಚಾರವಾದಿ ಗೌರಿ ಲಂಕೇಶ್ ಹಾಗೂ ಸಾಹಿತಿ, ವಿಚಾರವಾದಿ ಎಂಎಂ ಕಲಬುರ್ಗಿ ಅವರನ್ನು ಕೊಲೆ ಮಾಡಿರುವ ಕೋಮುವಾದಿ ಕ್ರಿಮಿಗಳು ಇದೀಗ ಅದೇ ರೀತಿ ನಾಡಿನ ಚಿಂತಕರನ್ನು ಹಾಗೂ ಸ್ವಾಮೀಜಿಗಳನ್ನು ಕೊಲೆ ಮಾಡುವುದಾಗಿ ಬೆದರಿಕೆಯ ಪತ್ರಗಳನ್ನು ಬರೆಯುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅವರಿಗೆ ಅನಾಮಿಕನಿಂದ ಕೊಲೆ ಬೆದರಿಕೆ ಪತ್ರ ಬಂದಿದೆ. ಈ ಕೊಲೆ ಬೆದರಿಕೆ ಪತ್ರ ಆಗಸ್ಟ್ 8ರಂದೇ ಬಂದಿದ್ದರೂ, ಸ್ವಾಮೀಜಿಗಳು ತಡವಾಗಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

2020ರಲ್ಲಿಯೇ ಸ್ವಾಮೀಜಿಯ ಹತ್ಯೆ ಮಾಡುವುದಾಗಿ ಜೀವ ಬೆದರಿಕೆ ಪತ್ರವೊಂದು ಬಂದಿತ್ತು. ಇದೀಗ ಮತ್ತೆ ಜೀವ ಬೆದರಿಕೆ ಪತ್ರ ಬಂದಿದ್ದು, ಈವರೆಗೂ 5ಕ್ಕೂ ಹೆಚ್ಚು ಬಾರಿ ಮತಾಂಧರು ಶ್ರೀಗಳಿಗೆ ಜೀವ ಬೆದರಿಕೆ ಪತ್ರ ಬರೆದಿದ್ದಾರೆ. ಈ ಹಿಂದೆ ನಮ್ಮ ಗುರಿಯು ತಪ್ಪಿರಬಹುದು ಆದರೆ ಈ ಬಾರಿ ತಪ್ಪುವುದಿಲ್ಲ ಎನ್ನುವ ಮಾತುಗಳನ್ನು ಹೇಳಿದ್ದಾರೆ. ಇದು ಸಹಜವಾಗಿ ಸ್ವಾಮೀಜಿಗಳ ಅನುಯಾಯಿಗಳಲ್ಲಿ ಆತಂಕ ಹೆಚ್ಚಿಸಿದೆ.

ನಿಜಗುಣಾನಂದ ಸ್ವಾಮೀಜಿಗಳು ತಮ್ಮ ಪ್ರವಚನಗಳಿಂದ ರಾಜ್ಯದ ಮನೆಮಾತಾಗಿದ್ದಾರೆ. ದಶಕಗಳಿಂದ ಬಸವಾದಿ ಶರಣ ತತ್ವಗಳನ್ನು ಪ್ರಚುರಪಡಿಸುವಲ್ಲಿ ಶ್ರೀಗಳು ನಿರತರಾಗಿದ್ದಾರೆ. ಬೈಲೂರಿನ ಮಠವನ್ನು ಕೇಂದ್ರವಾಗಿಸಿಕೊಂಡು ತಮ್ಮ ವಿಚಾರಗಳನ್ನು ಬಿತ್ತುತ್ತಿದ್ದಾರೆ. ಅವರ ಕಿಡಿನುಡಿಗಳು ವೈಚಾರಿಕ ಮನೋಭಾವವುಳ್ಳವರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಬಸವತತ್ವವನ್ನು ಪಾಲಿಸುತ್ತ, ಭಕ್ತರಿಗೂ ಅದನ್ನೇ ಬೋಧಿಸುತ್ತಾರೆ. ಹಿಂದೂ ಧರ್ಮದಲ್ಲಿನ ಅನಿಷ್ಟ ಪದ್ಧತಿಗಳು ಹಾಗೂ ಮೂಢನಂಬಿಕೆಗಳನ್ನು ಅವರು ಕಟುವಾದ ಶಬ್ದಗಳಿಂದ ಟೀಕಿಸುತ್ತಾರೆ. ಇದು ಉಗ್ರ ಹಿಂದುತ್ವವಾದಿಗಳ ನಿದ್ದೆಗೆಡಿಸಿದೆ. ಅವರ ಪ್ರವಚನದಲ್ಲಿ ಮೌಢ ವಿರೋಧಿ, ಕಂದಾಚಾರ ವಿರೋಧಿ, ಮೂರ್ತಿ ಪೂಜೆಯ ವಿರುದ್ಧ ಟೀಕೆಗಳು ಸಾಮಾನ್ಯವಾಗಿವೆ.

ಈ ಹಿಂದೆ ಸ್ವಾಮೀಜಿಗಳು, ’ಮಾಂಸ ತಿಂದವರಿಂದ ದೇಶ ಹಾಳಾಗಿಲ್ಲ, ತುಪ್ಪ ತಿಂದವರಿಂದ ದೇಶ ಹಾಳಾಗಿದೆ’ ಎನ್ನುವ ಹೇಳಿಕೆ ನೀಡಿದ್ದರು. ಈ ಹೇಳಿಕೆಯೂ ಭಾರೀ ಸದ್ದು ಮಾಡಿತ್ತು. ಈ ಹೇಳಿಕೆಯಲ್ಲಿ ಅವರು ಬ್ರಾಹ್ಮಣರನ್ನೋ ಅಥವಾ ಯಾವುದೋ ಒಂದು ಸಮುದಾಯವನ್ನು ಗುರಿಯಾಗಿಸಿರಲಿಲ್ಲ; ಬದಲಿಗೆ ಮೌಢ್ಯ ಬಿತ್ತುವ ವರ್ಗವನ್ನು ಗುರಿಯಾಗಿಸಿದ್ದರು. ಆದರೆ ಈ ವಿಚಾರವಾಗಿ ಕನ್ನಡದ ದಿನಪತ್ರಿಕೆಯೊಂದು ಸರಣಿ ಲೇಖನ ಬರೆದು ಅವರ ವಿರುದ್ಧ ಬಲಪಂಥೀಯರನ್ನು ಎತ್ತುಕಟ್ಟುವ ಕೆಲಸಕ್ಕೆ ಮುಂದಾಗಿತ್ತು.

