ವಯಸ್ಕ ಅಂತರ್‌ಧರ್ಮೀಯ ಜೋಡಿ ವಿವಾಹದ ಮೂಲಕ ಅಥವಾ ಲಿವ್-ಇನ್ ಸಂಬಂಧದಲ್ಲಿ ಒಟ್ಟಿಗೆ ಇರುವ ಹಕ್ಕನ್ನು ಮಧ್ಯಪ್ರದೇಶ ಹೈಕೋರ್ಟ್‌ನ ಜಬಲ್‌ಪುರ ಪೀಠವು ಎತ್ತಿಹಿಡಿದಿದೆ. ಇಬ್ಬರು ವ್ಯಕ್ತಿಗಳು ಇಚ್ಛೆಯಿಂದ ಜೊತೆಗಿದ್ದರೆ ಈ ವಿಚಾರದಲ್ಲಿ ಯಾವುದೇ ನೈತಿಕ ಪೊಲೀಸ್‌ಗಿರಿಯನ್ನು ಅನುಮತಿಸಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಜಬಲ್‌ಪುರದ ಗೋರಖ್‌ಪುರದ ನಿವಾಸಿ 27 ವರ್ಷದ ಗುಲ್ಜಾರ್ ಖಾನ್ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ನಂದಿತಾ ದುಬೆ ಈ ಅಭೀಪ್ರಾಯ ವ್ಯಕ್ತಪಡಿಸಿದ್ದಾರೆ.
ಜಬಲ್ಪುರ್ ನಿವಾಸಿ ಗುಲ್ಜಾರ್ ಖಾನ್ ಅವರು ಮಹಾರಾಷ್ಟ್ರದಲ್ಲಿ 19 ವರ್ಷದ ಆರತಿ ಸಾಹು ಎಂಬುವವರನ್ನು ಡಿಸೆಂಬರ್ 28 ರಂದು ಬಾಂದ್ರಾ ನ್ಯಾಯಾಲಯದಲ್ಲಿ ವಿವಾಹವಾಗಿದ್ದರು. ಬಳಿಕ ಆಕೆಯು ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಈಗ ಆರತಿ ಸಾಹು ಅವರನ್ನು ಆಕೆಯ ಪೋಷಕರು ಬಲವಂತವಾಗಿ ವಾರಣಾಸಿಗೆ ಕರೆದೊಯ್ದು ಅಕ್ರಮ ಬಂಧನದಲ್ಲಿಟ್ಟಿದ್ದಾರೆ ಎಂದು ಗುಲ್ಜಾರ್ ಖಾನ್ ತನ್ನ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ: ಬಿಜೆಪಿ ನಾಯಕಿಯ ಗೋಶಾಲೆಯಲ್ಲಿ 100ಕ್ಕೂ ಹೆಚ್ಚು ಹಸುಗಳ ಸಾವು, ಸ್ಥಳೀಯರ ಆಕ್ರೋಶ
ಜನವರಿ 28 ರಂದು ನಡೆದ ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಕಚೇರಿಯಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆರತಿ ಸಾಹು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಯುವತಿಯು ತಾನು ಅರ್ಜಿದಾರನನ್ನು ಮದುವೆಯಾಗಿದ್ದು, ಆತನೊಂದಿಗೆ ಇರಲು ಬಯಸುತ್ತೇನೆ . ನಾನು ಇಷ್ಟಪಟ್ಟು ಮತಾಂತರವಾಗಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.
ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ, 2021 ರ ನಿಬಂಧನೆಗಳ ದೃಷ್ಟಿಯಿಂದ ರಾಜ್ಯವು ಆಕ್ಷೇಪಣೆಯನ್ನು ಎತ್ತಿತ್ತು. ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಯ ಸೆಕ್ಷನ್ 3 ರನ್ನು ಈ ವಿವಾಹ ಉಲ್ಲಂಘಿಸಿದೆ. ಹೀಗಾಗಿ ಈ ವಿವಾಹವನ್ನು ಅನೂರ್ಜಿತವೆಂದು ಪರಿಗಣಿಸಬೇಕು ಎಂದು ಸರ್ಕಾರಿ ವಕೀಲರು ವಾದಿಸಿದ್ದರು.
ಆದರೆ, ಈ ಪ್ರಕರಣದಲ್ಲಿ ಯಾವುದೇ ವ್ಯಕ್ತಿಯು ಮದುವೆಯ ಉದ್ದೇಶಕ್ಕಾಗಿ ಮತಾಂತರಗೊಂಡಿಲ್ಲ ಎಂದಿರುವ ನ್ಯಾಯಾಲಯ, ’ವಿವಾಹದ ಮೂಲಕ ಅಥವಾ ಲಿವ್-ಇನ್ ಸಂಬಂಧದಲ್ಲಿ ಇಬ್ಬರು ವ್ಯಕ್ತಿಗಳು ಸ್ವಇಚ್ಛೆಯಿಂದ ಒಟ್ಟಿಗೆ ಇರಲು ಸಿದ್ಧರಿದ್ದರೆ, ಯಾವುದೇ ನೈತಿಕ ಪೊಲೀಸ್‌ಗಿರಿಯನ್ನು ಅನುಮತಿಸಲಾಗುವುದಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
“ಈ ದೇಶದ ಪ್ರತಿಯೊಬ್ಬ ಪ್ರಜೆಗೂ ತನ್ನ ಜೀವನವನ್ನು ಅವರ ಸ್ವಂತ ಇಚ್ಛೆಯಂತೆ ಬದುಕಲು ಸಂವಿಧಾನವು ಹಕ್ಕನ್ನು ನೀಡಿದೆ” ಎಂದು ಹೈಕೋರ್ಟ್ ತಿಳಿಸಿದೆ.
ಯುವತಿಯನ್ನು ಆಕೆಯ ಪತಿಗೆ ಹಸ್ತಾಂತರಿಸುವಂತೆ ಮತ್ತು ಇಬ್ಬರೂ ಸುರಕ್ಷಿತವಾಗಿ ತಮ್ಮ ಮನೆಗೆ ತಲುಪುವಂತೆ ನೋಡಿಕೊಳ್ಳುವಂತೆ ರಾಜ್ಯ ಮತ್ತು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಜೊತೆಗೆ ಭವಿಷ್ಯದಲ್ಲಿ ಇಬ್ಬರಿಗೂ ಯುವತಿಯ ಪೋಷಕರಿಂದ ಬೆದರಿಕೆ ಬರದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಇದನ್ನೂ ಓದಿ: ‘ಖಾಸಗೀಕರಣ’: ಒಕ್ಕೂಟ ಸರ್ಕಾರದ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ನಡೆಸಲಿರುವ ವಿದ್ಯುತ್ ವಲಯದ ನೌಕರರು