ಆ ದಿನಗಳಿಂದಲೇ ಸ್ವಾಮೀಜಿಗೆ ಬೆದರಿಕೆಗಳು ಬರಲು ಆರಂಭವಾಯಿತು. ಆದರೆ ಶ್ರೀಗಳು ಮಾತ್ರ ಯಾವುದಕ್ಕೂ ಹೆದರದೇ ತಮ್ಮ ವಿಚಾರಗಳನ್ನು ತಮ್ಮದೇ ಮಾದರಿಗೆ ಖಡಕ್ ಮಾತುಗಳ ಮೂಲಕ ಜನರ ಮುಂದಿಡುತ್ತಿದ್ದಾರೆ. ಸ್ವಾಮೀಜಿಗಳ ವಿಚಾರಧಾರೆಗಳಿಂದ ಸಾಕಷ್ಟು ಜನರು ವೈಚಾರಿಕ ಪ್ರಜ್ಞೆ ಬೆಳೆಸಿಕೊಂಡಿದ್ದಾರೆ. ಸ್ವಾಮೀಜಿಗಳ ವಿಚಾರಧಾರೆಗಳನ್ನು ತಮ್ಮ ವಿಚಾರಗಳಿಂದ ಎದುರಿಸಲಾಗದೇ ಕೊಲೆ ಮಾಡುವ ಹೇಡಿತನಕ್ಕೆ ಮತಾಂಧರು ಇಳಿದಿರುವುದು ದುರದೃಷ್ಟಕರ.

ಇತ್ತೀಚೆಗೆ ಶ್ರೀಗಳಿಗೆ ಬರೆದಿರುವ ಪತ್ರವನ್ನು ಅವಲೋಕಿಸಿದರೆ ಇದು ಹಿಂದುತ್ವವಾದಿಗಳ/ಯಾವುದೋ ಹಿಂದುತ್ವವಾದಿ ಗುಂಪಿನ ಕೃತ್ಯವಿರಬಹುದು ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. “ನಮ್ಮ ಧರ್ಮದೇವತೆಗಳನ್ನು ನಿಂದಿಸುವ ನಿನಗೆ ಘೋರವಾದ ಹತ್ಯೆ ಬರಲಿದೆ” ಎಂದಿರುವುದಲ್ಲದೆ ಕೊನೆಯಲ್ಲಿ “ಓಂ ಶ್ರೀ ಕಾಳಿಕಾದೇವಿ ನಮಃ” “ಸಹಿಷ್ಣು ಹಿಂದೂ” ಎಂದು ಬರೆಯಲಾಗಿದೆ.

ಪತ್ರದಲ್ಲಿ ಪೂರ್ಣ ಪಠ್ಯ

“ನಿಜಗುಣಾನಂದ ಸ್ವಾಮೀಜಿ ನಿನ್ನ ಸಾವು 2020ರಲ್ಲಿ ತಪ್ಪಿರಬಹುದು. 2023ರಲ್ಲಿ ತಪ್ಪುವುದಿಲ್ಲ. ನಿನ್ನ ಪಾಪದ ಮಾತಿನ ಕೊಡ ತುಂಬಿದೆ. ಆದಷ್ಟು ಬೇಗ ನಿನ್ನ ಭಕ್ತಾದಿಗಳಿಗೆ ನಿನ್ನ ತಿಥಿ ಬಗ್ಗೆ ಹೇಳು. ನಮ್ಮ ಧರ್ಮದೇವತೆಗಳನ್ನು ನಿಂದಿಸುವ ನಿನಗೆ ಘೋರವಾದ ಹತ್ಯೆಯೇ ಬರುತ್ತದೆ. ನಿನ್ನ ಅಂತಿಮ ದಿನಗಳು ಪ್ರಾರಂಭವಾಗಿವೆ. ದಿನಗಳನ್ನು ಎಣಿಸು. ಓಂ ಶ್ರೀ ಕಾಳಿಕಾದೇವಿ ನಮಃ, ಓಂ ಶ್ರೀ ಕಾಳಿಕಾದೇವಿ ನಮಃ” ಎಂದು ಬಿಳಿ ಹಾಳೆಯಲ್ಲಿ ಬರೆದು, ಅದನ್ನು ಕವರ್‌ನಲ್ಲಿಟ್ಟು ಕಳಿಸಲಾಗಿದೆ.

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ

5 ವರ್ಷಗಳಿಂದ ಇಂಥ ಬೆದರಿಕೆ ಬರುತ್ತಲೇ ಇದೆ, ಪ್ರೇಮಪತ್ರಗಳೆಂದು ಭಾವಿಸಿದ್ದೇನೆ: ನಿಜಗುಣಾನಂದ ಸ್ವಾಮೀಜಿ

“ಕಳೆದ 15 ದಿನಗಳ ಹಿಂದೆ ಕೊಲೆ ಬೆದರಿಕೆ ಪತ್ರ ಬಂದಿದೆ. ಒಂದೇ ತರಹ ಇರುವ ಬೆದರಿಕೆ ಬರಹದ ಪತ್ರಗಳು ಬೇರೆಬೇರೆ ಭಾಗಗಳಿಂದ ಬರುತ್ತಿವೆ. ಈಗಾಗಲೇ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ. ಕಳೆದ ಐದು ವರ್ಷಗಳಿಂದ ಸತತವಾಗಿ ಕೊಲೆ ಬೆದರಿಕೆ ಪತ್ರಗಳು ಬರುತ್ತಿವೆ. ಪತ್ರ ಬರೆಯುವವರ ಹಾಗೂ ನನ್ನ ಮಧ್ಯೆ ಯಾವುದೇ ದ್ವೇಷ ಇಲ್ಲ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ. ಇಂತಹ ಕೊಲೆ ಬೆದರಿಕೆ ಪತ್ರಗಳನ್ನು ನಾನು ಪ್ರೇಮಪತ್ರಗಳೆಂದು ಭಾವಿಸಿದ್ದೇನೆ. ನನಗೆ ಸಾವಿನ ಬಗ್ಗೆ ಭಯವಿಲ್ಲ, ಸೇವೆ ಮಾಡುವುದು ನಿಲ್ಲುತ್ತದೆ ಎನ್ನುವ ಕೊರಗಷ್ಟೇ. ನಾನು ಸಮಾಜದ ಮಗ. ಈ ರೀತಿಯ ಪತ್ರಗಳಿಂದ ಭಕ್ತರಲ್ಲಿ ಆತಂಕ ಸಹಜ. ಪೊಲೀಸರು, ಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದ್ದಾರೆ.

ನಿಜಗುಣಾನಂದ ಸ್ವಾಮೀಜಿಗಳಿಗೆ ಬೆಂಬಲ ವ್ಯಕ್ತಪಡಿಸಿರುವ ಸಾಣೇಹಳ್ಳಿ ಮಠದ ಸ್ವಾಮೀಜಿ ಶ್ರೀ ಪಂಡಿತಾರಾಧ್ಯಶಿವಾಚಾರ್ಯ ಅವರು, “ಶ್ರೀ ನಿಜಗುಣಾನಂದ ಸ್ವಾಮೀಜಿಯವರಿಗೆ ಬೆದರಿಕೆ ಕರೆ ಬಂದಿರುವುದು ಅವರ ವಿಚಾರಗಳು ಜನಪರವಾಗಿವೆ ಎಂದೇ ಅರ್ಥ. ಪಟ್ಟಭದ್ರರಿಗೆ ಜನಪರ ವಿಚಾರಗಳೇ ಬೇಕಿಲ್ಲ. ಹಾಗಾಗಿ ಬೆದರಿಕೆ ಹಾಕುವರು. ಅವರ ಬೆದರಿಕೆಗೆ ಸೊಪ್ಪು ಹಾಕಬೇಕಿಲ್ಲ. ಶರಣರ ಕರುಣೆ ಮತ್ತು ನಮ್ಮಂಥವರ ಬೆಂಬಲವೂ ಅವರಿಗೆದೆ” ಎಂದಿದ್ದಾರೆ.

“ಬೆದರಿಕೆ ಹಾಕುತ್ತಿರುವುದು ಯಾರೆಂದು ಸರ್ಕಾರ ಶೀಘ್ರವೇ ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಮತ್ತು ಇಂತಹ ಕೃತ್ಯಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ಸಾರ್ವಜನಿಕ ಪ್ರತಿಭಟನೆ ಅನಿರ್ವಾಯವಾಗಬಹುದು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ನಿಜಗುಣಾನಂದ ಸ್ವಾಮೀಜಿಗೆ ಹಿಂದುತ್ವವಾದಿಗಳಿಂದ ಕೊಲೆ ಬೆದರಿಕೆ ಪತ್ರ

ಅದೇ ರೀತಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಅನುಭವ ಮಂಟಪ ಬಸವಕಲ್ಯಾಣದ ಅಧ್ಯಕ್ಷರಾದ ಶ್ರೀ ಬಸವಲಿಂಗ ಪಟ್ಟದೇವರು ಶ್ರೀಗಳಿಗೆ ಬೆಂಬಲ ಸೂಚಿಸಿದ್ದು, ’”ಪೂಜ್ಯ ಶ್ರೀ ನಿಜಗುಣಾನಂದ ಸ್ವಾಮಿಗಳು ನಮ್ಮ ನಾಡಿನ ಪ್ರಗತಿಪರ ಚಿಂತನೆಯ ಧ್ವನಿಯಾಗಿದ್ದಾರೆ. ಬಸವಾದಿ ಶರಣರ ಹಾಗೂ ಬುದ್ಧ, ಪುಲೆ, ಅಂಬೇಡ್ಕರ್ ಅವರ ಚಿಂತನೆಗಳನ್ನು ನಿರ್ಭಿಡೆಯಿಂದ ಜನಮನದಲ್ಲಿ ಬಿತ್ತುತ್ತ ವೈಚಾರಿಕ ಪ್ರಜ್ಞೆ ಬೆಳೆಸುತ್ತಿದ್ದಾರೆ. ಪ್ರಗತಿಪರ ಚಿಂತನೆಗಳಿಗೆ ವಿರುದ್ಧವಾಗಿರುವ ಪಟ್ಟಭದ್ರರು ಇದನ್ನು ವಿರೋಧಿಸುವುದಕ್ಕಾಗಿ ಸ್ವಾಮೀಜಿಯವರಿಗೆ ಬೆದರಿಕೆ ಕರೆ ಮಾಡುತ್ತಿದ್ದಾರೆ. ಪತ್ರ ಬರೆಯುತ್ತಿದ್ದಾರೆ. ಇಂತಹ ಕೃತ್ಯಗಳಿಗೆ ಶರಣರ ವಾರಸುದಾರರು ಎಂದಿಗೂ ಅಂಜುವುದಲ್ಲ. ಪಟ್ಟಭದ್ರರು ಬೆದರಿಸುವ ಮೂಲಕ ಪ್ರಗತಿಪರ ಚಿಂತನೆಗಳನ್ನು ಮುಚ್ಚಿಹಾಕಬೇಕೆಂದು ಇಂತಹ ಹುನ್ನಾರ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಶ್ರೀ ನಿಜಗುಣಾನಂದ ಸ್ವಾಮಿಗಳು ಹೆದರಬೇಕಾಗಿಲ್ಲ. ಅವರ ಜೊತೆ ನಾಡಿನ ಬಸವಪರ ಚಿಂತನೆಯ ಅನೇಕ ಸಂಘಟನೆಗಳು ಇವೆ. ಪೂಜ್ಯರಿಗೆ ಬೆದರಿಕೆ ಹಾಕುತ್ತಿರುವುದು ಯಾರೆಂದು ಸರಕಾರ ಶೀಘ್ರದಲ್ಲಿ ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ನಾವು ಸರಕಾರಕ್ಕೆ ಒತ್ತಾಯಿಸುತ್ತೇವೆ. ಜೊತೆಗೆ ನಾಡಿನ ಪ್ರಜ್ಞಾವಂತ ಸಮಾಜ ಸ್ವಾಮೀಜಿಯವರ ಚಿಂತನೆಗಳಿಗೆ ಬೆಂಬಲಿಸಬೇಕೆಂದು ಆಶಿಸುತ್ತೇವೆ” ಎಂದು ಹೇಳಿದ್ದಾರೆ.

ಬಸವ ತತ್ವದ ಅನುಯಾಯಿ ಮತ್ತು ಸಾಮಾಜಿಕ ಕಾರ್ಯಕರ್ತರಾದ ಸಿದ್ದಪ್ಪ ಮೂಲಗೆ ಅವರು ಈ ವಿಚಾರವಾಗಿ ಪ್ರತಿಕ್ರಿಸಿದ್ದು, “ಅಂದು ಬಸವಾದಿಗಳನ್ನ, ಮೊನ್ನೆ ಎಂಎಂ ಕಲಬುರ್ಗಿಯವರನ್ನ ಬರ್ಬರವಾಗಿ ಹತ್ಯೆಮಾಡಿದ ಮನಸ್ಥಿತಿಗಳೇ ಇಂದು ಪೂಜ್ಯ ಶ್ರೀ ನಿಜಗುಣಾನಂದ ಸ್ವಾಮೀಜಿಯವರಿಗೆ ಜೀವ ಬೆದರಿಕೆ ಹಾಕುತ್ತಿವೆ. ಇದು ನಿಸ್ಸಂಶಯವಾಗಿ ವಿಚಾರಗಳನ್ನು ಎದುರಿಸಲಾಗದ ಹೇಡಿಗಳ ಹೀನ ಕೃತ್ಯ. ಸ್ವಾಮೀಜಿಯವರಿಗೆ ರಕ್ಷಣೆ ಒದಗಿಸುವುದು ಹಾಗೂ ಪದೇಪದೇ ಅವರಿಗೆ ಜೀವ ಬೆದರಿಕೆ ಹಾಕುತ್ತಿರುವ ದುರುಳರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ತೆಗೆದುಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಸ್ವಾಮೀಜಿಯವರಿಗೆ ಏನಾದರೂ ಆದರೆ ಸರ್ಕಾರವೇ ಅದರ ಹೊಣೆಯನ್ನು ಹೊರಬೇಕಾಗುತ್ತದೆ” ಎಂದು ಆಗ್ರಹಿಸಿದ್ದಾರೆ.

“ನಾವೆಲ್ಲರೂ ಒಕ್ಕೊರಲಿನಿಂದ ಇದನ್ನು ಖಂಡಿಸಬೇಕಿದೆ ಮತ್ತು ಸ್ವಾಮೀಜಿಗಳ ಪರ ನಿಲ್ಲಬೇಕಿದೆ. ನಾನಂತೂ ಇದ್ದದ್ದು ಇದ್ದಂತೆ ಮಾತನಾಡುವ, ವಚನ ಚಳವಳಿಯ ಮೂಲ ಆಶಯಗಳನ್ನು ಜನಮಾನಸಕ್ಕೆ ತಲುಪಿಸುತ್ತಿರುವ ಶ್ರೀಗಳ ಪರ ಇದ್ದೇನೆ” ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.

ಸಾಹಿತಿಗಳು, ಚಿಂತಕರುಗಳಿಗೂ ಕೊಲೆ ಬೆದರಿಕೆ ಪತ್ರ!

ಆತಂಕಕಾರಿ ವಿಚಾರ ಎಂದರೆ ಈ ಹಿಂದೆ ಸಾಹಿತಿಗಳಿಗೆ, ನಟರಿಗೆ ಹಾಗೂ ವಿಚಾರವಾದಿಗಳಿಗೂ ಇದೇ ರೀತಿಯಲ್ಲಿ ಪತ್ರಗಳು ಬಂದಿದ್ದವು. ಮೇಲ್ನೋಟಕ್ಕೆ ಎಲ್ಲ ಬೆದರಿಕೆ ಪತ್ರಗಳ ಕೈಬರಹಗಳು ಒಂದೇ ರೀತಿಯಲ್ಲಿಯೇ ಇವೆ. ಈ ಕೊಲೆ ಬೆದರಿಕೆ ಪ್ರಕರಣಗಳ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಒಬ್ಬನೇ ವ್ಯಕ್ತಿ 7 ಜನರಿಗೂ ಪತ್ರ ಬರೆದು ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ. ದಾವಣಗೆರೆ ಮೂಲದಿಂದ ಬೆದರಿಕೆ ಪತ್ರ ಬಂದಿರುವುದು ಖಚಿತವಾಗಿದ್ದು, ಒಬ್ಬನೇ ಪತ್ರ ಬರೆದು ಬೇರೆಬೇರೆ ಜಿಲ್ಲೆ, ತಾಲೂಕುಗಳಿಗೆ ಹೋಗಿ ಪತ್ರಗಳನ್ನು ಪೋಸ್ಟ್ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದು, ಇದೀಗ ಆ ವ್ಯಕ್ತಿಯ ಪತ್ತೆಗೆ ಸಿಸಿಬಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಕುಂ. ವೀರಭದ್ರಪ್ಪ

ಕರ್ನಾಟಕದ ಲೇಖಕರು ಹಾಗೂ ಸಾಹಿತಿಗಳು ಸೇರಿದಂತೆ ಒಟ್ಟು ಹದಿನೈದಕ್ಕೂ ಹೆಚ್ಚು ಬುದ್ಧಿಜೀವಿಗಳಿಗೆ ಜೀವ ಬೆದರಿಕೆ ಹಾಕಲಾಗಿದೆ. ಪ್ರೊ ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್ ಹತ್ಯೆಯ ಬಳಿಕ, ಕಳೆದೊಂದು ವರ್ಷದಿಂದ ಸಾಹಿತಿ, ಲೇಖಕರಿಗೆ ಜೀವ ಬೆದರಿಕೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಕೋಮುವಾದ, ಜಾತಿವಾದ, ಮೌಢ್ಯವಿರೋಧಿ ನಿಲುವುಳ್ಳ ಸಾಹಿತಿಗಳು ಹಾಗೂ ಬುದ್ಧಿಜೀವಿಗಳಿಗೆ ಪತ್ರದ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಇದರಿಂದ, ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಮಾನಸಿಕ ಹಿಂಸೆಗೊಳಗಾಗಿದ್ದು, ಅವರುಗಳ ಕುಟುಂಬಸ್ಥರು ಭಯಭೀತರಾಗಿದ್ದಾರೆ.

ಕೊಲೆ ಬೆದರಿಕೆ ಎದುರಿಸುತ್ತಿರುವ ಸಾಹಿತಿ, ವಿಚಾರವಾದಿ ಕುಂ. ವೀರಭದ್ರಪ್ಪ ಅವರು ನಿಜಗುಣಾನಂದ ಶ್ರೀಗಳಿಗೆ ಬಂದಿರುವ ಬೆದರಿಕೆ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “12ನೇ ಶತಮಾನದಲ್ಲಿ ಬಸವಣ್ಣನವರು ಏನೇನು ಮಾಡಿದರೋ, ಇನ್ನೂ ಏನು ಮಾಡಬೇಕಿತ್ತೋ ಅದನ್ನು ನಿಜಗುಣಾನಂದ ಸ್ವಾಮೀಜಿ ಮಾಡುತ್ತಿದ್ದಾರೆ” ಎಂದು ಹೇಳಿದರು.

“ದಕ್ಷಿಣ ಭಾರತ ಎಂದರೆ ಹಿಂದೂ ಅಲ್ಲ, ನಾವು ದ್ರಾವಿಡರು, ಇದನ್ನೇ ಕುವೆಂಪು, ಪೆರಿಯಾರ್ ಹಾಗೂ ನಾರಾಯಣ ಗುರುಗಳು ಹೇಳಿದ್ದಾರೆ. ಅದನ್ನೇ ಇಂದು ಉದಯನಿಧಿ ಸ್ಟಾಲಿನ್ ಮತ್ತೆ ನಾವುಗಳು ಹೇಳುತ್ತಿದ್ದೇವೆ” ಎಂದರು.

“ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಈ ಬೆದರಿಸುವ ಹಿಂದೂ ಪ್ರಣೀತರ ಸಂಖ್ಯೆ ಹೆಚ್ಚಾಗಿದೆ. ಕಳೆದ ಅವಧಿಯ ಸರ್ಕಾರದಲ್ಲಿ ನೈತಿಕ ಪೊಲೀಸ್‌ಗಿರಿ ನಡೆಸುವವರಿಗೆ ಸರ್ಕಾರವೇ ಪರೋಕ್ಷವಾಗಿ ಲೈಸೆನ್ಸ್ ನೀಡಿತ್ತು. ಸ್ವತಃ ಮುಖ್ಯಮಂತ್ರಿಯಾಗಿದ್ದ ಬೊಮ್ಮಾಯಿ, ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರ ಅವರು, ನೈತಿಕ ಪೊಲೀಸ್‌ಗಿರಿಯ ಅಗತ್ಯ ಇದೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು” ಎಂದು ಅವರು ನೆನಪಿಸಿದರು.

“ಗೌರಿ ಲಂಕೇಶ್ ಹಾಗೂ ಕಲಬುರ್ಗಿ ಅವರು ಸತ್ಯವನ್ನೇ ಹೇಳಿಹೋದರು. ಗೌರಮ್ಮ (ಗೌರಿ ಲಂಕೇಶ್) ಇರುವಷ್ಟು ದಿನಗಳ ಕಾಲ ಪಿ. ಲಂಕೇಶ್ ಅವರ ಆಶೋತ್ತರಗಳ ಪ್ರತಿನಿಧಿಯಾಗಿ ಕೆಲಸ ಮಾಡಿದರು. ಅವರು ನಮಗಿಂತ ಪ್ರಖರವಾಗಿ ವಿಚಾರಗಳನ್ನು ಮಂಡಿಸುತ್ತಿದ್ದರು. ಎಂತಹ ಸಂದರ್ಭದಲ್ಲೂ ಅವರು ಸೈದ್ಧಾಂತಿಕವಾಗಿ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ ಎಂದು ಗೌರಿ ಲಂಕೇಶರನ್ನು ನೆನಪಿಸಿಕೊಂಡರು.

“ಪ್ರಕಾಶ್ ರೈ ಅವರು ಹೇಳುವ ಹಾಗೇ ನಾವು ಗೌರಿಯನ್ನ ಹೂತಿಲ್ಲ, ಬಿತ್ತಿದ್ದೇವೆ. ನಾವೆಲ್ಲರೂ ಕೂಡ ಇಂದು ಅವರಂತೆ ಸತ್ಯ ನುಡಿಯುತ್ತಿದ್ದೇವೆ. ಹಾಗಾಗಿ ಕಳೆದ ಒಂದು ವರ್ಷದಲ್ಲಿ 18 ಬೆದರಿಕೆ ಪತ್ರಗಳು, 1 ರೆಜಿಸ್ಟರ್‍ಡ್ ಪೋಸ್ಟ್ ಬಂದಿವೆ. ಒಮ್ಮೆ ವ್ಯಕ್ತಿಯೊಬ್ಬ ಬೆದರಿಸುವ ಸಲುವಾಗಿ ನಮ್ಮ ಮನೆ ಬಾಗಿಲಿಗೂ ಬಂದಿದ್ದನು, ಆದರೆ ನಾನು ಅಂದು ಮನೆಯಲ್ಲಿ ಇರಲಿಲ್ಲ. ಆನಂತರ ಪೊಲೀಸರು ಅವನನ್ನು ವಿಚಾರಣೆಗೆ ಒಳಪಡಿಸಿದರು. ಆದರೆ ಪತ್ರದಲ್ಲಿನ ಬರವಣಿಗೆ ಹಾಗೂ ಆತನ ಬರವಣಿಗೆ ಹೊಂದಾಣಿಕೆ ಆಗಲಿಲ್ಲ. ಆದರೆ ಆತ ಹಿಂದುತ್ವದಲ್ಲಿ ಮಿಂದೆದ್ದಿದ್ದನು” ಎಂದು ತಿಳಿಸಿದರು.

“ಪ್ರಕಾಶ್ ರೈ ಅವರು ಸಂದರ್ಶನವೊಂದಕ್ಕೆ ಹೋದಾಗ, ಅಲ್ಲಿ ವ್ಯಕ್ತಿಯೊಬ್ಬ ನಿಮ್ಮನ್ನು ಕೊಲೆ ಮಾಡುತ್ತೇನೆ ಎಂದು ಹೇಳಿದ್ದು ನಾನೇ ಎಂದು ಹೇಳುತ್ತಾನೆ. ಆತನ ಬಂಧನವಾಗುವುದಿಲ್ಲ. ಇನ್ನು ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಅಯೋಧ್ಯೆಯ ಸ್ವಾಮಿಯೊಬ್ಬ, ಅವರ ತಲೆ ಕಡಿದವರಿಗೆ 10 ಕೋಟಿ ರೂ. ಬಹುಮಾನ ಘೋಷಿಸುತ್ತಾನೆ. ಇದು ಯಾವ ಪ್ರಜಾಪ್ರಭುತ್ವ? ನಾವು ಯಾವ ಕಾಲದಲ್ಲಿದ್ದೇವೆ?” ಎಂದು ಕಳವಳ ವ್ಯಕ್ತಪಡಿಸಿದರು.

“ನಮಗೆ ಪತ್ರ ಬರೆದಿರುವವನ ಮೇಲೆ ನಮಗೆ ದ್ವೇಷವಿಲ್ಲ, ಬದಲಾಗಿ ಆತನ ಬಗ್ಗೆ ಅನುಕಂಪ ಇದೆ. ಏಕೆಂದರೆ ಅವನಿಗೆ ಬ್ರೇನ್ ವಾಷ್ ಮಾಡಲಾಗಿದೆ. ಅವನು ಪತ್ರ ಬರೆಯುವ ಮುನ್ನ ತನ್ನ ಕುಟುಂಬದ ಬಗ್ಗೆ ಕಾಳಜಿವಹಿಸಬೇಕಿತ್ತು” ಎಂದು ಪತ್ರ ಬರೆದವರ ಬಗ್ಗೆಯೇ ಸಾಹಿತಿ ಕುಂ. ವೀರಭದ್ರಪ್ಪ ಅವರು ಮರುಕ ಪಟ್ಟರು.

ಜೀವ ಬೆದರಿಕೆ ಎದುರಿಸುತ್ತಿರುವ ಮತ್ತೋರ್ವ ಲೇಖಕಿ ಡಾ. ವಸುಂಧರ ಭೂಪತಿ ಅವರು ಮಾತನಾಡಿದ್ದು, ಪತ್ರ ಬರೆದವರ ಜೊತೆಗೆ ಅವರ ಹಿಂದೆ ಇರುವವರನ್ನು ಪತ್ತೆ ಮಾಡಿ ಶಿಕ್ಷೆ ನೀಡಬೇಕು, ಆಗ ಮಾತ್ರ ಈ ಬೆದರಿಕೆಗಳು ನಿಲ್ಲುಲು ಸಾಧ್ಯ ಎಂದರು.

“ಗೌರಿ ಲಂಕೇಶ್, ಕಲ್ಬುರ್ಗಿ, ಧಾಬೋಲ್ಕರ್ ಹಾಗೂ ಪನ್ಸಾರೆ ಹತ್ಯೆಗಳು ಒಂದೇ ರೀತಿಯಲ್ಲಿ ನಡೆದಿವೆ. ಹಾಗೆಯೇ ನಮಗೆಲ್ಲರಿಗೂ ಒಂದೇ ತೆರನಾದ ಪತ್ರಗಳು ಬಂದಿವೆ. ಎಲ್ಲರ ಪತ್ರಗಳ ಕೆಳಗೆ ’ಸಹಿಷ್ಣು ಹಿಂದೂ’ ಎಂದು ಸಹಿ ಮಾಡಲಾಗಿದೆ. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದಷ್ಟು ಬೇಗ ಅವರನ್ನು ಪತ್ತೆ ಹಚ್ಚಬೇಕು ಎಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ತಿಳಿಸಿದ್ದೇವೆ” ಎಂದರು.

“ನಮಗೆ ಭದ್ರತೆ ಕೊಡುವ ವಿಚಾರದಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ನಾನು ಬಾಡಿಗಾರ್ಡ್ ಬೇಡ ಅಂತ ಹೇಳಿದ್ದೇನೆ, ಹಾಗಾಗಿ ಪ್ರತಿ ದಿನ ನಮ್ಮ ಮನೆ ಮುಂದೆ ಬೀಟ್ ಪೊಲೀಸರು ಬರುತ್ತಿರುತ್ತಾರೆ. ಆದರೆ ಬೆದರಿಕೆ ಎದುರಿಸುತ್ತಿರುವ ಎಲ್ಲ ಸಾಹಿತಿಗಳ ಮನೆ ಮುಂದೆ ಬೀದಿ ದೀಪದ ವ್ಯವಸ್ಥೆ ಸರಿಯಾಗಿರಬೇಕು ಮತ್ತು ಆ ಬೀದಿಗಳಲ್ಲಿ ಸಿಸಿಟಿವಿ ಅಳವಡಿಸಬೇಕು” ಎಂದು ಅವರು ಮನವಿ ಮಾಡಿದರು.

ಡಾ. ವಸುಂಧರ ಭೂಪತಿ

“ನಮಗೆ ಬರುವ ಬೆದರಿಕೆ ಪತ್ರಗಳು ದಾವಣಗೆರೆ ಸುತ್ತಮುತ್ತಲಿನಿಂದ ಬರುತ್ತಿವೆ. ಮತ್ತೆ ಅದರಲ್ಲಿ ಪದಗಳು ಸರಿಯಾಗಿ ಇರುವುದಿಲ್ಲ. ಇದನ್ನೆಲ್ಲಾ ನೋಡಿದರೆ, ಕೊಲೆ ಮಾಡುವ ಸಂಚುಕೋರರು ಯಾರದ್ದೋ ಕೈಯಿಂದ ಈ ಪತ್ರಗಳನ್ನು ಬರೆಸುತ್ತಿದ್ದಾರೆ ಎಂದು ನಮಗೆ ಅನಿಸಿದೆ. ಪತ್ರ ಬಂದ ಬಳಿಕ ನಾವು ಎಫ್‌ಐಆರ್ ದಾಖಲಿಸಿದರೆ ಆ ಮಾಹಿತಿಯೂ ಅವರಿಗೆ ತಲುಪುತ್ತಿದೆ. ಆ ಬಳಿಕ ನನಗೆ ಮತ್ತೊಂದು ಪತ್ರ ಬಂದಿತ್ತು. ಪೊಲೀಸರಿಗೆ ಯಾಕೆ ತಿಳಿಸಿದಿರಿ ಎಂದು.. ಉಳಿದವರಂತೆ ನನಗೆ ಮತ್ತು ಬಿಎಲ್ ವೇಣು ಅವರಿಗೆ ನೇರವಾಗಿ ಕೊಲೆ ಬೆದರಿಕೆ ಬಂದಿಲ್ಲ. ನಾವು ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಇನ್ನುಳಿದ ಸಾಹಿತಿಗಳೊಂದಿಗೆ ಗುರುತಿಸಿಕೊಂಡಿದ್ದಕ್ಕೆ, ನೀವು ಅವರೊಟ್ಟಿಗೆ ಹೋಗಬೇಡಿ ಮತ್ತು ಅವರಿಗೂ ತಿಳಿಸಿ ಅವರು ಮಾಡುವುದು ಸರಿಯಲ್ಲ ಎಂದು ಹೇಳಲಾಗಿತ್ತು” ಎಂದು ತಿಳಿಸಿದರು.

“ಈ ರೀತಿಯ ಬೆದರಿಕೆಯ ಪತ್ರಗಳಿಂದ ನಮಗಿಂತ ನಮ್ಮ ಕುಟುಂಬದವರಿಗೆ ಹೆಚ್ಚಿನ ಆತಂಕ ಇದೆ. ನಾವು ಹೊರಗಡೆ ಹೋಗಿ ಮರಳಿ ಬರುವವರೆಗೂ ಅವರಿಗೆ ಸಮಾಧಾನ ಇರುವುದಿಲ್ಲ; ಅಷ್ಟೊಂದು ಭಯ ಪಡುತ್ತಾರೆ. ಹಾಗಾಗಿ ಆದಷ್ಟು ಬೇಗ ಪತ್ರ ಬರೆದವರು ಮತ್ತು ಅದರ ಹಿಂದಿರುವ ಕಾಣದ ಕೈಗಳಿಗೆ ಕೋಳ ಬೀಳಬೇಕು” ಎಂದು ಆಗ್ರಹಿಸಿದರು.

“ಇದನ್ನೆಲ್ಲ ನೋಡಿದಾಗ ತುಂಬಾ ಬೇಜಾರಾಗುತ್ತದೆ. ನಾವು ಪ್ರಜಾಪ್ರಭುತ್ವದಲ್ಲಿ ಇದ್ದೀವಾ ಎನ್ನುವ ಸಂದೇಹ ಮೂಡುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ” ಎಂದು ಲೇಖಕಿ ಡಾ. ವಸುಂಧರ ಭೂಪತಿ ಅವರು ಅಸಮಾಧಾನವನ್ನು ಹೊರಹಾಕಿದರು.

ಸಾಹಿತಿಗಳಿಗೆ ಬೆದರಿಕೆ ಪತ್ರ ಪ್ರಕರಣದ ತನಿಖೆ

ಏಳು ಸಾಹಿತಿಗಳಿಗೆ ಬೆದರಿಕೆಯ ಹಿನ್ನೆಲೆಯಲ್ಲಿ ದೂರು ದಾಖಲಾದ ವಿವರ ಇಂತಿದೆ.

ಕುಂ. ವೀರಭದ್ರಪ್ಪ – ಕೇಸ್ ನಂ. 81/2022 – ಕೊಟ್ಟೂರು ಪೊಲೀಸ್ ಠಾಣೆ

ಬಿ.ಎಲ್ ವೇಣು – ಕೇಸ್ ನಂ. 87/22 – ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆ

ಬಂಜಗೆರೆ ಜಯಪ್ರಕಾಶ್ – ಕೇಸ್ ನಂ. 227/22 – ಹಾರೋಹಳ್ಳಿ ಪೊಲೀಸ್ ಠಾಣೆ

ಬಂಜಗೆರೆ ಜಯಪ್ರಕಾಶ್ – ಕೇಸ್ ನಂ. 167/23 – ಹಾರೋಹಳ್ಳಿ ಪೊಲೀಸ್ ಠಾಣೆ

ಬಿ.ಟಿ ಲಲಿತಾ ನಾಯಕ್ – ಕೇಸ್ ನಂ. 160/22 – ಸಂಜಯನಗರ ಪೊಲೀಸ್ ಠಾಣೆ

ವಸುಂಧರ ಭೂಪತಿ – ಕೇಸ್ ನಂ. 111/22 – ಬಸವೇಶ್ವರನಗರ ಪೊಲೀಸ್ ಠಾಣೆ

ವಸುಂಧರ ಭೂಪತಿ – ಕೇಸ್ ನಂ. 128/23 – ಬಸವೇಶ್ವರನಗರ ಪೊಲೀಸ್ ಠಾಣೆ

ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಸಾಹಿತಿಗಳು

ಕೆ. ಮರುಳಸಿದ್ದಪ್ಪ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ ಅವರನ್ನು ಇತ್ತೀಚಿಗಷ್ಟೇ ಭೇಟಿ ಮಾಡಿದ್ದ ಸಾಹಿತಿಗಳು, ನಿರಂತರವಾಗಿ ಬೆದರಿಕೆ ಕರೆಗಳು ಮತ್ತು ಪತ್ರಗಳು ಬರುತ್ತಿರುವ ಕುರಿತು ಮಾಹಿತಿ ನೀಡಿದ್ದರು. ಈ ವೇಳೆ ಸಿದ್ದರಾಮಯ್ಯನವರು ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದರು. ಗೃಹ ಸಚಿವರು ವಿವರವಾಗಿ ಮಾಹಿತಿ ಪಡೆದುಕೊಂಡು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆ ಬಳಿಕ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಎಡಿಜಿಪಿ ಅಲೋಕ್ ಕುಮಾರ್ ಅವರು ಪ್ರಕರಣಗಳನ್ನು ವರ್ಗಾಯಿಸಿ, ಎಸ್‌ಐಟಿ ರಚನೆಗೆ ಸೂಚಿಸಿದರು.

ಕನ್ನಡ ಸಾಹಿತಿಗಳಿಗೆ ಜೀವ ಬೆದರಿಕೆಗೆ ಸಂಬಂಧಿಸಿದಂತೆ ವಿವಿಧ ಕಡೆ ದಾಖಲಾದ ಪ್ರಕರಣಗಳನ್ನು ರಾಜ್ಯ ಸರ್ಕಾರ ಬೆಂಗಳೂರು ನಗರ ಅಪರಾಧ ವಿಭಾಗಕ್ಕೆ ವರ್ಗಾಯಿಸಿದ್ದು, ತನಿಖೆಗಾಗಿ ವಿಶೇಷ ತನಿಖಾ ತಂಡದ ರಚನೆಗೆ ಸೂಚಿಸಿದೆ. ಇದಕ್ಕೆ ಸಂಬಂಧಿಸಿದ ವಿವಿಧ ಪ್ರಕರಣಗಳನ್ನು ಬೆಂಗಳೂರಿನ ಸಿಸಿಬಿಗೆ ವರ್ಗಾಯಿಸಿ ಎಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಪೊಲೀಸ್ ಅಧಿಕಾರಿ ಯತೀಶ್ ಚಂದ್ರ ಅವರ ನೇತೃತ್ವದಲ್ಲಿ ಎಸಿಪಿ ನವೀನ್ ಕುಲಕರ್ಣಿಯವರನ್ನೊಳಗೊಂಡಂತೆ ವಿಶೇಷ ತಂಡವನ್ನು ರಚನೆ ಮಾಡಿ ತನಿಖೆ ನಡೆಸಲಾಗುತ್ತಿದೆ. ಅಲ್ಲದೆ ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಮತ್ತು ಉಪ ಪೊಲೀಸ್ ಆಯುಕ್ತರು ದಿನಂಪ್ರತಿ ಪ್ರಕರಣದ ತನಿಖೆಯ ಮೇಲ್ವಿಚಾರಣೆಯನ್ನು ಮಾಡಲಿದ್ದಾರೆ. ಅದರ ಜೊತೆಗೆ ತನಿಖೆಯ ಪ್ರಗತಿಯನ್ನು ಪೊಲೀಸ್ ಆಯುಕ್ತರು ಕಾಲಕಾಲಕ್ಕೆ ಪರಿಶೀಲಿಸುವಂತೆ ಎಡಿಜಿಪಿ ಸೂಚಿಸಿದ್ದಾರೆ.

ಸಂಬಂಧಪಟ್ಟ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹಾಗೂ ಉಪ ಪೊಲೀಸ್ ಆಯುಕ್ತರು ಈ ಪ್ರಕರಣಗಳ ಕಡತವನ್ನು ಬೆಂಗಳೂರು ಪೊಲೀಸ್ ಆಯುಕ್ತರು ನೇಮಿಸುವ ತನಿಖಾಧಿಕಾರಿಗೆ ಕೂಡಲೇ ಹಸ್ತಾಂತರಿಸಲು ಮತ್ತು ತನಿಖೆಗೆ ಬೇಕಾಗುವ ಎಲ್ಲಾ ರೀತಿಯ ಸಹಕಾರವನ್ನು ನೀಡಲು ಕೂಡ ನಿರ್ದೇಶಿಸಲಾಗಿದೆ. ಒಟ್ಟು 7 ಪ್ರಕರಣಗಳನ್ನು ಬೆಂಗಳೂರು ನಗರ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಮಹಿಳೆಯೊಬ್ಬರ ಅಪಹರಣ ಪ್ರತ್ಯೇಕ ಪ್ರಕರಣದಲ್ಲಿ ಶಾಸಕ ಹೆಚ್‌.ಡಿ ರೇವಣ್ಣ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ...